ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಏಕಮಾಗಿರ್ಪ ಬೀಜಮಧ್ಯದಲ್ಲಿರಿಸಿ ಅಂಕುರಿಸೆ, ಆ ಬೀಜ ಭಿನ್ನಮಾಗಿ ತೋರ್ಪಂದದಿಂ ಏಕಮೇವನದ್ವಿತೀಯಮಾಗಿ, ಬ್ರಹ್ಮನಲ್ಲಿ ಮನಸ್ಸು ಅಂಕುರಿಸೆ, ಶಿವಭಕ್ತಿಸ್ವರೂಪಮಾಗಿ ಉತ್ತರಭಾಗಮೇ ಶಕ್ತಿಯಾಯಿತ್ತು. ದಕ್ಷಿಣಭಾಗಮೇ ಶಿವನಾಯಿತ್ತು. ಶಕ್ತಿಯಿಂದ ಪೂರ್ವಭಾಗದಲ್ಲಿ ಕರ್ಮವುತ್ಪನ್ನವಾಯಿತ್ತು. ಶಿವನಿಂದ ಪಶ್ಚಿಮಭಾಗದಲ್ಲಿ ಧರ್ಮವುತ್ಪನ್ನಮಾಯಿತ್ತು. ಆ ಕರ್ಮೇಂದ್ರಿಯಂಗಳೈದು ಶಕ್ತಿಮುಖ ಧರ್ಮೇಂದ್ರಿಯಂಗಳೈದು ಶಿವಮುಖ ಶಕ್ತಿಸ್ವರೂಪಮಾದ ಉತ್ತರಹಸ್ತವು ಕರ್ಮೇಂದ್ರಿಯಂಗಳಿಗೆ ತಾನೇ ಕಾರಣಮಾಯಿತ್ತು. ಶಿವಸ್ವರೂಪಮಾದ ದಕ್ಷಿಣಹಸ್ತವು ಧರ್ಮೇಂದ್ರಿಯಂಗಳಿಗೆ ತಾನೇ ಕಾರಣಮಾಯಿತ್ತು. ಧರ್ಮೇಂದ್ರಿಯಂಗಳಲ್ಲಿ ನಾದಹುಟ್ಟಿತ್ತು. ಕರ್ಮೇಂದ್ರಿಯಂಗಳಿಂದ ಬಿಂದುಹುಟ್ಟಿತ್ತು. ಬಿಂದುವೇ ಅಧೋಮುಖವಾಗಿ, ನಾದ ಊಧ್ರ್ವಮುಖವಾಗಿ, ಮಧ್ಯವೊಗೆದ ಮನಸ್ಸಿನಲ್ಲಿ ಕಳೆಯೇ ಪ್ರಕಾಶಮಾಯಿತ್ತು. ಶಿವಶಕ್ತಿಗಳಿಗೆ ಬುದ್ಧಿಯೇ ಕಾರಣಮಾದಂದದಿ ನಾದಬಿಂದುಗಳಿಗೆ ಕಳೆಯೇ ಕಾರಣಮಾಯಿತ್ತು. ಕರ್ಮಮುಖದಿಂ ಬಿಂದುವಂ ಸಾಧಿಸಲು, ಆನಂದಸಾಧ್ಯಮಾಯಿತ್ತು. ಧರ್ಮಮುಖದಿಂ ನಾದವಂ ಸಾಧಿಸಲು, ಜ್ಞಾನಸಾಧ್ಯಮಾಯಿತ್ತು. ಕಳಾಯುಕ್ತಮಾದ ಮನಸ್ಸಿನಲ್ಲಿ ನಿಜಮಾಯಿತ್ತು. ಆನಂದಸ್ವರೂಪಮಾದ ಶಕ್ತಿ ಶಿವನೊಳಗೆ ಬೆರೆದು ಸಾಕಾರವ ನಿರಾಕಾರವ ಮಾಡುತ್ತಿರಲು, ಜ್ಞಾನಸ್ವರೂಪನಾದ ಶಿವನು ಶಕ್ತಿಯೊಳಗೆ ಬೆರೆದು ನಿರಾಕಾರವ ಸಾಕಾರವ ಮಾಡುತ್ತಿರಲು, ಆ ನಿರಾಕಾರಸ್ವರೂಪನಾದ ಶಿವನೇ ಆನಂದಶಕ್ತಿಯ ಸಂಗದಿಂ ಬಿಂದುರೂಪಮಾದ ಲಿಂಗಮಾದನು. ಸಾಕಾರಸ್ವರೂಪಮಾದ ಶಕ್ತಿ ಜ್ಞಾನರೂಪಮಾದ ಶಿವಸಂಗದಿಂ ನಾದಾಕಾರಮಾದ ನಿರಾಕಾರಮಂತ್ರಶಕ್ತಿಯಾಯಿತ್ತು. ಪ್ರಾಣಸ್ವರೂಪಮಾದ ಲಿಂಗಕ್ಕೆ ಮಂತ್ರಸ್ವರೂಪಮಾದ ಶರೀರವೇ ಶಕ್ತಿಯಾಯಿತ್ತು. ಲಿಂಗದಲ್ಲಿ ಹುಟ್ಟಿದ ಇಂದ್ರಿಯಸುಖ ಶರೀರದಲ್ಲಿ ಹುಟ್ಟಿದ ವಿಷಯಸುಖಂಗಳು ಲಿಂಗದಲ್ಲಿ ಬೆರೆದು, ಲಿಂಗಾಂಗಗಳೆರಡು ಮನಸ್ಸಿನಲ್ಲಿ ಶಂಕಿಸುತ್ತಿರಲು, ಲಿಂಗವೇ ಅಂಗವಾಯಿತ್ತು. ಲಿಂಗಾಂಗಮೆಂಬ ಭೇದಮೆ ತನಗಸಾಧ್ಯಮಾದೊಡೆ, ಮನಸ್ಸು ಲಿಂಗದಲ್ಲಿ ಲೀನಮಾಯಿತ್ತು. ಅಂಗದ ಕರ್ಮವಳಿಯಿತ್ತು ಲಿಂಗದ ಜ್ಞಾನವು ಮೆರೆಯಿತ್ತು. ಮನವಳಿಯೆ ನಿಜಮಾಯಿತ್ತು. ಅಂಗದಲ್ಲಿರ್ಪ ಬಿಂದು ಲಿಂಗದಲ್ಲಿ ನಿಶ್ಚೈತನ್ಯಮಾಗಿ, ಲಿಂಗದೊಳಗಿರ್ಪ ನಾದ ಅಂಗದಲ್ಲಿ ನಿಶ್ಶಬ್ದಮಾಗಿ, ಮನದಲ್ಲಿರ್ಪ ಕಳೆ ಲಿಂಗಾಂಗಲಿಂಗಸಮರಸಮಾಗಿ, ನಿದ್ರೆಯಲ್ಲಿ ಸ್ವಪ್ನಂ, ಸ್ವಪ್ನದಲ್ಲಿರ್ಪ ನಿಜಂ, ಜಾಗ್ರದಲ್ಲಿ ಮಿಥ್ಯಮಾಗಿತೋರ್ಪಂತೆ, ನಿನ್ನ ಲೀಲಾಜಡತ್ವದಲ್ಲಿ ತೋರ್ಪ ಸಕಲಪ್ರಪಂಚವೆಲ್ಲವು ತನ್ನ ನಿಜದಲ್ಲಿ ಮಿಥ್ಯಮಾಗಿ, ತಾನೇ ನಿಜಮಾಗಿ, ತನ್ನಿಂದನ್ಯಮೇನೂ ಇಲ್ಲದೆ ಇರ್ಪುದೇ ಶಿವತತ್ವ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ