ಅಥವಾ

ಒಟ್ಟು 119 ಕಡೆಗಳಲ್ಲಿ , 41 ವಚನಕಾರರು , 108 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವ ಕೊಟ್ಟು ತನು ಬಯಲಾಯಿತ್ತು, ಮನವ ಕೊಟ್ಟು ಮನ ಬಯಲಾಯಿತ್ತು, ಧನವ ಕೊಟ್ಟು ಧನ ಬಯಲಾಯಿತ್ತು, ಈ ತ್ರಿವಿಧವನು ಕೊಟ್ಟು ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಬಯಲಸಮಾಧಿಯಾಯಿತ್ತು.
--------------
ಚನ್ನಬಸವಣ್ಣ
ಕುಲ ಛಲ ರೂಪ ಯೌವ್ವನ ವಿದ್ಯೆ ಧನ ರಾಜ್ಯ ತಪಮದವೆಂಬ ಅಷ್ಟಮದಂಗಳ ಬಹಿರಂಗದಲ್ಲಿ ನೆನೆದು ಬರಿದೆ ಭ್ರಮೆಗೆ ಸಿಲ್ಕಿ ಬಳಲುತ್ತಿಪ್ಪರಯ್ಯ. ಅದು ಎಂತೆಂದಡೆ : ಅಂಧಕನ ಮುಂದಣ ಬಟ್ಟೆಯಂತೆ, ಹುಚ್ಚಾನೆಯ ಮುಂದಣ ಬ್ಥಿತ್ತಿಯಂತೆ, ಎನ್ನ ಅನ್ಯೋನ್ಯದ ಬಾಳುವೆಗೆ ಗುರಿಮಾಡಿ ಎನ್ನ ಕಾಡುತಿದ್ದೆಯಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಧನ ಧಾನ್ಯ ಅಷ್ಟಮಹದೈಶ್ವರ್ಯದೊಳು ಮನ ಹೀನನಾಗಿ ಮಾರ್ಗತಪ್ಪಿತು. ಬೆನಕನ ಮದುವೆಯಂತೆಯಾಯಿತು. ಇಂದು ನಾಳೆಯೆಂಬ ಸಂದೇಹಮಾತ್ರದಿಂದ ವನಿತೆ ಸುತ ಮಿತ್ರ ಕಳತ್ರಯದಿಂದ ಅನಾಚಾರ ಹೊಂದಿತು. ಮುನಿವ ವೈರಿಯ ಕೈಯ ಚಂದ್ರಾಯುಧದ ಮೊನೆಗೆ ಇದಿರು ಆದಂತಾಯಿತು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಪತಪ ನೇಮವಲ್ಲ, ಮಂತ್ರತಂತ್ರ ನೇಮವಲ್ಲ, ಧೂಪದೀಪಾರತಿ ನೇಮವಲ್ಲ, ಧನ, ಪರಸ್ತ್ರೀ, ಪರದೈವಂಗಳಿಗೆರಗದಿಪ್ಪುದೆ ನೇಮ. ಸೌರಾಷ್ಟ್ರ ಸೋಮೇಶ್ವರಲಿಂಗವಲ್ಲಿದ್ದ ಕಾರಣ ನಿತ್ಯನೇಮ.
--------------
ಆದಯ್ಯ
ನಿನಗೆ ಮಜ್ಜನವ ಮಾಡುವಲ್ಲಿ, ನಾ ಮಲದೇಹಿ, ನೀ ನಿರ್ಮಲದೇಹಿ. ನಿನಗೆ ಪೂಜೆಯ ಮಾಡುವಲ್ಲಿ, ನಾ ಕರ್ಮಜೀವಿ, ನೀ ಪುಣ್ಯಜೀವಿ. ನಿನಗೆ ಗಂಧವ ಹೂಸುವಲ್ಲಿ, ನಾ ದುರ್ಗುಣ ಜೀವಿ, ನೀ ಸುಗಂಧ ಭಾವಿ. ನಿನಗೆ ಅಕ್ಷತೆಯನಿಕ್ಕುವಲ್ಲಿ, ನಾ ಲಕ್ಷಿತ, ನೀ ಅಲಕ್ಷಿತ. ನಿನಗೆ ಧೂಪವನಿಕ್ಕುವಲ್ಲಿ, ನಾ ಭಾವಿತ, ನೀ ನಿರ್ಭಾವಿತ. ನಿನಗೆ ದೀಪವನೆತ್ತುವಲ್ಲಿ, ನಾ ಜ್ಯೋತಿ, ನೀ ಬೆಳಗು. ಇಂತೀ ಭಾವಂಗಳಲ್ಲಿ ಭಾವಿಸಿ ಕಂಡೆಹೆನೆಂದಡೆ, ಭಾವಕ್ಕೆ ಅಗೋಚರನಾಗಿಪ್ಪೆ. ನಿನ್ನನರಿವುದಕ್ಕೆ ತೆರನಾವುದೆಂದಡೆ, ಗುರುವಿಂಗೆ ತನು, ನಿನಗೆ ಮನ, ಜಂಗಮಕ್ಕೆ ಧನ, ತ್ರಿವಿಧಕ್ಕೆ ತ್ರಿವಿಧವನಿತ್ತು, ದಗ್ಧಪಟದಂತೆ ರೂಪಿಗೆ ಹೊದ್ದಿಗೆಯಾಗಿ, ಕಲ್ಲಿಗೆ ಹೊದ್ದದಿಪ್ಪ ಲಿಂಗ ಸದ್ಭಕ್ತನ ಸ್ಥಲ. ಆ ಭಕ್ತನಲ್ಲಿ ತಪ್ಪದಿಪ್ಪೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ, ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ, ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ, ಇಂತೀ ತ್ರಿವಿಧವು ನಿಮ್ಮದೆಂದರಿದ ಬಳಿಕ ಎನಗೆ ಬೇರೆ ವಿಚಾರವುಂಟೆ, ಕೂಡಲಸಂಗಮದೇವಾ
--------------
ಬಸವಣ್ಣ
ಹರಹರ ಶಿವಶಿವ ಜಯಜಯ ಹರಗಣಂಗಳಾಚರಿಸಿದ ಸತ್ಕಾಯಕದಿಂದ ಬಹುಜನ್ಮದ ದೋಷ ತೊಲಗುವುದಯ್ಯ. ಸತ್ಕಿøಯದಿಂದ ಕಾಲಕಾಮರ ಭಯ ಹರಿವುದಯ್ಯ. ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ. ಸದ್ಭಕ್ತಿಯಿಂದ ಪಾವನಸ್ವರೂಪರಾಗುವುರಯ್ಯ. ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ. ಸದಾಚಾರದಿಂದ ಮನ ಸಿದ್ಧವಾಗುವುದಯ್ಯ. ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ. ಗಣಾಚಾರದಿಂದ ನಡೆ ಪರುಷವಾಗುವುದಯ್ಯ. ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ. ಕ್ರಿಯಾಚಾರದಿಂದ ಕರ್ಮೇಂದ್ರಿಯಂಗಳು ಪವಿತ್ರವಾಗುವವಯ್ಯ. ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ. ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ. ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ. ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ. ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ. ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು ತಪ್ಪದು ನೋಡ. ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು, ಷೋಡಶವರ್ಣವೆ ಸದ್ಗುರುಮುಖದಿಂ ಚಿದ್ಘನಲಿಂಗವ ಮಾಡಿಕೊಂಡು ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಭಕ್ತನಾದಡೆ ಆರೂ ಅರಿಯದಂತೆ ಊರೆಲ್ಲರರಿಕೆಯಾಗಿ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ, ಮಾಟವನರಿತು ಮಾಡುವ ಸತಿಯರ ಗಂಡ ನಾನು. ರಕ್ಕಸನೊಡೆಯ ಕೊಟ್ಟುದ ಬೇಡ
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ತನು ತನ್ನದಾದಡೆ, ದಾಸೋಹಕ್ಕೆ ಕೊರತೆಯಿಲ್ಲ, ದಾಸೋಹ ಸಂಪೂರ್ಣ, ದಾಸೋಹವೇ ಮುಕ್ತಿ. ಮನ ತನ್ನದಾದಡೆ, ಜ್ಞಾನಕ್ಕೆ ಕೊರತೆಯಿಲ್ಲ ಜ್ಞಾನ ಸಂಪೂರ್ಣ, ಆ ಜ್ಞಾನವೇ ಮುಕ್ತಿ. ಧನ ತನ್ನದಾದಡೆ, ಭಕ್ತಿಗೆ ಕೊರತೆಯಿಲ್ಲ. ಭಕ್ತಿ ಸಂಪೂರ್ಣ, ಭಕ್ತಿಯಲ್ಲಿ ಮುಕ್ತಿ. ತನುಮನಧನವೊಂದಾಗಿ ತನ್ನದಾದಡೆ ಗುರುಲಿಂಗಜಂಗಮವೊಂದೆಯಾಗಿ ತಾನಿಪ್ಪನು ಬೇರೆ ಮುಕ್ತಿ ಎಂತಪ್ಪುದಯ್ಯಾ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತನು ನಿಮ್ಮದಾಗಿ ಮನ ನಿಮ್ಮದಾಗಿ ಧನ ನಿಮ್ಮದಾಗಿ ಇನಿತೆಲ್ಲ ನೋಡಲು ಸರ್ವಸ್ವವೂ ನಿಮ್ಮದಾಗಿ ನಿಮಗರ್ಪಿತವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಭಕ್ತ ಭಕ್ತನೆಂದೇನೊ ? ಭವಿಗಳು ಮನೆಯಲುಳ್ಳನ್ನಕ್ಕ ಭಕ್ತನೆ ? ಭಕ್ತ ಭಕ್ತನೆಂದೇನೊ ? ಅನ್ಯದೈವ ಸುರೆ ಮಾಂಸವುಳ್ಳನ್ನಕ್ಕ ಭಕ್ತನೆ ? ಭಕ್ತ ಭಕ್ತನೆಂದೇನೊ ? ಹರಕೆ ತೀರ್ಥಯಾತ್ರೆಯುಳ್ಳನ್ನಕ್ಕ ಭಕ್ತನೆ ? ಭಕ್ತ ಭಕ್ತನೆಂದೇನೊ ? ತನು ಮನ ಧನ ವಂಚನೆಯುಳ್ಳನ್ನಕ್ಕ ಭಕ್ತನೆ ? ಇವರೆಲ್ಲರು ಎದೆಯಲ್ಲಿ ಕಲ್ಲನಿರಿಸಿಕೊಂಡು ಸಾವಿಂಗೆ ಸಂಬಳಿಗರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುವರನಿಂದುದಿಸಿ, ಜಂಗಮಪಾದೋದಕಪ್ರಸಾದದಿಂದೆ ಬೆಳೆದು, ಪರಮಲಿಂಗೈಕ್ಯವು ನಮಗುಂಟೆಂದು ನುಡಿವ ನಾಲಿಗೆ ನೀಟಾಗಿಹುದು; ಗುರುವಿಗಿತ್ತ ತನುವು ನೀಟಾಗಿಹುದು. ಲಿಂಗದ ಮನ ಚೆಲುವಾಗಿಹುದು. ಜಂಗಮದ ಧನ ಸ್ವಚ್ಛವಾಗಿಹುದು. ಆಡಿರ್ದಂತೆ ಆಚರಿಸಿ ಅರ್ಪಿತವಾಗಲರಿಯದೆ ನಾಲಿಗೆ ಮರಳಿದರೆ ಕೀಳರೆ? ತನು ವಂಚಿಸಿ ಬಿದ್ದರೆ ದುರ್ಗತಿಗೆ ಎಳೆದುಹಾಕರೆ? ಮನಸ್ಸು ಮರಳಿ ಬಿದ್ದರೆ ನಾಚಿಕೆಯ ಕೊಳ್ಳರೆ? ದ್ರವ್ಯವ ಮರಳಿ ಸುಖಿಸಿದರೆ ವೈತರಣಿಯೊಳು ದುಃಖಬಡಿಸರೆ? ಇದು ಕಾರಣ ನಿಮ್ಮ ನಡತೆ ಯಮನಿಗೆ ಹಿಡಿತ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಮ್ಮ ತನು, ನಿಮ್ಮ ಧನ, ನಿಮ್ಮ ಮನ ನಿಮ್ಮದಲ್ಲದೆ ಅನ್ಯವೆಂದಣುಮಾತ್ರವಿಲ್ಲ ನೋಡಯ್ಯಾ. ಭಕ್ತನ ಮಠವೆ ತನ್ನ ಮಠವೆಂದು ಮುನ್ನವೆ ಅರಿದರಿದು ಬಂದು, ಮತ್ತೊಂದ ಮತ್ತೊಂದ ನೆನೆವರೆ ? ಬಸವಪ್ರಿಯ ಕೂಡಲಚೆನ್ನಸಂಗನ ಶರಣ ಬಸವಣ್ಣಂಗೆ ಸ್ವತಂತ್ರಭಾವವುಳ್ಳಡೆ ನಿಮ್ಮ ಪಾದದಾಣೆ.
--------------
ಸಂಗಮೇಶ್ವರದ ಅಪ್ಪಣ್ಣ
ಪರಮಾತ್ಮನು ಸ್ವಲೀಲಾನಿಮಿತ್ತ ಸಾಕಾರಸ್ವರೂಪನಾಗಿ, ಪಂಚವಕ್ತ್ರ ದಶಭುಜಂಗಳನು ಧರಿಸಿ, ತನ್ನ ನಿಜಧರ್ಮವನೆ ತನಗಾಧಾರಮಪ್ಪ ವಾಹನಮಂ ಮಾಡಿಕೊಂಡು, ಪಂಚಮುಖಂಗಳಲ್ಲಿ ಪಂಚಭೂತಂಗಳಂ ಸೃಷ್ಟಿಸಿ, ಅವನೇ ಬಂದು ಬ್ರಹ್ಮಾಂಡವಂ ಮಾಡಿಕೊಂಡು, ತನ್ನ ಲೀಲಾಶಕ್ತಿಯ ಸಂಗದಿಂದ ಅನಂತಕೋಟಿ ಜೀವಂಗಳಂ ಸೃಷ್ಟಿಸಿ, ತನ್ನ ಗೂಢಮಪ್ಪ ಮನೋಭಂಡಾರವಂ ತೆಗೆದು, ಆ ಜೀವಂಗಳಿಗದನೇ ಜೀವನವಂ ಮಾಡಿ, ಈ ಬ್ರಹ್ಮಾಂಡವೆಂಬ ತನ್ನ ಪಟ್ಟಣಕ್ಕೂ ಈ ಜೀವಜಾಲಕ್ಕೂ ನಿಜಮನೋಭಂಡಾರವನೆ ಆಧಾರಮಂ ಮಾಡಿ, ತಾನೇ ಸೇವ್ಯನಾಗಿ, ಜೀವಂಗಳೇ ಸೇವಕರಾಗಿ ಕ್ರೀಡಿಸುತ್ತಿರಲಾ ಪರಮಾತ್ಮನಿಂದ ಸಲಿಗೆವಡೆದ ಕೆಲವು ಜೀವಂಗಳು ಅಹಂಕರಿಸಿ, ಆ ಪರಶಿವನಲ್ಲಿರ್ಪ ಮನೋಭಂಡಾರದಲ್ಲಿ ತಮ್ಮ ಶಕ್ತಿಗೆ ತಕ್ಕಷ್ಟು ಸತ್ಕರಿಸಿಕೊಂಡು, ತದ್ವಂಚನಾಮನದಿಂ ಪಂಚಭೂತಂಗಳನ್ನು ಸಾದ್ಥಿಸಿ, ಅದರಿಂದ ಒಂದು ಪಿಂಡಾಂಡವೆಂಬ ಪಟ್ಟಣಮಂ ಮಾಡಿಕೊಂಡು, ಇಂದ್ರಿಯಂಗಳೆಂಬ ಕೊತ್ತಲಂಗಳಂ ನಿರ್ಮಿಸಿ, ನವದ್ವಾರಂಗಳೆಂಬ ಹುಲಿಮುಖಂಗಳಿಂದ ಅಜ್ಞಾನವೆಂಬತಿ ಘಾತಮಾದಗಳಂ ಕಲ್ಪಿಸಿ, ಆಶೆಯೆಂಬಾಳ್ವೇರಿಯಂ ಸೃಜಿಸಿ, ತನ್ಮಧ್ಯದಲ್ಲಿ ಅಂತರಂಗವೆಂಬುದೊಂದು ಅರಮನೆಯಂ ಕಟ್ಟಿ, ಅಲ್ಲಿದ್ದುಕೊಂಡು, ಜೀವನು ತನ್ನ ಮನೋವಂಚನಾಭಂಡಾರವಂ ವೆಚ್ಚಿಸುತ್ತಾ, ವಿಷಯಂಗಳೆಂಬ ಮನ್ನೆಯರಂ ಸಂಪಾದಿಸಿ, ನಿಜಪುರದ್ವಾರಂಗಳಲ್ಲಿ ಕಾಹನಿಟ್ಟು, ಅಂತಃಕರಣಚತುಷ್ಟಯವೆಂಬ ಶಿರಃಪ್ರಧಾನರಂ ಸಂಪಾದಿಸಿ, ತನ್ಮಂತ್ರಾಲೋಚನೆಯಿಂ ಸಾಮ, ಭೇದ, ದಾನ, ದಂಡವೆಂಬ ಕರಿ, ತುರಗ, ರಥ, ಪದಾತಿಗಳಂ ಕೂಡಲಿಟ್ಟು, ಕರ್ಮವೆಂಬ ಸೇನಾನಿಗೆ ಪಟ್ಟಮಂ ಕಟ್ಟಿ, ತನ್ನಲ್ಲಿರ್ಪ ನಾನಾ ದಳಂಗಳಂ ಸೇನಾಪತಿಯ ವಶಮಂ ಮಾಡಿ, ನಾದ ಬಿಂದು ಕಳೆಗಳೆಂಬ ಶಕ್ತಿಗಳಂ ಪರಿಣಯಮಾಗಿ, ಜಾಗ್ರತ್ಸ್ವಪ್ನಸುಷುಪ್ತಿಗಳೆಂಬರಮನೆಗಳೊಳಗೆ ಕಳೆಯ ನಾದದಲ್ಲಿ ಕೆಲವುತ್ತಂ, ಬಿಂದುವಿನಲ್ಲಿ ಫಲಿಸಿ ಫಲಸುಖಂಗಳನನುಭವಿಸುತಿರ್ಪ ಜೀವನೆಂಬರಸಿನನುಮತವಿಡಿದು, ಕರ್ಮಸೇನಾನಿಯು ಸಕಲದಳಂಗಳೊಳಗೆ ಕೂಡಿ, ವಿಷಯಂಗಳೆಂಬ ಮನ್ನೆಯರಂ ಮುಂದುಮಾಡಿಕೊಂಡು, ಪ್ರಪಂಚವೆಂಬ ರಾಜ್ಯವಂ ಸಾದ್ಥಿಸಿ, ತದ್ರಾಜ್ಯದಲ್ಲಿ ಬಂದ ಪುತ್ರ ಮಿತ್ರ ಕಳತ್ರ ಧನ ಧಾನ್ಯ ವಸ್ತುವಾಹನಾಲಂಕಾರಾದಿಗಳನ್ನು ಕಾಯಪುರಕ್ಕೆ ತಂದು, ಜೀವನೆಂಬರಸಿಗೆ ಒಪ್ಪಯಿಸುತ್ತಿರಲು, ಜೀವನು ಸಂತೋಷಿಸಿ, ತಾನು ಸಂಪಾದಿಸಿದ ಸಕಲದ್ರವ್ಯವನ್ನು ತನ್ನ ಮೂಲಮನೋಭಂಡಾರದಲ್ಲಿ ಬೆರಸಿ, ಬಚ್ಚಿಟ್ಟು, ಅಹಂಕರಿಸಿ, ಸಕಲಕ್ಕೂ ತಾನೇ ಕರ್ತೃವೆಂದು ಬೆರತು, ಪರಮಾತ್ಮನಂ ಮರೆತು, ಸೇವ್ಯಸೇವಕರೆಂಬ ವಿವೇಕವರತು, ಅಧರ್ಮ ವಾಹನಾರೂಢನಾಗಿ, ತನ್ನ ತಾನರಿಯದೆ, ಕಾಮವಶನಾಗಿ ಸಂಚರಿಸುತಿರ್ಪ ಈ ಜೀವನ ಅಹಂಕಾರಮಂ ಸಂಹರಿಸುವ ನಿಮಿತ್ತವಾಗಿ ಪರಮಾತ್ಮನು ಕಾಲನೆಂಬ ಸುಬೇದಾರನಂ ಸೃಷ್ಟಿಸಿ, ವ್ಯಾದ್ಥಿಪೀಡನಗಳೆಂಬ ಬಲಂಗಳಂ ಕೂಡಲಿಟ್ಟು, ದುಃಖವೆಂಬ ಸಾಮಗ್ರಿಯಂ ಒದಗಿಸಿಕೊಟ್ಟು, ಕ್ರೋಧವೆಂದು ಮನೆಯಾಳಿಂಗೆ ತಮೋಗುಣಂಗಳೆಂಬ ಬಲುಗಾರರಂ ಕೂಡಿಕೊಟ್ಟು, ಈ ಕಾಯಪುರಮಂ ಸಾದ್ಥಿಸೆಂದು ಕಳುಹಲು, ಆ ಸದಾಶಿವನಾಜ್ಞಾಶಕ್ತಿಯಿಂದ ಕಾಲಸುಭೇದಾರನು ಸಕಲ ಬಲಸಮೇತವಾಗಿ ಬಂದು, ಕಾಯಪುರಕ್ಕೆ ಸಲುವ ಪ್ರಪಂಚರಾಜ್ಯವಂ ನೆರೆಸೂರೆಮಾಡಲು, ಕರಣಂಗಳೆಂಬ ಪ್ರಜೆಗಳು ಕೆಟ್ಟೋಡಿಬಂದು, ಜೀವನೆಂಬ ಅರಸಿಗೆ ಮೊರೆಯಿಡಲು, ಅದಂ ಕೇಳಿ, ಆಗ್ರಹಪಟ್ಟು, ಕರ್ಮಸೇನಾನಿಗೆ ನಿರೂಪಿಸಲು, ತತ್ಸೇನಾನಿಯು ಕಾಯಪುರದಲ್ಲಿರ್ಪ ಸಕಲದಳ ಸಮೇತಮಾಗಿ ಬಂದು ಕಾಲಸುಬೇದಾರನೊಡನೆ ಯುದ್ಧವಂ ಮಾಡಿ, ಜಯಿಸಲಾರದೆ ವಿಮುಖನಾಗಿ ಉಪಭೋಗಾದಿ ಸಕಲ ಸುಖಂಗಳಂ ಕೋಳುಕೊಟ್ಟು ಬಂದು ಕೋಟೆಯಂ ಹೊಗಲು, ಜೀವನು ಪಶ್ಚಾತ್ತಾಪದಿಂ ಸಂಶಯಯುಕ್ತನಾಗಿ ಕಳವಳಿಸುತ್ತಿರಲು, ಆ ಕಾಲಸುಬೇದಾರನು ಕಾಯಪುರಮಂ ಒತ್ತರಿಸಿ ಮುತ್ತಿಗೆಯಂ ಹಾಕಿ, ವಿಷಯಮನ್ನೆಯರಂ ಹಸಗೆಡಿಸಿ ಕೊಂದು, ಕರ್ಮವಂ ನಿರ್ಮೂಲವಂ ಮಾಡಿ, ಅಂತರಂಗ ಮನೆಯಂ ಕೊಳ್ಳೆಯವಂ ಮಾಡಿ, ನಾದಬಿಂದುಕಳಾಶಕ್ತಿಯಂ ಸೆರೆವಿಡಿದು, ಕಾಯಪುರಮಂ ಕಟ್ಟಿಕೊಳ್ಳಲು, ಜೀವನು ಭಯಭ್ರಾಂತನಾಗಿ, ಆ ಮೂಲಮನೋಭಂಡಾರಮಾತ್ರಮಂ ಕೊಂಡು, ತತ್ಪುರಮಂ ಬಿಟ್ಟು, ಅನೇಕ ಯಾತನೆಪಟ್ಟು ಓಡಿ, ಮರಳಿಮರಳಿ ಜೀವನು ಪುರಂಗಳಂ ಸಂಪಾದಿಸಲು, ತತ್ಸಂಪಾದಿತಪುರಂಗಳಂ ಕಾಲನು ಸಾದ್ಥಿಸುತ್ತಿರಲು, ಜೀವನು ಅಹಂಕಾರವಳಿದು, ಆಸ್ಪದವಿಲ್ಲದೆ, ತನಗೆ ಕರ್ತೃವಾರೆಂಬುದಂ ಕಾಣದೆ, ವಿಚಾರಪಟ್ಟು ದುಃಖಿಸುತಿರ್ಪ ಜೀವನಿಗೆ ಕರುಣದಿಂ ಪರಮಾತ್ಮನು ಜ್ಞಾನದೃಷ್ಟಿಯಂ ಕೊಡಲು, ತದ್ಬಲದಿಂ ಶಿವನೇ ಕರ್ತೃ ತಾನೇ ಭೃತ್ಯನೆಂಬುದಂ ತಿಳಿದು, ಶಿವಧ್ಯಾನಪರಾಯಣನಾಗಿ, ಶಿವಧಾರಣ ಧರ್ಮಪದಮಂ ಪಿಡಿದು ಪಲುಗುತ್ತಿರಲು, ತದ್ಧರ್ಮಮೇ ಗುರುರೂಪಮಾಗಿ, ತನ್ನಲ್ಲಿರ್ಪ ಶಿವನಂ ಜೀವಂಗೆ ತೋರಿಸಲು, ಜೀವಂ ಹಿಗ್ಗಿ, ತಾನು ಸಂಪಾದಿಸಿದ ಪುರವನೆ ಶಿವಪುರಮಂ ಮಾಡಿ, ಧರ್ಮಾದಿ ಸಕಲವಿಷಯಬಲಂಗಳಂ ಶಿವನ ವಶಮಂ ಮಾಡಿ, ಆ ಪಟ್ಟಣದೊಳಯಿಂಕೆ ಬಿಜಯಂಗೈಸಿಕೊಂಡು ಹೋಗಿ, ಅಂತರಂಗದ ಅರಮನೆಯೊಳಗೆ ಜ್ಞಾನಸಿಂಹಾಸನದ ಮೇಲೆ ಕುಳ್ಳಿರಿಸಿ, ಪಟ್ಟಮಂ ಕಟ್ಟಿ, ತನ್ನ ಸರ್ವಸ್ವಮಂ ಶಿವನಿಗೆ ಸಮರ್ಪಿಸಿ, ತಾನು ಸತ್ಕರಿಸಿಕೊಂಡುಬಂದ ಮನೋಭಂಡಾರಮಂ ಶಿವನಡಿಯಂ ಸೇರಿಸಲು, ಸದಾಶಿವನು ಪ್ರಸನ್ನಮುಖನಾಗಿ, ದಯೆಯಿಂ ಪರಿಗ್ರಹಿಸಿ, ಜೀವನನು ಸಜ್ಜೀವನನಮಾಡಿ ಕೂಡಿಕೊಂಡುದೆ ಲಿಂಗೈಕ್ಯ ಕಾಣಾ | ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇನ್ನಷ್ಟು ... -->