ಅಥವಾ

ಒಟ್ಟು 61 ಕಡೆಗಳಲ್ಲಿ , 22 ವಚನಕಾರರು , 60 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಲಿಂದ ಒಂದು ಪಶುವು ಬಂದು, ಇತ್ತಲಿಂದ ಒಂದು ಪಶುವು ಬಂದು, ಒಂದರ ಮೋರೆಯನೊಂದು ಮೂಸಿ ನೋಡಿದಂತೆ, ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ, ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ. ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ, ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ? ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ? ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ? ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ. ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ. ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇಂಬಾದ ಬ್ರಹ್ಮದಲ್ಲಿ ತುಂಬಿದ ಜಗವೆಲ್ಲಾ ಸಂಭ್ರಮಿಸುತ್ತದೆ ಸಂಸಾರದಲ್ಲಿ. ಕುಂಭದೊಳಗಣ ಸುಧೆಯನುಂಬ ಭೇದವನರಿಯದೆ ಸುಂಬಳಗುರಿಯಂತಾದವು ಜಗವೆಲ್ಲವು. ಒಂಭತ್ತುನಾಳದೊಳಗಣ ಮಧ್ಯನಾಳದ ಬೆಂಬಳಿಯಲ್ಲಿ ಎಯ್ದಿದಾತಗೆ ಸುಧೆ ಸಾಧ್ಯವು. ತೊಂಬತ್ತಾರು ಅಂಗುಲ ದೇಹವೆಲ್ಲವನೂ ತುಂಬುವುದು. ಮತ್ತಂತು ಆ ಸುಧೆಯನು ಹಂಬಲಿಸಲೇಕೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ, ಹಂಬಲವನು ಬಿಡದಿರ್ದಡಾತ ಯೋಗಿ.
--------------
ಸ್ವತಂತ್ರ ಸಿದ್ಧಲಿಂಗ
ಪುರುಷನಿಲ್ಲದ ಬಳಿಕ ಸ್ತ್ರೀಗೆ ಗರ್ಭವಿನ್ನೆಲ್ಲಿಯದೊ ? ಬೀಜವಿಲ್ಲದ ಬಳಿಕ ವೃಕ್ಷವಿನ್ನೆಲ್ಲಿಯದೊ ? ಹಾಲಿಲ್ಲದ ಬಳಿಕ ತುಪ್ಪವಿನ್ನೆಲ್ಲಿಯದೊ ? ಪರಮ ಶ್ರೀಗುರುವಿನುಪದೇಶವಿಲ್ಲದ ಬಳಿಕ ಲಿಂಗಕ್ಕೆ ಪರಮಶಿವಕಳೆಯಿನ್ನೆಲ್ಲಿಯದೊ ? ಇದು ಕಾರಣ, ಉಪದೇಶವಿಲ್ಲದ ಲಿಂಗ ಜಡಪಾಷಾಣವೆಂದೆನಿಸಿತ್ತು . ಆ ಜಡಪಾಷಾಣವ ಅನಂತಕೋಟಿವರ್ಷ ಪೂಜೆಯ ಮಾಡಿದರು ವ್ಯರ್ಥವಲ್ಲದೆ ಸಾರ್ಥವಿಲ್ಲ ನೋಡಾ ! ಇಂತೀ ಭೇದವನರಿಯದೆ ಮೂಢಮತಿಯಿಂದೆ ಜಡಪಾಷಾಣವ ಪೂಜಿಸಿ ಈಷಣತ್ರಯವೆಂಬ ಸಂಕೋಲೆಯಲ್ಲಿ ಬಂಧನವಡೆದು ಭವದಲ್ಲಿ ಘಾಸಿಯಾಗುವ ಹೇಸಿಮೂಳರ ಕಂಡು ನಾಚಿತ್ತಯ್ಯಾ ಎನ್ನ ಮನವು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಂತಪ್ಪ ನಿರ್ಣಯವನು ಸ್ವಾನುಭಾವಜ್ಞಾನದಿಂ ತಿಳಿದು ಶಿವಜ್ಞಾನಿಗಳಾದ ಶಿವಶರಣರಿಗೆ, ಅಚ್ಚ ನಿಚ್ಚ ಸಮಯ ಏಕಪ್ರಸಾದಿಗಳೆಂದೆನ್ನಬಹುದು. ಭಕ್ತಾದಿ ಐಕ್ಯಾಂತಮಾದ ಷಟ್‍ಸ್ಥಲಬ್ರಹ್ಮ ಎಂದೆನ್ನಬಹುದು. ಅಂಗಸ್ಥಲ 44, ಲಿಂಗಸ್ಥಲ 57 ಇಂತೀ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದುಸ್ಥಲ ಮೊದಲಾದ ಸರ್ವಾಚಾರಸಂಪನ್ನನೆಂದೆನ್ನಬಹುದು. ಇಂತೀ ಭೇದವನರಿಯದೆ ತಮ್ಮ ತಾವಾರೆಂಬುದು ತಿಳಿಯದಿರ್ದಂಥ ಮತಿಭ್ರಷ್ಟ ಹೊಲೆಮಾದಿಗರಿಗೆ ಅದೆಲ್ಲಿಯದೊ ಗುರುಲಿಂಗಜಂಗಮದ ತೀಥಪ್ರಸಾದಸಂಬಂಧ ? ಅದೆಲ್ಲಿಯದೋ ಅಚ್ಚ ನಿಚ್ಚ ಸಮಯ ಏಕಪ್ರಸಾದದಸಂಬಂಧ ? ಇಂತಪ್ಪ ಗುರುಲಿಂಗಜಂಗಮದ ತೀರ್ಥಪ್ರಸಾದಕ್ಕೆ ಅಂದೇ ಹೊರಗಾಗಿ ಮತ್ತೆ ಮರಳಿ ಇಂದು ನಾವು ಗುರುಲಿಂಗಜಂಗಮದ ತೀರ್ಥಪ್ರಸಾದ ಪ್ರೇಮಿಗಳೆಂದು, ಆ ತ್ರಿಮೂರ್ತಿಗಳ ತಮ್ಮಂಗದಿಂ ಭಿನ್ನವಿಟ್ಟು, ತ್ರಿಕಾಲಂಗಳಲ್ಲಿ ಸ್ನಾನವ ಮಾಡಿ, ಜಪ, ತಪ, ಮಂತ್ರ, ಸ್ತೋತ್ರಗಳಿಂದ ಪಾಡಿ, ಪತ್ರಿ, ಪುಷ್ಪ ಮೊದಲಾದುದರಿಂ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಅರ್ಚಿಸಿ, ನಿತ್ಯನೇಮದಿಂ ಶೀಲ ವ್ರತಾಚಾರಂಗಳಿಂದ ಸಕಲ ಕ್ರಿಯಗಳನಾಚರಿಸಿ ಭಿನ್ನಫಲಪದವ ಪಡದು, ಕಡೆಯಲ್ಲಿ ಎಂ¨ತ್ತುನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಣದಂತೆ ತಿರುಗುವ ಭವಭಾರಿಗಳಾದ ಜೀವಾತ್ಮರಿಗೆ ಪ್ರಸಾದಿಗಳೆಂದಡೆ ಮೆಚ್ಚರಯ್ಯಾ ನಿಮ್ಮ ಶರಣರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮನವೆಂಬ ಒರಳಿಗೆ ಸಕಲಕರಣಂಗಳೆಂಬ ತಂಡುಲವ ಹಾಕಿ, ಸುಜ್ಞಾನವೆಂಬ ಒನಕೆಯ ಪಿಡಿದು ಪರಮಪರಿಣಾಮದೊಳಗೋಲಾಡುತ್ತ ಕುಟ್ಟಿ, ಅಜ್ಞಾನವೆಂಬ ತೌಡ ಕೇರಿ ಚಿತ್ಕರಣಂಗಳೆಂಬ ಅಕ್ಕಿಯ ತೆಗೆದುಕೊಂಡು ಸದ್ಭಾವವೆಂಬ ಭಾಂಡದಲ್ಲಿ ತುಂಬಿ ಪರಮಾನಂದ ಜಲವೆಂಬ ಎಸರನಿಟ್ಟು, ತ್ರಿಪುಟಿಯೆಂಬ ಒಲೆಯ ಹೂಡಿ ಚಿದಗ್ನಿಯೆಂಬ ಬೆಂಕಿಯ ಪುಟವನಿಕ್ಕಿ ಅರಿಷಡ್ವರ್ಗಗಳೆಂಬ ಸೌದೆಯ ಹೊತ್ತಿಸಿ, ಮಹಾಜ್ಞಾನವೆಂಬ ಪಾಕವ ಮಾಡಿ ಪರಿಪೂರ್ಣವೆಂಬ ಪರಿಯಾಣದಲ್ಲಿ ಗಡಣಿಸಿಕೊಂಡು, ಅಖಂಡಪರಿಪೂರ್ಣ ಮಹಾಘನಲಿಂಗಕ್ಕೆ ಸಲಿಸಬಲ್ಲಾತನೆ ಶರಣನು. ಆತನೆ ನಿಜಾನುಭಾವಿ, ಆತನೆ ಲಿಂಗೈಕ್ಯನು. ಇಂತೀ ಭೇದವನರಿಯದೆ ಮಣ್ಣಪರಿಯಾಣ, ಲೋಹಪಾತ್ರೆಯಲ್ಲಿ ಮನಬಂದ ಪರಿಯಲ್ಲಿ ಹಾಯ್ಕಿ ಹಾಯ್ಕಿ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂಬುವ ಜೀವಗಳ್ಳ ಭವಭಾರಕರಿಗೆ ಏಕಭಾಜನವೆಲ್ಲಿಯದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗಮುಖವು ಜಂಗಮವೆಂದುದಾಗಿ, ತಾನು ಸತ್ಕಾಯದಿಂದ ಸಂಪಾದಿಸಿದ ಸತ್ಪದಾರ್ಥವ ಜಂಗಮಕ್ಕಿತ್ತು ತತ್‍ಪ್ರಸಾದವ ಭಕ್ತಿಯಿಂದ ಪಡೆದು ಸೇವಿಸಬಲ್ಲಡೆ ಅದು ಅಶನವೆಂಬೆ, ಈ ಕ್ರಮಕ್ಕೆ ಹೊರಗಾದುದೆ ಅನಶನವೆಂಬೆ, `ಸಾಶನಾನಶನೇ ಭಿ' ಎಂದುದಾಗಿ. ಇಂತೀ ಅಶನ ಅನಶನಗಳ ಭೇದವನರಿಯದೆ ತನುವ ದಂಡಿಸದೆ ಮನವ ಖಂಡಿಸದೆ ತನಗಾಗಿ ಜನವ ಮೋಸಂಗೈದು ತಂದು ಮನೆಯಲ್ಲಿ ಮಡಗಿದ ದ್ರವ್ಯವು ಗುರುವಿಂಗೆ ಸಲ್ಲದು, ಲಿಂಗಕ್ಕೆ ಸಲ್ಲದು, ಜಂಗಮಕ್ಕೆ ಸಲ್ಲದಾಗಿ. ಇಂತೀ ಬಿನುಗು ಮಾನವನ ನಮ್ಮ ಕೂಡಲಚೆನ್ನಸಂಗಮದೇವನು ಹೀನಯೋನಿಯಲ್ಲಿ ಬರಿಸದೆ ಮಾಣ್ಬನೆ ?
--------------
ಚನ್ನಬಸವಣ್ಣ
ಕಾ[ಡಿ]ನೊ[ಳ]ಗೆ ಹೋಗಿ, ಅಭೇದ್ಯವಪ್ಪ ಲಿಂಗದ ಭೇದವನರಿಯದೆ ಹೋದಿರಲ್ಲಾ. ಮಿಣುಕಿನ ಪ್ರಭೆಯಂತೆ, ಧಣಧಣಿಸುವ ಘನದನುವನರಿಯದೆ ಹೋದಿರಲ್ಲಾ. ಪಂಚತತ್ವವನೊಳಕೊಂಡ ಪರಬ್ರಹ್ಮವು ಪಂಚತತ್ವದಲ್ಲಿ ವಂಚಿಸಿದರೆ, ಸಂಚಲಗೊಂಬ ಸಂದೇಹವ ನೋಡಾ. ಇದು ಕಾರಣ, ಸರ್ವಸಂಚಲವನತಿಗಳೆದು, ಸದಾಕಾಲದಲ್ಲಿ ಲಿಂಗವ ಪೂಜಿಸುವ ಪೂಜಾವಿಧಾನರ ತೋರಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಎನ್ನ ಕಾಯದ ಕರಸ್ಥಲದಲ್ಲಿ ಅಲ್ಲಮಪ್ರಭುದೇವರ ಕಂಡೆನು, ಎನ್ನ ಮನದ ಕರಸ್ಥಲದಲ್ಲಿ ಚೆನ್ನಬಸವಣ್ಣನ ಕಂಡೆನು, ಎನ್ನ ಅರಿವಿನ ಕರಸ್ಥಲದಲ್ಲಿ ಮಡಿವಾಳಯ್ಯನ ಕಂಡೆನು. ಒಳಗು ಹೊರಗು, ಹೊರಗು ಒಳಗೆಂಬ ಭೇದವನರಿಯದೆ ಇದ್ದೆನು. ಕೂಡಲಸಂಗಮದೇವಯ್ಯಾ,ನಿಮ್ಮ ಶರಣರು ಎನ್ನ ಪಾವನವ ಮಾಡಿದ ಪರಿಣಾಮವ ಅಂತಿಂತೆನಲಮ್ಮದೆ ನಮೋ ನಮೋ ಎನುತ್ತಿದ್ದೆನು.
--------------
ಬಸವಣ್ಣ
ಜಂಗಮಸ್ಥಲಕ್ಕೆ ಲಕ್ಷಣವಾವುದೆಂದಡೆ ಹೇಳಿಹೆ ಕೇಳಿರಣ್ಣಾ : ಮೂರರ ಹೊಲಿಗೆಯ ಬಿಚ್ಚಿ ಆರ ಮಾಡಬೇಕು. ಆರರ ತಿರುಳ ತೆಗೆದು ಒಂದರೊಳಗೆ ನಿಲಿಸಬೇಕು, ಐದರ ಮುಸುಕನುಗಿದು, ಐದರ ಕಳೆಯ ಕೆಡಿಸಿ ಐದರ ನಿಲವನಡಗಿಸಿ, ಮೂರರ ಮುದ್ರೆಯನೊಡೆದು ನಾಲ್ಕರೊಳಗೆ ನಿಲ್ಲದೆ, ಮೂರು ಮುಖವು ಒಂದು ಭಾಗವಾಗಿ ಇರಬೇಕು ! ಈ ಭೇದವನರಿಯದೆ ಸುಳಿವರ ಕಂಡು ಬೆರಗಾದೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ ನಿಜಪ್ರಸಾದವೆಂಬ [ಈ ಚತುರ್ವಿಧಪ್ರಸಾದದ] ನಿರ್ಣಯ[ವ]ನರಿದು [ಕೊಂಡು] ಕೊಡಬಲ್ಲಾತನೆ ಗುರು, ತಿಳಿದು ಕೊಳಬಲ್ಲಾತನೆ ಸದ್ಭಕ್ತ. ಈ ಭೇದವನರಿಯದೆ ಅಚ್ಚ ನಿಚ್ಚ ಪ್ರಸಾದವೆಂದು ನೀರಕೂಳನುಂಬುವ ಉಚ್ಫಿಷ್ಟ ಮುದಿಹೊಲೆಯರ ಮೂಗು ಕೊಯ್ಯದೆ ಮಾಣ್ಬನೆ [ನಿಮ್ಮ ಶರಣ] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ. ಈ ಕಾಣಬಾರದ ಘನವ ನಾನಾರ ಕೇಳಲಯ್ಯ! ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ, ಜಂಗಮ ಹೇಳಲಿಲ್ಲ. ಅದು ಹೇಗೆ ಎಂದರೆ:ಗುರು ಒಂದು ಲಿಂಗವ ಕೊಟ್ಟು, ತನ್ನ ಅಂಗದ ಕುರಿತು, ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ, ಆ ಕಾಣಬಾರದ ಘನವ ಹೇಳಿದುದು ಇಲ್ಲ. ಇದ ಲಿಂಗವೆಂದು ಪೂಜಿಸಿದರೆ, ಕಂಗಳ ಕಾಮ ಘನವಾಯಿತ್ತಲ್ಲ ! ಎರಡರ ಸಂಗಸುಖವ ಹೇಳಲರಿಯದೆ, ಜಂಗಮವೆಂದು ಪೂಜೆಯ ಮಾಡಿದರೆ, ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ, ಈ ಕಾಣಬಾರದ ಘನವ, ಹೇಳಿದುದಿಲ್ಲ. ಅದೇನು ಕಾರಣವೆಂದರೆ: ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು, ತಾನೊಬ್ಬರಿಗೆ ಹೇಳಲು ಬಾರದು. ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ. ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು, ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ, ತನ್ನ ತಾನೆ ಸಾಕಾರ ನಿರಾಕಾರವಾಗಿ, ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು? ಆ ಲೋಕದಲ್ಲಿ ಹೋದರೇನು? ಹದಿನಾಲ್ಕುಲೋಕವು ತಾನೆಯಾದ ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಪಾರಮಾರ್ಥಜಂಗಮಲಿಂಗವು ಜಂಗಿಟ್ಟು ಅನಾದಿಭಕ್ತನ ಮಂದಿರೆಕ್ಕೈಯ್ದಿದಲ್ಲಿ ಬಯಕೆ ಬಾರದ ಮುನ್ನ ಮಾಡಿ ನೀಡುತಿಪ್ಪನು. ಮಾಡಿ ನೀಡದ ಮುನ್ನ ಕಾಡಿಕೊಂಬ ಕಲ್ಪಿತಕರಣತ್ರಯದಲ್ಲಿ ಕಾಣಿಸದಿಪ್ಪನು. ಭಕ್ತಿಬೆಳಗಿನೊಳಗಿಪ್ಪಾತನೇ ಭಕ್ತ. ವೈರಾಗ್ಯಪ್ರಭೆಯೊಳಿಪ್ಪಾತನೇ ಜಂಗಮ. ಈ ಭೇದವನರಿಯದೆ ಬೇಡಿಸಿ ಕೊಟ್ಟ ಕೊಂಬ ಭಕ್ತ, ಬೇಡಿ ಕೊಂಡು ಕೊಡುವ ಜಂಗಮ, ಉಭಯವೇಷಕ್ಕೆ ಭವ ತಪ್ಪದು. ಈ ಉಭಯಕೂಟದಲ್ಲಿ ಪಾದೋದಕ ಪ್ರಸಾದ ಉದಯವಾಗುವ ಪರಿಯೆಂತೊ! ಸತಿಪತಿಭಾವ ಕಾಣಿಸದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ, ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ, ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ. ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ ಬೆಳೆಸಿ, ಅರುಹೆಂಬ ಹೂವ, ಅದ್ವೆ ೈತವೆಂಬ ಹಸ್ತದಿಂದ ಕುಯಿದು ಅನುಪಮಲಿಂಗಕ್ಕೆ, ಪೂಜಿಸಬಲ್ಲರೆ ಲಿಂಗಾರ್ಚಕರೆಂಬೆ. ಈ ಭೇದವನರಿಯದೆ, ಹುಸಿಯನೆ ಪೂಜಿಸಿ, ಗಸಣೆಗೊಳಗಾದ ಪಿಸುಣಿಗಳ ಲಿಂಗಪೂಜಕರೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಚರ ಚರ ವಿರಕ್ತರಾಗಿ, ಹಿಂದೆ ಶ್ರೀಗುರುದೇವನ ಬಿಟ್ಟು, ಮುಂದೆ ಲಿಂಗವ ಹೋಗಲಾಡಿ, ಲಿಂಗದೊಳಗೆ ಲೀಯವಹ ಭೇದವನರಿಯದೆ, ಮರಳಿ ಗುರುವಿದ್ದೆಡೆಗೆ ಹೋಗಿ ಲಿಂಗವ ಸಾಹಿತ್ಯವ ಮಾಡಿಸಿಕೊಂಬ ಉಭಯಃಭ್ರಷ್ಟರ ಹುಲಿಗೆರೆಯ ವರದ ಸೋಮೇಶನೊಪ್ಪನು.
--------------
ಅಗ್ಘವಣಿ ಹೊನ್ನಯ್ಯ
ಆಡಬಲ್ಲವನಾಡಿದರೆ ಚಂದವಾಯಿತ್ತು ಲಿಂಗಕ್ಕೆ. ಮಾಡಬಲ್ಲವ ಮಾಡಿದರೆ ಚಂದವಾಯಿತ್ತು ಲಿಂಗಕ್ಕೆ. ನೀಡಬಲ್ಲವ ನೀಡಿದರೆ ಚಂದವಾಯಿತ್ತು ಲಿಂಗಕ್ಕೆ. ಈ ಭೇದವನರಿಯದೆ ಕೂಡಿ, ನಡೆಹೀನ ಭವದುಃಖಿಗಳಿಗೆ, ಕೊಡುಕೊಳ್ಳಿ ಸಲುವುದೆಂದು ನಡೆದುಣ್ಣಲಾಗದು. ಬಿಡುವದು ಲೌಕಿಕದತ್ತ ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕಲ್ಲದ ಮಲಭುಂಜಕರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->