ಅಥವಾ

ಒಟ್ಟು 50 ಕಡೆಗಳಲ್ಲಿ , 24 ವಚನಕಾರರು , 45 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚತುರ್ವಿಂಶತಿತತ್ವಕೂಡಿ ಶರೀರ ಹೇಗಾಯಿತ್ತೆಂದಡೆ, ಹೇಳುವೆ ಕೇಳಿರಣ್ಣಾ : ಆ ಆಕಾಶ ಆಕಾಶವ ಬೆರಸಲು ಜ್ಞಾನ ಹುಟ್ಟಿತ್ತು. ಆ ಆಕಾಶ ವಾಯುವ ಬೆರಸಲು ಮನ ಹುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಹುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಹುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಹುಟ್ಟಿತ್ತು. ಇಂತಿವು ಕರಣಚತುಷ್ಟಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪೃಥ್ವಿಯ ಕೂಡಿ ನೆಲನಹನಲ್ಲ, ಅಪ್ಪುವ ಕೂಡಿ ಜಲವಹನಲ್ಲ, ಅಗ್ನಿಯ ಕೂಡಿ ಕಿಚ್ಚಿನಹನಲ್ಲ, ವಾಯುವ ಕೂಡಿ ಗಾಳಿಯಹನಲ್ಲ, ಆಕಾಶವ ಕೂಡಿ ಬಯಲಹನಲ್ಲ, ಆತ್ಮನ ಗೂಡಿ ಭವಕರ್ಮಿಯಹನಲ್ಲ. ಲಿಂಗವ ಕೂಡಿ ಲಿಂಗವಹನು ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಸರಣ.
--------------
ಆದಯ್ಯ
ನಿರಾಕಾರ ಪರವಸ್ತು ತನ್ನ ಲೀಲಾವಿನೋದದಿಂದ ಎರಡು ಮುಖದಿಂದ ಎರಡು ಸೃಷ್ಟಿಯ ಮಾಡಿದರು. ಒಂದು ಊಧ್ರ್ವಸೃಷ್ಟಿ, ಒಂದು ಅಧೋಸೃಷ್ಟಿ. ಅಧೋಸೃಷ್ಟಿ ಯಾವುದೆಂದಡೆ : ಅಂಡಜ ಪಿಂಡಜ ಜರಾಯುಜ ಉದ್ಭಿಜ ಇವು ನಾಲ್ಕು ಕೂಡಿ ಎಂಬತ್ತುನಾಲ್ಕು ಜೀವರಾಶಿಯ ಮಾಡಿದರು. ಸ್ವರ್ಗ ನರಕ ಇಹ ಪರ ಪುಣ್ಯ ಪಾಪ ಧರ್ಮ ಕರ್ಮ ಸತ್ಯ ಅಸತ್ಯ ಜ್ಞಾನ ಅಜ್ಞಾನ ಹೆಣ್ಣು ಗಂಡು ಹಿರಿದು ಕಿರಿದು ಉತ್ಪತ್ತಿ-ಸ್ಥಿತಿ-ಲಯಕ್ಕೆ ಅದ್ಥಿಕಾರಿಗಳಾದ ಬ್ರಹ್ಮ-ವಿಷ್ಣು-ರುದ್ರರು ಮಾಡಿಟ್ಟರು. ಇನ್ನು ಊಧ್ರ್ವಸೃಷ್ಟಿ ಹೇಗೆಂದಡೆ : ಅಸಂಖ್ಯಾತ ಮಹಾಪ್ರಮಥಗಣಂಗಳು, ಇವರಿಗೆ ಸ್ವರ್ಗ-ನರಕವಿಲ್ಲ, ಇಹ-ಪರವಿಲ್ಲ, ಪುಣ್ಯ-ಪಾಪವಿಲ್ಲ, ಧರ್ಮ-ಕರ್ಮವಿಲ್ಲ, ಹುಸಿ-ಖರೆಯಿಲ್ಲ, ಜ್ಞಾನ-ಅಜ್ಞಾನವಿಲ್ಲ, ಹೆಣ್ಣು-ಗಂಡುವಿಲ್ಲ, ಹಿರಿದು-ಕಿರಿದುವಿಲ್ಲ, ಉತ್ಪತ್ತಿ-ಸ್ಥಿತಿ-ಲಯವಿಲ್ಲ, ಅವರಿಗೆ ಬ್ರಹ್ಮ-ವಿಷ್ಣು ರುದ್ರರು ಇಲ್ಲ. ಅವರಿಗೆ ಮತ್ತಂ, ಆ ನಿರಾಕಾರ ಪರವಸ್ತು ತಾನೆ ಗುರು-ಲಿಂಗ-ಜಂಗಮವಾಗಿ ಗುರುವಿನಲ್ಲಿ ಉತ್ಪತ್ತಿ, ಲಿಂಗದಲ್ಲಿ ಸ್ಥಿತಿ, ಜಂಗಮದಲ್ಲಿ ನಿಜೈಕ್ಯರು. ಮತ್ತೆ ಪರಶಿವಮೂರ್ತಿ ತನ್ನ ವಿನೋದಕ್ಕೆ ಆಟವ ಆಡಬೇಕಾಗಿ ಮಹದಾಕಾಶವ ಮಂಟಪವ ಮಾಡಿ, ಆಕಾಶವ ಪರದೆಯ ಕಟ್ಟಿ, ಅಸಂಖ್ಯಾತ ಪ್ರಮಥಗಣಂಗಳಿಗೆ ಮೂರ್ತವ ಮಾಡಿಸಿ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆ ಸೂತ್ರವ ಮಾಡಿ ತಮ್ಮ ಕೈಯಲ್ಲಿ ಪಿಡಿದು, ಚಿತ್ರವಿಚಿತ್ರದಾಟವ ಆಡಿಸುತ್ತಿಹುದಕ್ಕೆ ಲೆಕ್ಕವಿಲ್ಲ, ಹೇಳುವುದಕ್ಕೆ ಅಸಾಧ್ಯ. ಆ ಪ್ರಮಥಗಣಂಗಳು ನೋಡಿ, ಆ ಬೊಂಬೆಗಳೇನು ಆಡಿಹವು ? ಸೂತ್ರಿಕನು ಆಡಿಸಿದ ಹಾಂಗೆ ಆಡ್ಯಾವು. ಆ ಗೊಂಬೆಗೆ ಸೂತ್ರವಲ್ಲದೆ ಶಿವನಿಲ್ಲ. ಆ ಗೊಂಬೆಯೊಳಗೆ ಶಿವನಿದ್ದರೆ, ಆಡಿಸುವುದು ಹ್ಯಾಂಗೆ ? ಇವೆಲ್ಲವು ಅನಿತ್ಯವೆಂದು ತಿಳಿದು ಪ್ರಮಥಗಣಂಗಳು ತಮ್ಮ ಲಿಂಗದಲ್ಲಿ ನಿಜ ಮೋಕ್ಷಿಗಳಾಗಿ ಶಾಂಭವಪುರಕ್ಕೆ ಹೋದ ಭೇದವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ವಸ್ತುವೆಂದಡೆ ಪರಬ್ರಹ್ಮದ ನಾಮ. ಆ ವಸ್ತುವಿನಿಂದ ಆತ್ಮನ ಜನನ. ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು. ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು. ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು; ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು. ಇಂತು ಹುಟ್ಟಿದ ಪಂಚಭೂತಂಗಳೆ, ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು. ಅದು ಹೇಗೆಂದಡೆ: ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು. ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಪುಟ್ಟಿದವಯ್ಯ. ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ, ಶರೀರ ವ್ಯಕ್ತೀಕರಿಸಿತ್ತಯ್ಯ. ಅದೆಂತೆಂದಡೆ: ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು. ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು. ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ. ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ. ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ. ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ. ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ. ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ. ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ. ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ. ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು. ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ. ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ. ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ. ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ. ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ, ಚೈತನ್ಯವಾಗಿ ಆತ್ಮನೊಬ್ಬನು. ಇಂತು ಇಪ್ಪತ್ತೆ ೈದುತತ್ವಂಗಳ ಭೇದವೆಂದು ಅರಿಯಲು ಯೋಗ್ಯವಯ್ಯ. ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು, ಆಕಾಶದ ಪಂಚೀಕೃತಿಯಯ್ಯ. ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು, ವಾಯುವಿನ ಪಂಚೀಕೃತಿಯಯ್ಯ. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು, ಅಗ್ನಿಯ ಪಂಚೀಕೃತಿಯಯ್ಯ. ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರ್ಶನ. ಅಪ್ಪುವಿನೊಳಗಣ ಅಗ್ನಿ ರೂಪು. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ. ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ. ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು, ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ, ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಲ್ಲದಲ್ಲಿ ಇಲ್ಲವಿದ್ದಿತ್ತು. ಇಲ್ಲವೆಂಬುದು ಉಂಟು ನೋಡಾ. ಉಂಟೆಂದಲ್ಲಿ `ಇಲ್ಲ' ಉಂಟಾಯಿತ್ತು. ಉಂಟೆಂದು ತಿಳಿದಡೆ ಅದೆ `ಇಲ್ಲ'. ಆ `ಇಲ್ಲ'ದಲ್ಲಿ ಒಂದು ತಲೆ ಉದಿಸಿತ್ತು. ಆ ತಲೆಯೊಳಗೆ ಮೂರು ಲಿಪಿಯ ಕಂಡೆ. ಲಿಪಿಯೊಳಗೊಂದು ಧ್ವನಿಯ ಕಂಡೆ. ಧ್ವನಿಯ ಬಣ್ಣ ತಲೆಯೆತ್ತದ ಮುನ್ನ, ಐದು ಬಾಯ ರಕ್ಕಸಿ ಆಗುಳಿಸಿ ನುಂಗಿದಳು. ಆ ರಕ್ಕಸಿಗೆ ಕೋಡಗ ಹುಟ್ಟಿ, ಕೋಣನ ಕೊರಳ ಕಚ್ಚಿತ್ತ ಕಂಡೆ. ಕೋಣನ ಕೋಡಗ ಮುರಿದು ಈಡಾಡಿದಡೆ ಕೋಡಗ ಸಿಕ್ಕಿತ್ತು. ಅಡವಿಯ ಸುಟ್ಟು ಆಕಾಶವ ಹೊಕ್ಕು ಗುಹೇಶ್ವರಲಿಂಗದಲ್ಲಿ ಗುರುಕಾರುಣ್ಯವ ಪಡೆದನು
--------------
ಅಲ್ಲಮಪ್ರಭುದೇವರು
ಅಗ್ನಿಯ ಸುಡುವಲ್ಲಿ ಉದಕವ ತೊಳೆವಲ್ಲಿ ವಾಯುವ ಮೆಟ್ಟಿ ಆಕಾಶವ ಹಿಡಿವಲ್ಲಿ ಯೋಗದ ಹೊಲಬ ನೀನೆತ್ತ ಬಲ್ಲೆ? ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು, ಮದ ಮತ್ಸರ ಬೇಡ. ಹೊದಕುಳಿಗೊಳಬೇಡ. ಗುಹೇಶ್ವರನೆಂಬ ಲಿಂಗವು ಕಲ್ಪಿತವಲ್ಲ ನಿಲ್ಲೊ.
--------------
ಅಲ್ಲಮಪ್ರಭುದೇವರು
ಅಗ್ನಿವರ್ಣದ ಚಿತ್ರ ಆಕಾಶವ ನುಂಗಿತ್ತು. ಚಂದ್ರವರ್ಣದ ಚಿತ್ರ ಜಲವ ನುಂಗಿತ್ತು. ಸೂರ್ಯವರ್ಣದ ಚಿತ್ರ ಪೃಥ್ವಿಯ ನುಂಗಿತ್ತು. ಉಳಿದ ವರ್ಣದ ಚಿತ್ರವು ಪಂಚವರ್ಣದ ಭೂಮಿಯ ನುಂಗಿದವು, ಈ ಚಿತ್ರದ ಭೇದವ ಬಲ್ಲವರು ಅಸುಲಿಂಗಿಗಳು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆತ್ಮ ನಿಸ್ಸಂಗತ್ವದ ಇರವು : ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ಮಧ್ಯದಲ್ಲಿ ಪುದಿದಿಪ್ಪ ಆತ್ಮನ ಒಡೆಯನನರಿವಾಗ, ಪೃಥ್ವಿ ಪೃಥ್ವಿಯ ಕೂಡಿತ್ತು, ಅಪ್ಪು ಅಪ್ಪುವ ಕೂಡಿತ್ತು. ತೇಜ ತೇಜವ ಕೂಡಿತ್ತು, ವಾಯು ವಾಯುವ ಕೂಡಿತ್ತು. ಆಕಾಶ ಆಕಾಶವ ಕೂಡಿತ್ತು. ಆ ಪಂಚತತ್ವವು ಒಂದರೊಳಗೊಂದು ಕೂಡಿದಲ್ಲಿ, ಆತ್ಮನ ಪಾಪ ಪುಣ್ಯವಾವುದು ? ಬೇರೊಂದು ಠಾವಿನಲ್ಲಿ ನಿಂದು ಅರಿವ ತೆರನಾವುದು ? ಅದರ ಕುರುಹು ಕೇಳಿಹರೆಂದು ಅಲೇಖನಾದ ಶೂನ್ಯ ಕಲ್ಲಿನ ಮರೆಯಾದೆಯಲ್ಲಾ !
--------------
ವಚನಭಂಡಾರಿ ಶಾಂತರಸ
ನಾನರಿದು ಬಲ್ಲೆನೆಂದು ನುಡಿಯಲೇಕೆ ? ಸರಿಗುಡುಗನಾಡುವ ಬಾಲಕರಂತೆ, ನಾನೊಡವೆರಸಿ ಹೋಗಿ ಕೆಡಹಿದೆನೆಂಬತೆ, ಅರಿವಿಗೇಕೆ ಗೆಲ್ಲಸೋಲ ? ಆಕಾಶವ ನೋಡವುದಕ್ಕೆ ತಳ್ಳು ನೂಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಅಂಗೈಯೊಳಗಿನ ಕೂಸು ಆಕಾಶವ ನುಂಗಿ, ಮಂಗಳಾಂಗಿಯ ಸಂಗವ ಮಾಡಿ ಕಂಗಳಿಲ್ಲದವನ ಕೈಪಿಡಿದು, ಕೋಲ ಮುರಿದು, ಕಾಲ ಕಡಿದು, ಕಮಲದ ಹಾಲು ಕುಡಿದು, ಸತ್ತು ಎತ್ತ ಹೋಯಿತೆಂದರಿಯೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಳಿದ ಪುಷ್ಪ, ಪರಿಮಳಿಸದಿಹುದೆ ಅಯ್ಯಾ? ತುಂಬಿದ ಸಾಗರ, ತೆರೆನೊರೆಗಳಾಡದಿಹುದೆ ಅಯ್ಯಾ? ಆಕಾಶವ ಮುಟ್ಟುವವ, ಅಟ್ಟಗೋಲ ಹಿಡಿವನೆ ಅಯ್ಯಾ? ಪರದಲ್ಲಿ ಪರಿಣಾಮಿಯಾದ ಶರಣ, ಕರ್ಮ ಪೂಜೆ ಫಲವನತಿಗಳೆಯದಿಹನೆ ಮಹಾಲಿಂಗ ಗಜೇಶ್ವರಾ.
--------------
ಗಜೇಶ ಮಸಣಯ್ಯ
ಶಿವಭಾವದಿಂದ ಆತ್ಮ ಹುಟ್ಟಿ, ಶಿವ ತಾನೆಂಬ ಉಭಯವನಲಂಕರಿಸಿದನಾಗಿ ಆತ್ಮಂಗೆ ಭಾವನೆಂಬ ಹೆಸರಾಯಿತ್ತು. ಆತ್ಮ ಬಂದು ಆಕಾಶವ ಕೂಡಿದಲ್ಲಿ ಜ್ಞಾನವೆಂಬ ಹೆಸರಾಯಿತ್ತು. ಆತ್ಮ ಬಂದು ವಾಯುವ ಕೂಡಿದಲ್ಲಿ ಅಹಂಕಾರವೆಂಬ ಹೆಸರಾಯಿತ್ತು. ಆತ್ಮ ಬಂದು ಅಪ್ಪುವ ಕೂಡಿದಲ್ಲಿ ಬುದ್ಧಿಯೆಂಬ ಹೆಸರಾಯಿತ್ತು. ಆತ್ಮ ಬಂದು ಪೃಥ್ವಿಯ ಕೂಡಿದಲ್ಲಿ ಚಿತ್ತೆಂಬ ಹೆಸರಾಯಿತ್ತು. ಚಿತ್ತು ಆಚಾರಲಿಂಗವ ಧರಿಸಿಪ್ಪುದು. ಬುದ್ಧಿ ಗುರುಲಿಂಗವ ಧರಿಸಿಪ್ಪುದು. ಅಹಂಕಾರ ಶಿವಲಿಂಗವ ಧರಿಸಿಪ್ಪುದು ಮನಸ್ಸು ಜಂಗಮಲಿಂಗವ ಧರಿಸಿಪ್ಪುದು. ಜ್ಞಾನ ಪ್ರಸಾದಲಿಂಗವ ಧರಿಸಿಪ್ಪುದು. ಭಾವ ಮಹಾಲಿಂಗವ ಧರಿಸಿಪ್ಪುದು. ಸೌರಾಷ್ಟ್ರ ಸೋಮೇಶ್ವರಲಿಂಗ ತಾನು ತಾನಾಗಿರಬೇಕು.
--------------
ಆದಯ್ಯ
ಅರಳಿದ ಪುಷ್ಪ ಪರಿಮಳಿಸದಿಹುದೆ? ತುಂಬಿದ ಸಾಗರ ನೊರೆತೊರೆಯಾಡದಿಪ್ಪುದೆ? ಆಕಾಶವ ಮುಟ್ಟುವ ದೋಂಟಿಗೋಲವಿಡಿವನೆ? ಪರಮಪರಿಣಾಮಿ, ಕರ್ಮವನತಿಗಳೆಯದಿಹನೆ, ಮಹಾಲಿಂಗ ಕಲ್ಲೇಶ್ವರಾ?
--------------
ಹಾವಿನಹಾಳ ಕಲ್ಲಯ್ಯ
ಅಪ್ಪು ಆಕಾಶವ ಬೆರಸಲು ಶಬ್ದ ಹುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಹುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರುಶನ ಹುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪ ಹುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಹುಟ್ಚಿತ್ತು. ಇಂತಿವು ಪಂಚವಿಷಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಹಾಮಲಸರೋವರದ ವರಾಹ ಆಕಾಶವ ನುಂಗಿ ಊರನಾಯಿಗಳ ಸಮ್ಮೇಳದಲ್ಲಿರುವುದು. ಊರಮಲವ ಭುಂಜಿಸಿ ಕೊಕ್ಕರನಾಗಿ ಮೂರುಲೋಕಕ್ಕೆ ಒಡೆಯನೆಂದು ಚಿಂತೆಯಿಲ್ಲದೆ ಇರುವುದು. ಅಂತಪ್ಪ ವರಾಹವ ಕೊಲ್ಲದೆ ಕಣ್ಣಕಳೆದು ಹೃದಯದಲ್ಲಿ ಹುದುಗಿರ್ದ ಮಹಾಕಾಳಜವ ತೆಗೆದುಕೊಂಡು ಸಲಿಸಬಲ್ಲಡೆ ಲಿಂಗೈಕ್ಯರೆಂಬೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->