ಅಥವಾ

ಒಟ್ಟು 34 ಕಡೆಗಳಲ್ಲಿ , 20 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ, ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ, ನಾನರಿಯದೆ ಕುರುಹ ಹಿಡಿದು, ಅದು ಎನ್ನ ಮರವೆಯ ಮನಕ್ಕೆ ತೆರಹಾಗದು. ನಾನರಿವಡೆ ಎನ್ನ ಒಡಗೂಡಿದ ತುಡುಗುಣಿ ಬೆನ್ನಬಿಡದು. ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ ? ಬಿಡು ಬಡವೊಡೆಯನ, ಬಿಡದಿದಡೆ ಕಲ್ಲೆದೆಯಾಗು. ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ ಕಠಿಣವ ನಂಬಿ. ಇದರ ಬಲ್ಲತನವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ
--------------
ವಚನಭಂಡಾರಿ ಶಾಂತರಸ
ಬಳಿಕ್ಕಮೀ ಸಾಮಾನ್ಯಾಂಗ ಮಂತ್ರದೇವತೆಗಳಂ ಸೂಚನಮಂತ್ರದಿಂ ಸೂಚಿಸುವೆನೆಂತೆನೆ- ವಿಧಿ ವಿಷ್ಣು ಪುರಂದರ ರವಿ ಶಶಿ ಗುಹ ಭೈರವ ವಿಘ್ನೇಶಾಷ್ಟಮೂರ್ತಿ ವಸು ವಿದ್ಯೇಶ ಗಣೇಶ ಲೋಕಪಾಲ ವಜ್ರಾದ್ಯಾಯುಧ ಸಿದ್ಧರ ಗಂಧರ್ವಾಪ್ಸರೋ ಯಕ್ಷ ಕಿನ್ನರ ಭೂತ ಮುನಿ ಖೇಚರರೆಂಬಿವ- ರಿನ್ನುಳಿದ ಸಕಲ ದೇವತೆಗಳಾದ ನಾಮಂಗಳಂ ವರ್ಣಪಟದಲ್ಲಿ ಪೇಳ್ದೇಕೈಕಬೀಜಾಕ್ಷರಂಗಳ ಮೇಲೆ ಪಿಂದೆ ಪೇಳ್ದ ಷಟ್‍ಸ್ವರಂಗಳಂ ಪತ್ತಿಸಿ ಕಾರ್ಯ ಕಾರಣದೊಡವೆರಸಿ ಮೊದಲಂತೆ ಕಾಂ ಕೀಂ ಕೂಂ ಕೈಂ ಕೌಂ ಕಃ ಎಂದಾಯಿತ್ತಿದು ವಿಧಿವೆಸರಿದರಂತೆಲ್ಲಮಂ ನೋಡಿಕೊಂಬುದಿದು ಸಾಮಾನ್ಯಾಂಗವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ, ಷಕಾರವೇ ಜೇಷೆ*, ಶಕಾರವೇ ರೌದ್ರಿ, ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ, ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ, ಔಕಾರವೇ ಶರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಲೂೃಕಾರವೇ ಭೀಮ, ಲೃಕಾರವೇ ಉಗ್ರ, Iೂಕಾರವೇ ಪಶುಪತಿ, ಋಕಾರವೇ ಉಮೇಶ್ವರ, ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ, ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ, ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ, ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ. ಟಕಾರವೇ ಯಮ, ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ, ಢಕಾರವೇ ವಾಯುವ್ಯ, ಣಕಾರವೇ ಕುಬೇರ, ತಕಾರವೇ ಈಶಾನ್ಯ, ಥಕಾರವೇ ಧರಾ, ದಕಾರವೇ ಧ್ರುವ, ಧಕಾರವೇ ಸೋಮ, ನಕಾರವೇ ಅಪ್ಪು, ಪಕಾರವೇ ಅನಿಲ, ಫಕಾರವೇ ಅನಲ, ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು, ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ, ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ, ಗಣೇಶ್ವರ, ವೃಷಭೇಶ್ವರ, ಅನಂತ, ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*, ಮಹಾಕಾಳ, ಭೃಂಗರೀಟಿ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ, ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ, ಉಮೇಶ್ವರ, ಪಶುಪತಿ, ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ, ಅರುಣ, ಅಸುರ, ಗಂಹ್ವರ, ವೇಗ, ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ, ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ, ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ, ರುದ್ರ, ಶರ್ವ, ಸೋಮ, ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ, ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ, ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ, ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹುಸಿಯೆಂಬ ಅಲಗಿಂಗೆ ಒಡಲೆ ಗುರಿಯಾಯಿತ್ತು ಏನೆಂಬೆನೇನೆಂಬೆ ವಿಧಿ ಮಾಡಿತ್ತ. ಸಮೆದ ಮಾಡಿಗಳು ನೆಲೆಗೊಳ್ಳದೆ ಹೋದವು. ಮಹಾಲಿಂಗ ತ್ರಿಪುರಾಂತಕನ ಶರಣರೆ ಎನ್ನೊಡೆಯರೆಂದರಿಯದೆ ಇದ್ದ ಕಾರಣ ತೆರಹು ಮರಹಿನಲ್ಲಿ ತಾವೆಡೆಗೊಂಡವು.
--------------
ಕಿನ್ನರಿ ಬ್ರಹ್ಮಯ್ಯ
ಪೂಜೆಯಿಂದ ತಾ ಪೂಜ್ಯವಂತನಾದೆಹೆನೆಂದು ಮಾಡುವನ ಇರವು, ಹೊಲತಿ ತನ್ನ ಹೊಲೆಯ ಮರೆದು, ಶುದ್ಧನೀರ ಮಿಂದೆನೆಂದು ಕೆಲಬರ ಮುಟ್ಟುವಂತೆ, ಆ ವಿಧಿ ನಿಮಗಾಯಿತ್ತು. ತ್ರಿಕರಣಶುದ್ಧವಿಲ್ಲದ ಪೂಜೆ[ಯ]ವರು ಕೆಟ್ಟ ಕೇಡಿಂಗೆ ಇನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಇನ್ನು ರುದ್ರಾಕ್ಷಿಸ್ಥಲವೆಂತೆಂದಡೆ : ಬ್ರಹ್ಮ ವಿಷ್ಮು ರುದ್ರ ಮೊದಲಾದ ಸಮಸ್ತ ದೇವರ್ಕಳು ತ್ರಿಪುರದ ರಾಕ್ಷಸರ ಉಪದ್ರಕ್ಕೆ ಭೀತರಾಗಿ ರುದ್ರಲೋಕದ ಮಹಾರುದ್ರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ ಚಿಂತಾಕ್ರಾಂತರಾಗಿ ನಿಲಲು, ಆ ರುದ್ರಲೋಕದ ಮಹಾರುದ್ರನು ತ್ರಿಪುರವಧಾರ್ಥ ಸರ್ವದೇವಮಯ ದಿವ್ಯ ಅನಂತತೇಜ ಅನಂತಪ್ರಚಯ ಅನಂತಜ್ವಾಲಾಮಯವಾಗಿಹ ಅಘೋರರೂಪ ತಾಳಿ ಉತ್ತಮವಾದ ಅಘೋರಾಸ್ತ್ರಮಂ ಚಿಂತಿಸಿ, ತ್ರಿಪುರದ ಕೀಲ ದಿವ್ಯಸಹಸ್ರವರ್ಷ ನೋಡಲು ಆ ರುದ್ರನ ಅಕ್ಷಿಯಲ್ಲಿ ರಕ್ತಾಶ್ರುಜಲಬಿಂದುಗಳು ಜನಿಸಿ ಭೂಮಿಯ ಮೇಲೆ ಬೀಳಲು ಮಹಾರುದ್ರಾಕ್ಷ ವೃಕ್ಷವಾಗಿ ತ್ರೈಲೋಕ್ಯಾನುಗ್ರಹ ಕಾರಣವಾಯಿತ್ತು ನೋಡಾ. ಆ ರುದ್ರಾಕ್ಷಿಯ ದರುಶನದ ಫಲ ಲಿಂಗದರುಷನದ ಫಲ, ರುದ್ರಾಕ್ಷಿಯ ದರುಶನ ಸ್ಪರ್ಶನದಿಂದ ಸರ್ವಪಾಪಂಗಳು ಹೋಹವು ನೋಡಾ. ಇದಕ್ಕೆ ಈಶ್ವರೋsವಾಚ : ``ಶ್ರುಣು ಷಣ್ಮುಖ ಯತ್ನೇನ ಕಥಯಾಮಿ ಸಮಾಸತಃ | ತ್ರಿಪುರೋ ನಾಮ ದೈತ್ಯಸ್ತು ಪುರಶ್ಚಿತ್ತು ಸುರರ್ಜಯಃ || ಚಿತ್ತಾಪ್ತೇವ ಸುರಾಸ್ಸರ್ವೇ ಬ್ರಹ್ಮ ವಿಷ್ಣೇಂದ್ರದೇವತಾಃ ಚಿಂತಿತಂ ಚ ಮಯಾ ಪುತ್ರ ಅಘೋರಾಸ್ತ್ರಮನುತ್ತಮಂ|| ಸರ್ವದೇವಮಯಂ ದಿವ್ಯಂ ಜ್ವಲಿತಂ ಘೋರರೂಪಕಂ | ತ್ರಿಪುರಸ್ಯ ವಧಾರ್ಥಾಯ ದೇವಾನಾಂ ಪ್ರಾಣವಾಯು ಚ || ಸರ್ವವಿಘ್ನಪ್ರಶಮನಂ ಅಘೋರಾಸ್ತ್ರಂತು ಚಿಂತಿತಂ | ದಿವ್ಯವರ್ಷಸಹಸ್ರಾಣಿ ಚಕ್ಷುರುನ್ಮೀಲಿತಂ ಮಯಾ || ಘಟೇಭ್ಯಾಂ ಚ ಕುಲಾಕ್ಷಿಭ್ಯಾಂ ಪತಿತಾ ಜಲಬಿಂದವಃ | ರಕ್ತಾಶ್ರುಬಿಂದವೋ ಜಾತಾಃ ಮಹಾರುದ್ರಾಕ್ಷವೃಕ್ಷಕಾಃ || ಸ್ಥಾವರತ್ವಮನುಪ್ರಾಪ್ಯ ಮತ್ರ್ಯಾನುಗ್ರಹಕಾರಣಾತ್ | ರುದ್ರಾಕ್ಷಾಣಾಂ ಫಲಂ ಧೃತ್ವಾ ತ್ರಿಷು ಲೋಕೇಷು ವಿಶ್ರುತಂ || ಲಿಂಗಸ್ಯ ದರ್ಶನೇ ಪುಣ್ಯಂ ಭವೇತ್‍ರುದ್ರಾಕ್ಷದರ್ಶನಾತ್ | ಭಕ್ತ್ಯ ರಾತ್ರೋ ದಿವಾಪಾಪಂ ದಿವಾರಾತ್ರಿ ಕೃತಂ ಹರೇತ್ || ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನೇ ಭವೇತ್ | ತತ್ಕೋಟಿ ಶತಂ ಪುಣ್ಯಂ ಲಭತೇ ಧಾರಣಾನ್ನರಃ || ಲಕ್ಷಕೋಟಿ ಸಹಸ್ರಾಣಿ ಲಕ್ಷಕೋಟಿ ಶತಾನಿ ಚ | ತಜ್ಜಪಾಲ್ಲಭತೇ ಪುಣ್ಯಂ ನಾತ್ರ ಕಾರ್ಯಂ ವಿಚಾರಣಾತ್ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋoವಾಚ : ``ಶಿರೋಮಾಲಾ ಚ ಷಟ್ತ್ರಿಂಶದ್ವಾತ್ರಿಂಶತ್ಕಂಠಮಾಲಿಕಾ | ಕೂರ್ಪರೇ ಷೋಡಶ ಪ್ರೋಕ್ತಾ ದ್ವಾದಶಂ ಮಣಿಬಂಧಯೋಃ || ಉರೋಮೂಲಾಚ ಪಂಚಾಶತಷ್ಟೋತ್ತರಶತಂ ತಥಾ | ಶಿರಸಾ ಧಾರಯತ್ಕೋಟಿ ಕರ್ಣಾಭ್ಯಾಂ ದಶಕೋಟಿಯಃ || ಗಳೇ ಬಂಧಂ ಶತಂ ಕೋಟಿ ಮೂಧ್ರ್ನಿ ಕೋಟಿಸಹಸ್ರಕಂ | ಆಯುಕಂಠೋಪವಿತ್ತಂ ಚ ಲಕ್ಷಮಾವೇ ಮಣಿಬಂಧಯೋರ್ಣ ವಕ್ತ್ರಾಣಿ | ದ್ವಾದಶಾದಿತ್ಯಾದಿ ಪಾಯು ಶ್ರೀಮಹಾದೇವಾಯ ನಮಃ || ಅಷ್ಟೋತ್ತರಶತಂ ಸೋಪವಿ ತ್ತಂ ಚತುರ್ದಶ ವಕ್ತ್ರಾಣಿ | ಶತರುದ್ರಾತ್ಮಾಕಾಯ ಶ್ರೀ ವಿಶ್ವೇಶ್ವರಾಯ ನಮಃ ಇತಿ ||'' ಇಂತೆಂದುದಾಗಿ, ಇದಕ್ಕೆ ಬೋಧಾಯನಶಾಖಾಯಾಂ : ``ತಾನಿ ಹವಾಏತಾನಿ ರುದ್ರಾಕ್ಷಾಣಿ ಯತ್ರ ಯೋ ಯೇ ಧಾರಯಂತಿ ಕಸ್ಮಾದೇವ ಧಾರಯಂತಿ ಸ್ನಾತ್ತ್ವಾನಿ ಧಾರಯನ್ ಗರ್ಭೇ ತಿಷ್ಟನ್ ಸ್ವಪನ್ ಖಾದನ್ ಉನ್ಮಿಷನ್ ಅಪಿ ಸರ್ವಾಣೈವಾನಿ ಚರತಿ ಮದ್ರಿ ಭೂತ್ವಾ ರುದ್ರೋ ಭವತಿ ಯೋಯೇನ ವಿದ್ವಾನ್ ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋಯತಿರ್ವಾ ಧಾರಯೇತ್ ಪದೇ ಪದೇ ಯಶ್ವಮೇಧಫಲಂ ಪ್ರಾಪ್ನೋತಿ ||'' ಇಂತೆಂದುದು ಶ್ರುತಿ. ಇದಕ್ಕೆ ಲೈಂಗ್ಯಪುರಾಣೇ : ``ರುದ್ರಾಕ್ಷಂ ಧಾರಯೇದ್ವಿಪ್ರಃ ಸಂಧ್ಯಾದಿಷು ಚ ಕರ್ಮಸು | ತತ್ಸರ್ವಂ ಸಮವಾಪ್ನೋತಿ ಕೋಟಿ ಕೋಟಿ ಗುಣಂ ಸದಾ || ಸ್ನಾನೇ ದಾನೇ ಜಪೇ ಹೋಮೇ ವೈಶ್ಯದೇವೇಷುರರ್ಚನೆ | ಪ್ರಾಯಶ್ಚಿತ್ತೇ ಕಥಾ ಶ್ರಾದ್ಧೇ ದೀಕ್ಷಾಕಾಲೇ ವಿಶೇಷತಃ || ರುದ್ರಾಕ್ಷಧರೋ ಭೂತ್ವಾ ಯತ್ಕಿಂಚಿತ್ಕರ್ಮವೈದಿಕಂ | ಕುರ್ಯಾದ್ವಿಪ್ರಸ್ತು ಯೋ ಮೋಹ ವಂಶಾವಪ್ನೋತಿ ತತ್ಫಲಂ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾಲ್ಲಭತೇ ವರಂ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಹಸ್ತೇಚೋರಸಿ ಕಂಠೇ ವಾ ಮಸ್ತಕೇ ವಾsಪಿ ಧಾರಯೇತ್ | ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಶಿಖಾಯಾಂ ಧಾರಯೇದೇಕಂ ಷಟ್ತ್ರಿಂಶನ್ಮಸ್ತಕೇ ತಥಾ| ದ್ವಾತ್ರಿಂಶತ್ಕಂಠದೇಶೇಚ ಪಂಚಾಷಣ್ಮಾಲಿಕಾ ಹೃದಿ || ಷೋಡಶಂ ಬಾಹುಮೂಲಯೋಃ ದ್ವಾದಶಂ ಮಣಿಬಂಧಕೇ | ಕರ್ಣಯೇಕೀಕಮೇಶುಸ್ಯಾ ದುಪವಿತೇ ಶತಾಷ್ಟಕಂ || ಶತಾಷ್ಟಮಕ್ಷಮಾಲಾಂತು ನಿತ್ಯಂ ಧಾರಯೇತೇ ವರಃ | ಪದೇ ಪದೇsಶ್ವಮೇಧಸ್ಯ ಫಲಂ ಪ್ರಾಪ್ನೋತಿ ನ ಸಂಶಯಃ || ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ರುದ್ರಾಕ್ಷ ಶತಕಂಠೋ ಯಃ ಗೃಹೇ ತಿಷ*ತಿ ಯೋ ವರಃ | ಕುಲೈಕವಿಂಶಮುಕ್ತಾರ್ಯ ಶಿವಲೋಕೇ ಕೋಟಿಭುಜದ್ವಯಂ | ಅಪ್ರಮೇಯ ಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಅವದ್ಯಃ ಸರ್ವಭೂತಾನಾಂ ರುದ್ರವದ್ವಿಚರೇತ್ ಭುವಿ | ಸುರಾಣಾಮಸುರಾಣಾಂ ಚ ವಂದನೀಯೋ ಯಥಾ ಶಿವಃ || ರುದ್ರಾಕ್ಷರಧಾರಶೋ ನಿತ್ಯಂ ವಂದನೀಯೋ ನರೈರಿಹ | ಉಚ್ಛಿಷ್ಟೋ ವಾ ವಿಕರ್ಮಸ್ತೋ ಯುಕ್ತೋ ವಾ ಸರ್ವಪಾಪಕೈಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಇಂತೆಂದುದಾಗಿ ಇದಕ್ಕೆ ಕಾತ್ಯಾಯನಶಾಖಾಯಾಂ : ``ಅಥೈವ ಭಗವಂತಂ ರುದ್ರಕುಮಾರಃ ಪಪ್ರಚ್ಛಾರಣೇನ ದಶಶತ ಗೋದಾನಫಲಂ || ದರ್ಶನಸ್ಪರ್ಶನಾಭ್ಯಾಂ ದ್ವಿಗುಣಂ ತ್ರಿಗುಣಂ ಫಲಂ ಭವತಿ, ಅತ ಊಧ್ರ್ವಂ ವಕ್ತುಂ ನ ಶಕ್ನೋಮಿ ತತೋಂ ಜಪ ಸಮಂತ್ರಕಂ ಧಾರಣೇ ವಿಧಿಂ ಕಥಯಾಮಿ || ಸ್ನಾನ ವಿಧಿನಾ ಸ್ನಾತೇಷು ಖೇರಾಜ್ಞೇಯ ಸ್ನಾನಂ ತ್ರಿಪುಂಡ್ರಧಾರಣಂ ಕೃತ್ವಾ ಏಕಾಶ್ಯಾದಿರುದ್ರ ಶಾಂತಾನಾಂ || ಸೃಷ್ಟಿಕ್ರಮೇಣಂ ಮಂತ್ರಾಸ್ಯಂ `ಓಂ ಹೂಂ ಚಂ ಖಂ ಹೂಂ ಕ್ಲಿಂ ಮಾಂ ದ್ರಾಂ ದ್ರಿಂ ಹ್ರುಂ ಕ್ರೂಂ ಕ್ಷಾಂ ಕ್ಷಿಂ ಕ್ಷುಂ' ನವಮಿತೀಷುರುವೋಕ್ತ ಂ ಮಂತ್ರಾನನಂತಾ ಶೋಕ್ತ್ವಾನ್ವಾ ಜಪೇದಿಮಾನ್ ಪಾಣಾನಾಯಮ್ಯ ಸಮಸ್ತಪಾಪಕ್ಷಯಾರ್ಥಂ ಶಿವಜ್ಞಾನಾ ವಸ್ಯಾರ್ಥ ಸಮಸ್ತ ಮಂತ್ರಸ್ಸಹಧಾರಣಂ ಕರಿಷ್ಯಾಮಿತಿ ಸಂಕಲ್ಪ್ಯ ಶಿಖಾಯಾಮೇಕಮೇಕಸ್ಯಂ ಶ್ರೀ ಸದಾಶಿವಾಯ ನಮಃ ಇತಿ ||'' ``ದ್ವಿ ತ್ರಿ ದ್ವಾದಶವಕ್ತ್ರಾಣಿ ಶಿರಸಿ ತ್ರೀಣಿ ಧಾರಯೇತ್ | ವಹ್ನಿ ಸೂರ್ಯಸೋಮಾಧಿಪಾಯ ಶಿವಾಯ ನಮಃ ಇತಿ || ಏಕಾದಶ ವಕ್ತ್ರಂ ಷಟ್ತ್ರಿಂಶನ್ಮೂಧ್ರ್ನಿ ಷಟ್ತ್ರಿಂಶತ್ತತ್ವಾತ್ಮಕಾಯ | ನಮ ಇತಿ ಪಂಚದಶ ವಕ್ತ್ರಾಣಿ ಕರ್ಣಯೋರೇಕಮೇಕಂ || ಸೋಮಾಯ ನಮಃ ಇತಿ, ಯೇದಷ್ಟವಕ್ತ್ರಾಣಿ ಕಂಠೇ ದ್ವಾತ್ರಿಂಶತ್ | ತ್ರ್ಯಂಬಕಕಲಾತ್ಮನೇ ಶ್ರೀಕಂಠಾಯ ನಮಃ ಇತಿ || ಚತುರ್ವಕ್ತ್ರಂ ಪಂಚಷಣ್ಮಾಲಿಕಾಮುರಸಿ ಶ್ರೀಕಂಠಾದಿ | ಮೂತ್ರ್ಯಾಯಸ್ಥಿಕಾಯ ಶ್ರೀ ಸರ್ವಜ್ಞಾಯ ನಮಃ ಇತಿ || ಬಾಹೋ ತ್ರಯೋದಶವಕ್ತ್ರಾಣಿ ಷೋಡಶಸುಖಾಸನಾದಿ | ಷೋಡಶಮೂತ್ರ್ಯಾತ್ಮಕಾಯ ಶ್ರೀಕಂಠಾಯ ನಮಃ ಇತಿ || ದಕ್ಷೇರ್ಣವ ವಕ್ತ್ರಾಣಿ ಶ್ರೀ ವ್ಯೋಮಕಳಾತ್ಮಕಾಯ ಉಪಮಾಪತಯೇ ನಮಃ ಇತಿ ಉಪಾಯತೇ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ರುದ್ರಾಕ್ಷಮಾಲಯಾ ಶುಭ್ರೋ ಜಟಾಜೂಟವಿರಾಜಿತಃ | ಭಸ್ಮಾವಲಿಪ್ತಸರ್ವಾಂಗಃ ಕಮಂಡಲುಕರಾನ್ವಿತಃ || ಕೃಷ್ಮಾಜಿನೋ ಪವಿತ್ರಾಂಗಃ ಆಶಾಹೆ ಪುಣ್ಯಕೀರ್ತನಃ | ಶಿವಃ ತಸ್ಮೆ ೈಃ ಮಹಾದೇವಂ ಯೋಗಿನಾಂ ಹೃದಯಾಲಯಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಧಾರಣಾಸ್ಸರ್ವೇ ಜಟಾಮಂಡಲಧಾರಣಾತ್ | ಅಕ್ಷಮಾಲಾರ್ಪಿತಕರಂ ತ್ರಿಪುಂಡ್ರಾಪಲಿಯುಕ್ತಾಂಗಂ | ಆಷೇಡೇವ ವಿರಾಜಿತಂ ಋಗ್ಯಜುಃಸಾಮರೂಪೇಣ | ಸೇವತೇಸ್ಮೈ ಮಹೇಶ್ವರಃ ಸಂಸ್ಥಾಯಮನೋದಿಷ್ಟಾಂಗೈ || ದೇವೈರ್ಮುನಿಗಣೈಸ್ತಥಾಮೃತ ತ್ರಿಪುಂಡ್ರಕೋ ದಿವ್ಯೇ | ರುದ್ರಾಕ್ಷೇಶ್ವ ವಿಭಾಷಿತಃ ಶುಭೇ ಸತತಂ ವಿಷ್ಟು| ಭಸ್ಮದಿಗ್ಧತಮೂಲತಃ ತ್ರಿಪುಂಡ್ರಾಂಕಿತ ಸರ್ವಾಂಗೋ | ಜಟಾಮಂಡಲಮಂಡನ ಭೂತಿ ತ್ರಿಪುಂಡ್ರರುದ್ರಾಕ್ಷಂ | ಅಕ್ಷರ ಮಾಲಾರ್ಪಿತಕರಃ ಕುರ್ವಕ್ತ್ರಃ ಪಿತಾಮಹಾ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋವಾಚ : ``ಭಾಲೇ ತ್ರಿಪುಂಡ್ರಕಂ ಚೈವ ಗಳೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರೀ ಮಂತ್ರೋ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಮಾಲಿಕಾ ಕಂಠೇ ಧಾರಸ್ತದ್ಭಕ್ತಿವರ್ಜಿತಃ | ಪಾಪಕರ್ಮಾಪಿ ಯೋ ನಿತ್ಯಂ ರುದ್ರಲೋಕೇ ಮಹೀಯತೇ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ರುದ್ರಾಕ್ಷಂ ಕಂಠಮಾಶ್ರಿತ್ಯ ಶ್ವಾನೋsಪಿ ಮಿೃಯತೇ ಯದಿ | ಸೋsಪಿ ರುದ್ರಂ ಸಮಾಪ್ನೋತಿ ಕಿಂ ಪುನರ್ಮಾನುಷಾದಯಃ || ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜೇಷ್ವಪಿ | ಸದ್ಯೋ ಭವತಿ ಪೂತಾತ್ಮಾ ರುದ್ರಾಕ್ಷೌ ಶಿರಸಿ ಸ್ಥಿತೇ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಶುಚಿರ್ವಾಪ್ಯಶುಚಿರ್ವಾಪಿ ಅಭಕ್ಷಸ್ಯ ಚ ಭಕ್ಷಣಾತ್ | ಅಗಮ್ಯಾಗಮನಂ ಚೈವ ಬ್ರಹ್ಮಹಾ ಗುರುತಲ್ಪಕಃ || ಮ್ಲೇಚ್ಛೋ ವಾಪ್ಯಥ ಚಾಂಡಾಲೋ ಯುಕ್ತೋ ವಾ ಪ್ಯಥ ಪಾತಕೈಃ | ರುದ್ರಾಕ್ಷಧಾರಣಾದ್ಯಸ್ತು ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಧ್ಯಾನಧಾರಣಹೀನೋsಪಿ ರುದ್ರಾಕ್ಷಂ ಯೋ ಹಿ ಧಾರಯೇತ್ | ಸರ್ವಪಾಪವಿನಿರ್ಮುಕ್ತಃ ಸಯಾತಿ ಪರಮಾಂ ಗತಿಂ||'' ಇಂತೆಂದುದಾಗಿ, ಇದಕ್ಕೆ ಮಾನವಪುರಾಣೇ : ``ಮೃಣ್ಮಯಂ ವಾಪಿ ರುದ್ರಾಕ್ಷಂ ಕೃತ್ವಾ ಯಸ್ತು ಧಾರಯೇತ್ | ಅಪಿ ದುಃಕೃತಕರ್ಮೋsಪಿ ಸ ಯಾತಿ ಪರಮಾಂ ಗತಿಂ ||'' ಇಂತೆಂದುದಾಗಿ, ಇದಕ್ಕೆ ಶಿವಲಿಂಗಾಗಮೇ : ``ರುದ್ರಾಕ್ಷಮಾಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಇಂತೆಂದುದಾಗಿ, ``ರುದ್ರಾಕ್ಷಿಯ ಧರಿಸಿಪ್ಪಾತನೆ ರುದ್ರನು. ಆತನ ಭವರೋಗಂಗಳು ಹೊದ್ದಲಮ್ಮವು ನೋಡಾ. `ಏವಂ ರುದ್ರಾಕ್ಷಧಾರಣಾದ್ ರುದ್ರಾ' ಎಂದುದು ಶ್ರುತಿ. ರುದ್ರಾಕ್ಷಿಯ ಧರಿಸಿಪ್ಪ ಶರಣರಿಗೆ ಶರಣೆಂದು ಬದುಕಿದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹರನ ಭಜಿಸುವುದು, ಮನಮುಟ್ಟಿ ಭಜಿಸಿದೆಯಾದಡೆ ತನ್ನ ಕಾರ್ಯ ಘಟ್ಟಿ. ಅಲ್ಲದಿರ್ದಡೆ ತಾಪತ್ರಯ ಬೆನ್ನಟ್ಟಿ ಮುಟ್ಟಿ ಒತ್ತಿ ಮುರಿದೊಯ್ವುದು, ವಿಧಿ ಹೆಡಗಯ್ಯ ಕಟ್ಟಿ ಕುಟ್ಟುವುದು. ಕೂಡಲಸಂಗನ ಶರಣರ ದೃಷ್ಟಿಯವನ ಮೇಲೆ ಬಿದ್ದವ ಜಗಜಟ್ಟಿ.
--------------
ಬಸವಣ್ಣ
ಇದ ಮಾಡಬಹುದೆಂಬ, ಇದ ಮಾಡಬಾರದೆಂಬ ಪುಣ್ಯ ಪಾಪ ರೂಪಾದ, ವಿಧಿ ನಿಷೇಧಂಗಳಿಂದಾದ, ಶುಭಾಶುಭಂಗಳನು ಮೀರಿದ, ಭಕ್ತಿ ಮುಕ್ತಿಗಳೆರಡೂ ಲಿಂಗಾರ್ಪಿತವಾಗಿ, ತಾ ಲಿಂಗದೊಳಗಡಗಿದ ಬಳಿಕ, ಪುಣ್ಯ ಪಾಪದ ಫಲಭೋಗಂಗಳು ತನಗೆ ಮುನ್ನವೇ ಇಲ್ಲ, ಇಂತಪ್ಪ ಸ್ವತಂತ್ರ ಶರಣನೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ತಾನೇ.
--------------
ಸ್ವತಂತ್ರ ಸಿದ್ಧಲಿಂಗ
ಒಡಲುಗೊಂಡ ಮಾನವರೆಲ್ಲರು ನೀವು ಕೇಳಿರೆ, ಬಿಡದೆ ಕಾಡುವುದು ವಿಧಿ ಮೂರುಲೋಕವನೆಲ್ಲ. ಒಡಲು ಒಡವೆಯನು ಒಲ್ಲೆನೆಂಬವರುಗಳಿಗೆ ತೊಡರನಿಕ್ಕಿತ್ತು ಮಾಯೆ. ಆರುದರ್ಶನಕ್ಕೆಲ್ಲ ಮಡದಿ ಮಕ್ಕಳನೊಲ್ಲೆನೆಂಬ ಹಿರಿಯರಿಗೆಲ್ಲ ತೊಡರನಿಕ್ಕಿತ್ತು ಮಾಯೆ. ಮೃಡ ಮೊದಲಾದ ಹರಿ ವಿರಿಂಚಿಗಳನೆಲ್ಲರನು ಕೋಡಗದಾಟವ ಆಡಿಸಿತ್ತು, ಗುಹೇಶ್ವರಾ ನಿಮ್ಮ ಮಾಯೆ
--------------
ಅಲ್ಲಮಪ್ರಭುದೇವರು
ಸ್ಥಳಕುಳವನೆತ್ತಿದಲ್ಲಿ ಸಮಯಕ್ಕೆ ದೂರ. ಚಿದ್ಘನ ಭೇದ ಭೇದಾಂತವನೆತ್ತಿದಲ್ಲಿ ಅಧ್ಯಾತ್ಮಕ್ಕೆ ದೂರ. ಸರ್ವವು ಸಮವೆಂದಡೆ ವಿಧಿ ನಿಷೇಧ ಕಾಲಕರ್ಮಕ್ಕೊಳಗಹರುಂಟು. ಅದು ತನ್ನೊಪ್ಪದ ದರ್ಪಣದಂತೆ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇಂದ್ರನ ಮೈಯ ಯೋನಿಯ ಮಾಡಿತ್ತು ಮಾಯೆ. ಬ್ರಹ್ಮನ ತಲೆಯ ಕಳೆಯಿತ್ತು ಮಾಯೆ. ವಿಷ್ಣುವಿನ ಕಷ್ಟಬಡಿಸಿತ್ತು ಮಾಯೆ. ಚಂದ್ರನ ಕ್ಷಯರೋಗಿಯ ಮಾಡಿತ್ತು ಮಾಯೆ. ರವಿಯ ಕೊಷ*ನ ಮಾಡಿತ್ತು ಮಾಯೆ. ಈ ಮಾಯೆಯೆಂಬ ವಿಧಿ ಆರಾರನೂ ಕೆಡಿಸಿತ್ತು ನೋಡ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಕ್ತಿಯರಿಯಿರಿ, ಭಕ್ತರಾದ ಪರಿಯೆಂತಯ್ಯಾ ? ಭಾವಶುದ್ಧವಿಲ್ಲ, ಮಹೇಶ್ವರರೆಂತಪ್ಪಿರಯ್ಯಾ ? ಅರ್ಪಿತದನುವರಿದು ಅರ್ಪಿಸಲರಿಯಿರಿ, ಪ್ರಸಾದವ ಗ್ರಹಿಸುವ ಪರಿಯೆಂತಯ್ಯಾ ? ನಡೆ-ನುಡಿ ಎರಡಾಗಿ ಇದೆ, ಪ್ರಾಣಲಿಂಗಸಂಬಂಧಿಯೆಂತಾದಿರಿ ? ಇಂದ್ರಿಯಂಗಳು ಭಿನ್ನವಾಗಿ, ಶರಣರಾದ ಪರಿಯೆಂತಯ್ಯಾ ? ವಿಧಿ ನಿಷೇಧ ಭ್ರಾಂತಿ ಮುಕ್ತಿಯಾದ ಪರಿಯನರಿಯಿರಿ, ಐಕ್ಯರೆಂತಪ್ಪಿರಿ ? ಈ ಪಡುಸ್ಥಲದ ಕ್ರಿಯಾಕರ್ಮವರ್ಮ ಆರಿಗೆಯೂ ಅರಿಯಬಾರದು. ಈ ವರ್ಮವರಿದಡೆ ಲಿಂಗೈಕ್ಯವು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮತ್ತಮಾ ಸಿಂಹಾಸನಾಗ್ರದಲ್ಲಿ ಶಿವಲಿಂಗ ವಾಹನ ಸ್ಥಾಪನ ಸನ್ನಿಧಾನ ಸಂರೋಧನ ಸಮ್ಮುಖೀಕರಣಮೆಂಬ ಕ್ರಿಯೆಗಳಂ ಮಾಡಿ, ಬಳಿಕ ಪೂಜಾ ಪ್ರಾರಂಭದಿಂ ತೊಡಗಿ, ಪೂಜಾ ಸಮಾಪ್ತಿ ಪರಿಯಂತರಂ ಕ್ಷಾಲನಪಾತ್ರ ಜಲಮಂ ಮರಳಿ ಮರಳಿ ಮುಷ್ಟಿ ಮುಷ್ಟಿ ಸಕಲ ಕ್ರಿಯೆಗಳನೀಶ್ವರಾರ್ಪಣಂ ಗೆಯ್ಯ ಬೇಕೆಂದರಿದು, ಬಳಿಕ ನದಿ ತ[ಟಾ]ಕ ಕೂಪಂಗಳಲ್ಲಿ ಸ್ವಾದುಮಿಶ್ರ ಲವಣಂಗಳಾದ ಕ್ರಮದಿಂದುತ್ತಮ ಮಧ್ಯಮ ಕನಿಷ್ಟಮಾದ ಪೂಜಾಯೋಗ್ಯ ಮಾದುದಕ ಭೇದಂಗಳಂ ಬಿಳಿಯ ಸಾಸಿವೆ ಕುಸುಮ ದೂರ್ವೆ ಕೋಷ್ಟ ಲಾಮಂಚ ಕರ್ಪೂರವೆಂಬಾರು ಪಾದ್ಯ ದ್ರವ್ಯಂಗಳಂ ಕುಶಾಗ್ರ ತಿಲ ಬಿಳಿಯ ಸಾಸಿವೆ ಜವೆ ನೆಲ್ಲು ಕ್ಷೀರಮೆಂಬಾರು ಅಘ್ರ್ಯ ದ್ರವ್ಯಂಗಳಂ, ಮುಖಾಂಬುಜಕ್ಕೀ ಘೃತದಧಿ ಮಧು ಮಿಶ್ರಮಾದ ಮಧುಪರ್ಕ ದ್ರವ್ಯಂಗಳಂ, ಫಲ ಕಚೋರ ಕರ್ಪೂರ ಕೋಷ್ಟ ಕುಂಕುಮ ಯಾಲಕ್ಕಿಯೆಂಬಾರು ಆಚಮನ ದ್ರವ್ಯಂಗಳಂ, ಪಂಚಗವ್ಯಂ ಪಂಚಾಮೃತಂಗಳಂ, ಗೋಧೂಮ ಚೂರ್ಣ ಗಂಧಾದ್ಯುದ್ವರ್ತನ ದ್ರವ್ಯಂಗಳಂ, ಮಂದೋಷ್ಣಾದಿ ಸ್ನಾನವಾರಿಗಳಂ, ಗಂಧೋದಕ ಪುಷ್ಪೋದಕ ರತ್ನೋದಕ ಮಂತ್ರೋದತಂಗಳಂ, ಮಹಾಸ್ನಾನೋದಕಂಗಳು, ವಿಧಿ ನಯ ಶುಭ್ರಾದಿ ಗುಣಯುಕ್ತ ಭಸಿತಂಗಳು, ಪ[ಟ್ಟೆ] ದೇವಾಂಗ ಶುಭ್ರ ಚಿತ್ರಾದಿ ವಸ್ತ್ರಂಗಳಂ, ಸುವರ್ಣ ರಜತ ಪ[ಟ್ಟೆ] ಸೂತ್ರಾದಿ ಯಜ್ಞೋಪವೀತಂಗಳಂ, ಕಿರೀWಟಾಘೆದ್ಯಾಭರಣಂಗಳಂ, ಚಂದನ ಅಗರು ಕಸ್ತೂರಿ ಕರ್ಪೂರ ತಮಾಲ ದಳ ಕುಂಕುಮ ಲಾಮಂಚ ಕೋಷ್ಟಂಗಳೆಂಬ ಅಷ್ಟಗಂಧಂಗಳಂ, ಜವೆ ಬಿಳಿಯ, ಸಾಸಿವೆ ತಿಲ ತಂಡುಲ ಮುಕ್ತಾಫಲಾಧ್ಯಕ್ಷತೆಗಳಂ, ಶುಭ್ರರಕ್ತ ಕೃಷ್ಣವರ್ಣ ಕ್ರಮದಿಂ ನಂದ್ಯಾದಿ ವತ್ರ್ತಾದಿ ಕಮಲಾದಿ ನೀಲೋತ್ಪಲಾದಿ ಸಾತ್ವಿಕ ರಾಜಸ ತಾಮಸ ಪುಷ್ಪಂಗಳಂ, ದೂರ್ವೆ ತುಲಸಿ ಬಿಲ್ವಾದಿ ಪತ್ರಜಾಲಂಗಳಂ, ಕರಿಯ[ಗ]ರು ಬಿಳಿಯಗರು ಗುಗ್ಗುಲ ಶ್ರೀಗಂಧ ಆಗರು ಬಿಲ್ವಫಲ ತುಪ್ಪ ಜೇನುತುಪ್ಪ ಸಜ್ಜರಸ ಕರ್ಪೂರವೆಂಬ ದಶಾಂಗ ಧೂಪಂಗಳಂ, ತೈಲವರ್ತಿ ಘೃತಕರ್ಪೂರವೆಂಬ ದೀಪ ಸಾಧನಂಗಳಂ, ಹರಿದ್ರಾನ್ನ ಪರಮಾನ್ನ ಮುದ್ಗಾನ್ನ ಕೃಸರಾನ್ನ ದಧ್ಯಾನ್ನ ಗುಡಾನ್ನಮೆಂಬ ಷಡ್ವಿಧಾನ್ನಾದಿ ನೈವೇದ್ಯಂಗಳಂ, ಪೂಗ ಪರ್ಣ ಚೂರ್ಣ ಕರ್ಪೂರಾದಿ ತಾಂಬೂಲ ದ್ರವ್ಯಂಗಳಂ, ಬೇರೆ ಬೇರೆ ಸಂಪಾದಿಸುವುದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಶಿವ ಶಿವ! ಮಾಹೇಶ್ವರರ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ, ವಾಙ್ಮನೋತೀತರು. ಕೋಟಿ ಕೋಟಿಯಾಯುಷ್ಯ ಕೋಟಿ ಕೋಟಿ ಜಿಹ್ವೆಯುಳ್ಳರೆಯೂ ಸ್ತುತಿಸಲರಿಯದು. `ಶಂಭೋರ್ಮಾಹಾತ್ಮ್ಯಮಣುಪ್ರಮಾಣಜಾನಂತಃ ಎಂದು ಲಿಂಗದ ಮಹಾತ್ಮೆಯನು ಅಣುಪ್ರಮಾಣವೂ ಅರಿಯಬಾರದೆಂದಡೆ ಲಿಂಗವಂತರ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ ! ಲಿಂಗಾಲಿಂಗೀ ಮಹಜ್ಜೀವೀ ಲಿಂಗಾಲಿಂಗೀ ತು ರಕ್ಷಕಃ ಲಿಂಗಾಲಿಂಗೀ ಮಮ ಸ್ವಾಮೀ ಲಿಂಗಾಲಿಂಗೀ ಮನೋಹರಃ ಈ ಪರಿ ದೇಹಲಿಂಗಕ್ಕೆ ಪ್ರಾಣಲಿಂಗಕ್ಕೆ ತಾನಾಗಿಹ ಲಿಂಗವಂತನ ಮಹಾತ್ಮೆಯನೇನೆಂದುಪಮಿಸಬಹುದಯ್ಯಾ ! ಶಿವನೇ ಬಲ್ಲ, ಶಿವನೇ ಬಲ್ಲ. ಮದ್ಭಕ್ತಜನಮಾಹಾತ್ಮ್ಯಂ ಕೋ ವಾ ಜಾನಾತಿ ತತ್ತ್ವತಃ ಜಾನೇ[s]ಹಂ ತ್ವಂ ತು ಜಾನಾಸಿ ನಂದೀ ಜಾನಾತಿ ವಾ ಗುಹಃ ಶಿವನು, ನಂದೀಶ್ವರ, ಗುಹನು ಇವರೇ ಬಲ್ಲರು. ಸಜ್ಜನಶುದ್ಧಶಿವಾಚಾರಸಂಪನ್ನರಪ್ಪ ನಮ್ಮ ಸದ್ಭಕ್ತರೇ ಬಲ್ಲರು. ಸಾಮಾನ್ಯ ತರದ ದೇವದಾನವ ಮಾನವರಿಗೆಯೂ ಅರಿಯಬಾರದು. ಅದೆಂತೆನಲು ಕೇಳಿರೆ: ಬ್ರಹ್ಮ ವಿಷ್ಣು ಇಂದ್ರ ಚಂದ್ರ ರವಿ ಕಾಮ ದಕ್ಷ ಮೊದಲಾದ ದೇವಜಾತಿಗಳು, ತಾರಕ ರಾವಣಾದಿ ದಾನವರು, ವ್ಯಾಸಋಷಿಯರುಗಳು, ದಕ್ಷಾಧ್ವರಕ್ಕೆ ಬಂದ ಋಷಿಗಳನೇಕರು ವೇದಶಾಸ್ತ್ರ ಪುರಾಣ ಆಗಮಾದಿಯಾದ ಅಷ್ಟಾದಶ ವಿದ್ಯಂಗಳನೂ ಓದಿ ಕೇಳಿ ತಮ್ಮನು ಕೇಳಿದವರಿಗೆಯೂ ಹೇಳಿ, ಸರ್ವಜ್ಞರೆನಿಸಿಕೊಂಡರು. ಮಹದೈಶ್ವರ್ಯಸಂಪನ್ನರಾಗಿ ಮದಂಗಳು ಹೆಚ್ಚಿ ಶಿವನನು ಮರೆದರು. `ಅಹಂ ಬ್ರಹ್ಮ' ಎಂದು ಪರಧನ ಪರಸ್ತ್ರೀಯರಿಗೆ ಅಳುಪಿದರು. ಶಿವಮಾಹೇಶ್ವರನಿಂದೆಯಂ ಮಾಡಿದರು. ಈ ಪರಿಯಲೂ ತಪ್ಪಿ ನಡೆದು, ತಪ್ಪಿ ನುಡಿದು ಹಸ್ತಚ್ಛೇದನ ಶಿರಚ್ಛೇದನವ ಮಾಡಿಕೊಂಡು ಹೋದರು. ಅನೇಕ ಪರಿಯಲೂ ಭಂಗಿತರಾದರು. ಮಾನಹಾನಿ ಹೊಂದಿದರು, ಕಷ್ಟಜನ್ಮಂಗಳಲ್ಲಿ ಜನಿಸಿದರು. ಮರಳಿ ಮತ್ತೆ ಅರಿದು ಶಿವಾರಾಧನೆಯ ಮಾಡಿ, ಶಿವಸ್ತೋತ್ರಮಂ ಮಾಡಿ ಮಾಹೇಶ್ವರರ ಪೂಜಿಸಿ, ಮರಳಿ ನಿಜಪದಂಗಳ ಹಡೆದರು. ಈ ಪರಿಯ, ಅರಿವು ಮರವೆಯುಳ್ಳ ದ್ವಂದ್ವಗ್ರಸ್ತರು ಬಲ್ಲರೆ ? ಮಾಹೇಶ್ವರರ ಮಹಾತ್ಮೆಯ ನಮ್ಮ ಸದ್ಭಕ್ತರೇ ಬಲ್ಲರು. ಅದೆಂತೆಂದಡೆ ಕೇಳಿರೆ: ವೇದಾದಿ ಅಷ್ಟದಶವಿದ್ಯಾಪರಿಚಿತರು, ಅಂತಾಗಿ ಎಮ್ಮ ಮಾಹೇಶ್ವರರೇ ಬಲ್ಲರು. ಉಳಿದ ದೇವ ದಾನವ ಮಾನವರುಗಳಿಗೆಯೂ ಅರಿಯಬಾರದು. ಅಂತಪ್ಪವರಿಗೆ ಆ ವಿಧಿ. ಇನ್ನು ಅಲ್ಪಾಯುಷ್ಯರಪ್ಪ ಮನುಷ್ಯರುಗಳಿಗೆ ವೇದಶಾಸ್ತ್ರ ಪುರಾಣಂಗಳ ಬಹಳ ಓದಲಿಕೆ ತೆರಹಿಲ್ಲ. ಕಿಂಚಿತ್ತೋದಿದರೂ ಕೇಳಿದರೂ ಇಲ್ಲ, ಮಹಾಜ್ಞಾನಿಗಳ ಸಂಗವಿಲ್ಲ. ಅಹಂಕಾರಿಗಳು ಮದಾಂಧರು ಶಾಪಹತರು ಜಡಜೀವಿಗಳು ಎಂತರಿಯಬಹುದಯ್ಯಾ. ಶಿವಮಾಹೇಶ್ವರರ ಮಹಿಮೆಯನರಿಯದ ದೋಷಿಗಳ ಕೂಡೆ ಸಂವಾದಿಸಲುಂಟೆ ? ಅವರುಗಳ ಮನದನುವರಿತು, ಅರಿವಿನ ಹವಣಿಂದರಿದು, ಅವಾಚಕವಾಗಿಪ್ಪುದಲ್ಲದೆ ಆ ಪಾಪಿಗಳ ನೋಡಲಾಗದು. ನುಡಿಸಲಾಗದು, ಸಮಾನದಲ್ಲಿ ಕುಳ್ಳಿರ್ದು ತರ್ಕಿಸಲಾಗದು. ಶಿವಜ್ಞಾನವಿಲ್ಲದವರ ಕೂಡೆ ನುಡಿಯಲು ತೆರಹುಂಟೆ ಶಿವಮಾಹೇಶ್ವರಂಗೆ ? [ಅವರು] ಶಿವಲಿಂಗಾರ್ಚನೆಯಂ ಮಾಡಿ ಮಹಾನುಭಾವರ ಸಂಗದಲ್ಲಿ ಅನುಭಾವಸಂಗದಲ್ಲಿಹರಲ್ಲದೆ ಕೇಳಿರಣ್ಣಾ, ದೇವದಾನವ ಮಾನವರ ಪರಿಯಲ್ಲ. ಎಮ್ಮ ಮಾಹೇಶ್ವರರು ಸರ್ವಾಚಾರಸಂಪನ್ನರು ಸರ್ವವಿದ್ಯಾಪರೀಕ್ಷಿತರು, ತಾತ್ಪರ್ಯಕಳಾಗ್ರಾಹಿಗಳು, ವಿಶ್ವಾಧಿಕರು, ಎಮ್ಮ ಮಾಹೇಶ್ವರರು ಪರಧನ ಪರಸ್ತ್ರೀಯನೊಲ್ಲರು, ಸತ್ಯರು ನಿತ್ಯರು ನಿರುಪಾಧಿಕರು, ನಿರಾಶಾಸಂಪೂರ್ಣರು ಪರಿಣಾಮಿಗಳು. ಅವರ ಸಂಗದಿಂದ ಗುರುಸಿದ್ಧಿ ಲಿಂಗಸಿದ್ಧಿ ಜಂಗಮಸಿದ್ಧಿ ಪರಸಿದ್ಧಿ ಪದಸಿದ್ಧಿ ಸರ್ವಸಿದ್ಧಿ ಮಹಾಸಿದ್ಧಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತಲೆಯಿಲ್ಲದ ಮಲೆನಾಡ ಹೆಣ್ಣಿಂಗೆ ಮೊಲೆಯೇಳು ನೋಡಾ! ಪಂಚವರ್ಣದ ಹಾಲ ತಲೆಗುತ್ತಿ ಕುಡಿದವರು ವಿಧಿ ಮಾಧವ ವಿಷಧರಪದದೊಳಗಾದರು. ಮತ್ತೆ ಮೊದಲರಿಯದವರ ಕಂಡು ಚಪಲಗತಿ ಚೆಲುವ ಗುರುನಿರಂಜನ ಚನ್ನಬಸವಲಿಂಗದ ಬಲೆಯೊಳು ಬಿದ್ದು ಕುಲಗೆಟ್ಟು ಕುರುಹಳಿದ ಸುಖವನೇನೆಂಬೆ ಹಿಂದಣ ಕೂಟವರಿಯರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->