ಅಥವಾ

ಒಟ್ಟು 87 ಕಡೆಗಳಲ್ಲಿ , 30 ವಚನಕಾರರು , 76 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಚ್ಚಿದಾನಂದ ಸದ್‍ಗುರು ತೋರಿದರೆ ಕಂಡೆನಯ್ಯಾ ಸತ್ಯಸದಾಚಾರವ. ಸಚ್ಚಿದಾನಂದ ಸದ್‍ಗುರು ತೋರಿದರೆ ಕಂಡೆನಯ್ಯಾ ಭಕ್ತಿ ಜಾÕನ ವೈರಾಗ್ಯವ. ಸಚ್ಚಿದಾನಂದ ಸದ್‍ಗುರು ತೋರಿದರೆ ಕಂಡೆನಯ್ಯ ನಿತ್ಯಲಿಂಗಾಂಗಸಂಗಸಮರಸವ. ಸಚ್ಚಿದಾನಂದ ಸದ್‍ಗುರು ತೋರಿಸಿದರೆ ಕಂಡೆನಯ್ಯಾ ಅಖಂಡೇಶ್ವರಾ ನಿಮ್ಮ ಶ್ರೀಚರಣಕಮಲವ.
--------------
ಷಣ್ಮುಖಸ್ವಾಮಿ
ಇಷ್ಟಲಿಂಗದ ಕೂಟ, ಪ್ರಾಣಲಿಂಗದ ಸಂಗ, ಭಾವಲಿಂಗದ ಸಮರಸವ ಬಲ್ಲವರಾರೊ ಅವರನೆನ್ನ ಸದ್ಗುರು ಅನುಮಿಷೇಶ್ವರನೆಂಬೆ. ಆ ನಿಜಶಿವಯೋಗವ ಮರೆಯದವರಿಗೆ ಅಣಿಮಾದಿ ಅಷ್ಟೈಶ್ವರ್ಯದೊಡನೆ ಕೂಡಿದ ಸಕಲ ಲಕ್ಷಣ ಸಂಪನ್ನರು ಸರಿಯಲ್ಲ. 66 ಸಿದ್ಧಿಗಳೊಡನೆ ಕೂಡಿದ ಸಿದ್ಧ ಪುರುಷರೂ ಸರಿಯಲ್ಲ. ಲಾವಣ್ಯದೊಡನೆ ಕೂಡಿದ ಜಯಂತ ಮನ್ಮಥ ವಸಂತರೂ ಸರಿಯಲ್ಲ. ಕಲ್ಪವೃಕ್ಷ ಕಾಮಧೇನು ಚಿಂತಾಮಣಿ ಭದ್ರಪೀಠ ಮೊದಲಾದ ಮಹದೈಶ್ವರ್ಯವುಳ್ಳ ದೇವೇಂದ್ರನೂ ಸರಿಯಲ್ಲ. ದೇವೇಂದ್ರನ ಮೇಲೆ ಕೋಟ್ಯನುಕೋಟಿ ಮೊದಲಾದ ಹರಿ ವಿರಿಂಚ್ಯಾದಿಗಳ ಸಂಪದವೂ ಸರಿಯಲ್ಲ. ಶ್ರುತಿ ವಿದ್ಯದೊಡನೆ ಕೂಡಿದ ವ್ಯಾಸ ದಕ್ಷಾದಿಗಳೂ ಸರಿಯಲ್ಲ. ಸಪ್ತಕೋಟಿ ಮಹಾಮಂತ್ರಂಗಳ ಬಲ್ಲಂತಹ ಮಹಾಮುನಿಗಳೂ ಸರಿಯಲ್ಲ. ಮಹಾರಾಜಯೋಗದೊಡನೆ ಕೂಡಿದ ಮನುಮಾಂಧಾತರೂ ಸರಿಯಲ್ಲ. ಮಹಾಲಿಂಗದೊಡನೆ ಕೂಡಿದ ಶಾಂಭವಯೋಗಕ್ಕೆ ಆವಾವ ಪದವೂ ಸರಿಯಲ್ಲ. ಈ ಶಾಂಭವಯೋಗವಾರಲ್ಲಿ ಸ್ಥಾವರವಾಗಿದ್ದಿತ್ತು, ಅವರಲ್ಲಿ ಸರ್ವಲಕ್ಷಣಂಗಳು, ಸರ್ವ ವಿಚಿತ್ರಂಗಳು, ಸರ್ವ ಸುಖಂಗಳು ಸರ್ವ ಭಕ್ಷ್ಯಂಗಳು, ಸರ್ವೈಶ್ವರ್ಯಂಗಳು ಸರ್ವ ಪದಂಗಳು ಸರ್ವ ಸಿದ್ಧಿಗಳು ಸರ್ವ ಕ್ರಮಂಗಳು ಸರ್ವ ಕರ್ತೃತ್ವಮುಂಟು. ಪ್ರಕೃತಿಯೋಗವಂ ಮಾಡುವ ನರಸುರಾಸುರರು ಮೂಲಪ್ರಕೃತಿಯೋಗವ ಮಾಡುವ ಮನು ಮಾಂಧಾತರು ತೃಣ ಮಾತ್ರವು. ನಿತ್ಯನಿಜಶಿವಸ್ವರೂಪವಾದ ಶಾಂಭವ ಯೋಗಿಗಳಿಗೆ ಸರ್ವಯೋಗಂಗಳು ತೃಣಮಾತ್ರವು_ಗುಹೇಶ್ವರಲಿಂಗವನರಿದರಾಗಿ.
--------------
ಅಲ್ಲಮಪ್ರಭುದೇವರು
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಲಿಂಗ ಸಂಯೋಗವಾದಲ್ಲಿ ಶಿವಲಿಂಗದುದಯ. ಶಿವಲಿಂಗ ಸಂಯೋಗವಾದಲ್ಲಿ ಜಂಗಮಲಿಂಗದುದಯ. ಜಂಗಮಲಿಂಗ ಸಂಯೋಗವಾದಲ್ಲಿ ಪ್ರಸಾದದುದಯ. [ಪ್ರಸಾದ ಸಂಯೋಗವಾದಲ್ಲಿ ಪ್ರಾಣದುದಯ] ಪ್ರಾಣಸಂಯೋಗವಾದಲ್ಲಿ ಜ್ಞಾನದುದಯ. ಜ್ಞಾನಾನುಭಾವ ಸಂಯೋಗವಾದಲ್ಲಿ ಸುಜ್ಞಾನದುದಯ. ಇಂತೀ ಗುರುವಿನ ಘನವ, ಲಿಂಗದ ನಿಜವ, ಜಂಗಮದ ಮಹಿಮೆಯ, ಪ್ರಸಾದದ ರುಚಿಯ, ಪ್ರಾಣನ ನೆಲೆಯ, ಸುಜ್ಞಾನದ ನಿಲವ, ಮಹಾನುಭಾವದ ಸುಖವನರಿದು ಮರೆದಲ್ಲಿ, ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಲ್ಲಿ ಜ್ಞಾನಭರಿತವಾದಂದು ಸುಜ್ಞಾನ.
--------------
ಅಮುಗಿದೇವಯ್ಯ
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಪರತತ್ವ ಪರಬ್ರಹ್ಮ ಪರಶಿವನಪ್ಪ ಮಂತ್ರಮೂರ್ತಿ ಸದ್ಗುರು ಕಣ್ಣಮುಂದಿರಲು ಸದಾ ಗುರುಸೇವೆಯಳವಟ್ಟು ಗುರು ಶುಶ್ರೂಷೆಯ ಮಾಡುವ ಶಿಷ್ಯಂಗೆ ಆ ಸದ್ಗುರು ಸೇವೆಯೇ ಚತುರ್ವಿಧ ಫಲ. ಗುರುಸೇವೆಯೇ ಅಷ್ಟಮಹದೈಶ್ವರ್ಯ, ಗುರುಸೇವೆಯೇ ಅಷ್ಟಭೋಗಂಗಳ ಅನು. ಇದು ಕಾರಣ ಸದ್ಗುರುಸೇವೆಯೇ ಸದ್ಯೋನ್ಮುಕ್ತಿ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಂಗ ಅನಂಗವೆಂಬೆರಡರ ಸಂದಳಿದ ಮಹಂತನ ಅಂಗ ಸೋಂಕಿತ್ತೆಲ್ಲಾ ಪವಿತ್ರ ಕಾಣಿರೆ. ಪವಿತ್ರವಿರ್ದಲ್ಲಿ ಪದಾರ್ಥವಿಹುದು, ಪದಾರ್ಥವಿರ್ದಲ್ಲಿ ಮನವಿಹುದು. ಮನವಿರ್ದಲ್ಲಿ ಹಸ್ತವಿಹುದು, ಹಸ್ತವಿರ್ದಲ್ಲಿ ಜಿಹ್ವೆಯಿಹುದು ಜಿಹ್ವೆಯಿರ್ದಲ್ಲಿ ರುಚಿಯಿಹುದು, ರುಚಿಯಿರ್ದಲ್ಲಿ ಅವಧಾನವಿಹುದು. ಅವಧಾನವಿರ್ದಲ್ಲಿ ಭಾವವಿಹುದು, ಭಾವವಿರ್ದಲ್ಲಿ ಲಿಂಗವಿಹುದು. ಲಿಂಗವಿರ್ದಲ್ಲಿ ಅರ್ಪಿತವಿಹುದು, ಅರ್ಪಿತವಿರ್ದಲ್ಲಿ ಪ್ರಸಾದವಿಹುದು. ಪ್ರಸಾದವಿರ್ದಲ್ಲಿ ಪರಿಣಾಮವಿಹುದು. ಇದು ಕಾರಣ ಮಹಾಘನ ಸದ್ಗುರು ಸಿದ್ಧಸೋಮನಾಥಾ, ನಿಮ್ಮ ಶರಣರು ಪ್ರಾಣಲಿಂಗಪ್ರವೇಶಿಗಳಾಗಿ ಪರಿಣಾಮಪ್ರಸಾದಿಗಳಯ್ಯಾ.
--------------
ಅಮುಗಿದೇವಯ್ಯ
ಧರಿಸಿರೊ ಶ್ರೀ ರುದ್ರಾಕ್ಷಿಯ ಬಾಹು ಉರ ಕಂಠ ಕರ್ಣ ಮಸ್ತಕದಲ್ಲಿ ಒಲಿದು. ಪದ : ಹರನಕ್ಷಿ ಜಲದಲ್ಲುದಯವಾಗಿ ಮುನಿ ವರ ವಿಶ್ವಾಮಿತ್ರ ಗೌತಮ ವಶಿಷ್ಠರ ನೆರೆ ಮುಕ್ತರ ಮಾಡಿ ಕೈಲಾಸಪದದೊಳ ಗಿರಿಸುವ ಭಸಿತ ರುದ್ರಾಕ್ಷಿಯನೊಲಿದು. | 1 | ನೆತ್ತಿಯೊಳಗೆ ತ್ರಯ ಶಿಖಿಗೇಕ ಮೇಣ್ ಚಿತ್ತಸಮಸ್ತಕೆ ಧಾರಣಗಳು ಅದ ರೊತ್ತಿಲಿ ಕರ್ಣಕುಂಡಲಕೆ ಏಕೈ ಕೆಂದು ವಿಸ್ತರಿಸಿ ರುದ್ರಾಕ್ಷಿಯನೊಲಿದು. | 2 | ಕೊರಳೊಳು ಬತ್ತೀಸ ಉರದೊಳು ಮಹಾ ಸರ ಅಷ್ಟಶತಮಾಲೆಯನುವೆ ನೀವು ಕರಕಂಕಣಕೆ ದಶಬಾಹುಪೂರಕೆ ನೆರೆ ಷೋಡಶ ರುದ್ರಕ್ಷಿಯನೊಲಿದು. | 3 | ಕರದಂಘ್ರಿಮಾಲೆಗೆ ದಶವೇಕ ಮಹಾಜಪ ಸರ [ಕೂಡಿಕೊಂಡು ಲೇಸೆಂದು] ಮೇಣ್ ವಿರಚಿಸಿ ಶಿವಪೂಜೆಯನು ಮಾಡೆ ಕರ್ಮ ಗಿರಿಗೊಜ್ರವೆನಿಪ ರುದ್ರಾಕ್ಷಿಯನೊಲಿದು. | 4 | ಇನಿತು ತೆರದ ರುದ್ರಾಕ್ಷಿಯ ಮಹಾ ಘನವೆಂಬಲ್ಲಿ ಮುಕ್ತಿಯ ಸಾರ ತ್ರಿಣಯ ಸದ್ಗುರು ಪಡುವಿಡಿ ಸಿದ್ಧಮಲ್ಲನಾ ನೆನವ ತೋರುವ ತತ್ವಚಿಂತಾಮಣಿಯನೊಲಿದು. | 5 |
--------------
ಹೇಮಗಲ್ಲ ಹಂಪ
ತನು ಕಿಂಕರನಾಗದೆ, ಮನಕಿಂಕರನಾಗದೆ, ಇಂದ್ರಿಯ ಕಿಂಕರನಾಗದೆ, ಆತ್ಮ ಕಿಂಕರನಾಗದೆ, ಶ್ರುತಿ ಕಿಂಕರನಾಗದೆ ಇವೆಲ್ಲವ ನೆರೆ ತೊರೆದು ಏನು ಎನ್ನದೆ ಮರ್ಯಾದೆ ತಪ್ಪದೆ ಸದ್ಗುರು ಕಿಂಕರನಾಗಿ ಭವಗೆಟ್ಟು ಹೋದವರನೇನೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ, ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ, ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ, ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ, ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ, ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ, ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ, ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ, ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ ಬಹಿರಂಗದ ಸೂತಕ ಹೋಯಿತ್ತಯ್ಯಾ, ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ, ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ, ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ, ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಅಮುಗಿದೇವಯ್ಯ
ಬಹಿರಂಗದಲ್ಲಿ ದುರಾಚಾರ ಅಂತರಂಗದಲ್ಲಿ ದುಃಸಂಕಲ್ಪ ಉಭಯಗೂಡಿದ ವರ್ತಕದಲ್ಲಿ ಷಡ್ಗುಣ ಸಾರಸಂಬಂಧ ದುರ್ಭಾವತ್ರಯಗೂಡಿ ಜೀವಿಸುವ ಪ್ರಾಣಿಯು ಕಂಡಾಡುವ ಕಟ್ಟಳೆಯ ಸೋಗುಹೊತ್ತು ನಡೆದರೇನು, ಅದನು ನುಡಿದರೇನು? ಆ ನಡೆನುಡಿಯ ವಾಸನೆಯನರಿಯದಿರ್ಪ ಸಜದ್ಭಕ್ತಿಚರಿತೆಯ ಸುಖದೊಳಗೆ ಸದ್ಗುರು ಚನ್ನವೃಷಭೇಂದ್ರಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿವನ ನೆನೆದಡೆ ಭವ ಹಿಂಗೂದೆಂಬ ವಿವರಗೇಡಿಗಳ ಮಾತ ಕೇಳಲಾಗದು. ಹೇಳದಿರಯ್ಯಾ, ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ? ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ? ರಂಭೆಯ ನೆನೆದಡೆ ಕಾಮದ ಕಳವಳವಡಗುವುದೆ ಅಯ್ಯಾ? ನೆನೆದರಾಗದು, ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ, ಸದ್ಗುರು ಸಿದ್ಧಸೋಮನಾಥಲಿಂಗನ ನೆನೆಯಬಾರದು.
--------------
ಅಮುಗಿದೇವಯ್ಯ
ನಿಮ್ಮ ಶರಣನು ಲಿಂಗಭರಿತನು, ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು; ಜ್ಞಾತೈ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು, ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು. ಈ ಪರಿ ನೋಡ ನೋಡಲು ಮತ್ತೆ ಚೋದ್ಯ ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು. ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು. ಸರ್ವಾಂಗಲಿಂಗವಾಗಿ ಸಲಹಿದನು. ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ? ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ, ಕೂಟದ ಪರಿ ನಿರ್ವಂಚಕತ್ವ, ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಯ್ಯ, ನಿವೃತ್ತಿಮಾರ್ಗದಲ್ಲಿ ಚರಿಸುವ ಊಧ್ವಕುಂಡಲಿ ಭೇದವೆಂತೆಂದಡೆ : ಕಿಂಕುರ್ವಾಣಭಕ್ತಿಯೆ ಅಂಗವಾಗಿರ್ಪುದಯ್ಯ. ಸದ್ಗುಣವೆ ಪ್ರಾಣವಾಗಿರ್ಪುದಯ್ಯ. ಸದ್ಧರ್ಮವೆ ಸಂಗವಾಗಿರ್ಪುದಯ್ಯ. ಸಚ್ಚಿದಾನಂದವೆ ವಸ್ತ್ರಾಭರಣವಾಗಿರ್ಪುದಯ್ಯ. ಸನ್ಮಾರ್ಗಾಚಾರಂಗಳೆ ನಡೆನುಡಿಯಾಗಿರ್ಪುದಯ್ಯ. ಸುಸತ್ಯವೆ ವಾಹನವಾಗಿರ್ಪುದಯ್ಯ. ದಯಾಂತಃಕರಣವೆ ಪಿತಮಾತೆಯಾಗಿರ್ಪುದಯ್ಯ. ಸುಚಿತ್ತಂಗಳೆ ಬಂಧುಬಳಗವಾಗಿರ್ಪುದಯ್ಯ. ಸುಬುದ್ಧಿಗಳೆ ಒಡಹುಟ್ಟಿದರಾಗಿರ್ಪುದಯ್ಯ. ನಿರಹಂಕಾರಂಗಳೆ ನಂಟರಾಗಿರ್ಪುದಯ್ಯ. ಸುಮನವೆ ಸ್ತ್ರೀಯಳಾಗಿರ್ಪುದಯ್ಯ. ಸುಜ್ಞಾನವೇ ಮಂದಿರವಾಗಿರ್ಪುದಯ್ಯ. ಸದ್ಭಾವವೆ ಆಹಾರವಾಗಿರ್ಪುದಯ್ಯ. ನಿತ್ಯನಿಜವೇ ದೈವವಾಗಿರ್ಪುದಯ್ಯ. ನಿರಾಸೆಯೆ ಅವಯವಂಗಳಾಗಿರ್ಪುದಯ್ಯ. ನಿಷ್ಕಾಮಂಗಳೆ ಧನಧಾನ್ಯಂಗಳಾಗಿರ್ಪುದಯ್ಯ. ಇಂತು ನಿಸ್ಸಂಸಾರವೆಂಬ ಅವಿರಳಾನದಿಂದ ಸದ್ಗುರು ಉಪಾವಸ್ತೆಯ ಮಾಡುವ ಸಜ್ಜೀವನೆ ಊಧ್ರ್ವಕುಂಡಲಿಸರ್ಪವೆನಿಸುವುದಯ್ಯ. ಆ ಸರ್ಪನೆ ಮಾಯಾಪ್ರಪಂಚ ಹೇವರಿಸಿ ಅನಂತಮುಖದಿಂದ ನಿರ್ಮಾಯಸ್ವರೂಪವಾದ ಮಹಾಪ್ರಮಥಗಣಂಗಳತ್ತ ಅಬ್ಥಿಮುಖವಾಗಿರ್ಪುದಯ್ಯ. ಈ ಸರ್ಪಂಗೆ ಬೇಕುಬೇಡವೆಂಬ ಜೀಹ್ವಾಲಂಪಟ-ಗುಹ್ಯಲಂಪಟವಿಲ್ಲ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹೀಂಗೆ ಪೂರ್ವಪುರಾತನರು ಸದ್ಗುರು ವಚನೋಕ್ತಿಯಿಂದ ತಿಳಿದು ರೇವಣಸಿದ್ಭೇಶ್ವರ, ಮರುಳಸಿದ್ಧೇಶ್ವರ, ತೋಂಟದಸಿದ್ಧೇಶ್ವರ ನೂರೊಂದು ವಿರಕ್ತರು ಮೊದಲಾದ ಮತ್ರ್ಯಲೋಕದ ಮಹಾಗಣಂಗಳೆಲ್ಲ ಸರ್ವಾಚಾರ ಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯ ಸದ್ಗುರುಮುಖದಿಂದ ಬೆಸಗೊಂಡು ನಿಜಪ್ರಸಾದವೆಂದು ಸದ್ಭಾವದಿಂದ ಭಾವಿಸಿ ನಡೆದಂತೆ ನುಡಿದು, ನುಡಿದಂತೆ ನಡೆದು, ಹರುಕಿಲ್ಲದೆ ಹರಿ ಅಜ ಸುರ ಮನು ಮುನಿ ದೇವ ದಾನವ ಮಾನವರೆಲ್ಲ ಮುಳುಗಿಹೋದ ಹೊನ್ನು-ಹೆಣ್ಣು-ಮಣ್ಣು-ಅನ್ನ-ನೀರು-ವಸ್ತ್ರ-ಆಭರಣ-ವಾಹನವೆಂಬ ಮಾಯಾಪಾಶ ಕಡವರವ ದಾಂಟಿದರು ನೋಡ. ಮಾಯಾಭೋಗವಿರಹಿತರಾಗಿ ಲಿಂಗಭೋಗಸಂಪನ್ನರಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇನ್ನಷ್ಟು ... -->