ಅಥವಾ

ಒಟ್ಟು 27 ಕಡೆಗಳಲ್ಲಿ , 15 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಲಿಂಗಾರ್ಪಿತವಾಯಿತ್ತಾಗಿ ಕರ್ಮ ನಿರ್ಮೂಲ್ಯವಾಗಿ ನಿರ್ಮಲಾಂಗಿಯಾದೆನು ನೋಡಾ. ಜೀವ ಲಿಂಗಾರ್ಪಿತವಾಯಿತ್ತಾಗಿ ಜೀವ ಪರಮರೆಂಬ ಉಭಯವಳಿದು ಚಿತ್ಪರಮಲಿಂಗವಾದೆನು ನೋಡಾ. ಪ್ರಾಣಲಿಂಗಾರ್ಪಿತವಾಯಿತ್ತಾಗಿ ಇಹಪರವನರಿಯೆನು ನೋಡಾ. ಪರಿಣಾಮ ಲಿಂಗಾರ್ಪಿತವಾಯಿತ್ತಾಗಿ ಶರಣ ಲಿಂಗವೆಂಬ ಕುರುಹಿಲ್ಲ ನೋಡಾ. ನಾನೆಂಬುದು ಲಿಂಗಾರ್ಪಿತವಾಯಿತ್ತಾಗಿ ನಾನು ಇಲ್ಲ, ನೀನು ಇಲ್ಲ ಏನು ಏನೂ ಇಲ್ಲದ ಅಪ್ರತಿಮ ಪ್ರಸಾದಿಯಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯ ! ಕಾರ್ಯನಲ್ಲ ಕಾರಣನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಭೇದಕನಲ್ಲ ಸಾಧಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಪಾತಕನಲ್ಲ ಸೂತಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದ್ವೈತನಲ್ಲ ಅದ್ವೈತನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕಾಟಕನಲ್ಲ ಕೀಟಕನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಎನ್ನವನಲ್ಲ ನಿನ್ನವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಕುಂಟಣಿಯಲ್ಲ ನೆಂಟಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ದುಶ್ಶೀಲನಲ್ಲ ದುರ್ಮಾರ್ಗಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಜಾತಿಯವನಲ್ಲ ಅಜಾತಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ. ಇಂದು ಉಭಯವಳಿದು ಬೆಳಗುವ ಸಂಗನಬಸವಣ್ಣನ ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಮಂಜಿನ ಉದಕ ವಾಯುಸಂಚಾರ ಮೋಡವಿಲ್ಲದೆ ಕರೆವಂತೆ ಮನಪ್ರಕೃತಿ ಸಂಚಾರ ಹಿಂಗಿ ಕಲೆದೋರದ ಕುರುಹಿನಲ್ಲಿ ಸಲೆ ನಿಂದು ಉಭಯವಳಿದು ಉಳುಮೆ ತಲೆದೋರಿ ಕಲೆ ಅಳಿದು ಬೆಳಗು ತೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಗುರುವೆಂಬ ಪ್ರತಿಭಾವವಿಲ್ಲದ ಶಿಷ್ಯ; ಶಿಷ್ಯನೆಂಬ ಪ್ರತಿಭಾವವಿಲ್ಲದ ಗುರು; ಏನೆಂಬೆನೇನೆಂಬೆ ಎರಡಿಲ್ಲದ ಘನವನೇನೆಂಬೆನೇನೆಂಬೆ ! ಉಭಯವಳಿದು ಒಂದಾದುದನೇನೆಂಬೆನೇನೆಂಬೆ: ಕೂಡಲಚೆನ್ನಸಂಗಯ್ಯನಲ್ಲಿ ಗುರುಶಿಷ್ಯಸಂಬಂಧವಪೂರ್ವ
--------------
ಚನ್ನಬಸವಣ್ಣ
ಕೈ ತುಂಬಿ ಹಿಡಿದು, ಕಂಗಳು ತುಂಬಿ ನೋಡಿ, ಮನ ತುಂಬಿ ಹಾರೈಸಿ, ಎಡೆಬಿಡುವಿಲ್ಲದೆ ಅರಿದ ಮತ್ತೆ ಆ ಕುರುಹು ಕೈಗೆ ಆದಿಯಾಗಿ, ಕಂಗಳಿಗೀಡಾಗಿ, ಆತ್ಮನರಿವಿನಲ್ಲಿ ಉಭಯವಳಿದು ನಿಂದಲ್ಲಿಯೆ ಲೀಯವಾಗಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಸ್ಥಿ ಮಾಂಸ ಶುಕ್ಲ ಶೋಣಿತವುಳ್ಳನ್ನಕ್ಕ ಆರಿಗೂ ಅದಿವ್ಯಾದ್ಥಿಯ ತಾಪತ್ರಯದ ತನುತ್ರಯದ ಕೂಟಸ್ಥ ಬಿಡದು. ರೋಗವನರಿದು ವೈದ್ಯವ ಮಾಡಿಹೆನೆಂದಡೆ, ತನು ಪ್ರಮಾಣು, ಪೈತ್ಯಪ್ರಮಾಣು, ವಾತಪ್ರಮಾಣು, ಶ್ಲೇಷ್ಮಪ್ರಮಾಣು, ಆತ್ಮತತ್ವಪ್ರಮಾಣು, ಚಂದ್ರ ಸೂರ್ಯ ಬಿಂದು ಪ್ರಮಾಣು, ಮಿಕ್ಕಾದ ಸರ್ವಾಂಗ ಪ್ರಮಾಣ ಹೇಳಿಹೆನೆಂದಡೆ, ಮರೀಚಿಕಾಜಲದಂತೆ, ಸುರಚಾಪದಂತೆ, ಆಕಾಶದ ಪರಿಬಣ್ಣದಂತೆ, ಇಂತೀ ಶರೀರದ ತೆರ. ಅಲ್ಪಾಂತರ ತಿರುಗುವನ್ನಕ್ಕರ ಶರೀರ ಸಿಕ್ಕುಹುದಲ್ಲದೆ, ಮತ್ತೆಯೂ ಆತ್ಮನ ಕಟ್ಟಿಕೊಂಡಿಹೆನೆಂದಡೆ ಸತ್ವವುಂಟೆ ? ವ್ಯಾದ್ಥಿಯಲ್ಲಿ ಹೊಂದುವ ತೆರನಾದಡೆ, ಬ್ರಹ್ಮಂಗೆ ಸೃಷ್ಟಿಯಿಲ್ಲ, ವಿಷ್ಣುವಿಂಗೆ ಸ್ಥಿತಿ ಇಲ್ಲ, ರುದ್ರಂಗೆ ಲಯವಿಲ್ಲ. ಇಂತೀ ಕರ್ಮಕಾಂಡದಲ್ಲಿ ಪ್ರಾಪ್ತಿ, ವರ್ಮಕಾಂಡದಲ್ಲಿ ಸರ್ವ, ಜ್ಞಾನಕಾಂಡದಲ್ಲಿ ತ್ರಿವಿಧವಳಿದ ಮಹದೊಡಗೂಟ. ಇಂತೀ ಜಗದಲ್ಲಿ ಒಂದನಹುದು, ಒಂದನಲ್ಲಾ ಎಂದಡೆ, ಅಮೃತಕ್ಕೂ ಸುರಾಪಾನಕ್ಕೂ ಸರಿಯೆಂದು ಮಾರುವನ ತೆರದಂತೆ, ಆರಾರ ತೆರನನು ನೋಡಿ ಸುಖಿಯಾಗಿ, ತನ್ನನರಿವರಲ್ಲಿ ಮನಮುಕ್ತವಾಗಿ ಉಭಯವಳಿದು ಒಡಗೂಡಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಕಳುಹಿದಂತೆ ಮಾಡಿ, ಭಕ್ತಿಗೆ ಖೋಡಿ ಇಲ್ಲದೆ ಸತ್ಯವನೊಡಗೂಡಬೇಕು.
--------------
ವೈದ್ಯ ಸಂಗಣ್ಣ
ಬ್ರಹ್ಮ ವಿಷ್ಣು ರುದ್ರಾದಿಗಳ ಮೇಲೆ ಈಶ್ವರಲಿಂಗವ ಕಂಡೆನಯ್ಯ. ಆ ಈಶ್ವರನ ಅಂಗವ ಪೊಕ್ಕು ಸದಾಶಿವನ ಕಂಡೆನಯ್ಯ. ಆ ಸದಾಶಿವನ ಪೊಕ್ಕು ನಾನು ನೀನೆಂಬ ಉಭಯವಳಿದು ನಿರ್ವಯಲಲಿಂಗವನಾಚರಿಸುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯ, ತಾರಕಾಕೃತಿ ಮೊದಲಾಗಿ ನವಾಕೃತಿಗಳು, ಅಯ್ಯ, ನಕಾರಪ್ರಣಮ ಮೊದಲಾಗಿ ನವಪ್ರಣಮಗಳು, ಅಯ್ಯ, ಭ್ರಮರನಾದ ಮೊದಲಾಗಿ ನವನಾದಗಳು, ಆಧಾರಚಕ್ರ ಮೊದಲಾಗಿ ನವಚಕ್ರಗಳು, ಪೀತವರ್ಣ ಮೊದಲಾಗಿ ನವವರ್ಣಗಳು, ಭಕ್ತಿಸ್ಥಲ ಮೊದಲಾಗಿ ನವಸ್ಥಲಗಳು, ಸ್ಥೂಲತನು ಮೊದಲಾಗಿ ನವತನುಗಳು, ಸುಚಿತ್ತಹಸ್ತ ಮೊದಲಾಗಿ ನವಹಸ್ತಗಳು, ಅಚಾರಲಿಂಗ ಮೊದಲಾಗಿ ನವಲಿಂಗಗಳು, ಘ್ರಾಣಮುಖ ಮೊದಲಾಗಿ ನವಮುಖಗಳು, ಶ್ರದ್ಧಾಭಕ್ತಿ ಮೊದಲಾಗಿ ನವಭಕ್ತಿಗಳು, ಸುಗಂಧಪದಾರ್ಥ ಮೊದಲಾಗಿ ನವಪದಾರ್ಥಗಳು, ಸುಗಂಧಪ್ರಸಾದ ಮೊದಲಾಗಿ ನವಪ್ರಸಾದಗಳು, ಬ್ರಹ್ಮಪೂಜಾರಿ ಮೊದಲಾಗಿ ನವಪೂಜಾರಿಗಳು, ಬ್ರಹ್ಮ ಅಧಿದೇವತೆ ಮೊದಲಾಗಿ ನವ ಅಧಿದೇವತೆಗಳು, ಕರ್ಮಸಾದಾಖ್ಯ ಮೊದಲಾಗಿ ನವಸಾದಾಖ್ಯಗಳು, ಸತ್ತುವೆಂಬ ಲಕ್ಷಣ ಮೊದಲಾಗಿ ನವಲಕ್ಷಣಗಳು, ಪರವೆಂಬ ಸಂಜ್ಞೆ ಮೊದಲಾಗಿ ನವಸಂಜ್ಞೆಗಳು, ಪೂರ್ವದಿಕ್ಕು ಮೊದಲಾಗಿ ನವದಿಕ್ಕುಗಳು, ಋಗ್ವೇದ ಮೊದಲಾಗಿ ನವವೇದಗಳು, ಚಿತ್ಪøಥ್ವಿ ಮೊದಲಾಗಿ ನವ ಅಂಗಗಳು, ಜೀವಾತ್ಮ ಮೊದಲಾಗಿ ನವ ಆತ್ಮರು, ಕ್ರಿಯಾಶಕ್ತಿ ಮೊದಲಾಗಿ ನವಶಕ್ತಿಯರು, ನಿವೃತ್ತಿಕಲೆ ಮೊದಲಾಗಿ ನವಕಲೆಗಳು, ಇಂತು ಇಪ್ಪತ್ತುನಾಲ್ಕು ಸಕೀಲಂಗಳು ನವವಿಧ ತೆರದಿಂದ ಇನ್ನೂರ ಹದಿನಾರು ಸಕೀಲು ಮೊದಲಾದ ಸಮಸ್ತ ಕ್ಷೇತ್ರಂಗಳನೊಳಕೊಂಡು ಎನ್ನ ಅಣುಚಕ್ರವೆಂಬ ಪರಮಕೈಲಾಸ ಚಿದಾಕಾಶಮಂಡಲದ ವರ ಚೌಕಮಂಟಪ ನವರತ್ನ ಖಚಿತ ಶೂನ್ಯಸಿಂಹಾಸನಪೀಠದಲ್ಲಿ ಮೂರ್ತಿಗೊಂಡಿರ್ದ ಪರಾತ್ಪರ ನಿಜಜಂಗಮಲಿಂಗಸ್ವರೂಪ ಸರ್ವಚೈತನ್ಯಾಧಾರಸ್ವರೂಪವಾದ ಅಣುಲಿಂಗಜಂಗಮವೆ ಪರತತ್ವ ನಿಃಕಲಪರಬ್ರಹ್ಮಮೂರ್ತಿ ಲಿಂಗಜಂಗಮಪ್ರಸಾದವೆಂದು ತನುತ್ರಯ, ಮನತ್ರಯ, ಭಾವತ್ರಯ, ಆತ್ಮತ್ರಯ, ಪ್ರಾಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಗುಣತ್ರಯ, ಅವಸ್ಥಾತ್ರಯ, ತತ್ವತ್ರಯ, ಕರಣತ್ರಯ, ಹಂಸತ್ರಯಂಗಳ ಪೂರ್ಣ ಮಡಿಮಾಡಿ, ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರದು, ನಿಃಕರಣವೆಂಬ ಗಂಧವ ಧರಿಸಿ, ನಿಃಸಂಗವೆಂಬಕ್ಷತೆಯನಿಟ್ಟು, ನಿಃಪರಿಪೂರ್ಣವೆಂಬ ಪುಷ್ಪದಮಾಲೆಯ ಧರಿಸಿ, ನಿರುಪಾಧಿಕವೆಂಬ ಧೂಪವ ಬೀಸಿ, ನಿಃಕಳೆಯೆಂಬ ಜ್ಯೋತಿಯ ಬೆಳಗಿ, ನಿಶ್ಚಲವೆಂಬ ವಸ್ತ್ರವ ಹೊದ್ದಿಸಿ, ಪರಮನಿಜಾಭರಣವ ತೊಡಿಸಿ, ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ, ನಿರಾವಯವೆಂಬ ತಾಂಬೂಲವನಿತ್ತು, ಇಂತೀ ಅಣುಲಿಂಗಜಂಗಮಪ್ರಸಾದಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಭೆಯಂತೆ ಬೆಳಗುವ, ಅಣುಲಿಂಗಜಂಗಮಪ್ರಸಾದವನ್ನು ಅನುಮಿಷದೃಷ್ಟಿಯಿಂ ನಿರೀಕ್ಷಿಸಿ, ಉನ್ಮನಾಗ್ರದಲ್ಲಿ ಸಂತೋಷಂಗೊಂಡು ಆ ಅಣುಲಿಂಗಜಂಗಮಪ್ರಸಾದಪೂಜೆಯ ಸಮಾಪ್ತವ ಮಾಡಿ, ಅನಂತಕೋಟಿ ಮಹಾಮಂತ್ರಂಗಳಿಂದ ನಮಸ್ಕರಿಸಿ, ಆ ಅಣುಲಿಂಗಜಂಗಮಪ್ರಸಾದವೆ ತಾನೆಂದರಿದು ಏಕತ್ವದಿಂ, ನಿಶ್ಚಲಚಿತ್ತದೊಳ್ ಕೂಡಿ ಉಭಯವಳಿದು ಇಹಪರಂಗಳ ಹೊದ್ದದೆ, ಕನ್ನಡಿಯ ಪ್ರತಿಬಿಂಬದಂತೆ ಸರ್ವಸಂಗಪರಿತ್ಯಾಗವಾಗಿ, ನಿಜಾಚರಣೆಯಲ್ಲಿ ಆಚರಿಸಬಲ್ಲಾತನೆ ದಶವಿಧಲಿಂಗಜಂಗಮಸಂಗ ಭಕ್ತಿಪ್ರಸಾದವುಳ್ಳ ಅನಾದಿ ಅಖಂಡ ಚಿಜ್ಜ್ಯೊತಿ ಸದ್ಭಕ್ತ ಜಂಗಮ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅರಿದಡೆ ಸುಖವಿಲ್ಲ; ಮರದಡೆ ದುಃಖವಿಲ್ಲ ! ಸತ್ತಡೆ ಚೇಗೆಯಿಲ್ಲ; ಬದುಕಿದಡೆ ಆಗಿಲ್ಲವೆಂಬ ! ನಿರ್ಣಯದಲ್ಲಿ ನಿಶ್ಚಯಿಸಿ ನಿಲ್ಲದೆ ! ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ ! ಬರಿಯ ಮರವೆಯ ಪ್ರೌಡಿsಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಪಥದೊಳಗಣ ಪ್ರತಿಷೆ*ಯ ಪೂಜಿಸಿ ಸ್ವಯಂಭುವನರಿದುದಿಲ್ಲ, ಅದನರಿಸಿ ಕಂಡುದುದಿಲ್ಲ; ಸ್ವಯಕ್ಕೂ ವಚನಕ್ಕೂ ವಿರೋಧವಿಲ್ಲದೆ ಉಭಯವಳಿದು ನಿಂದ ನಿಜಗುಣಯೊಗಿಯ ಯೋಗವೆಂಬುದಿಲ್ಲ.
--------------
ನಿಜಗುಣಯೋಗಿ
ಗುರುದ್ರವ್ಯವ ಗುರುವಿಂಗೊಪ್ಪಿಸಿಹೆವೆಂಬರು. ಗುರುದ್ರವ್ಯವಾವುದೆಂದರಿಯರು. ದೇಹಿಕದ್ರವ್ಯ, ಮನದ್ರವ್ಯ, ¨sõ್ಞತಿಕ[ತನು?]ದ್ರವ್ಯ, ಆತ್ಮದ್ರವ್ಯ ಜ್ಞಾನದ್ರವ್ಯವೆಂಬ ಪಂಚದ್ರವ್ಯವನು ಉಭಯವಳಿದು ಷೋಡಶೋಪಚರ್ಯದಲ್ಲಿ ಉಪಚರಿಸಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ಪೂಜಕನಾದ.
--------------
ಚನ್ನಬಸವಣ್ಣ
ಅರುಹನರಿಯಲು ಕುರುಹ ಮರೆಯಲೇಬೇಕು. ಅರುಹನನುಗೊಳಿಸಲು ಆನು ಪ್ರಸನ್ನಮೂರ್ತಿಯ ಪಡೆದೆನಯ್ಯ. ಆನು ಉಭಯವಳಿದು ನಿರಾಭಾರಿಯಾದೆನಯ್ಯ. ನಿರ್ಮಲ ನಿಜವ ಕಂಡು ಮುಕ್ತಿಪದವ ಪಡದೆನಯ್ಯ ಸಂಗಯ್ಯ.
--------------
ನೀಲಮ್ಮ
ಗುರುವನರಿದು ಲಿಂಗವನರಿವವರುಂಟು, ಲಿಂಗವನರಿದು ಜಂಗಮವನರಿವವರುಂಟು, ಪಂಚಾಚಾರವನರಿದು ಜಂಗಮವನರಿವವರುಂಟು, ಆ ಜಂಗಮವನರಿದಲ್ಲಿ ಷಟ್‍ಸ್ಥಲಸಂಬಂಧವಾಯಿತ್ತು. ಆ ಸಂಬಂಧ ಸಮಯ ನಿಂದು, ಉಭಯವಳಿದು ಏಕವಾದಲ್ಲಿ, ಹಲವು ನೆಲೆ ತನ್ನ ವಿಶ್ವಾಸದ ಹೊಲಬಿನಲ್ಲಿ ಅಡಗಿತ್ತು. ಆ ಹೊಲದ ಹೊಲಬಿನಲ್ಲಿ ನಿಂದವಂಗೆ ಇಹಪರವೆಂಬ ಕಲೆ ಇಲ್ಲ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಒಂದೆ ಎಂದಲ್ಲಿ.
--------------
ಮೋಳಿಗೆ ಮಹಾದೇವಿ
ನಾನಾ ಶಬ್ದಸೂತ್ರ ಲಕ್ಷಣಂಗಳಲ್ಲಿ ನ್ಯೂನಾಧಿಕವಿಲ್ಲದಂತೆ ವಚನಂಗಳ ರಚನೆಗಳಲ್ಲಿ ನಿರ್ವಚನ ಕಾರಣನಾಗಿ ಸರ್ವಗುಣಸಂಪನ್ನನಾರ್ಗಿದಲ್ಲಿ ಭೂತಹಿತವನರಿತು ಆತ್ಮಚಿತ್ತವ ಮರೆದು ಶರಣ ಸಂಭಾಷಣೆಯಲ್ಲಿ ಶಿವಮೂರ್ತಿಧ್ಯಾನಂಗಳಲ್ಲಿ ಶಿವಕಥನ [ಯಥಾ ಕಥನ] ಪ್ರಸಂಗಳಲ್ಲಿ ಶಿವಪೂಜಾ ಮೂರ್ತಿಧ್ಯಾನಂಗಳಲ್ಲಿ ಉಭಯವಳಿದು ಏಕವಾಗಿ ಸ್ವೀಕರಿಸಿದಲ್ಲಿ ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗವ ಅವಧರಿಸಿದ ಅಂಗ
--------------
ಪ್ರಸಾದಿ ಭೋಗಣ್ಣ
ಅಯ್ಯ ! ಸಗುಣಿಯಲ್ಲ ನಿರ್ಗುಣಿಯಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಪರಮನಲ್ಲ ಜೀವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಅಹುದೆನ್ನ ಅಲ್ಲವೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ ನಾನು ಎನ್ನ ನೀನು ಎನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ ಸೂಕ್ಷ್ಮನಲ್ಲ ಸ್ಥೂಲನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಯೋಗದವನಲ್ಲ ಭೋಗದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಮಾಡುವೆ [ನೆನ್ನ] ಮಾಡಿಸಿಕೊಂಬೆನೆನ್ನ ನೋಡ ! ನಿರವಯಶೂನ್ಯಲಿಂಗಮೂರ್ತಿ ಸುಶಬ್ದದವನಲ್ಲ ಕುಶಬ್ದದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಸುಸ್ಪರ್ಶನದವನಲ್ಲ ಕುಸ್ಪರ್ಶನದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಸುರೂಪದವನಲ್ಲ ಕುರೂಪದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಸುರುಚಿಯವನಲ್ಲ ಕುರುಚಿಯವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಸುಗಂಧದವನಲ್ಲ ದುರ್ಗಂಧದವನಲ್ಲ ನೋಡ ! ನಿರವಯಶೂನ್ಯಲಿಂಗಮೂರ್ತಿ ಇಂತು ಉಭಯವಳಿದು ಸಂಗನಬಸವಣ್ಣನ ಕರ_ಮನ_ಭಾವಂಗಳಲ್ಲಿ ಬೆಳಗುವ ಪರಂಜ್ಯೋತಿ ತಾನೆ ನೋಡ ! ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->