ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಸಿವು ತೃಷೆ ವಿಷಯ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾದಿಯಾದ ತನುಗುಣಂಗಳು ದೇವ ದಾನವ ಮಾನವರಂತೆ ಆದಡೆ, ಲಿಂಗವಂತನೆಂಬ ಪರಿಯೆಂತಯ್ಯಾ? ತನುಗುಣಂಗಳು ಭೂತದೇಹಿಗಳಂತಾದಡೆ ಲಿಂಗದೇಹಿಕನೆಂಬ ಪರಿಯೆಂತಯ್ಯಾ? ಲಿಂಗಚಿಹ್ನವಿಲ್ಲದಡೆ ಲಿಂಗದೇಹಿಯೆಂಬ ಪರಿಯೆಂತಯ್ಯಾ? ಹಸಿವು ತೃಷೆ ವಿಷಯ ವ್ಯಸನವಡಗಿದಡೆ ಲಿಂಗಚಿಹ್ನೆ. ಕ್ರೋಧ ಲೋಭ ಮೋಹ ಮದ ಮತ್ಸರ ಇವಾದಿಯಾದ ದೇಹಗುಣಂಗಳಳಿದಡೆ ಲಿಂಗಚಿಹ್ನೆ. ದೇಹಗುಣಭರಿತನಾಗಿ ಲಿಂಗದೇಹಿ ಎಂದಡೆ, ಲಿಂಗವಂತರು ನಗುವರಯ್ಯಾ. ಅಂಗಗುಣವಳಿದು ಗುರುಲಿಂಗಜಂಗಮದಲ್ಲಿ ತನು ಮನ ಧನ ಲೀಯವಾದಡೆ ಆತನು ಸರ್ವಾಂಗಲಿಂಗಿಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹೊನ್ನು, ಹೆಣ್ಣು, ಮಣ್ಣು, ಅನ್ನ, ಉದಕ, ದ್ರವ್ಯಂಗಳು ಧರ್ಮದಾಸೆಯ ಕಾರಣ, ಅರ್ಥದಾಸೆಯ ಕಾರಣ, ಕಾಮದಾಸೆಯ ಕಾರಣ, ಮೋಕ್ಷದಾಸೆಯ ಕಾರಣ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಾಸೆಯ ಕಾರಣ, ಪಂಚಮಹಾಪಾತಕಂಗಳ ಮಾಡಿದ ದೋಷಂಗಳ ಕಾರಣ, ಅಧಿಕಾರಣ, ವ್ಯಾಧಿಕಾರಣ, ಕೀರ್ತಿಕಾರಣ, ವಾರ್ತೆಕಾರಣ, ಸರ್ವವನು ನಿರಂತರ ಕೊಡುವರು. ನಿಷ್ಕಾರಣವಾಗಿ ನಿರುಪಾಧಿಕರಾಗಿ, ನಿರಾಶ್ರಿತರಾಗಿ ಶ್ರೀಗುರುಕಾರಣವಾಗಿ, ಲಿಂಗಕಾರಣವಾಗಿ, ಜಂಗಮಕಾರಣವಾಗಿ, ಪ್ರಸಾದಕಾರಣವಾಗಿ, ಈ ನಾಲ್ಕನು ಒಂದು ಮಾಡಿ, ಸದ್ಭಕ್ತಿಯಿಂದ ದ್ವಿವಿಧವು ಪರಿಣಾಮಿಸುವಂತೆ, ಕ್ಷಣಮಾತ್ರದಲ್ಲಿ ಅಣುಮಾತ್ರದ್ರವ್ಯವ ಕೊಡುವವರಾರನು ಕಾಣೆ, ನಿರ್ವಂಚಕರಾಗಿ. ಆನು ವಂಚಕನು, ಎನಗೆ ಭಕ್ತಿ ಇಲ್ಲ. ಶಿವ ಶಿವಾ, ಸಂಗನಬಸವಣ್ಣ ನಿರ್ವಂಚಕನು, ನಿರಾಶಾಭರಿತನು, ಸುಚರಿತ್ರನು, ಸದ್ಭಕ್ತಿಪುರುಷನು, ಮಹಾಪುರುಷನು. ಎನಗೆ ಮಹಾ ಶ್ರೀಗುರುಲಿಂಗಜಂಗಮಪ್ರಸಾದ. ಈ ಚತುರ್ವಿಧವು ಬಸವಣ್ಣನು. ಈ ಬಸವಣ್ಣನ ಭೃತ್ಯರ ಭೃತ್ಯನಾಗಿ ಎನ್ನನಿರಿಸಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹರನೆ, ನಿಮ್ಮನು ದುಷ್ಟನಿಗ್ರಹ ಶಿಷ್ಟಪರಿಪಾಲನವಿಚಕ್ಷಣನೆಂದೆಂಬರು. ನಿಮಗೆ ಅಹಂಕರಿಸಿದ ಬ್ರಹ್ಮವಿಷ್ಣುದಕ್ಷಾದಿಗಳ ಶಿಕ್ಷಿಸಿದಿರಿ. ನಿಮಗೆರಗದೆ ದುರ್ವೃತ್ತಿಯಿಂದ ನಡೆದ ಗಜಾಸುರ ವ್ಯಾಘ್ರಾಸುರ ಗುಹ್ಯಾಸುರರುಗಳ ಕೊಂದು ಕಳೆದಿರಿ. ಇದನರಿದು ಸ್ತೋತ್ರವ ಮಾಡಿದಡೆ ನೀವು ಕರುಣಿಸದೇ ಇಲ್ಲಯ್ಯ. ಇಂತಹ ಕರ್ತರಿನ್ನುಂಟೆ? ನಿಮ್ಮಂತಹ ಬಲಿಷ*ರುಗಳೆಲ್ಲರ ಶಿಕ್ಷಿಸಿದಿರಿ. ಎನ್ನ ಮನವ ಶಿಕ್ಷಿಸಲಾರೆ. ಶಿವಶಿವಾ, ನಿಮ್ಮಿಂದ ಎನ್ನ ಮನ ಸಾಮಥ್ರ್ಯವುಳ್ಳುದು. ಎನ್ನಿಂದ ನೀವು ಸಮರ್ಥರಿಲ್ಲದಡೆ, ಶಿವಭಕ್ತ ಅಪರಾಧಿಗಳ ಶಿಕ್ಷಿಸುವಂತಹ ಇರಿಭಕ್ತ ಕಾಲಾಗ್ನಿರುದ್ರ ಮಡಿವಾಳ ಮಾಚಯ್ಯಂಗೆ ಮೊರೆಯಿಟ್ಟು ಕಳೆವೆನು. ಶಿವಧೋ ಎನ್ನ ಮೊರೆಯ ಕೇಳಿರಣ್ಣಾ. ಹರನೇ ನೀನು ದುಷ್ಟನಿಗ್ರಹ ಶಿಷ್ಟಪರಿಪಾಲಕನೆಂಬ ಬಿರುದ ಬಿಟ್ಟು ಕಳೆ. ಬಳಿಕ ನಾ ನಿಮ್ಮ ವರದಹಸ್ತನೆಂಬೆ, ಶಶಿಧರನೆಂಬೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂಬೆ.
--------------
ಉರಿಲಿಂಗಪೆದ್ದಿ
ಹೆಣ್ಣ ಧ್ಯಾನಿಸಿ ನಿಮ್ಮ ಮರೆದೆನಯ್ಯಾ, ನಾನು ಮರೆದ ಕಾರಣ ನೀನೆನ್ನ ಮರೆದೆ. ನೀ ಮರೆದ ಕಾರಣ ಹೆಣ್ಣು ಸಾಧ್ಯವಾಗದು. ನಿನ್ನ ಮೋಹ ತಪ್ಪಿ ಕೆಟ್ಟೆನಯ್ಯಾ. ಹೊನ್ನು ಹೆಣ್ಣು ಮಣ್ಣು ಎಂಬ ಆಸೆಯೆನ್ನ ಘಾಸಿ ಮಾ[ಡೆ], ಕೆಟ್ಟೆ ಕೆಟ್ಟೆ ಶಿವಧೋ ಶಿವಧೋ ಮಹಾದೇವ. ಹೊನ್ನು ಹೆಣ್ಣು ಮಣ್ಣಿಗೆ ಕರ್ತನು ನೀನು. `ತೇನ ವಿನಾ ತೃಣಾಗ್ರಮಪಿ ನ ಚಲತಿ ಎಂಬುದನರಿದೂ, ಮದದಲ್ಲಿದ್ದು ಕೆಟ್ಟೆ. ಈ ಕೇಡಲ್ಲದೆ ಹಸಿವು ತೃಷೆ ವ್ಯಸನ ವಿಷಯ ಪಂಚೇಂದ್ರಿಯ ಷಡುವರ್ಗ ನೀನಾಗಿ ಕಾಡುತ್ತಿವೆ. ಕೆಟ್ಟೆ ಕೆಟ್ಟೆ ಶಿವಧೋ ಮಹಾದೇವ. ಹೊನ್ನು ಹೆಣ್ಣು ಮಣ್ಣಿನ ಆಶೆಯಿಂದ ಈ ಅವಸ್ಥೆಗೊಳಗಾದೆನು. ಇನ್ನಿವಕ್ಕಾಶೆಮಾಡೆನು, ನಿಮ್ಮ ಮರೆಯೆನು, ನಿಮ್ಮಾಣೆ. ಭಕ್ತವತ್ಸಲ, ಭಕ್ತದೇಹಿಕ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು, ಬ್ರಹ್ಮಚಾರಿಗಳಾಗಬೇಕೆಂದು ಬಣ್ಣುವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ. ಹೆಣ್ಣು ಬಿಟ್ಟಡೆಯೂ ಹೊನ್ನ ಬಿಡರಿ, ಹೊನ್ನ ಬಿಟ್ಟಡೆಯೂ ಮಣ್ಣ ಬಿಡರಿ. ಒಂದ ಬಿಟ್ಟಡೆಯೂ ಒಂದ ಬಿಡರಿ. ಬ್ರಹ್ಮಚಾರಿಗಳೆಂತಪ್ಪಿ? ಹೇಳಿರಣ್ಣಾ? ಹೆಣ್ಣ ಬಿಟ್ಟು ಬ್ರಹ್ಮಚಾರಿಗಳಾಗಬೇಕೆಂದು, ಅವರೆಂತು ಹೇಳಿದರು? ನೀವೆಂತು ಕೇಳಿದಿರಿ? ಹೆಣ್ಣನು ಹೆಣ್ಣೆಂದರಿವಿರಿ, ಹೊನ್ನನು ಹೊನ್ನೆಂದರಿವಿರಿ. ಮಣ್ಣನು ಮಣ್ಣೆಂದರಿವಿರಿ, ಬ್ರಹ್ಮಚಾರಿಗಳೆಂತಪ್ಪಿರಣ್ಣಾ? ಬಿಟ್ಟಡೆ, ಹೆಣ್ಣು ಹೊನ್ನು ಮಣ್ಣು ಈ ಮೂರನು ಬಿಟ್ಟು ಜ್ಞಾನದಲ್ಲಿ ಸುಳಿಯಲ್ಲಡೆ, ಭವಂ ನಾಸ್ತಿ ತಪ್ಪದು. ಹಿಡಿದಡೆ ಹೆಣ್ಣು ಮಣ್ಣು ಹೊನ್ನು ಈ ಮೂರನು ಹಿಡಿದು, ಸದ್ಭಕ್ತಿಯಿಂದ ದಾಸೋಹವ ಮಾಡಬಲ್ಲಡೆ, ಭವಂ ನಾಸ್ತಿ ತಪ್ಪದು. ಅದೆಂತೆಂದಡೆ:ವೀರಾಗಮೇ ಮಾತರಃ ಪಿತರಶ್ಚೈವ ಸ್ವಪತ್ನೀ ಬಾಲಕಾಸ್ತಥಾ ಹೇಮ ಭೂಮಿರ್ನಬಂಧಾಕಾಃ ಪ್ರಾಜ್ಞಾನಂ ಬ್ರಹ್ಮಚಾರಿಣಾಂ ಎಂದುದಾಗಿ, ಹೆಣ್ಣು, ಹೊನ್ನು, ಮಣ್ಣು ಈ ಮೂರನು ಹಿಡಿದು ಸದ್ಭಕ್ತಿಯಿಂ ದಾಸೋಹವ ಮಾಡಬಲ್ಲಡೆ ಭವಂ ನಾಸ್ತಿ. ಅಲ್ಲಿ ಇದ್ದಡೆಯೂ ನೀರ ತಾವರೆಯಂತಿಪ್ಪರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ, ನಿಮ್ಮ ಶರಣರು.
--------------
ಉರಿಲಿಂಗಪೆದ್ದಿ
ಹಿಂದಾದ ದುಃಖವನೂ ಇಂದಾದ ಸುಖವನೂ ಮರೆದೆಯಲ್ಲಾ! ಯಜಮಾನ, ನೀನು ಮರೆದ ಕಾರಣ ಬಂಧನ ಪ್ರಾಪ್ತಿಯಾಯಿತ್ತಲ್ಲಾ! ಹೇಮ ಭೂಮಿ ಕಾಮಿನಿ ಎಂಬ ಸಂಕಲೆಯಲ್ಲಿ ಬಂಧಿಸಿದರಲ್ಲಾ! ಅರಿಷಡ್ವರ್ಗವೆಂಬ ಬಂಧನದಲ್ಲಿ ದಂಡಿಸಿದರಲ್ಲಾ! ಲಿಂಗವ ಮರೆದಡೆ ಇದೇ ವಿಧಿಯಲಾ! ಮರೆದಡೆ ಬಂಧನ ಅರಿದಡೆ ಮೋಕ್ಷ. ಅರಿದ ಯಜಮಾನ ಇನ್ನು ಮರೆಯದಿರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಪರಿಯನು.
--------------
ಉರಿಲಿಂಗಪೆದ್ದಿ