ಅಥವಾ

ಒಟ್ಟು 65 ಕಡೆಗಳಲ್ಲಿ , 33 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗದ ರೋಮ ಮುಮ್ಮೊನೆದೋರಿ ಮೊಳೆಗಾಣದಂತೆ, ದಶಾಂಗುಲಿಯ ನಖ ಪ್ರತಿರೂಪುದೋರದಂತೆ. ಇದು ಶರೀರ ಚಿತ್ರಾಂಗಿಯ ಕಾಯದ ನಿರಿಗೆಯ ತೆರ. ಹೊರಗಣ ಕ್ರೀ, ಆತ್ಮನೊಳಗಣ ಜ್ಞಾನ ಇಂತೀ ಉಭಯವನರಿದು ಕಾಯಕವನೊಡಗೂಡಿ ಮಾಡಬೇಕು. ಹದಿನೆಂಟು ಕಾಯಕದೊಳಗಾದ, ನಾಲ್ಕು ಕಾಯಕ ಹೊರಗಾದ ಮೂರು ಕಾಯಕ ಮುಂತಾದ ಕಾಯಕದಂದವ ತಿಳಿದು ಚೆನ್ನಬಸವಣ್ಣ ಸಾಕ್ಷಿಯಾಗಿ ಕಮಳೇಶ್ವರಲಿಂಗವನೊಡಗೂಡಬೇಕು.
--------------
ಶ್ರೀಗುರು ಪ್ರಭುನ್ಮುನೀಶ್ವರ
ಕರಚರಣಾದಿ ದೇಹಂಗಳಲ್ಲಿ ಹೊಕ್ಕು, ಒಳಗಡಗಿ, ಹೊರಗಣ ಬಾಹ್ಯವ ಹಿಡಿವುದದೇನೋ ? ಹೊರಗಣ ಅರ್ಪಿತವ ಒಳಗೆ ಕೊಟ್ಟು, ಅರ್ಪಿಸುವುದದೇನೋ ? ಆ ಒಳಗು ಹೊರಗೆಂಬ ಉಭಯವ ತಿಳಿದಲ್ಲಿ, ಅನಲಂಗೆ ಕೀಳು ಮೇಲೆಂಬುದುಂಟೆ ? ನೆರೆ ಅರಿದ ಆತ್ಮಂಗೆ, ಒಳಹೊರಗೆಂಬ ಉಭಯದ ಸೂತಕವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು. ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ ನೀಡಿದಾತನೇ ಭಕ್ತನೆಂದು ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು. ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ. ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ, ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು ಗುರುವಿಗೆ ತನುವ ನೀಡಬೇಕೆಂದು, ಆ ಗುರುವಿನ ಸೇವಾವೃತ್ತಿಯಿಂದ ತನುವ ದಂಡನೆಯ ಮಾಡುವರು. ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ. ಲಿಂಗಕ್ಕೆ ಮನವ ನೀಡಬೇಕೆಂದು ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ, ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ ಕಣ್ಣು ತೆರೆದು ನೋಡಿದಡೆ ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ? ನಿಲ್ಲಲರಿಯದು. ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತೀ ಪರಿಯಲ್ಲಿ ಮನವ ಬಳಲಿಸುವರು. ಜಂಗಮಕ್ಕೆ ಧನವ ನೀಡಬೇಕೆಂದು ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ ನಾನಾ ಧಾವತಿಯಿಂದ ಗಳಿಸಿ ಸಕಲ ಪದಾರ್ಥವನು ಜಂಗಮಕ್ಕೆ ನೀಡಿ, ಆತ್ಮನ ಬಳಲಿಸುವರು. ಅದೇನು ಕಾರಣವೆಂದಡೆ, ಆ ಜಂಗಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತಿವೆಲ್ಲವು ಹೊರಗಣ ಉಪಚಾರ. ಈ ಹೊರಗಣ ಉಪಚಾರವ ಮಾಡಿದವರಿಗೆ ಪುಣ್ಯಫಲಪ್ರಾಪ್ತಿ ದೊರಕೊಂಬುವದು. ಆ ಪುಣ್ಯಫಲ ತೀರಿದ ಮೇಲೆ ಮರಳಿ ಭವಬಂಧನವೇ ಪ್ರಾಪ್ತಿ. ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ. ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು. ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗದ ಲಿಂಗ ಆತ್ಮನಲ್ಲಿ ವೇಧಿಸಬೇಕೆಂಬುದಕ್ಕೆ ವಿವರ; ತಿಲರಾಶಿಯಲ್ಲಿ ಸುಗಂಧದ ಕುಸುಮವ ದ್ವಂದ್ವವಮಾಡಿ ಕೂಡಿ ಇರಿಸಲಿಕ್ಕಾಗಿ, ಆ ಗಂಧ ತಿಲದಂಗವ ವೇಧಿಸಿ ಆ ತಿಲರಸವ ಭೇದಿಸಿದಂತೆ ಆಗಬಲ್ಲಡೆ, ಆ ಲಿಂಗ ಆತ್ಮನಲ್ಲಿ ವೇಧಿಸಿಹುದು. ಕುಸುಮದ ಗಂಧ ಒಳಗಾದುದನು, ತಿಲದ ಹಿಪ್ಪೆ ಹೊರಗಾದುದನು ಅರಿದು ನಿಶ್ಚಯವ ಕಂಡಲ್ಲಿ, ಹೊರಗಣ ಪೂಜೆ, ಒಳಗಣ ದಿವ್ಯಪ್ರಕಾಶ, ವಸ್ತುವಿನ ಭಾವದ ಕೂಟ ಇಷ್ಟಲ್ಲದಿಲ್ಲ. ಇದ ಮೀರಿ ಕಾಬ ನಿಜಲಿಂಗೈಕ್ಯರು ನೀವೆ ಬಲ್ಲಿರಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಮುಳುಗಿದುದೆ ಸಮುದ್ರ.
--------------
ಮೋಳಿಗೆ ಮಹಾದೇವಿ
ಒಳಗಣ ಗಂಟಬಿಚ್ಚಿತಂದ ಹೊರಗಣ ವ್ಯವಹಾರಿಗಳನೇಕರುಂಟು. ಹೊರಗಣ ಗಂಟಬಿಚ್ಚಿ ಒಳಗೊಯ್ದು ವ್ಯವಹಾರಗೊಂಬ ಜಾಣರಾರು ಹೇಳಾ ? ಇದು ಕಾರಣ, ನಿಮ್ಮ ಶರಣ ಒಳಹೊರಗರಿಯದೆ ವ್ಯವಹಾರದಲ್ಲಿ ಪರವಶನಾಗಿ ಮರೆದಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದ ಮೇಲೆ ಲಿಂಗಯುಕ್ತವಾದ ಭಕ್ತನು ಆ ಭಕ್ತಿಯಾಚಾರದ ನೆಲೆಯನರಿಯದೆ ಸಂಬಂಧಕ್ಕನ್ಯವಾದ ನಂದಿ ವೀರಭದ್ರ ಮತ್ತೆ ಲಿಂಗಂಗಳೆಂಬಿವಾದಿಯಾದ ಭವಿಶೈವದೈವಂಗಳ ಹೆಸರಿನಲ್ಲಿ ಮೀಸಲುವಿಡಿದು ಬಾಸಣಿಸಿ ಮನೆದೈವಕ್ಕೆಂದು ನೇಮಿಸಿ ಮಾಡಿದ ಪಾಕವ ತನ್ನ ಕರಸ್ಥಲದ ನಿಜ ವೀರಶೈವಲಿಂಗಕ್ಕೆ ಓಗರವೆಂದರ್ಪಿಸುವದು ಅನಾಚಾರ, ಪಂಚಮಹಾಪಾತಕ. ಅವನು ಸದಾಚಾರಕ್ಕೆ ಹೊರಗು, ಅದೇನು ಕಾರಣವೆಂದೊಡೆ: ಅದು ಶೈವದೈವೋಚ್ಛಿಷ್ಟವಾದ ಕಾರಣ. ಅದರಿಂಲೂ ಭವಿಯ ಮನೆಯ ಅಶನ ಉತ್ತಮ. ಅದೆಂತೆಂದೊಡೆ:ಅದು ಅನ್ನವಾದ ಕಾರಣ. ಆ ಅನ್ನದ ಪೂರ್ವಾಶ್ರಯ ಕಳೆಯಬಹುದಾಗಿ ಆ ಉಚ್ಛಿಷ್ಟದ ಪೂರ್ವಾಶ್ರಯ ಹೋಗದಾಗಿ. ಅದೆಂತೆಂದೊಡೆ: ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ ಶಿವಭಕ್ತ ಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ_ ಎಂದುದಾಗಿ ಭಕ್ತಂಗೆ ಭವಿಯ ಮನೆಯ ಅಶನ ನಾಯಡಗು ನರಮಾಂಸ ಕ್ರಿಮಿ ಮಲಕ್ಕೆ ಸಮವೆಂದರಿದು ಶಿವಭಕ್ತರಾದವರು ಮುಟ್ಟರು; ಅದಕಿಂದಲೂ ಕರಕಷ್ಟ ಕರಕಷ್ಟ ನೋಡಾ. ಅರೆಭಕ್ತರು ತಮ್ಮ ಕುಲದೈವವ ಕೂರ್ತು ಮಾಡಿದ ಆ ಭವಿ ಶೈವದೈವೋಚ್ಛಿಷ್ಟವ ತಾ ನೆರೆಭಕ್ತನಾಗಿ ಆಚಾರವನನುಸರಣೆಯ ಮಾಡಿಕೊಂಡು ಆ ಅರೆಭಕ್ತರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವದಕ್ಕಿಂತಲೂ ಹೊರಗಣ ಹೊಲೆಯರ ಮನೆಯ ಅನ್ನವೇ ಮಿಗೆ ಮಿಗೆ ಉತ್ತಮ ಕಾಣಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಕಬ್ಬಿನ ಹೊರಗಣ ಸೋಗೆಯ ಮೆದ್ದು ಪರಿಣಾಮಿಸುವ ಪಶುವಿನಂತೆ, ಹೊರವೇಷವ ಹಲ್ಲಣಿಸಿಕೊಂಡು ಈಶ್ವರೋವಾಚದ ನುಡಿಯ ನುಡಿದು ಬಲ್ಲವರೆನಿಸಿಕೊಳಬಹುದಲ್ಲದೆ, ಈಶ್ವರನ ನಿಲವ ಈ ಉಪಚಾರದಲ್ಲಿ ಕಾಣಬಹುದೆ? ಕಾಣಬಾರದು ಕಾಣಿರಯ್ಯ. ಕಬ್ಬ ಕಡಿದು ಒಳಗಣ ಮಧುರವ ಸ್ವೀಕರಿಸುವ ಮದಗಜದಂತೆ ಅಂತರಂಗದ ನಿಳಯದಲಿ ನಿಜವ ಕಂಡು ನಿವಾಸಿಗಳಾಗಿ ಚಿದಂಗ ಚಿತ್ಪ್ರಾಣ ಚಿಚ್ಛಕ್ತಿ ಚಿದಾಕಾಶವೆನಿಸುವ ಚಿದ್ಫ ್ರಹವೇ ಸ್ಥಳಕುಳವೆಂದರಿದು ಸುಳಿಯಬಲ್ಲರೆ ಸ್ಥಲಜ್ಞರೆಂಬೆ. ಉಳಿದವರೆಲ್ಲಾ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗಾಂಗಸಂಗಸಮರಸದ ವಿವರವ ಕರುಣಿಸು ಸ್ವಾಮಿ. ಕೇಳೈ ಮಗನೆ : ಮುಖಪ್ರಕ್ಷಾಲನ ಮಾಡುವಾಗ ಲಿಂಗಕ್ಕೆ ಮಜ್ಜನವ ನೀಡಿದುದು ಇಷ್ಟಲಿಂಗದ ಮಜ್ಜನ. ಲಿಂಗಾರ್ಚನೆ ಮಾಡುವಾಗ ಕ್ರಿಯೆಯಿಟ್ಟು ಲಿಂಗಕ್ಕೆ ಮಜ್ಜನವ ನೀಡಿದುದು ಪ್ರಾಣಲಿಂಗದ ಮಜ್ಜನ. ಲಿಂಗಾರ್ಚನೆ ಮುಗಿದ ಬಳಿಕ ಮಜ್ಜನ ನೀಡಿದುದು ಭಾವಲಿಂಗದ ಮಜ್ಜನವೆಂದರಿವುದು. ಇನ್ನು ವಿಭೂತಿಯ ಧರಿಸುವ ಕ್ರಮವು : ಸ್ನಾನ ಧೂಳನ ಧಾರಣ. ಸ್ನಾನ ಮಾಡಿದುದು ಇಷ್ಟಲಿಂಗದಲ್ಲಿ ; ಧೂಳನವ ಮಾಡಿದುದು ಪ್ರಾಣಲಿಂಗದಲ್ಲಿ ; ಧಾರಣವ ಮಾಡಿದುದು ಭಾವಲಿಂಗದಲ್ಲಿ. ಇನ್ನು ಲಿಂಗಪೂಜೆ ; ಹೊರಗಣ ಪುಷ್ಪ ಇಷ್ಟಲಿಂಗಕ್ಕೆ ; ಒಳಗಣ ಕಮಲದ ಪುಷ್ಪ ಪ್ರಾಣಲಿಂಗಕ್ಕೆ ; ಬಯಲ ಪುಷ್ಪ ಭಾವಲಿಂಗಕ್ಕೆಂದರಿವುದು. ಇನ್ನು ಜಪದ ಕ್ರಮ ; ಹನ್ನೆರಡು ಪ್ರಣವ ಮಾಡಲಾಗಿ ಪಂಚತತ್ತ್ವವಡೆದ ಜಪ ಇಷ್ಟಲಿಂಗಕ್ಕೆ ; ಒಳಗಣ ಜಪ ಇಪ್ಪತ್ತೊಂದು ಸಾವಿರದಾರುನೂರು ಪ್ರಾಣಲಿಂಗಕ್ಕೆ ; ಬಯಲ ಜಪ ಭಾವಲಿಂಗಕ್ಕೆಂದರಿವುದು. ಇನ್ನು ತ್ರಿಕಾಲಪೂಜೆ : ಉದಯಕಾಲದ ಪೂಜೆ ಇಷ್ಟಲಿಂಗಕ್ಕೆ ; ಮಧ್ಯಾಹ್ನದ ಪೂಜೆ ಪ್ರಾಣಲಿಂಗಕ್ಕೆ ; ಸಾಯಂಕಾಲದ ಪೂಜೆ ಭಾವಲಿಂಗಕ್ಕೆಂದರಿವುದು. ಇನ್ನು ಪ್ರಸಾದತ್ರಯದ ವಿವರ : ಶುದ್ಧಪ್ರಸಾದ ಇಷ್ಟಲಿಂಗಕ್ಕೆ ; ಸಿದ್ಧಪ್ರಸಾದ ಪ್ರಾಣಲಿಂಗಕ್ಕೆ ; ಪ್ರಸಿದ್ಧಪ್ರಸಾದ ಭಾವಲಿಂಗಕ್ಕೆಂದರಿವುದು. ಇನ್ನು ಭೋಗತ್ರಯದ ವಿವರ : ಭೋಜನಸುಖವು ಇಷ್ಟಲಿಂಗಕ್ಕೆ ; ತನ್ನ ಸ್ತ್ರೀಸಂಗದಸುಖವು ಪ್ರಾಣಲಿಂಗಕ್ಕೆ ; ವಸ್ತ್ರಾಭರಣದ ಸುಖವು ಭಾವಲಿಂಗಕ್ಕೆಂದರಿವುದು. ಲಿಂಗಾಂಗಿಯ ಚರಿತ್ರದ ವಿವರ ; ನಿಂತಿರ್ದುದು ಇಷ್ಟಲಿಂಗಕ್ಕೆ ; ಕುಂತಿರ್ದುದು ಪ್ರಾಣಲಿಂಗಕ್ಕೆ ಮಲಗಿರ್ದುದು ಭಾವಲಿಂಗಕ್ಕೆಂದರಿವುದು. ಇನ್ನು ನಡೆವುದು ಇಷ್ಟಲಿಂಗವು ; ನುಡಿವುದು ಪ್ರಾಣಲಿಂಗವು ; ಪಿಡಿದುನೋಡುವ ಸುಖವು ಭಾವಲಿಂಗವು ಎಂದರಿವುದು. ಇನ್ನು ಇಷ್ಟಲಿಂಗದ ಗರ್ಭದಲ್ಲಿ ತನ್ನ ಶರೀರವನಿಟ್ಟು ಬ್ರಹ್ಮರಂಧ್ರದಲ್ಲಿರ್ದ ಸಹಸ್ರದಳ ಕಮಲದೊಳಗೆ ಆ ಇಷ್ಟಲಿಂಗವ ಮುಳುಗಿಸುವುದೀಗ ಲಿಂಗಾಂಗವು. ಇನ್ನು ನೇತ್ರಸ್ಥಾನದಲ್ಲಿರ್ದ ವಿಶ್ವಜೀವನ ಜಾಗ್ರಾವಸ್ಥೆ ಸ್ಥೂಲತನುವಿನ ವ್ಯವಹರಣೆ ಇಷ್ಟಲಿಂಗವೆಂದರಿವುದು. ಕಂಠಸ್ಥಾನದಲ್ಲಿರ್ದ ತೈಜಸಜೀವನ ಸ್ವಪ್ನಾವಸ್ಥೆ ಸೂಕ್ಷ್ಮತನುವಿನ ವ್ಯವಹರಣೆ ಪ್ರಾಣಲಿಂಗವೆಂದರಿವುದು. ಹೃದಯಸ್ಥಾನದಲ್ಲಿರ್ದ ಪ್ರಾಜ್ಞಜೀವನ ಸುಷುಪ್ತಾವಸ್ಥೆ ಕಾರಣತನುವಿನ ವ್ಯವಹರಣೆ ಭಾವಲಿಂಗವೆಂದರಿವುದು. ಇನ್ನು ಆಯತ ಇಷ್ಟಲಿಂಗವು ಸ್ವಾಯತ ಪ್ರಾಣಲಿಂಗವು ಸನ್ನಹಿತ ಭಾವಲಿಂಗವು ಎಂದರಿವುದು. ಇನ್ನು ಪಾತಾಳಲೋಕವನೊಳಕೊಂಡದ್ದು ಇಷ್ಟಲಿಂಗವಹುದು ; ಮತ್ರ್ಯಲೋಕವನೊಳಕೊಂಡದ್ದು ಪ್ರಾಣಲಿಂಗವಹುದು ; ಸ್ವರ್ಗಲೋಕವನೊಳಕೊಂಡದ್ದು ಭಾವಲಿಂಗವಹುದು. ಈರೇಳುಲೋಕವನೊಳಕೊಂಡದ್ದು ಪ್ರಾಣಲಿಂಗವು ; ಚರ್ಮಚಕ್ಷುವಿಗೆ ಅಗೋಚರವು, ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಟ್ಟುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಕ್ಕೆ ಎರಡು ನೇತ್ರಂಗಳು ಪುಷ್ಪವಾಗಿಪ್ಪುದೆ ಲಿಂಗಾಂಗಸಂಗವು. ಇನ್ನು ರೂಪಾಗಿ ಬಂದ ಪದಾರ್ಥವನು ಭೋಗಿಸುವದು ಇಷ್ಟಲಿಂಗವು ತಾನೆ. ರುಚಿಯಾಗಿ ಬಂದ ಪದಾರ್ಥವನು ಭೋಗಿಸುವದು ಪ್ರಾಣಲಿಂಗವು ತಾನೆ. ತೃಪ್ತಿಯಾಗಿ ಬಂದ ಪದಾರ್ಥವನು ಭೋಗಿಸುವದು ಭಾವಲಿಂಗವು ತಾನೆ. ಸಾಕ್ಷಿ : 'ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಂ | ಭಾವಲಿಂಗಾರ್ಪಿತಂ ತೃಪ್ತಿರಿತಿ ಭೇದೋ ವರಾನನೇ ||' ಎಂದುದಾಗಿ, ಅಂಗವೆಂದರೆ ರೂಪು, ಮನವೆಂದರೆ ರುಚಿ, ಸಂತೋಷವೆಂದರೆ ತೃಪ್ತಿ ಎಂದರಿವುದು. ಕ್ರಿಯೆವಿಡಿದು ಕಾಯಾರ್ಪಣ ಮಾಡುವ ಷಡ್ವಿಧಲಿಂಗದಸುಖವ ಭೋಗಿಸುವಾತ ಇಷ್ಟಲಿಂಗವು ತಾನೆ. ಜ್ಞಾನವಿಡಿದು ಕರಣಾರ್ಪಣವ ಮಾಡುವ ಛತ್ತೀಸಲಿಂಗದ ಸುಖವ ಭೋಗಿಸುವಾತ ಪ್ರಾಣಲಿಂಗ ತಾನೆ. ಭಾವವಿಡಿದು ಪರಿಣಾಮಾರ್ಪಣ ಮಾಡುವ ಇನ್ನೂರ ಹದಿನಾರು ಲಿಂಗದ ಸುಖವ ಭೋಗಿಸುವಾತ ಭಾವಲಿಂಗವು ತಾನೆ. ಸಾವಿರದ ಇನ್ನೂರಾ ತೊಂಬತ್ತಾರು ಲಿಂಗ ಇಂತಪ್ಪ ಬಯಲಲಿಂಗವು ಲೆಕ್ಕಕ್ಕೆ ನಿಲುಕದು. ಬಯಲ ಹಸ್ತದಿಂದ ಪೂಜಿಸಿ ಆ ಬಯಲಲಿಂಗದೊಳಗೆ ತಾನಾಗಿ ತನ್ನೊಳಗೆ ಬಯಲ ಲಿಂಗವು ಬೆರದುದು ಇದು ಲಿಂಗಾಂಗಸಂಗ ಸಮರಸವು. ಇದು 'ಶರಣಸತಿ ಲಿಂಗಪತಿ' ನ್ಯಾಯವು. ಇದು ತ್ರಿವಿಧ ತನುವ ತ್ರಿಲಿಂಗಕ್ಕೆ ಅರ್ಪಿಸುವ ಕ್ರಮವು. ಇಂತಿವೆಲ್ಲ ಕ್ರಮವನೊಳಕೊಂಡು ಇಷ್ಟಬ್ರಹ್ಮವು ತಾನೆಯೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಅಂಗಸಂಗಿಗಳೆತ್ತಬಲ್ಲರು ನೋಡಾ.
--------------
ಗಣದಾಸಿ ವೀರಣ್ಣ
ಅಭ್ಯಾಸದ ಮಾತಲ್ಲ, ಶ್ರೋತ್ರದ ಸುಖವಲ್ಲ, ಶಾಸ್ತ್ರದ ಅನುಭಾವದ ಮಾತಲ್ಲ. ಒಳಗಣ ಮಾತಲ್ಲ ಹೊರಗಣ ಮಾತಲ್ಲ. ಇದರಂಗ (ತು?) ವನರಿಯರೆ, ಅನುಭಾವವ ಮಾಡಿ ಫಲವೇನಯ್ಯಾ ? ಗುಹೇಶ್ವರಲಿಂಗವು ಉಪಮಾತೀತ ನೋಡಯ್ಯಾ ಸಿದ್ಧರಾಮಯ್ಯ !
--------------
ಅಲ್ಲಮಪ್ರಭುದೇವರು
ಬಯಲೊಳಗಣ ರೂಪು, ರೂಪಿನೊಳಗಣ ಬಯಲು ಉಭಯವ ವಿಚಾರಿಸಿ ನೋಡುವಲ್ಲಿ ಕುಂಭದೊಳಗೆ ನೀರ ತುಂಬಿ, ಸಿಂದುವಿನೊಳಗೆ ಮುಳುಗಿಸಲಾಗಿ ಅದರೊಳಗೂ ನೀರು, ಹೊರಗೂ ನೀರು. ಹೊರಗಣ ನೀರು ಒಳಗಾಯಿತ್ತು, ಒಳಗಣ ನೀರು ಹೊರಗಾಯಿತ್ತು. ಕುಂಭದೊಳಗಣ ನೀರು ಅಂಗಕ್ಕೊ ಒಳಗೊ ಹೊರಗೊ ಎಂಬುದು ತಿಳಿಯದು. ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿದ ಅಂಗ ಅರಿವಿನ ಕುರುಹಿಂಗೆ ಒಳಗೊ ಹೊರಗೊ ಎಂಬುದ ವಿಚಾರಿಸಿ ಕರ್ಪೂರದ ಹಾಗೊಲೆಯಲಿ ಮೃತ್ತಿಕೆಯ ಕುಂಭವನಿರಿಸಿ ಕಿಚ್ಚಹಾಕಿ ಓಗರವನಡಲಿಕ್ಕಾಗಿ ಒಲೆ ಉರಿಯದ ಮುನ್ನವೆ ಓಗರ ಬೆಂದು ಕರ್ಪೂರದ ಹಾಗೆ ಒಲೆಯೊಳಗೆ ಉಭಯ ಬಯಲಾಗಿ ಮಡಕೆ ಉಳಿಯಿತ್ತದೇತಕ್ಕೆ? ಘಟ ಉಳಿದು ಆತ್ಮ ಬಯಲಾಯಿತದೇತಕ್ಕೆ? ಉಭಯ ನಿರತವಾದಲ್ಲಿ ಉರಿಯಿಂದ ಕರ್ಪೂರ ನಷ್ಪವಾದ, ಕರ್ಪೂರದಿಂದ ಉರಿ ನಷ್ಟವಾದಂತೆ ಇಂತೀ ಉಭಯಸ್ಥಲದೊಳಗು ಅಂಗಲಿಂಗ ಪ್ರಾಣಲಿಂಗ ಉಭಯವನೊಂದು ಮಾಡಿ ತಿಳಿದು ನಿಜದಲ್ಲಿ ನಿಂದ ಲಿಂಗಾಂಗಿಗೆ ಕೂಗಿನ ಕುಲವಿಲ್ಲ ಮಹಾಮಹಿಮ ಮಾರೇಶ್ವರಾ.
--------------
ಕೂಗಿನ ಮಾರಯ್ಯ
ಅರ್ತಿಗಾರಿಕೆಯಲ್ಲಿ ಕೆಲಬರು ಮೆಚ್ಚಬೇಕೆಂದು ಮಾಡುವನ ಭಕ್ತಿ ಮಂಡೆಯ ಮೇಲೆ ಹೊತ್ತ ಸುರೆಯ ಲಚ್ಚಣಿಯಂತೆ; ಅದು ನಿಶ್ಚಯವಲ್ಲ. ಒಳಗಣ ಕಪಟ ಹೊರಗಣ ಬಣ್ಣ, ಆ ತೊಡಿಗೆಯ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಜಗಮೆಚ್ಚಬೇಕೆಂಬ ಶೀಲವ ನಾನರಿಯೆ, ಕೊಳುಕೊಡೆಯಾಗಬೇಕೆಂಬ ಶೀಲವ ನಾನರಿಯೆ, ದ್ರವ್ಯದ ಕಳ್ಳತನಕ್ಕಂಜಿ ಶೀಲವಾದುದ ನಾನರಿಯೆ. ಹೊರಗಣ ಬಾವಿ, ಮನೆಯ ಮಡಕೆ - ತನುಘಾತಕಕ್ಕಾದ ಶೀಲವೆಂದು ನಾನರಿಯೆ. ತಾ ಹೋದಲ್ಲಿ ಇದಿರ ಕೇಳುವಲ್ಲಿ ಆಯತ ಸ್ವಾಯತ ಸನ್ನಹಿತನೆಂಬುದ ವಿಚಾರಿಸಿ, ಅಹುದಲ್ಲವೆಂಬುದ ಮನಕ್ಕೆ ಕುರುಹಿಟ್ಟು, ನೇಮಕ್ಕೆ ಬಂದುದ ವ್ರತಕ್ಕೆ ಸಂದುದ ಸಂದೇಹವುಳ್ಳನ್ನಕ್ಕ ವಿಚಾರಿಸಿ, ಸಂದೇಹ ನಿಂದಲ್ಲಿ ತನ್ನ ಆಯತದ ಅನುವನರಿತು ಕೊಂಬುದು ಪ್ರಸಾದವು. ಇಂತೀ ತನುವಿಚಾರ ಕ್ರೀವಿಚಾರ ; ಇಂತೀ ಭಾವಶುದ್ಧಾತ್ಮವಾದಲ್ಲಿ ವ್ರತ ಸಂದಿತ್ತು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಶೀಲವಂತನಾದ.
--------------
ಅಕ್ಕಮ್ಮ
ಅಪ್ಪುವಿನೊಳಗಣ ಅಗ್ನಿಯಂತೆ ಅಪ್ಪುವಿನೊಳಗೆ ಬೆರೆದು, ಕೆಡದ ಕಿಚ್ಚಿನಂತೆ ಸ್ಥಲಕುಳಭರಿತನಾಗಿ, ಸ್ಥಲದಲ್ಲಿದ್ದು ಸ್ಥಲವ ನೇತಿಗಳೆದಲ್ಲಿ ಒಳಗು ಹೊರಗಾಯಿತ್ತು. ಆ ಹೊರಗಣ ಹೊಲಬ ಕಂಡು, ಆ ಹೊಲಬಿ[ಗ]ನ ಹೊಲನ ನೋಡಿ, ವಿರಳ ಅವಿರಳವೆಂಬುದನರಿತು, ಕುರುಹು ನಷ್ಟವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ನಾಮನಷ್ಟ.
--------------
ಮೋಳಿಗೆ ಮಾರಯ್ಯ
ಅರ್ಥ ಪ್ರಾಣ ಅಭಿಮಾನವ ಕೊಟ್ಟೆನೆಂಬರಲ್ಲದೆ ಕೊಟ್ಟ ಭಕ್ತರನಾರನೂ ಕಂಡುದಿಲ್ಲ; ದಾಸ ತನ್ನ ವಸ್ತ್ರವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ, ಸಿರಿಯಾಳ ತನ್ನ ಮಗನ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ, ಬಲ್ಲಾಳ ತನ್ನ ವಧುವ ಕೊಟ್ಟನಲ್ಲದೆ ತನ್ನ ಕೊಟ್ಟುದಿಲ್ಲ. ಇವೆಲ್ಲ ಹೊರಗಣ ಮಾತು, ಕೂಡಲಸಂಗಮದೇವರಲ್ಲಿ ತನ್ನ ಕೊಟ್ಟ ಸಿಂಧುಮರಾಳ.
--------------
ಬಸವಣ್ಣ
ಸೋಮವಾರಕ್ಕೆ ಮೀಸಲೆಂದು ಊರ ಹೊರಗಣ ದೈವವ ಆರಾಧಿಸಿ, ಅವಕ್ಕೆ ಇಕ್ಕಿದ ಮಿಕ್ಕಿನ ಕೂಳ ಸೋಮಧರಗರ್ಪಿತವೆಂಬವರ ಭಕ್ತಿಯ ತೆರ ಎಂತಾಯಿತ್ತೆಂದಡೆ, ಗ್ರಾಮ ಸೂಕರನು ಶುನಕನು ಗಂಗೆಯನೀಸಿ ಅಶುದ್ಧ ಭುಂಜಿಸಿದ ತೆರನಾಯಿತ್ತೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->