ಅಥವಾ

ಒಟ್ಟು 58 ಕಡೆಗಳಲ್ಲಿ , 31 ವಚನಕಾರರು , 56 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.
--------------
ಅಕ್ಕಮಹಾದೇವಿ
ಆರು ಶಿಲೆಯ ಮಂಟಪದೊಳಗೆ ಮೂವರು ಪುರುಷರು ಕೂಡಿ ಮಹಾಲಿಂಗದ ಧ್ಯಾನವಂ ಮಾಡಿ, ಪರಿಪೂರ್ಣದೇಶಕೆ ಹೋಗಿ ನಿಸ್ಸಂಗಿ ನಿರಾಳನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಚಾರವೆಂಬುದು ಕೂರಲಗು, ತಪ್ಪಿ ಬಂದಡೆ ಪ್ರಾಣವ ತಗಲುವುದು. ಅದು ಕಾರಣ, ಅರಿದರಿದು ಆಚರಿಸಬೇಕು. ಆಚಾರವಿಚಾರ ಉಭಯದ ವಿಚಾರವ ನೋಡದೆ, ಶಿವದೀಕ್ಷೆಯ ಮಾಡಲಾಗದು. ಅದೆಂತೆಂದಡೆ : ಪರರ ಹೆಣ್ಣಿಗೆ ಕಣ್ಣಿಡದಿಹುದೆ ಒಂದನೆಯ ಆಚಾರ. ಪರರ ದ್ರವ್ಯವ ಅಪಹಾರ ಮಾಡದಿಹುದೆ ಎರಡನೆ ಆಚಾರ. ಸುಳ್ಳಾಡದಿರವುದೆ ಮೂರನೆಯ ಆಚಾರ. ವಿಶ್ವಾಸಘಾತವ ಮಾಡದಿಹುದೆ ನಾಲ್ಕನೆಯ ಆಚಾರ. ಪ್ರಾಣಹಿಂಸೆಯ ಮಾಡದಿಹುದೆ ಐದನೆಯ ಆಚಾರ. ಸಕಲ ಶಿವಶರಣರ್ಗೆ ಸಂತೋಷವಂ ಪುಟ್ಟಿಸುವುದೆ ಆರನೆಯ ಆಚಾರ. ಸ್ವೀಕರಿಸಿದ ನೇಮವ ಪ್ರಾಣಾಂತ್ಯವಾಗಿ ಬಿಡೆನೆಂಬುವ ಏಳನೆಯ ಆಚಾರ. ಷಟ್ಸ್ಥಲದವರ ಧಿಕ್ಕರಿಸುವ ಜನರ ಸೀಳುವೆನೆಂಬುವ ವ್ರತವೆ ಎಂಟನೆ ಆಚಾರ. ಕೆಟ್ಟಜನರ ಸಹವಾಸ ಮಾಡದಿಹುದೆ ಒಂಬತ್ತನೆಯ ಆಚಾರ. ಸಜ್ಜನ ಸಂಗತಿಯ ಬಿಡದಿಹುದೆ ಹತ್ತನೆಯ ಆಚಾರ ಅನ್ಯದೇವತಾಭಜನೆಗೆ ವಿಮುಖನಾಗುವುದೆ ಹನ್ನೊಂದನೆಯ ಆಚಾರ. ಶಿವನೇ ಸರ್ವದೇವಶಿಖಾಮಣಿಯೆಂದು ಮನದಲ್ಲಿ ಅಚ್ಚೊತ್ತಿಪ್ಪುದೆ ಹನ್ನೆರಡನೆಯ ಆಚಾರ. ಶಿವನಿಗೆ ಶಿವಗಣಂಗಳಿಗೆ ಭೇದವ ಮಾಡದಿಹುದೆ ಹದಿಮೂರನೆಯ ಆಚಾರ. ಸಕಲ ಜೀವಿಗಳಿಗೆ ಹಿತವ ಬಯಸುವುದೆ ಹದಿನಾಲ್ಕನೆಯ ಆಚಾರ. ಸರ್ವರಿಗೆ ಹಿತವ ಮಾಡುವುದೆ ಹದಿನೈದನೆಯ ಆಚಾರ. ಕಡ್ಡಿಯ ಲಿಂಗಕ್ಕೆ ತೋರಿ ದಂತಧಾವನೆಯ ಮಾಡುವುದೆ ಹದಿನಾರನೆಯ ಆಚಾರ. ಸರ್ವಾವಯವವ ಸ್ವಚ್ಛ ಪ್ರಕ್ಷಾಳಿಸುವುದೆ ಹದಿನೇಳನೆಯ ಆಚಾರ ಲಿಂಗಮುದ್ರೆಯಿಲ್ಲದ ಗುಡಿಯಲ್ಲಿ ಪಾಕವ ಮಾಡದಿಹುದೆ ಹದಿನೆಂಟನೆಯ ಆಚಾರ. ಪ್ರಣವಮುದ್ರೆ ಇಲ್ಲದ ವಸ್ತ್ರ ಹೊದೆಯದಿಹುದೆ ಹತ್ತೊಂಬತ್ತನೆಯ ಆಚಾರ. ಹುಟ್ಟಿದ ಶಿಶುವಿಗೆ ಲಿಂಗಾಧಾರಣ ಮಾಡದೆ, ತಾಯ ಮೊಲೆಹಾಲು ಜೇನುತುಪ್ಪ ಮುಟ್ಟಿಸದಿಹುದೆ ಇಪ್ಪತ್ತನೆಯ ಆಚಾರ. ಆಡಿದ ಭಾಷೆಯ ಕಡೆಪೂರೈಸುವುದೆ ಇಪ್ಪತ್ತೊಂದನೆಯ ಆಚಾರ. ಸತ್ಯವ ನುಡಿದು ತಪ್ಪದಿಹುದೆ ಇಪ್ಪತ್ತೆರಡನೆಯ ಆಚಾರ. ತುರುಗಳ ಕಟ್ಟಿ ರಕ್ಷಿಸುವುದೆ ಇಪ್ಪತ್ತುಮೂರನೆಯ ಆಚಾರ. ತುರುಗಳಿಗೆ ಲಿಂಗಮುದ್ರೆಯಿಕ್ಕಿ ಹಾಲು ಕರೆವುದು ಇಪ್ಪತ್ತುನಾಲ್ಕನೆಯ ಆಚಾರ. ಮಂತ್ರಸಹಿತ ಗೋಮಯವ ಹಿಡಿದು, ಮಂತ್ರಸಹಿತ ಪುಟವಿಕ್ಕಿ ಭಸ್ಮದ ರಾಶಿಯ ಮಾಡುವುದೆ ಇಪ್ಪತ್ತೈದನೆಯ ಆಚಾರ. ಆ ಭಸ್ಮದ ರಾಶಿಯ ಪಾದೋದಕದೊಡನೆ ಉಂಡಿಯ ಕಟ್ಟುವುದೆ ಇಪ್ಪತ್ತಾರನೆಯ ಆಚಾರ. ವಿಧಿಯರಿತು ಸ್ಥಾನವರಿತು ರುದ್ರಾಕ್ಷಿಗ? ಧರಿಸುವುದೆ ಇಪ್ಪತ್ತೇಳನೆಯ ಆಚಾರ. ಶಿವಾನುಭವವ ಶಾಸ್ತ್ರವ ವಿಚಾರಿಸುವುದೆ ಇಪ್ಪತ್ತೆಂಟನೆಯ ಆಚಾರ. ಮನವ ನೋಯಿಸಿ ಮಾತನಾಡದಿಹುದೆ ಇಪ್ಪತ್ತೊಂಬತ್ತನೆಯ ಆಚಾರ. ಲಿಂಗದ ಕಲೆಯರಿತು ಲಿಂಗವ ಪೂಜಿಸುವುದೆ ಮೂವತ್ತನೆಯ ಆಚಾರ. ಗುರುಮುಖದಿಂದ `ತಾನಾರು' ತನ್ನ ನಿಜವೇನೆಂದು ಬೆಸಗೊಳ್ಳವುದೆ ಮೂವತ್ತೊಂದನೆಯ ಆಚಾರ. ಷಡ್ವರ್ಗಂಗಳ ಮೆಟ್ಟಿ ಷಟ್ಸ್ಥಲವನಿಂಬುಗೊಂಡುದೆ ಮೂವತ್ತೆರಡನೆಯ ಆಚಾರ. ಅವಿಚ್ಛಿನ್ನವಾಗಿ ಅಂಗತ್ರಯದಲ್ಲಿ ಮನ ಓಕರಿಸಿಕೊಂಡುದೆ ಮೂವತ್ತುಮೂರನೆಯ ಆಚಾರ. ಲಿಂಗದಲ್ಲಿ ಶಿಲೆಯ ಭಾವವನರಸದಿಹುದೆ ಮೂವತ್ತುನಾಲ್ಕನೆಯ ಆಚಾರ. ಜಂಗಮದಲ್ಲಿ ಕುಲವನರಸದಿಹುದೆ ಮೂವತ್ತೈದನೆಯ ಆಚಾರ. ವಿಭೂತಿಯ ಮಾಣ್ಬದಿಹುದೆ ಮೂವತ್ತಾರನೆಯ ಆಚಾರ. ರುದ್ರಾಕ್ಷಿಯ ಶುದ್ಧವ ಮಾಡಿ ಮಣಿಗಳ ಅರಸುವುದೆ ಮೂವತ್ತೇಳನೆಯ ಆಚಾರ. ಪಾದೋದಕದಲ್ಲಿ ಉಚ್ಛಿಷ್ಟವಳಿದುದೆ ಮೂವತ್ತೆಂಟನೆಯ ಆಚಾರ. ಪ್ರಸಾದದಲ್ಲಿ ರುಚಿಯ ನೋಡದಿಹುದೆ ಮೂವತ್ತೊಂಬತ್ತನೆಯ ಆಚಾರ. ಮಂತ್ರದಲ್ಲಿ ಕುತ್ಸಿತಕಲ್ಪನೆಯ ಮಾಡದಿಹುದೆ ನಾಲ್ವತ್ತೆಳನೆಯ ಆಚಾರ. ಲಿಂಗಾರ್ಚನವಿರಹಿತ ಭೋಜನ ಮಾಡದಿಹುದೆ ನಾಲ್ವತ್ತೊಂದನೆಯ ಆಚಾರ. ಐಕ್ಯರ ಸಮಾಧಿಗೊಳಿಸಿ ತಾನು ಲಿಂಗಪೂಜೆಯ ಮಾಡುವುದೆ ನಾಲ್ವತ್ತೆರಡನೆಯ ಆಚಾರ. ಲಿಂಗದ್ರೋಹವ ಕೇಳಿ ತಾನು ಪ್ರಾಣಬಿಡುವುದೆ ನಾಲ್ವತ್ತುಮೂರನೆಯ ಆಚಾರ. ಜಂಗಮದ್ರೋಹವ ಕೇಳಿ ತಾನು ಐಕ್ಯನಾಗುವುದೆ ನಾಲ್ವತ್ತುನಾಲ್ಕನೆಯ ಆಚಾರ. ಲಿಂಗದ್ರೋಹವ ಮಾಡಿದವನ ಪ್ರಾಣವ ಭೇದಿಸುವುದೆ ನಾಲ್ವತ್ತೈದನೆಯ ಆಚಾರ. ಜಂಗಮದ್ರೋಹವ ಮಾಡಿದವನ ಶಿರವನೀಡಾಡುವುದೆ ನಾಲ್ವತ್ತಾರನೆಯ ಆಚಾರ. ಅಷ್ಟಾವರಣಸಂಗವ ಮಾಡುವ ಭೇದವ ತಿಳಿವುದೆ ನಾಲ್ವತ್ತೇ?ನೆಯ ಆಚಾರ. ತಾನಾರು ಲಿಂಗವಾರು ಎಂಬ ಭೇದವು ತಿಲಮಾತ್ರ ಇಲ್ಲದಿರುವುದೆ ನಾಲ್ವತ್ತೆಂಟನೆಯ ಆಚಾರ. ತನ್ನ ನಿಜವಿಚಾರವ ತಾ ಮರೆಯದೆ ಷಟ್ಸ್ಥಲದವರಿಗೆ ಅರುಹಿ ತನ್ನಂತೆ ಮಾಡುವುದೆ ನಾಲ್ವತ್ತೊಂಬತ್ತನೆಯ ಆಚಾರ. ಇಂತಿಷ್ಟು ಆಚಾರಂಗಳ ಕಡೆಮುಟ್ಟಿಸುವುದೆ, ಕೂಡಲಚೆನ್ನಸಂಗಮದೇವರಲ್ಲಿ ಐವತ್ತನೆಯ ಆಚಾರ ನೋಡಾ ಸಿದ್ದರಾಮಯ್ಯಾ.
--------------
ಚನ್ನಬಸವಣ್ಣ
ತೊಗಲ ಕೈಯಲ್ಲಿ ಶಿಲೆಯ ಲಿಂಗವ ಹಿಡಿದು, ಮಣ್ಣ ಪರಿಯಾಣದಲ್ಲಿ ಓಗರವನಿಕ್ಕಿ, ಲಿಂಗನೈವೇದ್ಯವ ತೋರಿದಡೆ, ಓಗರ ಸವೆದುದಿಲ್ಲ, ನೈವೇದ್ಯದ ರುಚಿಯನರಿದುದಿಲ್ಲ. ಒಳಗು ಶುದ್ಭವಿಲ್ಲದೆ ಮುಟ್ಟಿ ಅರ್ಪಿತವೆಂದಡೆ, ಮೆಚ್ಚುವರೆ ಪ್ರಾಣಲಿಂಗಿಸಂಬಂದ್ಥಿಗಳು. ಉಂಡವನು ಉಂಡಂತೆ ತೇಗುವ ಸಂದಳಿದು, ದ್ವಂದ್ವ ಹಿಂಗಿ ನಿಜವಾರೆಂಬುದ ವಿಚಾರಿಸಿ ಕೊಡುವುದಕ್ಕೆ ಮೊದಲೆ, ಕೊಂಡವರಾರು ಎಂಬುದ ಭಾವಿಸುವುದಕ್ಕೆ ಮೊದಲೆ, ಭಾವನೆಗೆ ಬಂದವರಾರೆಂದು ವಿಚಾರಿಸಿ, ಬೀಜ ನೆರೆ ಬಲಿದು ಪುನರಪಿ ಬಪ್ಪಂತೆ ಲಿಂಗ ತಾನಾಗಿ, ಸಂದೇಹವಿಲ್ಲದೆ ಸೋಂಕುವುದಕ್ಕೆ ಮುನ್ನವೆ ಅರ್ಪಿತ ನಿಂದಾಯಿತ್ತಾಗಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಪ್ರಾಣಲಿಂಗ ಸಮರ್ಪಣ.
--------------
ಮೋಳಿಗೆ ಮಾರಯ್ಯ
ಅರಿದೆಹೆನೆಂಬನ್ನಬರ ಅಸಗೆ ನೀರಡಿಸಿ ಸತ್ತಂತಾಯಿತ್ತು. ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು ಆಪ್ಯಾಯನವಡಸಿ ಸತ್ತಂತಾಯಿತ್ತು. ಅರಿದೆಹೆನೆಂದು ಕೇಳಿಹೇಳಿಹೆನೆಂಬನ್ನಬರ ಆತನು ಶಿಲೆಯ ರೇಖೆಯೆ ? ಬಯಲ ಬ್ರಹ್ಮವೆ ? ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ನೀರುಕಲೆತ ಭೂಮಿಯ ಆಸೆಯ ಮರೆದಲ್ಲಿ ಪುಷ್ಪವರಳಿತ್ತು, ಪೂರ್ಣಿಮೆಯ ಚಂದ್ರ ಮೂಡಿಬರಲು ಸಣ್ಣಬಾವಿಯ ಶಿಲೆಯ ಜಲವುಕ್ಕಿ ಹಾದಿಯಮೇಲೆ ಸುರಿಯೆ ಎಡೆಯಾಡುವ ಸಕಲ ತಿಂಥಿಣಿ ಪ್ರಮಥಗಣವಾದುದು ಕಂಡು ಗುರುನಿರಂಜನ ಚನ್ನಬಸವಲಿಂಗವಾಗಿ ಮರೆದಿರ್ದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎತ್ತಬಾರದ ಕಲ್ಲು ನೀರಿನ ಮೇಲೆ ತೆಪ್ಪದಂತೆ ಹೋದಾಗ ಮೇಲೆ ಕುಳಿತು ಒತ್ತುವರ ನುಂಗಿತ್ತು. ನುಂಗಿದವರು ಅಲ್ಲಿದಂತೆ ಹೊಳೆಯ ನೀರ ತಪ್ಪಲಿಕ್ಕೆ ಕುಡಿದು, ಆ ತೆಪ್ಪ ಪೃಥ್ವಿಯಲ್ಲಿ ನಿಂದಿತ್ತು. ಈ ಗುಣಬ್ಥಿತ್ತಿಯ ಕೇಳಿಹರೆಂದು, ಅಲೇಖನಾದ ಶೂನ್ಯ ಶಿಲೆಯ ಮರೆಯಾದ.
--------------
ವಚನಭಂಡಾರಿ ಶಾಂತರಸ
ಗುರುದೀಕ್ಷೆಯಿಲ್ಲದ ಶಿಲೆಯ ಕೊರಳಲ್ಲಿ ಕಟ್ಟಿಕೊಂಡು ಲಿಂಗವೆಂದು ನುಡಿವ ಚಾಂಡಾಲಿ ನೀ ಕೇಳಾ. ಗುರುದೀಕ್ಷೆಯಿಲ್ಲದುದು ಶಿಲೆಯಲ್ಲದೆ, ಲಿಂಗವಲ್ಲ. ಅದು ಎಂತೆಂದರೆ : ಬ್ಥಿತ್ತಿಯ ಮೇಲಣ ಚಿತ್ರಕ್ಕೆ ಚೈತನ್ಯವುಂಟೇನಯ್ಯಾ ? ಗುರುದೀಕ್ಷವಿಲ್ಲದ ಲಿಂಗಕ್ಕೆ ಪ್ರಾಣಕಳೆಯುಂಟೇನಯ್ಯಾ ? ಪ್ರೇತಲಿಂಗವ ಕೊರಳಲ್ಲಿ ಕಟ್ಟಿ ಭೂತಪ್ರಾಣಿಗಳಾಗಿ ಲಿಂಗವಂತರೆಂಬ ಪಾಷಂಡಿಗಳ ನೋಡಾ ! ಸಾಕ್ಷಿ :``ಪ್ರೇತಲಿಂಗ ಸಂಸ್ಕಾರಿ ಭೂತಪ್ರಾಣೀ ನ ಜಾನಾತಿ'' ಎಂದುದಾಗಿ, ಹೆಸರಿನ ಲಿಂಗ, ಹೆಸರಿನ ಗುರುವಾದರೆ ಅಸಮಾಕ್ಷನ ನೆನಹು ನೆಲೆಗೊಳ್ಳದು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆರುಲಿಂಗದಲ್ಲಿ ಅರತೆನೆಂಬ ಅರಿವುಗೇಡಿಗಳು ನೀವು ಕೇಳಿರೊ. ಆರುಲಿಂಗ ನಿಮಗೆಂತಪ್ಪವು? ಆಚಾರಲಿಂಗ ಬ್ರಹ್ಮಂಗೆ ಸಂಬಂಧವಾಯಿತ್ತು. ಗುರುಲಿಂಗ ವಿಷ್ಣುವಿಂಗೆ ಸಂಬಂಧವಾಯಿತ್ತು. ಶಿವಲಿಂಗ ರುದ್ರಂಗೆ ಸಂಬಂಧವಾಯಿತ್ತು. ಜಂಗಮಲಿಂಗ ಈಶ್ವರಂಗೆ ಸಂಬಂಧವಾಯಿತ್ತು. ಪ್ರಸಾದಲಿಂಗ ಸದಾಶಿವಂಗೆ ಸಂಬಂಧವಾಯಿತ್ತು. ಮಹಾಲಿಂಗ ಪರಶಿವಂಗೆ ಸಂಬಂಧವಾಯಿತ್ತು. ಇಂತೀ ಆರುದರುಶನಕ್ಕೆ ಸಂಬಂಧವಾಯಿತ್ತು. ನಿಮ್ಮ ಸಂಬಂಧವ ಬಲ್ಲರೆ ಹೇಳಿರೊ? ಗುರುಲಿಂಗಜಂಗಮವೆಂಬ ತ್ರಿವಿಧಸಂಬಂಧ; ಆರು ಪರಿಯ ಶಿಲೆಯ ಮೆಟ್ಟಿ ಮುಂಬಾಗಿಲವ ತೆರೆದು ಶ್ರೀಗುರುವಿನ ಪ್ರಸಾದವ ಸವಿದು ಮುಂದಿರ್ದ ಲಿಂಗಸಂಗದ ಅರ್ಪಿತ ದರುಶನವೆಂಬೊ ಜಂಗಮವ ನೋಡುತ್ತ ನೋಡುತ್ತ ನಿಬ್ಬೆರೆಗಾದರು ನೋಡಾ. ಆರನು ಮೀರಿ, ಮೂರನು ಮೆಟ್ಟಿ, ತಟ್ಟುಮುಟ್ಟುಗಳೆಂಬ ಭ್ರಮೆಗಳನೊಲ್ಲದೆ ಐವತ್ತೆರಡರೊಳಗಾಗಿ ಅರಿಯಲಾರದೆ ಮೀರಿಹೋದರು ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು. ದಿವದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ ಅದ್ವೈತ ಅಸತ್ಯ ನೋಡಾ. ಇದು ಕಾರಣ, ಕ್ರಿಯೆ ಮರೆಯಲಿಲ್ಲ, ಅರಿವು ಶೂನ್ಯವೆಂದು ಬಿಡಲಿಲ್ಲ. ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ. ಅವರ ಒಲವರದಲ್ಲಿ ಕುಲವ ಕಾಣಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.
--------------
ಆನಂದಯ್ಯ
ಮುಂದರಿದು ಕಂಡೆಹೆನೆಂಬಾಗ, ತನು ಶಿಲೆಯ ನೆಲೆಮನೆಯೆ? ನಡೆದು ಕಂಡೆಹೆನೆಂಬಾಗ, ವಸ್ತು ಹೊಲದ ಹಾದಿಯೆ? ಇಂತೀ ಉಭಯವನರಿದು ಕಾಬುದ ಕಂಡು, ಕೇಳುವಲ್ಲಿ ಕೇಳಿ, ಉಂಡಲ್ಲಿ ಉಂಡು, ಭಾವಿಸಿದಲ್ಲಿ ಭಾವಿಸಿ, ಹೊಳೆಯ ದಾಟಿದ ಮತ್ತೆ ಹರುಗೋಲೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ತೊಟ್ಟುಬಿಡುವ ವೇಳೆಯನರಿದ ಮತ್ತೆ ದೋಟಿಯನಿಕ್ಕಲೇತಕ್ಕೆ? ತನ್ನ ಕೃತ್ಯದ ಭಕ್ತಿಯ ಮಾಡುತ್ತಿದ್ದ ಮತ್ತೆ ಒಂದು ದಿನ ತಪ್ಪಲಿಕ್ಕಾಗಿ ಕುಪ್ಪಳಿಸಿ ಬೇಯಲೇತಕ್ಕೆ? ಇದು ಗುರುಸ್ಥಲಕೆ ನಿಶ್ಚಯವಲ್ಲ; ಇದು ಶಿಲೆಯ ಮಾರಿಯ ಹದಹು; ವ್ಯಾಧನ ವೇಷ, ಮೂಷಕನ ವಾಸದ ತಪ್ಪಿನ ಪಥ ಆತ ಸದ್ಗುರುಜಾತನಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು.
--------------
ತುರುಗಾಹಿ ರಾಮಣ್ಣ
ಲಿಂಗಸ್ವರೂಪಕ್ಕೆ ಪಂಚಸೂತ್ರ ಲಕ್ಷಣವನರಿತು ವರ್ತುಳ ಖಂಡಿಕಾದಂಡ ಗೋಮುಖ ಗೋಳಕಾಕಾರವಪ್ಪ ಲಿಂಗಮೂರ್ತಿಯಿಂದ ಶಶಿ ರವಿ ಪವನ ಪಾವಕ ಆತ್ಮ ಮುಂತಾದ ಭೇದಂಗಳನರಿದು ಪಂಚಸೂತ್ರದಿಂದ ಪ್ರಯೋಗಿಸಿ, ಅಚೇತನವಪ್ಪ ಶಿಲೆಯ ಕುಲವಂ ಹರಿದು, ತಾ ಶುಚಿರ್ಭೂತನಾಗಿ ಆ ಇಷ್ಟಲಿಂಗವ ತನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿ ತನು ಕರಗಿ ಮನ ರೆುsುೂಂಪಿಸಿ ಪುಳಕಿತದಿಂದ ಆನಂದಾಶ್ರು ಉಣ್ಮಿ ನಿಧಾನಿಸಿ ನಿಕ್ಷೇಪವ ಕಾಬವನಂತೆ ಬಯಲ ಬಂದಿವಿಡಿವವನಂತೆ ಶಿಲೆಯಲ್ಲಿ ರಸವ ಹಿಳವವನಂತೆ ರತ್ನದ ಕಳೆಯ ಗಂಟನಿಕ್ಕಿ ಕಟ್ಟಿ ತಾಹವನಂತೆ ಮುತ್ತಿನೊಳಗಡಗಿದ ಅಪ್ಪುವಿನ ವಿರಾಳದಿಂದ ಶೋದ್ಥಿಸಿ ಮುಚ್ಚಿತಾಹವನಂತೆ ಜ್ಯೋತಿಗೆ ಪ್ರತಿಹಣತೆಯಿಂದ ಆ ಬೆಳಗ ಮುಟ್ಟಿಸಿ ಕಾಹವನಂತೆ, ಇಂತೀ ನಿರವಯದ ಸುವಸ್ತುವಿನ ಪ್ರಯೋಗದಿಂದ ದಿವ್ಯಪ್ರಕಾಶನ ತನ್ನ ಕರತಳಾಮಳಕದಂತೆ ಮೂರ್ತಿಗೊಂಡಿದ್ದ ಶಿವಲಿಂಗಮೂರ್ತಿಗೆ ಧ್ಯಾನದ ಕೈಯಿಂದ ಆ ಸ್ವರೂಪಕ್ಕೆ ಮೂರ್ತಿಗೊಳಿಸಿ ಷೋಡಶಕಳೆಯಿಂದ ಉಪಚರಿಸಿ ನವಕಳಶ ಪ್ರಯತ್ನ ಪ್ರಯೋಗವ ಮಾಡಿ ಚತುರ್ವಿಧ ಆಚಾರ್ಯರ ಕೂಡಿ ಅಷ್ಟದೆಸೆಗಳಲ್ಲಿ ಕರ್ತೃಕಳಶ ನಾಲ್ಕು, ಭೃತ್ಯಕಳಶ ನಾಲ್ಕು, ಶ್ರೀಗುರುಕಳಶ ಮಧ್ಯದಲ್ಲಿ ನಾಲ್ಕು ವರ್ಣಕ್ರೀ ಮುಂತಾದ ಪ್ರಾಣಲಿಂಗವೆಂದು ಉಪೇಕ್ಷಿಸಿ ಧಾರಣವ ಮಾಡುವಲ್ಲಿ ಗುರು ನಾನೆಂಬುದ ಮರೆದು ಅಹಂಕಾರವ ತೊರೆದು ಆತ್ಮತೇಜವ ಹರಿದು ಮುಂದಣ ತ್ರಿವಿಧ ಸೇವೆಯ ತೋರಿ ಮಂತ್ರಾಬ್ಥಿಷೇಕ ತೀರ್ಥಮಂ ತಳೆದು ಶ್ರೀವಿಭೂತಿಯಲ್ಲಿ ಸರ್ವಾಂಗ ಧೂಳಿತವಂ ಮಾಡಿ ತ್ರಿಕರಣ ಶುದ್ಧವಂ ಮಾಡಿ ಕಪಾಲಕ್ಕೆ ಕರವನಿಟ್ಟಲ್ಲಿ ಪರುಷರಸ ಪಾಷಾಣ ಲೋಹದ ಮೇಲೆ ಬಿದ್ದಂತೆ ನಂಜೇರಿದಂಗೆ ಸಂಜೀವನ ಸಂದ್ಥಿಸಿದಂತೆ ಇಂತೀ ಕಪಾಲಕ್ಕೆ ಕರವನಿಟ್ಟು ಕರ್ಣಕ್ಕೆ ಮಂತ್ರವ ಹೇಳಿದಲ್ಲಿ ಹುಸಿ ಕೊಲೆ ಕುಹಕ ಪಾರದ್ವಾರ ಚೋರತ್ವ ಪಿಸುಣತನವಂಬಿಟ್ಟು ಅರುವತ್ತುನಾಲ್ಕು ಶೀಲ, ಐವತ್ತೆರಡು ನೇಮ, ಮೂವತ್ತರೊಳಗಾದ ನಿತ್ಯಕೃತ್ಯ, ಆರುಸ್ಥಲದೊಳಗಾದ ಆಚಾರ, ಇಪ್ಪತ್ತೈದರೊಳಗಾದ ತತ್ತ್ವ ಇಂತಿವರೊಳಗಾದವರಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ನಿಶ್ಚೆ ೈಸಿ ನಡೆಯೆಂದು ಲಿಂಗಧಾರಣವ ಮಾಡುವದಿದು ಗುರುದೀಕ್ಷಾ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 82 ||
--------------
ದಾಸೋಹದ ಸಂಗಣ್ಣ
ಸ್ಥೂಲ ತನುವಿಂಗೆ ಶಿಲೆಯ ಮರೆಯಲ್ಲಿ ಎನ್ನ ಘಟದಲ್ಲಿ ಮೂರ್ತಿಗೊಂಡು ಬಾಹ್ಯಕ್ರೀ ಆರ್ಚನೆ ಪೂಜನೆಗಳಿಂದ ಶುದ್ಧತೆಯ ಮಾಡಿದೆ. ಸೂಕ್ಷ ್ಮ ತನುವಿಂಗೆ ಭಾವದ ಕೊನೆಯಲ್ಲಿ ಅರಿವಾಗಿ ಬಂದು ಪ್ರಕೃತಿ ಸಂಚಾರ ಮರವೆಯಿಂದ ಬಹ ತೆರನ ತೀರ್ಚಿ ಸರ್ವೇಂದ್ರಿಯಲ್ಲಿ ನೀ ನಿಂದು ಆ ಸೂಕ್ಷ ್ಮತನುವ ಶುದ್ಧವ ಮಾಡಿದೆ. ಕಾರಣತನುವಿಂಗೆ ಇಂದ್ರ ಮಹೇಂದ್ರ ಜಾಲದಂತೆ, ಮುರೀಚಿಕಾ ಜಲವಳಿಯತೆ, ವಿದ್ಯುಲ್ಲತೆಯ ಸಂಚದ ಶಂಕೆಯ ಬೆಳಗಿನಂತೆ ಸಷುಪ್ತಿಯಲ್ಲಿ ಮರವೆಯಿಂದ ಮಗ್ನನಾಗಲೀಸದೆ ಆ ಚಿತ್ತುವಿಗೆ ನೀ ಚಿತ್ತವಾಗಿ ಮೂರ್ಛೆಗೊಳಿಸದೆ ನೀನೆ ಮೂರ್ತಿಗೊಂಡೆಯಲ್ಲಾ! ಇಂತೀ ತ್ರಿವಿಧ ಸ್ವರೂಪಕ್ಕೆ ತ್ರಿವಿಧಾಂಗ ಭರಿತನಾಗಿ ತ್ರಿವಿದ ಸ್ವರೂಪ ನೀನಲಾ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 98 ||
--------------
ದಾಸೋಹದ ಸಂಗಣ್ಣ
ಇನ್ನಷ್ಟು ... -->