ಅಥವಾ
(4) (1) (3) (1) (0) (0) (0) (0) (1) (0) (0) (0) (1) (0) ಅಂ (2) ಅಃ (2) (1) (0) (5) (1) (0) (0) (0) (1) (0) (0) (0) (0) (0) (0) (0) (1) (0) (1) (1) (4) (2) (0) (1) (1) (0) (0) (0) (0) (5) (1) (2) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಲಿಂಗವೆ ನಿಮ್ಮ ನೆನೆವ ಮನಕ್ಕೆ ಹೊನ್ನ ತೋರಿ, ನಿಮ್ಮ ನೋಡುವ ನೋಟಕ್ಕೆ ಹೆಣ್ಣ ತೋರಿ, ನಿಮ್ಮ ಪೂಜಿಸುವ ಕೈಗೆ ಮಣ್ಣ ತೋರಿ, ಮತ್ತೆ ಗಣಂಗಳ ಸಾಕ್ಷಿಯಾಗಿದ್ದುದ ತಿಳಿದು ಅವರಿಗೆ ಅಂಜಿ ಮನದ ಕೊನೆಯಲ್ಲಿ ಮಂತ್ರರೂಪಾಗಿ ನಿಂದ ಕಾರಣ ಹೊನ್ನಿನ ನೆನಹು ಕೆಟ್ಟಿತ್ತು ನೋಡಾ ! ಪರಶಿವಮೂರ್ತಿಯ ಮುದ್ದುಮೊಗದ ತುಟಿಯಲ್ಲಿ ಹುಟ್ಟಿದ ಓಂಕಾರನಾದಾಮೃತವ ಚುಂಬನವ ಮಾಡಲಿಕ್ಕೆ ಹೆಣ್ಣಿನ ನೋಟ ಕೆಟ್ಟಿತ್ತು. ಕರಕಮಲ ಗದ್ದುಗೆಯ ಮಾಡಿದ ಕಾರಣ ಮಣ್ಣಿನ ಧಾವತಿ ಬಿಟ್ಟುಹೋಯಿತ್ತು. ಇಂತು ಮಾಡಿದಿರಿ ಲಿಂಗವೆ, ಮತ್ತೆ ನಿಮ್ಮ ಬೇಡಿದಡೆ ಅಷ್ಟೈಶ್ವರ್ಯ ಚತುರ್ವಿಧಪದಗಳನು ಕೊಡುವಿರಿ. ಇವೆಲ್ಲ ಅಲ್ಪಸುಖ, ತಾಮಸಕಿಕ್ಕುವವು. ಮತ್ತೆ ನಮ್ಮ ಗಣಂಗಳ ಮನೆಯಲ್ಲಿ ಕೇಡಿಲ್ಲದಂತಹ ನಿತ್ಯವಾದ ವಸ್ತು ಅಷ್ಟೈಶ್ವರ್ಯಗಳುಂಟು, ನಿದ್ಥಿ ನಿಧಾನಗಳುಂಟು, ಇದಕ್ಕೆ ನಾವು ನೀವು ಬೇಡಿಕೊಂಬುವ ಬನ್ನಿರಿ. ಅವರಿರುವ ಸ್ಥಲವ ತೋರಿಕೊಡಿ ಎಲೆ ಲಿಂಗವೆ. ಅವರು ಎಲ್ಲಿ ಐದಾರೆಯೆಂದಡೆ : ಏಳುಪ್ಪರಿಗೆಯೊಳಗಿಪ್ಪರು. ಅವರ ನಾಮವ ಪೇಳ್ವೆನು - ಪಶ್ಚಿಮಚಕ್ರದಲ್ಲಿ ನಿರಂಜನ ಜಂಗಮವು, ಗುರು-ಹಿರಿಯರು ಅಸಂಖ್ಯಾತ ಮಹಾಗಣಂಗಳು ಸಹವಾಗಿಪ್ಪರು. ಅವರ ಮಧ್ಯದಲ್ಲಿ ನೀವೆ ನಾವಾಗಿ ಬೇಡಿಕೊಂಬೆವು. ಬೇಡಿಕೊಂಡ ಮೇಲೆ ಅವರು ಕೊಟ್ಟ ವಸ್ತುವ ಹೇಳಿಹೆನು ಕೇಳಿರೆ ಲಿಂಗವೆ. ಅವು ಯಾವುವೆಂದಡೆ : ಜೀವಾತ್ಮ ಅಂತರಾತ್ಮ ಪರಮಾತ್ಮರೆಂಬ ಆತ್ಮತ್ರಯರು, ಹೇಮಾದ್ರಿ ರಜತಾದ್ರಿ ಮಂದರಾದ್ರಿಯೆಂಬ ಮೇರುಗಳ ಸೆಜ್ಜೆಯ ಮಾಡಿ, ವಾಯುವನೆ ಶಿವದಾರವ ಮಾಡಿ, ತನುತ್ರಯವನೆ ವಸ್ತ್ರವ ಮಾಡಿ, ಇವುಗಳನೆ ಅವರು ನಮಗೆ ಕೊಟ್ಟರು. ಅಲ್ಲದೆ ಪರಸ್ತ್ರೀಯರ ಅಪ್ಪದ ಹಾಗೆ ನಿಃಕಾಮವೆಂಬ ಉಡುಗೊರೆಯ ಮಾಡಿ ಕಟ್ಟಿನಲ್ಲಿಟ್ಟರು. ಕುಶಬ್ದವ ಕೇಳದ ಹಾಗೆ ಬಲದ ಕರ್ಣದಲ್ಲಿ ಷಡಕ್ಷರವೆಂಬ ವಸ್ತುವ ಮಾಡಿಯಿಟ್ಟರು. ಪಂಚಾಂಗುಲಿಗೆ ಪಂಚಾಕ್ಷರವೆ ಐದುಂಗುರವ ಮಾಡಿಯಿಟ್ಟರು. ನೂರೆಂಟು ನಾಮ ಹರಗÀಣ ಕೊರಳಲಿ ಹಾಕಿದರು. ಆಪತ್ತಿಗೆ ಅಂಜಬೇಡೆಂದು ವಿಭೂತಿಧೂಳನ ಧಾರಣವಮಾಡಿ ಜೋಡಂಗಿಯ ಮಾಡಿ ತೊಡಿಸಿದರು. ಗಣಂಗಳು ಹೋದ ಹಾದಿಯನೆ ಮುಂಡಾಸವ ಮಾಡಿ ತಲೆಗೆ ಸುತ್ತಿದರು. ಆವ ಕಂಟಕವು ಬಾರದ ಹಾಗೆ ಗಣಂಗಳ ಪಾದಧೂಳನವ ಸೆಲ್ಲೆಯ ಮಾಡಿ ಹೊದಿಸಿದರು. ಭಕ್ತಿಯೆಂಬ ನಿಧಾನವ ಕೊಟ್ಟು, ಭಾವದಲ್ಲಿ ಬಚ್ಚಿಟ್ಟುಕೊಳ್ಳಿರಿ ಎಂದರು. ಅಷ್ಟಾವರಣವೆ ನಿದ್ಥಿನಿಧಾನವೆಂದು ಹೇಳಿದರು. ಇವೆಲ್ಲ ವಸ್ತುಗಳ ನಿಮ್ಮ ನೋಡಿ ಕೊಟ್ಟರಲ್ಲದೆ ಬೇರಿಲ್ಲ. ನಿಮ್ಮ ದಾಸಾನುದಾಸಯೆಂದು ನಿಮ್ಮೊಡವೆಯ ನಿಮಗೊಪ್ಪಿಸು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ. ಅದೇಕೆಂದಡೆ ಶಿವನು ದೀನನು. ಅದು ಹೇಗೆಂದಡೆ: ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು. ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು, ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು. ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ ಕನ್ನವನಿಕ್ಕಿ ಒಯ್ದು, ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ, ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ. ದಿನದಿನಕ್ಕೆ ಇದೇ ಚಿಂತೆ ನಿಮಗೆ. ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು. ಅದು ಹೇಗೆಂದಡೆ: ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ ಇಂದಿನ ಕಾಸು ಉದಯಕ್ಕೆ ತಂಗಳೆಂಬರು. ನಾಳಿನ ಚಿಂತೆ ನನಗೇಕೆಂಬರು. ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು, ನಮ್ಮ ಕರಿಕಾಲಚೋಳನ ಮನೆಯಲ್ಲಿ ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ? ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ, ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು. ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು. ಇದ ನೀವು ಬಲ್ಲಿರಿಯಾಗಿ, ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಲಿಂಗಾರ್ಚನೆಯ ಮಾಡುವಾಗ ಪಾದಪೂಜೆಯ ಮಾಡುವಾಗ ಪಾದೋದಕ ಪ್ರಸಾದ ಕೊಂಬುವಾಗ ಭವಿಶಬ್ದ ಕುಶಬ್ದ ಹಿಂಸಾಶಬ್ದ ಹೊಲೆಶಬ್ದ ಹುಸಿಶಬ್ದ ಹೇಸಿಕೆಶಬ್ದ ವಾಕರಿಕೆಶಬ್ದ ಇವೆಲ್ಲವ ಪ್ರಸಾದಿಗಳು ವರ್ಜಿಸುವುದು. ವರ್ಜಿಸದಿರ್ದಡೆ, ಲಿಂಗಾರ್ಚನೆ ಪಾದಪೂಜೆ ಪಾದೋದಕ ಪ್ರಸಾದ ನಿಷ್ಫಲ. ಸಾಕ್ಷಿ : 'ಭವಿಶಬ್ದಂ ಕುಶಬ್ದಂ ಚ ಹಿಂಸಾಶಬ್ದಂ ಸತಾಪಕಂ | ಶ್ವಪಚ್ಯಾನೃತಶಬ್ದಂ ಚ ಕರ್ಕಶೋ ಭಾಂಡಿಕೋಪಿ ವಾ | ಬೀಭತ್ಸಕಂ ಮಹಾದೇವಿ ಪ್ರಸಾದಂ ಚ ವಿವರ್ಜಯೇತ್ ||' ಎಂದುದಾಗಿ, ಪ್ರಸಾದ ಮುಗಿಯುವತನಕ ಭೋಜ್ಯ ಭೋಜ್ಯಕ್ಕೆ ಪಂಚಾಕ್ಷರಿಯ ಸ್ಮರಿಸುತ್ತ ಸಲಿಸುವುದು. ಶಿವಸ್ಮರಣೆಯಿಂದ ಸ್ವೀಕರಿಸಿದ್ದು ಮುನ್ನೂರರುವತ್ತು ವ್ಯಾಧಿ ನಿಲ್ಲದೆ ಓಡುವವು. ಹೀಗೆ ನಂಬಿಗೆಯುಳ್ಳಡೆ ಪ್ರಸಾದಸಿದ್ಧಿಯಪ್ಪುದು ನೋಡಾ ! ನಮ್ಮ ಬಿಬ್ಬಬಾಚಯ್ಯನವರು ನಂಬಿದ ಕಾರಣದಿಂದ ಓಗರ ಪ್ರಸಾದವಾಗಿ, ಎಂಜಲವೆಂದ ವಿಪ್ರರ ಮಂಡೆಯಮೇಲೆ ತಳೆಯಲು ಕೆಂಡವಾಗಿ ಸುಟ್ಟುದಿಲ್ಲವೆ ಗ್ರಾಮಸಹಿತವಾಗಿ ? ಮತ್ತೆ, ಮರುಳಶಂಕರದೇವರು ಪ್ರಸಾದದ ಕುಂಡದೊಳಗೆ ಹನ್ನೆರಡು ವರ್ಷವಿದ್ದು ನಿಜೈಕ್ಯವಾದುದಿಲ್ಲವೆ ? ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು ; ನಂಬಿದವರಿಗಿಂಬಾಗಿಪ್ಪನು ನಮ್ಮ ಶಾಂತಕೂಡಸಂಗಮದೇವ.
--------------
ಗಣದಾಸಿ ವೀರಣ್ಣ
ಲಿಂಗಾಂಗಸಂಗಸಮರಸದ ವಿವರವ ಕರುಣಿಸು ಸ್ವಾಮಿ. ಕೇಳೈ ಮಗನೆ : ಮುಖಪ್ರಕ್ಷಾಲನ ಮಾಡುವಾಗ ಲಿಂಗಕ್ಕೆ ಮಜ್ಜನವ ನೀಡಿದುದು ಇಷ್ಟಲಿಂಗದ ಮಜ್ಜನ. ಲಿಂಗಾರ್ಚನೆ ಮಾಡುವಾಗ ಕ್ರಿಯೆಯಿಟ್ಟು ಲಿಂಗಕ್ಕೆ ಮಜ್ಜನವ ನೀಡಿದುದು ಪ್ರಾಣಲಿಂಗದ ಮಜ್ಜನ. ಲಿಂಗಾರ್ಚನೆ ಮುಗಿದ ಬಳಿಕ ಮಜ್ಜನ ನೀಡಿದುದು ಭಾವಲಿಂಗದ ಮಜ್ಜನವೆಂದರಿವುದು. ಇನ್ನು ವಿಭೂತಿಯ ಧರಿಸುವ ಕ್ರಮವು : ಸ್ನಾನ ಧೂಳನ ಧಾರಣ. ಸ್ನಾನ ಮಾಡಿದುದು ಇಷ್ಟಲಿಂಗದಲ್ಲಿ ; ಧೂಳನವ ಮಾಡಿದುದು ಪ್ರಾಣಲಿಂಗದಲ್ಲಿ ; ಧಾರಣವ ಮಾಡಿದುದು ಭಾವಲಿಂಗದಲ್ಲಿ. ಇನ್ನು ಲಿಂಗಪೂಜೆ ; ಹೊರಗಣ ಪುಷ್ಪ ಇಷ್ಟಲಿಂಗಕ್ಕೆ ; ಒಳಗಣ ಕಮಲದ ಪುಷ್ಪ ಪ್ರಾಣಲಿಂಗಕ್ಕೆ ; ಬಯಲ ಪುಷ್ಪ ಭಾವಲಿಂಗಕ್ಕೆಂದರಿವುದು. ಇನ್ನು ಜಪದ ಕ್ರಮ ; ಹನ್ನೆರಡು ಪ್ರಣವ ಮಾಡಲಾಗಿ ಪಂಚತತ್ತ್ವವಡೆದ ಜಪ ಇಷ್ಟಲಿಂಗಕ್ಕೆ ; ಒಳಗಣ ಜಪ ಇಪ್ಪತ್ತೊಂದು ಸಾವಿರದಾರುನೂರು ಪ್ರಾಣಲಿಂಗಕ್ಕೆ ; ಬಯಲ ಜಪ ಭಾವಲಿಂಗಕ್ಕೆಂದರಿವುದು. ಇನ್ನು ತ್ರಿಕಾಲಪೂಜೆ : ಉದಯಕಾಲದ ಪೂಜೆ ಇಷ್ಟಲಿಂಗಕ್ಕೆ ; ಮಧ್ಯಾಹ್ನದ ಪೂಜೆ ಪ್ರಾಣಲಿಂಗಕ್ಕೆ ; ಸಾಯಂಕಾಲದ ಪೂಜೆ ಭಾವಲಿಂಗಕ್ಕೆಂದರಿವುದು. ಇನ್ನು ಪ್ರಸಾದತ್ರಯದ ವಿವರ : ಶುದ್ಧಪ್ರಸಾದ ಇಷ್ಟಲಿಂಗಕ್ಕೆ ; ಸಿದ್ಧಪ್ರಸಾದ ಪ್ರಾಣಲಿಂಗಕ್ಕೆ ; ಪ್ರಸಿದ್ಧಪ್ರಸಾದ ಭಾವಲಿಂಗಕ್ಕೆಂದರಿವುದು. ಇನ್ನು ಭೋಗತ್ರಯದ ವಿವರ : ಭೋಜನಸುಖವು ಇಷ್ಟಲಿಂಗಕ್ಕೆ ; ತನ್ನ ಸ್ತ್ರೀಸಂಗದಸುಖವು ಪ್ರಾಣಲಿಂಗಕ್ಕೆ ; ವಸ್ತ್ರಾಭರಣದ ಸುಖವು ಭಾವಲಿಂಗಕ್ಕೆಂದರಿವುದು. ಲಿಂಗಾಂಗಿಯ ಚರಿತ್ರದ ವಿವರ ; ನಿಂತಿರ್ದುದು ಇಷ್ಟಲಿಂಗಕ್ಕೆ ; ಕುಂತಿರ್ದುದು ಪ್ರಾಣಲಿಂಗಕ್ಕೆ ಮಲಗಿರ್ದುದು ಭಾವಲಿಂಗಕ್ಕೆಂದರಿವುದು. ಇನ್ನು ನಡೆವುದು ಇಷ್ಟಲಿಂಗವು ; ನುಡಿವುದು ಪ್ರಾಣಲಿಂಗವು ; ಪಿಡಿದುನೋಡುವ ಸುಖವು ಭಾವಲಿಂಗವು ಎಂದರಿವುದು. ಇನ್ನು ಇಷ್ಟಲಿಂಗದ ಗರ್ಭದಲ್ಲಿ ತನ್ನ ಶರೀರವನಿಟ್ಟು ಬ್ರಹ್ಮರಂಧ್ರದಲ್ಲಿರ್ದ ಸಹಸ್ರದಳ ಕಮಲದೊಳಗೆ ಆ ಇಷ್ಟಲಿಂಗವ ಮುಳುಗಿಸುವುದೀಗ ಲಿಂಗಾಂಗವು. ಇನ್ನು ನೇತ್ರಸ್ಥಾನದಲ್ಲಿರ್ದ ವಿಶ್ವಜೀವನ ಜಾಗ್ರಾವಸ್ಥೆ ಸ್ಥೂಲತನುವಿನ ವ್ಯವಹರಣೆ ಇಷ್ಟಲಿಂಗವೆಂದರಿವುದು. ಕಂಠಸ್ಥಾನದಲ್ಲಿರ್ದ ತೈಜಸಜೀವನ ಸ್ವಪ್ನಾವಸ್ಥೆ ಸೂಕ್ಷ್ಮತನುವಿನ ವ್ಯವಹರಣೆ ಪ್ರಾಣಲಿಂಗವೆಂದರಿವುದು. ಹೃದಯಸ್ಥಾನದಲ್ಲಿರ್ದ ಪ್ರಾಜ್ಞಜೀವನ ಸುಷುಪ್ತಾವಸ್ಥೆ ಕಾರಣತನುವಿನ ವ್ಯವಹರಣೆ ಭಾವಲಿಂಗವೆಂದರಿವುದು. ಇನ್ನು ಆಯತ ಇಷ್ಟಲಿಂಗವು ಸ್ವಾಯತ ಪ್ರಾಣಲಿಂಗವು ಸನ್ನಹಿತ ಭಾವಲಿಂಗವು ಎಂದರಿವುದು. ಇನ್ನು ಪಾತಾಳಲೋಕವನೊಳಕೊಂಡದ್ದು ಇಷ್ಟಲಿಂಗವಹುದು ; ಮತ್ರ್ಯಲೋಕವನೊಳಕೊಂಡದ್ದು ಪ್ರಾಣಲಿಂಗವಹುದು ; ಸ್ವರ್ಗಲೋಕವನೊಳಕೊಂಡದ್ದು ಭಾವಲಿಂಗವಹುದು. ಈರೇಳುಲೋಕವನೊಳಕೊಂಡದ್ದು ಪ್ರಾಣಲಿಂಗವು ; ಚರ್ಮಚಕ್ಷುವಿಗೆ ಅಗೋಚರವು, ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಟ್ಟುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಕ್ಕೆ ಎರಡು ನೇತ್ರಂಗಳು ಪುಷ್ಪವಾಗಿಪ್ಪುದೆ ಲಿಂಗಾಂಗಸಂಗವು. ಇನ್ನು ರೂಪಾಗಿ ಬಂದ ಪದಾರ್ಥವನು ಭೋಗಿಸುವದು ಇಷ್ಟಲಿಂಗವು ತಾನೆ. ರುಚಿಯಾಗಿ ಬಂದ ಪದಾರ್ಥವನು ಭೋಗಿಸುವದು ಪ್ರಾಣಲಿಂಗವು ತಾನೆ. ತೃಪ್ತಿಯಾಗಿ ಬಂದ ಪದಾರ್ಥವನು ಭೋಗಿಸುವದು ಭಾವಲಿಂಗವು ತಾನೆ. ಸಾಕ್ಷಿ : 'ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಂ | ಭಾವಲಿಂಗಾರ್ಪಿತಂ ತೃಪ್ತಿರಿತಿ ಭೇದೋ ವರಾನನೇ ||' ಎಂದುದಾಗಿ, ಅಂಗವೆಂದರೆ ರೂಪು, ಮನವೆಂದರೆ ರುಚಿ, ಸಂತೋಷವೆಂದರೆ ತೃಪ್ತಿ ಎಂದರಿವುದು. ಕ್ರಿಯೆವಿಡಿದು ಕಾಯಾರ್ಪಣ ಮಾಡುವ ಷಡ್ವಿಧಲಿಂಗದಸುಖವ ಭೋಗಿಸುವಾತ ಇಷ್ಟಲಿಂಗವು ತಾನೆ. ಜ್ಞಾನವಿಡಿದು ಕರಣಾರ್ಪಣವ ಮಾಡುವ ಛತ್ತೀಸಲಿಂಗದ ಸುಖವ ಭೋಗಿಸುವಾತ ಪ್ರಾಣಲಿಂಗ ತಾನೆ. ಭಾವವಿಡಿದು ಪರಿಣಾಮಾರ್ಪಣ ಮಾಡುವ ಇನ್ನೂರ ಹದಿನಾರು ಲಿಂಗದ ಸುಖವ ಭೋಗಿಸುವಾತ ಭಾವಲಿಂಗವು ತಾನೆ. ಸಾವಿರದ ಇನ್ನೂರಾ ತೊಂಬತ್ತಾರು ಲಿಂಗ ಇಂತಪ್ಪ ಬಯಲಲಿಂಗವು ಲೆಕ್ಕಕ್ಕೆ ನಿಲುಕದು. ಬಯಲ ಹಸ್ತದಿಂದ ಪೂಜಿಸಿ ಆ ಬಯಲಲಿಂಗದೊಳಗೆ ತಾನಾಗಿ ತನ್ನೊಳಗೆ ಬಯಲ ಲಿಂಗವು ಬೆರದುದು ಇದು ಲಿಂಗಾಂಗಸಂಗ ಸಮರಸವು. ಇದು 'ಶರಣಸತಿ ಲಿಂಗಪತಿ' ನ್ಯಾಯವು. ಇದು ತ್ರಿವಿಧ ತನುವ ತ್ರಿಲಿಂಗಕ್ಕೆ ಅರ್ಪಿಸುವ ಕ್ರಮವು. ಇಂತಿವೆಲ್ಲ ಕ್ರಮವನೊಳಕೊಂಡು ಇಷ್ಟಬ್ರಹ್ಮವು ತಾನೆಯೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಅಂಗಸಂಗಿಗಳೆತ್ತಬಲ್ಲರು ನೋಡಾ.
--------------
ಗಣದಾಸಿ ವೀರಣ್ಣ
ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿಹವು. ಲಿಂಗವು ತಾನು ಬ್ರಹ್ಮಾಂಡದೊಳಡಗಿ ಆ ಬ್ರಹ್ಮಾಂಡವು ಲಿಂಗವು ತನ್ನೊಳಡಗಿದ ಭೇದವು ಶಾಸ್ತ್ರವ ಬಲ್ಲವರಿಗೆ ಕಾಣಿಸದು, ಆಗಮಯುಕ್ತರಿಗೆ ತಿಳಿಯದು ; ಕರ್ಮ ಭೂಭಾರಿಗಳಿಗೆ ಸಲ್ಲದು. ಇದನ್ನು ಭಕ್ತಗಣಂಗಳಿಗೆ ಗುರು ಪ್ರತ್ಯಕ್ಷಮಂ ಮಾಡಿ ತೋರಿಸಿದ ಭೇದವು ಎಂತೆಂದಡೆ : ಕರಿ ಕನ್ನಡಿಯೊಳಡಗಿದ ಹಾಗೆ ; ಮುಗಿಲ ಮರೆಯ ಸೂರ್ಯನ ಹಾಗೆ ನೇತ್ರದ ಕೊನೆಯೊಳಗೆ ಆಕಾಶವಡಗಿದ ಹಾಗೆ, ನೆಲದ ಮರೆಯ ನಿಧಾನದ ಹಾಗೆ ಬೀಜದೊಳಡಗಿದ ವೃಕ್ಷದ ಹಾಗೆ. ಈ ಭೇದವು ಗುರುಭಕ್ತರಂಶಿಕರಾದವರಿಗೆ ಸಾಧ್ಯವಲ್ಲದೆ ಉಳಿದ ಭಿನ್ನ ಜ್ಞಾನಿಗಳೆತ್ತ ಬಲ್ಲರು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ