ಅಥವಾ

ಒಟ್ಟು 38 ಕಡೆಗಳಲ್ಲಿ , 23 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಟಿಲತಟದಲ್ಲಿ ಮಠವ ಮಾಡಿಕೊಂಡು, ಘಟವ ಸಟೆಮಾಡಿ, ದಿಟವ ಪಿಡಿದು ನಟಿಸಿ ನಿರಂಜನಲಿಂಗದಲ್ಲಿ ಘಟೋತ್ತರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವಾಗಿ ಬಂದು ತನುವ ಕೊರೆದಡೂ ಕೇಳೆ, ಲಿಂಗವಾಗಿ ಬಂದು ಮನದಲ್ಲಿ ಕುಳ್ಳಿರ್ದು ನಿಜಾಂಗವ ತೋರಿದಡೂ ಕೇಳೆ, ಜಂಗಮವಾಗಿ ಬಂದು ಬಯಲ ಬೆಳಗಿನಲ್ಲಿ ಒಳಗಾಗೆಂದಡೂ ಒಲ್ಲೆ. ಅದೆಂತೆಂದಡೆ ; ಕುಟಿಲದಲ್ಲಿ ಬಂದು ವ್ರತವ ಕೆಡಿಸಿಹೆನೆಂದಡೆ, ಕುಟಿಲದ ದೇವರುಂಟೆ ವ್ರತ ಮೊದಲು ಘಟ ಕಡೆಯಾಗಿ ಘಟಿಸುವೆನಲ್ಲದೆ, ಮೂರು ಕಿಸುಕುಳಕಾಗಿ ಘಟವ ಹೊರೆದಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ದೂರ.
--------------
ಅಕ್ಕಮ್ಮ
ಮೃತ್ತಿಕೆಯ ತಿಟ್ಟದಿಂದ ಮಯಣದ ಕರುವಿಟ್ಟು, ಆ ಘಟವ ಲಕ್ಷಿಸಲಿಕ್ಕಾಗಿ, ಪುನರಪಿಯಾಗಿ ಮೃತ್ತಿಕೆಯ ಬಲಿದು ಈ ಉಭಯದ ಮಧ್ಯದಲ್ಲಿ ನಿಂದ ತಿಟ್ಟದಂತೆ ಇಂತೀ ತ್ರಿವಿಧ ಜಾರಿ ಉಳುಮೆ ಒಂದೆ ನಿಂದುದನರಿದು, ಭಕ್ತಿಯ ಮರೆಯಲ್ಲಿದ್ದ ಸತ್ಯ, ಸತ್ಯದ ಮರೆಯಲ್ಲಿ ವಿಶ್ರಮಿಸಿದ್ದ ಜ್ಞಾನ, ಜ್ಞಾನವ ವಿಶ್ರಮಿಸಿಕೊಂಡಿಹ ಶಿವಲಿಂಗಮೂರ್ತಿಧ್ಯಾನ, ಅದು ತದ್ಧ್ಯಾನವಾಗಲಿಕ್ಕಾಗಿ, ಅದು ನಿಜದ ಉಳುಮೆ; ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಸಾವಧಾನಿಯ ಸಂಬಂಧ.
--------------
ಮೋಳಿಗೆ ಮಹಾದೇವಿ
ಮಧುರವ ಕೂಡಿದ ಜಲವ ತೆಗೆದು ಬ್ಥಿನ್ನವ ಮಾಡಬಹುದೆ ಅಯ್ಯಾ ? ಘಟವ ಹೊದ್ದಿದ ಬೆಳಗ ಪ್ರಕಟಿಸಬಹುದೆ ಅಯ್ಯಾ ? ಇಂತೀ ಉಭಯದ ತೆರದಂತೆ ಪ್ರಾಣಲಿಂಗಿಯ ಸಂಬಂಧದ ಇರವು. ಮಾತಿನ ಮಾಲೆಯಿಂದ, ನೀತಿಯಲ್ಲಿ ಕಾಬ ವಾದದಿಂದ, ಇಂತಿವರಿಗೇತಕ್ಕೊಲಿವ, ನಿಃಕಳಂಕ ಮಲ್ಲಿಕಾರ್ಜುನ ?
--------------
ಮೋಳಿಗೆ ಮಾರಯ್ಯ
ಕಾಯವ ಬಿಟ್ಟು ಜೀವವಸ್ತುವಿನಲ್ಲಿ ಕೂಡಬೇಕೆಂಬರು. ಕಾಯ ಅರಿವಿಂಗೆ ಹೊರಗೆ. ಕಾಯ ಜೀವವೆರಡೂ ಕೂಡಿ ಕಂಡ ಜ್ಞಾನರತ್ನದ ರತಿ ಬೇರೆ. ಆ ಘಟವ ಬೇರೆ ಬ್ಥಿನ್ನವ ಮಾಡಿ, ರತ್ನ ಮಾರುವ ಪರಿ ಇನ್ನೆಂತೊ ? ಇಷ್ಟದ ರೂಪ ಹಾಕಿ, ಮತ್ತೆ ಲಿಂಗಪೂಜಕನೆಂತಪ್ಪನೊ ? ಅಂಗದ ಕೂಟ, ಮನದ ವಿಶ್ರಾಂತಿ ಉಭಯವ ಬೇರೆ ಮಾಡದಿರಯ್ಯಾ. ಪತಿ ಹೋಹಲ್ಲಿ ಸತಿ ಉಳಿದಡೆ, ಅದು ಅಪಮಾನದ ಕೇಡೆಂಬರು. ನಿನ್ನಯ ನೆನಹ ಹೊತ್ತಿದ್ದ ಘಟ ಮಣ್ಣಿಗೀಡಾಗಲೇಕೆ ? ಚೆನ್ನಬಂಕೇಶ್ವರಲಿಂಗಾ, ನಿನ್ನಲ್ಲಿಯೆ ಗ್ರಹಿಸಿಕೊಳ್ಳಯ್ಯಾ, ನಿನ್ನ ಧರ್ಮ.
--------------
ಸುಂಕದ ಬಂಕಣ್ಣ
ಉದಯಕ್ಕೆ ಉತ್ಪತ್ಯವಾಗಿ, ಮಧ್ಯಾಹ್ನಕ್ಕೆ ಸ್ಥಿತಿಯಾಗಿ, ಅಸ್ತಮಾನಕ್ಕೆ ಲಯವಹ ದೇಹವ ಹೊತ್ತು ಮತ್ತೆ, ನಿಶ್ಚಿಂತದಲ್ಲಿ ನಿಂದು, ಕಷ್ಟವ ಬಿಡಿಸುವ ಠಾವ ತೋರಾ. ಹಗಲಿಂಗೆ ಹಸಿವು ತೃಷೆ, ಇರುಳಿಂಗೆ ವಿಷಯ ವ್ಯಸನ ವ್ಯಾಪಾರ, ಇಂತೀ ಘಟವ ಹೊಕ್ಕು, ಐದಕ್ಕೆ ಒಡಲಾದೆಯಲ್ಲಾ ಐಘಂಟೇಶ್ವರಲಿಂಗಾ.
--------------
ಸತ್ತಿಗೆ ಕಾಯಕದ ಮಾರಯ್ಯ
ಜನನ ಮರಣಕ್ಕೊಳಗಹ ಆತ್ಮನ ಪರಿಭವಕ್ಕೆ ಬರ್ಪುದು, ಇಲ್ಲವೆಂದು ನುಡಿವುತ್ತಿಹರು ಆಧ್ಯಾತ್ಮಯೋಗಿಗಳು. ಶರೀರದಲ್ಲಿ ಸೋಂಕಿದ ವ್ಯಾಧಿ ಆತ್ಮಂಗಲ್ಲದೆ ಶರೀರಕ್ಕುಂಟೆ ? ಘಟಕ್ಕೆ ನೋವಲ್ಲದೆ ಆತ್ಮಂಗೆ ನೋವೆಲ್ಲಿಯದೆಂಬುದು ಹುಸಿ. ಘಟದಲ್ಲಿ ತೋರುವ ಆತ್ಮನು ಘಟವ ಬಿಟ್ಟು, ಮತ್ತೆ ಘಟಕ್ಕೆ ಚೇತನಿಸಬಲ್ಲುದೆ ? ನಾನಾ ಸುಖಂಗಳ ಸುಖಿಸಬಲ್ಲುದೆ ? ಇದು ಕಾರಣ, ಕ್ರೀಯೆವಿಡಿದು ಮಾಡುವಂಗೆ ಕರ್ಮಶೇಷವಿಲ್ಲ, ನಿಃಕ್ರೀಯಲ್ಲಿ ಚರಿಸುವಂಗೆ ನಾನಾ ಭವವುಂಟಾಗಿ. ಇಂತೀ ಆತ್ಮನಲ್ಲಿ ಪರಿಭವಕ್ಕೆ ಬರಬಾರದು. ಬಂದಡೆ ಅಳಿವು ಉಳಿವನರಿಯಬೇಕು, ಅರಿಯಲಾಗಿ ಮರೆಯಬೇಕು. ಆ ಮರವೆ ತಾನೆ ತೆರಹಿಲ್ಲದರಿಕೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ ಮುಖವ ನೋಡಲಾಗದು. ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ, ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ ? ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ ತಮ್ಮ ತಮ್ಮ ಹಿರಿಯತನವ ಮುಂದುಗೊಂಡು ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ ? ಹತ್ತೈದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ, ಭಕ್ತಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ. ಅತ್ಯತ್ತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ. ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ ಘಟಕರ್ಮಿಗಳ ಮುಖವ ನೋಡಲಾಗದು ಅಮುಗೇಶ್ವರಲಿಂಗವೆ.
--------------
ಅಮುಗೆ ರಾಯಮ್ಮ
ಘಟವ ಮಾಡಿದ ಕುಲಲಾನು ಆ ಘಟದೊಳಿಪ್ಪುದಿಲ್ಲವೆಂತಂತೆ, ಬೆಳಸ ಬಿತ್ತಿದವನು ಆ ಬೆಳೆಯೊಳಿಪ್ಪುದಿಲ್ಲವೆಂತಂತೆ, ರಥವ ಮಾಡಿದ ರಥಿಕ ತಾ ಆ ರಥದೊಳಿಪ್ಪುದಿಲ್ಲವೆಂತಂತೆ, ಸರ್ವವನಾಡಿಸುವ ಶರ್ವನು ಯಂತ್ರ ಯಂತ್ರಿಯಂತಿರ್ಪನಾಗಿ ಸರ್ವರೂ ಶಿವನೆಂಬ ಅಜ್ಞಾನಿಗಳ ಮೆಚ್ಚುವನೆ ನಮ್ಮ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಚಿತ್ತು ಘಟವ ಹೊತ್ತು ಇಹಾಗ, ನಿತ್ಯಾನಿತ್ಯವನರಿದುದಿಲ್ಲ. ಸತ್ವ ರಜ ತಮವ ಹೊತ್ತಾಡುವಲ್ಲಿ, ಭವಲೇಪ ನಿಶ್ಚಯವನರಿಯಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಸತ್ಯಾಸತ್ಯವೆಂದು ವಿವರಿಸಿ ತಿಳಿದು ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ ಘನಲಿಂಗದೇವರೆಂಬೆನು. ನಿತ್ಯಾನಿತ್ಯವೆಂದು ವಿವರಿಸಿ ತಿಳಿದು ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ ಘನಲಿಂಗದೇವರೆಂಬೆನು. ಪುಣ್ಯಪಾಪವೆಂದು ವಿವರಿಸಿ ತಿಳಿದು ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ ಘನಲಿಂಗದೇವರೆಂಬೆನು. ಧರ್ಮಕರ್ಮವೆಂದು ವಿವರಿಸಿ ತಿಳಿದು ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ ಘನಲಿಂಗದೇವರೆಂಬೆನು. ಆಚಾರ ಅನಾಚಾರವೆಂದು ವಿವರಿಸಿ ತಿಳಿದು ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ ಘನಲಿಂಗದೇವರೆಂಬೆನು. ಇಂತೀ ಉಭಯದ ನ್ಯಾಯವನರಿಯದೆ ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ ಘಟವ ಹೊರೆವ ಕುಟಿಲ ಕುಹಕರ ತುಟಿಯತನಕ ಮೂಗಕೊಯ್ದು ಕಟವಾಯ ಸೀಳಿ ಕನ್ನಡಿಯ ತೋರಿ ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ ನಮ್ಮ ಅಖಂಡೇಶ್ವರ ?
--------------
ಷಣ್ಮುಖಸ್ವಾಮಿ
ಘಟವ ಮಾಡಿದವ ಘಟದ್ಲರವಂತೆ, ಭೂಷಣವ ಮಾಡಿದವ ಭೂಷಣದ್ಲರದಂತೆ, ಕೃಷಿಯ ಮಾಡಿದವ ಕೃಷಿಯ್ಲರದಂತೆ, ತೈಲವ ತೆಗೆದವ ತೈಲದ್ಲರದಂತೆ, ಮನೆಯ ಕಟ್ಟಿದವ ಮನೆಯ್ಲರದಂತೆ, ಪಿಂಡವ ಮಾಡಿದವ ಪಿಂಡದೊಳಿರದಂತೆ, ಬ್ರಹ್ಮಾಂಡವ ರಚಿಸಿದವ ಬ್ರಹ್ಮಾಂಡದೊಳಿರದಂತೆ, ಅರಿಯದ ಮನುಜರ ಅರುಹಿನ ಮನೆಯೊಳಿಪ್ಪ ನೋಡಾ, ಕಪಿಲಸಿದ್ಧಮಲ್ಲೇಂದ್ರನೆಲೆ ಮಲ್ಲಶೆಟ್ಟಿ.
--------------
ಸಿದ್ಧರಾಮೇಶ್ವರ
ಚೇತನವಳಿದು ಅಚೇತನವಸ್ತು ರೂಪಾಗಿ ಬಂದಿತ್ತದೇತಕ್ಕೆ ಎಂಬುದು ತಿಳಿದು, ಬಂಗಾರವ ಕಳೆದು ಬಣ್ಣವ ನೋಡಬಾರದು. ಕುಸುಮವ ಕಳೆದು ಗಂಧವ ಕಾಣಬಾರದು. ದರ್ಪಣದ ಘಟವ ಕಳೆದು ನೋಡಲಿಕ್ಕೆ ಪ್ರತಿಬಿಂಬಿಸುವುದೆ ? ಅಂಗವ ಕಳೆದು ಲಿಂಗವನರಿಯಬಾರದು. ಲಿಂಗವ ಕಳೆದು ಆತ್ಮನನರಿವ ಪರಿಯಿನ್ನೆಂತೊ ? ಆತ್ಮನ ಚೇತನವ ಬಿಟ್ಟು ಹಿತಜ್ಞಾನವರಿಯಬೇಕೆಂಬ ಅಜಾತರು ಕೇಳಿರೊ. ಅಂಗವ ಕಳೆದು ಲಿಂಗವ ಕಂಡೆನೆಂಬುದು, ಲಿಂಗವಳಿದು ಆತ್ಮನನರಿದೆನೆಂಬುದು, ಆತ್ಮನಳಿದು ಅರಿವನರಿದೆನೆಂಬುದು, ಅದೇತರ ಮರೆ ಹೇಳಾ. ತೃಷೆಯರತು ನೀರ ಕೊಳಬಹುದೆ ? ಆಪ್ಯಾಯನವನರತು ಓಗರವನುಣಬಹುದೆ ? ಸತ್ಕ್ರೀಯಿಲ್ಲದೆ ಲಿಂಗವನರಿಯಬಹುದೆ ? ಆ ಲಿಂಗಕ್ಕೆ ಅರ್ಚನೆ ಪೂಜನೆ ಹೀನವಾಗಿ ವಸ್ತುವನರಿತೆನೆಂಬ ನಿಶ್ಚಿಯವಂತರು ನೀವೇ ಬಲ್ಲಿರಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೇ? ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ? ಮೃತ್ತಿಕೆಯ ಹರುಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ? ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ. ನಿಜತತ್ತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ: ಶಿಲೆಯೊಳಗಣ ಸುರಭಿಯಂತೆ ಪ್ರಳಯದೊಳಗಾದ ನಿಜನಿವಾಸದಂತೆ ಆಯದ ಘಾಯದಂತೆ, ಸುಘಾಯದ ಸುಖದಂತೆ ಇಂತೀ ಭಾವರಹಿತವಾದ ಭಾವಜ್ಞನ ತೇರ ಕೂಗಿಂಗೆ ಹೊರಗು ಮಹಾಮಹಿಮ ಮಾರೇಶ್ವರಾ
--------------
ಕೂಗಿನ ಮಾರಯ್ಯ
ಜಲಕುಂಭಚಂದ್ರವತ್ತೆಂಬ ಯಥಾ ನ್ಯಾಯವನರುಹಿಸಿ ಕುಂಭ ಹಲವಾದಡೆ ಚಂದ್ರನೊಬ್ಬನೊ? ಇಬ್ಬರೊ? ಬಲ್ಲರೆ, ನೀವು ಹೇಳಿರೆ. ಆ ಭೂಮಿಯಲ್ಲಿ ಅಡಿಗೊಂದೊಂದು ಸ್ಥಲವಾಗಿ ಸ್ಥಲಕ್ಕೊಂದು ಬಣ್ಣವಪ್ಪ ಮೃತ್ತಿಕೆಯ ತಂದು ಘಟವಂ ಮಾಡಿ ಆ ಘಟವ, ಬಹುವಿಧಮಂ ಕೂಡಿ ದಗ್ಧವ ಮಾಡಿ ಏಕಶಾಯಿಯಂ ಮಾಡೆ, ಉಪಯೋಗಕ್ಕೆ ಸಂದುದೊ ಘಟವು? ಇಂತೀ ಪರಿಯಲ್ಲಿ ತಿಳಿದು ಕೇಳಿರೆ. ಇಂತು ಗುರುಕಾರುಣ್ಯವುಳ್ಳ ದೇಹಕ್ಕೆ ವರ್ಣಾಶ್ರಮವನತಿಗಳೆಯದಿದ್ದಡೆ ಆ ಗುರುಕಾರುಣ್ಯ ತಾನೆಂತಿಪ್ಪುದು ಹೇಳಿರೆ? ಆ ಗುರುಸ್ವಾಮಿ ಹಸ್ತಮಸ್ತಕಸಂಯೋಗವ ಮಾಡಿ, ಮಾಂಸಪಿಂಡವ ಕಳೆದು ಮಂತ್ರಪಿಂಡವಂ ಮಾಡಿ, ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ. ಶಿವಜನ್ಮಕುಲಯುತರಾಗಿ ಶಿವನ ಶರಣರು ವಾಙõïಮಾನಸಾಗೋಚರರೆನ್ನದಿದ್ದಡೆ ಕುಂಭೀಪಾತಕನಾಯಕನರಕ ತಪ್ಪದು, ಸತ್ಯಸತ್ಯ ಅವರಿಗಿದೇ ಗತಿ. ಇನ್ನು ಅನಂತಕೋಟಿಬ್ರಹ್ಮಕಲ್ಪ ಉಳ್ಳನ್ನಕ್ಕರ ಇಹರು ಕಾಣಾ ನರಕದಲ್ಲಿ, ಇದಕಿನ್ನು ಶ್ರುತಿ: ಪಾತಕಂತು ಮನುಷ್ಯಾಣಾಂ ತನುಭಾವೇಷು ವರ್ಧನಂ ಜನ್ಮಕರ್ಮಾಮರಣಾಂತಂ ಅಜಕಲ್ಪಾವಧಿಂ ಭವೇತ್ ಮುಕ್ತಿ ಎಂಬುದು ಉಂಟಾದುದಕ್ಕೆ ಉಪದೃಷ್ಟವ ಹೇಳಿಹೆನು: ಹಿಂದೆ ಅರಿಯಿರೆ, ನಿಮ್ಮ ಋಷಿ ಮೂಲಾಂಕುರವನು, ಉಪದೇಶಗಮ್ಯರಾಗಿ ಅಷ್ಟಾದಶಕುಲಂಗಳನೂ ಏಕವರ್ಣವ ಮಾಡಿರೆ ಉಪದೇಶಗಮ್ಯದಿಂದಲೂ ಇನ್ನರಿದು ಹಡೆದ ಪದಫಲಾದಿಗಳ ನೋಡಿರೆ. ಜನ್ಮಕರ್ಮನಿವೃತ್ತಿಯಾಗದೆ ಒಬ್ಬ ಋಷಿಗೆ? ಜೀವನದ ಮೊದಲಲ್ಲಿ ಆವ ಬೇಡ ಕಾಣಾ. ಜ್ಞಾನದಿಂದ ಅಂತಂತು ಮಾಡಿದಡೆ, ಶಿವಭಕ್ತನಿಂದೆಯಿಂದ ಒಂದು ಬ್ರಹ್ಮಕಲ್ಪಪರಿಯಂತರ ಕುಂಭೀಪಾತಕನಾಯಕನರಕದಲ್ಲಿ ಅಯಿದಾನೆ ಎಂದುದು ಶ್ರುತಿ: ಲಿಂಗಸ್ಯಾರಾಧನೇ ವಿಘ್ನಂ ಯತ್ಕೃತಂ ಸ್ವಾರ್ಥಕಾರಣಾತ್ ನಿಮೇಷಮಪಿ ತತ್ಪಾಪಂ ಕರೋತಿ ಚ ಕುಲಕ್ಷಯಂ ಸೂಕರಃ ಕೋಟಿಜನ್ಮಾನಿ ಲಭತೇ ಶತಕೋಟಿಭಿಃ ಮೃಗಶ್ಚ ಕೋಟಿಜನ್ಮಾನಿ ಶೃಗಾಲಃ ಕೋಟಿಜನ್ಮಭಿಃ ಅಂಧಶ್ಚ ಲಕ್ಷಜನ್ಮಾನಿ ಕುಬ್ಜಸ್ಸ್ಯಾದಬ್ಜಜನ್ಮಭಿಃ ಪಂಗುಲಃ ಕೋಟಿಜನ್ಮಾನಿ ಶಿಖಂಡೀ ಜಾಯತೇ ತಥಾ ಉಲೂಕೋ ವಾಯಸೋ ಗೃಧ್ರಶ್ಸೂಕರೋ ಜಂಬುಕಸ್ತಥಾ ಮಾರ್ಜಾಲೋ ವಾನರಶ್ಚೈವ ಯುಗಕೋಟಿ ಶತ ನರಃ ಲಿಂಗಾರ್ಚನರತಂ ವಾಚಾ ಸಕೃಲ್ಲಿಂಗಂ ಚ ದೂಷಯನ್ ಯುಗಕೋಟಿಕ್ರಿಮಿರ್ಭೂತ್ವಾ ವಿಷ್ಟಾಯಾಂ ಜಾಯತೇ ಪುನಃ ಕೀಟಃ ಪತಂಗೋ ಜಾಯೇತ ಕೃತವೃಶ್ಚಿಕದರ್ದುರಃ ಜಾಯಂತೇ ಚ ಮ್ರಿಯಂತೇ ಚ ನರಾಸ್ತೇ ನಾಸ್ತಿ ವೈ ಸುಖಂ ಇಂತೆಂದುದಾಗಿ- ಅಂದೊಮ್ಮೆ ಬಂದುದು ದೂರ್ವಾಸನೆಂಬ ಋಷಿಗೆ ಮತ್ರ್ಯಲೋಕದಲ್ಲಿ ಮಹಾಪವಾದ. ಅದ ಮರಳಿ ಪರಿಹರಿಸಿಕೊಳನೆ ಮತ್ರ್ಯಲೋಕದಲ್ಲಿ ಶಿವಾರ್ಚನೆಯಂ ಮಾಡಿ? ಶಿವಭಕ್ತರಿಗೆ ಮನೋಹರವಂತಹ ಪೂಜೆಯ ಮಾಡಿ ಆ ಪರಶಿವನ ಘನಲಿಂಗವೆಂದರಿದು ಅರ್ಚಿಸಿ, ಪರಮಭಕ್ತರ ಪಾದತೀರ್ಥಪ್ರಸಾದದಿಂದ ಆ ಋಷಿ ಅಮರಕಾಯನೆಂಬ ನಾಮವ ಪಡೆಯನೆರಿ ಆಕಾರಾಧ್ಯಕ್ಷರಂಗಳಿಗೆ ನಾಯಕವಂತಹ ಅಕ್ಷರ ಪಂಚಾಕ್ಷರವೆಂಬುದನರಿದು ಶಿವನೇ ಸರ್ವದೇವರಿಗೆ ಅಧಿದೈವವೆಂದರಿದು ವೇದಶಾಸ್ತ್ರಪುರಾಣಾನಿ ಸ್ಪಷ್ಟಾ ವೇಶ್ಯಾಂಗನಾ ಇವ ಯಾ ಪುನಶ್ಯಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ ಎಂದುದಾಗಿ: ಶಿವಾರ್ಚಕಪದದ್ವಂದ್ವಸ್ಯಾರ್ಚನಾತ್ ಸ್ಮರಣಾದಪಿ ಕೋಟಿಜನ್ಮಸು ಸೌಖ್ಯಂ ಸ್ಯಾತ್ ಸ ರುದ್ರೋ ನಾತ್ರ ಸಂಶಯಃ ಎಂಬರ್ಥವನರಿದು ಆಂಗಿರಸ, ಶಾಂಡಿಲ್ಯ, ವೇದವ್ಯಾಸ, ವಾಲ್ಮೀಕಿ, ಮಾಂಡವ್ಯ ಮೊದಲಾದ ಋಷಿಗಳೆಲ್ಲರೂ ಶಿವನಿಂದೆ, ಶಿವಭಕ್ತರ ನಿಂದೆಯ ಮಾಡಿ ಶಿವನ ಕ್ಷೇತ್ರವಹ ವೇದಾದಿಶಾಸ್ತ್ರಗಮಂಗಳಿಗೆ ಪ್ರತಿಯಿಟ್ಟು ಕರ್ಮಶಾಸ್ತ್ರಂಗಳನೆಸಗಿ ಅಕ್ಷಯನರಕವನೈದಿರಲಾಗಿ, ತ್ರ್ಯಕ್ಷನ ಶರಣ ಕೃಪಾವರದಾನಿ ಏಕನಿಷ* ಪರಮಮಾಹೇಶ್ವರ ಸಾನಂದನು ಕರುಣದಿಂದಲೆತ್ತನೆ ಅವರೆಲ್ಲರ ನರಕಲೋಕದಿಂದ? ಇಂತಿವಕ್ಕೆ ಸಾಕ್ಷಿದೃಷ್ಟಾಂತಗ್ರಂಥಗಳ ಪೇಳುವಡೆ, ಅಂತಹವು ಅನಂತ ಉಂಟು, ಆಗಮ ಪುರಾಣದಲ್ಲಿ ಅರಿವುಳ್ಳವರು ತಿಳಿದು ನೋಡುವುದು. ಶಾಪಹತರೆನಿಸುವ ಪಾಪಿಗಳು ಅವ ಮುಚ್ಚಿ ವಿತಥವ ನುಡಿವರು. ಇದನರಿದು ನಿತ್ಯಸಹಜ ಶಿವಲಿಂಗರ್ಚನೆಯಂ ಮಾಡಿ `ತತ್ವಮಸಿ' ವಾಕ್ಯಂಗಳನರಿದು ತತ್ಪದೇನೋಚ್ಯತೇ ಲಿಂಗಂ ತ್ವಂಪದೇನಾಂಗಮುಚ್ಯತೆ ಲಿಂಗಾಂಗಸಂಗೋ[s]ಸಿಪದಂ ಪರಮಾರ್ಥನಿರೂಪಣೇ ಎಂಬುದನರಿದು ನಿತ್ಯನಿರ್ಮಳಜ್ಞಾನಾನಂದ ಪ್ರಕಾಶವೆಂಬ ಮಹಾಮನೆಯಲ್ಲಿ ಪರಮಸುಖದಲ್ಲಿ ಆಕಾರಂಗಳ ಲಯವನು ತಮ್ಮಲ್ಲಿ ಎಯ್ದಿಸಿ ಮಹಾನುಭಾವರನೆನಗೆ ತೋರಯ್ಯಾ. ನಾ ನಿನ್ನನರಿದುದಕ್ಕೆ ಫಲವಿದು ನೀನೆನ್ನ ನೋಡಿದುದಕ್ಕೆ ಫಲವಿದು. ಸುಖಸಚ್ಚಿದಾನಂದಸ್ವರೂಪ ಅನಿತ್ಯವ ಮೀರಿದ ನಿತ್ಯ ನೀನಲ್ಲದೆ ಮತ್ತೊಂದುಂಟೆ? ಎನಗೆ ನಿನ್ನಂತೆ ನಿರ್ಮಲಜ್ಞಾನಾನಂದಪದವನಿತ್ತು ಎನ್ನ ನಿನ್ನಂತೆ ಮಾಡಿ ಉದ್ಧರಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->