ಅಥವಾ

ಒಟ್ಟು 33 ಕಡೆಗಳಲ್ಲಿ , 17 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಲಿಂಗದ ಸಂಗದಿಂದ ಮೂವರು ಪುರುಷರು ಹುಟ್ಟಿದರು ನೋಡಾ! ಅವರಿಂಗೆ ಆರು ಮಂದಿ ಅಂಗನೆಯರ ಮದುವೆಯ ಮಾಡಿ ಒಬ್ಬ ಕುಂಟಿಣಿಗಿತ್ತಿಯು ಬಂದು ಆರು ಮಂದಿ ಅಂಗನೆಯರ ಮೂವರು ಗಂಡರಿಗೆ ಕೊಟ್ಟು ಆ ಕುಂಟಿಣಿಗಿತ್ತಿಯು ಲಿಂಗದೊಳು ಮಡಿದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಮೇಧ್ಯವ ಭುಂಜಿಸುವ ಸೂಕರ ಅಮೃತದ ಸವಿಯನೆತ್ತಬಲ್ಲುದಯ್ಯ? ಗೆಜ್ಜಲ ತಿಂಬ ಕರಡಿ ಖರ್ಜೂರದ ಹಣ್ಣಿನ ಸವಿಯನೆತ್ತಬಲ್ಲುದಯ್ಯ? ಬೇವ ತಿಂಬ ಕಾಗೆ ಬೆಲ್ಲದ ಸವಿಯನೆತ್ತ ಬಲ್ಲುದಯ್ಯ? ಅಂಗನೆಯರ ಸಮ್ಮೇಳನದ ವಿಕಾರದ ಭಂಗಿಯ ಕೊಂಡು ಮೈಮರೆದ ಮನುಜರು ಲಿಂಗಪ್ರೇಮದ ಸುಖವನಿವರೆತ್ತಬಲ್ಲರಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಕಾಶಕ್ಕೆ ಹಾರುವಂಗೆ ದೋಟಿಯ ಕೋಲ ಹಂಗೇತಕಯ್ಯಾ ? ಭೂಮಿಯ ಸೋಂಕದೆ ನಡೆವವಂಗೆ ಭೂಮಿಯ ಹಂಗೇತಕಯ್ಯಾ ? ತನ್ನ ತಾನರಿಯದವಂಗೆ ಬಿನ್ನಾಣಿಗಳ ಮಾತೇತಕಯ್ಯಾ ? ಅಗಮ್ಯವಾಗಿ ಚರಿಸುವಂಗೆ ಅಂಗನೆಯರ ಹಂಗೇತಕಯ್ಯಾ ? ಅಮುಗೇಶ್ವರಲಿಂಗವನರಿದ ಶರಣಂಗೆ ಕಾವಿ ಕಾಷಾಂಬರವ ಹೊದ್ದು ತಿರುಗುವ ಕರ್ಮಿಗಳ ಹಂಗೇತಕಯ್ಯಾ ?
--------------
ಅಮುಗೆ ರಾಯಮ್ಮ
ಪರಮಾತ್ಮನ ಪ್ರತಿಲಹರಿಯಿಂದ ಅಂತರಾತ್ಮನುತ್ಪತ್ಯ. ಅಂತರಾತ್ಮನ ಪ್ರತಿಲಹರಿಯಿಂದ ಜೀವಾತ್ಮನುತ್ಪತ್ತ. ಅಂತಪ್ಪ ಜೀವಾಂತರಾತ್ಮಾದಿಗಳು ಅಂಗ ಪ್ರಾಣವಾದಲ್ಲಿಒಂದೆಯೆನಿಸಿದರು. ಆ ಒಂದೆಯೆಂಬ ತಾಮಸ ಜೀವನು ಅಂಗನೆಯರ ಸಂಗ ಮೊದಲಾದ ನಾನಾ ದುಃಖಗಳಲ್ಲಿ ನೋವುತ್ತ, ನಾನಾಯೋನಿಗಳಲ್ಲಿ ಜನಿಸುತ್ತ, ರೌರವ ನರಕ ಆಳುತ್ತಮುಳುಗುತ್ತಲಿಹನು. ಆ ಪರಮಾತ್ಮನು ಜೀವಾತ್ಮನ ಶಿರೋಮಧ್ಯದಲ್ಲಿರ್ದು ನಾಹಂಎನ್ನದೆಸೋಹಂಎನ್ನುತ್ತ ಸಿಮ್ಮಲಿಗೆಯಚನ್ನರಾಮನೆಂಬ ಅಖಂಡ ಲಿಂಗದೊಳಗೆ ನಿತ್ಯತ್ವವನೆಯ್ದಿ ಎಡೆಬಿಡುವಿಲ್ಲದೆ ಪರಮಸಂತೋಷದೊಳಿದ್ದಿತ್ತು.
--------------
ಚಂದಿಮರಸ
ಉಣ್ಣೆ ಕೆಚ್ಚಲ ಹತ್ತಿದ್ದರೇನು ಕ್ಷೀರವದಕುಂಟೆ? ತಗಣಿ ತನುವ ಹತ್ತಿದ್ದರೇನು ಅಂಗನೆಯರ ಸುರತದ ಸುಖವ ಬಲ್ಲುದೆ? ಗಿಳಿ ಓದಿದರೇನು ಲಿಂಗವೇದಿಯಪ್ಪುದೆ? ಹೇಸರ ಏಸು ದೊಡ್ಡದಾದರೇನು ತೇಜಿಯಾಗಬಲ್ಲುದೆ? ತತ್ವದ ಮಾತು ಅಂಗಸಂಗಿಗಳಿಗೇಕೆ? ಭರ್ಗನ ಸಂಗ ಭವಿಗೇಕೆ? ಪಚ್ಚೆಯ ಪವಳದ ಗುಡಿಗೂಡಾರವೇಕೆ ಗೂಗೆಗೆ? ಗವುಡರ ಮನೆಯ ತೊತ್ತಿಂಗೆ ಬಲ್ಲಹನಾಣೆಯೇಕೆ? ಕೀಳು ಕುಲದೈವಕ್ಕೆರಗಿ ನರಕಕ್ಕಿಳಿವ ದುರಾಚಾರಿಗಳಿಗೆ ಶಿವಾಚಾರವಳಡುವುದೆ, ಕೂಡಲಚೆನ್ನಸಂಗಮದೇವಾ?
--------------
ಚನ್ನಬಸವಣ್ಣ
ಶೀಲವಂತರು ಶೀಲವಂತರೆಂದೆಂಬರು ನಾವಿದನರಿಯೆವಯ್ಯ. ಅಂಗನೆಯರ ಅಧರಪಾನವು ತನ್ನ ಉದರವ ಹೊಗುವನ್ನಕ್ಕ ಶೀಲವೆಲ್ಲಿಯದೊ ? ಈಷಣತ್ರಯವೆಂಬ ಸೊಣಗ ಬೆಂಬತ್ತಿ ಬರುತ್ತಿರಲು ಶೀಲವೆಲ್ಲಿಯದೊ ? ಹೆರಸಾರಿ ಮನವು ಮಹದಲ್ಲಿ ನಿಂದರೆ ಶೀಲ, ಪರಿಣಾಮ ನೆಲೆಗೊಂಡರೆ ಶೀಲ. ಇದು ಕಾರಣ ಕೂಡಲಚೆನ್ನಸಂಗನಲ್ಲಿ ಶೀಲವಂತರಪೂರ್ವ
--------------
ಚನ್ನಬಸವಣ್ಣ
ಜಗದೊಳಗೆ ಹುಟ್ಟಿ ಜಗದಪ್ರಪಂಚ ಹಿಂಗಿ, ಜಂಗಮದೊಳಗಾಡುತ್ತ, ಲಿಂಗದೊಳಗೆ ನೋಡುತ್ತ, ಅಂಗನೆಯರ ಸಂಗವ ಮಾಡಿಹೆನೆಂಬಿರಿ. ಅದೆಂತೆಂದಡೆ, ನೋಟಕಿಲ್ಲದ ಘನದ ಕೂಟವ ಕೂಡುವ ಪರಿಯೆಂತಯ್ಯಾ ? ರೂಪಿಲ್ಲದುದ ರೂಪಿಗೆತರುವ ಪರಿಯೆಂತಯ್ಯಾ ? ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ ? ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು ಹಿಡಿದಡೆ ಹಿಡಿಗಿಲ್ಲ, ನುಡಿದಡೆ ನುಡಿಗಿಲ್ಲ. ಒಡಲೊಳಗಿಲ್ಲ; ಹೊರಗಿಲ್ಲ, ಒಳಗಿಲ್ಲ. ವಾಚಾತೀತ ಮನೋತೀತ ಭಾವಾತೀತವಾಗಿದ್ದ ವಸ್ತು ತನ್ನೊಳಗೆ ತಾನೆ ತನ್ಮಯವಾಗಿ ಇರುವುದ ತಿಳಿಯಲರಿಯದೆ ಭಿನ್ನವಿಟ್ಟರಸುವಿರಿ. ಅದೆಂತೆಂದಡೆ : ಪುಷ್ಪಪರಿಮಳದಂತೆ, ತುಪ್ಪಕಂಪಿನಂತೆ, ಅಲೆನೀರಿನಂತೆ, ಕಣ್ಣುಕಪ್ಪಿನಂತೆ, ಚಿನ್ನಬಣ್ಣದಂತೆ, ಸಿಪ್ಪೆಹಣ್ಣಿನಂತೆ, ಒಪ್ಪಚಿತ್ರದಂತೆ, ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹಲವು ತೀರ್ಥಂಗಳಲ್ಲಿ ಮೀಯಲು ಬಹುದಲ್ಲದೆ ಜಂಗಮದ ಪಾದೋದಕವ ಕೊಳಬಾರದು. ಅಂಗದಿಚ್ಫೆಗೆ ಅಂಗನೆಯರ ಅಧರವ ಮುಟ್ಟಬಹುದಲ್ಲದೆ ಜಂಗಮದ ಪ್ರಸಾದವ ಕೊಳಬಾರದು. ಊರಗೋಲ ನೆರೆ ನಡುನೀರಲದ್ದಿದಂತಾಯಿತ್ತಯ್ಯಾ, ಎನ್ನ [ಮನದಿರ]ವು. ಪಾಪಿಯ ಕೂಸಿಂಗೆ ಏನು ಬುದ್ಧಿಯ ಹೇಳಿದಡೆ ಕೇಳೂದೆ ? ರೇಕಣ್ಣಪ್ರಿಯ ನಾಗಿನಾಥಾ, ನಿಮ್ಮನರಿದ ಶರಣನಲ್ಲದೆ.
--------------
ಬಹುರೂಪಿ ಚೌಡಯ್ಯ
ಪರಮಂಗೆ ಪ್ರಕೃತಿಯ ಸಂಗದಿಂದ ಜೀವಭಾವ. ಆ ಜೀವಂಗೆ ಅಂಗನೆಯರ ಸಂಗದಿಂದ ರೌರವ ನರಕದಿಂದ ದುಃಖ ಹೇತು. ದುಃಖಹೇತುವಿನಿಂದ ನಾನಾ ಯೋನಿಯ ಜನನ. ಇದು ಕಾರಣ ನಾನಾ ಯೋನಿಯಲ್ಲಿ ಜನಿಸುವ ಪ್ರಕೃತಿಯ ಸಂಗ ಬಿಡದವಂಗೆ ಮುಕ್ತಿಯೆಲ್ಲಿಯದು ಸಿಮ್ಮಲಿಗೆಯ ಚೆನ್ನರಾಮಾ?
--------------
ಚಂದಿಮರಸ
ಮನಸಿಜನ ಇರವುಳ್ಳನ್ನಕ್ಕ ಶೃಂಗಾರವ ಹಾರಬೇಕು. ಅವರಂಗವುಳ್ಳನ್ನಕ್ಕ ಅಂಗನೆಯರ ಸಂಗಬೇಕು. ಸಂಗಸುಖಕ್ಕೊಡಲಹನ್ನ ಬರ ಶಿವಲಿಂಗ ಪೂಜೆಯ ಮಾಡಬೇಕು. ಅದು ಅರುವಿನ ಗೊತ್ತು, ಜ್ಞಾನದ ಚಿತ್ತು, ಪರಬ್ರಹ್ಮದ ಕೂಟ, ಶಿವಪೂಜೆಯ ಮಾಟ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ.
--------------
ಶಿವಲೆಂಕ ಮಂಚಣ್ಣ
ಉಚ್ಚೆಯ ಬಚ್ಚಲ ಹಲವು ಭಗದ ದೇವತೆಯ ಮಾಯೆಯ ಹಾವಳಿಯ ನೋಡಿರಣ್ಣ. ಕರಣಹಸುಗೆಯನೋದುವಣ್ಣಗಳ ಕಾಲ ಹಿಡಿದೆಳೆಯಿತು ಮಾಯೆ. ಮಿಶ್ರಾರ್ಪಣಗಳನೋದುವಣ್ಣಗಳ ಮೀಸೆಯ ಹಿಡಿದುಯ್ಯಾಲೆಯನಾಡಿತು ಮಾಯೆ. ಆತ್ಮನ ಸ್ವರೂಪವನರಿವಣ್ಣಗಳ ತನಗಾಳು ಮಾಡಿತ್ತು ಮಾಯೆ. ಶಿವಜ್ಞಾನವ ಕೀಳುಮಾಡಿ ತತ್ವಸ್ವರೂಪವನರಿವಣ್ಣಗಳ ತನಗೆ ಮುದ್ದು ಮಾಡಿಸಿ ಮೋಹಿಸಿ ಬತ್ತಲೆ ನಿಲಿಸಿತು ಮಾಯೆ. ಮಂತ್ರಗೋಪ್ಯವನೋದುವಣ್ಣಗಳ ಕುಟಿಲವೆಣ್ಣಿನ ಕುಮಂತ್ರಕ್ಕೆ ಸಿಕ್ಕಿಸಿ ಕಾಡಿತು ಮಾಯೆ. ಬರಿಯ ವೈರಾಗ್ಯದ ಮಾಡುವಣ್ಣಗಳ ಸ್ತ್ರೀಯರ ಮುಡಿಯ ಸಿಂಗರಿಸುವಂತೆ ಮಾಡಿತು ಮಾಯೆ. ಜಪಧ್ಯಾನಗಳ ಮಾಡುವಣ್ಣಗಳ ಭಗಧ್ಯಾನವ ಮಾಡಿಸಿತು ಮಾಯೆ. ಲಿಂಗವ ಕರಸ್ಥಲದಲ್ಲಿ ಹಿಡಿದಣ್ಣಗಳ ಅಂಗನೆಯರ ಹಿಂದಣ ಪುಕಳಿಯ ಮುಂದಣ ಯೋನಿಚಕ್ರವ ಮುಟ್ಟಿಸಿ ಮೂಗನರಿಯಿತು ಮಾಯೆ. ಪ್ರಸಾದ ಲೇಹ್ಯವ ಮಾಡುವಣ್ಣಗಳ ಪೊಸಜವ್ವನೆಯರ ತುಟಿಯ ಲೋಳೆಯ ನೆಕ್ಕಿಸಿತು ಮಾಯೆ. ಬೆಡಗಿನ ವಚನವನೋದುವಣ್ಣಗಳ ಸಖಿಯರ ತೊಡೆಯಲ್ಲಿ ಹಾಕಿತು ಮಾಯೆ. ವಚನವನೋದುವಣ್ಣಗಳ ರಚನೆಗೆ ನಿಲಿಸಿತು ಮಾಯೆ. ಇದು ಕಾರಣ, ಇಚ್ಛೆಯ ನುಡಿದು ಕುಚ್ಫಿತನಾಗಿ ಬರಿವಿರಕ್ತನಂತೆ ಹೊಟ್ಟೆಯ ಹೊರೆದು ಹೊನ್ನು ಹೆಣ್ಣು ಮಣ್ಣು ದೊರೆತಲ್ಲಿ ಹಿಡಿದಿಹ ಕರ್ಮಿಯೆಂಬ ಕಾಳಮೂಳರಿಗೆಲ್ಲಿಯದೋ ವಿರಕ್ತಿ?, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಗುರುಪೂಜೆ ಮಾಡುವಣ್ಣಗಳ ಸೂಳೇರ ಬಾಯಿಲೋಳೆ ನೆಕ್ಕಿಸಿತ್ತು ಮಾಯೆ. ಲಿಂಗಪೂಜೆ ಮಾಡುವಣ್ಣಗಳ ಅಂಗನೆಯರ ತೊಡೆಯ ಮೂಸಿನೋಡಿಸಿತ್ತು ಮಾಯೆ. ಜಂಗಮಪೂಜೆ ಮಾಡುವಣ್ಣಗಳ ರಂಭೆಯರ ಜಾನು ಜಂಘಯಲ್ಲಿರಿಸಿತ್ತು ಮಾಯೆ. ಪಾದೋದಕ ಪ್ರಸಾದವಕೊಂಬ ಅಣ್ಣಗಳ ಮದ್ಯಪಾನ ಮಾಂಸವ ತಿನಿಸಿತ್ತು ಮಾಯೆ. ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ತಿದಿಯ ಹಿರಿಸಿ ಮುಸುಕಿಯ ಕಟ್ಟಿಸಿತ್ತು ಮಾಯೆ. ಮಂತ್ರಧ್ಯಾನಿಗಳೆಲ್ಲರ ಅಂಗನೆಯರ ಭಗಧ್ಯಾನದಲ್ಲಿರಿಸಿತ್ತು ಮಾಯೆ ಜಪತಪವ ಮಾಡುವಣ್ಣಗಳ ಮುಸುಕು ತೆಗೆದು ಸ್ತ್ರೀಯರ ಮುಖವ ನೋಡಿಸಿತ್ತು ಮಾಯೆ. ಗುರುಹಿರಿಯರೆಂಬಣ್ಣಗಳ ಹಿರಿಯ ಶೂಲಕ್ಕೆ ಇಕ್ಕಿತ್ತು ಮಾಯೆ. ವಿರಕ್ತರೆಂಬಣ್ಣಗಳ ರಂಭೇರ ಮಲ ಒಸರುವ ಪೃಷ*ವ ಪಿಡಿಸಿತ್ತು ಮಾಯೆ. ಪಟ್ಟದಯ್ಯಗಳು ಚರಮೂರ್ತಿ ಹಿರಿಯರು ಮಾನ್ಯರೆಂಬಣ್ಣಗಳ ರಟ್ಟೆಗೆ ಹಗ್ಗಹಚ್ಚಿ ಸ್ತ್ರೀಯರ ಮುಂದೆ ಹಿಂಡಗಟ್ಟಿ ಎಳಸಿತ್ತು ಮಾಯೆ. ವೇದಾಗಮ ಪುರಾಣ ತರ್ಕ ತಂತ್ರಗಳೆಲ್ಲ ನೋಡಿ ಹಾಡುವಣ್ಣಗಳೆಲ್ಲರ ಹೊಲೆಮಾದಿಗರ ಕಾಲು ಹಿಡಿಸಿತ್ತು ಮಾಯೆ. ಇಂತೀ ನಾನಾ ಹಾದಿ ಶ್ರುತಿಗಳ ವಾಕ್ಯವ ಕೇಳಿ ದಾನಧರ್ಮಗಳ ಮಾಡುವಣ್ಣಗಳನೆಲ್ಲರ ತಲೆಕೆಳಗಾಗಿ ಕಾಲುಮೇಲಾಗಿ ಎಂಬತ್ತುನಾಲ್ಕುಲಕ್ಷ ಯೋನಿಗಳಲ್ಲಿ ರಾಟಾಳ ತಿರುಗಿದಂತೆ ತಿರುಗಿಸಿತ್ತು ಮಾಯೆ. ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರೇ ಬಲ್ಲರಲ್ಲದೆ, ಮಿಕ್ಕಿನ ದೇವ ದಾನವ ಮಾನವರು ಮೊದಲಾದ ಎಲ್ಲರಿಗೂ ಇಲ್ಲ ಇಲ್ಲ ಎಂದನಯ್ಯ ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಣ್ಯದೊಳಗಿರುವಣ್ಣಗಳ ಅಂಗನೆಯರ ಅಂಗಳದಲ್ಲಿರಿಸಿತ್ತು ಮಾಯೆ. ಅರಮನೆಯೊಳಗೆ ಅಂಗನೆಯರ ಸಂಗಸುಖದಲ್ಲಿರುವಣ್ಣಗಳ ಅರಣ್ಯದ ಗುಡ್ಡಗಂಹಾರ ಗುಹ್ಯದಲ್ಲಿರಿಸಿತ್ತು ಮಾಯೆ. ಹೆಣ್ಣುಬಿಟ್ಟೆವೆಂಬಣ್ಣಗಳ ಸ್ತ್ರೀಯರ ಕಣ್ಣ ಮುಂದೆ ಕಾಲಕಟ್ಟಿ ಕೆಡವಿತ್ತು ಮಾಯೆ. ಹೊನ್ನು ಬಿಟ್ಟೆವೆಂಬಣ್ಣಗಳ ಕಳವಳದಿಂದ ಪರದ್ರವ್ಯವ ಅಪಹರಿಸಿತ್ತು ಮಾಯೆ. ಮಣ್ಣಬಿಟ್ಟೆವೆಂಬಣ್ಣಗಳ ಮಠಮಾನ್ಯಕ್ಕೆ ಹೋರಾಡಿಸಿ ದೇಶಭ್ರಷ್ಟನಾಗಿ ತಿರುಗಿಸಿತ್ತು ಮಾಯೆ. ಬುದ್ಧಿವಂತರೆಂಬಣ್ಣಗಳ ಮುದ್ದಿ ನರಕವ ತಿನಿಸಿತ್ತು ಮಾಯೆ. ಸಕಲವಿದ್ಯೆ ಬಲ್ಲೆವೆಂಬಣ್ಣಗಳ ಬಲ್ಲತನ ನೋಡಾ ! ಬಾಲೆಯರ ಬಾಯ ಲೋಳೆಯ ನೆಕ್ಕಿಸಿತ್ತು ಮಾಯೆ. ಸ್ತ್ರೀಯರ ಮುಖ ನೋಡಲಾಗದೆಂದು ಮುಖದಮೇಲೊಂದು ವಸ್ತ್ರವ ಹಾಕಿಕೊಂಡು ತಿರುಗುವಣ್ಣಗಳ ಬಾಲೆಯರ ಬಾಗಿಲ ಮೋರೆಯಲ್ಲಿರಿಸಿತ್ತು ಮಾಯೆ. ಸ್ತ್ರೀಯರ ಕಂಡು ನಾಚಿ ಮಾತಾಡದಣ್ಣಗಳ ನಾಚಿಕೆಯ ಬಿಡಿಸಿ ಮಾತಾಡಿಸಿತ್ತು ಮಾಯೆ. ವಿರಕ್ತರೆಂಬಣ್ಣಗಳ ಬಾಲೆಯರ ಬಾಯಿತೊಂಬಲ ತಿನಿಸಿತ್ತು ಮಾಯೆ. ಪಾದಪೂಜೆಯ ಮಾಡಿ ಪಾದೋದಕ ಪ್ರಸಾದ ಕೊಂಬ ಭಕ್ತಜನಂಗಳ ಪಾದಪೂಜೆಯ ಮಾಡಿಸಿಕೊಂಡು ಪಾದೋದಕ ಪ್ರಸಾದವ ಪಾಲಿಸುವ ಹಿರಿಯರ ಇಂತಪ್ಪ ದೇಶಭಕ್ತರೆಂಬುಭಯರ ಬಾಲೆಯರ ಪಾದಪೂಜೆ ಮಾಡಿಸಿತ್ತು ಮಾಯೆ. ಸರ್ವಾಂಗ ವಿಭೂತಿ ರುದ್ರಾಕ್ಷಿ ಧರಿಸುವಣ್ಣಗಳ ಬಾಲೆಯರ ಮನೆಯಲ್ಲಿ ಒಲಿಯ ಬೂದಿಯ ಬಳಿಸಿತ್ತು ಮಾಯೆ. ಮಂತ್ರವ ನೆನೆವಣ್ಣಗಳ ಬಾಲೆಯರ ನಾಮವ ನೆನಿಸಿ ಅವರ ಬಾಗಿಲ ಮುಂದೆ ಹೆಳವನಂತೆ ಹೊಗಳಿಸಿತ್ತು ಮಾಯೆ. ಕರಸ್ಥಲದಲ್ಲಿ ಲಿಂಗವ ಪಿಡಿವಣ್ಣಗಳ ಬಾಲೆಯ ಕುಚವ ಪಿಡಿಸಿ ಮುಖದ ಮೇಲೆ ಚುಂಬನವ ಕೊಡಿಸಿ ತೊಡೆಯ ಸಂದಿನಲ್ಲಿರಿಸಿತ್ತು ಮಾಯೆ. ಪಂಡಿತರೆಂಬಣ್ಣಗಳ ಬಾಲೆಯರ ಮಲವಸರುವ ಪೃಷ* ಹಿಡಿಸಿತ್ತು ಮಾಯೆ. ಇಂತಪ್ಪ ಮಾಯಾಶಕ್ತಿಯ ಗೆಲುವರೆ ನವಖಂಡಪೃಥ್ವಿಮಧ್ಯದಲ್ಲಿರುವ ದೇವ ದಾನವ ಮಾನವರು ಮೊದಲಾದವರಿಗೂ ಅಳವಲ್ಲ. ಶಿವಜ್ಞಾನಸಂಪನ್ನರಾದ ಶಿವಶರಣರಿಗಲ್ಲದೆ ಇಲ್ಲ ಅಲ್ಲ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹಾವಿನೊಳಗಣ ಸಂಗ ಆವಾಗಲೆಂದರಿಯಬಾರದಯ್ಯ. ಕಿಚ್ಚಿನೊಳಗಣ ಸಂಗ ಸುಟ್ಟು ಭಸ್ಮವ ಮಾಡುವದಯ್ಯ. ಲಿಂಗದೃಷ್ಟಿ ತಪ್ಪಿ, ಅಂಗನೆಯರ ನೋಟ ಬೇಟ ಕಂಗಳ ಕೆಡಿಸಿ ಭಂಗಿತರ ಮಾಡುವುದಯ್ಯ. ಪರಸ್ತ್ರೀಯರ ಕೂಟ ಪಂಚಮಹಾಪಾತಕದಲ್ಲಿಕ್ಕುವುದಯ್ಯ. ಧರೆಯೊಳಕೊಳ್ಳದು; ಹಿರಿಯರು ಮಚ್ಚರು. ಹಿರಿಯರು ಮಚ್ಚರಾಗಿ ಶಿವ ಮುನ್ನವೆ ಮಚ್ಚನು. ನಾಯಕನರಕ ತಪ್ಪದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು, ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು, ಯುಗಜುಗವಿಲ್ಲದಂದು, ಪಿಂಡಾಂಡ ಬ್ರಹ್ಮಾಂಡವಿಲ್ಲದಂದು, ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು, ಅಂದು ಏನೆಂದು ಅರಿಯದಿರ್ಪ ನಮ್ಮ ಬಸವಯ್ಯನು. ಒಂದು ಗುಣವನೊಂದು ಅಕ್ಷರಕ್ಕೆ ತಂದಾತ ನಮ್ಮ ಬಸವಯ್ಯನು. ಆ ಅಕ್ಷರವ ರೂಪಮಾಡಿ, ತ್ರಯಾಕ್ಷರದಲ್ಲಿ ಕಳೆಯ ಸಂಬಂಧಿಸಿದಾತ ನಮ್ಮ ಬಸವಯ್ಯನು. ಆ ಕಳೆಯ ಮೂರು ತೆರನ ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಎಂಬ ಪಂಚತತ್ವವೆ ಪಂಚವದನವಾಗಿ, ಆ ಪಂಚವದನವೇ ಪಂಚೀಕೃತವನೆಯ್ದಿ, ಜಗದಾದಿ ಸೃಷ್ಟಿಯನನುಮಾಡುವುದಕ್ಕೆ ಕರ್ತನಾದ ನಮ್ಮ ಬಸವಯ್ಯನು. ಆ ಸೃಷ್ಟಿಯ ಮುಖವ ಕಂಡು ಸೃಜಿಸಲು ಪುಟ್ಟಿದರು ಪಂಚಶಕ್ತಿಯರು. ಆ ಪಂಚಶಕ್ತಿಯರಿಗೆ ಪಂಚಮೂರ್ತಿಯರ ಕೈಗೊಳಿಸಿದಾತ ನಮ್ಮ ಬಸವಯ್ಯನು. ಆ ಪಂಚಮೂರ್ತಿಗಳಿಂದುತ್ಪತ್ಯವಾದ ಲೋಕವ ನೋಡಲೆಂದು, ಕೈಲಾಸವನೆ ಕಲ್ಯಾಣವ ಮಾಡಿದಾತ ನಮ್ಮ ಬಸವಯ್ಯನು. ಆ ಕೈಲಾಸವೇ ಕಲ್ಯಾಣವಾಗಲಾ ಕಲ್ಯಾಣಕ್ಕೆ- ಪ್ರಮಥಗಣಂಗಳ, ರುದ್ರಗಣಂಗಳ, ಅಮರಗಣಂಗಳ, ಪುರಾತನಗಣಂಗಳ, ಪುಣ್ಯಗಣಂಗಳ, ಮಹಾಗಣಂಗಳ, ಮುಖ್ಯಗಣಂಗಳ, ಮಹಾಲಿಂಗೈಕ್ಯಸಂಪನ್ನರಂ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯರೆಂಬ ಆಚಾರಾದಿ ಮಹಾಲಿಂಗಸಂಪನ್ನರಂ, ಷಟ್‍ಸ್ಥಲಪ್ರಸಾದಪ್ರಸನ್ನರೂಪರಂ, ಆದಿಮುಕ್ತರಂ, ಅನಾದಿಮುಕ್ತರಂ, ಅಜಾತರಂ, ಅಪ್ರಮಾಣರಂ, ಅನಿಮಿಷಲಿಂಗನಿರೀಕ್ಷಣರಂ, ತ್ರಿವಿಧವಿದೂರರಂ, ತ್ರಿವಿಧಲಿಂಗಾಂಗಮೂರ್ತಿಗಳಂ, ಅರ್ಪಿತಸಂಯೋಗರಂ, ಆಗಮವಿದರಂ, ಅನಾದಿಪರಶಿವಮೂರ್ತಿಗಳಂ, ಏಕಲಿಂಗನಿಷ್ಠಾಪರರುಮಪ್ಪ ಮಹಾಪ್ರಮಥಗಣಂಗಳಂ ತಂದು ನೆರಹಿದಾತ ನಮ್ಮ ಬಸವಯ್ಯನು. ಮರ್ತ್ಯಲೋಕವನೆ ಮಹಾಪ್ರಮಥರ ಬಿಡಾರವ ಮಾಡಿದಾತ ನಮ್ಮ ಬಸವಯ್ಯನು. ಆದಿಯಸೃಷ್ಟಿಯನನಾದಿಯಸೃಷ್ಟಿಗೆ ತಂದು, ಅನಾದಿಸೃಷ್ಟಿಯನಾದಿಸೃಷ್ಟಿಗೆ ತಂದು, ಅಜಾತನಬೀಡನಂಗದಲ್ಲಿ ನೆರಹಿದಾತ ನಮ್ಮ ಬಸವಯ್ಯನು. ಭಾವವಿಲ್ಲದ ಭ್ರಮೆಯ ಭ್ರಮೆಗೊಳಿಸಿ ಭಾವಕ್ಕೆ ತಂದಾತ ನಮ್ಮ ಬಸವಯ್ಯನು. ಬಯಲನೊಂದು ರೂಪಮಾಡಿ ಬಣ್ಣಕ್ಕೆ ತಂದು, ಆ ಬಣ್ಣವ ನಿಜದಲ್ಲಿ ನಿಲಿಸಿದಾತ ನಮ್ಮ ಬಸವಯ್ಯನು. ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಇಚ್ಫೆಯನರಿದು ಅರ್ಪಿತವ ಮಾಡಿದಾತ ನಮ್ಮ ಬಸವಯ್ಯನು. ಅಂಗಸಂಗಿಗಳನಂತರಿಗೆ ಅಂಗನೆಯರ ಅನುಭವವ ನಡಸಿದಾತ ನಮ್ಮ ಬಸವಯ್ಯನು. ಮೂವತ್ತಾರುಸಾವಿರ ಮಾಹೇಶ್ವರರಿಗೆ ಮುಖಮೂರ್ತಿಯಾಗಿ, ಅರ್ಪಿತಪ್ರಸಾದವನನುಭವಿಸಿದಾತ ನಮ್ಮ ಬಸವಯ್ಯನು. ಹನ್ನೆರಡುಸಾವಿರ ರಾಣಿಯರ ಅಂಗವನರ್ಪಿತಪ್ರಸಾದಿಗಳ ಮಾಡಿದಾತ ನಮ್ಮ ಬಸವಯ್ಯನು. ಎಂಬತ್ತೆಂಟುಪವಾಡಮಂ ಗೆದ್ದು ಮುನ್ನೂರರುವತ್ತು ಸತ್ತ ಪ್ರಾಣವನೆತ್ತಿ ಮೆರೆದು ಪರಸಮಯವನಳಿದಾತ ನಮ್ಮ ಬಸವಯ್ಯನು. ಇಪ್ಪತ್ತೈದುಸಾವಿರ ಚಾರ್ವಾಕರಂ ನೆಗ್ಗಿಲೊತ್ತಿ, ಅಪ್ರತಿಮ ಶಿವಗಣಂಗಳ ಮಹಾತ್ಮೆಯಂ ಮೆರೆದಾತ ನಮ್ಮ ಬಸವಯ್ಯನು. ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯಬೆಳೆಯ ಬೆಳೆದು, ಪರಮಪ್ರಸಾದವನೊಂದು ರೂಪಮಾಡಿ ಮೆರೆದು, ಭಕ್ತಿಫಲವನುಂಡಾತ ನಮ್ಮ ಬಸವಯ್ಯನು. ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ, ಅನುಭವಮೂರ್ತಿಯಾದ ನಮ್ಮ ಬಸವಯ್ಯನು. ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು, ಮಂತ್ರ ನಿರ್ಮಂತ್ರವಾದಾತ ನಮ್ಮ ಬಸವಯ್ಯನು. ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ, ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು.
--------------
ನೀಲಮ್ಮ
-->