ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಚ್ಛಾ ಜ್ಞಾನ ಕ್ರಿಯಾ ಶಕ್ತಿ ನಿಮ್ಮಿಚ್ಛೆ ಎಂಬುದಂ ಬಲ್ಲೆ. ಸರ್ವವೂ ಶಿವನಾಜ್ಞೆಯೆಂಬುದಂ ಬಲ್ಲೆ. ಸರ್ವವೂ ಶಿವನಾಜ್ಞೆಯೆಂದು ನಿಮ್ಮಡಿಗಳು ಬೆಸಸಿದ ಸರ್ವಶ್ರುತಿಗಳಂ ಕೇಳಿ ಬಲ್ಲೆನು. ಈ ಹೀಂಗೆಂದರಿದು ಮನ ಮರಳಿ ಬಿದ್ದು ಗುರುಲಿಂಗಜಂಗಮಕ್ಕೆ ನಾನೂ ಮಾಡಿದೆನೆಂಬ ಅವಿಚಾರದ ಮನದ ಮರವೆಯ ನೋಡಾ. ಇದಿರ ಬೇಡಿದಡೆ ಕೊಡರೆಂಬ ಮನದ ಘಸಣಿಯ ನೋಡಾ. ಶಿವ ಶಿವ ಮಹಾದೇವ, ಮನೋನಾಥ ಮನೋಮಯ, ಎನ್ನ ಮನವ ಸಂತವ ಮಾಡಿ ನಿಮ್ಮಲ್ಲಿ ಬೆರಸು, ಬೆರಸದಿದ್ದಡೆ ನಿಮಗೆ ಮಹಾಗಣಂಗಳಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇಂದ್ರಿಯಂಗಳಿಗೆ ಪ್ರೇಮದಿಂದಾಡಿ ನುಡಿದು, ಅವರಿಚ್ಚೆಯ ಬಳಿಸಲುವ ಇಚ್ಚೈಕಪುರುಷರು ಅನೇಕರು. ಆ ಇಂದ್ರಿಯಂಗಳ ನಂದಿಸಿ, ಲಿಂಗೇಂದ್ರಿಯಂಗಳ ಮಾಡಿ, ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷೆ*ಯ ಮಾಡಿ, ಪಂಚಪ್ರೇಮದಿಂದ ನುಡಿದು, ಶಿವಜ್ಞಾನಪಥವ ಹತ್ತಿಸುವ ಪುರುಷರದೇ ಮಾರ್ಗ. ಅವರ ಕಂಡಡೆ ನೀನೆಂಬೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇಚ್ಛೆಯರಿದು, ಕಾಲಕಾಲದಲ್ಲೂ ಇಚ್ಛೆಯ ಸಲಿಸಿ, ನಿರುಪಾಧಿಕ ದಾಸೋಹವ ಮಾಡಿ, ಶಿವನಾನೆಂಬ ಅಹಂಕಾರವಡಗಿದಡೆ ಭಕ್ತನು. ಮಹಾವಸ್ತುಗಳ ಆವ ಕಾಲ ಆವ ಹೊತ್ತು ಆತ ಬೆಸಸಿತ್ತುದ ಮಹಾಪ್ರಸಾದವೆಂದು, ಪ್ರತ್ಯುತ್ತರವಿಲ್ಲದೆ ಆಜ್ಞೆಯಲ್ಲಿ ನಡೆದು, ಆಜ್ಞೆಯಲ್ಲಿ ನುಡಿದು ಇರಬಲ್ಲಡೆ ಆತನೇ ಭಕ್ತನು. ಈ ಸದ್ಭಕ್ತಿ ಬಸವಣ್ಣಂಗಲ್ಲದೆ ಸರ್ವಬ್ರಹ್ಮಾಂಡದೊಳಗಣ ಸರ್ವಲೋಕದ ದೇವ ದಾನವ ಮಾನವರಾರಿಗೂ ಅಳವಡದು, ಆರಿಗೂ ಆಗದು. ಸದ್ಭಕ್ತಿ ಬಸವಣ್ಣಂಗಳವಟ್ಟಿತ್ತು, ಬಸವಣ್ಣನೇ ಭಕ್ತನು, ಬಸವಣ್ಣನ ನೆನೆವುದೇ ಭಕ್ತಿಯ ಪಥವು, ಬಸವಣ್ಣನ ನೆನೆವುದೇ ಮುಕ್ತಿಯ ಪಥವು, ಬಸವಣ್ಣನ ನೆನೆದು ಬದುಕಿದೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇಂತಪ್ಪ ಶಿವಯೋಗಿಯಂ ಇಂದ್ರಿಯಂಗಳು ಕೂಡಿಯಾಡುವ ಮಾನವನು ಬಹು ಚೆಚ್ಚಿಯನುಳ್ಳ ವಾನರನಂ ಬಂಧಿಸಿ ತನ್ನಿಚ್ಛೆಯಲಿ ಆಡಿಸುವ ಯಕ್ಷನ ಹಾಂಗೆ ಉಲಾಯೋಗ ಸ್ಥಾನಂಗಳಲ್ಲಿ ಬ್ರಹ್ಮಾನುಸಂಧಾನದಲ್ಲಿಯುಂ ಎಲ್ಲಾ ಪದಾರ್ಥಂಗಳು ತಟ್ಟು ಮುಟ್ಟಂಗಳಲ್ಲಿಯವುಬಹುದೆ ? ಸಂಸಾರ ಪ್ರಪಂಚವ ಪರಿಹರಿಸುವೆ ಪರಮಾರ್ಥವ ಕಾಣಬಹುದೆ ? ತೆರೆಯಲ್ಲದೆ ಜಲದ ವರ್ತನೆ ನಡೆವುದೆ ? ಆ ಜಲವನು ಪ್ರಯೋಗಿಸುವಂತೆ ಪರವನು ಪ್ರಯೋಗಿಸುವುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಇಷ್ಟಲಿಂಗಕ್ಕೆ ಕಾಯದ ಕೈಯಿಂದ ಮುಟ್ಟಿ ಅಷ್ಟವಿಧಾರ್ಚನೆ, ಷೋಡಶೋಪಚಾರ ಮೈದೋರಿದಲ್ಲದೆ ಆಕಾರನಾಸ್ತಿಯಾಗದು. ಬೆರಣಿಯಲ್ಲಿ ಅಗ್ನಿ ಮೈದೋರದಿದ್ದಡೆ ಆಕಾರನಾಸ್ತಿಯಾಗದು. ಲಿಂಗದಲ್ಲಿದ್ದ ಜವನಿಕೆ ಬಗೆದೆಗೆದಡೆಕಾಯವಿಲ್ಲದೆ ಪ್ರಾಣದ ಪರಿ ನಷ್ಟ, ಜ್ಞಾನಾಗ್ನಿಯಿಂದ ಭೋಗ ನಷ್ಟ. ಇದು ಕಾರಣ, ನಿಮ್ಮ ಶರಣರ ಮತ್ರ್ಯರೆಂದಡೆ ನರಕ ತಪ್ಪದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಇನ್ನು ಮುಕ್ತನೆಂದಡೆ ಮುನ್ನಲೇನು ಬದ್ಧನೇ ? ಮುನ್ನ ಮುನ್ನವೇ ಮುಕ್ತನು. ಒಂದು ಕಾರಣದಿಂದ ಬದ್ಧನಾದಡೇನು ? ಗುರುಕರುಣದಿಂದ ಮುಕ್ತನು. ಗುರುಕರುಣದಿಂದ ಗುರುವಾದ ಬಳಿಕ ಬದ್ಧ_ಮುಕ್ತನೆಂಬ ದಂದುಗದ ನುಡಿ ಹೊದ್ದಲುಂಟೆ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ