ಅಥವಾ

ಒಟ್ಟು 62 ಕಡೆಗಳಲ್ಲಿ , 27 ವಚನಕಾರರು , 58 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ, ಆ ಗುಣ ಅರಿವೋ, ಮರವೆಯೋ ? ಹೋಗಲಂಜಿ, ಹಗೆಯ ಕೈಯಲ್ಲಿ ಹಾದಿಯ ತೋರಿಸಿಕೊಂಬಂತೆ, ತನ್ನನರಿಯದ ಯುಕ್ತಿ, ಇದಿರಿಂಗೆ ಅನ್ಯಬೋಧೆಯುಂಟೆ ? ಈ ಅನ್ಯಬ್ಥಿನ್ನಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ವ್ರತಾಚಾರವೆಂಬುದು ತನಗೊ, ತನ್ನ ಸತಿಗೊ, ಇದಿರ ಭೂತಹಿತಕೊ ? ತಾನರಿಯದೆ ತನಗೆ ವ್ರತ ಉಂಟೆ ? ವ್ರತಾಚಾರಿಗಳ ಗರ್ಭದಿಂದ ಬಂದ ಶಿಶುವ ಅನ್ಯರಿಗೆ ಕೊಡಬಹುದೆ ? ವ್ರತಾಚಾರವಿಲ್ಲದವರಲ್ಲಿ ತಂದು ವ್ರತವ ಮಾಡಬಹುದೆ ? ಇಂತೀ ತಮ್ಮ ಕ್ರೀವಂತರಲ್ಲಿಯೆ ತಂದು ಕ್ರೀವಂತರಲ್ಲಿಯೆ ಕೊಟ್ಟು ಉಭಯ ಬ್ಥಿನ್ನವಿಲ್ಲದೆ ಇಪ್ಪುದೆ ಸಜ್ಜನವ್ರತ, ಸದಾತ್ಮ ಯುಕ್ತಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಮುಕ್ತಿ.
--------------
ಅಕ್ಕಮ್ಮ
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ, ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ, ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ. ಇಂತೀ ತ್ರಿವಿಧವ ಮೆಚ್ಚಿ ಅಕಟಕಟಾ ಕೆಟ್ಟೆನೆಂದು ಗುರೂಪಾವಸ್ತೆಯಂ ಮಾಡಿ, ಗುರುವಾಕ್ಯ ಪ್ರಮಾಣವಿಡಿದು, ಆಚರಿಸುವ ಜ್ಞಾನಕಲಾತ್ಮನಿಗೆ ಈ ಲೋಕದ ಜಡಜೀವರು ಕಡುಪಾತಕರು ಬಂದು ಈ ಸಂಸಾರದಲ್ಲಿ ಪಾರಮಾರ್ಥವುಂಟು, ಇದರೊಳಗೆ ಸಾದ್ಥಿಸಬೇಕೆಂದು ಇಹ ಬಿಟ್ಟು ವೈರಾಗ್ಯದಲ್ಲಿ ಮೋಕ್ಷವಿಲ್ಲೆಂದು ಹೇಳುವರು. ಇದಕ್ಕೆ ಉಪಮೆ- ಹಿಂದೆ ಕಲ್ಯಾಣಪಟ್ಟಣಕ್ಕೆ ತಮ್ಮ ತಮ್ಮ ದೇಶವ ಬಿಟ್ಟು ಬಂದ ಗಣಂಗಳಾರಾರೆಂದಡೆ: ಮೋಳಿಗೆ ಮಾರತಂದೆಗಳು ಕಾಶ್ಮೀರದೇಶದ ಅರಸು. ನಿಜಗುಣಸ್ವಾಮಿಗಳು ಕೈಕಾಡದೇಶದ ಅರಸು. ನುಲಿಯ ಚಂದಯ್ಯನವರು ಕೈಕಾಣ್ಯದೇಶದ ಅರಸುಗಳು. ಇಂತಿವರು ಮೊದಲಾದ ಬಸವಾದಿ ಪ್ರಭುದೇವರಾಂತ್ಯಮಾದ ಏಳನೂರೆಪ್ಪತ್ತು ಪ್ರಮಥಗಣಂಗಳು. ತಮ್ಮ ತಮ್ಮ ದೇಶವ ಬಿಟ್ಟು ಕಲ್ಯಾಣಕ್ಕೆ ಬಂದರು. ಅವರೆಲ್ಲರು ಹುಚ್ಚರು, ನೀವೇ ಬಲ್ಲವರು. ಬಸವೇಶ್ವರದೇವರು ಮೊದಲಾಗಿ ಏಳನೂರೆಪ್ಪತ್ತು ಪ್ರಮಥಗಣಂಗಳು ಕೂಡಿ ತಮ್ಮ ತಮ್ಮ ಹೃನ್ಮಂದಿರದಲ್ಲಿ ನೆಲಸಿರುವ ಪರಶಿವಲಿಂಗಲೀಲಾವಿನೋದದಿಂ ಎರಡೆಂಬತ್ತೆಂಟುಕೋಟಿ ವಚನಗಳನ್ನು ಹಾಡಿಕೊಂಡರು. ಇದರನುಭಾವವ ತಿಳಿಯಬಲ್ಲರೆ ಹೇಳಿರಿ; ಅರಿಯದಿದ್ದರೆ ಕೇಳಿರಿ. ತನು-ಮನ-ಧನ ನೀನಲ್ಲ, ಪಂಚವಿಂಶತಿತತ್ವ ನೀನಲ್ಲ, ಪಂಚಭೂತಪ್ರಕೃತಿ ನೀನಲ್ಲ, ಮನ ಮೊದಲಾದ ಅರವತ್ತಾರುಕೋಟಿ ಕರಣಾದಿ ಗುಣಂಗಳು ನೀನಲ್ಲ. ಇಂತೀ ಎಲ್ಲವನು ನೀನಲ್ಲ, ನೀನು ಸಾಕಾರಸ್ವರೂಪಲ್ಲವೆಂದು ಸ್ವಾನುಭಾವಜ್ಞಾನಗುರುಮುಖದಿಂದ ತಿಳಿದು ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ, ಸಕಲಸಂಶಯವಂ ಬಿಟ್ಟು, ನಿಶ್ಚಿಂತನಾಗಿ, ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸೆಂದು ಹಾಡಿದರಲ್ಲದೆ ಅವರೇನು ದಡ್ಡರೇ? ನೀವೇ ಬಲು ಬುದ್ಧಿವಂತರು, ಬಲುಜಾಣರು ! ಇಂಥ ಯುಕ್ತಿ ವಿಚಾರವ ಹೇಳುವ ಮತಿಭ್ರಷ್ಟ ಹೊಲೆಯರ ಕಾಲು ಮೇಲಕ್ಕೆ ಮಾಡಿ, ತಲೆ ಕೆಳಯಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತು ಕುರಿಗಳ ಚರ್ಮವ ಹರಿದ ಹಾಗೆ ಹರಿದು, ಅವರ ತಿದಿಯನೆ ಹಿರಿದು, ಅವರ ಕಂಡವ ಕಡಿದು, ಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣಾ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಾಸನೆ ವೆಗ್ಗಳದ ಕುಸುಮವ, ಅದ ಲೇಸ ಕಂಡು ವಾಸಿಸಿದಡೆ ಸುಖವಲ್ಲದೆ, ಅದ ಘಾಸಿ ಎಸೆದಡೆ ಅದೇತರ ಗಂಧ ? ನಾತದ ಕೂಟ. ಭಕ್ತನ ಪೂಜೆಯ ಗುರುವಿನ ಯುಕ್ತಿ, ಇಷ್ಟನರಿತಡೆ ಆತನಿರವು, ತತ್ವದ ಬ್ಥಿತ್ತಿ, ಅಲೇಖನಾದ ಶೂನ್ಯ ಕಲ್ಲಿನ ಮೆಲ್ಲೆದೆಯಾಗದಿರಯ್ಯಾ.
--------------
ವಚನಭಂಡಾರಿ ಶಾಂತರಸ
ಒಂದಂಗಕ್ಕೆ ಮೂರು ಯುಕ್ತಿ ಬ್ಥಿನ್ನವಾದಂತೆ, ಬ್ಥಿನ್ನವೊಂದಂಗದಲ್ಲಿ ಕೂಡಿ ಚಕ್ಷುವಿನಲ್ಲಿ ಕಂಡು ನಡೆವಂತೆ, ಅದೆಂತೆಂದಡೆ: ನಡೆವ ಚರಣ ಗುರುಮಾರ್ಗವಾಗಿ, ಕೊಡುವ ಕರ ಚರಮಾರ್ಗವಾಗಿ, ಕೊಂಬ ಜಿಹ್ವೆ ಲಿಂಗದ ಒಡಲಾಗಿ, ನೋಡುವ ಚಕ್ಷು ತ್ರಿವಿಧವ ಕೂಡಿದ ಪರಮಪ್ರಕಾಶವಾಗಿ, ಇಂತಿವನೊಡಗೂಡಿ ಕಾಬ ಸದ್ಭಕ್ತನಂಗ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಕಂಗಳಲ್ಲಿ ನೋಡಿ, ಕೈಯ್ಯಲ್ಲಿ ಮುಟ್ಟಿ, ನಾಸಿಕ ವಾಸನೆಯನರಿದು ಜಿಹ್ವೆಗೆ ರುಚಿ ಮುಟ್ಟುವುದಕ್ಕೆ ಮುನ್ನವೆ ಮೃದು ರಿಠಣ ಕರಿಣ[ತರ] ತಾನರಿವುದಕ್ಕೆ ಮೊದಲೆ, ಲಿಂಗ ಮುಂತಾಗಿ ಅರ್ಪಿಸಿಕೊಂಬುದು ಅರ್ಪಿತ ಅವಧಾನಿಯ ಯುಕ್ತಿ. ರಸಘಟಿಕೆಯ ಮಣಿ ಅಸಿಯ ಮೊನೆಗೆ ನಿಲುವಂತೆ, ಲಿಂಗ ಅರ್ಪಿತಕ್ಕೂ ಅರಿವ ಚಿತ್ತಕ್ಕೂ ಎಡೆಬಿಡುವಿಲ್ಲದ ಪರಿಪೂರ್ಣವಾಗಿ ನಿಂದುದು ಭರಿತಾರ್ಪಣ, ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
ಸ್ವಪ್ನದ ಭಾಷೆ, ಮತ್ರ್ಯರ ಮುಟ್ಟದ ಭಕ್ತಿ ಚಿತ್ತವನರಿಯದೆ ಕಾಡುವನ ಯುಕ್ತಿ, ಮೃತ್ತಿಕೆಯ ಬೊಂಬೆಯು ಅಪ್ಪುವಿನ ಮಂದಿರಕ್ಕೆ ಹೋದಂತಾಯಿತ್ತು. ಐಘಟದೂರ ರಾಮೇಶ್ವರಲಿಂಗವನರಿ.
--------------
ಮೆರೆಮಿಂಡಯ್ಯ
ಆಳಿದೊಡೆಯರು ಮೇಳೈಸಿ ಕೆಳಗೆ ಬಂದಲ್ಲಿ ನಾಳೆಂದರೆ ಹಾಳಾಗಿ ಹೋಯಿತ್ತೆನ್ನ ಪತಿಭಾವದ ಬಾಳುವೆ. ಅಳಿಯಾಸೆಯೆಂಬ ಸುಳುಹೆನ್ನ ಕೆಡಿಸಿತ್ತು, ಎನಗೆಂತು ಭಕ್ತಿಸಂಭವಿಸುವದು ! ಎನಗೆಂತು ಯುಕ್ತಿ ಸಂಭವಿಸುವದು ! ತಪ್ಪೆನ್ನದು ತಪ್ಪೆನ್ನದು ಬಟ್ಟೆಗೆಟ್ಟು ಬಿದ್ದೆ ನಿಮ್ಮೊಳಗೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನು ಶುದ್ಧವಾಯಿತ್ತು ಬಸವಾ ಇಂದೆನ್ನ. ಮನ ಶುದ್ಧವಾಯಿತ್ತು ಬಸವಾ ಇಂದೆನ್ನ. ಭಕ್ತಿ ಯುಕ್ತಿ ಮುಕ್ತಿ ಶುದ್ಧವಾಯಿತ್ತು ಬಸವಾ ಇಂದೆನ್ನ. ಇಂತೀ ಸರ್ವವೂ ಶುದ್ಧವಾಯಿತ್ತು ಬಸವಾ ಇಂದೆನ್ನ. ನಮ್ಮ ಗುಹೇಶ್ವರಲಿಂಗಕ್ಕೆ ಆದಿಯಾಧಾರವಾದೆಯೆಲ್ಲಾ ಬಸವಣ್ಣಾ ನೀನಿಂದು.
--------------
ಅಲ್ಲಮಪ್ರಭುದೇವರು
ಅವಸರವರಿದು ಸಮಯಾಚಾರವ ಮಾಡಬೇಕಯ್ಯಾ, ಅವಸರವರಿದು ಸಮಯಭಕ್ತಿ ಸಂಬಂಧವ ಮಾಡಬೇಕಯ್ಯಾ, ಅವಸರವರಿದು ಮಾಡಬೇಕು, ಬಂದವಸರವ ತಪ್ಪಿಸಬಾರದು. ಕೂಡಲಚೆನ್ನಸಂಗನ ಸಮಯಾಚಾರಕ್ಕೆ ಇದೇ ಯುಕ್ತಿ.
--------------
ಚನ್ನಬಸವಣ್ಣ
ನಾನು ಭೃತ್ಯನಾಗಿದ್ದಲ್ಲಿ ಕರ್ತರ ಇರವ ವಿಚಾರಿಸೂದು ಭಕ್ತರ ಇರವಲ್ಲ, ಇದು ವಿಶ್ವಾಸದ ಯುಕ್ತಿ. ಇಷ್ಟಕಂಜಿ ಬಿಟ್ಟಡೆ ಮೊದಲು ಮೋಸವಾದಲ್ಲಿ ಲಾಭಕ್ಕೆಸರಿಹುದುಗುಂಟೆ? ಶರಣರ ಮರೆ ಮನಕ್ಕೆ ವಿರೋಧವುಂಟೆ? ಮಣ್ಣಿನ ಹೊದಕೆ ಮೈ ಜಲಕ್ಕೆ ನಿರ್ಮಲವಲ್ಲದೆ ಬ್ಥಿನ್ನಭಾವವಿಲ್ಲ. ಎನ್ನ ಮಾತು ನಿನಗೆ ಅನ್ಯವೆ, ನನ್ನಿಯಲ್ಲದೆ? ಅದಕ್ಕೆ ಬ್ಥಿನ್ನ ಭಾವವಿಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ, ತನು ಮನ ಧನವ ನಿವೇದಿಸಿ ಲಿಂಗವನಲ್ಲದೆ ಅನ್ಯವನರಿಯದಿಪ್ಪ ಮಹಾಮಹಿಮನು. ಆತನ ನುಡಿಯೇ ವೇದ, ಆತನ ನಡೆಯೇ ಆಗಮ, ಆತ ಮಾಡಿತ್ತೇ ಶಾಸ್ತ್ರ, ಆತ ಹೇಳಿತ್ತೇ ಪುರಾಣ, ಆತನಿದ್ದುದೇ ದೇವಲೋಕ. ಆತನುಪಮಾತೀತನು, ಆತನ ದರ್ಶನ ಸ್ಪರ್ಶನದಿಂದ ಪಾಪಕ್ಷಯ. ಆತನ ಪಾದೋದಕಸೇವನೆಯೊಳೆಲ್ಲರು ಜೀವನ್ಮಕ್ತರು ಕೇಳಿರಣ್ಣ. ಆ ಮಹಾಮಹಿಮನ ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಿರಣ್ಣ, ಬಸವರಾಜದೇವರು ಮೊದಲಾದ ಪುರಾತನರ ಚರಿತ್ರವನು. ಅವರು ಲಿಂಗವನರಿದು ಲಿಂಗಾರ್ಚನೆಯ ಮಾಡಿ ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಿ ಅಹುದೆನಿಸಿಕೊಂಡರಲ್ಲವೆ ? ಇದನರಿತು ಆವನಾನೊಬ್ಬನು ಆಷ್ಟಾದಶವಿದ್ಯೆ ಪುರಾಣವನೋದಿ ಕೇಳಿ ಹೇಳಿದರೇನೋ ಗಿಣಿ ಓದಿದಂತೆ ? ಸರ್ವಸಂಗಪರಿತ್ಯಾಗಿಯಾಗಿ ಅರಣ್ಯದೊಳಗಿದ್ದಡೇನು, ವನಚರವ್ಯಾಧನಂತೆ ? ಭೂಪ್ರದಕ್ಷಿಣೆ ಮಾಡಿ ಬಂದಡೇನು, ಮೃಗದಂತೆ ? ಅಶನವ ಬಿಟ್ಟಡೇನು, ಪರಾಕಿಯಂತೆ ? ವಿಷಯವ ಬಿಟ್ಟಡೇನು, ಅಶಕ್ತನಪುಂಸಕನಂತೆ ? ನಿದ್ರೆಯ ಬಿಟ್ಟಡೇನು, ಜಾರಚೋರರಂತೆ ? ಸಾಮಥ್ರ್ಯಪುರುಷರೆನಿಸಿ ಖೇಚರತ್ವದಲ್ಲಿದ್ದಡೇನು, ಪಕ್ಷಿಗಳಂತೆ ? ಜಲದಲ್ಲಿ ಚರಿಸಿ ಸಮುದ್ರಲಂಘನೆಯ ಮಾಡಿದಡೇನು, ಮತ್ಸ್ಯಾದಿಗಳಂತೆ ? ದಾನಾದಿಗಳ ಮಾಡಿದಡೇನು, ಕ್ಷತ್ರಿಯನಂತೆ ? ಏನ ಮಾಡಿದಡೇನು ? ಏನ ಕೇಳಿದಡೇನು ? ಸಾಮಾಥ್ರ್ಯಪುರುಷರೆನಿಸಿಕೊಂಡರೇನು ? ಫಲವಿಲ್ಲ, ಭಕ್ತಿಗೆ ಸಲ್ಲದು, ಮುಕ್ತಿಗೆ ಸಲ್ಲದು. ಇದರಿದು ಶಿವಲಿಂಗಾರ್ಚನೆಯ ಮಾಡುವುದು ಗುರು ಲಿಂಗ ಜಂಗಮಕ್ಕೆ ತನು ಮನ ಧನವ ನಿವೇದಿಸುವುದು. ನಿವೇದಿಸಿದಡೆ ಸರ್ವಸಿದ್ಧಿಯಹುದು. ಸಕಲಲೋಕಕ್ಕೆ ಪೂಜ್ಯನಹ, ಇದೇ [ಸ]ಲುವ ಯುಕ್ತಿ, ಇದೆ ಸದ್ಭಕ್ತಿ, ಇದೇ ಕೇವಲ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನಂತರಂಗದ ಆತ್ಮನೊಳಗೆ ಅಂಗವಿಲ್ಲದ ಅನಾಮಯನ ನೋಡಿ ಕಂಡೆನಯ್ಯ. ಆ ಪುರುಷನ ಮುಟ್ಟಿ ಹಿಡಿದು, ದರುಶನ ಸ್ವರುಷನವ ಮಾಡಿ ಕೂಡಿ ನೆರೆದಿಹೆನೆಂದರೆ ಚಿತ್ತ ಮನಕ್ಕೆ ಅಗೋಚರವಾಗಿಪ್ಪನಯ್ಯ. ಈ ಪುರುಷನ ಚಾರಿತ್ರ ವಿಪರೀತ ವಿಸ್ಮಯವಾಗಿದೆ ನೋಡಾ. ಆತನ ರೂಪು ಲಾವಣ್ಯ ಯುಕ್ತಿ ವಿಧಾನವ ಏನೆಂದುಪಮಿಸುವೆನಯ್ಯ? ಉಪಮಾತೀತ ಅವಿರಳಾತ್ಮಕ ಚಿದ್ರೂಪ ಕಾಣಿಭೋ. ಕೆಂಜೆಡೆಯ ಭಾಳನೇತ್ರಂ ರಂಜಿಪ ರವಿಕೋಟಿತೇಜದಿಂದುರವಣಿಸುತ್ತಿದಾನೆ ನೋಡಾ. ಕಂಜಪದಯಗಳದೊಳು ಹೊಳವುತ್ತಿದಾನೆ ನಂಜುಗೊರಳಭವ ಕಾಣಿಭೋ. ಭವರೋಗವೈದ್ಯ, ಭವಹರ, ಎನ್ನ ತಂದೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನು, ಎನ್ನ ಹೃದಯದಲ್ಲಿ ಕಂಡು, ಮನೋಭಾವದಲ್ಲಿ ಆರಾದ್ಥಿಸುತ್ತಿರ್ದೆನಯ್ಯ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿಲೆ ಕಾಷ*ದಲ್ಲಿ ಪಾವಕ ಜನಿಸುವ ಭೇದದಂತೆ, ಮಾಡುವ ಸತ್ಕ್ರೀ ಭೇದ. ಶಿಲೆಯ ವಹ್ನಿ ತಲೆದೋರಿ ಉಭಯವನುಳುಹಿದಂತೆ, ಗುರು ಚರದ ಯುಕ್ತಿ. ಕಾಷ*ದ ವಹ್ನಿ ತನ್ನಯ ಇರವ ಸುಟ್ಟು, ಹಲವು ಕಡೆಗೆ ಪರಿವಂತೆ, ಆತ್ಮನ ಭೇದ. ಇಂತೀ ನಾನಾ ವರ್ತಕಂಗಳಲ್ಲಿ ಕ್ರೀ ಶುದ್ಧವಾಗಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು.
--------------
ಶಿವಲೆಂಕ ಮಂಚಣ್ಣ
ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳು ಸಹಜವನೆತ್ತ ಬಲ್ಲರಯ್ಯಾ ? ಭಕ್ತಿ ಯುಕ್ತಿ ವಿರಕ್ತಿಯ ಪಥವನರಿಯದೆ ಸತ್ತು ಹುಟ್ಟುವ ಮುಕ್ತಿಗೇಡಿಗಳೆತ್ತ ಬಲ್ಲರಯ್ಯಾ ಲಿಂಗದ ನಿಜವ ? ಅರ್ಥವ ಹಿಡಿದು, ಅರಿವ ಮರೆದು, ಕರ್ತುಗಳಾಪ್ಯಾಯನವರಿಯದ ಅನುಮಾನಭರಿತ ಅಧಮರುಗಳೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗ ಶರಣರ ಘನವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->