ಅಥವಾ

ಒಟ್ಟು 32 ಕಡೆಗಳಲ್ಲಿ , 21 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಕ್ತ್ಯಾಂಗನೆಯ ಕೊಟ್ಟಿಗೆಯಲ್ಲಿ ಮೂರು ಎತ್ತು ಕಟ್ಟಿದವು. ಉಳುವುದಕ್ಕೆ ಹೆಗಲಿಲ್ಲ , ನಡೆವುದಕ್ಕೆ ಕಾಲಿಲ್ಲ , ಮೇವುದಕ್ಕೆ ಬಾಯಿಲ್ಲ , ಎರಡಾರಿಂಗೆ ಎಣೆಯಿಲ್ಲ . ಎತ್ತು ವಿಚ್ಛಂದವಾಯಿತ್ತು , ಎತ್ತು ಕಾವ ಹೈದ, ಎತ್ತ ಹೋದನೆಂದರಿಯೆ. ಕೊಟ್ಟಿಗೆ ಬಚ್ಚಬಯಲಾಯಿತ್ತು , ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು ಹುಲ್ಲು ತಿನ್ನದು, ನೀರ ಕುಡಿಯದು, ಇರ್ದಲ್ಲಿ ಇರದು, ಹೋದತ್ತ ಹೋಗದು. ಇದೇನು ಸೋಜಿಗ ಬಲ್ಲರೆ ಹೇಳಿರಣ್ಣಾ, ಎತ್ತ ಬಿಟ್ಟಿತ್ತು, ಸತ್ತನೊಳಕೊಂಡು ಮುತ್ತನುಗುಳಿ ಹೋಯಿತ್ತು. ಇದೇನು ವಿಪರೀತ, ಬಲ್ಲರೆ ಹೇಳಿರಣ್ಣಾ, ಎತ್ತು ಕೆಟ್ಟಿತ್ತು, ಅರಸುವರ ಕಾಣೆನಣ್ಣಾ. ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ, ಎತ್ತೆತ್ತ ಪೋಯಿತ್ತೆಂದರಿಯೆನಣ್ಣಾ.
--------------
ಆದಯ್ಯ
ಎತ್ತನೇರಿದ ಕರ್ತನೊಬ್ಬನೆ ಜಗಕ್ಕೆಲ್ಲ ಎತ್ತು ಬೆಳೆದ ಧಾನ್ಯವನುಂಬ ದೇವರ್ಕಳೆಲ್ಲ ನಿಮ್ಮ ತೊತ್ತಿನ ಮಕ್ಕಳು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಎತ್ತು ಹಸುವ ಹಾಯಲಾಗಿ ತೆಕ್ಕೆಯನಿಕ್ಕಿದ ಕಣ್ಣಿಯಲ್ಲಿ ತೆಕ್ಕೆಗೆ ನಡೆಯದ ಹಸು, ಕಟ್ಟುಗೊಳ್ಳದ ಹೋರಿ. ಇವೆರಡ ಸಿಕ್ಕಿಸುವ ಪರಿಯಿನ್ನೆಂತೊ? ಕಟ್ಟಿದ ಕಣ್ಣಿಯ ಕುಣಿಕೆ ಕಳಚಿ ಹೋರಿಯ ಕೊರಳಲ್ಲಿ ಹೋಯಿತ್ತು, ಹಸು ಬೆತ್ತಲೆಯಾಯಿತ್ತು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಎತ್ತು ನಿಮ್ಮ ದಾನ; ಬಿತ್ತು ನಿಮ್ಮ ದಾನ. ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳ? ರಾಮನಾಥ.
--------------
ಜೇಡರ ದಾಸಿಮಯ್ಯ
ಕತ್ತಲಿಪುರದಲ್ಲಿ ಎತ್ತೆಮ್ಮೆ ಮೈಥುನ ಮಾಡುವದ ಕಂಡೆ. ಆ ಎಮ್ಮೆಯ ಗರ್ಭದಲ್ಲಿ ಎಂಬತ್ತುನಾಲ್ಕುಲಕ್ಷ ಎತ್ತು ಪುಟ್ಟುವದ ಕಂಡೆ. ಹಾಳೂರ ಕೋಳಿ ಕೂಗಲು ಕತ್ತಲಿಪುರÀ ಬೆಳಕುದೋರಿತ್ತ ಕಂಡೆ. ಆ ಬೆಳಗಿನೊಳಗೆ ಎತ್ತೆಮ್ಮಿ ಸತ್ತು ಎಂಬತ್ತುನಾಲ್ಕುಲಕ್ಷ ಎತ್ತೆತ್ತ ಹೋದವೆಂದರಿಯೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗ ಬಿತ್ತು ಎತ್ತು ಎಂಬಿರಿ, ಆ ಲಿಂಗ ಬಿದ್ದರೆ ಈ ಭೂಮಿ ತಾಳಬಲ್ಲುದೆ ? ಲಿಂಗವಿರುವುದು ಹರಗುರು ಪಾರಾಯಣ, ಲಿಂಗವಿರುವುದು ತೆಂಗಿನ ಮರದಲ್ಲಿ, ಲಿಂಗವಿರುವುದು ಜಂಗಮನ ಅಂಗುಷ*ದಲ್ಲಿ, ಲಿಂ ಗವಿರುವುದು ಊರ ಹಿರೇ ಬಾಗಿಲಲ್ಲಿ. ಇಂತಿಪ್ಪ ಲಿಂಗ ಬಿಟ್ಟು, ಸಂತೆಗೆ ಹೋಗಿ ಮೂರು ಪಾಕಿ ಲಿಂಗವ, ಆರು ಪಾಕಿ ವಸ್ತ್ರವ ತಂದುದೋದಕವಿಲ್ಲ,ಪ್ರಸಾದವಿಲ್ಲ,ಮಂತ್ರವಿಲ್ಲ,ವಿಭೂತಿಯಿಲ್ಲ,ರುದ್ರಾಕ್ಷಿಯಿಲ್ಲ. ಇಂತಪ್ಪ ಲಿಂಗ ಕಟ್ಟಿದವನೊಬ್ಬ ಕಳ್ಳನಾಯಿ, ಕಟ್ಟಿಸಿಕೊಂಡವನೊಬ್ಬ ಕಳ್ಳನಾಯಿ. ಇಂತಪ್ಪ ನಾಯಿಗಳನು ಹಿಡಿತಂದು ಮೂಗನೆ ಕೊಯ್ದು, ನಮ್ಮ ಕುಂಬಾರ ಗುಂಡಯ್ಯನ ಮನೆಯ ಕರಿ ಕತ್ತೆಯನು ತಂದು ಊರಲ್ಲೆಲ್ಲ ಮೆರೆಯಿಸಿ ನಮ್ಮ ಮಾದಾರ ಹರಳಯ್ಯನ ಮನೆಯ ಹನ್ನೆರಡು ಜೋಡು ಹಳೆಯ ಪಾದರಕ್ಷೆಗಳನು ತಂದು ಮುದ್ದುಮುಖದ ಮೇಲೆ ಶುದ್ಧವಾಗಿ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇಷ್ಟಲಿಂಗಕ್ಕೊಂದು ಕಷ್ಟ ಬಂದಿತ್ತೆಂದು ಮುಟ್ಟಲಾಗದು. ಇನ್ನು ಕೆಟ್ಟೆನೆಂಬ ಪಾಪಿಗಳು ನೀವು ಕೇಳಿರೆ. ಇಷ್ಟಲಿಂಗ, ಪ್ರಾಣಲಿಂಗದ ಆದಿ ಅಂತುವನಾರುಬಲ್ಲರು ? ಹೃದಯಕಮಲ ಭ್ರೂಮಧ್ಯದಲ್ಲಿ[ಯ] ಸ್ವಯಂಜ್ಯೋತಿಯ ಪ್ರಕಾಶ[ನು] ಆದಿ ಮಧ್ಯಸ್ಥಾನದಲ್ಲಿ ಚಿನ್ಮಯ ಚಿದ್ರೂಪನಾಗಿಹ. ಇಂತಪ್ಪ ಮಹಾಘನವ ಬಲ್ಲ ಶರಣನ ಪರಿ ಬೇರೆ. ಇಷ್ಟಲಿಂಗ ಹೋದ ಬಟ್ಟೆಯ ಹೊಗಲಾಗದು. ಈ ಕಷ್ಟದ ನುಡಿಯ ಕೇಳಲಾಗದು. ಕೆಟ್ಟಿತ್ತು ಜ್ಯೋತಿಯ ಬೆಳಗು, ಅಟ್ಟಾಟಿಕೆಯಲ್ಲಿ ಅರಿವುದೇನೊ ? ಆಲಿ ನುಂಗಿದ ನೋಟದಂತೆ, ಪುಷ್ಪ ನುಂಗಿದ ಪರಿಮಳದಂತೆ, ಜಲ ನುಂಗಿದ ಮುತ್ತಿನಂತೆ, ಅಪ್ಪುವಿನೊಳಗಿಪ್ಪ ಉಪ್ಪಿನಂತೆ, ಬೀಜದೊಳಗಿಪ್ಪ ವೃಕ್ಷದಂತೆ, ಶಬ್ದದೊಳಗಿನ ನಿಃಶಬ್ದದಂತೆ, ಬಯಲ ನುಂಗಿದ ಬ್ರಹ್ಮಾಂಡದಂತೆ, ಉರಿವುಂಡ ಕರ್ಪುರದಂತೆ. ಇಂತಪ್ಪ ಮಹಾಘನ ತೇಜೋಮೂರ್ತಿಯ ನಿಲವ ಬಲ್ಲ ಮಹಾಶರಣನ ಮನೆಯ ಎತ್ತು ತೊತ್ತು ಮುಕ್ಕಳಿಸಿ ಉಗುಳುವ ಪಡುಗ, ಮೆಟ್ಟುವ ಚಮ್ಮಾವುಗೆಯಾಗಿ ಬದುಕಿದೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಶಿವನಿಗೈದು ಮುಖ, ಭಕ್ತನಿಗೈದು ಮುಖ. ಆವುವಾವುವೆಂದರೆ: ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ, ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ. ಇಂತೀ ಪಂಚಮುಖವನರಿಯದ ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ ಇಂತೀ ಐವರಿಗೆ ಲಿಂಗವ ಕಟ್ಟಿದಡೆ ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು ! ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಹಸುವಿಂಗೆ ಸಂಜ್ಞೆ, ಎತ್ತಿಂಗೆ ಮುಟ್ಟು, ಕರುವಿಂಗೆ ಲಲ್ಲೆ. ಇಂತೀ ತ್ರಿಗುಣದ ಇರವ, ತ್ರಿಗುಣಾತ್ಮಕ ಭೇದವ, ತ್ರಿಗುಣ ಭಕ್ತಿಯ ಮುಕ್ತಿಯ, ತ್ರಿಗುಣ ಘಟಾದಿಗಳ, ತ್ರಿಗುಣ ಮಲ ನಿರ್ಮಲಂಗಳ, ತ್ರಿಗುಣ ಸ್ವಯ ಚರ ಪರಂಗಳಲ್ಲಿ ತ್ರಿವಿಧ ಶಕ್ತಿ ತ್ರಿವಿಧ ಮುಕ್ತಿ ಇಂತೀ ತ್ರಿವಿಧಂಗಳೊಳಗಾಗಿ ಉತ್ಪತ್ಯ ಸ್ಥಿತಿ ಲಯ ತ್ರಿವಿಧದ ಹೆಚ್ಚು ಕುಂದನರಿತು, ಎತ್ತು ಹಸುವಿನ ಸಂಗದಿಂದ ಕರುವಾದ ತೆರನನರಿತು ಇಂತೀ ಒಂದರಲ್ಲಿ ಒಂದು ಕೂಡಲಿಕ್ಕೆ ಬಿಂದು ನಿಂದು ಕುರುಹಾದುದ ಕಂಡು ನೆನೆದು ನೆನೆಸಿಕೊಂಬುದದೇನೆಂದು ತಿಳಿದು, ಇಂತೀ ಅಂಡ ಪಿಂಡಗಳಲ್ಲಿ ನಿರಾತ್ಮನು ಆತ್ಮನಾಗಿ, ನಾನಾರೆಂಬುದ ತಾನರಿತು ತಿಳಿದಲ್ಲಿ ತುರುಮಂದೆಯೊಳಗಾಯಿತ್ತು. ಇದು ಗೋಪತಿನಾಥನ ಕೂಟ, ವಿಶ್ವನಾಥಲಿಂಗನ ಲೀಲಾಭಾವದಾಟ.
--------------
ತುರುಗಾಹಿ ರಾಮಣ್ಣ
ಅಂಗೈಯಗಲದ ಪಟ್ಟಣದೊಳಗೆ ಆಕಾಶದುದ್ದ ಎತ್ತು ತಪ್ಪಿತ್ತು. ಅರಸಹೋಗಿ ಹಲಬರು ಹೊಲಬುದಪ್ಪಿ, ತೊಳಲಿ ಬಳಲುತ್ತೈದಾರೆ. ಆರಿಗೆ ಮೊರೆಯಿಡುವೆ, ಅಗುಸಿಯನಿಕ್ಕುವೆ. ಜಲಗಾರನ ಕರೆಸಿ, ಜಲವ ತೊಳೆಯಿಸಿ ಅಘಟಿತ ಘಟಿತ ನಿಜಗುರು ಭೋಗೇಶ್ವರಾ, ಅರಸಿಕೊಂಡು ಬಾರಯ್ಯಾ.
--------------
ಭೋಗಣ್ಣ
ಎತ್ತು ಬಿತ್ತಿತ್ತು, ಒಕ್ಕಲಿಗನಿಂದ ಉತ್ತಮರಿಲ್ಲೆಂದು ನುಡಿವರು. ಹೊತ್ತಾರೆದ್ದು ಶಿವಲಿಂಗಾರ್ಚನೆಯ ಮಾಡಲರಿಯರು. ಎತ್ತಾಗಿ ಬಿತ್ತಿದ ನಮ್ಮ ಬಸವಣ್ಣ. ಹೊತ್ತು ಹೊರೆದನು ಜಗವನು. ಮತ್ತೆ ಮರಳಿ ಅನ್ಯದೈವವ ನೆನೆಯಲೇಕೊ ? ಎತ್ತು ಬಿತ್ತಿತ್ತು, ಹಾಲುಹಯನ ಬಸವನಿಂದಾಯಿತ್ತು. ಇಂತೀ ಬೆಳೆದ ಬಸವನ ಪ್ರಸಾದವನೊಲಿದು, ಮೃತ್ಯು ಮಾರಿಯ ಎಂಜಲ ಮಾಡಿಕೊಂಡು, ಭುಂಜಿಸುವ ತೊತ್ತುಜಾತಿಗಳ ನುಡಿಯ ಕೇಳಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ತಂದೆತಾಯಿಗಳಿಂದುದಯವಾಗಿ ಬಂದು ಮೂರೂರು ಭೂಮಿಯೊಳಗೆ ಮೂರು ಮುಖದ ಎತ್ತು, ಹಗಲಿರುಳು ಕಾಳಗತ್ತಲೆಯಲ್ಲಿ ಮೂರು ನಾಮವ ಹೊತ್ತು, ಮೂರು ಹುಲ್ಲಿನ ರಸವನು ನೀರ ಮೇಲೆ ನಿಂದು ಸೇವಿಸುತ್ತಿರಲು, ನಾಭಿಯಿಂದೆ ಅಗ್ನಿ ಸೂಸಿ ಉರಿಹತ್ತಿ ಎತ್ತು ಬೆಂದಿತ್ತು ನೋಡಾ! ನೀರೊಳಗಿರ್ದ ಗಜಾಳಿ ಕುರಿಗಳ ಕೂಡಿ ನೋಡುತಿರ್ದವು. ಪರಿಪರಿಯಿಂದೆ ಬೀಸುವ ಗಾಳಿ ನಿಂದಿತ್ತು ನೋಡಾ! ಗೊರವನ ಕೈಪಂಜಿನ ಬೆಳಗ ಕಂಡು ಕೈಕಾಲುಮುಖದೊಳೆದು ನಡೆದು ನಿಂದಲ್ಲಿ ಬೆಳಗಿನ ಬೆಳಗು ತಾನೆ ನೋಡಾ ಗುರುನಿರಂಜನ ಚನ್ನಬಸವಲಿಂಗಾ!
--------------
ದೇಶಿಕೇಂದ್ರ ಸಂಗನಬಸವಯ್ಯ
ಶೀಲವಂತರು, ಶೀಲವಂತರು ಎಂಬರು ಶೀಲವಂತಿಕೆಯನಾರು ಬಲ್ಲರು ಹೇಳಾ ? ನೆಲಕೆ ಶೀಲ ಶೀಲವೆಂಬೆನೆ ? ಹೊಲೆ ಹದಿನೆಂಟುಜಾತಿ ನಡೆ ನುಡಿವುದಕ್ಕೆ ಒಂದೆಯಾಯಿತ್ತು . ಜಲಕೆ ಶೀಲವೆಂಬೆನೆ ? ವಿೂನ ಮೊಸಳೆಗಳು ಖಗಮೃಗಂಗಳು ನಿಂದೆಂಜಲು. ಬೆಳೆಗೆ ಶೀಲವೆಂಬೆನೆ ? ಎತ್ತು ಕತ್ತೆ ತಿಂದು ಮಿಕ್ಕ ಎಂಜಲು. ಹೊನ್ನಿಗೆ ಶೀಲವೆಂಬೆನೆ ? ಉರ ಹೊರೆಯಾಗಿಪ್ಪುದು. ಹೆಣ್ಣಿಗೆ ಶೀಲವೆಂಬೆನೆ ? ಕಣ್ಣುಗೆಡಿಸಿ ಕಾಡುತಿಪ್ಪುದು. ಇನ್ನಾವುದು ಶೀಲ ಹೇಳಿರಣ್ಣಾ ? ಇದಕ್ಕೆ ಒಳಗಾದವರೆಲ್ಲ ದುಃಶೀಲರು. ಇದ ಹಿಡಿದು ಹಿಡಿಯದೆ, ಬಿಟ್ಟು ಬಿಡದೆ. ತನ್ನ ಮನಕ್ಕೆ ಶೀಲವಾಗಿಪ್ಪುದೆ ಅಚ್ಚಶೀಲ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಅವನಿಕ್ಕಿದ ಗಾಣಕ್ಕೆ ಮೂವರು ಹುದುಗು. ಉದಯ ಮಧ್ಯಾಹ್ನ ಅಸ್ತಮಯವೆಂಬ ಮೂರು ವೇಳೆಗೆ, ಅದ ತಿರುಗುವ ಎತ್ತು ಒಂದೆಯಾಯಿತ್ತು. ಒಬ್ಬ ಹಿಂಗಿದ ಇಬ್ಬರು ಹೊರುತ್ತಿದ್ದರು ಅತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಇನ್ನಷ್ಟು ... -->