ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ಶ್ರೀಗುರು ಲಿಂಗ ಜಂಗಮ ಪ್ರಸಾದ ಒಂದೇ ಪರಶಿವಮೂರ್ತಿ ಮಹಾವಸ್ತುಗಳು ಕೇಳಿರಣ್ಣಾ. ಅರಿದು ಧ್ಯಾನಿಸಿ ಪೂಜಿಸಿ ಸೇವಿಸಿ ಅರ್ಚಿಸಿ ಅರ್ಪಿಸಿ ಧರಿಸಿ, ಧರ್ಮ ಅರ್ಥ ಕಾಮ ಮೋಕ್ಷ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಈ ಚತುರ್ವಿಧ ಪದವಿಯನೂ ಕೂಡುವರೆ, ಗುರು ಲಿಂಗ ಜಂಗಮ ಪ್ರಸಾದವ ನಂಬುವುದು. ಇದು ಸತ್ಯ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವ ಶಿವ! ಮಹಾದೇವ ಶಿವನೇ ನೀನು ಸರ್ವಜ್ಞನಾಗಿ ಎನ್ನನೂ ನೀನು ಬಲ್ಲೆ. ಈ ಪರಿಯನು ಹರಿಬ್ರಹ್ಮದೇವದಾನವಮಾನವರು ಅರಿಯದೆ ಭ್ರಮಿಸುತ್ತಮಿಪ್ಪರು. ಈ ವಿದ್ಥಿಯನು ತಾತ್ಪಯ್ರ್ಯವೆಂದರಿದೆನಾಗಿ ಸದ್ಯೋನ್ಮುಕ್ತನು, ನಿರಂತರ ಪರಿಣಾಮಿ, ಪರಮಸುಖಸ್ವರೂ[ಪಿ] ನಾನೇ ಅಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದಿಂದ ಉಪಮನ್ಯುವಿಂಗೆ ಶಿವಜ್ಞಾನ ಸಿದ್ಧಿಸಿತ್ತು. ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ ವಸಿಷ್ಠ, ವಾಮದೇವ ಮೊದಲಾದ ಸಮಸ್ತಋಷಿಗಳಿಗೆ ಹಿರಿದಪ್ಪ ಪಾಪದೋಷವು ಹರಿದಿತ್ತು. ಶ್ರೀಮತ್ಪಂಚಾಕ್ಷರಿಯ ಉಚ್ಚರಣದ ವಿಶ್ವಾಸದ ಸಾಧನದಿಂದ ಬ್ರಹ್ಮವಿಷ್ಣ್ವಾದಿಗಳಿಗೆ ಜಗತ್ಸೃಷ್ಟಿರಕ್ಷಾಪತಿತ್ವ ಸಾಧ್ಯವಾಯಿತ್ತು. ಅದೆಂತೆಂದಡೆ:ಬ್ರಹ್ಮಾಂಡಪುರಾಣದಲ್ಲಿ, ಉಪಮನ್ಯುಃ ಪುರಾ ಯೋಗೀ ಮಂತ್ರೇಣಾನೇನ ಸಿದ್ಧಿಮಾನ್ ಲಬ್ಧವಾನ್ಪರಮೇಶತ್ವಂ ಶೈವಶಾಸ್ತ್ರ ಪ್ರವಕ್ತೃತಾಂ ಮತ್ತಂ, ವಿಷ್ಣುಪುರಾಣದಲ್ಲಿ, ವಸಿಷ್ಠವಾಮದೇವಾದ್ಯಾ ಮುನಯೋ ಮುಕ್ತಕಿಲ್ಬಿಷಾಃ ಮಂತ್ರೇಣಾನೇನ ಸಂಸಿದ್ಧಾ ಮಹಾತೇಜಸ್ವಿನೋ[s]ಭವನ್ ಎಂದುದಾಗಿ, ಮತ್ತಂ ಕೂರ್ಮಪುರಾಣದಲ್ಲಿ, ಬ್ರಹ್ಮಾದೀನಾಂ ಚ ದೇವಾನಾಂ ಜಗತ್ಸೃಷ್ಟ್ಯರ್ಥಕಾರಣಂ ಮಂತ್ರಸ್ಯಾಸ್ಯೈವ ಮಹಾತ್ಮ್ಯಾತ್ಸಾಮಥ್ರ್ಯಮುಪಜಾಯತೇ ಎಂದುದಾಗಿ, ಇಂತಪ್ಪ ಪುರಾಣವಾಕ್ಯಂಗಳನರಿದು ವಿಪ್ರರೆಲ್ಲರು ಶ್ರೀ ಪಂಚಾಕ್ಷರಿಯ ಜಪಿಸಿರೋ, ಜಪಿಸಿರೋ. ಮಂತ್ರಂಗಳುಂಟೆಂದು ಕೆಡಬೇಡಿ ಕೆಡಬೇಡಿ. ಮರೆಯದಿರಿ, ಮಹತ್ತಪ್ಪ ಪದವಿಯ ಪಡೆವಡೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವರ ದಿವ್ಯನಾಮವನು.
--------------
ಉರಿಲಿಂಗಪೆದ್ದಿ
ಶಿವ ಶಿವ! ಮಹಾದೇವ, ಎನ್ನ ಗುಣಾವಗುಣವರಿಯದೆ ಇದಿರ ಗುಣವ ವಿಚಾರಿಸುವೆ. ಅವರು ವಂಚಿಸಿಹರೆಂದು ಕೊಡರೆಂದು ನಿಂದಿಸಿಹರೆಂದು ಮಾತಾಪಿತ ಸತಿಸುತರುಗಳಿಗೆ ಸ್ನೇಹಿಸಿಹರೆಂದು ಶಿವ ಶಿವಾ! ಬುದ್ಧಿಯನರಿಯದೆ ನಾ ನಿಮಗೆ ವಂಚನೆಯಿಲ್ಲದೆ ಒಲಿದೆನಾದಡೆ ನೀವೆನಗೆ ಒಳ್ಳಿದರು. `ಸತ್ಯಭಾವಿ ಮಹತ್ಸತ್ಯಂ' ಎಂಬುದಾಗಿ, ನಿಮ್ಮಡಿಗಳ ಸ್ನೇಹಿತರು, ಎನಗೆ ಒಳ್ಳಿದರು. ಸ್ನೇಹ ತಾತ್ಪರ್ಯವ ಮಾಡಿ ಬೇಡಿತ್ತನಿತ್ತು ದೇವಾ ಎನುತಿಪ್ಪರು. ಒಳ್ಳಿತ್ತು ಹೊಲ್ಲೆಹ ಎನ್ನಲ್ಲಿ, ಇದಿರಿಂಗೆ ಅದು ಸ್ವಭಾವ ಗುಣ. ಎನ್ನ ದುರ್ಗುಣಂಗಳ ಕಳದು ಸದ್ಗುಣವ ಮಾಡಿ ನಿನ್ನೊಳಗು ಮಾಡಿಕೊಳ್ಳಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರು ಮಾಡಿದ ಗುರುತ್ವ ಉಪಮಾತೀತವು. ನೇತ್ರದಲ್ಲಿ ತನ್ನ ರೂಪು ತುಂಬಿ ನೇತ್ರವ ಗುರು ಮಾಡಿದನು. ಶ್ರೋತ್ರದಲ್ಲಿ ಮಹಾಮಂತ್ರವ ತುಂಬಿ ಶ್ರೋತ್ರವ ಗುರು ಮಾಡಿದನು. ಘ್ರಾಣದಲ್ಲಿ ಮಹಾಗಂಧವ ತುಂಬಿ ಘ್ರಾಣವ ಗುರು ಮಾಡಿದನು. ಜಿಹ್ವೆಯಲ್ಲಿ ಕರುಣಪ್ರಸಾದವ ತುಂಬಿ ಜಿಹ್ವೆಯ ಗುರು ಮಾಡಿದನು. ಕಾಯವ ಮಹಾಕಾಯವೆನಿಸಿ, ಪ್ರಸಾದಕಾಯವೆನಿಸಿ, ಕಾಯವ ಗುರು ಮಾಡಿದನು. ಪ್ರಾಣವನೂ ಲಿಂಗಪ್ರಾಣಸಂಬಂಧವ ಮಾಡಿ ಪ್ರಾಣವ ಗುರು ಮಾಡಿದನು. ಇಂತು ಅಂತರಂಗ ಬಹಿರಂಗವನು ಗುರು ಮಾಡಿದನು. ಸರ್ವಾಂಗವನು ಗುರುವ ಮಾಡಿದ ಗುರುವಿಂಗೆ ನಾನಿನ್ನೇನ ಮಾಡುವೆನಯ್ಯಾ? ಗುರುಪೂಜೆಗನುವಾದ ದ್ರವ್ಯಂಗಳನೂ, ಆವಾವ ಪದಾರ್ಥಂಗಳನೂ ಆವಾವ ಪುಷ್ಪಫಲಾದಿಗಳನೂ ವಿಚಾರಿಸಿ ನೋಡಿದಡೆ ಆವುವು ಗುರುತ್ವವಿಲ್ಲ. ಸರ್ವದ್ರವ್ಯಮೂಲವೂ ಸರ್ವಪದಾರ್ಥಮೂಲವೂ ಸರ್ವರಸಪುಷ್ಪಫಲಾದಿಗಳಿಗೆ ಎಲ್ಲದಕ್ಕೂ ಮೂಲಿಗ ಮನವು ಗುರುತ್ವವನ್ನುಳ್ಳದ್ದು. ತನ್ನ ಮನೋವಾಕ್‍ಸಹಿತ ಕಾಯವನೂ ಸದ್ಗುರುವಿಂಗಿತ್ತು ಶ್ರೀಗುರು ದರ್ಶನ ಸ್ಪರ್ಶನ ಮಾಡಿ ಸುಖಿಯಪ್ಪೆ ನಾನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರು ಕರುಣಿಸಿ ಪ್ರಾಣಲಿಂಗಸಂಬಂಧವ ಮಾ[ಡೆ] ಸದ್ಭಕ್ತನೆನಿಸಿದ ಬಳಿಕ ಇನ್ನೇನೆಂದುಪಮಿಸಬಹುದಯ್ಯಾ, ಈ ಮಹಾಪಥವನುರಿ `ಅಕಾಯೋ ಭಕ್ತಕಾಯಸ್ತು ಮಮಕಾಯಸ್ತು ಭಕ್ತಿಮಾನ್ ಎಂದುದಾಗಿ ಲಿಂಗಕಾಯ. `ಲಿಂಗಾಂಗೀ ಮಹಜ್ಜೀವೋ ಎಂದುದಾಗಿ ಲಿಂಗಪ್ರಾಣಿ. ಇದು ಕಾರಣ, ಕಾಯ ಲಿಂಗ, ಪ್ರಾಣ ಲಿಂಗ ಅಂತರಂಗ ಬಹಿರಂಗ ಸರ್ವಾಂಗಲಿಂಗ, ಲಿಂಗವಂತನ ಕ್ರೀ ಎಲ್ಲವೂ ಲಿಂಗಕ್ರೀ. ಲಿಂಗ ಮಾಡಿತ್ತೇ ಅರ್ಪಿತ, ಲಿಂಗವಂತನ ಆರೋಗಣೆ ಲಿಂಗದಾರೋಗಣೆ. ಈ ಮಹಾಜ್ಞಾನದ ಪರಿಣಾಮವೇ ಪ್ರಸಾದ, ಇದ್ದುದೇ ದೇವಲೋಕ. ಈ ಮಹಾಕ್ರೀಯ ಲಿಂಗಾಯತದ ಲಿಂಗವಂತರೆ ಬಲ್ಲರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವನೆ, ನಿಮ್ಮ ನಾ ಬಲ್ಲೆನು. `ಗುರುದೇವೋ ಮಹಾದೇವೋ' ಎಂದುದಾಗಿ ಶ್ರೀಗುರು ರೂಪಾಗಿ ಬಂದು ದೀಕ್ಷೆಯಂ ಮಾಡಿ ಶಿವಲಿಂಗವ ಬಿಜಯಂಗೈಸಿ ಕೊಟ್ಟಿರಿ, ಜಂಗಮವ ತೋರಿದಿರಿ. ಇದು ಕಾರಣ, ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ. ನಿಮ್ಮ ಶಿಶುವೆಂದು ಕರುಣಿಸಿ ಪ್ರಸಾದವನಿಕ್ಕಿ ರಕ್ಷಸಿದಿರಿ. ಇದು ಕಾರಣದಿಂದವೂ, ನಿಮ್ಮ ನಾ ಬಲ್ಲೆನು, ಎನ್ನನೂ ನೀವು ಬಲ್ಲಿರಿ. ಮತ್ತೆ ಮರೆಮಾಡಿ, ಜ್ಞಾನವನೂ ಅಜ್ಞಾನವನೂ, ಭಕ್ತಿಯನೂ ಅಭಕ್ತಿಯನೂ ಸುಖವನೂ ದುಃಖವನೂ ಒಡ್ಡಿ ಕಾಡಿದಿರಯ್ಯಾ . ಇವೆಲ್ಲವಕ್ಕೆಯೂ ನೀವೆ ಕಾರಣ. ಇದು ಕಾರಣ, ನಿಮ್ಮ ಬೇರಬಲ್ಲವರಿಗೆ ಎಲೆಯ ತೋರಿ ಆಳವಾಡಿ ಕಾಡುವರೆ ? ಕಾಡದಿರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶ್ರೀಗುರುವೇ ಪರಶಿವಲಿಂಗ, ಪರಶಿವಲಿಂಗವೇ ಜಂಗಮ, ಜಂಗಮವೇ ಪರಶಿವಲಿಂಗ. ಗುರು ಲಿಂಗ ಜಂಗಮ ತ್ರಿವಿಧವೂ ಪರಶಿವಲಿಂಗವೆಂದರಿದು ಮನೋವಾಕ್ಕಾಯವನೊಂದು ಮಾಡಿ ತನು ಮನ ಧನವನೊಂದು ಮಾಡಿ ಆ ಒಂದುಮಾಡಿದ ಮನವನೂ, ಆ ತ್ರಿವಿಧವನೊಂದುಮಾಡಿದ ಪರಶಿವಲಿಂಗದಲ್ಲಿ ಅರ್ಪಿಸಲು ಆ ಲಿಂಗಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಪರಶಿವಲಿಂಗ. ಇಂತು ಬೀಜ-ವೃಕ್ಷ, ಪುಷ್ಪ-ಫಲ ಒಂದೇ. ಪರಶಿವನು ಭಕ್ತಜನಂಗಳ ರಕ್ಷಿಸಲೋಸುಗ[ರ] ದೇವದಾನವ ಮಾನವರಿಗೆ ಕೃಪೆಮಾಡಿ ದೀಕ್ಷೆಯ ಮಾಡಲೋಸುಗರ, ಬಹುವಿಧದಲ್ಲಿ ಶ್ರೀಗುರುರೂಪಾದನು. ಆದರೆ ಶ್ರೀಗುರು ಒಂದೇ ವಸ್ತು, ಪರಶಿವನು. `ಸ್ಥಾವರಂ ಜಂಗಮಾಧಾರಂ' ಎಂದುದಾಗಿ, ಪರಶಿವನು ಶಕ್ತಿವಿನೋದಕಾರಣ ಸದ್ಭಕ್ತಜನಂಗಳಿಗೆ ಪ್ರಸನ್ನವಾಗಲೋಸುಗರ, ದೇವ ದಾನವ ಮಾನವರಲ್ಲಿ ವಿನೋದಿಸಿ ಉತ್ಪತ್ತಿಸ್ಥಿತಿಲಯವ ಮಾಡಲೋಸುಗರ, ಅನೇಕತತ್ತ್ವರೂಪಾದನು ಸರ್ವತತ್ತ್ವರೂಪು ಪರಶಿವನೊಂದೇ ವಸ್ತು, `ತತ್ತ್ವಂ ವಸ್ತುಕಂ' ಎಂದುದಾಗಿ, `ನಾನಾರೂಪಧರಂ ದೇವಂ' ಎಂದುದಾಗಿ, ಪರಶಿವನೊಂದೇ ವಸ್ತು. ಸರ್ವಲೋಕವ ರಕ್ಷಿಸಲೋಸುಗರ, ತನು ಮನ ಧನವನೂ ತನ್ನಲ್ಲಿಗೆ ತೆಗೆದುಕೊಂಡು ಪಾದೋದಕ ಪ್ರಸಾದವನಿತ್ತು ರಕ್ಷಿಸಲೋಸುಗರ, ನಾನಾರೂಪು ಬಹುವಿಧಶೀಲದಿಂ ಜಂಗಮರೂಪಾದನು. `ದಂಡಕ್ಷೀರದ್ವಯಂ ಹಸ್ತೇ' ಎಂದುದಾಗಿ, ಪರಶಿವನೊಂದೇ ವಸ್ತು. `ಯೇ ರುದ್ರಲೋಕಾದವತೀರ್ಯ ರುದ್ರಾ ಎಂದುದಾಗಿ, ಜಂಗಮ ಪರಶಿವನೂ ಒಂದೇ ವಸ್ತು. ಪರಶಿವನ ಪ್ರಸನ್ನವೇ ಪ್ರಸಾದ, ಗುರುಲಿಂಗಜಂಗಮ ತ್ರಿವಿಧಲಿಂಗದಲ್ಲಿ ತನು ಮನ ಧನವನೂ ಸರ್ವಪದಾರ್ಥ ಸರ್ವದ್ರವ್ಯವನೂ ನೇತ್ರದ ಕೈಯಲೂ ಘ್ರಾಣದ ಕೈಯಲೂ ಜಿಹ್ವೆಯ ಕೈಯಲೂ ಪರುಷಭಾವ ಮನವಾಕ್ಕಿನ ಕೈಯಲೂ ಈ ಪ್ರಕರದಿಂದೆಲ್ಲಾ ತೆರದಲ್ಲಿ ಸಕಲನಿಷ್ಕಲವನೆಲ್ಲವನೂ ಅರ್ಪಿಸಿದಲ್ಲಿ ಆ ಪರಶಿವನು ಅನೇಕ ವಿಧದಲ್ಲಿ, ಅನೇಕ ಮುಖದಲ್ಲಿ, ಅರ್ಪಿತವ ಕೈಕೊಂಡು ಪ್ರಸನ್ನವಾಗಲು, ಸದ್ಬಕ್ತಂಗೆ ಬಹುವಿಧ: ಗುರುಮುಖದಲ್ಲಿ ಶುದ್ಧಪ್ರಸಾದ, ಲಿಂಗಮುಖದಲ್ಲಿ ಸಿದ್ಧಪ್ರಸಾದ, ಜಂಗಮಮುಖದಲ್ಲಿ ಪ್ರಸಿದ್ಧಪ್ರಸಾದ. ಗುರುಮುಖದಲ್ಲಿ ನೇತ್ರ ಪ್ರಸಾದ, ಶ್ರೋತ್ರ ಪ್ರಸಾದ, ಘ್ರಾಣ ಪ್ರಸಾದ, ಜಿಹ್ವೆ ಪ್ರಸಾದ, ಪರುಶನ ಪ್ರಸಾದ, ಭಾವ ಪ್ರಸಾದ, ಮನ ಪ್ರಸಾದ ವಾಕ್ ಪ್ರಸಾದ, ಕಾಯ ಪ್ರಸಾದ ಇವುವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಭಕ್ತ ಮಹೇಶ್ವರ ಪ್ರಸಾದಿ ಮನವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಪ್ರಾಣಲಿಂಗಿ ಶರಣನೈಕ್ಯವಾಗಿ ನಡೆದರಯ್ಯಾ ಕ್ರಿಯಾನುಭಾವವಿಡಿದು. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಈ ಭೇದವನು ಭೇದಿಸಬಲ್ಲಡೆ ಇಂದೇ ಇಹವಿಲ್ಲ ಪರವಿಲ್ಲ. ಈ ಒಂದೇ ನಾನಾವಿಧಪ್ರಸಾದ ಅನೇಕದಿನದಿಂ ಪ್ರಸನ್ನನಾಗಲು ಪ್ರಸಾದ ಒಂದೇ ವಸ್ತು ಪರಶಿವನು. ಇದು ಕಾರಣ, ಶ್ರೀಗುರು ಪರಶಿವನು ಜಂಗಮವು ಪ್ರಸಾದವು ಒಂದೇ ಕಾಣಿರಣ್ಣಾ. ಚತುಷ್ಟವನು ವೇದ ಶಾಸ್ತ್ರ ಆಗಮ ಪುರಾಣದಿಂ ವಿಚಾರಿಸಲು ಒಂದೇ ವಸ್ತು. ಆ ವಿಚಾರವ ನಂಬದೇ ಕೆಡಬೇಡ. ಜಂಗಮವೆಯಿದು `ಸ ಭಗವಾನ್ ಯಸ್ಯ ಸರ್ವೇ' ಎಂದುದಾಗಿ `ಸರ್ವಕಾರಣಕಾರಣಾತ್' ಎಂದು ಪರಶಿವಲಿಂಗವಲ್ಲದೆ ಇಲ್ಲ. ಆತನ ಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶರಣಲಿಂಗಸಂಬಂಧಿಯಾದಾತನು ತನ್ನಂಗದ ಲಿಂಗದಲ್ಲಿ ಗೋಳಕ ಕಟಿ ಭಿನ್ನವಾದಲ್ಲಿ ಒಡನೆ ಪ್ರಾಣವಂ ಬಿಡು[ವುದ]ಲ್ಲದೆ ಬಂಧಿಸಿ ಧರಿಸಿಕೊಂಡನಾದಡೆ, ಜನ್ಮಜನ್ಮಾಂತರ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶಿವ ತನ್ನ ವಿನೋದಕ್ಕೆ ರಚಿಸಿದನು, ಅನಂತ ವಿಶ್ವವನು. ರಚಿಸಿದವನು ವಿಶ್ವಕ್ಕೆ ಹೊರಗಾಗಿರ್ದನೆ ? ಇಲ್ಲ. ವಿಶ್ವಮಯ ತಾನಾದನು, ವಿಶ್ವವೆಲ್ಲವೂ ತಾನಾದಡೆ ವಿಶ್ವದುತ್ಪತ್ತಿಸ್ಥಿತಿಲಯಕ್ಕೊಳಗಾದನೇ ? ಇಲ್ಲ. ಅದೇನು ಕಾರಣವೆಂದಡೆ; ಅಜಾತನಾಗಿ ಉತ್ಪತ್ತಿ ಇಲ್ಲ, ಕರ್ಮರಹಿತನಾಗಿ ಸ್ಥಿತಿಗೊಳಗಲ್ಲ. ಮರಣರಹಿತನಾಗಿ ಲಯಕ್ಕೊಳಗಲ್ಲ, ಇಂತೀ ಗುಣತ್ರಯಂಗಳ ಹೊದ್ದಲರಿಯ. ತಾನಲ್ಲದೆ ವಿಶ್ವಕ್ಕಾಧಾರವಿಲ್ಲಾಗಿ ದೂರಸ್ಥನಲ್ಲ. ತನ್ನಲ್ಲಿ ತಾನಲ್ಲದ ಅನ್ಯವು ತೋರಲರಿಯದಾಗಿ, ಇದಿರಿಲ್ಲ. ಇದಿರಿಲ್ಲಾಗಿ ವಿಶ್ವಮಯ ತಾನಾದುದೇ ಸತ್ಯ. ಅರಸು ಕಾಲಾಳಾಗಬಲ್ಲ ತನ್ನ ವಿನೋದಕ್ಕೆ, ಮರಳಿ ಅರಸಾಗಬಲ್ಲ. ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು, ಜಗವಾಗಲೂ ಬಲ್ಲ, ಜಗವಾಗದಿರಲೂ ಬಲ್ಲನಯ್ಯ.
--------------
ಉರಿಲಿಂಗಪೆದ್ದಿ
ಶಿವನು ನರಕಾಯವ ತೊಟ್ಟು ಗುರುರೂಪಾಗಿ ಮತ್ರ್ಯಕ್ಕೆ ಬಂದು ಅಷ್ಟಾದಶಜಾತಿಯೊಳಗಿದ್ದಡೇನು ಮತ್ರ್ಯನೇ ? ಅಲ್ಲ. ಅದೆಂತೆಂದಡೆ:ಶಿವರಹಸ್ಯೇ ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಮಹಾದೇವನು ತಾನೇ_ ಲಲಾಟಲೋಚನಂ ಚಾಂದ್ರೀಕಲಾಮಪಿ ಚ ದೋದ್ರ್ವಯು ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ, ಶಿವನು ಗುರುರೂಪಾಗಿ ವರ್ತಿಸುತ್ತಿಹನು. ಪರಶಿವೋ ಗುರುಮೂರ್ತಿಶ್ಶಿಷ್ಯದೀಕ್ಷಾದಿಕಾರಣಾತ್ ಶಿಷ್ಯಾತೀತಂ ಮಹಾಚೋದ್ಯಂ ಚೋದ್ಯರೂಪಾಯ ವೈ ನಮಃ ಎಂದುದಾಗಿ, ಶಿಷ್ಯಂಗೆ ಕರುಣಿಸಿ ದೀಕ್ಷೆಯಂ ಮಾಡಬೇಕೆಂದು ಬಂದನಯ್ಯಾ, ಮಹಾಕಾರುಣ್ಯಮೂರ್ತಿ ಪರಮಶಿವನು ತಾನೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವಭಕ್ತನ ಕಂಡಲ್ಲಿ ಪಾಪ ಕೇಡುವುದು ಉಪಪಾತಕ ಕೋಟೀನಾಂ ಬ್ರಹ್ಮಹತ್ಯಶತಾನಿ ಚ ದಹತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಂ ಎಂದು, ಪ್ರಿಯಸಂಭಾಷಣೆಯಿಂದ ಕಾಮಿತ ಫಲವಪ್ಪುದು. ಆ ಪ್ರಸಾದಮಹಿಮನ ಪ್ರಸಾದದಿಂದ ಕೇವಲ ಮುಕ್ತಿಯಪ್ಪುದು. ಇದು ಸತ್ಯ, ಶಿವನಾಣೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವಾಚಾರ ಶಿವಕಾರ್ಯಕ್ಕೆ ವಕ್ರವಾದವರ ಗುರುಲಿಂಗಜಂಗಮವ ನಿಂದಿಸಿ ನುಡಿದವರ, ಬಾಯ ಸೀಳಿ ನಾಲಗೆಯ ಕಿತ್ತು ಕೊಲುವೆನು. ಅದೆಂತೆಂದಡೆ: ಯೋ ವಾಪ್ಯುತ್ಪಾಟಯೇಜ್ಜಿಹ್ವಾಂ ಶಿವನಿಂದಾರತಸ್ಯ ತು ತ್ರಿಸಪ್ತಕುಲಮುದ್ಧರೇತ್ ಶಿವಲೋಕೇ ಮಹೀಯತೇ ಎಂದುದಾಗಿ, ಮತ್ತಂ ಶಿವಭಕ್ತನಿಂದಯನು ಎನ್ನ ಕಿವಿಯಲ್ಲಿ ಕೇಳಿ ಆ ನಿಂದಕರ ಕೊಲ್ಲುವೆನು, ಅಲ್ಲದಿರ್ದಡೆ ನಾನು ಸಾವೆನು. ಅದೆಂತೆಂದಡೆ: ಶ್ರುತ್ವಾ ನಿಂದಾಂ ಶಿವಸ್ಯಾಥ ತತ್‍ಕ್ಷಣಾದ್ದೇಹಮುತ್ಸೃ ಜೇತ್ ತಸ್ಯ ದೇಹನಿಹಂತಾ ಚೇತ್ ರುದ್ರಲೋಕಂ ಸ ಗಚ್ಛತಿ ಎಂದುದಾಗಿ, ಇದನರಿತು ಶಿವನಿಂದಕರ ಸಂಹರಿಸಿದಲ್ಲದೆ ಎನಗೆ ಸಂತೋಷವಿಲ್ಲವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರುವಿನಲ್ಲಿ ಸಕಲಮಾಹೇಶ್ವರರಲ್ಲಿ, ಅನುಕೂಲವ ನುಡಿಯದೆ ಪ್ರತಿಭಟಿಸಿ ನುಡಿಯಲಾಗದು. ನುಡಿದಡೆ ಅದು ಶ್ರದ್ಧೆಯಲ್ಲ. ಶ್ರದ್ಧೆಯಿಲ್ಲದವರ ಶಿವನೊಲ್ಲನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ, ಶಬ್ದ ಸ್ಪರ್ಶ ರೂಪು ರಸ ಗಂಧ, ಆಕಾಶ, ವಾಯು, ಅಗ್ನಿ, ಸಲಿಲ, ಭೂಮಿ. ಈ ಸಕಲ ಕಾರಣ ಪ್ರಾಪ್ಯಸ್ವರೂಪನಾಗಿ, ``ಸಾಮವೇದಾಶ್ರಯೋ ಪುರುಷಃ ``ಸ್ವಯಂಜ್ಯೋತಿರಸ್ಮಿನ್ ಮಾನುಷತ್ವಂ ಉಪೇತ್ಯ ಎಂಬ ಶ್ರುತಿಗೆ ಅಪ್ರತಿಮೇಯನಾಗಿ ವಿೂರಿದ, ನಿತ್ಯ ಶುದ್ಧ ಪ್ರಬುದ್ಧ ಬೋಧ ವೇದ್ಯ ಸಂವಿದ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವನೇ ದೈವ, ಶಿವಭಕ್ತನೇ ಕುಲಜ, ಷಡಕ್ಷರವೇ ಮಂತ್ರ, ಕೊಲ್ಲದಿರ್ಪುದೇ ಧರ್ಮ, ಅಧರ್ಮದಿಂದ ಬಂದುದ ಒಲ್ಲದಿಪ್ಪುದೇ ನೇಮ, ಆಶೆ ಇಲ್ಲದಿಪ್ಪುದೇ ತಪ, ರೋಷವಿಲ್ಲದಿಪ್ಪುದೇ ಜಪ, ವಂಚನೆ ಇಲ್ಲದಿಪ್ಪುದೇ ಭಕ್ತಿ, ಹೆಚ್ಚು ಕುಂದಿಲ್ಲದಿಪ್ಪುದೇ ಸಮಯಾಚಾರ. ಇದು ಸತ್ಯ, ಶಿವಬಲ್ಲ, ಶಿವನಾಣೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವಶಿವಾ, ಭಕ್ತಿಹೀನನ ಬಟ್ಟೆಯಲ್ಲಿ ಕಂಡು ನೆಟ್ಟನೆ ಶಿವಭಕ್ತ ಜೋಹಾರ ಎಂದಡೆ, ಸುರಾಪಾನದಲ್ಲಿ ಮಜ್ಜನಮಾಡಿದಂತಾಯಿತ್ತು ಅವನ ಶಿವಪೂಜೆ? ಕಟ್ಟಿದ ಕೆರೆಯನೊಡೆದಂತಾಯಿತ್ತು ಅವನ ಶಿವಪೂಜೆ. ಅಮೇಧ್ಯವ ಭುಂಜಿಸಿದಂತಾಯಿತ್ತು ಅವನ ಶಿವಪೂಜೆ. ಹೇಲೊಳಗಣ ಹುಳವ ಕೋಳಿ ಕೆದರಿದಂತಾಯಿತ್ತು ಅವನ ಶಿವಪೂಜೆ. ಒಣಗಿದೆಲುವ ಸೊಣಗ ಕಡಿದು ತನ್ನ ರಕ್ತವ ತಾನೇ ಭುಂಜಿಸಿದಂತಾಯಿತ್ತು ಅವನ ಶಿವಪೂಜೆ. ಅವನ ಸರ್ವಾಂಗವು ಪಾಕುಳದ ಕುಳಿಯಂತಾಯಿತ್ತು. ಕನ್ನಡಿಯ ಮೇಲೆ ಉದ್ದುರುಳಿದಂತಾಯಿತ್ತು ಅವನ ಶಿವಪೂಜೆ. ಅರೆಯ ಮೇಲೆ ಆಡು ಹಿಕ್ಕೆಯನಿಟ್ಟಂತಾಯಿತ್ತು ಅವನ ಶಿವಪೂಜೆ. ಲೋಳಸರದ ಮೇಲೆ ಬಂಡಿ ಹರಿದಂತಾಯಿತ್ತು ಅವನ ಶಿವಪೂಜೆ. ಅದೆಂತೆಂದಡೆ:ವಿಷ್ಣು ಪುರಾಣೇ, ಬ್ರಹ್ಮಬೀಜಂ ತೃಣಂ ನಾಸ್ತಿ ಕೇಶವಶ್ಚಾಧಿದೇವತಾ ಗುರುಭ್ರಷ್ಟಶ್ಚ ಚಾಂಡಾಲೋ ವಿಪ್ರಃ ಶ್ವಾನೋ ಹಿ ಜಾಯತೇ ವಿಪ್ರಸ್ಯ ದರ್ಶನಂ ಚೈವ ಪಾಪಪಂಜರಮೇವ ಚ ವಿಪ್ರಸ್ಯ ವಂದನಂ ಚೈವ ಕೋಟಿಜನ್ಮಸು ಸೂಕರಃ ಎಂದುದಾಗಿ ರೇಣುಕಾದೇವಿಯ ಮಗನೇ ಬ್ರಾಹ್ಮಣನು, ಮಾತಂಗಿಯ ಮಗನೇ ಹೊಲೆಯನು, ಇವರಿಬ್ಬರೂ ಜಮದಗ್ನಿಗೆ ಹುಟ್ಟಿದರಾಗಿ, ಇದಕ್ಕೆ ಸಾಕ್ಷಿ, ಭಾರದ್ವಾಜ ವಿಶ್ವಾಮಿತ್ರ ಅಗಸ್ತ್ಯ ನಾರದ ಕೌಂಡಿಲ್ಯ ಈಯೈವರು ಸಾಕ್ಷಿಯಲ್ಲಿ, ನಿಮ್ಮ ನಿಮ್ಮೊಳಗೆ ಸಂವಾದವು ಬೇಡೆಂದು ವಿಭಾಗವಂ ಮಾಡಿಕೊಟ್ಟ ವಿವರಮಂ ಕೇಳಿರಣ್ಣಾ ಗ್ರಾಮದೊಳಗಣ ಸೀಮೆಯ ಗೃಹವನೇ ಹೊಲೆಯರಿಗೆ ಕೊಟ್ಟರು, ಸತ್ತ ಹಸುವನೆಳೆದುಕೊಂಡು ಹೋಹವರನೇ ಹೊಲೆಯರ ಮಾಡಿದರು. ಜೀವದ ಹಸುವ ಹದಿನೆಂಟು ಜಾತಿಯ ಮಂಚದಡಿಯಲ್ಲಿ ನುಸಿದು ಗೋದಾನಮುಖದಲ್ಲಿ ಕೊಂಡು ಹೋಹರನೇ ಬ್ರಾಹ್ಮಣರ ಮಾಡಿದರು. ಇನ್ನು ನಿಮಗೂ ತಮಗೂ ಸೊಮ್ಮು ಸಂಬಂಧವಿಲ್ಲವೆಂದು ಕಂಡಾಗ ತೊಲಗುವಂತೆ ಸಂಬೋಳಿಯೆಂಬ ನಾಮಾಂಕಿತವಂ ಕೊಟ್ಟು ತೊರೆ ಪತ್ರಮಂ ಬರೆದರಾಗಿ. ಇದನರಿಯದಿದ್ದಡೆ ಇನ್ನೂ ಕೇಳಿರಣ್ಣ: ನಳಚಕ್ರವರ್ತಿರಾಯನು ಪಿಂಡ ಪಿತೃಕಾರ್ಯವ ಮಾಡುವಲ್ಲಿ, ಹೊನ್ನ ಗೋವಂ ತಂದು ಬಿನ್ನಾಣದಲ್ಲಿ ದಾನವ ಕೊಟ್ಟಲ್ಲಿ, ಹೊಲೆಯರು ನಾಡಕೂಟವ ಕೂಡಿ ಆ ಸ್ಥಲ ತಾರ್ಕಣೆಯಲ್ಲಿ ಪೂರ್ವಸಾಧನ ಸಂಬಂಧದಿಂದ ನ್ಯಾಯವನಾಡಿ ಇತ್ತಂಡವ ಹಂಚಿಕೊಂಡ ವಿವರವ ಕೇಳಿರಣ್ಣಾ: ಕೊಂಬುಕೊಳಗನೇ ತೆಗೆದು ಏಳುನೂರೆಪ್ಪತ್ತು ತೂಕ ಚಿನ್ನವ ಹಂಚಿಕೊಂಡು ಉಳಿದ ಕೊಂಬು ಕೊಳಗವ ವಿಪ್ರರು ಎತ್ತಿಕೊಂಡರಾಗಿ, ಈ ಹೊನ್ನಗೋವನಳಿದು ತಿಂಬ ಕುನ್ನಿಗಳ ಕಂಡು ಕೇಳಿಯೂ ಅರಿದು ಮರೆದೂ ಉತ್ತಮಕುಲದ್ವಿಜರೆಂದು ಅಲ್ಲಿ ಉಪದೇಶವಂ ಕೊಂಡು ನಮಸ್ಕರಿಸುವ ಅಜ್ಞಾನಿ ಹೊಲೆಯರ ನಾನೇನೆಂಬೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರುಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶ್ರೀಗುರುಲಿಂಗವ ಕಂಡೆನು. ಶಿವಲಿಂಗದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಶಿವಲಿಂಗವ ಕಂಡೆನು. ಜಂಗಮಲಿಂಗದಲ್ಲಿ ಬಸವಣ್ಣನ ಕಂಡೆನು. ಬಸವಣ್ಣನಲ್ಲಿ ಜಂಗಮಲಿಂಗವ ಕಂಡೆನು. ಪ್ರಸಾದದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಪ್ರಸಾದವ ಕಂಡೆನು. ಈ ಚತುರ್ವಿಧದಲ್ಲಿ ಬಸವಣ್ಣನ ಕಂಡೆನು, ಬಸವಣ್ಣನಲ್ಲಿ ಚತುರ್ವಿಧವ ಕಂಡೆನು. ಇಂತಹ ಮಹಾಮಹಿಮರುಂಟೆ? ಶಿವ ಶಿವಾ, ಮಹಾದೇವ, ಇಂತಹ ಸದ್ಭಕ್ತರುಂಟೆ? ಇದು ಕಾರಣ, ಶ್ರೀಗುರುಲಿಂಗವೂ ಬಸವಣ್ಣನೇ, ಶಿವಲಿಂಗವೂ ಬಸವಣ್ಣನೇ, ಜಂಗಮಲಿಂಗವೂ ಬಸವಣ್ಣನೇ, ಪ್ರಸಾದಲಿಂಗವೂ ಬಸವಣ್ಣನೇ. ಇಷ್ಟಲಿಂಗವೂ ಬಸವಣ್ಣನೇ, ಪ್ರಾಣಲಿಂಗವೂ ಬಸವಣ್ಣನೇ, ಭಾವಲಿಂಗವೂ ಬಸವಣ್ಣನೇ, ಆಚಾರಲಿಂಗವೂ ಬಸವಣ್ಣನೇ, ಮಹಾಲಿಂಗವೂ ಎನಗೆ ಬಸವಣ್ಣನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶಿವ ಶಿವಾ, ನೀನೆನ್ನ ಮನವ ನೋಡಿಹೆನೆಂಬೆ. ಎನ್ನ ಗುಣಾವಗುಣವ ಹಿಡಿವೆ. ಮನವಾರು? ನೀನಾರು? ಎಂಬುದನರಿಯಾ. ನೀನರಿಯದಿದ್ದಡೆ ನಾನರಿಯೆನೆ? ನಾನರಿಯದಿದ್ದಡೆ ನೀನರಿಯಾ? ಎಂದೆನಗೆ ನೀನು ಪ್ರಾಣಲಿಂಗವಾದೆ, ಅಂದೇ ಲಿಂಗಪ್ರಾಣಿಯಾದೆನು ನಾನು. ಇನ್ನು ಮನಸಿನ್ನಾರದು ಹೇಳಾ? ಅದು ಕಾರಣ ದ್ವಂದ್ವಕರ್ಮ ಮುನ್ನವೇ ನಾಸ್ತಿ. ಇದನು ಶ್ರೀಗುರು ಲಿಂಗ ಜಂಗಮದ ಪ್ರಸಾದವೆಂದ ಶಾಸ್ತ್ರಪುರಾಣಾಗಮಂಗಳು ಈಸಬಲ್ಲುದ ನಾ ತೋರಲೇಕಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?
--------------
ಉರಿಲಿಂಗಪೆದ್ದಿ
ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಮ್ ಅನಿಂದಿತಮ£õ್ಞಪಮ್ಯಮಪ್ರಮೇಯಮನಾಮಯಮ್ ಎಂದು ವೇದಾಗಮಗಳು ಹೇಳಿದ ಹಾಗೆ ಶಿವಶಿವಾ ಹರಹರಾ ಎಂದೆನ್ನದೆ ಭೃಗು ಶಾಪದಿಂದ ಭವಕ್ಕೆ ಬಂದು ಸತ್ತು ಕೆಟ್ಟು ಹೋದ. ದಶರಥರಾಯನು ನಾಚಿಕೆಯಿಲ್ಲದೆ ರಾಮ ರಾಮ ಎಂದು ನೆನೆದರೂ, ಆ ರಾಮ, ರಾವಣನ ಕೊಂದ ಬ್ರಹ್ಮಹತ್ಯಾದೋಷಕ್ಕೆ ಅನೇಕ ಶಿವಲಿಂಗಗಳ ಪ್ರತಿಷೆ*ಯ ಮಾಡಿ ಪೂಜಿಸಿದ. ಹರಿಯು ಆ ಮಹಾಲಿಂಗವ ನೆನೆವುದಕ್ಕೆ ನಾಲಗೆ ಮೂಗ ನಂಜುತ್ತ ಇಹನು. ಕೃಷ್ಣನ ಅಂಗಾಲಕಣ್ಣ ಬೇಡನೆಚ್ಚು ಕೊಂದನೆಂದರೆ, ನಾಚದೆ ಪರಿಣಮಿಸುತ್ತಿಹರು. ನಾರಸಿಂಹನವತಾರವ ಶರಭರುದ್ರ ತೀರ್ಚಿಸಿದನೆಂದರೆ ಉರಿದೇಳುತ್ತಿಹರು. ಗೋವಳರೊಡನುಂಡಯೆಂದರೆ ಪರಿಣಮಿಸಿ ಸಂತೋಷವಹರು. ಆ ಹರಿ ರಾಮೇಶ್ವರದೇವರ ಪ್ರಸಾದವ ಕೊಂಡನೆಂದರೆ ಅವಮಾನಿಸುತ್ತಿಹರು. ಸತ್ತು ಕೆಟ್ಟು ಹುಟ್ಟಿದ ಅಜ್ಞಾನಿ ವಸುದೇವನ ಮಗ ಹರಿಯೆಂದರೆ ನಲಿದುಬ್ಬುವರು. ಆ ಹರಿ ಮಹಾದೇವನ ಮಗನೆಂದರೆ ಸಿಡಿಮಿಡಿಗೊಂಬರು. ಹಲವು ಗಂಡರ ನೆರೆದ ಕುಂತಿಯ ಕಾಲಿಗೆ ಹರಿ ಎರಗಿದನೆಂದರೆ ನಲಿದುಬ್ಬಿ ಕೊಂಡಾಡುವರು. ಆ ಹರಿ ಕಾಮಿತಫಲದಾಯ[ಕ]ನಾದ ಶಿವನ ಶ್ರೀಪಾದಕ್ಕೆ ನಯನಕಮಲಮನರ್ಪಿಸಿ ಚಕ್ರಮಂ ಪಿಡಿದನೆಂದರೆ ಚಿಂತಿಸಿ [ಕರ]ಕರಸುತ್ತಿಹರು. ದ್ವಾರವತಿ ನೀರಿಲಿ ನೆರೆದಾಗ, ಕೃಷ್ಣನ ಹದಿನಾರುಸಾವಿರ ಸ್ತ್ರೀಯರಂ ಹೊಲೆಬೇಡರು ಸೆರೆಯನೊಯ್ದುದಕ್ಕಾಗಿ ಹೀನಜಾತಿಯ ಬಸುರಲ್ಲಿ ಉತ್ತಮಸ್ತ್ರೀಯರು ಹುಟ್ಟುವರೆಂದು ನಲಿದಾಡುವರು. ಮಹಾಲಕ್ಷ್ಮಿ ಸರ್ವರೊಡೆಯ ಶಿವನ ದಾಸಿಯೆಂದರೆ ಅಲಗು ತಾಕಿದಂತೆ ನೋವುತಿಹರು. ಶಿವಲಿಂಗವ ತಪಧ್ಯಾನದಿಂದರ್ಚಿಸಿ ಪೂಜಿಸಿ ಪಡೆದರು ಏಕಾದಶರುದ್ರರಾದಿಯಾದ ರುದ್ರಗಣಂಗಳು. ಬ್ರಹ್ಮವಿಷ್ಣುರುಗಳು ಇಂದ್ರಾದಿ ದಿಕ್ಪಾಲರು ರವಿಚಂದ್ರಾದಿಗಳು ಶಿವನ ಪೂಜಿಸಿ ಕಾಮಿತಫಲಪದವಿಯ ಪಡೆದರಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶ್ರೀಗುರುಕಾರುಣ್ಯವ ಪಡೆದು ಲಿಂಗಸ್ವಾಯತವಾದ ಬಳಿಕ ಸರ್ವಾಂಗಲಿಂಗಮೂರ್ತಿ ಪರಶಿವನು. ಇನ್ನು ಮತ್ತೆ ಸಾಮಾನ್ಯಕ್ರೀಯ ವರ್ತಿಸುವ ಅಜ್ಞಾನಿಗಳನು ಏನೆಂದೆನ್ನಬಹುದಯ್ಯಾ? ಹೃದಯ ಭ್ರೂಮಧ್ಯ ಬ್ರಹ್ಮರಂಧ್ರದಲ್ಲಿ ಶಿವನಿಪ್ಪನು. ಇಡಾ ಪಿಂಗಲಾ ಸುಷುಮ್ನಾ ನಾಡಿಯಲ್ಲಿ ಪ್ರಾಣವಾಯುಗಳಡಸಿಕೊಂಡು ಹೋಗಿ ಕೂಡಿ ಒಂದಪ್ಪ ಆಯಸವ ನೋಡಾ. ಬಹಿರಂಗದಲ್ಲಿ ಮುಕ್ತಿಕ್ಷೇತ್ರಂಗಳ ಹೊಕ್ಕು ಲಿಂಗದರ್ಶನ ಸ್ಪರ್ಶನಯುಕ್ತರ ಆಯಸವ ನೋಡಾ. ಶಿವ ಶಿವ ಶ್ರೀಗುರು ಸಾಮಾನ್ಯವೇ? ಸಾಮಾನ್ಯವಾಗಿ ಕಾಣಲಹುದೆ? ಇಹಿಂಗೆ ಜ್ಞಾನ? ಈ ಪರಿಯ ಕೇಳುವುದೆ? ಅದೃಷ್ಟವ ದೃಷ್ಟಮಾಡಿ ಕೊಟ್ಟನು ಶ್ರೀಗುರು. ಅಪವಿತ್ರೋದಕ, ಗಂಗೆಯ ಕೂಡಿ ಗಂಗೆಯಾಯಿತ್ತು ನೋಡಿರಿ, ಕಾಷ*, ಅಗ್ನಿಯ ಕೂಡಿ ಅಗ್ನಿಯಾಯಿತ್ತು ನೋಡಿರಿ, ಸದ್ಭಕ್ತನು ಲಿಂಗವ ಕೂಡಿ ಲಿಂಗವಾದನು. ನಗರೀನಿರ್ಜರಾದ್ಯಂಬು ಗಂಗಾಂ ಪ್ರಾಪ್ಯ ಯಥಾ ತಥಾ ದೀಕ್ಷಾಯೋಗಾತ್ತಥಾ ಶಿಷ್ಯಃ ಶೂದ್ರೋ[s]ಪಿ ಶಿವತಾಂ ವ್ರಜೇತ್ ಭಕ್ತದೇಹೀ ಮಹಾದೇವೋ ತದ್ದೇಹೋ ಲಿಂಗಮೇವ ಚ ಅಂತರ್ಬಹಿಶ್ಚ ಲಿಂಗಂ ಚ ಸರ್ವಾಂಗಂ ಲಿಂಗಮೇವ ಚ ಇಂತೆಂದುದಾಗಿ, ಇನ್ನು ಸಂದೇಹ ಬೇಡ. ಶ್ರೀಗುರುಕಾರುಣ್ಯದಿಂದ ಲಿಂಗವ ಧರಿಸಿ ಲಿಂಗಾರ್ಚನೆಯ ಮಾಡಿ ಸರ್ವಾಂಗಲಿಂಗವಾಗಿಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಶ್ರೀಗುರುಲಿಂಗ ಸಾಕ್ಷಾತ್ಪರಶಿವಲಿಂಗ ತಾನೆ. `ಗುರುದೇವೋ ಮಹಾದೇವೋ' ಎಂದುದಾಗಿ ಆ ಶ್ರೀಗುರು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಲ್ಲಾ ಗುರು ಕಾಣಿಭೋ. ಸರ್ವಋಷಿಜನಂಗಳಿಗೆಲ್ಲಾ ಗುರು ಕಾಣೀಭೋ. ಇವರೆಲ್ಲರಿಗೂ ಗುರುವಾಗಿ ಇರಬೇಕು, ಕೆಲಂಬರಿಗೆ ಲಘುವಾಗಿ ಇರಬಾರದು. ಬಲ್ಲವಂಗೆ ಗುರು, ಅರಿಯದವಂಗೆ ಲಘುವಾಗಿರಲಾಗದು. ಇಷ್ಟಂಗೆ ಗುರು, ಅನಿಷ್ಟಂಗೆ ಲಘುವಾಗಿರಲಾಗದು. ಸರ್ವರಿಗೂ ಸಮಾನವಾಗಿರಬೇಕು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶ್ರೀಗಂಧದ ತರು ಕಾಮರನಾದುದುಂಟೆ? ಹೇಮದ ಪರ್ವತ ಹುಲುಮೊರಡಿಯಾದುದುಂಟೆ? ಮಹಾಸಿಂಹ ಹುಲುಮೃಗವಾದುದುಂಟೆ? ಜ್ಞಾನಿ ಅಜ್ಞಾನಿಯಾದುದುಂಟೆ? ವಿರಕ್ತ ಸಂಸಾರಿಯಾದುದುಂಟೆ? ಲಿಂಗವೆ ತಾನೆಂದರಿದ ಶರಣಂಗೆ ಬೇರೆ ಅಂಗೇಂದ್ರಿಯಂಗಳ ವಿಕಾರವೆಂಬುದುಂಟೆ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ !
--------------
ಉರಿಲಿಂಗಪೆದ್ದಿ
ಶ್ರೀಪಂಚಾಕ್ಷರಿ ಸರ್ವಮಂತ್ರಗಳಿಗೆಲ್ಲಕ್ಕೂ ವೇದಾದಿ ಸರ್ವವಿದ್ಯೆಗಳಿಗೆಯೂ ಮೂಲಕಾರಣ, ಸಪ್ತಕೋಟಿಮಹಾಮಂತ್ರಾ ಉಪಮಂತ್ರಾಸ್ತ್ವನೇಕಶಃ ಪಂಚಾಕ್ಷರ್ಯಾಂ ಪ್ರಲೀಯಂತೇ ಪುನಸ್ತಸ್ಯಾ ವಿನಿರ್ಗತಾಃ ಎಂದುದಾಗಿ, ಶ್ರೀ ಪಂಜಾಕ್ಷರಿವುಳ್ಳ ಶಿವಭಕ್ತನೆ ವೇದವಿತ್, ಆ ಸದ್ಭಕ್ತನೆ ಶಾಸ್ತ್ರವಿತ್, ಆ ಮಹಾಮಹಿಮನೆ ಪುರಾಣಿಕನು, ಆಗಮಿಕ ಸರ್ವಜ್ಞನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ

ಇನ್ನಷ್ಟು ...