ಅಥವಾ

ಒಟ್ಟು 119 ಕಡೆಗಳಲ್ಲಿ , 45 ವಚನಕಾರರು , 112 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಭೇದಂಗಳಲ್ಲಿ ಷಡ್ದರುಶನವ ಹೊಕ್ಕು ತಿಳಿದಡೂ ಶ್ರುತಿ ವೇದ ಶಾಸ್ತ್ರ ಪುರಾಣ ಆಗಮಂಗಳ ಕಲಿತಡೂ ಮೂರುಮಲದ ಭೇದವನರಿತು ಬಿಡುಮುಡಿಯಲ್ಲಿ ಕಳೆದುಳಿಯಬೇಕು. ಇದು ಪ್ರಸಿದ್ಧವಪ್ಪ ತೆರ. ಇದು ಸಂಗನಬಸವಣ್ಣನ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವ ಕೂಡಬೇಕು.
--------------
ಬಾಹೂರ ಬೊಮ್ಮಣ್ಣ
ವೇದವನೋದುವ ಅಣ್ಣಗಳು ನೀವು ಕೇಳಿರೊ ! ವೇದ ವೇದಿಸಲಿಲ್ಲ ಶಾಸ್ತ್ರ ಸಾಧಿಸಲಿಲ್ಲ; ಪುರಾಣ ಪೂರೈಸಲಿಲ್ಲ, ಆಗಮಕ್ಕೆ ಆದಿಯಿಲ್ಲ. ಇದು ಕಾರಣ_ ಆದ್ಯರಲ್ಲ, ವೇದ್ಯರಲ್ಲ, ಸಾಧ್ಯರಲ್ಲ ಬರಿಯ ಹಿರಿಯರು ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಚಿತ್ರದ ಬೊಂಬೆ ರೂಪಾಗಿರ್ದರೇನೋ? ಅಚೇತನವಾದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಹಾವುಮೆಕ್ಕೆಯ ಹಣ್ಣು ನುಂಪಾಗಿರ್ದರೇನೋ? ಕಹಿ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ಅತ್ತಿಯ ಹಣ್ಣು ಕಳಿತಿರ್ದರೇನೋ? ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ. ತಿಪ್ಪೆಯ ಹಳ್ಳ ತಿಳಿದಿರ್ದರೇನೋ? ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ. ವೇದ ಶಾಸ್ತ್ರ ಪುರಾಣಾಗಮಂಗಳನೋದಿ ಎಲ್ಲರಲ್ಲಿಯೂ ಅನುಭಾವಿಗಳಾದರೇನೋ? ಆಶೆಯೆಂಬ ಪಾಶದಲ್ಲಿ ಕಟ್ಟುವಡೆದು ಪಾಶಬದ್ಧರಾದ ಕಾರಣ ಪ್ರಯೋಜನಕಾರಿಗಳಾದುದಿಲ್ಲ. ನುಡಿವಂತೆ ನಡೆಯದವರ ನಡೆದಂತೆ ನುಡಿಯದವರ ಎಂತು ಶಿವಶರಣರೆಂಬೆ ವಾಚಾಳಿಕರ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ವಚನದ ರಚನೆಯೆಂಬ ಮಾತಿನ ಬಣ್ಣದ ಪರಿಯಲ್ಲ ನೋಡಾ. ಹೊಲಳಿ ಕಂಡವರೆಲ್ಲರು ಮೂರ್ತಿಗೊಳಗಾದರು. ವೇದ ಶಾಸ್ತ್ರ ಮಾರ್ಗವೆಲ್ಲವೂ ಹೊಗಳಿ ಕಾಣವೆಂಬುದ, ಗುಹೇಶ್ವರ ಸಾಕ್ಷಿಯಾಗಿ ಮೂರುಲೋಕ ಬಲ್ಲುದು ಕಾಣಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಕಾಪಾಲಿಕವೆ ನರಕಪಾಲ ಬ್ಥಿಕ್ಷಾಟನಾದಿಗಳಂ ವಿವರಿಸೂದು. ಮಹಾವ್ರತವೆ ಅಸ್ಥಿಧಾರಣಾದಿಗಳಂ ವಿವರಿಸುತ್ತಿರ್ಕುಂ. ಬಳಿಕ ಪರಶಿವಪ್ರಣೀತಮಾದ ಶಾಸ್ತ್ರ ಮಂತ್ರವೆ ಮೋಕ್ಷಾಂಗಮಾದ ಕ್ರಿಯೆ ಚರ್ಯೆ ಯೋಗ ಜ್ಞಾನಾದಿಗಳಂ ಪ್ರಮಾಣಿಸುತ್ತಿರ್ಕುಂ, ಮತ್ತಮಾ ಸಮಸ್ತಮತಾಂತರಂಗಳಲ್ಲಿ ಪೇಳುವಾತ್ಮಸ್ವರೂಪವೆಂತೆನೆ:ದೇಹವೆ ಆತ್ಮನೆಂಬರು ಚಾರ್ವಾಕರು, ಇಂದ್ರಿಯಂಗಳೆ ಆತ್ಮನೆಂಬರು ಚಾರ್ವಾಕೈಕ ದೇಶಿಗಳು, ಪ್ರಾಣವೆ ಆತ್ಮನೆಂಬರು ಹಿರಣ್ಯಗರ್ಭರೆಂಬ ಚಾರ್ವಾಕೈಕ ದೇಶಿಗಳು. ಬಳಿಕ ದೇಹಾದಿ ವಿಲಕ್ಷಣನಾದೊರ್ವಾತ್ಮನು ದೇಹಪರಿಮಿತವಾಗಿ ಮಧ್ಯಪರಿಮಾಣತ್ವದಿಂ ಸಂಕೋಚ ವಿಕಾಸ ಧರ್ಮಯುಕ್ತನೆಂಬರು ಜೈನರು, ಬುದ್ಧಿಯೆ ಆತ್ಮನೆಂಬರು ಬೌದ್ಧರು, ಆನಂದವೆ ಆತ್ಮನೆಂಬರು ಕೋಳಯಾಮಳ ಶಾಕ್ತೇಯರುಗಳು, ಆತ್ಮನು ನಾಡಿಮಧ್ಯಗತನಾಗಿ ಅಣುಪರಿಮಾಣನೆಂಬರು ಪಾಂಚರಾತ್ರರು, ಆತ್ಮನು ದೇಹ ಪುತ್ರಾದಿ ರೂಪನೆಂಬರು ಲೌಕಿಕರು, ಆತ್ಮನು ಸ್ವತಃ ಪ್ರಮಾಣಜ್ಞಾನ ಸಮೇತನೆಂಬರು ವಿೂಮಾಂಸಕ ಭೇದಮಾದ ಭಾಟ್ಟ ಪ್ರಭಾಕರರುಗಳು, ಆತ್ಮನು ಗಗನದಂತೆ ಮಹತ್ವರಿಮಾಣನಾಗಿ ಪಾಷಾಣದಂತೆ ಜಡಸ್ವರೂಪನಾದೊಡಂ ಮನಃಸಂಯೋಗದಿಂ ಚಿದ್ಧರ್ಮಯುಕ್ತನೆಂಬರು ನೈಯಾಯಿಕ ವೈಶೇಷಿಕರುಗಳು, ಆತ್ಮನು ಅಸಚ್ಚಿನ್ಮಾತ್ರನೆಂಬರು ಸಾಂಖ್ಯ ಪಾತಂಜಲರುಗಳು, ಆತ್ಮನು ಜ್ಞಾಪ್ತಿಮಾತ್ರನೆಂಬರು ವೇದಾಂತಿಗಳು, ಆತ್ಮನು ನಿತ್ಯವ್ಯಾಪಕನೆಂಬರು ಪಾಶುಪತ ಕಾಪಾಲಿಕ ಮಹಾವ್ರತರುಗಳು, ಆತ್ಮನು ನಿತ್ಯವಾಪಕ ಜ್ಞಾನಕ್ರಿಯಾರೂಪನೆಂಬರು ಮಾಂತ್ರ ಸಂಜ್ಞಿತ ಸಿದ್ಧಾಂತಿಗಳೆಂದು ಪೃಥಕ್ಕರಿಸಲ್ವೇಳ್ಕುಂ ಶಾಂತವೀರೇಶ್ವರಾ. ಇಂತೀ ಮತಾಂತರಂಗಳ ಬ್ಥಿನ್ನಾಚರಣೆವಿಡಿವನಲ್ಲಯ್ಯ ಶರಣ ಶಿವಾದ್ವೈ [ತಿ] ಯಾಗಿ, ಮಹಾಗುರುಶಾಂತ ವೀರಪ್ರಭುವೆ.
--------------
ಶಾಂತವೀರೇಶ್ವರ
ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು; ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು. ಅದೆಂತೆಂದಡೆ: ``ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ವೇದ ಘನವೆಂಬುದೊಂದು ಸಂಪಾದನೆ. ಶಾಸ್ತ್ರ ಘನವೆಂಬುದೊಂದು ಸಂಪಾದನೆ. ಪುರಾಣ ಘನವೆಂಬುದೊಂದು ಸಂಪಾದನೆ. ಆಗಮ ಘನವೆಂಬುದೊಂದು ಸಂಪಾದನೆ. ಅಹುದೆಂಬುದೊಂದು ಸಂಪಾದನೆ. ಅಲ್ಲವೆಂಬುದೊಂದು ಸಂಪಾದನೆ. ಗುಹೇಶ್ವರನೆಂಬ ಮಹಾಘನದ ನಿಜಾನುಭಾವಸಂಪಾದನೆಯ ಅರಿಯದ ಕಾರಣ ಹಲವು ಸಂಪಾದನೆಗಳಾದವು.
--------------
ಅಲ್ಲಮಪ್ರಭುದೇವರು
ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ ವಾಚಾರಚನೆಯೆಂಬ ಹುಲಿ ಹುಟ್ಟಿ, ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ, ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ ಪರಿಭ್ರಮಣದ ತೋಳ ಹುಟ್ಟಿ, ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು ಗಜ ಅಜದ ಮೆಲುಕಿನಲ್ಲಿ ಸಿಕ್ಕಿ, ತೋಳ ಉಡುವಿನ ಕಣ್ಣಿನೊಳಡಗಿತ್ತು. ತುರುವಿನ ಮುಂದೆ ಬರಿಕೆಯಿವುತ್ತಿದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು.
--------------
ತುರುಗಾಹಿ ರಾಮಣ್ಣ
ವೇದ ಹುಟ್ಟುವುದಕ್ಕೆ ಮುನ್ನವೆ ಓದಿದವರಾರು ? ಶಾಸ್ತ್ರ ಹುಟ್ಟುವುದಕ್ಕೆ ಮುನ್ನವೆ ಕಲಿತವರಾರು ? ಪುರಾಣ ಹುಟ್ಟುವುದಕ್ಕೆ ಮುನ್ನವೆ ಕೇಳಿದವರಾರು ? ಉತ್ಪತ್ತಿ ಸ್ಥಿತಿ ಲಯಕ್ಕೆ ಮುನ್ನವೆ ನಾನೆಂಬವರಾರು. ಮನಸಂದ ಮಾರೇಶ್ವರಾ ?
--------------
ಮನಸಂದ ಮಾರಿತಂದೆ
ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ವೇದಾಂತವಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲದ ಹೊಲಬ ತಿಳಿಯಬಲ್ಲಾತನೆ ಸಿದ್ಧಾಂತವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಮೂಲವ ಬಲ್ಲಾತನೆ ವೇದ ಶಾಸ್ತ್ರ ಪುರಾಣ ಆಗಮವ ಬಲ್ಲಾತನೆಂಬೆ. ಶ್ರೀಪಂಚಾಕ್ಷರಿಯ ಧ್ಯಾನವ ಧ್ಯಾನಿಸಲರಿಯದೆ ವೇದಾಗಮವನೋದುತ್ತಿದ್ದೆವೆಂಬ ಪಿಸುಣರ ಓದೆಲ್ಲ ಕುಂಬಿಯ ಮೇಲೆ ಕುಳಿತು ಒದರುವ ವಾಯಸನಸರಿಯೆಂಬೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವೇದ ಯೋನಿಯ ಹಂಗು. ಶಾಸ್ತ್ರ ಯೋನಿಯ ಹಂಗು. ಪುರಾಣ ಯೋನಿಯ ಹಂಗು. ಆಗಮ ಯೋನಿಯ ಹಂಗು. ನಾದದಿಂದ ಉದಿಸಿದವು ಶ್ರೋತ್ರದ ಹಂಗು. ಹೇಳುವುದು ವೆಜ್ಜ, ಕೇಳುವುದು ವೆಜ್ಜ, ತಾ ಹಿಂದೆ ಬಂದುದು ವೆಜ್ಜ, ಈಗ ನಿಂದು ಮಾಡುವುದು ವೆಜ್ಜ. ಇಂತೀ ವೆಜ್ಜದಜ್ಜೆಯ ಗುದ್ದಿನಲ್ಲಿ ಬಿದ್ದವರಿಗೆ ನಿರ್ಧರವಿಲ್ಲ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ವೇದ ಶಾಸ್ತ್ರ ಪುರಾಣ ಆಗಮಂಗಳ ನೋಡಿದರೇನಯ್ಯ ? ಗುರು ಉಪದೇಶದಿಂದ ಪ್ರಾಣಲಿಂಗಸಂಬಂಧವನರಿತು ವೇದ ಶಾಸ್ತ್ರ ಪುರಾಣ ಆಗಮಂಗಳನೋದಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಶ್ಚಿಂತ ನಿರಾಕಾರ ಪರಂಜ್ಯೋತಿ ಪರಮಪ್ರಕಾಶ ಆನಂದ ಸ್ವರೂಪನೆ ಜಂಗಮಲಿಂಗ. ಚೈತ್ಯರೂಪವೆ ಲಿಂಗಜಂಗಮ, ಸತ್ವರೂಪವೆ ಗುರುಲಿಂಗ. ಸತ್ತು ಚಿತ್ತಾನಂದವೆ ಸದ್ಭಕ್ತನಲ್ಲಿ ಉದಯ ಇಂತಿವರ ನೆಲೆಯ ವೇದಾಗಮ ಶಾಸ್ತ್ರ ಪುರಾಣಗಳು ಕಾಯದೆ ವಾಗತೀತಃ ಮನೋತೀತಃ ಭಾವಾತೀತಃ ಪರಃ ಶಿವಃ ಸರ್ವಶೂನ್ಯ ನಿರಾಕಾರಂ ನಿತ್ಯತ್ವಂ ಪರಮಂ ಪದಂ || ಎಂದುದಾಗಿ, ಇಂತಪ್ಪ ಶ್ರುತಿ ಒಳ ಹೊರಗಿಪ್ಪ ಜಂಗಮಲಿಂಗವೆ ಜಗತ್ಪಾವನ ಜಂತು ಜಯ ಶರಣಾಗು. ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->