ಅಥವಾ

ಒಟ್ಟು 100 ಕಡೆಗಳಲ್ಲಿ , 38 ವಚನಕಾರರು , 95 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಬ್ಬರು ನಡೆದಾಚರಣೆಯಲ್ಲಿ ನಡೆಯರು. ಒಬ್ಬರು ಹಿಡಿದ ಶೀಲವ ಹಿಡಿಯರು. ಒಬ್ಬರು ನುಡಿದ ಭಾಷೆಯ ನುಡಿಯರು. ಅದೇನು ಕಾರಣವೆಂದೊಡೆ : ತಮ್ಮ ಲಿಂಗಮಚ್ಚಿ ನಡೆವರು. ತಮ್ಮ ಲಿಂಗಮಚ್ಚಿ ಹಿಡಿವರು. ತಮ್ಮ ಲಿಂಗಮಚ್ಚಿ ನುಡಿವರು. ಇದು ಕಾರಣ. ಅಖಂಡೇಶ್ವರಾ, ನಿಮ್ಮ ಶರಣರು ಪರಮ ಸ್ವತಂತ್ರಶೀಲರು.
--------------
ಷಣ್ಮುಖಸ್ವಾಮಿ
ಕೈದು ಮೊನೆ ಏರುವದಕ್ಕೆ ಮೊದಲೇ ಕಟ್ಟಬಲ್ಲಡೆ ಕೈದೇನ ಮಾಡುವುದು ? ಹಾವು ಬಾಯಿ ಬಿಡುವುದಕ್ಕೆ ಮೊದಲೇ ಹಿಡಿದ ಮತ್ತೆ ವಿಷವೇನ ಮಾಡುವುದು ? ಮನ ವಿಕಾರಿಸುವುದಕ್ಕೆ ಮೊದಲೇ ಮಹದಲ್ಲಿ ನಿಂದ ಮತ್ತೆ ಇಂದ್ರಿಯಂಗಳೇನ ಮಾಡಲಾಪವು, ಜಾಂಬೇಶ್ವರಾ ?
--------------
ರಾಯಸದ ಮಂಚಣ್ಣ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಹಣ್ಣ ಹಿಡಿದ ಬಾಲಕಂಗೆ ಬೆಲ್ಲವ ಕೊಟ್ಟೇನು ಹಣ್ಣ ತಾ ಎಂಬಂತೆ, ಮಣ್ಣು ಮೂರನು ಹಿಡಿದ ಭಕ್ತಂಗೆ ಮುಕ್ಕಣ್ಣನ ಪದವಿ ಕೊಟ್ಟೇವೆಂಬ ತೆರನಂತೆ, ಗುರು-ಲಿಂಗ-ಜಂಗಮರು ಬೇಡುವರಲ್ಲದೆ, ತಮ್ಮಿಚ್ಛೆಗೆ ಕೈಯಾನುವರೆ ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ದೂರ್ವೆಯದಳನ ಮೇಯಬಂದ ಮೊಲನ ಉರ್ವಿಯ ಕರಡಿ ತೊಡರಿಗೊಂಡಿಪ್ಪುದಯ್ಯ. ಕರಡಿಯ ಹಿಡಿದ ಬೇಡನ ಕಯ್ಯ ಕಾಡು ನಾಯಿಗಳು ನಾಡನೆಲ್ಲವ ಹರಿದು ತಿನುತಿಪ್ಪವು; ಇವರ ಗಾಢವನೇನೆಂಬೆನಯ್ಯ. ಇವರ ಗಾಢ ಗಮಕವ ಮುರಿದಾತನಲ್ಲದೆ ಲಿಂಗೈಕ್ಯನಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಾವ ಹಿಡಿದ ಚೇಳು ತಾನೆದ್ದೂರಲು ಮೂಜಗವೆಲ್ಲವು ಬೇನೆಹತ್ತಿ ಬೇವುತ್ತಿದೆ ನೋಡಾ. ಚೇಳಿನ ಮುಳ್ಳ ಮುರಿಯಲು ಬೇನೆ ಮಾಬುದು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ. ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ. ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ. ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ, ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು. ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಸದ್ವಾಸನ ಧರ್ಮಚರಿತೆಯ ವರ್ಮವನುಳಿದು ದುಷ್ಕರ್ಮಬಾಧೆಯ ಉರಿಯೊಳು ತೊಳಲುವ ಭಾವ ಭಕ್ತಿತ್ರಯದ ಯುಕ್ತಿಯನರಿವುದು ಚೋದ್ಯ ಕಾಣಾ. ಹಿಡಿದ ಕುರುಹು ಹೊತ್ತ ಹೊರೆ ನಡೆವ ಬಟ್ಟೆ ಮಿಥ್ಯ ಮಾಯಾ ಬದ್ಧ ನೋಡಾ. ಇಂತಿರ್ದ ಅರುವಿಗೆ ಕುರುಹುಗಾಣಿಸದಿರ್ದನು ನಮ್ಮ ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ಶರಣ ಭಕ್ತಸಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ, ಕೋಡಗ ಸತ್ತ ಜೋಗಿಯಂತಾದರು. ಆಗಮ ಹೇಳುವ ಅಣ್ಣಗಳೆಲ್ಲರೂ ಕೊಡುವರಿಲ್ಲದಿರೆ, ಹಾವ ಹಿಡಿದ ಕೋಡಗದಂತಾದರು. ನಾನಿನ್ನಾರ ಕೇಳುವೆ, ಇನ್ನಾರಿಗೆ ಹೇಳುವೆ. ನಾನಂಜುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಕನ್ನವನ್ನಿಕ್ಕಿ ಚಿನ್ನವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಹಾದರವಮಾಡಿ ಹಾಗವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಗಾಣವ ಹಾಕಿ ಮೀನ ಹಿಡಿದು ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಇಂತಿವರೆಲ್ಲರು ಶಿವಯುಕ್ತವಾದ ಅನಾಚಾರ ಹಿಡಿದು ಬಿಡದೆ ಸದಾಚಾರಕ್ಕೊಳಗಾಗಿ ಮುಕ್ತಿವಡೆದರು. ಮೋಕ್ಷಾಪೇಕ್ಷಿತರಾಗಿ ಪಂಚಾಚಾರಕ್ಕೊಪ್ಪುವ ವ್ರತನೇಮಗಳ ಹಿಡಿದು ಬಿಟ್ಟವಂಗೆ ಮುಂದು ಹಿಂದಾಯಿತು, ಆತ ವ್ರತಗೇಡಿ. ಅದು ಹೇಗೆಂದೊಡೆ ಹಿಡಿದ ನೈಷ್ಠೆಯ ಬಿಟ್ಟಲ್ಲಿಯೇ ಕರ್ಮತ್ರಯಂಗಳು ಬೆನ್ನ ಬಿಡವೆಂದು ಶರಣರ ವಚನಂಗಳು ಸಾರುತ್ತಿವೆ. || ಗ್ರಂಥ || `ಸ್ಥಾವರಂ ಬ್ಥಿನ್ನದೋಷೇಣ ವ್ರತಭ್ರಷ್ಟೇನ ಜಂಗಮಂ| ಉಭಯೋಬ್ರ್ಥಿನ್ನಭಾವೇನ ನಾರ್ಚನಂ ನ ಚ ವಂದನಂ||' ಇಂತೆಂದುದಾಗಿ ಹಿಡಿದು ಬಿಡುವಲ್ಲಿ ಕಮ್ಮಾರನ ಕೈಯ್ಯ ಇಕ್ಕುಳವೇ ಶರಣ? ಹಿಡಿದು ಬಿಡುವಲ್ಲಿ ಚಂದ್ರಸೂರ್ಯರುಗಳ ಗ್ರಹಣವೇ ಶರಣ? ಹಿಡಿದು ಬಿಡುವಲ್ಲಿ ಸಲ್ಲದ ನಾಣ್ಯವೇ ಶರಣ? ಹಿಡಿದು ಬಿಡುವಲ್ಲಿ ಬಾಲಗ್ರಹವೇ ಶರಣ? ಅಲ್ಲಲ್ಲ. ಉರಿ ಕರ್ಪೂರವ ಹಿಡಿದಂತೆ ಹಿಡಿದ ವ್ರತನೇಮಂಗಳ ಬಿಡದಿಪ್ಪುದೀಗ ಶರಣಸ್ಥಲದ ಮತವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಒಬ್ಬ ಸಹಜಗಳ್ಳನು ನಿಟಿಲಮುಂದಳ ಚಾವಡಿಯಲ್ಲಿ ನಿಂದು ರಾಜಿಸುತಿಪ್ಪನು ನೋಡಾ! ಆ ಕಳ್ಳನ ಹೆಜ್ಜೆಯ ಒಬ್ಬ ತಳವಾರ ಎತ್ತಿ ನೋಡಲು ಹೆಜ್ಜೆ ಹೋದವು. ಅಂಗಲಿಂಗಸಂಗಸಮರಸವೆಂಬ ಲಿಂಗದ ಗುಡಿಯಲ್ಲಿ ಅಡಗಿಪ್ಪವಯ್ಯ. ಆ ತಳವಾರನು ಹೆಜ್ಜೆಯನೆತ್ತಿ ಆ ಕಳ್ಳನ ಹೆಜ್ಜೆಯ ಹಿಡಿದ ಭೇದವ ನಿಮ್ಮ ಶರಣರೆ ಬಲ್ಲರಲ್ಲದೆ ಉಳಿದವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಬ್ದಿಯ ಘೋಷವೆದ್ದು ನಿರ್ಭರ ನಿರ್ವೇಗದಿಂದ ಅಬ್ಬರಿಸಿ ಬರುವಾಗ ಅದನೊಬ್ಬರು ಹಿಡಿದ [ರುಂಟೆ]? ಆಕಾಶದ ಸಿಡಿಲು ಆರ್ಭಟದಿಂದ ಬಡಿವಲ್ಲಿ ತಾಕು ತಡೆಯುಂಟೆ? ಮಹಾದ್ಭುತವಾದ ಅಗ್ನಿಯ ಮುಂದೆ ಸಾರವರತ ತೃಣಕಾಷ್ಟವಿ [ದ್ದುದುಂ]ಟೆ? ತಾ ಸರ್ವಮಯವಾದ ನಿಃಕಳಂಕ ನಿರಂಜನ ಐಕ್ಯಾನುಭಾವಿಗೆ ಅಂಡ ಪಿಂಡ ಬ್ರಹ್ಮಾಂಡ ಅಬ್ದಿ ಆಕಾಶ ಆತ್ಮನೆಂದುಂಟೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು.
--------------
ಘಟ್ಟಿವಾಳಯ್ಯ
ಇಷ್ಟಲಿಂಗದ ವೀರಶೈವ, ಪ್ರಾಣಲಿಂಗದ ವೀರಶೈವ, ಭಾವಲಿಂಗದ ವೀರಶೈವ. ತ್ರಿವಿಧ ಲಿಂಗದಲ್ಲಿ ನೈಷ್ಠೆವರಿಯಾದ ಶರಣನ ನೀವು ನೋಡಣ್ಣ. ಇಷ್ಟಲಿಂಗವ ಕಾಯಕರದಲ್ಲಿ ಹಿಡಿದ ಮೇಲೆ ಅನ್ಯದೈವಕೆ ತಲೆವಾಗದ ವೀರಶೈವಬೇಕು ಭಕ್ತಂಗೆ, ಮನದ ಕೈಯಲ್ಲಿ ಪ್ರಾಣಲಿಂಗವ ಹಿಡಿದ ಮೇಲೆ ಮಾಯಾ [ಮೋಹನಿರಸನೆಯಾಗಿ]ರುವ ವೀರಶೈವಬೇಕು ಭಕ್ತಂಗೆ. ಭಾವದ ಕೈಯಲ್ಲಿ ಭಾವಲಿಂಗವ ಹಿಡಿದ ಮೇಲೆ ಪರಧನ ಪರವಧು ಪರಾನ್ನವ ಬಯಸದ ವೀರಶೈವಬೇಕು ಭಕ್ತಂಗೆ. ಇಂತೀ ತ್ರಿವಿಧಲಿಂಗದ ವೀರಶೈವದೊಳಿಂಬುಗೊಂಡ ತ್ರಿಕರಣಶುದ್ಧವಾದ ತ್ರಿವಿಧಸಂಪನ್ನ ಶರಣಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
--------------
ಸೊಡ್ಡಳ ಬಾಚರಸ
ಹಿಡಿದ ವ್ರತವ ಬಿಡುವವನಲ್ಲ, ಲಿಂಗವಲ್ಲದನ್ಯವನೊಲ್ಲ, ಅನ್ಯದೈವಕ್ಕೆರಗ, ಮತ್ರ್ಯದ ಮನುಜರ ಮನ್ನಿಸ, ಪರಸತಿ ಪರದ್ರವ್ಯವ ಮುಟ್ಟ, ಕೊಟ್ಟಡೆ ಕೈಕೊಳ್ಳ, ಲಿಂಗನಿಷ್ಠಾಭಕ್ತಿಯ ಹಿಂಗ, ಕೊಲಬಾರದ ಅರಿಗಳ ಗೆಲುವ ಕಲಿ ತಾನಾಗಿ ಅದೆಂತೆಂದೊಡೆ: ಪರಸ್ತ್ರಿಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ ಲಿಂಗನಿಷ್ಠಾ ನಿಯುಕ್ತಾತ್ಮಾ ಮಾಹೇಶ್ವರ ಇತಿ ಸ್ಮೃತಃ ಎಂದುದಾಗಿ, ಜೀವಭಾವ ಹಿಂಗಿ, ಶಿವಭಾವದಿಂ ಜೀವಿಸಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಮಾಹೇಶ್ವರನು.
--------------
ಆದಯ್ಯ
ಇನ್ನಷ್ಟು ... -->