ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸತ್ಯವೇ ಪರಮನು, ಜ್ಞಾನನವೇ ಜೀವನು, ಆನಂದವೇ ಶರೀರವು. ಅದೆಂತೆಂದೊಡೆ: ಶರೀರಾದಿ ಸಕಲಪ್ರಪಂಚಕ್ಕೂ ಜ್ಞಾನವೇ ಮೂಲವಾಗಿರ್ಪುದು. ಆನಂದಮುಖದೊಳ್ ಬಿಂದು ಜನಿಸಿ, ಆ ಬಿಂದುವೇ ಪೃಥ್ವೀರೂಪದಲ್ಲಿ ಘನೀಭವಿಸಿ, ಪಿಂಡಾಕಾರಮಾಗಿ ಶರೀರಮಪ್ಪಂತೆ, ಜ್ಞಾನಮುಖದಲ್ಲಿ ವಾಯುವು ಜನಿಸಿ, ತೇಜೋರೂಪದಲ್ಲಿ ಘನೀಭವಿಸಿ, ಜೀವನಾರ್ಪುದು. ನಿಜದಲ್ಲಾತ್ಮನು ಜನಿಸಿ, ಆಕಾಶರೂಪದಲ್ಲಿ ಘನೀಭವಿಸಿ ಪರಮನಾಗಿರ್ಪನು. ಆನಂದಬಿಂದುಮುಖದಿಂದ ಅಹಂಕಾರವು ಜನಿಸಿ, ಜ್ಞಾನವಾಯುಗಳ ಸಂಗದಿಂ ಮನವು ಪುಟ್ಟಿತ್ತು. ನಿಜಾತ್ಮಗಳ ಸಂಗದಿಂ ಭಾವವು ಹುಟ್ಟಿತ್ತು. ತತ್ಸಾಧ್ಯಕ್ಕವೇ ಸಾಧನಗಳಾಗಿರ್ಪುದರಿಂ ಇವೇ ಕರಣಂಗಳಾಗಿ, ಅವೇ ಕರಣಂಗಳಾಗಿರ್ಪವು. ಪೃಥ್ವವೀಬೀಜಗಳಸಂಗದಿಂದ ಬೀಜಮಧ್ಯದಲ್ಲಿ ವೃಕ್ಷವು ಜನಿಸಿತ್ತು. ವೃಕ್ಷವು ಬಲಿದಲ್ಲಿ ಬೀಜವು ನಷ್ಟಮಾಗಿ, ತದಗ್ರದಲ್ಲಿರ್ಪ ಫಲಮಧ್ಯದಲ್ಲಿ ಅನೇಕಮುಖಮಾಗಿ ತೋರುತ್ತರ್ಪಂತೆ, ಜ್ಞಾನವಾಯುಗಳಸಂಗದಿಂ ಜ್ಞಾನಮಧ್ಯದಲ್ಲಿ ಮನಸ್ಸು ಹುಟ್ಟಿ, ಅದು ಬಲಿದಲ್ಲಿ. ಆ ಮೂಲಜ್ಞಾನವಳಿದು, ತತ್ಫಲರೂಪಮಾದ ಇಂದ್ರಿಯಮಧ್ಯದಲ್ಲಿ ತೋರುತ್ತಿರ್ಪುದು. ಜಲವು ಆ ಬೀಜವಂ ಭೇದಿಸಿ, ತನ್ಮಧ್ಯದಲ್ಲಿ ವೃಕ್ಷವಂ ನಿರ್ಮಿಸುವಂತೆ, ಮನಸ್ಸೇ ಜಾಗ್ರತ್ಸ್ವರೂಪದಲ್ಲಿ ಜ್ಞಾನಬ್ಥಿನ್ನವಂ ಮಾಡಿ, ತನ್ಮಧ್ಯದಲ್ಲಾನಂದವಂ ನಿರ್ಮಿಸುತ್ತಿರ್ಪುದು. ಆನಂದವೂ ನಿರಾಕಾರವೂ ಬಿಂದುವು ಸಾಕಾರವೂ ಆದುದರಿಂದ ಆನಂದವಂ ಬಿಂದುವು ಬಂದ್ಥಿಸಿರ್ಪಂತೆ, ವಾಯುವು ಜ್ಞಾನವಂ ಬಂದ್ಥಿಸಿರ್ಪುದು. ಆನಂದವು ಜ್ಞಾನದೊಳ್ಬೆರೆದಲ್ಲಿ ಶರೀರವು ಜೀವನಳೈಕ್ಯಮಾಯಿತ್ತು. ಆ ಜ್ಞಾನವು ನಿಜದೊಳ್ಬೆರೆದಲ್ಲಿಜೀವನು ಪರಮನೊಳೈಕ್ಯಮಾಯಿತ್ತು. ನಿಜಾನಂದ ಶಿವಶಕ್ತಿಗಳೇಕಮಾದಲ್ಲಿ ಜ್ಞಾನವದೊರಲಗೆ ಬೆರೆದು, ಭೇದವಡಗಿ ಅವರೆಡರ ಸಂಯೋಗ ವಿಯೋಗಕ್ಕೆ ತಾನೇ ಕಾರಣಮಾಗಿ, ನಿಜಾನಂದವೇ ತೋರುತ್ತಾ, ತಾನೊಪ್ಪುತ್ತಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸೂಕ್ಷ್ಮದಿಂದಲೇ ಸ್ಥೂಲಮಂದಿಸಿ, ಆ ಸೂಕ್ಷ್ಮವು ಕಾಣಿಸದೇ ಸ್ಥೂಲವು ಕಾಣಿಸುತ್ತಿರ್ಪುದು. ಸ್ಥೂಲಶರೀರಯಾತನೇ ಬಿಡಿಸಿದಲ್ಲಿ, ಆ ಸ್ಥೂಲಮಂ ಬಿಟ್ಟು ಸೂಕ್ಷ್ಮ ಗೋಚರಮಾಗಿರ್ಪ ಲಯಂ ತಾನೇ ಗೋಚರಮಾಗಿ, ತಾನೇ ಪುನಃಸೃಷ್ಟಿಕಾರಣಮಾಗಿರ್ಪುದೆಂತೆಂದೊಡೆ: ಬೀಜದಿಂದಲೇ ಪೈರು ಪುಟ್ಟಿ, ಆ ಬೀಜಂ ಕಾಣಿಸದೆ ಪೈರೇ ಕಾಣಿಸಿ, ಆ ಪೈರಂ ಕೊಯ್ದು ತುಳಿದು ಒಕ್ಕಿದಲ್ಲಿ, ಆ ಪಯರಂ ಬಿಟ್ಟು, ಬೀಜವು ಪ್ರತ್ಯಕ್ಷಮಾಗಿ, ಫಲಯಾತೆನಗೊಳಗಾಗಿ, ಪುನಸ್ಸøಷ್ಟಿಕಾರಣಮಾಗಿರ್ಪಂದದಿ, ಸ್ಥೂಲದೊಳಗೆ ಸೂಕ್ಷ್ಮವು, ಸೂಕ್ಷ್ಮದೊಳಗೆ ಸ್ಥೂಲವೂ ಅಡಗಿ, ಬಂದು ಕಾಣಿಸಲೊಂದು ಕಾಣಿಸದಿರ್ಪ ಈ ದಂದುಗವಂ ಬಿಡಿಸಿ, ಸಲಹುವೆಯೋ ಎಂಬೀ ಸಂದೇಹದಿಂ ಹಿಂದುಮುಂದು ತಿಳಿಯದೆ ಮಂದಮತಿಯಾಗಿರ್ಪೆನ್ನ ಬಂಧನವಂ ಬಿಡಿಸಿ, ನಿನ್ನಡಿಕೆಂದಾವರೆಯೊಳು ಸಂಬಂಧಿಸುವುದೆಂದಿಗೆ ಹೇಳಾ, ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸೃಷ್ಟಿಹೇತುವಾದ ಸಂಸಾರವೇ ಪೃಥ್ವಿಯು, ತದ್ರಕ್ಷಣಹೇತುವಾದುದೇ ಜಲವು, ಇವೆರಡನ್ನೂ ಸಂಬಂಧಿಸಿ, ಏಕಮಾಗಿ ಘನೀಭವಿಸುವಂತೆ ಮಾಡಿ, ತತ್ಸಂಹಾರಕ್ಕೆ ತಾನೇ ಕಾರಣಮಾಗಿರ್ಪ ಮನಸ್ಸೇ ಅಗ್ನಿಯು. ಆ ಮನಸ್ಸನ್ನು ಪ್ರಕಾಶಗೊಳಿಸಿ ಅದರೊಳಗೆ ಕೂಡಿ ಅಭೇದಮಾಗಿರ್ಪ ಜೀವನೇ ವಾಯುವು, ಅಗ್ನಿಯು ಪೃಥ್ವಿಯೊಳಗೆ ಬದ್ಧಮಾಗಿರ್ಪಂತೆ, ಮನವು ಸಂಸಾರಬದ್ಧಮಾಗಿರ್ಪುದು. ವಾಯುವು ಜಲದೊಳಗೆ ಬದ್ಧಮಾಗಿರ್ಪಂತೆ, ಜೀವನು ಶರೀರದಲ್ಲಿ ಬದ್ಧಮಾಗಿರ್ಪನು. ಜೀವನು ತಾನು ಸಂಸಾರದೊಳ್ಕೂಡಿ ಸ್ಥೂಲವಾಗಿಯೂ ಮನದೊಳ್ಕೊಡಿ ಸೂಕ್ಷ್ಮವಾಗಿಯೂ ಇರ್ಪನು. ಸಂಸಾರ ಶರೀರ ಮನೋಜೀವಗಳಿಗಾಧಾರಮಾಗಿರ್ಪ ಕರ್ಮವೇ ಆಕಾಶವು, ಆ ಕರ್ಮವನಾವರಿಸಿರ್ಪ ಮಹಾಮೋಹವೆಂಬ ಸುಷುಪ್ತಿಯ ಒಳಹೊರಗೆ ಪ್ರಕಾಶಿಸುತ್ತಿರ್ಪ ಜಾಗ್ರತ್ಸ್ವಪ್ನಜ್ಞಾನಂಗಳೇ ಚಂದ್ರಸೂರ್ಯರು. ಮನಸ್ಸೆಂಬ ಅಗ್ನಿಯು ಜೀವಾನಿಲನಿಂ ಪಟುವಾಗಿ ಸಂಸಾರಶರೀರಂಗಳಂ ಕೆಡಿಸಿ, ಕರ್ಮವೆಂಬಾಕಾಶದೊಳಗೆ ಜೀವಾನಿಲನಿಂ ಕೂಡಿ ಧೂಮರೂಪಮಾಗಿ ಶರೀರಸಂಸಾರಗಳೆಂಬ ಮೇಘÀಜಲವರ್ಷವಂ ನಿರ್ಮಿಸಿ, ಜೀವನಿಗವಕಾಶವಂ ಮಾಡಿಕೊಟ್ಟು, ತಾನಲ್ಲಿಯೇ ಬದ್ಧನಾಗಿ, ಜೀವನಿಂದ ಪ್ರಕಾಶಮಾಗುತ್ತಿರ್ಪುದು. ಇಂತಪ್ಪ ಕರ್ಮವೆಂಬಾಕಾಶಕ್ಕೆ ಜೀವನೆಂಬ ವಾಯುವೇ ಕಾರಣವು. ಇವು ಒಂದಕ್ಕೊಂದು ಕಾರಣಮಾಗಿ, ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ ತೋರುತ್ತಾ ಅಡಗುತ್ತಾ ಬಳಲುತ್ತಾ ತೊಳಲುತ್ತಿರ್ಪ ಭವರೋಗದಲ್ಲಿ ಜೂಗುತ್ತಿರ್ಪ ಬಂಧನದ ಈ ದಂದುಗವಿನ್ನೆಂದಿಗೆ ಪೋಪುದು ಎಂದು ಮುಂದುಗಾಣದೆ ಇರ್ಪೆನ್ನ ತಾಪವಂ ನೀಂ ದಯೆಯಿಂ ತಣ್ಣನೆ ಮಾಳ್ಪೊಡೆ, ಸತ್ಯಜ್ಞಾನಾನಂದಮೂರ್ತಿಯಾದ ಪರಮಾತ್ಮನೇ ಗುರು ಲಿಂಗ ಜಂಗಮ ಸ್ವರೂಪಿಯಾಗಿ, ಜ್ಞಾನದಿಂದ ನಿಜವೂ ನಿಜದಿಂದಾನಂದವೂ ಪ್ರಕಾಶಮಾಗಿರ್ಪಂತೆ, ಗುರುವಿನಿಂದ ಲಿಂಗವಂ ಲಿಂಗದಿಂದ ಜಂಗಮವಂ ಕಂಡೆನು. ಅಂತಪ್ಪಾ ನಿಜಾತ್ಮಲಿಂಗವನು ಕರ್ಮವೆಂಬ ಆಕಾಶದಲ್ಲಿ ಬೆರೆಸಲು, ಅದೇ ಕಾರಣಮಾಯಿತ್ತು. ಆ ಕರ್ಮವೆಂಬ ಶಕ್ತಿಯು ಲಿಂಗವೆಂಬ ಶಿವನೊಳಗೆ ಕೂಡಲು, ಲಿಂಗತೇಜಸ್ಸಿನಿಂ ಕರ್ಮಗರ್ಭದಲ್ಲಿ ಜೀವನಿಗೆ ಪುನರ್ಭವಮಾದುದರಿಂದ ಪ್ರಾಣಲಿಂಗಮಾಯಿತ್ತು. ಅದೆಂತೆಂದೊಡೆ : ಲಿಂಗವೆಂಬ ಮಹಾಲಿಂಗದಿಂ ಜನಿಸಿದ ಕರ್ಮವೇ ಪ್ರಸಾದಲಿಂಗವು, ಆ ಕರ್ಮದಿಂ ಜನಿಸಿದ ಜೀವನೇ ಜಂಗಮಲಿಂಗವು, ಅಂತಪ್ಪ ಲಿಂಗದಿಂದುಸಿದ ಮನಸ್ಸೇ ಶಿವಲಿಂಗವು, ಅಂತಪ್ಪ ಮನಸ್ಸಿನಿಂದ ಪರಿಶುದ್ಧಮಾಗಿರ್ಪ ಶರೀರವೇ ಗುರುಲಿಂಗವು. ಅಂತಪ್ಪ ಗುರುಲಿಂಗಮಾಗಿರ್ಪ ಶರೀರದಿಂದನುಭವಿಸುತ್ತಿರ್ಪ ಸಂಸಾರವೇ ಆಚಾರಲಿಂಗವು. ಇಂತು ಸಂಸಾರಶರೀರಂಗಳಿಗೆ ಇಷ್ಟಲಿಂಗವೇ ಕಾರಣವೂ ಮನೋಜೀವರಿಗೆ ಪ್ರಾಣಲಿಂಗವೇ ಕಾರಣವೂ ಆಗಿ, ಕರ್ಮಲಿಂಗಂಗಳಿಗೆ ಭಾವಲಿಂಗಂಗಳೇ ಕಾರಣಮಾಗಿ, ಕಾರಣವೇ ಐಕ್ಯಸ್ಥಾನವಾದುದರಿಂ ಸಂಸಾರ ಶರೀರಂಗಳು ಇಷ್ಟಲಿಂಗದೊಳಗೂ ಮನೋಜೀವಂಗಳು ಪ್ರಾಣಲಿಂಗದೊಳಗೂ ಐಕ್ಯವಂ ಹೊಂದಿದವು. ಕರ್ಮಲಿಂಗಗಳು ಭವಲಿಂಗದೊಳಗೈಕ್ಯಮಾಗಿ, ಪ್ರಾಣವು ಭಾವದೊಳಗೆ ಬೆರೆದು, ಭೇದವಡಗಿ ತಾನು ತಾನಾಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸತ್ವಸ್ವರೂಪನಾದ ಶಿವನೇ ವಿಷ್ಣುಗುಣವು. ಅಂತಪ್ಪ ಸತ್ವಸ್ವರೂಪನಾದ ಶಿವನಂ ಹೃದಯದಲ್ಲಿ ಧರಿಸಿರ್ಪುದರಿಂದ ವಿಷ್ಣುವು ಸಂರಕ್ಷಣಕರ್ತೃವಾದನು. ತಮಸ್ವರೂಪನಾದ ವಿಷ್ಣುವನ್ನು ಹೃದಯದಲ್ಲಿ ಧರಿಸಿರ್ಪುದರಿಂದ ಶಿವನೇ ಸಂಹಾರಕರ್ತೃವಾದನು. ಅದೆಂತೆಂದೊಡೆ : ಪುರುಷಧ್ಯಾನದಲ್ಲಿರ್ಪ ಪತಿವ್ರತಾಸ್ತ್ರೀಗೆ ಅದೇ ಸ್ವಧರ್ಮವಾಗಿ ಮೋಕ್ಷ ಕಾರಣಮಾಯಿತ್ತು . ಅಂತಪ್ಪ ಸ್ತ್ರೀಯಳ ಧ್ಯಾನದಲ್ಲಿರ್ಪ ಪುರುಷನಿಗೆ ಅದೇ ಸ್ವಧರ್ಮವಾಗಿ ಪ್ರಪಂಚಕಾರಣಮಾಯಿತ್ತು . ಇಂತಪ್ಪ ಸತ್ವವೇ ಅಮೃತವು, ತಮಸ್ಸೇ ವಿಷವು. ಅಮೃತವೇ ಸಕಲರಿಗೂ ಸೇವನಾಯೋಗ್ಯಮಾಗಿ ರಕ್ಷಿಸುತ್ತಿರ್ಪುದು, ವಿಷವೇ ಸಂಹಾರಕಾರಣಮಾಗಿರ್ಪುದು. ಅಮೃತವೇ ಎಲ್ಲರಿಗೂ ಅಕ್ಕುದಲ್ಲದೆ, ವಿಷವಹ್ನಿಯೊಬ್ಬನಿಗಲ್ಲದೆ ಎಲ್ಲರಿಗೂ ಅಕ್ಕುದೇನಯ್ಯಾ ? ವಿಷಾಹಾರಿಯು ನೀನು ಅಮೃತಾಹಾರಿಯು ನಾನು ಆದುದರಿಂದ ನನ್ನಲ್ಲಿರ್ಪ ತಮಸ್ಸೆಂಬ ವಿಷವನ್ನು ನೀಂ ಕೊಂಡು, ನೀನೆಂಬ ಪರಮಾಮೃತವನೆನಗೆ ದಯಪಾಲಿಸಿದರೆ, ನಾನು ನಿನ್ನ ದಯೆಯಿಂ ನಿತ್ಯನಾಗಿರ್ಪೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸತ್ಯಸ್ವರೂಪಮಾದ ಬಸವೇಶ್ವರನೇ ಭಕ್ತನು, ಜ್ಞಾನಸ್ವರೂಪಮಾದ ಚನ್ನಬಸವೇಶ್ವರನೇ ಗುರುವು, ಆನಂದಸ್ವರೂಪಮಾದ ಅಲ್ಲಮಪ್ರಭುವೇ ಜಂಗಮ. ಇಂತಪ್ಪ ಗುರು ಜಂಗಮ ಭಕ್ತರೆಂಬ ಮಹಾನದಿಗಳು ತ್ರಿಪಥಗಾಮಿನಿಗಳಾಗಿ, ಮಚ್ಛರೀರವೆಂಬ ಕಾಶೀಕ್ಷೇತ್ರದಲ್ಲಿ ಪರಿದು ಪವಿತ್ರಮಂ ಮಾಡಿ, ನನ್ನ ಹೃದಯವೆಂಬ ಮಣಿಕರ್ಣಿಕಾಸ್ಥಾನದೊಳ್ಮೂರೊಂದಾಗಿ ಕುಡಲು, ಸತ್ಯವೇ ಕಂಠ, ಜ್ಞಾನವೇ ಗೋಮುಖ, ಆನಂದವೇ ಗೋಳಾಕಾರಮಾಗಿರ್ಪ ಮಹಾಲಿಂಗವೆಂಬ ತ್ರಿವೇಣಿಸಂಗಮದಲ್ಲಿ ನಾಂ ಮುಳುಗಿ, ನಿರ್ವಾಣದಲ್ಲಿ ಮುನ್ನಿನಂತಿದ್ದೆನು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ