ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಇಂದ್ರಿಯಗಳಲ್ಲಿ ಸುಷುಪ್ತಿಜ್ಞಾನವು, ಮನದಲ್ಲಿ ಸ್ವಪ್ನಜ್ಞಾನವು, ಭಾವದಲ್ಲಿ ಜಾಗ್ರಜ್ಞಾನವು. ಸುಷುಪ್ತಿಯಂ ಹೊಂದಿದಲ್ಲಿ ಜಾಗ್ರವು ಸ್ವಪ್ನವಾಗಿರ್ಪಂತೆ, ಜ್ಞಾನೇಂದ್ರಿಯಂಗಳಂ ಹೊಂದಿದಲ್ಲಿ ಭಾವವೇ ಮನಸ್ಸಾಗಿರ್ಪುದು. ಜಾಗ್ರವಂ ಹೊಂದಿದಲ್ಲಿ ಸ್ವಪ್ನಸುಷುಪ್ತಿಗಳಿಲ್ಲದಿರ್ಪಂತೆ, ಭಾವಜ್ಞಾನಮುದಯಮಾದಲ್ಲಿ ಮನಸ್ಸಿನಿಂದಿಂದ್ರಿಯಂಗಳಳಿದು, ನಿಶ್ಚಿಂತಮಾಗಿರ್ಪುದೇ ಕಾರಣವು. ಇಂತಪ್ಪ ಜಾಗ್ರತ್ಸ್ವಪ್ನ ಸುಷುಪ್ತಿಜ್ಞಾನಂಗಳನ್ನು ಹೊಂದಿ ಮಹಾಲಿಂಗವು ತಾಂ ತ್ರಿಮೂರ್ತಿಸ್ವರೂಪಮಂ ಧರಿಸಿ ಕ್ರೀಡಿಸುತ್ತಿರ್ಪುದು, ಜಾಗ್ರದಲ್ಲಿ ನಡೆಸುತ್ತಿರ್ಪುದೇ ರುದ್ರಮೂರ್ತಿಯು, ಸುಷುಪ್ತಿಯೋಗದಲ್ಲಿ ಆನಂದಿಸುತ್ತಿರ್ಪುದೇ ವಿಷ್ಣುಮೂರ್ತಿಯು, ಸ್ವಪ್ನದಲ್ಲಿ ಪ್ರಪಂಚಮಂ ಸೃಷ್ಟಿಸುತ್ತಿರ್ಪುದೇ ಬ್ರಹ್ಮಮೂರ್ತಿಯು. ಆ ಸ್ವಪ್ನವಂ ರಕ್ಷಿಸುತ್ತಿರ್ಪುದೇ ಸುಷುಪ್ತಿಯು, ಆ ಸ್ವಪ್ನವಂ ಸಂಹರಿಸುತ್ತಿರ್ಪುದೇ ಜಾಗ್ರವು, ಆ ಸ್ವಪ್ನವಂ ಸೃಷ್ಟಿಸುವುದೇ ಸ್ವಪ್ನವು. ಸ್ವಪ್ನದಲ್ಲಿರ್ಪವರಿಗೆ ಜಾಗ್ರವು ತಿಳಿಯದಿರ್ಪಂತೆ, ಪ್ರಪಂಚದಲ್ಲಿರ್ಪವರಿಗೆ ಪರಮನು ತಿಳಿಯದಿರ್ಪನು. ಸ್ವಪ್ನ ಸುಷುಪ್ತಿಗಳ್ತನ್ನಧೀನಮಾಗಿರ್ಪವು. ಜಾಗ್ರವು ತನ್ನಂ ಮೀರಿರುವಿದರಿಂ ಮರಣದಲ್ಲಿ ಸ್ವಾತಂತ್ರ್ಯಮಿಲ್ಲಮಾಯಿತ್ತು. ಇಂತಪ್ಪ ಅವಸ್ಥಾತ್ರಯಂಗಳಲ್ಲಿ ಹೊಂದಿರ್ಪ ಜ್ಞಾನತ್ರಯಂಗಳಂ ಮೀರಿ, ಜ್ಞಾನ ತೂರ್ಯಾವಸ್ಥೆಯಂ ಹೊಂದಿದಲ್ಲಿ, ಮಹಾಲಿಂಗನಾದ ನೀನೊಬ್ಬನಲ್ಲದೆ ಮತ್ತಾರೂ ಇಲ್ಲದೆ, ನೀನೇ ನೀನಾಗಿರ್ಪ ನಿಜಸುಖವಮೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇಂದ್ರಿಯಸ್ವರೂಪಮಾದ ತನುವೇ ಜಾಗ್ರವು, ವಿಷಯಸ್ವರೂಪಮಾದ ಮನವೇ ಸ್ವಪ್ನವು, ಅನುಭವಸ್ವರೂಪಮಾದ ಜೀವನಲ್ಲಿ ಸುಷುಪ್ತಿಯು. ಪಾಪವೆಂಬ ಪಂಕದಲ್ಲಿ ಹುಟ್ಟಿ ಆಸೆಯೆಂಬ ಬಿಸದೊಳಗೆ ಕೂಡಿ ಅಷ್ಟಭೂತಂಗಳೆಂಬಷ್ಟದಳಂಗಳಿಂ ಚಿತ್ತವೆಂಬ ಮೇರುವಿನಿಂ ಯುಕುತಮಾಗಿರ್ಪ ಹೃತ್ಕಮಲದಲ್ಲಿ ಜೀವನು ಸುಷುಪ್ತಿಯಂ ಹೊಂದಿ, ತನುವಿನ ಜಾಗ್ರವು ಮನದ ಸ್ವಪ್ನವಲ್ಲದೆ, ತನ್ನ ನಿಜವೆಲ್ಲವೂ ಸುಷುಪ್ತಿಯಂ ಹೊಂದಿ ತನು ಸೋಂಕಿದಲ್ಲಿ ತಿಳುವುತ್ತಂ, ಮರಳಿ ನಿದ್ರಾರೂಪದಿಂ ಮರವುತ್ತಲಿರ್ಪ ಜೀವನ ಪರಿಯ ನೋಡಾ. ಇಂತು ಭವಭವಂಗಳಲ್ಲಿ ತೊಳಲುವ ಜೀವಂಗೆ ಗುರುಸಂಸ್ಕಾರದಿ ಲಿಂಗವೆಂಬ ಪೂರ್ವಾಚಲದಲ್ಲಿ ಜ್ಞಾನಾರ್ಕೋದಯಮಾಗಿ, ಭಾವವೆಂಬ ಮೋಹ ಬಯಲಲ್ಲಿ ಗಮಿಸುತ್ತಿರಲು, ಹೃತ್ಕಮಲಂ ವಿಕಸಿತಮಾಗಿ ಆನಂದಮಕರಂದದೊಡನೆ ಕೂಡಿ, ಗುರುಮಂತ್ರಮಲಯಾನಿಲನು ನಿಜವಾಸನೆವಿಡಿದು ಬೀಸುತ್ತಿರಲು, ಜೀವ ಸುಷುಪ್ತಿಭ್ರಾಂತಿಯಳಿದು, ಪರಮಜಾಗ್ರತ್ಸ್ವರೂಪನಪ್ಪ ಪರಮಾತ್ಮನಾಗಿ, ತನುವಿನ ಜಾಗ್ರ, ಮನದ ಸ್ವಪ್ನಗಳಳಿದು, ಪರಮನ ಮಧ್ಯಾವಸ್ಥೆಯಲ್ಲಿ ಲೀನಮಾಗಲು, ಅಷ್ಟಭೂತಂಗಳುಂ ಅಷ್ಟಾವರಣಂಗಳಾದವದೆಂತೆಂದೊಡೆ : ಪೃಥ್ವಿಯೇ ಭಸ್ಮವು, ಜಲವೇ ಪಾದೋದಕವು, ಅಗ್ನಿಯೇ ರುದ್ರಾಕ್ಷವು, ವಾಯುವೇ ಪ್ರಸಾದವು, ಆಕಾಶವೇ ಮಂತ್ರವು, ಅಹಂಕಾರವೇ ಲಿಂಗವು, ಮಹವೇ ಗುರುವು, ಚಿತ್ತವೇ ಜಂಗಮವು, ನಿಜವು ಪ್ರಸನ್ನಮಾಗಿ ಮನವೇ ವೃಷಭೇಶ್ವರನಾಗಿ ತನುವೇ ಕೈಲಾಸಪರ್ವತಮಾಗಿ ಸಕಲ ಗುಣಂಗಳೇ ಶಿವಗಣಂಗಳಾಗಿ; ಸಕಲಜನ್ಮಕರ್ಮಪ್ರಪಂಚಪರದೊಳಡಗಿತ್ತೆಂತೆಂದೊಡೆ ಕಾಲದಲ್ಲಿ ಬ್ರಹ್ಮಾಂಡಂಗಳಡಗಿ ರೂಪುದೋರದಿರ್ಪಂತೆ, ಚಿದಾಕಾಶದಲ್ಲಿ ಲೀನಮಾಗೆ, ತಾನೇ ಶಿವನಾಗಿ, ಅಭೇದ ಬ್ರಹ್ಮವಾಯಿತ್ತೆಂತೆಂದೊಡೆ : ವಸ್ತುಸ್ವರೂಪಮಾದ ಸುವರ್ಣವ ಕಾಸಿ, ಕರಗಿಸಿ ; ಉಳಿದ ನಿಜಮಂ ತೆಗೆದು, ಬೆಳುಗಾರ ಮಿಕ್ಕಿ, ಮಹದೊಳಗೆ ಬೆರಸಿ, ಎರಡನ್ನೂ ಒಂದುಮಾಡಿ, ತಾನದರೊಳಗೆ ಬೆರೆದು ಭೇದದೋರದಿರ್ಪಂತೆ, ಮನಸ್ಸು ಜೀವ ಪರಮರನೊಂದುಮಾಡಿ, ತಾನದರೊಳಗೆ ಬೆರೆದು, ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ. ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ