ಅಥವಾ

ಒಟ್ಟು 75 ಕಡೆಗಳಲ್ಲಿ , 32 ವಚನಕಾರರು , 64 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಲ್ಲೊಳಗಣ ಕಿಚ್ಚು ಉರಿಯದ ಪರಿಯಂತೆ, ಬೀಜದೊಳಗಣ ವೃಕ್ಷ ಉಲಿಯದ ಪರಿಯಂತೆ, ಪುಷ್ಪದ ಕಂಪು ನನೆಯಲ್ಲಿ ತೋರದಂತೆ, ಚಂದ್ರಕಾಂತದ ಉದಕ ಒಸರದ ಪರಿಯಂತೆ, ಮಹಾಲಿಂಗ ಕಲ್ಲೇಶ್ವರನಲ್ಲಿ ಲಿಂಗೈಕ್ಯ. ಇಹವೆನ್ನ ಪರವೆನ್ನ ಸಹಜವೆನ್ನ ತಾನೆನ್ನ.
--------------
ಹಾವಿನಹಾಳ ಕಲ್ಲಯ್ಯ
ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು ? ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ ? ಮೊನೆಗೂಡಿಯೆ ಗ್ರಹಿಸುವ ಅಲಗಿನ ತೆರದಂತೆ ಅದು ಲಿಂಗಾಂಗಸಂಯೋಗಸಂಬಂಧ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಪಿಂಡವಾಯಿತ್ತು ನಾದಬಿಂದು ಕಳೆಗಳ ಕೂಡಿ ಕೊಂಡು ಸ್ವರೂಪ ತತ್ವವಿಡಿದು ಚೆನ್ನಾಗಿ ಧರೆಯಿಂದಲೆದು ಕರ್ಮೇಂದ್ರಿಯಂಗಳ ಜನನ ಸರಸದಿಂದ ಪಂಚವಿಷಯಂಗಳುತ್ಪತ್ಯ ಮೇಣ್ ಉರಿಯಿಂದ ಬುದ್ಧೀಂದ್ರಿಯಂಗಳಾದವು ನೋಡಿರೆ. ಮರುತನಿಂದೈದು ಪ್ರಾಣವಾಯುಗಳ ಜನನ ಹಿರಿದಪ್ಪ ಗಗನದಲ್ಲಿ ಚತುರ ಕರಣವು ಆತ್ಮ ನೆರೆ ಕೂಡಿ ಪಂಚವಿಂಶತಿತತ್ವವಿಡಿದು. | 1 | ಆರೂರ್ಮೆ ಏಳುಧಾತೈದುವಿಂಶತಿ ಅಂಶ ಈ ಮೂರು ತನುಗುಣವು ಇಪ್ಪತ್ತೈದು ಎರಡಂಗ ಆರು ಚಕ್ರವು ಕಮಲದೈವತ್ತೊಂದರಕ್ಷರಗಳಿಂ ವಾರಿಜ ದಾಕ್ಷಾಯಣಿ ಹರಿ ರುದ್ರ ಈಶ್ವರ ಮೀರಿದ ಸದಾಶಿವನದ್ಥಿದೈವಂಗಳು, ನವದ್ವಾರ ಚೆನ್ನಾಗಿ ಸಕಲಾರಂಭತತ್ವವಿಡಿದು. | 2 | ಮೂರು ಕರ್ಮಗಳು ಏಳ್ನೂರು ಎಪ್ಪುತ್ತು ಲೊ ಓರಣದ ಕರಣದ ಕರಣ ಅರುವತ್ತಾರು ಕೋಟಿಯಂ ಮೂ [ರಾ]ರು ಗುಣ ಅಂತರಂಗದಷ್ಟವೇದವು ಸಹಿತದ ಮೂರು ಮಲ ದಶವಾಯು ಅಂಗದೊಳು ಚರಿಸುತಿಹ ಮಾರುತ ಮನ ಮಂತ್ರಿ ಪ್ರಾಣ ನಾಯಕನರಸು ಶ ರೀರ ಜಗದೊಳುತ್ಪತ್ಯವಾಗಿದೆ ದೇವ. | 3 | ನೆಲ ನೀರು ಶಿಲೆಯಿಂದ ಬಿತ್ತಿಗಟ್ಟಿಯೆ ಅದನು ಸಲೆ ಗೋಮಯದಿ ಶುದ್ಧಮಾಡಿ ಸಾರಿಸುವಂತೆ ಎಲು ಚರ್ಮ ನರ ತೊಗಲು ಮಾಂಸ ಮಜ್ಜೆಯ ಕೂಡಿಯೆ ಚೆಲುವಾಗಿ ಈ ಕಾಯ ಗಾಳಿ ತುಂಬಿ ವೃಕ್ಷ ಉಲಿವಂತೆ ಶಿವಬೀಜವ ಚೈತನ್ಯದಿಂದಲಿ ಇಳೆಗೆ ತೋರುತಿರೆ ನೋಡಿದ ತಿಳಿಯಿರಣ್ಣ. | 4 | ಆದಿ ಮಧ್ಯ ಅಂತ್ಯ ಭಾಂಡದೊಳು ಶಿವ ತಾನೆ ಆದಿಯಾಗಿಯೆ ನೆಲದ ಮರೆಯಲ್ಲಿಹ ಧನದಂತೆ ಭೇದಿಸದೆಯಿಪ್ಪ ಭೇದವನಾರು ಅರಿಯರಲ್ಲ ಅಭೇದ್ಯಗುರು ಪಡುವಿಡಿ ಸಿದ್ಧಮಲ್ಲಿನಾಥನ ಪಾದವಿಡಿದ ತನುವು ಸುಕೃತದೇಹಿಯಾಗಿ ಮೇದಿನಿಗೆ ತೋರುತಿದೆ ಶಿವಶರಣರಿದ ತಿಳಿಯರೆ. | 5 |
--------------
ಹೇಮಗಲ್ಲ ಹಂಪ
ಅಂಧಕಾರವಾಗಿಹ ಕತ್ತಲೆಯೊಳು ಮಹಾಮೇರುವಿಹುದು ನೋಡಾ. ಆ ಮಹಾಮೇರುವ ಉದಯಾಸ್ತಮಯವಾಗಿಹ ಚಂದ್ರಸೂರ್ಯರು ತಿರುಗುವರು. ಆ ಚಂದ್ರಸೂರ್ಯರ ದೆಸೆಯಿಂದ ಇರುಳು ಹಗಲೆಂಬ ವೃಕ್ಷ ಹುಟ್ಟಿ, ಆ ವೃಕ್ಷಕ್ಕೆ ಅರವತ್ತು ಶಾಖೆಗಳಾದವು ನೋಡಾ. ಒಂದೊಂದು ಶಾಖೆಗಳಲ್ಲಿ ಮುನ್ನೂರರವತ್ತು ಮುನ್ನೂರರವತ್ತು ಗೂಬೆಗಳು ಕುಳಿತು ಕೂಗುತ್ತಿಹವು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಉದಕವೊಂದರಲ್ಲಿ ತಂದು, ವರ್ಣ ಭೇದಕ್ಕೆ ಹಲವಾದ ತೆರನಂತೆ, ಆತ್ಮ ನಾನೆಂಬುದ ಮರೆದು, ಸರ್ವರಲ್ಲಿ ಬೆರಸುವ ಚಿತ್ತ ಒಂದೋ, ಎರಡೋ ? ನೆಲಜಲ ಒಂದಾದಡೆ, ಬೆಳೆವ ವೃಕ್ಷ ಹಲವಾದ ತೆರದಂತೆ, ಅರಿವು ಮರವೆಗೊಳಗಾದ ಆತ್ಮನ ತಿಳಿದಲ್ಲಿ, ಬೇರೊಂದೆಡೆಗೆ ತೆರಪಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇಷ್ಟಲಿಂಗ, ಪ್ರಾಣಲಿಂಗವೆಂದು ಬೇರೊಂದು ಕಟ್ಟಣೆಯ ಕಟ್ಟಬಹುದೆ ? ವೃಕ್ಷ ಬೀಜದಲ್ಲಿ ಅಡಗಿ, ಬೀಜ ವೃಕ್ಷವ ನುಂಗಿಪ್ಪ ತೆರನಂತೆ, ಇಷ್ಟ ಪ್ರಾಣ ಬೆಚ್ಚಂತಿರಬೇಕು. ಅಪ್ಪು ಮುತ್ತಾದಂತೆ, ಉಭಯದ ಗೊತ್ತು ತಾನೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಭಕ್ತಿಯೇ ವಿಗ್ರಹ, ಜ್ಞಾನವೇ ಪ್ರಾಣ, ವೈರಾಗ್ಯವೇ ಗಮನ. ಇಂಬಿಲ್ಲ ಇಂಬಿಲ್ಲ ನೋಡುವರೆ ನುಡಿಸುವರೆ. ಎಲೆದೋರದ ವೃಕ್ಷ ಫಲವಾಗಿ ಕಾಣಿಸಿಕೊಳ್ಳದು. ಬಂದರೇನು ನಿಂದರೇನು ಭೋಗಿಸಿದರೇನು ಅಂದಂದಿಗೆ ಆರೂಢ ತಾನೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೀಜದೊಳಗಣ ವೃಕ್ಷ, ಅಂಕುರ, ಪಲ್ಲವ, ಪತ್ರ, ಕುಸುಮ, ಫಲ ಮೈದೋರದಂತೆ, ಕಾಷ್ಠದೊಳಗಣ ಅಗ್ನಿ ಉರಿ ಉಷ್ಣದೋರದಂತೆ, ಪತಂಗನ ಕರದೊಳಗಡಗಿಪ್ಪ ಮರೀಚಿ ಪ್ರವಾಹಿಸದಂತೆ, ಬಿಂದುವಿನೊಳಡಗಿಪ್ಪ ನಾದ ದನಿದೋರದಂತೆ, ಪಿಂಡ ಬ್ರಹ್ಮಾಂಡಗಳ ಕೂಡಿಪ್ಪ ಸೌರಾಷ್ಟ್ರ ಸೋಮೇಶ್ವರಲಿಂಗವನಾರೂ ಬೆರಸಬಾರದಯ್ಯಾ.
--------------
ಆದಯ್ಯ
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ, ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ, ಜಂಗಮವಾಪ್ಯಾಯನವಾದಡೆ ಲಿಂಗ ಸಂತ್ಟುಯಹುದಯ್ಯಾ. ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯ ಚ ಜಂಗಮಃ ಅಹಂ ತುಷ್ಟೋsಡಿಸ್ಮ್ಯುಮಾದೇವಿ ಉಭಯೋರ್ಲಿಂಗಜಂಗಮಾತ್ ಇದು ಕಾರಣ ಕೂಡಲಸಂಗಮದೇವರಲ್ಲಿ ಜಂಗಮವಾಪ್ಯಾಯನವಾದಡೆ ಲಿಂಗಸಂತ್ಟು. 197
--------------
ಬಸವಣ್ಣ
ಸಂದುಸಂಶಯವನಳಿದಲ್ಲದೆ ಮುಂದುದೋರದು ಭಕ್ತಿಸ್ಥಲ. ಗಂಧ ಗರಗಸದಿಂದ ಕೊರದು ಅರದು ಸುಟ್ಟರೆ ಪರಿಮಳ ಮಾಣ್ಬುದೆ ? ವೃಂದ ವನದಿ ವೃಕ್ಷ ಫಲವಾಪಕಾಲಕ್ಕೆ ಪಾಷಾಣದಲ್ಲಿಯಿಡುವೆಡೆ ನೊಂದೆನೆಂದು ನೋವ ತಾಳ್ದ ಮರನು ವರುಷಕೆ ಆಪುದೆ ? ಅಂದು ಏನು, ಇಂದು ಏನು ಭಕ್ತಂಗೆ ಕುಂದು ನಿಂದೆ ಸ್ತುತಿ ಒಂದೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಬೀಜವಿಲ್ಲದೆ ವೃಕ್ಷ ಬೆಳೆಯಬಲ್ಲುದೆ ? ಹೂವಿಲ್ಲದೆ ಹಣ್ಣಾಗಬಲ್ಲುದೆ ? ತೆಂಗಿನ ಮರನ ಬಿತ್ತಿದಡೆ ಅಂಬರಕ್ಕೆ ಹೋಯಿತ್ತು; ಕಾಯಿಲ್ಲದೆ, ನೀರು ಇಲ್ಲದೆ ಗಾಳಿಗೆ ಮರ ಮುರಿದಂತೆ ಆಯಿತ್ತು ಕಾಣಾ. ಅಮುಗೇಶ್ವರಲಿಂಗವನರಿಯದ ಅನಾಚಾರಿಗಳ ವಿರಕ್ತರೆಂಬೆನೆ ? ಎನಲಾಗದು.
--------------
ಅಮುಗೆ ರಾಯಮ್ಮ
ಭೂಮಿ ಒಂದರೊಳಗೆ ಒಂದು ನಾಮಸಾಮ್ಯ ವೃಕ್ಷ ಹುಟ್ಟಿ ಮೂಲನಾಶವಪ್ಪ ಫಲ ಮೂರು ಸೀಮೆಗೆಟ್ಟಿತು ಬ್ರಹ್ಮಾಂಡ. ಅಪರಾಹ್ನದ ಆದಿಯಲ್ಲಿ ಅಡಗಿದವು ಸಕಲ ಬ್ರಹ್ಮಾಂಡ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮಲೆಯಮಂದಿರದ ವಟವೃಕ್ಷದ ಘಟದಲ್ಲಿ ಮಕ್ಷಿಕ ಮನೆಯ ಮಾಡಿ ಹಂದಿಯನೇರಿ, ಮೂಡಲಗಿರಿಯಲ್ಲಿ ಕೋಳಿ ಕೂಗಿ, ಪಶ್ಚಿಮಗಿರಿಯಲ್ಲಿ ಬೆಳಗುತೋರಿ, ವೃಕ್ಷದಡಿಯಲ್ಲಿ ಅಗ್ನಿಪುಟವಾಗಿ ಬೇರುಸುಟ್ಟು, ವೃಕ್ಷ ಉಳಿದು, ಮಕ್ಷಿಕ ಹಂದಿ ಸತ್ತುಳಿದು, ಕೂಗಡಗಿದ ಕುಕ್ಕುಟನಲ್ಲಿ ಮಕ್ಷಿಕ ಹಂದಿಯು ಕೂಡಿ ಕುಕ್ಕುಟನ ಮನೆಯಲ್ಲಿ ಅಡಗಿದರು. ಅಡಗಿದ ಭೇದವ ನಿಮ್ಮ ಶರಣಬಲ್ಲ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬಿತ್ತಿದ ಬೆಳೆ, ಕಟ್ಟಿದ ಕರೆ, ಸಲಹಿದ ಶರೀರ, ನೆಟ್ಟ ವೃಕ್ಷ ತನಗಲ್ಲದೆ ಅವಕ್ಕೊಡಲುಂಟೆ? ತಾ ಮಾಡುವ ಭಕ್ತಿ ತನಗಲ್ಲದೆ ಬೇರೊಂದು ಗುಣವನರಸಲಿಲ್ಲ. ಆ ಪರಿಯ ನಿನ್ನ ನೀ ತಿಳಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಇನ್ನಷ್ಟು ... -->