ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪ್ರಣವಸ್ವರೂಪಮಾದ ಪರಬ್ರಹ್ಮವೇ ತಾನು ತನ್ನ ನಿಜಲೀಲಾನಿಮಿತ್ತ ತ್ರಿವರ್ಣರೂಪಕಮಾಗಿ, ಅದೇ ಹರಿಹರಬ್ರಹ್ಮಸ್ವರೂಪಮಾಗಿ, ಹರಿಯೇ ಶರೀರಮಾಗಿ, ಹರನೇ ಜೀವಮಾಗಿ, ಬ್ರಹ್ಮನೇ ಮನಸ್ಸಾಗಿ, ಆ ಬ್ರಹ್ಮಸ್ವರೂಪಮಾದ ಕಲೆಯೇ ಶರೀರಕ್ಕೆ ಶಕ್ತಿಯಾಗಿ, ಆ ಶರೀರಸ್ವರೂಪಮಾದ ಬಿಂದುವೇ ಪ್ರಾಣಕ್ಕೆ ಶಕ್ತಿಯಾಗಿ, ಆ ಪ್ರಾಣಸ್ವರೂಪಮಾದ ನಾದವೇ ಮನಶ್ಶಕ್ತಿಯಾಗಿ, ಆ ಪ್ರಾಣಕ್ಕೆ ನಾಸಿಕವೇ ಸ್ಥಾನಮಾಗಿ, ಮನಸ್ಸಿಗೆ ಜಿಹ್ವೆಯೇ ಸ್ಥಾನಮಾಗಿ, ಶರೀರಕ್ಕೆ ನೇತ್ರವೇ ಸ್ಥಾನಮಾಗಿ, ತನು ಸ್ಪರುಶನಸ್ವರೂಪು, ಮನಸ್ಸು ಶಬ್ದಸ್ವರೂಪು, ಪ್ರಾಣ ಆತ್ಮಸ್ವರೂಪು. ಈ ತನು ಮನಃಪ್ರಾಣಂಗಳಿಂದೊಗೆದ ಆತ್ಮಾದಿ ಷಡ್ಭೂತಂಗಳಿಗೆ ಆತ್ಮಾದಿ ಷಡ್ಭೂತವೇ ಕಾರಣಮಾಗಿ, ಜೀವನದಲ್ಲಿ ಹುಟ್ಟಿದ ಸತ್ವಗುಣವು ಶರೀರವನಾವರಿಸಿ, ಆ ಜೀವನಿಗೆ ತಾನೇ ಸ್ಥಿತಿಕರ್ತೃವಾಯಿತ್ತು. ಶರೀರದಲ್ಲಿ ಹುಟ್ಟಿದ ತಮೋಗುಣವು ಜೀವನನಾವರಿಸಿ, ಆ ಶರೀರಕ್ಕೆ ತಾನೇ ಸಂಹಾರಕರ್ತೃವಾಯಿತ್ತು. ಆ ಶರೀರ ಜೀವಸಂಗದಿಂದೊಗೆದ ಅಹಂಕಾರಸ್ವರೂಪಮಾದ ರಜೋಗುಣವು ಮನಮನಾವರಿಸಿ, ಈ ಎರಡಕ್ಕೂ ತಾನೇ ಸೃಷ್ಟಿಕರ್ತೃವಾಯಿತ್ತು. ಆ ನಾದವೇ ವಾಗ್ದೇವಿಯಾಗಿ, ಬಿಂದುವೇ ಮಹಾದೇವಿಯಾಗಿ, ಕಳೆಯೇ ಮಹಾಲಕ್ಷ್ಮಿಯಾಗಿ, ಈ ತನು ಮನಃಪ್ರಾಣಂಗಳನು ಮರುಳುಮಾಡಿತ್ತು. ಜಾಗ್ರತ್ಸ್ವಪ್ನಸುಷುಪ್ತ್ಯಾದ್ಯವಸ್ಥೆಗಳೊಳಗೆ ಹೊಂದಿಸಿ, ಮುಂದುಗಾಣಲೀಯದೆ, ಸೃಷ್ಟಿಸ್ಥಿತಿಸಂಹಾರಂಗಳಲ್ಲಿ ತೊಳಲಿಬಳಲಿಸುತ್ತಿರಲು, ಆ ಕಳೆಯಲ್ಲಿ ಕೂಡಿ ಶರೀರವು ಉಬ್ಬುತ್ತಾ, ಆ ನಾದದಲ್ಲಿ ಕೂಡಿ ಮನಸ್ಸು ಕೊಬ್ಬುತ್ತಾ, ಆ ಶಕ್ತಿಯಲ್ಲಿ ಕೂಡಿ ಪ್ರಾಣ ಬೆಬ್ಬನೆ ಬೆರೆವುತ್ತಾ, ಭವಭವದೊಳು ತೊಳಲುತ್ತಿರಲು, ಗುರುಕಟಾಕ್ಷದಿಂ ಕರ್ಮವು ಸಮೆದು ಧರ್ಮವು ನೆಲೆಗೊಳ್ಳಲು, ಆ ಮೇಲೆ ಮಹಾಜ್ಞಾನಶಕ್ತಿಯಾಯಿತ್ತು ಆ ಬಿಂದುವೇ ಆನಂದಶಕ್ತಿಯಾಯಿತ್ತು ಆ ಕಳೆಯೇ ನಿಜಶಕ್ತಿಯಾಯಿತ್ತು ಇಂತು ಸತ್ಯಜ್ಞಾನಾನಂದಸ್ವರೂಪಮಾದ ಶಕ್ತಿಮಹಿಮೆಯಿಂದ ಶರೀರವೇ ವಿಷ್ಣುವಾಗಲು, ಅಲ್ಲಿ ಶ್ರೀಗುರುಸ್ವರೂಪಮಾದ ಇಷ್ಟಲಿಂಗವು ಸಾಧ್ಯಮಾಯಿತ್ತು. ಆ ಪ್ರಾಣವೇ ರುದ್ರಸ್ವರೂಪವಾಗಲು, ಜಂಗಮಮೂರ್ತಿಯಾದ ಪ್ರಾಣಲಿಂಗವು ಸಾಧ್ಯವಾಯಿತ್ತು. ಮನಸ್ಸೇ ಬ್ರಹ್ಮಸ್ವರೂಪವಾಗಲು, ಲಿಂಗಾಕಾರಮಾದ ಭಾವಲಿಂಗವು ಸಾಧ್ಯಮಾಯಿತ್ತು. ಆ ಲಿಂಗಗಳೇ ಆತ್ಮಾದಿ ಷಡ್ಭೂತಂಗಳಲ್ಲಿ ಆಚಾರಾದಿ ಮಹಾಲಿಂಗಂಗಳಾದವು. ಆ ಶಕ್ತಿಗಳೇ ಕ್ರಿಯಾದಿ ಶಕ್ತಿಯರಾದರು. ಆ ಶಕ್ತಿಮುಖದಲ್ಲಿ ತಮ್ಮಲ್ಲಿ ಹುಟ್ಟಿದ ನಾನಾವಿಷಯ ಪದಾರ್ಥಂಗಳನ್ನು ಆಯಾ ಲಿಂಗಂಗಳಿಗರ್ಪಿಸಿ, ತತ್ಸುಖಾನುಭವದೊಳೋಲಾಡುತ್ತಿರಲು, ಆ ಶಕ್ತಿಗಳೇ ಲಿಂಗಶಕ್ತಿಗಳಾಗಿ, ತಾವೇ ಆಯಾ ಲಿಂಗಸ್ವರೂಪ ಶರೀರ ಪ್ರಾಣ ಮನೋಭಾವಂಗಳಳಿದು, ಲಿಂಗಭಾವ ನೆಲೆಗೊಂಡಲ್ಲಿ, ಸತ್ವರಜಸ್ತಮೋಗುಣಗಳು ಜ್ಯೋತಿಯೊಳಗಡಗಿದ ಕತ್ತಲೆಯಂತೆ, ತಮ್ಮ ನಿಜದಲ್ಲಿ ತಾವೇ ಲೀನವಾದವು. ಬಿಂದು, ಶರೀರದೊಳಗೆ ನಿಂದು ಆನಂದರೂಪಮಾಯಿತ್ತು. ನಾದವು ಪ್ರಾಣದೊಳಗೆ ಬೆರೆದು ನಿಶ್ಶಬ್ದನಿರೂಪಮಾದ ಜ್ಞಾನಮಾಯಿತ್ತು. ಕಳೆ ಮನದೊಳಗೆ ಬೆರದು, ಪರಬ್ರಹ್ಮ ಸ್ವರೂಪಮಾಗಿ ನಿಜಮಾಯಿತ್ತು . ಆ ಆನಂದವೇ ಇಷ್ಟಲಿಂಗರೂಪಮಾಗಿ, ಜ್ಞಾನವೇ ಪ್ರಾಣಲಿಂಗಸ್ವರೂಪಮಾಗಿ, ಆ ನಿಜವೇ ಭಾವಲಿಂಗಮೂರ್ತಿಯಾಗಲು, ಆ ಕರ್ಮ ಧರ್ಮ ವರ್ಮಂಗಳಡಗಿದವು. ಆತ್ಮಾದಿ ಷಡ್ಭೂತಂಗಳು ಆಚಾರಾದಿ ಮಹಾಲಿಂಗಂಗಳೊಳಗೆ ಲೀನಮಾಗಲು, ಆ ಆರುಲಿಂಗಂಗಳೇ ಈ ಮೂರುಲಿಂಗಂಗಳೊಳಗೆ ಬೆರೆದು, ಇಷ್ಟವೇ ಪ್ರಾಣಮಾಗಿ, ಭಾವಸಂಗದೊಳಗೆ ಪರವಶಮಾಗಿ, ತಾನುತಾನೆಯಾಗಿ, ತನ್ನಿಂದನ್ಯವೇನೂ ಇಲ್ಲದೆ ನಿಬ್ಬೆರಗಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪರಮಾತ್ಮನು ಸ್ವಲೀಲಾನಿಮಿತ್ತ ಸಾಕಾರಸ್ವರೂಪನಾಗಿ, ಪಂಚವಕ್ತ್ರ ದಶಭುಜಂಗಳನು ಧರಿಸಿ, ತನ್ನ ನಿಜಧರ್ಮವನೆ ತನಗಾಧಾರಮಪ್ಪ ವಾಹನಮಂ ಮಾಡಿಕೊಂಡು, ಪಂಚಮುಖಂಗಳಲ್ಲಿ ಪಂಚಭೂತಂಗಳಂ ಸೃಷ್ಟಿಸಿ, ಅವನೇ ಬಂದು ಬ್ರಹ್ಮಾಂಡವಂ ಮಾಡಿಕೊಂಡು, ತನ್ನ ಲೀಲಾಶಕ್ತಿಯ ಸಂಗದಿಂದ ಅನಂತಕೋಟಿ ಜೀವಂಗಳಂ ಸೃಷ್ಟಿಸಿ, ತನ್ನ ಗೂಢಮಪ್ಪ ಮನೋಭಂಡಾರವಂ ತೆಗೆದು, ಆ ಜೀವಂಗಳಿಗದನೇ ಜೀವನವಂ ಮಾಡಿ, ಈ ಬ್ರಹ್ಮಾಂಡವೆಂಬ ತನ್ನ ಪಟ್ಟಣಕ್ಕೂ ಈ ಜೀವಜಾಲಕ್ಕೂ ನಿಜಮನೋಭಂಡಾರವನೆ ಆಧಾರಮಂ ಮಾಡಿ, ತಾನೇ ಸೇವ್ಯನಾಗಿ, ಜೀವಂಗಳೇ ಸೇವಕರಾಗಿ ಕ್ರೀಡಿಸುತ್ತಿರಲಾ ಪರಮಾತ್ಮನಿಂದ ಸಲಿಗೆವಡೆದ ಕೆಲವು ಜೀವಂಗಳು ಅಹಂಕರಿಸಿ, ಆ ಪರಶಿವನಲ್ಲಿರ್ಪ ಮನೋಭಂಡಾರದಲ್ಲಿ ತಮ್ಮ ಶಕ್ತಿಗೆ ತಕ್ಕಷ್ಟು ಸತ್ಕರಿಸಿಕೊಂಡು, ತದ್ವಂಚನಾಮನದಿಂ ಪಂಚಭೂತಂಗಳನ್ನು ಸಾದ್ಥಿಸಿ, ಅದರಿಂದ ಒಂದು ಪಿಂಡಾಂಡವೆಂಬ ಪಟ್ಟಣಮಂ ಮಾಡಿಕೊಂಡು, ಇಂದ್ರಿಯಂಗಳೆಂಬ ಕೊತ್ತಲಂಗಳಂ ನಿರ್ಮಿಸಿ, ನವದ್ವಾರಂಗಳೆಂಬ ಹುಲಿಮುಖಂಗಳಿಂದ ಅಜ್ಞಾನವೆಂಬತಿ ಘಾತಮಾದಗಳಂ ಕಲ್ಪಿಸಿ, ಆಶೆಯೆಂಬಾಳ್ವೇರಿಯಂ ಸೃಜಿಸಿ, ತನ್ಮಧ್ಯದಲ್ಲಿ ಅಂತರಂಗವೆಂಬುದೊಂದು ಅರಮನೆಯಂ ಕಟ್ಟಿ, ಅಲ್ಲಿದ್ದುಕೊಂಡು, ಜೀವನು ತನ್ನ ಮನೋವಂಚನಾಭಂಡಾರವಂ ವೆಚ್ಚಿಸುತ್ತಾ, ವಿಷಯಂಗಳೆಂಬ ಮನ್ನೆಯರಂ ಸಂಪಾದಿಸಿ, ನಿಜಪುರದ್ವಾರಂಗಳಲ್ಲಿ ಕಾಹನಿಟ್ಟು, ಅಂತಃಕರಣಚತುಷ್ಟಯವೆಂಬ ಶಿರಃಪ್ರಧಾನರಂ ಸಂಪಾದಿಸಿ, ತನ್ಮಂತ್ರಾಲೋಚನೆಯಿಂ ಸಾಮ, ಭೇದ, ದಾನ, ದಂಡವೆಂಬ ಕರಿ, ತುರಗ, ರಥ, ಪದಾತಿಗಳಂ ಕೂಡಲಿಟ್ಟು, ಕರ್ಮವೆಂಬ ಸೇನಾನಿಗೆ ಪಟ್ಟಮಂ ಕಟ್ಟಿ, ತನ್ನಲ್ಲಿರ್ಪ ನಾನಾ ದಳಂಗಳಂ ಸೇನಾಪತಿಯ ವಶಮಂ ಮಾಡಿ, ನಾದ ಬಿಂದು ಕಳೆಗಳೆಂಬ ಶಕ್ತಿಗಳಂ ಪರಿಣಯಮಾಗಿ, ಜಾಗ್ರತ್ಸ್ವಪ್ನಸುಷುಪ್ತಿಗಳೆಂಬರಮನೆಗಳೊಳಗೆ ಕಳೆಯ ನಾದದಲ್ಲಿ ಕೆಲವುತ್ತಂ, ಬಿಂದುವಿನಲ್ಲಿ ಫಲಿಸಿ ಫಲಸುಖಂಗಳನನುಭವಿಸುತಿರ್ಪ ಜೀವನೆಂಬರಸಿನನುಮತವಿಡಿದು, ಕರ್ಮಸೇನಾನಿಯು ಸಕಲದಳಂಗಳೊಳಗೆ ಕೂಡಿ, ವಿಷಯಂಗಳೆಂಬ ಮನ್ನೆಯರಂ ಮುಂದುಮಾಡಿಕೊಂಡು, ಪ್ರಪಂಚವೆಂಬ ರಾಜ್ಯವಂ ಸಾದ್ಥಿಸಿ, ತದ್ರಾಜ್ಯದಲ್ಲಿ ಬಂದ ಪುತ್ರ ಮಿತ್ರ ಕಳತ್ರ ಧನ ಧಾನ್ಯ ವಸ್ತುವಾಹನಾಲಂಕಾರಾದಿಗಳನ್ನು ಕಾಯಪುರಕ್ಕೆ ತಂದು, ಜೀವನೆಂಬರಸಿಗೆ ಒಪ್ಪಯಿಸುತ್ತಿರಲು, ಜೀವನು ಸಂತೋಷಿಸಿ, ತಾನು ಸಂಪಾದಿಸಿದ ಸಕಲದ್ರವ್ಯವನ್ನು ತನ್ನ ಮೂಲಮನೋಭಂಡಾರದಲ್ಲಿ ಬೆರಸಿ, ಬಚ್ಚಿಟ್ಟು, ಅಹಂಕರಿಸಿ, ಸಕಲಕ್ಕೂ ತಾನೇ ಕರ್ತೃವೆಂದು ಬೆರತು, ಪರಮಾತ್ಮನಂ ಮರೆತು, ಸೇವ್ಯಸೇವಕರೆಂಬ ವಿವೇಕವರತು, ಅಧರ್ಮ ವಾಹನಾರೂಢನಾಗಿ, ತನ್ನ ತಾನರಿಯದೆ, ಕಾಮವಶನಾಗಿ ಸಂಚರಿಸುತಿರ್ಪ ಈ ಜೀವನ ಅಹಂಕಾರಮಂ ಸಂಹರಿಸುವ ನಿಮಿತ್ತವಾಗಿ ಪರಮಾತ್ಮನು ಕಾಲನೆಂಬ ಸುಬೇದಾರನಂ ಸೃಷ್ಟಿಸಿ, ವ್ಯಾದ್ಥಿಪೀಡನಗಳೆಂಬ ಬಲಂಗಳಂ ಕೂಡಲಿಟ್ಟು, ದುಃಖವೆಂಬ ಸಾಮಗ್ರಿಯಂ ಒದಗಿಸಿಕೊಟ್ಟು, ಕ್ರೋಧವೆಂದು ಮನೆಯಾಳಿಂಗೆ ತಮೋಗುಣಂಗಳೆಂಬ ಬಲುಗಾರರಂ ಕೂಡಿಕೊಟ್ಟು, ಈ ಕಾಯಪುರಮಂ ಸಾದ್ಥಿಸೆಂದು ಕಳುಹಲು, ಆ ಸದಾಶಿವನಾಜ್ಞಾಶಕ್ತಿಯಿಂದ ಕಾಲಸುಭೇದಾರನು ಸಕಲ ಬಲಸಮೇತವಾಗಿ ಬಂದು, ಕಾಯಪುರಕ್ಕೆ ಸಲುವ ಪ್ರಪಂಚರಾಜ್ಯವಂ ನೆರೆಸೂರೆಮಾಡಲು, ಕರಣಂಗಳೆಂಬ ಪ್ರಜೆಗಳು ಕೆಟ್ಟೋಡಿಬಂದು, ಜೀವನೆಂಬ ಅರಸಿಗೆ ಮೊರೆಯಿಡಲು, ಅದಂ ಕೇಳಿ, ಆಗ್ರಹಪಟ್ಟು, ಕರ್ಮಸೇನಾನಿಗೆ ನಿರೂಪಿಸಲು, ತತ್ಸೇನಾನಿಯು ಕಾಯಪುರದಲ್ಲಿರ್ಪ ಸಕಲದಳ ಸಮೇತಮಾಗಿ ಬಂದು ಕಾಲಸುಬೇದಾರನೊಡನೆ ಯುದ್ಧವಂ ಮಾಡಿ, ಜಯಿಸಲಾರದೆ ವಿಮುಖನಾಗಿ ಉಪಭೋಗಾದಿ ಸಕಲ ಸುಖಂಗಳಂ ಕೋಳುಕೊಟ್ಟು ಬಂದು ಕೋಟೆಯಂ ಹೊಗಲು, ಜೀವನು ಪಶ್ಚಾತ್ತಾಪದಿಂ ಸಂಶಯಯುಕ್ತನಾಗಿ ಕಳವಳಿಸುತ್ತಿರಲು, ಆ ಕಾಲಸುಬೇದಾರನು ಕಾಯಪುರಮಂ ಒತ್ತರಿಸಿ ಮುತ್ತಿಗೆಯಂ ಹಾಕಿ, ವಿಷಯಮನ್ನೆಯರಂ ಹಸಗೆಡಿಸಿ ಕೊಂದು, ಕರ್ಮವಂ ನಿರ್ಮೂಲವಂ ಮಾಡಿ, ಅಂತರಂಗ ಮನೆಯಂ ಕೊಳ್ಳೆಯವಂ ಮಾಡಿ, ನಾದಬಿಂದುಕಳಾಶಕ್ತಿಯಂ ಸೆರೆವಿಡಿದು, ಕಾಯಪುರಮಂ ಕಟ್ಟಿಕೊಳ್ಳಲು, ಜೀವನು ಭಯಭ್ರಾಂತನಾಗಿ, ಆ ಮೂಲಮನೋಭಂಡಾರಮಾತ್ರಮಂ ಕೊಂಡು, ತತ್ಪುರಮಂ ಬಿಟ್ಟು, ಅನೇಕ ಯಾತನೆಪಟ್ಟು ಓಡಿ, ಮರಳಿಮರಳಿ ಜೀವನು ಪುರಂಗಳಂ ಸಂಪಾದಿಸಲು, ತತ್ಸಂಪಾದಿತಪುರಂಗಳಂ ಕಾಲನು ಸಾದ್ಥಿಸುತ್ತಿರಲು, ಜೀವನು ಅಹಂಕಾರವಳಿದು, ಆಸ್ಪದವಿಲ್ಲದೆ, ತನಗೆ ಕರ್ತೃವಾರೆಂಬುದಂ ಕಾಣದೆ, ವಿಚಾರಪಟ್ಟು ದುಃಖಿಸುತಿರ್ಪ ಜೀವನಿಗೆ ಕರುಣದಿಂ ಪರಮಾತ್ಮನು ಜ್ಞಾನದೃಷ್ಟಿಯಂ ಕೊಡಲು, ತದ್ಬಲದಿಂ ಶಿವನೇ ಕರ್ತೃ ತಾನೇ ಭೃತ್ಯನೆಂಬುದಂ ತಿಳಿದು, ಶಿವಧ್ಯಾನಪರಾಯಣನಾಗಿ, ಶಿವಧಾರಣ ಧರ್ಮಪದಮಂ ಪಿಡಿದು ಪಲುಗುತ್ತಿರಲು, ತದ್ಧರ್ಮಮೇ ಗುರುರೂಪಮಾಗಿ, ತನ್ನಲ್ಲಿರ್ಪ ಶಿವನಂ ಜೀವಂಗೆ ತೋರಿಸಲು, ಜೀವಂ ಹಿಗ್ಗಿ, ತಾನು ಸಂಪಾದಿಸಿದ ಪುರವನೆ ಶಿವಪುರಮಂ ಮಾಡಿ, ಧರ್ಮಾದಿ ಸಕಲವಿಷಯಬಲಂಗಳಂ ಶಿವನ ವಶಮಂ ಮಾಡಿ, ಆ ಪಟ್ಟಣದೊಳಯಿಂಕೆ ಬಿಜಯಂಗೈಸಿಕೊಂಡು ಹೋಗಿ, ಅಂತರಂಗದ ಅರಮನೆಯೊಳಗೆ ಜ್ಞಾನಸಿಂಹಾಸನದ ಮೇಲೆ ಕುಳ್ಳಿರಿಸಿ, ಪಟ್ಟಮಂ ಕಟ್ಟಿ, ತನ್ನ ಸರ್ವಸ್ವಮಂ ಶಿವನಿಗೆ ಸಮರ್ಪಿಸಿ, ತಾನು ಸತ್ಕರಿಸಿಕೊಂಡುಬಂದ ಮನೋಭಂಡಾರಮಂ ಶಿವನಡಿಯಂ ಸೇರಿಸಲು, ಸದಾಶಿವನು ಪ್ರಸನ್ನಮುಖನಾಗಿ, ದಯೆಯಿಂ ಪರಿಗ್ರಹಿಸಿ, ಜೀವನನು ಸಜ್ಜೀವನನಮಾಡಿ ಕೂಡಿಕೊಂಡುದೆ ಲಿಂಗೈಕ್ಯ ಕಾಣಾ | ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥಿವ್ಯಪ್ತೇಜೋವಾಯ್ವಾಕಾಶಂಗಳಲ್ಲಿ ಪೃಥಿವ್ಯಪ್ತೇಜಸ್ಸುಗಳು ಸಾಕರಾಗಳೂ ವಾಯ್ವಾಕಾಶಂಗಳು ನಿರಾಕಾರಗಳೂ ಆಗಿ, ಸ್ಥೂಲ ಸೂಕ್ಷ್ಮಕಾರಣಂಗಳಾಗಿಹವು. ಪೃಥ್ವಿಯಲ್ಲೈದು ಗುಣಗಳೂ ಜಲದಲ್ಲಿ ನಾಲ್ಕು ಗುಣಗಳೂ ಅಗ್ನಿಯಲ್ಲಿ ಮೂರು ಗುಣಗಳೂ ವಾಯುವಿನಲ್ಲಿರಡು ಗುಣಗಳೂ ಇರ್ಪವು. ಆಕಾಶದಲ್ಲೊಂದು ಗುಣವಿರ್ಪುದು. ಆತ್ಮನು ನಿರ್ಗುಣಮಾಗಿ ಸಕಲಗುಣಂಗಳಿಗೂ ತಾನು ಕಾರಣಮಾಗಿಹನು. ಅದೆಂತೆಂದೊಡೆ : ನಿರ್ಗುಣಮಾದ ಬಿಂದುಪದಾರ್ಥವು ಸಗುಣರೂಪಮಾದ ಮನುಷ್ಯರಿಗೆ ತಾನು ಕಾರಣಮಾಗಿರ್ಪಂದದಿ ಆತ್ಮನಿಹನು. ಪಂಚವರ್ಣಂಗಳು ಸತ್ವರಜಸ್ತಮೋಗುಣಂಗಳು. ನಾದ ಬಿಂದು ಕಲೆಗಳು ಬಾಲ್ಯ ಯೌವನ ಕೌಮಾರ ವಾರ್ಧಕ್ಯಂಗಳು. ಇವೆಲ್ಲವೂ ಪ್ರಪಂಚಕ್ಕೆ ಗುಣಂಗಳಲ್ಲದೆ ಆತ್ಮನ ಗುಣವಲ್ಲ. ಅಂತಪ್ಪ ಆತ್ಮನೇ ಶಿವನು, ಆಕಾಶವೇ ವಿಷ್ಣು, ವಾಯುವೇ ಬ್ರಹ್ಮನು. ಸಾಕಾರದಲ್ಲಿ ಅಗ್ನಿಯೇ ರುದ್ರನು, ಜಲವೇ ವಿಷ್ಣು. ಪೃಥ್ವಿಯೇ ಬ್ರಹ್ಮನು. ಇವು ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ, ಎಲ್ಲವೂ ಆತ್ಮನಲ್ಲಿ ಲಯವನೈದುತ್ತಿಹವು. ಅಂತಪ್ಪ ಆತ್ಮಸ್ವರೂಪಮೆತೆಂದೊಡೆ : ದೃಷ್ಟಿಗೋಚರಮಲ್ಲ, ಒಂದು ವಸ್ತುವಿನಲ್ಲಿ ಸಾಮ್ಯಗೋಚರಮಲ್ಲ. ಅದೆಂತೆಂದೊಡೆ : ವಾಯ್ವಾಕಾಶಾತ್ಮಸ್ವರೂಪಿಗಳಾದ ತ್ರಿಮೂರ್ತಿಗಳು. ವಾಯುರೂಪಮಾದ ಬ್ರಹ್ಮನೇ ಲಕ್ಷ್ಮಿಯು, ಆಕಾಶರೂಪಮಾದ ವಿಷ್ಣುವೇ ಮಹಾದೇವಿಯು, ಆv್ಮÀರೂಪಮಾದ ಶಿವನೇ ಶಾರದೆಯು. ವಾಯುರೂಪಮಾದ ಬ್ರಹ್ಮನು ಆತ್ಮರೂಪಮಾದ ಶಾರದೆಯನ್ನು ಕೂಡಿಹನು. ಆಕಾಶರೂಪಮಾದ ವಿಷ್ಣುವು ವಾಯುರೂಪಮಾದ ಲಕ್ಷ್ಮಿಯಂ ಕೂಡಿಹನು. ಆತ್ಮÀರೂಪಮಾದ ಶಿವನು ಆಕಾಶರೂಪಮಾದ ಮಹಾದೇವಿಯಂ ಕೂಡಿಹನು. ಆತ್ಮನೇ ವಿವೇಕವೆಂದು ತಿಳಿವುದು, ವಿವೇಕವೇ ಸತ್ಯಜ್ಞಾನಾಂದಸ್ವರೂಪು, ವಿವೇಕದಿಂದ ಸಕಲಪ್ರಪಂಚವೆಲ್ಲಾ ಮಿಥ್ಯೆಯಾಗಿಹುದು. ಅಂತಪ್ಪ ಸಕಲಪ್ರಪಂಚಮೆಲ್ಲವೂ ಮಿಥ್ಯವೆಂದು ತಿಳಿದು ಆ ಪ್ರಪಂಚದಲ್ಲಿ ಹೊಂದಿರ್ಪ ವಿವೇಕವೇ ಮುಕ್ತಿಯು, ಆಮುಕ್ತಿಯೇ ಶಿವನು. ಅಂತಪ್ಪ ವಿವೇಕದಲ್ಲಿನಾಹಂಭಾವವಡಗಿ, ಅಂತಪ್ಪ ವಿವೇಕವೇ ಮಹಾಲಿಂಗವು, ಅಂತಪ್ಪ ವಿವೇಕಮಿರ್ದಲ್ಲಿ ಪಾಪಗಳು ಹೊಂದದೇ ಇಹವು. ಅದುಕಾರಣ, ತಾನು ತಾನಾಗಿರ್ಪ ನಿಜಾನಂದಸುಖದೊಳೋಲಾಡುತಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪ್ರಜೆಗಳ ಅಲೆಯ ದೊರೆಯು ಒರ್ಚುವನಲ್ಲದೆ, ದೊರೆಯ ಅಲೆಯ ಪ್ರಜೆಗಳೊರ್ಚುವರೇನಯ್ಯಾ ? ಮಕ್ಕಳಲೆಯ ತಾಯಿಯೊರ್ಚುವಳಲ್ಲದೆ, ತಾಯ ಅಲೆಯ ಮಕ್ಕಳೊರ್ಚುವರೇನಯ್ಯಾ ? ನನ್ನಲೆಯ ನೀನೊರ್ಚಬೇಕಲ್ಲದೆ, ನಿನ್ನಲೆಯ ನಾನೊರ್ಚುವುದೇನಯ್ಯಾ ? ತಮದೊಳಗಣ ಜಾಗ್ರವು ನೀನು, ಜಾಗ್ರದೊಳಗಣ ತಮವು ನಾನು. ನನಗೆ ನೀನು ಬಾಹ್ಯನೂ ನಿನಗೆ ನಾನು ಬಾಹ್ಯನೂ ಆಗಿರ್ದೊಡೆ, ನಾನೆಂತು ಸುಖಿಸುವೆ ? ನೀನೆಂತು ಪರಿಗ್ರಹಿಸುವೆ ? ನನ್ನೊಳಗೆ ನೀನೂ ನಿನ್ನೊಳಗೆ ನಾನೂ ಇರ್ದಲ್ಲದೆ, ನಿನ್ನ ನನ್ನ ಸಂಬಂಧಸಕೀಲವು ಸಂಘಟಿಸುವುದೇ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ ?
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಯೇ ಶೂದ್ರನು, ಜಲವೇ ವೈಶ್ಯನು, ಅಗ್ನಿಯೇ ಕ್ಷತ್ರಿಯನು, ವಾಯುವೇ ಬ್ರಾಹ್ಮಣನು. ಸ್ಥೂಲಶರೀರವೇ ಶೂದ್ರನು, ಸೂಕ್ಷ್ಮಶರೀರವೇ ವೈಶ್ಯನು, ಕಾರಣಶರೀವೇ ಕ್ಷತ್ರಿಯನು, ಜೀವನೇ ಬ್ರಾಹ್ಮಣನು. ಬ್ರಾಹ್ಮಣರಿಗೆ ಋಗ್ವೇದವು, ಕ್ಷತ್ರಿಯರಿಗೆ ಯಜುರ್ವೇದವು, ವೈಶ್ಯರಿಗೆ ಸಾಮವೇದವು, ಶೂದ್ರರಿಗೆ ಅಥರ್ವಣವೇದವು. ಶೂದ್ರರಿಗೆ ಧರ್ಮವು, ವೈಶ್ಯರಿಗೆ ಅರ್ಥವು, ಕ್ಷತ್ರಿಯರಿಗೆ ಕಾಮವು, ಬ್ರಾಹ್ಮಣರಿಗೆ ಮೋಕ್ಷವು, ಬ್ರಾಹಣರಿಗೆ ಪೀತವರ್ಣವು, ಕ್ಷತ್ರಿಯರಿಗೆ ಅರುಣವರ್ಣವು, ವೈಶ್ಯರಿಗೆ ಶ್ಯಾಮವರ್ಣವು, ಶೂದ್ರರಿಗೆ ನೀಲವರ್ಣವು. ಬ್ರಾಹ್ಮಣರಿಗೆ ಸಾಮವು, ಕ್ಷತ್ರಿಯರಿಗೆ ಭೇದವು, ವೈಶ್ಯರಿಗೆ ದಾನವು, ಶೂದ್ರರಿಗೆ ದಂಡವು, ಬ್ರಾಹ್ಮಣರಿಗೆ ಇಂದ್ರನಧಿದೇವತೆಯು, ಕ್ಷತ್ರಿಯರಿಗೆ ಕಾಲನಧಿದೇವತೆಯು, ಶೂದ್ರರು ಭಕ್ತರನ್ನೂ, ವೈಶ್ಯರು ಗುರುವನ್ನೂ, ಕ್ಷತ್ರಿಯರು ಲಿಂಗವನ್ನೂ, ಬ್ರಾಹ್ಮಣರು ಅತಿಥಿಗಳನ್ನೂ ಪೂಜಿಸಬೇಕು. ಶಿವಭಕ್ತನೇ ಬ್ರಾಹ್ಮಣನು, ವಿಷ್ಣುಭಕ್ತನೇ ಕ್ಷತ್ರಿಯನು, ನಿಜವಸ್ತುವು ಉತ್ಕøಷ್ಟತ್ವವಂ ಹೊಂದಿದಲ್ಲಿ ಶ್ರೇಷ*ವಪ್ಪುದು; ಉತ್ಕøಷ್ಟ ವಸ್ತುವು ನಿಜವಂ ಹೊಂದಿದಲ್ಲಿ ಅದೇ ಪರತತ್ವವು. ಇಂತಪ್ಪ ಜಾತಿಧರ್ಮಂಗಳನ್ನು ತನ್ನಲ್ಲಿ ತಾನೇ ತಿಳಿದು ಭಕ್ತನಾಗಿ, ಶೂದ್ರತ್ವಮಂ ಕಳೆದು ಮಾಹೇಶ್ವರನಾಗಿ, ವೈಶ್ಯತ್ವಮಂ ಕಳೆದು ಪ್ರಸಾದಿಯಾದಿ, ಕ್ಷತ್ರಿಯತ್ವಮಂ ಕಳೆದು ಪ್ರಾಣಲಿಂಗಿಯಾಗಿ, ಬ್ರಹ್ಮತ್ವಮಂ ಪಡೆದು ಅಜಾತಮಾಗಿ, ಆಕಾಶರೂಪಮಾಗಿ, ಶುದ್ಧಸ್ಫಟಿಕಸಂಕಾಶಮಪ್ಪ. ಪ್ರಸಾದಲಿಂಗದಲ್ಲಿ ಪರಿಣಾಮಿಸುತ್ತಾ. ಲಿಂಗವೇ ಪತಿ ತಾನೇ ಸತಿಯಾಗಿರ್ಪನೇ ಶರಣನು. ಈ ಸತಿಪತಿನ್ಯಾವಳಿದು ವರ್ಣಾತೀತನೂ ವಾಗತೀತನೂ ಆಗಿ, ತಾನುತಾನಾಗಿರ್ಪುದೇ ಐಕ್ಯವು. ಇಂತಪ್ಪ ಕೇವಲನಿರ್ವಾಣಲಿಂಗೈಕ್ಯಪದವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಯಲ್ಲಿ ಜನನವೂ, ಆಕಾಶದಲ್ಲಿ ಮರಣವೂ, ಧರೆಯಲ್ಲಿ ಸಂತೋಷವೂ, ಗಗನದಲ್ಲಿ ದುಃಖವೂ, ಇಳೆಯಲ್ಲಿ ಅಹಂಕಾರವೂ, ಬಯಲಲ್ಲಿ ಜ್ಞಾನವೂ, ಬಯಲಲ್ಲಿ ಧರ್ಮವೂ, ಧರಣಿಯಲ್ಲಿ ಕರ್ಮವೂ, ಆಕಾಶದಲ್ಲಿ ಭಕ್ತಿಯೂ, ಧರಣಿಯಲ್ಲಿ ಶಕ್ತಿಯೂ, ಭೂಮಿಯಲ್ಲಿ ಜಾಗ್ರವೂ, ಆಕಾಶದಲ್ಲಿ ಸುಷುಪ್ತಿಯೂ, ಅಲ್ಲಿ ನೀನೂ ಇಲ್ಲಿ ನಾನೂ ಇರಲಾಗಿ, ನೀನೆಂತು ನನಗೊಲಿದೆ ? ನಾನೆಂತು ನಿನ್ನ ಕೂಡುವೆ ? ಬಯಲಲ್ಲಿರ್ಪ ಗುಣಗಳಂ ನಾನು ಕೊಂಡು, ಪೃಥ್ವಿಯಲ್ಲಿರ್ಪ ಗುಣಂಗಳಂ ನಿನಗೆ ಕೊಟ್ಟು, ಅಲ್ಲಿ ಬಂದ ನಿರ್ವಾಣಸುಖಲಾಭವನ್ನು ಪಡೆದರೆ ನೀನು ಮೆಚ್ಚುವೆ ನಾನು ಬದುಕುವೆ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪುರುಷನ ವೀರ್ಯವೇ ಸ್ತ್ರೀಗೆ ಶಕ್ತಿಯಾಗಿ, ತದ್ದಾರಣಬಲದಿಂ ಅದೇ ಸಾಕಾರಮಾಗಿ ಸೃಷ್ಟಿಯಾದಲ್ಲಿ, ಆ ಶಿಶುವನು ರಕ್ಷಿಸುವುದಕ್ಕೆ ಆ ಸತಿಯೇ ಕಾರಣಮಾಗಿರ್ಪಂತೆ, ಸದಾಶಿವನ ವೀರ್ಯರೂಪಸುವರ್ಣವೇ ವಿಷ್ಣುವಿಗೆ ಶಕ್ತಿಯಾಗಿ, ತದ್ಧಾರಣಬಲದಿಂದ ತದ್ರೂಪಮಾಗಿರ್ಪ ರಜೋಗುಣಮೂರ್ತಿಯಾದ ಬ್ರಹ್ಮಾದಿಸಕಲಪಂಚಮಂ ಸೃಷ್ಟಿಸಿ, ತದ್ರಕ್ಷಣಕ್ಕೆ ತಾನೇ ಕಾರಣಮಾಗಿರ್ಪನು. ಇಂತಪ್ಪ ಶಿವಶಕ್ತಿಗಳ ಮಹಿಮೆಯಂ ನಾನೆಂಬ ರಜೋಗುಣವೇ ಮೆರೆಗೊಂಡಿರ್ಪುದು. ತತ್ಸಂಗಕ್ಕೂ ತಾನೇ ಉಪಾಧಿಕಾರಣಮಾಗಿರ್ಪ ಭೇದಮಂ ಗುರುಮುಖದಿಂದ ತಿಳಿದು ನೋಡಿದಲ್ಲಿ, ಅವರಿಬ್ಬರ ಕ್ರೀಡೆಯನ್ನು ನೋಡಿ ನಾನಿಲ್ಲವಾದೆನು, ನಾನಿಲ್ಲವಾದಲ್ಲಿ ಅವೆರಡೂ ಒಂದೆಯಾಯಿತ್ತು. ದರ್ಪಣವಿಲ್ಲವಾದಲ್ಲಿಬಿಂಬ ಪ್ರತಿಬಿಂಬಗಳೇಕವಾದಂತೆ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಯೇ ಸ್ಥಾವರ, ಜಲವೇ ಜಂಗಮ, ಅಗ್ನಿಯೇ ಸ್ಥಾವರ, ವಾಯುವೇ ಜಂಗಮ. ಆಕಾಶವೇ ಸ್ಥಾವರ, ಜೀವನೇ ಜಂಗಮ. ಪೃಥ್ವಿಯೇ ಸ್ಥೂಲ, ಜಲವೇ ಸೂಕ್ಷ್ಮ. ಅಗ್ನಿಯೇ ಸ್ಥೂಲ, ವಾಯುವೇ ಸೂಕ್ಷ್ಮ ಆಕಾಶವೇ ಸ್ಥೂಲ, ಆತ್ಮನೇ ಸೂಕ್ಷ್ಮ. ಸ್ಥೂಲವಸ್ತುಗಳಿಂದ ಸೂಕ್ಷ್ಮ ವಸ್ತುಗಳೇ ಪ್ರಾಣಮಾಗಿಹವು. ತತ್ಸಂಗಂಗಳಿಂ ಬಿಂದುಕಳಾನಾದಗಳು ಸೃಷ್ಟಿಯಾಗುತ್ತಿಹವು. ಸ್ಥೂಲವಸ್ತುಗಳು ಆ ಸೂಕ್ಷ್ಮವಸ್ತುಗಳಲ್ಲೇ ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿಹವು. ಪೃಥಿವ್ಯಾದಿ ಪಂಚಭೂತಂಗಳೇ ಘ್ರಾಣಾದಿ ಪಂಚೇಂದ್ರಿಯಂಗಳಾಗಿ, ಆಯಾ ಗುಣಂಗಳಂ ಗ್ರಹಿಸುವಂತೆ ಆತ್ಮನಿಗೆ ಮನಸ್ಸೇ ಇಂದ್ರಿಯಮಾಗಿ, ಆತ್ಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಪರಮಾತ್ಮನಿಗೆ ಭಾವೇಂದ್ರಿಯಮಾಗಿ, ಆ ಪರಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಮುಖಂಗಳಾವುವೆಂದೊಡೆ: ಘ್ರಾಣಕ್ಕೇ ವಾಯುವೇ ಮುಖ, ಜಿಹ್ವೆಗೆ ಅಗ್ನಿಯೇ ಮುಖ, ನೇತ್ರಕ್ಕೆ ಜಲವೇ ಮುಖ, ತ್ವಕ್ಕಿಗೆ ಪೃಥ್ವಿಯೇ ಮುಖ, ಶ್ರೋತ್ರಕ್ಕಾತ್ಮವೇ ಮುಖ, ಮನಸ್ಸಿಗೆ ಚಿದಾಕಾಶವೆ ಮುಖ, ಭಾವಕ್ಕೆ ನಿಜವೇ ಮುಖವಾದಲ್ಲಿ. ಪಂಚೇದ್ರಿಯಂಗಳು ಪಂಚಭೂತಗುಣಂಗಳಂ ಗ್ರಹಿಸುವಂತೆ, ಮನಸ್ಸು ಆತ್ಮಗುಣವನ್ನು ಜ್ಞಾನಮುಖದಿಂ ಗ್ರಹಿಸಿ, ಗುರುದತ್ತಲಿಂಗವೂ ಆತ್ಮನೂ ಏಕಮೆಂದು ತಿಳಿದು, ತೂರ್ಯಭಾವದಲ್ಲಿ ಸ್ವಭಾವಮಾಗಿ, ನಿಜಾನಂದ ತೂರ್ಯಾತೀತದಲ್ಲಿ ಎರಕವೆರದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥಿವ್ಯಪ್ತೇಜೋವಾಯ್ವಾಕಾಶಂಗಳೈದು ಶರೀರಮಹದಹಂಕಾರ ಪ್ರಕೃತಿಗಳೊಳಗೆ ಸೇರಲು, ಮಹತ್ತೇ ಜೀವ ಪರಮರಾಗಿ, ಪ್ರಕೃತಿಯೇ ಮನ ಬುದ್ಧಿಗಳಾಗಿ, ಅಹಂಕಾರವೇ ಚಿದÀಹಂಕಾರವಾಗಲು, ಮನ ಬುದ್ಧಿ ಚಿತ್ತಹಂಕಾರಂಗಳೇ ಅಂತಃಕರಣಗಳು, ತದನುಭವಕರ್ತನೇ ಜೀವನು, ತತ್ಸಾಕ್ಷಿಕಾರಣಮಾಗಿರ್ಪನೇ ಪರಮನು. ಮನ ಬುದ್ಧಿಗಳು ಉತ್ಕøಷ್ಟ ಕಾರ್ಯವನೆಸಗುತ್ತಿರ್ಪುದರಿಂ ಅಹಂಕಾರಮೆನಿಸಿತ್ತು. ಜೀವಪರಮರೆಲ್ಲಕ್ಕೂ ತಾವೇ ಕಾರಣರಾಗಿ, ತಮಗಿಂತಲೂ ದೊಡ್ಡಿತ್ತಾದ ವಸ್ತುಮತ್ತೊಂದಿಲ್ಲದಿರ್ಪುದರಿಂ ಮಹತ್ತಾಗಿತ್ತು. ಆ ಮಹತ್ತೇ ಆತ್ಮನು, ಆದುದರಿಂ ಜೀವಾತ್ಮನೇ ಶಿವನು, ಮನ ಬುದ್ಧಿಗಳೇ ವಿಷ್ಣುವು, ಚಿದಹಂಕಾರಗಳೇ ಬ್ರಹ್ಮನು. ಆ ಚಿದಹಂಕಾರಗಳೆರಡೂ ಮನ ಬುದ್ಧಿಗಳಿಗೆ ಶಕ್ತಿಯಾಗಿಹವು, ಆ ಮನಬುದ್ಧಿಗಳೆರಡೂ ಜೀವಪರಮರಿಗೆ ಶಕ್ತಿಯಾಗಿಹವು, ಆ ಜೀವಪರಮರೇ ಚಿದಹಂಕರಾಗಳಿಗೆ ಶಕ್ತಿಯಾಗಿಹವು, ಜೀವನೇ ಸಗುಣ, ಪರಮನೇ ನಿರ್ಗುಣ, ಬುದ್ಧಿಯೇ ಸುಗುಣ, ಮನವೇ ನಿರ್ಗುಣ, ಜ್ಞಾನವೇ ಸಗುಣ, ಅಹಂಕಾರವೇ ನಿರ್ಗುಣ, ನಿರ್ಗುಣಂಗಳಲ್ಲಿ ಸಗುಣಂಗಳು ಸೃಷ್ಟಿ ಸ್ಥಿತಿ ಸಂಹಾರಗಳಂ ಹೊಂದುತ್ತಿರ್ಪವು, ಸಗುಣ ನಿರ್ಗುಣಗಳಿಂ ಸತ್ಕøತ್ಯ ದುಷ್ಕøತ್ಯರೂಪಂಗಳಾಗಿಹವು. ಆ ದುಷ್ಕøತ್ಯವು ನಿಜವಂ ಹೊಂದದೇ ಇಹುದು. ಸತ್ಕøತ್ಯವು ನಿಜವಂ ಹೊಂದಿ ಹೊಂದದೇ ಇಹುದು. ದುಷ್ಕøತ್ಯದಿಂ ನಿಜ ಸಾಧ್ಯಮಲ್ಲ. ಸತ್ಕøತ್ಯದಿಂ ನಿಜವು ಸಾಧ್ಯಮಪ್ಪದು, ಸಾಧ್ಯಮಾದಲ್ಲಿ ನಿಜವೇ ತಾನಾಗಿಹುದು. ಅಂತಃಕರಣಂಗಳು ಜೀವಪರಮರ ಭೇದಾಭೇದಂಗಳಿಗೆ ತಾವು ಸಾಧನಭೂತಂಗಳಾಗಿಹವು; ಸಾಧ್ಯವಾದಲ್ಲಿ ಸಾಧನದ್ರವ್ಯಂಗಳು ಅಪ್ರಯೋಜಕವಾಗಿರ್ಪಂದದಿ ಜೀವಪರಮರೇಕಮಾದಲ್ಲಿ ಅಂತಃಕರಣದೋಷಂಗಳು ಅಪ್ರಯೋಜಕಂಗಳಾಗಿ ಮಿಥ್ಯಾಭೂತಂಗಳಾಗಿಹವು. ಅಂತಪ್ಪ ಜೀವಪರಮರಸಂಗವೇ ಮೋಕ್ಷವು. ಅಂತಪ್ಪ ನಿಜಾನಂದ ನಿರ್ವಾಣಸುಖವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪಶುಗಳು ಆಹಾರ ಮೈಥುನ ನಿದ್ರೆಗಳನ್ನು ಕಂಡಲ್ಲಿ, ಬಂದಲ್ಲಿ, ಅನುಭವಿಸುತ್ತಿರ್ಪುದರಿಂ ಪರಲೋಕದಲ್ಲಿ ಸುಖದುಃಖಾನುಭಗಳಿಲ್ಲದೆ, ಕಾಮಲೇಪವಿಲ್ಲದೆ, ಮನುಷ್ಯಜನ್ಮದಲ್ಲಿ ಮಾಡಿದ ಕರ್ಮಾನುಭವನಿಮಿತ್ತಮಾಗಿ, ಮರಳಿ ಮರಳಿ ತಿರ್ಯಗ್ರೂಪಮಾಗಿ ಜನಿಸಿ, ಆ ಕರ್ಮಾನುಭವವು ತೀರಲು, ಮನುಷ್ಯಜನ್ಮವನೆತ್ತಿ. ಆಹಾರಾದಿ ಸಕಲಪದಾರ್ಥಂಗಳಂ ದೊರಕಿಲ್ಲನುಭವಿಸದೆ, ರಾಗ ಲೋಭಯುಕ್ತಗಳಾಗಿ, ತಮ್ಮ ಮಂದಿರಕ್ಕೆ ತಂದು, ಪುತ್ರ ಮಿತ್ರ ಕಳತ್ರಯುಕ್ತವಾಗನುಭವಿಸಿ, ಮಿಕ್ಕುದಂ ಕೂಡಲಿಕ್ಕುದರಿಂ ಇಹದಲ್ಲಿ ಮಾಡಿದ ಕರ್ಮವಂ ಪರದಲ್ಲನುಭವಿಸಬೇಕಾಯಿತ್ತು. ಆದುದರಿಂದಂದಿಗೆ ದೊರೆತ ಪದಾರ್ಥವನಂದೇ ಅನುಭವಿಸಿ, ಲೋಭರಾಗಾಭಿಮಾನವಿಲ್ಲದಾತಂಗೆ ಕರ್ಮಲೇಪವಿಲ್ಲ. ಮನುಷ್ಯರಲ್ಲಿ ಕರ್ಮಲೇಪವಿಲ್ಲದಾತನೇ ವಿರಕ್ತನು, ಆತನೇ ಜೀವನ್ಮುಕ್ತನು. ಅಂತಪ್ಪ ನಿರ್ಲೇಪಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೂರ್ವಪಶ್ಚಿಮ ದಕ್ಷಿಣೋತ್ತರಗಳಲ್ಲಿ ಕೋಟಲೆಗೊಳುತ್ತಿರ್ಪ ಸೃಷ್ಟಿ ಸ್ಥಿತಿ ಸಂಹಾರಂಗಳಳಿಗಲಸಿ, ಪಶ್ಚಿಮದಲ್ಲಿ ಸೇರಿ, ಆಚಾರವಿಡಿದು ಭಕ್ತನಾದಲ್ಲಿ. ಶಿವನು ಆತನಿಗೆ ಈಶಾನ್ಯದಲ್ಲಿ ಆತ್ಮಭಾವದಿಂ ಪ್ರಕಾಶಿಸುತ್ತಿರ್ಪನು. ಆತನು ಉತ್ತರದಲ್ಲಿ ಮಹೇಶ್ವರರೂಪದಿಂ ಗುರುಲಿಂಗವಂ ಪೂಜಿಸಲು, ಅಗ್ನೇಯದಲ್ಲಿ ಶಿವನು ಸತ್ವಸ್ವರೂಪಮಪ್ಪ ದೇವತಾಮೂರ್ತಿಯಾಗಿ ಪೂಜಾಯೋಗಯಮಾಗಿಹನು. ಆತನು ದಕ್ಷಿಣದಲ್ಲಿ ಪ್ರಸಾದರೂಪಿಯಾಗಿ ಶಿವಲಿಂಗಪೂಜೆಯಂ ಮಾಡುವಲ್ಲಿ, ಶಿವನು ನೈರುತ್ಯದಲ್ಲಿ ಗ್ರಹಸ್ವರೂಪನಾಗಿ, ಆತನ ಮನಸ್ಸಂ ಗ್ರಹಿಸಿ, ಆತನ ಸುಖದುಃಖಗಳಿಗೆ ಕಾರಣಮಾಗನುಭವಿಸುತ್ತಿಹನು. ಆತನು ಪೂರ್ವದಿಕ್ಕಿನಲ್ಲಿ ಜಂಗಮಲಿಂಗವಂ ಪೂಜಿಸಿದಲ್ಲಿ, ವಾಯುವ್ಯದಲ್ಲಿ ಶಿವನು ಆತನಪ್ರಾಣವೇ ತಾನಾಗಿ, ಆತನನ್ನು ಪ್ರಾಣಲಿಂಗಿಯಂ ಮಾಡಿ, ಆತನೇ ತಾನೆಂದಭಿಮಾನಿಸಿಹನು. ಆತನು ಮಧ್ಯದಲ್ಲಿ ಮಂತ್ರಸ್ವರೂಪಮಾದ ಪ್ರಸಾದಲಿಂಗವಂ ಪೂಜಿಸುವಲ್ಲಿ. ಹೃದಯಮಧ್ಯದಲ್ಲಿ ಪ್ರಸನ್ನನಾಗಿ ಪ್ರಕಾಶಿಸಿ ತಾನೇ ಪತಿ ಆ ಶರಣನೇ ಸತಿಯಾಗಿ, ಅಂತರಂಗದ ಭೋಗದಲ್ಲಿ ಆನಂದಿಸುತ್ತಿಹನು. ಆತನು ಪಂಚಲಿಂಗಂಗಳಂ ಪೂಜಿಸುತ್ತಿರ್ಪಲ್ಲಿ, ತಾನು ಸರ್ವತೋಮುಖನಾಗಿ ಹೃದಯದಲ್ಲಿ ಮಹಾಲಿಂಗಮೆನಿಸಿ, ಆತನೇ ತಾನಾಗಿ ಸಮರಸಭಾವದಲ್ಲಿ ಐಕ್ಯನಂ ಮಾಡಿ, ತಾನು ತಾನೇ ಆಗಿರ್ಪ ಈ ಷಟ್ಸ್ಥಲಲಿಂಗಭೋಗವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವೀಚಕ್ರಕ್ಕೆ ಶರೀರವೇ ಪೂರ್ವ, ಶರೀರದೊಳಗಣ ಪೃಥ್ವಿಯೇ ಪಶ್ಚಿಮ, ಜಿಹ್ವೆಯಲ್ಲಿ ಕೊಂಬ ಆಹಾರಾದಿಪೃಥ್ವಿಯೇ ಉತ್ತರ, ಅಧೋಮುಖದಲ್ಲಿ ವಿಸರ್ಜನರೂಪಮಾದ ಪುತ್ರಾದಿಪೃಥ್ವಿಯೇ ದಕ್ಷಿಣ, ಪೂರ್ವರೂಪವಾದ ಶರೀರಕ್ಕೂ ದಕ್ಷಿಣರೂಪವಾದ ಪುತ್ರಾದಿಗಳಿಗೂ ಸಂಧಿಕಾಲಮಾಗಿರ್ಪ ಅರ್ಥಾದಿಪೃಥ್ವಿಯೇ ಆಗ್ನೇಯ, ಪುತ್ರಾದಿ ದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ಮಲವಿಸರ್ಜನರೂಪಮಾದ ಪೃಥ್ವಿಯೇ ನೈರುತ್ಯ, ಆ ಶರೀರದೊಳಗಣ ಪೃಥ್ವಿಗೂ ಆಹಾರರೂಪವಾದ ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಗೂ ಸಂಧಿಕಾಲದಲ್ಲಿ ಪರಮಪವಿತ್ರಮಾಗಿ ಪರಿಪಕ್ವಮಯವಾಗಿ ಪ್ರಸಾದರೂಪವಾದ ಅನ್ನಾದಿ ಭೋಜನಕ್ರಿಯೆಯೆಂಬ ಪೃಥ್ವಿಯೇ ಈಶಾನ್ಯ. ಜಲಚಕ್ರಕ್ಕೆ ಗುಹ್ಯಜಲವೇ ಪೂರ್ವ, ಶರೀರಜಲವೇ ದಕ್ಷಿಣ, ಜಿಹ್ವಾಜಲವೇ ಪಶ್ಚಿಮ, ನೇತ್ರಜಲವೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಕಾಲದಲ್ಲಿರ್ಪ ಬಿಂದುಜಲವೇ ಆಗ್ನೇಯ, ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಸಂಧಿಯಲ್ಲಿರ್ಪ ವಾತ ಪಿತ್ತ ಶ್ಲೇಷ್ಮಜಲವೇ ನೈರುತ್ಯ, ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಸಂಧಿಯಲ್ಲಿರ್ಪ ಉಚ್ಛ್ವಾಸವಾಯುಮುಖದಲ್ಲಿ ದ್ರವಿಸುತ್ತಿರ್ಪ ಜಲವೇ ವಾಯವ್ಯಜಲ, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯದಲ್ಲಿರ್ಪ ಜಲಕ್ಕೂ ಸಂಧಿಯಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಈಶಾನ್ಯಜಲ. ಅಗ್ನಿಚಕ್ರಕ್ಕೆ ಗುಹ್ಯದಲಿರ್ಪ ತೇಜೊರೂಪಮಾದ ಆಗ್ನಿಯೇ ಪೂರ್ವ, ಉದರದಲ್ಲಿರ್ಪ ಅಗ್ನಿಯೇ ದಕ್ಷಿಣ, ನೇತ್ರದಲ್ಲಿರ್ಪ ಆಗ್ನಿಯೇ ಪಶ್ಚಿಮ, ಹಸ್ತದಲ್ಪಿರ್ಪ ಸಂಹಾರಾಗ್ನಿಯೇ ಉತ್ತರ, ಗುಹ್ಯದಲ್ಲಿರ್ಪ ಪೂರ್ವಾಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನದಲ್ಲಿರ್ಪ ಕಾಮಾಗ್ನಿಯೇ ಆಗ್ನೇಯಾಗ್ನಿ, ಉದರದಲ್ಲಿರ್ಪ ಅಗ್ನಿಗೂ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಗೂ ಸಂಧಿಯಲ್ಲಿರ್ಪ ಕ್ರೋಧ ಮತ್ಸರ ರೂಪವಾಗಿರ್ಪ ತಾಮಸಾಗ್ನಿಯೇ ನೈರುತ್ಯಾಗ್ನಿ, ನೇತ್ರದಲ್ಲಿರ್ಪ ಅಗ್ನಿಗೂ ಹಸ್ತದಲ್ಲಿರ್ಪ ಉತ್ತರಾಗ್ನಿಗೂ ಸಂಧಿಯಲ್ಲಿ ವಸ್ತುಗ್ರಹಣಚಲನೋದ್ರೇಕಾಗ್ನಿಯೇ ವಾಯವ್ಯಾಗ್ನಿ, ಆ ಹಸ್ತಕ್ಕೂ ಗುಹ್ಯಕ್ಕೂ ಸಂಧಿಯಲ್ಲಿ ಧರ್ಮಪ್ರಜಾಸೃಷ್ಟಿನಿಮಿತ್ತ ಪಾಣಿಗ್ರಹಣಮಪ್ಪಲ್ಲಿ ಸಾಕ್ಷಿರೂಪಮಾದ ಹೋಮಾಗ್ನಿಯೇ ಈಶಾನ್ಯಾಗ್ನಿ. ವಾಯುಚಕ್ರಕ್ಕೆ ನಾಸಿಕಚಕ್ರದಲ್ಲಿರ್ಪ ಪ್ರಾಣವಾಯುವೇ ಪೂರ್ವವಾಯು, ಹೃದಯವೇ ಪಶ್ಚಿಮ, ಚಲನಾತ್ಮಕವಾದ ಚೈತನ್ಯವಾಯುಮುಖವಿಕಸನವೇ ಉತ್ತರವಾಯು, ಗಂಧವಿಸರ್ಜನೆಯೇ ದಕ್ಷಿಣವಾಯು, ನಾಸಿಕದಲ್ಲಿರ್ಪ ಪೂರ್ವವಾಯುವಿಗೂ ಗಂಧದಲ್ಲಿರ್ಪ ದಕ್ಷಿಣವಾಯುವಿಗೂ ಸಂಧಿಯಲ್ಲಿರ್ಪ ಗಂಧವಾಯುವೇ ಆಗ್ನೇಯವಾಯು, ಗುದದಲ್ಲಿರ್ಪ ವಾಯುವಿಗೂ ಹೃದಯದಲ್ಲಿರ್ಪ ಪಶ್ಚಿಮವಾಯುವಿಗೂ ಸಂಧಿಯಲ್ಲಿ ಆದ್ಯನಾದಿವ್ಯಾಧಿಗಳಂ ಕಲ್ಪಿಸಿ ದೀಪನಾಗ್ನಿಯಲ್ಲಿ ಕೂಡಿಸಿ ಅನಂತಮಲವಂ ಮಾಡಿ ಅಧೋಮುಖದಲ್ಲಿ ಕೆಡವುತ್ತಿರ್ಪ ತಾಮಸವಾಯುವೇ ನೈರುತ್ಯವಾಯು, ಹೃದಯವಾಯುವಿಗೂ ವದನದಲ್ಲಿರ್ಪ ಉತ್ತರವಾಯುವಿಗೂ ಸಂಧಿಯಲ್ಲಿರ್ಪ ಕಂಠದಲ್ಲಿ ಹಸನ ರೋದನ ಗರ್ಜನಾದಿಗಳಂ ಮಾಡುತ್ತಿರ್ಪ ವಾಯುವೇ ವಾಯವ್ಯವಾಯು, ವದನದಲ್ಲಿರ್ಪ ವಾಯುವಿಗೂ ನಾಸಿಕದಲ್ಲಿರ್ಪ ವಾಯುವಿಗೂ ಸಂಧಿಯಲ್ಲಿರ್ಪ ಅಕ್ಷರಾತ್ಮಕವಾಯುವೇ ಈಶಾನ್ಯ. ಆಕಾಶಚಕ್ರಕ್ಕೆ ಶ್ರೋತ್ರದಲ್ಲಿರ್ಪ ಆಕಾಶವೇ ಪೂರ್ವ, ಶರೀರದಲ್ಲಿರ್ಪ ಆಕಾಶವೇ ಪಶ್ಚಿಮ, ಪಾದದಲ್ಲಿರ್ಪ ಆಕಾಶವೇ ದಕ್ಷಿಣ, ಜಿಹ್ವೆಯಲ್ಲಿರ್ಪ ಆಕಾಶವೇ ಉತ್ತರ, ಶ್ರೋತ್ರದಲ್ಲಿರ್ಪ ಪೂರ್ವಾಕಾಶಕ್ಕೂ ಪಾದದಲ್ಲಿರ್ಪ ದಕ್ಷಿಣಾಕಾಶಕ್ಕೂ ಕಿವಿಯಲ್ಲಿ ಪಾದದಲ್ಲಿ ಗಮಿಸುತ್ತಿರ್ಪಲ್ಲಿ ಮುಂದೆ ಗಮಿಸುತ್ತಿರ್ಪಾಕಾಶವೇ ಆಗ್ನೇಯಾಕಾಶ, ಪಾದದಲ್ಲಿರ್ಪ ಆಕಾಶಕ್ಕೂ ಶರೀರದಲ್ಲಿರ್ಪ ಪಶ್ಚಿಮಾಕಾಶಕ್ಕೂ ಸಂಧಿಯಲ್ಲಿ ಮಲಮೂತ್ರ ವಿಸರ್ಜನಾಕಾಶವೇ ನೈರುತ್ಯಾಕಾಶ, ಆ ಶರೀರದೊಳಗಿರ್ಪ ಆಕಾಶಕ್ಕೂ ಜಿಹ್ವೆಯಲ್ಲಿರ್ಪ ಉತ್ತರಾಕಾಶಕ್ಕೂ ಸಂಧಿಯಲ್ಲಿ ಗುಣಗ್ರಹಣವಂ ಮಾಡುತ್ತಿರ್ಪ ಹೃದಯವೇ ವಾಯವ್ಯಾಕಾಶ, ಜಿಹ್ವೆಯಲ್ಲಿರ್ಪ ಆಕಾಶಕ್ಕೂ ಶ್ರೋತ್ರದಲ್ಲಿರ್ಪ ಆಕಾಶಕ್ಕೂ ಸಂಧಿಯಲ್ಲಿ ಗುರುವು ಮುಖದಿಂದುಪದೇಶಿಸಲು, ಶಿಷ್ಯನು ಕರ್ಣಮುಖದಲ್ಲಿ ಗ್ರಹಿಸಲು, ತನ್ಮಂತ್ರಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಆಕಾಶವೇ ಈಶಾನ್ಯಾಕಾಶ, ಆತ್ಮಚಕ್ರಕ್ಕೆ ವಾಸನಾಜ್ಞಾನವೇ ಪಶ್ಚಿಮ, ರುಚಿಜ್ಞಾನವೇ ಉತ್ತರ, ಸ್ಪರ್ಶಜ್ಞಾನವೇ ಪೂರ್ವ, ರೂಪಜ್ಞಾನವೇ ದಕ್ಷಿಣ. ಸ್ಪರ್ಶನರೂಪಮಾದ ಪೂರ್ವಜ್ಞಾನವೇ ಜೀವನು, ರೂಪಜ್ಞತ್ವಮುಳ್ಳ ದಕ್ಷಿಣಜ್ಞಾನವೇ ಶರೀರ. ಸ್ಪರ್ಶನದಲ್ಲಿ ಜೀವನು ವ್ಯಾಪ್ತನಾದಂತೆ ರೂಪಜ್ಞಾನದಲ್ಲಿ ಶರೀರವು ವ್ಯಾಪ್ತಮಾಗಿರ್ಪುದರಿಂ ರೂಪಜ್ಞಾನತ್ವವೇ ಶರೀರ, ಸ್ಪರ್ಶನಜ್ಞಾನತ್ವವೇ ಜೀವ. ತತ್ಸಂಧಿಯಲ್ಲಿ ತೇಜೋವಾಯುರೂಪಮಾಗಿರ್ಪ ಮನೋಜ್ಞಾನತ್ವವೇ ಆಗ್ನೇಯಾತ್ಮನು. ಮನೋಜ್ಞಾನಕ್ಕೂ ಪಶ್ಚಿಮದಲ್ಲಿರ್ಪ ವಾಸನಾಜ್ಞಾನಕ್ಕೂ ಸಂಧಿಯಲ್ಲಿ ಜನ್ಮಾಂತರವಾಸನಾಜ್ಞಾನವೇ ಪರೋಕ್ಷಜ್ಞಾನ, ರೂಪಜ್ಞಾನವೇ ಪ್ರತ್ಯಕ್ಷಜ್ಞಾನ. ಈ ಎರಡರ ಮಧ್ಯದಲ್ಲಿ ಭಾವಜ್ಞತ್ವಮಿರ್ಪುದು. ಜಾಗ್ರತ್ಸ್ವಪ್ನಗಳ ಮಧ್ಯದಲ್ಲಿ ಸುಷುಪ್ತಿಯು ಇರ್ಪಂತೆ ಸುಷುಪ್ತಿಗೆ ತನ್ನಲ್ಲಿರ್ಪ ಸ್ವಪ್ನವೇ ಪ್ರತ್ಯಕ್ಷಮಾಗಿ ತನಗೆ ಬಾಹ್ಯಮಾಗಿರ್ಪ ಜಾಗ್ರವು ಪ್ರತ್ಯಕ್ಷಮಾಗಿಹುದು. ಅಂತು ಭಾವಜ್ಞತ್ವಕ್ಕೆ ರೂಪಜ್ಞಾನಪ್ರತ್ಯಕ್ಷಮಾಗಿ ವಾಸನಾಜ್ಞಾನಕ್ಕೆ ತಾನೇ ಮರೆಯಾಗಿರ್ಪುದರಿಂ ಆ ಭಾವಜ್ಞಾನವೇ ನೈರುತ್ಯಾತ್ಮನು. ಆ ವಾಸನಾಜ್ಞಾನಕ್ಕೂ ಉತ್ತರದಲ್ಲಿರ್ಪ ರುಚಿಜ್ಞಾನಕ್ಕೂ ಸಂಧಿಯಲ್ಲಿ ರುಚಿಯೆಂದರೆ ಅನುಭವಪದಾರ್ಥ, ತಜ್ಞಾನವೇ ರುಚಿಜ್ಞಾನ. ವಾಸನಾಜ್ಞಾನವೇ ಪರೋಕ್ಷಜ್ಞಾನ, ಅದೇ ಭೂತಜ್ಞಾನ, ಆ ರುಚಿಜ್ಞಾನವೇ ಭವಿಷ್ಯಜ್ಞಾನ. ಅಂತಪ್ಪ ಭೂತಭವಿಷ್ಯತ್ತುಗಳ ಮಧ್ಯದಲ್ಲಿ ವಾಯುರೂಪಮಾದ ಶಬ್ದಮುಖದಲ್ಲಿ ತಿಳಿವುತ್ತಿರ್ಪ ಶಬ್ದಜ್ಞಾನವೇ ವಾಯವ್ಯಾತ್ಮನು. ರುಚಿಜ್ಞಾನಕ್ಕೂ ಸ್ಪರ್ಶನಜ್ಞಾನಕ್ಕೂ ಮಧ್ಯದಲ್ಲಿ ಜೀವನು ರುಚಿಗಳನನುಭವಿಸುವ ಸಂಧಿಯಲ್ಲಿರ್ಪ ಶಿವಜ್ಞಾನಮಧ್ಯದಲ್ಲಿರುವನೇ ಈಶಾನ್ಯಾತ್ಮನು. ಜ್ಞಾನಾನಂದಮೂರ್ತಿಯೇ ಕರಕಮಲದಲ್ಲಿ ಇಷ್ಟಲಿಂಗಮಾಗಿ, ಆ ಶಿವಜ್ಞಾನವೇ ಹೃತ್ಕಮಲಮಧ್ಯದಲ್ಲಿ ರುಚ್ಯನುಭವಸಂಧಿಯಲ್ಲಿ ಪ್ರಾಣಲಿಂಗಮಾಗಿ, ಪ್ರತ್ಯಕ್ಷ ಪರೋಕ್ಷಂಗಳಿಗೆ ತಾನೇ ಕಾರಣವಾಗಿ, ಆ ಶಿವಜ್ಞಾನಂಗಳು ಭಾವದಲ್ಲೊಂದೇ ಆಗಿ ಪ್ರಕಾಶಿಸಿದಲ್ಲಿ ಭಾವದಲ್ಲಿರ್ಪ ತಾಮಸವಳಿದು, ಪ್ರತ್ಯಕ್ಷ ಪರೋಕ್ಷಂಗಳೊಂದೇ ಆಗಿ, ಪರೋಕ್ಷಜ್ಞಾನದಲ್ಲಿ ಪ್ರತ್ಯಕ್ಷಭಾವಂಗಳಳಿದು, ಭೂತಭವಿಷ್ಯಂಗಳೊಂದೇ ಆಗಿ ಅಖಂಡಮಯಮಾಗಿ ಎಲ್ಲವೂ ಒಂದೆಯಾಗಿರ್ಪುದೇ ಆಗ್ನೇಯ. ಅದಕ್ಕೆ ಇಷ್ಟಪ್ರಾಣಂಗಳೆಂಬೆರಡು ದಳಂಗಳು. ವಿಶುದ್ಧದಲ್ಲಿ ಪ್ರಮಾಣಕ್ಕೆ ಪೂರ್ವಾತ್ಮನಾದ ಜೀವನೇ ಸ್ಥಾನ, ಸಂಶಯಕ್ಕೆ ಆಗ್ನೇಯಾತ್ಮವಾದ ಮನವೇ ಸ್ಥಾನ, ದೃಷ್ಟಾಂತಕ್ಕೆ ದಕ್ಷಿಣಾತ್ಮಕವಾದ ಶರೀರವೇ ಸ್ಥಾನ, ಅವಯವಕ್ಕೆ ನೈರುತ್ಯವಾದ ಭಾವವೇ ಸ್ಥಾನ, ನಿರ್ಣಯಕ್ಕೆ ಪಶ್ಚಿಮಾತ್ಮಕವಾದ ಶಬ್ದಜ್ಞಾನವೇ ಸ್ಥಾನ, ಜಲ್ಪಕ್ಕೆ ವಾಯುವ್ಯಾತ್ಮವಾದ ಶಬ್ದಜ್ಞಾನವೇ ಸ್ಥಾನ, ಹೇತ್ವಭಾವಕ್ಕೆ ರುಚಿಜ್ಞತ್ವವೇ ಸ್ಥಾನ. ಜಾತಿಯೆಂದರೆ ಪದಾರ್ಥನಿಷ*ಧರ್ಮ. ಆ ಧರ್ಮಕ್ಕೆ ಈಶಾನ್ಯಾತ್ಮನಾದ ಶಿವನೇ ಸ್ಥಾನ, ಪ್ರಮೇಯಕ್ಕೆ ಶ್ರೋತ್ರದಲ್ಲಿರ್ಪ ವಿಶುದ್ಧರೂಪಮಾದ ಪೂರ್ವಾಕಾಶವೇ ಸ್ಥಾನ, ಪ್ರಯೋಜನಕ್ಕೆ ಧಾವತೀರೂಪಮಾದ ಆಗ್ನೇಯಾಕಾಶವೇ ಸ್ಥಾನ, ಸಿದ್ಧಾಂತಕ್ಕೆ ಪದದಲ್ಲಿರ್ಪ ದಕ್ಷಿಣಾಕಾಶವೇ ಸ್ಥಾನ, ತರ್ಕಕ್ಕೆ ಮಲವಿಸರ್ಜನರೂಪವಾದ ನೈರುತ್ಯಾಕಾಶವೇ ಸ್ಥಾನ, ಛಲಕ್ಕೆ ಜಿಹ್ವೆಯಲ್ಲಿ ವಾಗ್ರೂಪಮಾಗಿರ್ಪ ಉತ್ತರಾಕಾಶವೇ ಸ್ಥಾನ, ನಿಗ್ರಹಕ್ಕೆ ಉಪದೇಶಮಧ್ಯದಲ್ಲಿರ್ಪ ಈಶಾನ್ಯಾಕಾಶವೇ ಸ್ಥಾನ. ಇಂತು ಆತ್ಮಾಕಾಶಮಾಗಿರ್ಪ ಷೋಡಶದಳಂಗಳಿಂ ಪ್ರಕಾಶಿಸುತ್ತಿರ್ಪುದೇ ವಿಶುದ್ಧಿಚಕ್ರವು. ತದ್ಬೀಜಮಾಗಿರ್ಪ ಷೋಡಶಸ್ವರಂಗಳಲ್ಲಿ ಹ್ರಸ್ವಸ್ವರಂಗಳೆಲ್ಲವೂ ಆತ್ಮಚಕ್ರಬೀಜ ದೀರ್ಘಸ್ವರಂಗಳೆಲ್ಲವೂ ಆಕಾಶಚಕ್ರಬೀಜ, ಮುಕುಳನವೇ ಹ್ರಸ್ವ ; ಅದು ಆತ್ಮರೂಪಮಾದ ಸಂಹಾರಮಯಮಾಗಿಹುದು. ವಿಕಸನವೇ ದೀರ್ಘ; ಅದು ಮಿಥ್ಯಾರೂಪಮಾದ ಸೃಷ್ಟಿಮಯಮಾಗಿಹುದು. ಇಂತಪ್ಪ ಆತ್ಮಾಕಾಶಚಕ್ರಗಳೆರಡೂ ಏಕಾಕಾರಮಾಗಿರ್ಪುದೇ ವಿಶುದ್ಧಿಚಕ್ರವು. ಅನಾಹತದಲ್ಲಿ ತನುವಿಗೆ ಪೂರ್ವರೂಪಮಾದ ವಾಯುವೇ ಸ್ಥಾನ, ನಿಧನಕ್ಕೆ ವಾಸನಾಗ್ರಹಣರೂಪಮಾದ ಆಗ್ನೇಯವಾಯುವೇ ಸ್ಥಾನ, ಸಹಜವೆಂದರೆ ಪ್ರಕೃತಿ, ಆ ಸಹಜಕ್ಕೆ ದಕ್ಷಿಣರೂಪಮಾದ ವಿಸರ್ಜನವಾಯುವೇ ಸ್ಥಾನ, ಸೂಹೃತಿಗೆ ನೈರುತ್ಯರೂಪಮಾದ ಗರ್ಭವಾಯುವೇ ಸ್ಥಾನ, ಸುತಕ್ಕೆ ಪಶ್ಚಿಮದಲ್ಲಿರ್ಪ ಹೃದಯವಾಯುವೇ ಸ್ಥಾನ, ರಿಪುವಿಗೆ ಕಂಠದಲ್ಲಿ ವಾಯವ್ಯರೂಪಮಾಗಿರ್ಪ ಉತ್ಕøಷ್ಟಘೋಷವಾಯುವೇ ಸ್ಥಾನ, ಜಾಯಕ್ಕೆ ಉತ್ತರದಲ್ಲಿರ್ಪ ಜಿಹ್ವಾಚಲನವಾಯುವೇ ಸ್ಥಾನವಾಯಿತ್ತು. ನಾದವಿಸರ್ಜನಸ್ಥಾನವೇ ಜಿಹ್ವಾಚಲನ, ಬಿಂದುವಿಸರ್ಜನಸ್ಥಾನವೇ ಜಾಯೆ, ಜಾಯೆಯಿಂದಾದ ಸುತಾದಿ ರೂಪಗಳಿಗೆ ಜಿಹ್ವಾವಾಯುವಿನಿಂದಾದ ನಾಮವೇ ಕ್ರಿಯಾಸಂಬಂಧಮಾದುದರಿಂದಲೂ ಪತಿವಾಕ್ಯವನನುಸರಿಸುವುದೇ ಸತಿಗೆ ಧರ್ಮವಾದುದರಿಂದಲೂ ಜಾಯಿಗೆ ಜಿಹ್ವಾವಾಯುವೇ ಸ್ಥಾನವಾಯಿತ್ತು . ನಿಧನಕ್ಕೆ ಜಿಹ್ವಾವಾಯುವಿಗೂ ನಾಸಿಕಾವಾಯುವಿಗೂ ಸಂಧಿಯಲ್ಲಿ ಕ್ಷಯರಹಿತಮಾದ ಅಕ್ಷರವಾಯುವೇ ಸ್ಥಾನವಾಯಿತ್ತು. ಪೂರ್ವದಲ್ಲಿರ್ಪ ಅನಾಹತಚಕ್ರದಲ್ಲಿ ಪಶ್ಚಿಮದಲ್ಲಿರ್ಪ ಪೃಥ್ವೀಚಕ್ರದ ನಾಲ್ಕುದಳಂಗಳು ಕೂಡಿರ್ಪುದರಿಂ ಅನಾಹತನಲ್ಲಿ ಹನ್ನೆರಡು ದಶಗಳಾದವು. ಅನಾಹತದಲ್ಲಿ ಬೆರೆದ ನಾಲ್ಕು ದಳಂಗಳಾವುವೆಂದರೆ : ಶರೀರರೂಪಮಾದ ಪೂರ್ವಪೃಥ್ವಿಗೂ ಪುತ್ರಾದಿರೂಪಮಾದ ದಕ್ಷಿಣಪೃಥ್ವಿಗೂ ಮಧ್ಯದಲ್ಲಿರ್ಪ ಧನರೂಪಮಾದ ಆಗ್ನೇಯಪೃಥ್ವಿಯೇ ಧರ್ಮಸ್ಥಾನಮಾಯಿತ್ತು. ಪುತ್ರಾದಿದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ ಸಂಧಿಕಾಲಮಾಗಿರ್ಪ ನೈರುತ್ಯಪೃಥ್ವಿಯೇ ಕರ್ಮಸ್ಥಾನಮಾಯಿತ್ತು. ಶೌಚವೇ ಕರ್ಮಕ್ಕೆ ಆದಿಯಾದುದರಿಂದ ಆ ಶರೀರದೊಳಗಿರ್ಪ ಪೃಥ್ವಿಗೂ ಜಿಹ್ವೆಯಲ್ಲಿರ್ಪ ಆಹಾರೋತ್ತರಪೃಥ್ವಿಗೂ ಸಂಧಿಯಲ್ಲಿರ್ಪ ವಾಯವ್ಯಪೃಥ್ವಿಯೇ ಲಯಸ್ಥಾನಮಾಯಿತ್ತು. ಆ ಜಿಹ್ವೆಯಲ್ಲಿರ್ಪ ಪೃಥ್ವಿಗೂ ಶರೀರದಲ್ಲಿರ್ಪ ಪೃಥ್ವಿಗೂ ಸಂಧಿಯಲ್ಲಿರ್ಪ ಅನ್ನರೂಪಮಾದ ಈಶಾನ್ಯಪೃಥ್ವಿಯೇ ವ್ಯಯಸ್ಥಾನಮಾಯಿತ್ತು. ಇಂತು ಭಾವರೂಪಮಾದ ದ್ವಾದಶದಳಗಳುಳ್ಳುದೇ ಅನಾಹತಚಕ್ರವು. ಮಣಿಪೂರಕಚಕ್ರದಲ್ಲಿ ಪೂರ್ವರೂಪಮಾದ ಅಗ್ನಿಯೇ ಸ್ಥಾನವು, ಅದು ಆದಿಯಲ್ಲಿ ಶ್ರೋತ್ರವಿಷಯದಿಂದುತ್ಪನ್ನಮಾಗುತ್ತಿರ್ಪುದರಿಂ ಅದಕ್ಕೆ ಶ್ರೋತ್ರವೇ ಸ್ಥಾನಮಾಯಿತ್ತು. ಗುಹ್ಯೆಯಲ್ಲಿರ್ಪ ಅಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ ಸಂಧಿಯಲ್ಲಿ ಬೀಜಸ್ಥಾನವಾಗಿ ಪ್ರಕಾಶಿಸುತ್ತಿರ್ಪ ಕಾಮರೂಪಮಾದ ಆಗ್ನೇಯಾಗ್ನಿಗೆ ತ್ವಕ್ಕೇ ಸ್ಥಾನಮಾಯಿತ್ತು , ಉದರದಲ್ಲಿರ್ಪ ದಕ್ಷಿಣಾಗ್ನಿಯು ರೂಪಮಾಗಿಹುದು. ದೀಪನವೆಂದರೆ ವಾಂಛೆ, ಅಂತಪ್ಪ ವಾಂಛೆಯು ನೇತ್ರಮೂಲಕಮಾದುದರಿಂದಲೂ ರೂಪಕ್ಕೆ ನೇತ್ರವೇ ಕಾರಣಮಾದುದರಿಂದಲೂ ರೂಪಮಾಗಿರ್ಪ ಆಹಾರದಿಂದಾ ದೀಪನವೇ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಯಾಗಿ ನಾಸಿಕಾಗ್ರದಲ್ಲೇಕಮಾಗಿ ಕೂಡುತ್ತಿರ್ಪುದರಿಂದ ನಾಸಿಕಾಗ್ರದಲ್ಲಿರ್ಪ ಸಮದೃಷ್ಟಿಯು ಸಕಲಯೋಗಕ್ಕೂ ಕಾರಣಮಾಗಿರ್ಪುದರಿಂ ನೇತ್ರಾಗ್ನಿಗೆ ನಾಸಿಕವೇ ಸ್ಥಾನಮಾಯಿತ್ತು. ಪಾಣಿಗೂ ಗುಹ್ಯಕ್ಕೂ ಸಂಧಿಕಾಲಮಾಗಿರ್ಪ ಸ್ವಸ್ತ್ರೀ ವಿವಾಹಸಾಕ್ಷಿಕವಾದ ಈಶಾನ್ಯಹೋಮಾಗ್ನಿಗೂ ಜಾಯಾಪಾದವೇ ಸ್ಥಾನಮಾಯಿತ್ತು. ಲಾಜಾಹೋಮಕಾಲದಲ್ಲಿ ಜಾಯಾಪಾದದಿಂದಗ್ನಿ ಸಿದ್ಧವಾಗುತ್ತಿರ್ಪುದರಿಂ ಆ ಹೋಮಾಗ್ನಿಯನ್ನು ಪಾದದಲ್ಲಿ ತಂದು ಶಿಲೆಯಲ್ಲಿ ಆವಾಹನೆಯಂ ಮಾಡುತ್ತಿರ್ಪುದರಿಂ ಈಶ್ವರರೂಪಮಾದ ಅಗ್ನಿಗೂ ಗಿರಿಜಾರೂಪಮಾದ ಶಿಲೆಗೂ ಆ ಪಾದವೇ ಕಾರಣಮಾಗಿರ್ಪುದರಿಂ ಈಶಾನ್ಯಾಗ್ನಿಗೆ ಪಾದವೇ ಸ್ಥಾನಮಾಯಿತ್ತು . ಈ ಮಣಿಪೂರಕದಶದಳಗಳಲ್ಲಿ ಅಗ್ನಿದಳಗಳೆಂಟು, ಜಲದಳಗಳೆರಡು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಗುಹ್ಯದಳವೇ ಸ್ಥಾನಮಾಯಿತ್ತು, ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಸಂಧಿಯಲ್ಲಿರ್ಪ ಆಗ್ನೇಯಬಿಂದುಜಲಕ್ಕೂ ಗುದವೇ ಸ್ಥಾನಮಾಯಿತ್ತು, ಆ ಬಿಂದುವು ಗುದಸ್ಥಾನದಲ್ಲಿ ನಿಂತು ಗುಹ್ಯಮುಖದಲ್ಲಿ ನಿವೃತ್ತಿಯಾಗುತ್ತಿರ್ಪುದರಿಂ ಆ ಬಿಂದುವಿಗೆ ಗುದವೇ ಸ್ಥಾನಮಾಯಿತ್ತು. ಇಂತಪ್ಪ ದಶದಳಂಗಳುಳ್ಳುದೇ ಮಣಿಪೂರಕ. ಸ್ವಾಧಿಷಾ*ನದಲ್ಲಿ ಯಜನಕ್ಕೆ ಕರ್ಮಾಯಾಸದಿಂದುತ್ಪನ್ನಮಾಗುವ ಪೂರ್ವಜಲವೇ ಸ್ಥಾನಮಾಯಿತ್ತು. ಯಾಜನಕ್ಕೆ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ಮಧ್ಯದಲ್ಲಿರ್ಪ ಜಲವೇ ಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಪಶ್ಚಿಮಜಲವೇ ಅಧ್ಯಯನಸ್ಥಾನಮಾಯಿತ್ತು, ಜಿಹ್ವೆಯಲ್ಲಿರ್ಪ ಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಮಧ್ಯದಲ್ಲಿ ನಾಸಿಕದಲ್ಲಿ ವಾಸನಾಮುಖದಿಂ ದ್ರವಿಸುತ್ತಿರ್ಪ ವಾಯವ್ಯಜಲವೇ ಅಧ್ಯಾಪನಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಆನಂದಜಲವೇ ದಾನಕ್ಕೆ ಸ್ಥಾನಮಾಯಿತ್ತು, ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯೆಯಲ್ಲಿರ್ಪ ಜಲಕ್ಕೂ ಮಧ್ಯದಲ್ಲಿ ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಪ್ರತಿಗ್ರಹಸ್ಥಾನಮಾಯಿತ್ತು. ಇಂತಪ್ಪ ಆರುದಳಂಗಳುಳ್ಳುದೇ ಸ್ವಾಧಿಷಾ*ನಚಕ್ರವು, ಆಧಾರದಲ್ಲಿ ಬ್ರಹ್ಮಚರ್ಯಕ್ಕೆ ತನುವೇ ಸ್ಥಾನಮಾಯಿತ್ತು. ಬ್ರಹ್ಮಚರ್ಯವೆಂದರೆ ಕರ್ಮ. ``ಶರೀರಮಾಧ್ಯಂ ಖಲು ಧರ್ಮಸಾಧನಂ'' ಎಂದಿರುವುದರಿಂದ ಆ ಕರ್ಮಮೂಲವೇ ಶರೀರಮಾದುದರಿಂದದಕ್ಕೆ ದೇಹವೇ ಸ್ಥಾನಮಾಯಿತ್ತು. ಪುತ್ರಾದಿ ದಕ್ಷಿಣಪೃಥ್ವಿಯೇ ಗೃಹಸ್ಥಸ್ಥಾನಮಾಯಿತ್ತು. ಶರೀರದೊಳಗೆ ಮಾಂಸಾದಿಧಾತುರೂಪಮಾಗಿರ್ಪ ಪಶ್ಚಿಮಪೃಥ್ವಿಯೇ ವಾನಪ್ರಸ್ಥಮಾಯಿತ್ತು. ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಯೇ ಪರಿಶುದ್ಧಮಾಗಿ ಶಿವಪ್ರಸಾದಕಾರಣಮಾಗಿರ್ಪುದು. ಜಿಹ್ವೆಯಲ್ಲಿರ್ಪ ಅನ್ನವೇ ದೀಪನಹರಣವೂ ತೃಪ್ತಿಕಾರಣವೂ ಜ್ಞಾನಾನಂದಕಾರಣವೂ ಆಗಿರ್ಪುದು. ಅಂತಪ್ಪ ಅನ್ನವೇ ಕೇವಲ ಸತ್ವಸ್ವರೂಪಮಾಗಿ ರಕ್ಷಣರೂಪಮಾದುದರಿಂದಾ ಸತ್ವವು ಸ್ಥಾನಮಾಗಿರ್ಪುದೇ ಸಂನ್ಯಾಸವು, ಇಂತಪ್ಪ ಚತುರ್ದಳಂಗಳಿಂದೊಪ್ಪುತ್ತಿರ್ಪುದೇ ಆಧಾರಚಕ್ರವು. ಪೃಥ್ವಿಗೆ ಈಶಾನ್ಯರೂಪಮಾಗಿರ್ಪ ಅನ್ನವೇ ಆಧಾರಚಕ್ರದಲ್ಲಿ ಆಚಾರಲಿಂಗಮಾಯಿತ್ತು. ಆ ಅನ್ನವೇ ಪ್ರಾಣಮಾಗಿರ್ಪುದರಿಂ ನಾಸಿಕವನನುಸರಿಸುತ್ತಿರ್ಪುದು. ಜಲಕ್ಕೆ ಈಶಾನ್ಯಮಾಗಿರ್ಪ ದಯಾರಸವೇ ಸ್ವಾಧಿಷಾ*ನದಲ್ಲಿ ಗುರುಲಿಂಗಮಾಯಿತ್ತು. ಅದು ಜಿಹ್ವಾಮುಖದಿಂ ರಕ್ಷಿಸುತ್ತಿರ್ಪುದರಿಂ ಜಿಹ್ವೆಯನನುಸರಿಸುತ್ತಿರ್ಪುದು. ಅಗ್ನಿಗೆ ಈಶಾನ್ಯವಾದ ಹೋಮಾಗ್ನಿಯೇ ಮಣಿಪೂರಕದಲ್ಲಿ ಶಿವಲಿಂಗಮಾಯಿತ್ತು. ಅದು ಯಾವಜ್ಜೀವವೂ ಅಗ್ನಿಗಿಂತಲೂ ಭಿನ್ನಮಾಗದೆ ಪ್ರಕಾಶಿಸುತ್ತಿರುವುದರಿಂ ತೇಜೋಮಯವಾದ ನೇತ್ರವನನುಸರಿಸುತ್ತಿರ್ಪುದು. ವಾಯುವಿಗೆ ಈಶಾನ್ಯರೂಪಮಾದ ಅಕ್ಷರಮಯಮಾದ ಮಂತ್ರವಾಯುವೇ ಅನಾಹತದಲ್ಲಿ ಜಂಗಮಲಿಂಗಮಾಯಿತ್ತು. ಅದು ಕ್ಷಯವಿಲ್ಲದ್ದು ; ಆ ಮಂತ್ರವು ಶರೀರವನ್ನು ಪವಿತ್ರವಂ ಮಾಡಲು, ಶರೀರ ಪೂರ್ವವಾಸನೆಯಳಿದು ಮಂತ್ರಮಯಮಾಗಿರ್ಪುದರಿಂ ತ್ವಕ್ಕನ್ನನುಸರಿಸಿರ್ಪುದು. ಆಕಾಶಕ್ಕೆ ಈಶಾನ್ಯಮಾದ ಉಪದೇಶಾಕಾಶವೇ ವಿಶುದ್ಧದಲ್ಲಿ ಪ್ರಸಾದಲಿಂಗಮಾಯಿತ್ತು. ಅದು ಪರತತ್ವಮಯಮಾಗಿರ್ಪುದರಿಂ ಶ್ರೋತ್ರವನನುಸರಿಸಿರ್ಪುದು. ಆತ್ಮನಿಗೆ ಈಶಾನ್ಯದಲ್ಲಿರ್ಪ ಶಿವಜ್ಞಾನವೇ ಆಗ್ನೇಯದಲ್ಲಿ ಮಹಾಲಿಂಗಮಾಯಿತ್ತು . ಅದು ಮನದೊಳ್ಕೂಡಿ ಪಂಚೇಂದ್ರಿಯಂಗಳಿಗೂ ಮನಸ್ಸೇ ಚೈತನ್ಯಮಾಗಿರ್ಪಂತೆ, ಪಂಚಲಿಂಗಂಗಳಿಗೆ ತಾನೇ ಚೈತನ್ಯಮಾಗಿ ದೃಷ್ಟವಶದಿಂದುದಿಸಿದ ಕಾರಣ ಆ ದೃಷ್ಟಕಾರಣಮಾದ ಲಲಾಟವನನುಸರಿಸಿರ್ಪುದು. ಆ ಶಿವಜ್ಞಾನದಿಂ ಗುರುಮುಖದಿಂದುದಿಸಿದ ಕರ್ಮಯೋಗ್ಯಮಾದುದೇ ಇಷ್ಟಲಿಂಗವು. ಆತ್ಮತೇಜಸ್ಸನ್ನೇ ಬಹಿಷ್ಕರಿಸಿ ಹೋಮಾಗ್ನಿಯಂ ಪ್ರಬಲವಂ ಮಾಡಿ ಇಷ್ಟಲಿಂಗಪ್ರಸಾದಸಾಮಗ್ರಿಯನಾಹುತಿಗೊಟ್ಟು, ಆ ತೇಜಸ್ಸನ್ನಾತ್ಮಸಮಾರೋಪಣೆಯಂ ಮಾಡಿ, ತದ್ಯಜನಶೇಷಮಾಗಿರ್ಪ ರುಚಿಮಯದಿವ್ಯತೇಜಸ್ಸೇ ಶಿವಧ್ಯಾನರೂಪಮಾದ ಪ್ರಾಣಲಿಂಗಾನುಭವವು. ಆ ಶಿವಧ್ಯಾನದಿಂದ ಗುರೂಪದೇಶಸಿದ್ಧಮಾಗಿರ್ಪ ಮಹಪ್ರಕಾಶವೇ ಪ್ರಾಣಲಿಂಗವು. ತೃಪ್ತಿರೂಪಮಾದ ತತ್ವಾನುಭಾವವೇ ನಿಜಾನುಭವಮಾಗಿರ್ಪುದೇ ಭಾವಲಿಂಗವು. ಗುರುದತ್ತವಾದಿಷ್ಟಲಿಂಗದಿಂ ಶರೀರವು ಪೂತಮಾಗಿ, ಜಂಗಮದತ್ತ ಶಿವಧ್ಯಾನತೇಜಸ್ಸಿನಿಂ ಪ್ರಾಣವು ಪವಿತ್ರಮಾಗಿ ಮಹಾಚಿದ್ರೂಪಮಾದ ಶಿವಜ್ಞಾನನಿಮಿತ್ತಸಿದ್ಧಿಯಿಂ ಭಾವವು ಪರಿಶುದ್ಧಮಾಗಿ, ಆ ಶರೀರವೇ ಇಷ್ಟಲಿಂಗಕರಣಮಾಗಿಯೂ ಪ್ರಾಣವೇ ಧ್ಯಾನಕರಣಮಾಗಿಯೂ ಭಾವವೇ ಸಿದ್ಧೀಕರಣಮಾಗಿಯೂ ಆ ಕರಣಂಗಳ್ಗೆ ಶಕ್ತಿಯಾಗಿಯೂ ಇರ್ಪುದರಿಂದಾ ಲಿಂಗವೇ ಪತಿ ತಾನೇ ಸತಿಯಾಗಿರ್ಪುದರಿಂದೆರಡರಸಂಗವೇ ಪರಮಾನಂದಮಯಮಾಗಿರ್ಪುದೇ ಪರಿಣಾಮವು. ಅಂತಪ್ಪ ಲಿಂಗಸಂಗಪರಮಾನಂದರಸದಿಂ ಪರವಶನಾಗುವಂತೆನ್ನಂ ಮಾಡಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಗೆ ಮೈಯೆಲ್ಲಾ ಯೋನಿ, ಜಲಕ್ಕೆ ಶರೀರವೆಲ್ಲಾ ಕಾಲು, ಅಗ್ನಿಗೆ ಶರೀರವೆಲ್ಲಾ ಬಾಯಿ, ವಾಯುವಿಗೆ ತನುವೆಲ್ಲಾ ಮೂಗು, ಆಕಾಶಕ್ಕೆ ಕಾಯವೆಲ್ಲಾ ಹೊಟ್ಟೆ, ಆತ್ಮನಿಗೆ ಮೈಯೆಲ್ಲಾ ಕಣ್ಣು, ಪೃಥ್ವಿಗೆ ಘ್ರಾಣವೇ ಇಂದ್ರಿಯ, ಗಂಧವೇ ವಿಷಯ. ಜಲಕ್ಕೆ ಜಿಹ್ವೆಯೇ ಇಂದ್ರಿಯ, ರುಚಿಯೇ ವಿಷಯ. ಅಗ್ನಿಗೆ ನೇತ್ರವೇ ಇಂದ್ರಿಯ, ರೂಪೇ ವಿಷಯ. ವಾಯುವಿಗೆ ತ್ವಕ್ಕೇ ಇಂದ್ರಿಯ, ಸ್ಪರ್ಶನವೇ ವಿಷಯ. ಆಕಾಶಕ್ಕೆ ಶ್ರೋತ್ರವೇ ಇಂದ್ರಿಯ, ಶಬ್ದವೇ ವಿಷಯ. ಆತ್ಮನಿಗೆ ಮನಸ್ಸೇ ಇಂದ್ರಿಯ, ಭಾವವೇ ವಿಷಯ. ಪೃಥ್ವಿಯಲ್ಲಿರ್ಪ ಗಂಧಕ್ಕೆ ಘ್ರಾಣೇಂದ್ರಿಯವೇ ಕಾರಣಮಾಯಿತ್ತು. ಜಲದೊಳಗಿರ್ಪ ರುಚಿಗೆ ಜಿಹ್ವೇಂದ್ರಿಯದಲ್ಲಿರ್ಪ ಅಗ್ನಿಯೇ ಕಾರಣಮಾಯಿತ್ತು ಅಗ್ನಿಯಲ್ಲಿರ್ಪ ರೂಪಿಗೆ ನೇತ್ರೇಂದ್ರಿಯದಲ್ಲಿರ್ಪ ಜಲಮೆ ಕಾರಣಮಾಯಿತ್ತು. ವಾಯುವಿನೊಳಗಿರ್ಪ ಸ್ಪರುಶನಕ್ಕೆ ತ್ವಗೀಂದ್ರಿಯದಲ್ಲಿರ್ಪ ಪೃಥ್ವಿಯೇ ಕಾರಣಮಾಯಿತ್ತು. ಆಕಾಶದಲ್ಲಿರ್ಪ ಶಬ್ದಕ್ಕೆ ಶ್ರೋತ್ರೇಂದ್ರಿಯದಲ್ಲಿರ್ಪ ಆತ್ಮನೇ ಕಾರಣಮಾಯಿತ್ತು. ಆತ್ಮನಲ್ಲಿರ್ಪ ಭಾವಕ್ಕೆ ಹೃದಯೇಂದ್ರಿಯದಲ್ಲಿರ್ಪ ಆಕಾಶಮೇ ಕಾರಣಮಾಯಿತ್ತು. ಇಂತಪ್ಪ ಭಾವದಲ್ಲಿ ಜ್ಞಾನಶಕ್ತಿ ಹುಟ್ಟಲು, ಮನವೇ ಮಹಾಲಿಂಗವಾಯಿತ್ತು. ಶಬ್ದದಲ್ಲಿ ಪರಾಶಕ್ತಿ ಹುಟ್ಟಲು, ಶ್ರೋತ್ರವೇ ಪ್ರಸಾದಲಿಂಗಮಾಯಿತ್ತು. ಸ್ಪರ್ಶನದಲ್ಲಿ ಆದಿಶಕ್ತಿ ಹುಟ್ಟಲು, ಘ್ರಾಣವೇ ಆಚಾರಲಿಂಗಮಾಯಿತ್ತು. ಗ್ರಹಿಸುವುದೇ ಜ್ಞಾನೇಂದ್ರಿಯಮಾಯಿತ್ತು ; ಬಿಡುವುದೇ ಕರ್ಮೇಂದ್ರಿಯಮಾಯಿತ್ತು. ಇಂತಪ್ಪ ಇಂದ್ರಿಯಂಗಳೆಲ್ಲಾ ಲಿಂಗಸ್ವರೂಪಗಳಾಗಿ, ವಿಷಯಂಗಳೇ ಶಕ್ತಿಸ್ವರೂಪಮಾದ ಮಹಾಪುರುಷನಸ್ವರೂಪಿನಲ್ಲಿ ಇಷ್ಟಲಿಂಗವು ನೆಲೆಗೊಂಡಲ್ಲಿ, ಆ ಲಿಂಗದ ಮೋಹವೇ ಪ್ರಾಣಲಿಂಗಮಾಯಿತ್ತು, ಆ ಲಿಂಗದ ವಿಚಾರವೇ ಭಾವಲಿಂಗಮಾಯಿತ್ತು. ಭೂತಂಗಳೇ ಲಿಂಗಕ್ಕೆ ಅಂತರಂಗಂಗಳಾದವು. ಅಲ್ಲಲ್ಲಿರ್ಪ ಲಿಂಗಂಗಳೇ ಭೂತಂಗಳಿಗೆ ಚೈತನ್ಯಮಾದ ಪ್ರಾಣಂಗಳಾಗಿ, ಆ ಲಿಂಗಂಗಳೇ ಶರಣನಂಗಂಗಳಾಗಿ, ಲಿಂಗಂಗಳೇ ಶಿವನಾಗಿ, ಶರಣನೇ ಸತಿ ಲಿಂಗವೇ ಪತಿಯಾಗಿ, ಇಬ್ಬರ ಸಮರಸಭಾವವೇ ಪರಮಾನಂದರತಿಸುಖಮಾಗಿ, ಆ ಸುಖದಲ್ಲಿ ಎರಡಂ ಏಕಮಾಗಿ ಭೇದದೋರದೆ ನಿಶ್ಶಬ್ದಬ್ರಹ್ಮವಾಗಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಯಪ್ಪುಗಳಿಂದ ಸ್ಥೂಲ ಶರೀರವು, ಅಗ್ನಿವಾಯುಗಳಿಂದ ಸೂಕ್ಷ್ಮಶರೀರವು, ಆಕಾಶಾತ್ಮಗಳಿಂದ ಕಾರಣಶರೀರವು. ಸ್ಥೂಲಶರೀರದಲ್ಲಿ ಜೀವನು ವಾಯುರೂಪಿಯಾಗಿಹನು, ಸೂಕ್ಷ್ಮಶರೀರದಲ್ಲಾಕಾಶರೂಪಾಗಿಹನು, ಕಾರಣಶರೀರದಲ್ಲಿ ಸ್ವಯಂಪ್ರಕಾಶಮಾಗಿಹನು. ಸ್ಥೂಲಶರೀರವು ಪೂರ್ವಮುಖಮಾಗಿ, ಸ್ವಲ್ಪಕಾಲ ಸ್ವಲ್ಪಸುಖ ಸ್ವಲ್ಪದುಃಖಗಳನನುಭವಿಸುತ್ತಿಹುದು. ಕಾರಣಶರೀರವು ಪಶ್ಚಿಮಮುಖವಾಗಿ ಸುಖದುಃಖಕಾಲಂಗಳಿಲ್ಲದೆ ನಿಜಸುಖನನುಭವಿಸುತ್ತಿಹುದು. ಸ್ಥೂಲಶರೀರವು ಕ್ರಿಯಾಜನ್ಯವಾದುದು, ಸೂಕ್ಷ್ಮಶರೀರವು ಕರ್ಮಜನ್ಯವಾದುದು. ಕಾರಣಶರೀರವು ಜ್ಞಾನಜನ್ಯವಾದುದು. ಅಂತಪ್ಪ ಕ್ರಿಯಾಜನ್ಯವೇ ಕರ್ಮ, ಕರ್ಮಜನ್ಯವೇ ಜ್ಞಾನ. ಇಂತು ನಾಲ್ಕು ದಿಕ್ಕುಗಳಲ್ಲಿ ನಾಲ್ಕುಬಗೆಯಾಗಿರ್ಪ ನನ್ನ ಸ್ಥೂಲಸೂಕ್ಷ್ಮಕಾರಣಂಗಳ ನಡುವೆ ಪ್ರಕಾಶಿಸುತ್ತಿರ್ಪ ಮಹಾಲಿಂಗವೇ ನೀನು. ನಾನು ಸುತ್ತಿ ಬಪ್ಪ ತಾವೆಲ್ಲವಂ ನೀನು ಇತ್ತಿಲೆ ತೋರುತಿರ್ಪ. ಒತ್ತಲಿರ್ಪ ನಿನ್ನ ಕಾಣದೆ ಸುತ್ತಿ ಬಳಲುತ್ತಿರ್ಪ ಕೋಟಲೆಗಲಸಿ, ಗುರುವೇ ನಿನ್ನ ಕರುಣದಿಂ ಪಶ್ಚಿಮಭಾಗವಂ ಸೇರಿ ನೋಡಿದಲ್ಲಿ, ಕರತಲಾಮಲಕದಂತೆ ನೀನು ನನಗೆ ಪ್ರಸನ್ನನಾದೆಯಯ್ಯಾ. ನಿನ್ನ ದಿವ್ಯ ಮಂಗಲಮೂರ್ತಿಯನು ಕರ್ಮರಹಿತ ಜ್ಞಾನದೃಷ್ಟಿಯಿಂ ನೋಡಿ ನೋಡಿ, ನಿಜಸುಖದೊಳೋಲಾಡಿಯಾಡಿ, ನಿನ್ನ ಸಮರಸುಖಾನಂದದೊಳು ಬೆರೆದು ಮರದಿರ್ಪುದೇ ನಿರ್ವಾಣವು. ಅಂತಪ್ಪ ಕೈವಲ್ಯಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಯು ಜಲದಿಂದಲೇ ಪೂತಮಾಗಿ, ಅದರಿಂದಲೇ ಪೆರ್ಚಿ, ಅದರಿಂದಲೇ ಲಯವಂ ಹೊಂದುವುದು. ಅಗ್ನಿಯು ವಾಯುವಿನಿಂದಲೇ ಶುಚಿಯಾಗಿ, ಅದರಿಂದಲೇ ಪೆರ್ಚಿ, ಅದರಿಂದಲೇ ಲಯವಂ ಹೊಂದುವುದು. ಆಕಾಶವು ಆತ್ಮನಿಂದಲೇ ಶುದ್ಧಮಾಗಿ, ಅದರಿಂದಲೇ ಪೆರ್ಚಿ, ಅದರಿಂದಲೇ ಲಯವಂ ಹೊಂದುವುದು. ಆಕಾಶರೂಪಮಾದ ಸಕಲಗುಣಂಗಳು ಆತ್ಮನಿಂದಲೇ ಪೆರ್ಚಿ, ಆತ್ಮನಿಂದಲೇ ಪವಿತ್ರಮಾಗಿ, ಆತ್ಮನಿಂದಲೇ ಲಯವಂ ಹೊಂದುವಲ್ಲಿ; ಪೃಥ್ವಿಯು ಲಯಮಪ್ಪನಲ್ಲಿ ಕರ್ಮವು ನಷ್ಟವಪ್ಪಂತೆ, ಅಂತಪ್ಪ ಪೃಥ್ವಿನಷ್ಟವೇ ಬ್ರಹ್ಮನ ಲಯವು, ಅಗ್ನಿನಷ್ಟವೇ ರುದ್ರನ ಲಯವು, ಆಕಾಶನಷ್ಟವೇ ವಿಷ್ಣುವಿನ ಲಯವು, ಅಂತಪ್ಪ ವಿಷ್ಣುವಿನ ಮಾಯೆಯನಳಿದ ನಿರ್ಮಲಾತ್ಮನೇ ಮಹಾಲಿಂಗವು, ಅಂತಪ್ಪ ಮಹಾಲಿಂಗದಲ್ಲಿ ಜೀವಮೂಲ ದೇಹಮೂಲಗಳಾಗಿರ್ಪ ಜಲವಾಯುಗಳ ಸುಳುವಡಗಿ, ನಾಹಂಭ್ರಮೆಯಡುಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪಂಚಭೂತಂಗಳಂ ಮೀರಿರ್ಪಆತ್ಮರಾರೆಂದು ತಿಳಿವುದೆಂತೆಂದೊಡೆ: ಸಾಮ್ಯವಸ್ತುವಿನಿಂದ ಗೋಚರಮಲ್ಲಮಾಗಿ ತನ್ನಲ್ಲಿ ತಾನೇ ತಿಳಿಯಬೇಕು. ಧೈರ್ಯವಂ ತಾಳಿ, ವೈರಾಗ್ಯವೆಂಬ ಖಡ್ಗವಂ ಪಿಡಿದು, ಆ ಸೂಕ್ಷ್ಮ ಮಾರ್ಗದಲ್ಲಿ ನಿಶ್ಶಂಕೆಯಿಂ ತಾನೊಬ್ಬನೇ ಪ್ರವೇಶಿಸಿ, ಭಾವವೆಂಬ ಮಹಾಬಯಲೊಳಗೆ ಗಮಿಸುತ್ತಾ, ಮಿಥ್ಯಾಪ್ರಪಂಚನಡಗಿಸಿ, ನಿಜವಂ ಹೊಂದಿ, ತತ್ವಾಮೃತವಂ ಪೀರಿ, ನಲಿವುತ್ತಿರ್ಪ ಪ್ರಮಥಗಣಂಗಳಂ ನೋಡಿ ಪಾಡಿ ಮಣಿದು ಕುಣಿದು ತತ್ಪ್ರಸಾದಾಮೃತವಂ ಸವಿದು, ಮಹಾತೃಪ್ತಿಸ್ಥಾನದಲ್ಲಿ ಸ್ವಪ್ನದಲ್ಲಿ ತಾನು ಪಟ್ಟ ಭ್ರಮೆಯು ಜಾಗ್ರದಲ್ಲಿ ತನಗೆ ಅಪಹಾಸ್ಯಮಪ್ಪಂತೆ, ತನ್ನಲ್ಲಿ ತಾನೇ ಲಯಿಸುತ್ತಾ, ಮಹಾಲಿಂಗವೇ ನಾನಾಗಿರ್ಪ ಸುಖವಂ ಕಾಲವಿಳಂಬವನೆಸಗದೆ ನನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೂರ್ವ ದಕ್ಷಿಣೋತ್ತರದ ಪಶ್ಚಿಮದೇಶಗಳೊಳು ಆ ಪಶ್ಚಿಮವೇ ಪ್ರಮಥಲೋಕ ; ಅಲ್ಲಿರ್ಪರೆಲ್ಲಾ ತುರ್ಯಾವಸ್ಥೆಯಲ್ಲಿರ್ಪ ಶಿವಶರಣರು. ಮುಂದೆ ಮೂರುದಿಕ್ಕುಗಳು ಸ್ವರ್ಗ ಮತ್ರ್ಯ ಪಾತಾಳ ಸತ್ವರಜಸ್ತಮೋರೂಪಗಳಾದ ಜಾಗ್ರತ್ಸ್ವಪ್ನ ಸುಷುಪ್ತಿಗಳೊಳಗೆ ಕೂಡಿಹವು. ಅದಕ್ಕೆ ಬ್ರಹ್ಮ ವಿಷ್ಣು ರುದ್ರಾದಿಗಳಾಗಿ, ಸೃಷ್ಟಿ ಸ್ಥಿತಿ ಸಂಹಾರಗಳಂ ಮಾಡುತ್ತಿಹರು. ಪೂರ್ವದಿಗ್ಭರಿತಮಾದ ಮತ್ರ್ಯದಲ್ಲಿಪ್ಪ ಶರೀರಕ್ಕೆ ಜೀವನು ವಾಯುವ್ಯದಲ್ಲಿ ವಾಯುರೂಪಾಗಿಹನು, ನೈರುತ್ಯದಲ್ಲಿ ಪಿಶಾಚರೂಪಮಾಗಿಹನು, ಆಗ್ನೇಯದಲ್ಲಿ ತೇಜೋರೂಪಮಾಗಿಹನು. ಪ್ರಮಥರಿಗೆ ಪ್ರಾಣವೇ ಶಿವನಾದುದರಿಂದ, ಶಿವಭಕ್ತರಿಗೆ ಲಿಂಗವೇ ಪ್ರಾಣವಾಯಿತ್ತು. ಅಂತಪ್ಪ ಈಶ್ವರಸ್ವರೂಪಮಾದ ಲಿಂಗವೇ ಇಷ್ಟ, ಮಧ್ಯದಲ್ಲಿ ತೋರುತ್ತಿರ್ಪ ಸದಾಶಿವನೇ ಪ್ರಾಣ, ಊಧ್ರ್ವದಲ್ಲಿರ್ಪ ತೂರ್ಯಾತೀತ ಪರಮತೃಪ್ತಿಸ್ವರೂಪಮಾದ ಉಪಮಾತೀತನೇ ಭಾವ. ಕೇವಲನಿಷ್ಕಲಸ್ವರೂಪಮಾದ ಉಪಮಾತೀತಭಾವವು ಸಕಲನಿಷ್ಕಲಮಾದಸ್ವರೂಪಮಾದ ರುಚ್ಯನುಭವದಿಂ ಭೋಗಲಿಂಗಮಾಗಲು, ಹೃದಯದಲ್ಲಿರ್ಪ ಸದಾಶಿವನೇ ಪ್ರಾಣ, ಸಕಲತತ್ವರೂಪಮಾಗಿ ರೂಪಾನುಭವಕಾರಣಮಾಗಿ ಈಶಾನ್ಯದಿಕ್ಕಿನಲ್ಲಿ ತೋರ್ಪ ಉತ್ತರಾಗ್ರಸ್ಥಿತಮಾದ ಸಾಕಾರಮೂರ್ತಿಯೇ ಇಷ್ಟ. ಇಂತೀ ಇಷ್ಟಲಿಂಗದ ಕ್ರಿಯಾಪೂಜೆಯಿಂ ಮತ್ರ್ಯದಲ್ಲಿ ಸೃಷ್ಟಿಹೇತುವಾದ ರುದ್ರನಂ ಜಯಿಸಿ, ಸೃಷ್ಟಿ ಸ್ಥಿತಿ ಸಂಹಾರಕೋಟಲೆಯಂ ಕಳೆದು, ತೂರ್ಯಾವಸ್ಥೆಯಲ್ಲಿ ಇಷ್ಟರೂಪಮಾಗಿ ಪ್ರಸನ್ನನಾದ ನಿನ್ನಂ ನೋಡಿ, ಮೋಹಿಸಿ, ತೂರ್ಯಾತೀತದಲ್ಲಿ ಪ್ರಾಣಲಿಂಗಮಾಗಿರ್ಪ ನಿನ್ನೊಳಗೆ ನಾನು ಕೂಡಿ, ಭೋಗಿಸಿ, ಭಾವಲಿಂಗಮಾಗಿರ್ಪ ನೀನೇ ನಿಜಸುಖವನಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ