ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಂಚಿಸುವ ಸತಿ ಸುತ ಬಂಧು ಮೊದಲಾದ ಲೋಕವ ನಂಬಿ, ನಿರ್ವಂಚಕರಪ್ಪ ಗುರು ಲಿಂಗ ಜಂಗಮರ ವಂಚಿಸಿ ನರಕಕ್ಕಿಳಿವರನೇನೆಂಬೆನಯ್ಯಾ ? ಅಕಟಕಟಾ, ಈ ಹೀಂಗೆ ಶಿವಾಚಾರ ? ಈ ಹೀಂಗೆ ಭೃತ್ಯಾಚಾರ ? ಭಕ್ತಿ ಮುಕ್ತಿಯನರಿಯದೆ ಹೋದರು. ತನು ಮನ ಧನ ಕೆಟ್ಟುಹೋಹುದೆಂಬ ಯುಕ್ತಿಯನರಿಯಿರಿ. ಇದನರಿದು, ವಂಚಿಸುವವರನೆ ವಂಚಿಸಿ ನಿರ್ವಂಚಕರಾಗಿ ಗುರು ಲಿಂಗ ಜಂಗಮಕ್ಕೆ ದಾಸೋಹವ ಮಾಡಲು ತನು ಕೆಡದು, ಮನ ಕೆಡದು, ಧನ ಕೆಡದು. ಮುಕ್ತಿಯುಂಟು ಭಕ್ತಿಯುಂಟು, ಇದು ಸತ್ಯ ಶಿವ ಬಲ್ಲ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೇದಶಾಸ್ತ್ರಪುರಾಣಾಗಮಗ್ರಂಥಂಗಳ ನೋಡಿದವರೆಲ್ಲರೇನು ಹಿರಿಯರೆಂಬೆನೆ ? ಅಲ್ಲಲ್ಲ, ನಿಲ್ಲು, ಮಾಣು. ಅವರೇ ಹಿರಿಯರಾದಡೆ, [ಟ್ಟುನವೆ], ಗಳೆಯಾಟ, ಮಿಣಿಯಾಟ, ಅದೃಶ್ಯಕರಣ, ಅಗ್ನಿಸ್ತಂಭ, ಆಕರ್ಷಣ, eõ್ಞಷಷ್ಠಿಕಲಾವಿದ್ಯೆಯ ಸಾದ್ಥಿಸಿದ ಡೊಂಬನೇನು ಕಿರಿಯನೇ ? ಇದು ಹಿರಿದು ಕಿರಿದಿನ ಪರಿಯಲ್ಲ. ಹಿರಿದು ಕಿರಿದಿನ ಪರಿ ಬೇರೆ ಕಾಣಿರಣ್ಣಾ. ಇದು ಉದರಪೋಷಣವಿದ್ಯೆ ಎನಿಸುವುದು. ಅವರನೆಂತು ಸರಿ ಎಂಬೆನಯ್ಯ, ಲಿಂಗವಂತಂಗೆ ? ಇದು ಕಾರಣ, ಗುಣ, ಜ್ಞಾನ, ಧರ್ಮ, ಆಚಾರ, ಶೀಲ ಸಾದ್ಥಿಸಿದಾತನೇ ಹಿರಿಯ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೇದವನೋದಿ ಕೇಳಿದಡೇನು? ವೇದಜ್ಞನಪ್ಪನಲ್ಲದೆ ಭಕ್ತನಲ್ಲ. ಶಾಸ್ತ್ರಗಳನೋದಿ ಕೇಳಿದಡೇನು? ಮಹಾಶಾಸ್ತ್ರಜ್ಞನಪ್ಪನಲ್ಲದೆ ಭಕ್ತನಲ್ಲ. ಪುರಾಣವನೋದಿ ಕೇಳಿದಡೇನು? ಪುರಾಣಿಕನಪ್ಪನಲ್ಲದೆ ಭಕ್ತನಲ್ಲ. ಆಗಮಂಗಳನೋದಿ ಕೇಳಿದಡೇನು? ಆಗಮಿಕನಪ್ಪನಲ್ಲದೆ ಭಕ್ತನಲ್ಲ. ಇಂತೀ ಸರ್ವವಿದ್ಯೆಂಗಳನೋದಿ ಕೇಳಿದಡೇನು? ಇದಿರ ಬೋದ್ಥಿಸಿ ಉದರವ ಹೊರೆವ ಉದರಪೋಷಕನಪ್ಪನಲ್ಲದೆ ಭಕ್ತನಲ್ಲ. ಯಮಬಾಧೆಗಂಜಿ ಧರ್ಮವ ಮಾಡಿದಡೆ ಧರ್ಮಿಯಪ್ಪನಲ್ಲದೆ ಭಕ್ತನಲ್ಲ. ಸ್ವರ್ಗಭೋಗಿಯಪ್ಪನಲ್ಲದೆ ಭಕ್ತನಲ್ಲ. ಇದು ಕಾರಣ, ಶ್ರೀಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸುವ ಭಕ್ತಿವುಳ್ಳಡೆ ಭಕ್ತದೇಹಿಕ ದೇವ ಪರಶಿವನು, `ಭಕ್ತಕಾಯ ಮಮಕಾಯ' ಎಂದುದಾಗಿ. `ಲಿಂಗಾಲಿಂಗೀ ಮಹಾಜೀವೀ' ಎಂದುದಾಗಿ ಇಂತಪ್ಪ ಮಹಾಭಕ್ತಿಯುಳ್ಳ ಭಕ್ತನ ಸತ್ಯನೆಂಬೆ, ಮುಕ್ತನೆಂಬೆ, ಜಂಗಮವೆಂಬೆ, ಪ್ರಸಾದಿಯೆಂಬೆ, ಪರಮಸುಖಿಯೆಂಬೆನು. ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಟಬೀಜವು ವಟವೃಕ್ಷಕೋಟಿಯನೊಳಕೊಂಡಿಪ್ಪಂತೆ, ಸಟೆಯಿಂದಲಾದಜಾಂಡಕೋಟಿಯನೊಳಕೊಂಡಿಹ ಲಿಂಗವೆ, `ಅಯಂ ಮೇ ಹಸ್ತೋ ಭಗವಾನ್' ಎಂದೆನಿಸುವ ಲಿಂಗವೆ, `ಚಕಿತಮಬ್ಥಿದತ್ತೇ ಶ್ರುತಿರಪಿ' ಎಂದೆನಿಸುವ ಲಿಂಗವೆ, ಎನ್ನ ಕರಸ್ಥಕ್ಕೆ ಬಂದು ಸೂಕ್ಷ್ಮವಾದೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವೇದಶಾಸ್ತ್ರಾಗಮಪುರಾಣಿಯಾದವರಿಂದತ್ತತ್ತ ನೀನು. ನಾದ ಬಿಂದು ಕಳಾತೀತ ಮೂರು ದೇವರರುವಿಂಗತ್ತತ್ತಗೋಚರ. ಭೇದಿಸುವ ಭೇದಕರಿಗಭೇದ್ಯನು, ಉರಿಲಿಂಗ ಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವಶಿಷ*ಗೋತ್ರದಲ್ಲಿ ಹುಟ್ಟಿದವನು ವಶಿಷ*ಗೋತ್ರದವನೆಂಬಂತೆ, ಭಾರದ್ವಾಜಗೋತ್ರದಲ್ಲಿ ಹುಟ್ಟಿದವನು ಭಾರದ್ವಾಜಗೋತ್ರದವನೆಂಬಂತೆ, ಕಾಶ್ಯಪಗೋತ್ರದಲ್ಲಿ ಹುಟ್ಟಿದವನು ಕಾಶ್ಯಪಗೋತ್ರದವನೆಂಬಂತೆ, ವಿಶ್ವಾಮಿತ್ರಗೋತ್ರದಲ್ಲಿ ಹುಟ್ಟಿದವನು ವಿಶ್ವಾಮಿತ್ರಗೋತ್ರದವನೆಂಬಂತೆ ಆ ಪರಿ ಆವಾವ ಗೋತ್ರದಲ್ಲಿ ಆವಾವ ಋಷಿಗಳ ವಂಶದಲ್ಲಿ ಜನಿಸಿದವನು ಆ ಗೋತ್ರ, ಆ ಸಂತತಿ, ಆ ಸುತನು ಎಂಬುದು ಉಪಚರ್ಯವೆ ? ಅಸತ್ಯವೇ ಹೇಳಿರಣ್ಣಾ ? ಅದು ತಾತ್ಪರ್ಯ, ಅದು ಸತ್ಯ. ಆ ಪರಿ ಬ್ರಾಹ್ಮಣನ ಮಗ ಬ್ರಾಹ್ಮಣನು, ಕ್ಷತ್ರಿಯನ ಮಗ ಕ್ಷತ್ರಿಯನು, ವೈಶ್ಯನ ಮಗ ವೈಶ್ಯನು, ಶೂದ್ರನ ಶೂದ್ರನು, ಆ ಪರಿ ತಪ್ಪದು. ದಿಟ ದಿಟ ವಿಚಾರಿಸಿ ನೋಡಿರೆ. ಅದು ಹೇಗೆಂದಡೆ ಶ್ರುತಿ: `ಮಹಾಬ್ರಾಹ್ಮಣಮೀಶಾನಂ' ಎಂದುದಾಗಿ ಮತ್ತಂ `ವಿರೂಪಾಕ್ಷಂ ದ್ವಿಜೋತ್ತಮಂ' ಎಂದುದಾಗಿ ಮಹಾಬ್ರಾಹ್ಮಣನೇ ಮಹಾದೇವನು. ಇದಕ್ಕೆ ಮತ್ತೆ ಶಿವರಹಸ್ಯದಲ್ಲಿ ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಃ ಪರಂ ತತ್ತ್ವಂ ತಸ್ಮೈ ಶ್ರೀಗುರುವೇ ನಮಃ ಎಂದುದಾಗಿ, ಮಹಾದೇವನೇ ಶ್ರೀಗುರು ಕಾಣಿರಣ್ಣಾ. ಆ ಶ್ರೀಗುರುವಿನ ಕರಕಮಲದಲ್ಲಿ ಉದ್ಭವಿಸಿದ ತಚ್ಛಿಷ್ಯನೇ ಮಹಾಬ್ರಾಹ್ಮಣನು, ಇಂತೆಂಬುದು ಹುಸಿಯಲ್ಲ. ಜಾತಿ ಅಜಾತಿ ಎಂದು ಅಷ್ಟಾದಶಜಾತಿಯೊಳಗೆ ಇಕ್ಕಲಾಗದು. ಅಷ್ಟಾದಶಜಾತಿಯೊಳಗೊಂದೂ ಭಾವಿಸಲಾಗದು. ಆ ಮಹಿಮನೇ ಸತ್ಕುಲಜನು. ಇದಕ್ಕೆ ಮತ್ತುಂ `ಬ್ರಹ್ಮಣಾ ಚರತೀ ಬ್ರಾಹ್ಮಣಃ' ಎಂದುದಾಗಿ ಆ ಮಹಾಮಹಿಮನು ಬ್ರಹ್ಮವ ಆಚರಿಸುವನಾಗಿ ಬ್ರಾಹ್ಮಣ ಮತ್ತಂ ಕೂರ್ಮಪುರಾಣದಲಿ `ಸ ಏವ ಭಸ್ಮಜ್ಯೋತಿಃ' ಎಂದುದಾಗಿ ವಿಭೂತಿಯ ಧರಿಸಿಪ್ಪವನಾಗಿ ಆ ಮಹಾತ್ಮನೇ ಜ್ಯೋತಿರ್ಲಿಂಗವು. ಮತ್ತಂ ಶಿವಧರ್ಮದಲ್ಲಿ `ರುದ್ರಾಕ್ಷಂ ಧಾರಯೇನ್ನಿತ್ಯಂ ರುದ್ರಸ್ಸಾಕ್ಷಾದಿವ ಸ್ಮøತಃ' ಎಂದುದಾಗಿ ರುದ್ರಾಕ್ಷಿಯಂ ಧರಿಸಿಪ್ಪª ತಾನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಕಾಳಿಕಾಗಮದಲ್ಲಿ `ತಸ್ಮಿನ್ವೇದಾಶ್ಚ ಶಾಸ್ತ್ರಾಣಿ ಮಂತ್ರಃ ಪಂಚಾಕ್ಷರೀ ತಥಾ ಎಂದುದಾಗಿ, ಶ್ರೀ ಪಂಚಾಕ್ಷರಿಯ ಜಪಿಸುವನಾಗಿ ಆ ಮಹಿಮನೇ ವೇದವಿತ ಶಾಸ್ತ್ರಜ್ಞನು. ಮತ್ತಂ ಲೈಂಗೇ ಮೂಢನಾಮಪ್ಯಯುಕ್ತಾನಾಂ ಪಾಪಿನಾಂ ಚಾಭಿಚಾರಿಣಾಂ ಯಮಲೋಕೋ ನ ವಿದ್ಯೇತ ಸದಾ ವೈ ಲಿಂಗಧಾರಣಾತ್ ಎಂದುದಾಗಿ ಲಿಂಗವ ಧರಿಸಿಪ್ಪನಾಗಿ ಆ ಮಹಾಮಹಿಮನೇ ಲಿಂಗದೇಹಿ, ಲಿಂಗಕಾಯನು, ಲಿಂಗಪ್ರಾಣನು ಶಿವಲಿಂಗಾರ್ಚನೆಯಂ ಮಾಡುವನಾಗಿ, ಆ ಮಹಾಮಹಿಮನೇ ಶಿವನು ಮತ್ತಂ ಆದಿತ್ಯಪುರಾಣೇ ಅಕೃತ್ವಾ ಪೂಜನಂ ಶಂಭೋರ್ಯೋ ಭುಂಕ್ತೇ ಪಾಪಕೃದ್ದ್ವಿಜಃ ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ ಎಂದುದಾಗಿ ಶಿವಲಿಂಗಕ್ಕೆ ಅರ್ಪಿಸದೇ ಕೊಳ್ಳನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಶಾಂಕರಸಂಹಿತೆಯಲ್ಲಿ ತಿಲಷೋಡಶಭಾಗಂ ತು ತೃಣಾಗ್ರಾಂಬುಕಣೋಪಮಂ ಪಾದೋದಕಪ್ರಸಾದಾನಾಂ ಸೇವನಾನ್ ಮೋಕ್ಷಮಾಪ್ನುಯಾತ್ ಎಂದುದಾಗಿ ಪಾದೋದಕ ಪ್ರಸಾದವಂ ಕೊಂಬನಾಗಿ ಆ ಮಹಾತ್ಮರು ತಾನೇ ಲಿಂಗೈಕ್ಯನು. ಇನ್ನು ನಾನಾವೇದಶಾಸ್ತ್ರಪುರಾಣಾಗಮಂಗಳ ಸಮ್ಮತ ದೃಷ್ಟವಾಕ್ಯಂಗಳನು ವಿಚಾರಿಸಿ ನೋಡಿದಡೆಯೂ ಶಿವಭಕ್ತನೇ ಕುಲಜನು, ಶಿವಭಕ್ತನೇ ಉತ್ತಮನು. ಇಂತಹ ಶಿವಭಕ್ತನನು ಜಾತಿವಿಜಾತಿ ಎಂದು ಭಾವಿಸಿದಡೆ, ಮತ್ರ್ಯನೆಂದು ಭಾವಿಸಿದಡೆ ನರಕ ತಪ್ಪದು. ವಶಿಷ* ಪುರಾಣದಲ್ಲಿ ಕೇಳಿರೆ: ಮತ್ರ್ಯವನ್ಮನುತೇ ಯಸ್ತು ಶಿವನಿಷ*ಂ ದ್ವಿಜಂ ನರಃ ಕುಂಭೀಪಾಕೇ ತು ಪತತಿ ನರಕೇ ಕಾಲಮಕ್ಷಯಂ ಎಂದುದಾಗಿ ಇದು ಕಾರಣ ಅಷ್ಟಾದಶವಿದ್ಯಂಗಳನು ವಿಚಾರಿಸಿ ತಿಳಿದು ನೋಡಿದಡೆ ಋಷಿಪುತ್ರನ ಋಷಿ ಎಂಬಂತೆ ಶ್ರೀಗುರುಪುತ್ರನನು ಶ್ರೀಗುರು ಎಂಬುದಯ್ಯಾ. ಆ ಮಹಾಮಹಿಮನ ದರ್ಶನವ ಮಾಡಿ ಪಾದೋದಕ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಿತ್ತಂ ಚ ರಾಜವಿತ್ತಂ ಚ ಕಾಮಿನೀ ಕಾಮಕಾವಶಾ ಪೃಥಿವೀ ವೀರಭೋಜ್ಯಾ ಚ ಸ್ವಧನಂ ಧರ್ಮ ಏವ ಚ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ಅಧರ್ಮಾತ್ ಜಾಯತೇ ಕಾಮಃ ಕ್ರೋಧೋ[s] ಧರ್ಮಾಚ್ಚ ಜಾಯತೇ ಧರ್ಮಾತ್ ಸಂಜಾಯತೇ ಮೋಕ್ಷಃ ತಸ್ಮಾದ್ಧರ್ಮಂ ಸಮಾಚರೇತ್ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ ಧನ ಕೆಡದ ಹಾಂಗೆ. ಕ್ಷಣಂ ಚಿತ್ತಂ ಕ್ಷಣಂ ವಿತ್ತಂ ಕ್ಷಣಂ ಜೀವನಮೇವ ಚ ಯಮಸ್ಯ ಕರುಣೋ ನಾಸ್ತಿ ಧರ್ಮಸ್ಯ ತ್ವರಿತಾ ಗತಿಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಇಂತು, ನಾನಾ ವೇದ ಶಾಸಸ್ತ್ರ ಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿದರೆ ಸತ್ಪಾತ್ರಕ್ಕೆ ಮಾಡಿ ಧನ ಕೆಡದ ಹಾಂಗೆ. ಪಾತ್ರಪರೀಕ್ಷೆಗಳಲ್ಲಿ ಸತ್ಪಾತ್ರರು ಮಾಹೇಶ್ವರರು. ಅಲ್ಲಿ ಪ್ರೇಮ ಪ್ರೀತಿ ಕಿಂಕರತೆಯಿಂದ ದಾಸೋಹವ ಮಾಡಿ ಬದುಕಿರೆ. ನ ಮೇ ಪ್ರಿಯಶ್ಚತುರ್ವೆದೀ ಮದ್ಭಕ್ತ ಶ್ವಪಚೋಪಿ ವಾ ತಸ್ಮೈ ದೇಯಂ ತತೋ ಗ್ರಾಹ್ಯಂ ಯಥಾ ಪೂಜ್ಯಸ್ತಧಾಹಿ ಸಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ನಿಕೃಷ್ಟಚಾರಜನ್ಮಾನೋ ವಿರುದ್ಧಾ ಲೋಕವೃತ್ತಿಷು ಕೋಟಿಭ್ಯೋ ವೇದವಿದುಷಾಂ ಶ್ರೇಷಾ* ಮದ್ಭಾವಭಾವಿತಾಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಚತುರ್ವೇದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ ದುಷ್ಟಚಾಂಡಾಲಭಾಂಡಸ್ಥಂ ಯಥಾ ಭಾಗೀರಥೀಜಲಂ ಚುರ್ವೇದಧರೋ ವಿಪ್ರಃ ಶಿವದೀಕ್ಷಾವಿವರ್ಜಿತಃ ತಸ್ಯ ಭೋಜನದಾನೇನ ದಾತಾ ಚ ನರಕಂ ವ್ರಜೇತ್ ಚದುರ್ವೇದಧರೋ ವಿಪ್ರಃ ಸರ್ವಶಾಸ್ತ್ರವಿಶಾರದಃ ಶಿವಜ್ಞಾನಂ [ನ]ಜಾನಾತಿ ದರ್ವೀ ಪಾಕರಸಂ ಯಥಾ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಇಂತು ನಾನಾವೇದಶಾಸ್ತ್ರಪುರಾಣಾಗಮಂಗಳಲ್ಲಿ ವಿಚಾರಿಸಿ ನೋಡಿ, ಮಾಡಿ ಮಾಡಿ, ಮಾಹೇಶ್ವರರಿಗೆ. ಫಲವ ಬಯಸಲು ಫಲವಹುದು. ಮುಕ್ತಿಯ ಬಯಸಲು ಮುಕ್ತಿಯಹುದು. ಅನಿಮಿತ್ತಂ ನಿಮಿತ್ತಂ ಚ ಉಪಾಧಿರ್ನಿರುಪಾಧಿಕಂ ದಾಸೋಹಯುಕ್ತ ಕರ್ಮಾ ಚ ಯಥಾ ಕರ್ಮ ತಥಾ ಫಲಂ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಅನಾದರಾದಹಂಕಾರಾತ್ ಮೋಹಾದ್ಭೀತಿರುಪಾಧಿಕಾ ಕೀರ್ತಿಶ್ಚ ಷಡ್ಗುಣೋ ನಾಸ್ತಿ ದಾಸೋಹಶ್ಚ ಸ್ವಯಂ ಶಿವಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಕೆಡಬೇಡ ಕೆಡಬೇಡ. ಸಾಲೋಕ್ಯಾದಪಿ ಸಾಮೀಪ್ಯಾತ್ ಸಾರೂಪ್ಯಾಚ್ಚ ಸಯುಜ್ಯಕಾತ್ ಶಿವತತ್ತ್ವಾದಿಶೇಷಶ್ಚ ಸ್ವಯಂ ದಾಸೋಹ ಉತ್ತಮಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಸಕೃಲ್ಲಿಂಗಾರ್ಚಕೇ ದತ್ವಾ ವಸ್ತ್ರಮಾತ್ರಂ ಯಥೇಪ್ಸಿತಂ ಏಕತಂತ್ರಂ ಲಭೇದ್ರಾಜ್ಯಂ ಶಿವಸಾಯುಜ್ಯಮಾಪ್ನುಯಾತ್ ಸಕೃಲ್ಲಿಂಗಾರ್ಚಕೇ ದತ್ವಾ ಗೋಷ್ಟದಂ ಭೂಮಿಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವೇನ ಸಹ ಮೋದತೇ ಸಕೃಲ್ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ದೇವೈಶ್ಚ ಪೂಜ್ಯಮಾನಸ್ತು ಗಣಮುಖ್ಯೋ ಗಣೇಶ್ವರಃ ಸಕೃಲ್ಲಿಂಗಾರ್ಚಕೇ ದತ್ವಾ ಭಿಕ್ಷಾಮಾತ್ರಂ ಚ ಸಾದರಂ ಪದ್ಮಾನಿ ದಶಸಾಹಸ್ರಂ ಪಿತ್ರೂಣಾಂ ದತ್ತಮಕ್ಷಯಂ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ. ಸಾವು, ದಿಟ ದಿಟ. ದಾಸೋಹವ ಮಾಡಲು ತನು ಕೆಡದ ಹಾಂಗೆ ಸತ್ಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್ ಅಪಾತ್ರದತ್ತವಿತ್ತಂ ಚ ತದ್ದಾನಾದಸುಖಂ ಭವೇತ್ ಎಂಬುದನರಿದುದಕ್ಕೆ ಸತ್ಪಾತ್ರವಾವುದೆಂದಡೆ: ಕಿಂಚಿದ್ವೇದಮಯಂ ಪಾತ್ರಂ ಕಿಂಚಿತ್ಪಾತ್ರಂ ತಪೋಮಯಂ ಆಗಮಿಷ್ಯತಿ ಯತ್ಪಾತ್ರಂ ತತ್ಪಾತ್ರಂ ತಾರಯಿಷ್ಯತಿ ಸರ್ವೇಷಾಮೇವ ಪಾತ್ರಾಣಮತಿಪಾತ್ರಂ ಮಹೇಶ್ವರಃ ಎಂಬುದನರಿದು, ಮಾಡಿ ಮಾಡಿ, ಮಾಹೇಶ್ವರರಿಗೆ, ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ಸಂಶಯಃ ಇಂತೆಂದುದಾಗಿ, ಅರಿದು ಇದು ಕಾರಣ, ಅರಿವನೇ ಅರಿದು, ಮರವೆಯನೇ ಮರದು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ[ನ]ರಿದು, ಪೂಜಿಸಲು ಇಹಪರಸಿದ್ಧಿ ಸದ್ಯೋನ್ಮುಕ್ತಿ ಕೇಳಿರಣ್ಣಾ.
--------------
ಉರಿಲಿಂಗಪೆದ್ದಿ
ವಿಶ್ವಾಸವೆ ಭಕ್ತಿ, ಗುರುಲಿಂಗಜಂಗಮವೊಂದೆಂದರಿವುದೆ ಜ್ಞಾನ, ತ್ರಿವಿಧದಲ್ಲಿ ನಿರ್ವಂಚನೆಯೆ ವೈರಾಗ್ಯ, ಪ್ರಸಾದವೆ ಮುಕ್ತಿ. ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವಂಚನೆಯಿಲ್ಲದುದೇ ಭಕ್ತಿ, ಗುರು ಲಿಂಗ ಜಂಗಮ ಒಂದೆಂದರಿವುದೇ ಜ್ಞಾನ, ಆಶೆಯಿಲ್ಲದುದೇ ವೈರಾಗ್ಯ, ಪ್ರಸಾದ ಕೇವಲ ಮುಕ್ತಿ, ಇದು ಸತ್ಯ, ನಿತ್ಯ, ಶಿವ ಬಲ್ಲನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವ್ಯಾಸಾದಿಗಳಂತೆ ಶ್ವಾನಜ್ಞಾನಿಗಳಪ್ಪರೆ ಸತ್ಯಶುದ್ಧಶರಣರು ? `ನ ದೇವಃ ಕೇಶವಾತ್ಪರಂ' ಎಂದ ವ್ಯಾಸ, ತನ್ನ ತೋಳುಗಳನೆರಡನು ಹೋಗಲಾಡನೆ ? ಹಿಡಿಯರೆ ಅಂದು ಆಕಾಶಗಣಂಗಳು ? ಮರಳಿ ಈಶ್ವರನಲ್ಲದೆ ದೈವವಿಲ್ಲೆಂದು ಶ್ರುತ್ಯರ್ಥವನರಿದು ದೇವಾರ್ಚನೆಯಂ ಮಾಡಲಾಗಿ ಆ ವ್ಯಾಸನ ಎರಡು ಕರಂಗಳು ಬಂದು, ಅಶೇಷವಹಂತಹ ಚರ್ಮ ಈಶ್ವರನ ಆಲಯದ ಮುಂದೆ ಧ್ವಜಪತಾಕೆಗಳಾಗದೆ ? ಈರೇಳು ಲೋಕವು ಅರಿಯೆ. ಅನಂತಪುರಾಣಾಗಮಗಳಲ್ಲಿ ಕೇಳಿರೆ: ಈಶ್ವರಾರ್ಚನೆಯ ಮಾಡಿ ಮರಳಿ ವಿತಥವಾಗಿ ಪರದಾರಕಿಚ್ಚೈಸಿದಡೆ ಇವಂಗಿದೆ ಪ್ರಿಯವೆಂದು ಆ ಇಂದ್ರನ ಮೈಯೆಲ್ಲಾ ಅನಂಗನಹಂತಹ ಅಂಗವಾಗದೆ ? ಈರೇಳು ಭುವನವರಿಯೆ. ಮರಳಿ ಈಶ್ವರಾರ್ಚನೆಯ ಮಾಡಲು ಆ ಅಂಗದ ಯೋನಿ[ಕೂ]ಪೆಲ್ಲಾ ನಯನಂಗಳಾಗವೆ ಇಂದ್ರಂಗೆ ? ಇದನರಿದು ಶಿವಾರ್ಚನೆಯಂ ಮಾಡಿ ಶಿವನವರಿಗೆ ಧನಸಹಿತ ತ್ರಿವಿಧವ ನಿವೇದಿಸುವುದು ಶಿವಾಚಾರ ಕೇಳಿರಣ್ಣಾ. ಅರಿದರಿದು ಬರಿದೊರೆ ಹೋಗಬೇಡ. ಋಷಿಗಳ ಶಿವಾರ್ಚನೆಯ ವಿಶೇಷವಹಂತಹ ಫಲವ ಕೇಳಿರಣ್ಣಾ: ಕೀಳುಗುಲದ ಋಷಿಗಳ ಕುಲನಾಮಂಗಳ ತೊಡೆದು ಮೇಲುಗುಲನಾಮವ ಕೇಳಿರಣ್ಣಾ. ಅದು ಹೇಗೆಂದಡೆ: ಮುಖದಿಂದುತ್ಪತ್ಯವಾದ ಬ್ರಾಹ್ಮಣನು ಆ ಋಷಿಗಳ ಶಾಖೆಯಾದನು, ಅವರ ಗೋತ್ರವಾದನು. ಶಿವಾಚಾರ ವಿಶೇಷವೊ ? ಕುಲ ವಿಶೇಷವೊ ? ಹೇಳಿರಣ್ಣಾ. `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬ ಕ್ರೂರಹೃದಯರ ಮಾತ ಕೇಳಲಾಗದು. ಹೋಹೋ ಶಿವನ ಮುಖದಿಂದ ಹುಟ್ಟಿ ಉತ್ತಮವಹಂತಹ ಬ್ರಾಹ್ಮಣಧರ್ಮದಲ್ಲಿ ಜನಿಸಿದಂತಹ ವರ್ಣಿಗಳು ಕ್ಷತ್ರಿಯನ ಭಜಿಸ ಹೇಳಿತ್ತೆ ಈ ವೇದ ? `ಶಿವ ಏಕೋ ಧ್ಯೇಯಃ ಶಿವಂಕರಃ ಸರ್ವಮನ್ಯತ್ಪರಿತ್ಯಜೇತ್' ಎಂದುದಾಗಿ_ ಶಿವನನೆ ಧ್ಯಾನಿಸಿ, ಇತರ ದೇವತೆಗಳ ಬಿಡಹೇಳಿತ್ತಲ್ಲವೆ ? ಅದಂತಿರಲಿ, ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು ಸತ್ತ ಕಪಿಲೆಯ ಕಡಿದು ಹಂಚಿ ತಿನ್ನ ಹೇಳಿತ್ತೆ ವೇದ ? ಆಗದು ಅವದಿರ ಸಂಗ. ಅಧಮರ ವರ್ಣಾಶ್ರಮಹೀನರ ಕರ್ಮವ ಕಳೆದೆಹೆವೆಂದು ದತ್ತಪುತ್ರರಾಗಿ ಹೊರಸಿ[ನಡಿ]ಯಲಿ ನುಸುಳ ಹೇಳಿತ್ತೇ ಆ ವೇದ ? ಭುಂಜಿಸಿ ಮುಕ್ತಿಯನಿತ್ತಿಹೆವೆಂದಡೆ ಅದಂತಿರಲಿ, ಹಲ ಕೆಲ ಕಾಲ ವಂದಿಸಿದ ಗೌತಮಂಗೆ ಬಾರದೆ ಅಂದು ಗೋವಧೆ ? ಅದಂತಿರಲಿ, ಬ್ರಾಹ್ಮಣರೆ ದೈವವೆಂದು ದಾನಾದಿಗಳ ಮಾಡಿದ ಕರ್ಣನ ಶಿರಕವಚ ಹೋಗದೆ ಜಗವರಿಯೆ ? ವಿಷ್ಣುದೈವವೆಂದರ್ಚಿಸಿದ ಬಲಿ ಬಂಧನಕ್ಕೆ ಬಾರನೆ ಮೂಜಗವರಿಯೆ ? ಶಿಬಿಯ ಮಾಂಸವ ಕೊಂಡು ಇತ್ತ ಮುಕ್ತಿಯ ಕೇಳಿರಣ್ಣಾ. ಅವಂಗೆ ಬಂದ ವಿಧಿಯ ಹೇಳಲಾಗದು. ಅದಂತಿರಲಿ, ಶಿವನ ಭಕ್ತರಿಗೆ ಪರಮಾಣುವಿನಷ್ಟು ಕಾಂಚನವನೀಯೆ ಅಣಿಮಾದ್ಯಷ್ಟಮಹದೈಶ್ವರ್ಯವನೀವರು, ಮೇಲೆ ಮುಕ್ತಿಯಹುದು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ಭೂಲೋಕಾಧಿಪತಿರ್ಭೂತ್ವಾ ಶಿವ ಸಾಯುಜ್ಯಮಾಪ್ನುಯಾತ್ ಎಂದುದಾಗಿ, ಅದಲ್ಲದೆ ಮತ್ತೆ ದಾನಪರಿಗ್ರಹಂಗಳಂ ಕೊಂಡ ಕೆಲಬರ ಮುಕ್ತರ ಮಾಡಿ ಶಿವಲೋಕಕ್ಕೆ ಕೊಂಡೊಯ್ದುದುಂಟಾದಡೆ ಹೇಳಿರಣ್ಣಾ ? ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ ಇದು ಕಾರಣ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಯ್ಯನ ಶರಣಮಹಾತ್ಮೆಯನ್ನು ಯಜುರ್ವೇದ ಸಾಕ್ಷಿಯಾಗಿ ಪೇಳುವೆ ಕಾಶಿಯ ಕಾಂಡದಲ್ಲಿ.
--------------
ಉರಿಲಿಂಗಪೆದ್ದಿ
ವಟಬೀಜ ವಟವೃಕ್ಷಕೋಟಿಯ ನುಂಗಿಪ್ಪಂತೆ ಸಟೆಯಿಂದಾದ ಅಜಾಂಡ ಬ್ರಹ್ಮಾಂಡ ಕೋಟಿಗಳ ನುಂಗಿಪ್ಪ ಲಿಂಗವೇ, ದಿಟಪುಟವಾಗಿ ಕಣ್ಣುಮನಕರಸ್ಥಲಕ್ಕೆ ಪ್ರಕಾಶವಾದೆ. ಮಝಭಾಪು ಮಝಭಾಪು ಲಿಂಗವೇ `ನ ಚ ರೇಣುರ್ನಚಾಕ್ಷುಷಂ ಎಂದೆನಿಸುವ ಲಿಂಗವೇ, ನಿಮ್ಮ ಮುಟ್ಟಿ ಉತ್ಪತ್ತಿಸ್ಥಿತಿಲಯಕ್ಕೆ ಹೊರಗಾದೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವೇದವಾವುದು? ವೇದ್ಯವಾವುದು? ಎಂದು ಭೇದವನರಿದಾತ ಕೃತಾರ್ಥನು. ವೇದವೆಂಬುದಿದುವೆಂದು ವೇದಿಸಿದರು ನಮ್ಮ ಪುರಾತನರು: ವೇದ್ಯ? `ಓಂ ನಮಃ ಶಿವಾಯ' ಎಂಬ ಮಂತ್ರ. ವೇದ್ಯರು? ನಮ್ಮ ಶರಣರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವೇದವಾಕ್ಯ ವಿಚಾರಕ್ಕೆ ಬೀಜ, ಶಾಸ್ತ್ರವಾಕ್ಯ ಸಂದೇಹಕ್ಕೆ ಬೀಜ, ಪುರಾಣವಾಕ್ಯ ಪುಣ್ಯಕ್ಕೆ ಬೀಜ, ಭಕ್ತಿಯ ಫಲ ಭವಕ್ಕೆ ಭೀಜ, ಏಕೋಭಾವನಿಷೆ* ಸಮ್ಯಜ್ಞಾನಕ್ಕೆ ಬೀಜ, ಸಮ್ಯಕ್‍ಜ್ಞಾನ ಅದ್ವೈತಕ್ಕೆ ಬೀಜ, ಅದ್ವೈತ ಅರಿವಿಂಗೆ ಬೀಜ. ಅರಿವನಾರಡಿಗೊಂಡು ಕುರುಹಿಲ್ಲದ ಲಿಂಗದಲ್ಲಿ ತೆರಹಿಲ್ಲದಿಪ್ಪಂದವನರಿಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ವೇದಮಾರ್ಗವ ಮೀರಿದರು ಮಹಾವೇದಿಗಳು ಲಿಂಗವಂತರು, ಆ ಲಿಂಗವಂತರ ಮಹಾವೇದಮಾರ್ಗವ ಲಿಂಗವೇ ಬಲ್ಲನಯ್ಯಾ. ಶಾಸ್ತ್ರಮಾರ್ಗವ ಮೀರಿದರು ಮಹಾಶಾಸ್ತ್ರಜ್ಞರು ಲಿಂಗವಂತರು. ಆ ಲಿಂಗವಂತರ ಮಹಾಶಾಸ್ತ್ರಮಾರ್ಗವ ಲಿಂಗವೇ ಬಲ್ಲನಯ್ಯಾ. ಆಗಮಕ್ರೀಯ ಮೀರಿದರು ಮಹಾ ಆಗಮಿಕರು ಲಿಂಗವಂತರು, ಲಿಂಗವಂತರ ಮಹಾ ಆಗಮಕ್ರೀಯ ಲಿಂಗವೇ ಬಲ್ಲನಯ್ಯಾ. ಪುರಾಣದ ಪರಿಯ ಮೀರಿದರು ಮಹಾಪುರಾಣಿಕರು ಲಿಂಗವಂತರು, ಆ ಲಿಂಗವಂತರ ಪುರಾಣದ ಪರಿಯ ಆ ಲಿಂಗವೇ ಬಲ್ಲನಯ್ಯಾ. ದೇವ ದಾನವಮಾನವರಿಗೆಯೂ ಅರಿಯಬಾರದು. ವೇದಶಾಸ್ತ್ರಪುರಾಣಾನಿ ಸ್ಪಷ್ಟಂ ವೇಶ್ಯಾಂಗನಾ ಇವ ಯಾ ಪುನಶ್ಶಾಂಕರೀ ವಿದ್ಯಾ ಗುಪ್ತಾ ಕುಲವಧೂರಿವ ಎಂದುದಾಗಿ, ಆರಿಗೆಯೂ ಅರಿಯಬಾರದು. ಲಿಂಗವಂತರು ಉಪಮಾತೀತರು, ವಾಙ್ಮನೋತೀತರು, ಆರ ಪರಿಯೂ ಇಲ್ಲ. ಸ್ವೇಚ್ಛಾವಿಗ್ರಹೇಣೈವ ಸ್ವೇಚ್ಛಾಚಾರಗಣೇಶ್ವರಾಃ ಶಿವೇನ ಸಹ ತೇ ಭುಙõïತ್ವಾ ಭಕ್ತಾ ಯಾಂತಿ ಶಿವಂ ಪದಂ ಲೋಕಾಚಾರನಿಬಂಧೇನ ಲೋಕಾಲೋಕವಿವರ್ಜಿತಾಃ ಲೋಕಾಚಾರಂ ಪರಿತ್ಯಜ್ಯ ಪ್ರಾಣಲಿಂಗಪ್ರಸಾದಿನಃ ಎಂದುದಾಗಿ, ಈ ಲೋಕದ ಮಾರ್ಗವ ನಡೆಯರು, ಲೋಕದ ಮಾರ್ಗವ ನುಡಿಯರು. ಲಿಂಗವಂತರ ನಡೆ ನುಡಿ ಆಚಾರ ಅನುಭವ ಆಯತ ಬೇರೆ ಕಾಣಿರಣ್ಣಾ. ಶ್ರೀಗುರುಲಿಂಗದಿಂದಲುದಯಿಸಿ ಪ್ರಾಣಲಿಂಗಸಂಬಂಧಿಗಳಾದ ಮಹಾಲಿಂಗವಂತರಿಗೆ ಪ್ರಾಣಲಿಂಗ, ಕಾಯಲಿಂಗ ಭಕ್ತಕಾಯ ಮಮಕಾಯವಾಗಿ ದೇಹಾದಿ ತತ್ತ್ವವೆಲ್ಲಾ ಶಿವತತ್ತ್ವ. ಇದು ಕಾರಣ, ಸರ್ವಾಂಗಲಿಂಗಮಹಾಮಹಿಮ ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ. ಮುಟ್ಟಿದುದೆಲ್ಲಾ ಅರ್ಪಿತ, ಕೊಂಡುದೆಲ್ಲಾ ಪ್ರಸಾದ. ಸದ್ಯೋನ್ಮುಕ್ತರು, ಸರ್ವಾಂಗಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೇದಾದಿ ಅಷ್ಟಾದಶವಿದ್ಯೆಗಳ ಸರ್ವಮಂತ್ರಗಳ ಮೂಲವು ಶ್ರೀಪಂಚಾಕ್ಷರಿ. ಶಿವಾದಿಸರ್ವತತ್ತ್ವ ಮೂಲವು, ಶ್ರೀಗುರುಲಿಂಗಜಂಗಮ ಪ್ರಾಣಸರ್ವಮೂಲವು, ಶ್ರೀಗುರು ಕರುಣಿಸಿದ ಮಹಾಲಿಂಗದೀಕ್ಷೆ ಶಿಕ್ಷೆ ಸರ್ವಭೋಗಾದಿ ಭೋಗಂಗಳೆಲ್ಲವಕ್ಕೆಯು ಶಿವನ ಸಾಕಾರಮೂರ್ತಿ ಮೂಲವು, ಜಂಗಮ ಕೇವಲ ಮುಕ್ತಿಮೂಲವು, ದಾಸೋಹ ಜ್ಞಾನಮೂಲವು, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೇದವನೋದಿ ಕೇಳಿ ವೇದದ ವರ್ಮವನರಿದ ಫಲ ದಾಸೋಹವಯ್ಯಾ. ಶಾಸ್ತ್ರವನೋದಿ ಕೇಳಿ ಶಾಸ್ತ್ರದ ವರ್ಮವನರಿದ ಫಲ ದಾಸೋಹವಯ್ಯಾ. ಪುರಾಣವನೋದಿ ಕೇಳಿ ಪುರಾಣದ ವರ್ಮವನರಿದ ಫಲ ದಾಸೋಹವಯ್ಯಾ. ಆಗಮವನೋದಿ ಕೇಳಿ ಆಗಮದ ವರ್ಮವನರಿದ ಫಲ ದಾಸೋಹವಯ್ಯಾ. ಪುರಾತನರ ಗೀತ ವಚನ ಪ್ರಸಂಗಾನುಭವದಲ್ಲಿ ದೃಷ್ಟಫಲ ದಾಸೋಹವಯ್ಯಾ. ವೇದಶಾಸ್ತ್ರ ಪುರಾಣ ಆಗಮ ಪುರಾತನರ ಗೀತದ ವಚನ ಪ್ರಸಂಗವನರಿದು ದಾಸೋಹವಿಲ್ಲದಿದ್ದಡೆ ಆ ಓದು ಗಿಳಿ ಓದಿದಂತೆ. ಆ ಕೇಳುವೆ, ಮರುಳ ಕೇಳುವೆಯಂತೆ. ಅವನೇತಕ್ಕೂ ಬಾರ್ತೆಯಲ್ಲಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೇದಂಗಳು ದೈವವೆಂಬ ವಿಪ್ರರಂತಹ ಮರುಳರುಂಟೇ ತ್ರಿಜಗದಲ್ಲಿ ? ವೇದವೆಂಬುದೊಂದು ಸಾಧಕ ಸಂಪತ್ತು. ವೇದಂಗಳು ಶ್ವೇತ, ಅಗಸ್ತ್ಯ, ವಿಶ್ವಾಮಿತ್ರಮುನಿಗಳಿಂದಾದವು. ಶಬ್ದಗಾಂಭೀರ್ಯ ಶ್ರುತಿಕೋಟಿ ಚರಣಕಮಲನೆಂಬ ಲಿಂಗದ ಕೈಯಲ್ಲಿ ಕಲಿತ ವೇದಂಗಳು ಅಜ್ಞಾನಸಂಗವಾಗಿ ಅಗೋಚರವಾಗಿ ನುಡಿದವು. ಋಗ್ವೇದ_`ನಾಹಂಕಾರೋ ಬ್ರಹ್ಮತೇಜಃ ಎಂದುದಾಗಿ, ಯಜುರ್ವೇದ_`ನಾಹಂಕಾರೋ ಲಕ್ಷ್ಮೀಪತಿರ್ವಿಷ್ಣುತೇಜಃ ಎಂದುದಾಗಿ, ಸಾಮವೇದ_`ನಾಹಂ ದೇವೋ ರುದ್ರತೇಜಃ ಎಂದುದಾಗಿ, ಅಥರ್ವಣವೇದ_`ನಾಹಂ ಸ್ಥಲಂ ಎಂದುದಾಗಿ, ಕುಲಮದದಿಂದ ಬ್ರಹ್ಮ ಕೆಟ್ಟ, ಬಲಮದದಿಂದ ವಿಷ್ಣು ಕೆಟ್ಟ, ದೈವಮದದಿಂದ ರುದ್ರ ಕೆಟ್ಟ, ಛಲಮದದಿಂದ ಇಂದ್ರ ಕೆಟ್ಟ, ಇಂತೀ ನಾಲ್ಕು ಶ್ರುತಿಗಳು ತಮ್ಮ ಗರ್ವದಿಂದ ನೂಂಕಿಸಿಕೊಂಡವು ಶಿವನ ಅರಮನೆಯ ಬಾಗಿಲಲ್ಲಿ. ಮತ್ತಾ ಚತುರ್ವೇದಂಗಳು ಬಂದು ಲಿಂಗದ ಚತುರ್ದಿಶೆಯಲ್ಲಿ ಓಲೈಸಿ, ಕೈಮುಗಿದುಕೊಂಡು ಹೊಗಳುತ್ತಿದ್ದವು. ಅದೆಂತೆಂದಡೆ ಶ್ರುತಿ, `ಓಂ ಜಯತತ್ವಾನಾಂ ಪುರುಷಮೇರು ಕಾಮ್ಯಾನಾಂ ಪುಣ್ಯಜಪಧ್ಯಾನಾನಾಂ ಸರ್ವಜನ್ಮವಿನಾಶಿನಾಂ ಆದಿ ಅನಾದಿ ಪಿತ್ರೂಣಾಂ ಅಜಕೋಟಿಸಹಸ್ರವಂದ್ಯಾನಾಂ ದೇವಕೋಟಿಚರಣಕಮಲಾನಾಂ ಎಂದು ವೇದಂಗಳು ದೇವರ ಚರಣದ ಕುರುಹ ಕಾಣವು. ಆದಿಯಲ್ಲಿ ನಮ್ಮ ಪುರಾತನರು ವೇದವನೋದಿದರೆ ? ಇಲ್ಲ. ಕಲ್ಲಿಲಿಟ್ಟರು, ಕಾಲಿಲೊದೆದರು, ಬಿಲ್ವಪತ್ರದ ಮರದ ಕೆಳಗೆ ಲಿಂಗವಂ ಪುಟ್ಟಿಸಿ ನಿಷೆ*ಯ ಪಡೆದರು. ಮನೆಯ ಬಾಗಿಲ ಕಾಯಿಸಿಕೊಂಡರು, ಆಡಿಸಿದರು, ಅಡಗಿಸಿದರು, ಓಡಿದ ಲಿಂಗವಂ ತಂದು ಪ್ರತಿಷೆ*ಯಂ ಮಾಡಿದರು. ಇಂತಪ್ಪ ದೃಷ್ಟವ ಸಾಧಿಸಿದರು ನಮ್ಮ ಪುರಾತನರು. ನಿಮ್ಮವರು ವೇದವನೋದಿದರೆಂಬುದನರಿದು. ಅವರನೊಲ್ಲದೆ ಬಿಟ್ಟ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ