ಅಥವಾ
(4) (1) (3) (1) (0) (0) (0) (0) (1) (0) (0) (0) (1) (0) ಅಂ (2) ಅಃ (2) (1) (0) (5) (1) (0) (0) (0) (1) (0) (0) (0) (0) (0) (0) (0) (1) (0) (1) (1) (4) (2) (0) (1) (1) (0) (0) (0) (0) (5) (1) (2) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಿರಾಕಾರ ಪರವಸ್ತು ತನ್ನ ಲೀಲಾವಿನೋದದಿಂದ ಎರಡು ಮುಖದಿಂದ ಎರಡು ಸೃಷ್ಟಿಯ ಮಾಡಿದರು. ಒಂದು ಊಧ್ರ್ವಸೃಷ್ಟಿ, ಒಂದು ಅಧೋಸೃಷ್ಟಿ. ಅಧೋಸೃಷ್ಟಿ ಯಾವುದೆಂದಡೆ : ಅಂಡಜ ಪಿಂಡಜ ಜರಾಯುಜ ಉದ್ಭಿಜ ಇವು ನಾಲ್ಕು ಕೂಡಿ ಎಂಬತ್ತುನಾಲ್ಕು ಜೀವರಾಶಿಯ ಮಾಡಿದರು. ಸ್ವರ್ಗ ನರಕ ಇಹ ಪರ ಪುಣ್ಯ ಪಾಪ ಧರ್ಮ ಕರ್ಮ ಸತ್ಯ ಅಸತ್ಯ ಜ್ಞಾನ ಅಜ್ಞಾನ ಹೆಣ್ಣು ಗಂಡು ಹಿರಿದು ಕಿರಿದು ಉತ್ಪತ್ತಿ-ಸ್ಥಿತಿ-ಲಯಕ್ಕೆ ಅದ್ಥಿಕಾರಿಗಳಾದ ಬ್ರಹ್ಮ-ವಿಷ್ಣು-ರುದ್ರರು ಮಾಡಿಟ್ಟರು. ಇನ್ನು ಊಧ್ರ್ವಸೃಷ್ಟಿ ಹೇಗೆಂದಡೆ : ಅಸಂಖ್ಯಾತ ಮಹಾಪ್ರಮಥಗಣಂಗಳು, ಇವರಿಗೆ ಸ್ವರ್ಗ-ನರಕವಿಲ್ಲ, ಇಹ-ಪರವಿಲ್ಲ, ಪುಣ್ಯ-ಪಾಪವಿಲ್ಲ, ಧರ್ಮ-ಕರ್ಮವಿಲ್ಲ, ಹುಸಿ-ಖರೆಯಿಲ್ಲ, ಜ್ಞಾನ-ಅಜ್ಞಾನವಿಲ್ಲ, ಹೆಣ್ಣು-ಗಂಡುವಿಲ್ಲ, ಹಿರಿದು-ಕಿರಿದುವಿಲ್ಲ, ಉತ್ಪತ್ತಿ-ಸ್ಥಿತಿ-ಲಯವಿಲ್ಲ, ಅವರಿಗೆ ಬ್ರಹ್ಮ-ವಿಷ್ಣು ರುದ್ರರು ಇಲ್ಲ. ಅವರಿಗೆ ಮತ್ತಂ, ಆ ನಿರಾಕಾರ ಪರವಸ್ತು ತಾನೆ ಗುರು-ಲಿಂಗ-ಜಂಗಮವಾಗಿ ಗುರುವಿನಲ್ಲಿ ಉತ್ಪತ್ತಿ, ಲಿಂಗದಲ್ಲಿ ಸ್ಥಿತಿ, ಜಂಗಮದಲ್ಲಿ ನಿಜೈಕ್ಯರು. ಮತ್ತೆ ಪರಶಿವಮೂರ್ತಿ ತನ್ನ ವಿನೋದಕ್ಕೆ ಆಟವ ಆಡಬೇಕಾಗಿ ಮಹದಾಕಾಶವ ಮಂಟಪವ ಮಾಡಿ, ಆಕಾಶವ ಪರದೆಯ ಕಟ್ಟಿ, ಅಸಂಖ್ಯಾತ ಪ್ರಮಥಗಣಂಗಳಿಗೆ ಮೂರ್ತವ ಮಾಡಿಸಿ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆ ಸೂತ್ರವ ಮಾಡಿ ತಮ್ಮ ಕೈಯಲ್ಲಿ ಪಿಡಿದು, ಚಿತ್ರವಿಚಿತ್ರದಾಟವ ಆಡಿಸುತ್ತಿಹುದಕ್ಕೆ ಲೆಕ್ಕವಿಲ್ಲ, ಹೇಳುವುದಕ್ಕೆ ಅಸಾಧ್ಯ. ಆ ಪ್ರಮಥಗಣಂಗಳು ನೋಡಿ, ಆ ಬೊಂಬೆಗಳೇನು ಆಡಿಹವು ? ಸೂತ್ರಿಕನು ಆಡಿಸಿದ ಹಾಂಗೆ ಆಡ್ಯಾವು. ಆ ಗೊಂಬೆಗೆ ಸೂತ್ರವಲ್ಲದೆ ಶಿವನಿಲ್ಲ. ಆ ಗೊಂಬೆಯೊಳಗೆ ಶಿವನಿದ್ದರೆ, ಆಡಿಸುವುದು ಹ್ಯಾಂಗೆ ? ಇವೆಲ್ಲವು ಅನಿತ್ಯವೆಂದು ತಿಳಿದು ಪ್ರಮಥಗಣಂಗಳು ತಮ್ಮ ಲಿಂಗದಲ್ಲಿ ನಿಜ ಮೋಕ್ಷಿಗಳಾಗಿ ಶಾಂಭವಪುರಕ್ಕೆ ಹೋದ ಭೇದವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ನಮ್ಮ ಗಣಂಗಳ ಸಹವಾಸದಿಂದೆ ಏನೇನು ಫಲಪದವಿಯಾಯಿತ್ತೆಂದಡೆ, ಅಷ್ಟಾವರಣಂಗಳು ಸಾಧ್ಯವಾದವು. ಸಾಧ್ಯವಾದ ಕಾರಣ, ಶ್ರೀಗುರುವು ಎನ್ನ ಕರಸ್ಥಲಕ್ಕೆ ಲಿಂಗವ ಕೊಟ್ಟ, ಎಂದೆಂದಿಗೂ ಸತಿ-ಪತಿ ಭಾವ ತಪ್ಪಬೇಡವೆಂದು ಗಣಂಗಳ ಸಾಕ್ಷಿಯ ಮಾಡಿ, ನೀನು ಅಂಗವಾಗಿ ಲಿಂಗವೇ ಪ್ರಾಣವಾಗಿರಿಯೆಂದು ಇಬ್ಬರಿಗೂ ಆಜ್ಞೆಯ ಮಾಡಿದ ಕಾರಣ ಎನ್ನಂಗವೇ ನಿನ್ನಂಗ, ಎನ್ನ ಪ್ರಾಣವೇ ನಿನ್ನ ಪ್ರಾಣ. ನಿನ್ನ ಪ್ರಾಣವೇ ಎನ್ನ ಪ್ರಾಣವಾದ ಮೇಲೆ ಎನ್ನ ಮಾನಾಪಮಾನ ನಿಮ್ಮದಯ್ಯಾ, ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ. ನೀವು ಈರೇಳು ಲೋಕದ ಒಡೆಯರೆಂಬುದ ನಾನು ಬಲ್ಲೆನಯ್ಯಾ. ಬಲ್ಲೆನಾಗಿ, ಪುರುಷರ ದೊರೆತನ ಹೆಂಡರಿಗಲ್ಲದೆ ಬೇರುಂಟೆ? ಎನ್ನ ಸುಖದುಃಖವೆ ನಿನ್ನದಯ್ಯ, ನಿನ್ನ ಸುಖದುಃಖವೆ ಎನ್ನದಯ್ಯ, ಅದಕ್ಕೆ ಎನ್ನ ತನುಮನಧನವ ಸೂಸಲೀಯದೆ ನಿಮ್ಮೊಡವೆ ನೀವು ಜೋಕೆಯ ಮಾಡಿಕೊಳ್ಳಿರಿ. ಜೋಕೆಯ ಮಾಡದಿದ್ದಡೆ ಗಣಂಗಳಿಗೆ ಹೇಳುವೆ, ಏಕೆಂದರೆ ಗಣಂಗಳು ಸಾಕ್ಷಿಯಾಗಿದ್ದ ಕಾರಣ. ಆಗ ಆ[ಣೆ]ಯ ಮಾತು ಹೇಳಬಹುದೆಯೆಂದಡೆ ಆಗ ಎನಗೆ ಪ್ರತ್ಯುತ್ತರವಿಲ್ಲ ಸ್ವಾಮಿ. ನಿಮ್ಮ ಒಡವೆ ನಿಮಗೆ ಒಪ್ಪಿಸುವೆನೆಂದರುಹಿದನು ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ನಿರಾಕಾರ ಪರವಸ್ತು ಹೇಗೆಂದಡೆ : ಹೆಣ್ಣಲ್ಲ ಗಂಡಲ್ಲ, ಬೀಜವಲ್ಲ ವೃಕ್ಷವಲ್ಲ, ಆಕಾರವಲ್ಲ ನಿರಾಕಾರವಲ್ಲ, ಸ್ವೇತವಲ್ಲ ಪೀತವಲ್ಲ, ಹರಿತವಲ್ಲ ಮಾಂಜಿಷ್ಟವಲ್ಲ, ಕಪೋತವಲ್ಲ, ಮಾಣಿಕ್ಯವಲ್ಲ. ಆತನು ವರ್ಣಾತೀತನು, ವಾಙ್ಮನಕ್ಕಗೋಚರನು. ಇಂತಪ್ಪ ವಸ್ತುವಿನೊಳಗೆ ಬೆರೆವ ಪರಿಯೆಂತೆಂದಡೆ : ಗುರುವಿನ ವಾಕ್ಯವಿಡಿದು ಆಚರಿಸಿದವನು ಐಕ್ಯನು. ಹೇಗೆಂದಡೆ : ಎಲೆಯಿಲ್ಲದ ವೃಕ್ಷದಂತೆ, ಸಮುದ್ರದೊಳಗೆ ನೊರೆ ತೆರೆ ಬುದ್ಬುದಾಕಾರ ಅಡಗಿದ ಹಾಗೆ ಭಕ್ತನು ಮಹೇಶ್ವರನೊಳಡಗಿ, ಆ ಮಹೇಶ್ವರನು ಪ್ರಸಾದಿಯೊಳಡಗಿ, ಆ ಪ್ರಸಾದಿಯು ಪ್ರಾಣಲಿಂಗಿಯೊಳಡಗಿ, ಆ ಪ್ರಾಣಲಿಂಗಿಯು ಶರಣನೊಳಡಗಿ, ಆ ಶರಣ ಐಕ್ಯನೊಳಡಗಿ, ಆ ಐಕ್ಯನು ನಿರವಯದೊಳು ಕೂಡಿ ಕ್ಷೀರವು ಕ್ಷೀರವ ಕೂಡಿದಂತೆ ನೀರು ನೀರ ಕೂಡಿದಂತೆ ಜ್ಯೋತಿ ಜ್ಯೋತಿಯ ಕೂಡಿದಂತೆ ಬಯಲು ಬಯಲ ಕೂಡಿ ಚಿದ್ಬಯಲುವಾಗಿ ನಿಂದ ನಿಲವ ಲಿಂಗದೊಳರುಹಿ ಮೂವತ್ತಾರುಲಿಂಗದ ಮುಖದಿಂದಾದ ಮೂವತ್ತಾರು ವಚನವ ಓದಿದವರು ಕೇಳಿದವರು ಸದ್ಯೋನ್ಮುಕ್ತರಪ್ಪುದು ತಪ್ಪದು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ನಾಲ್ಕು ವೇದ, ಆರು ಶಾಸ್ತ್ರ, ಹದಿನೆಂಟು ಪುರಾಣ, ಇಪ್ಪತ್ತೆಂಟು ದಿವ್ಯಾಗಮಂಗಳು ಇವು ಯಾಕೆ ನಿರ್ಮಾಣ ಮಾಡಿದಿರಿ ಸ್ವಾಮಿ ? ದಯದಿಂದ ಕರುಣಿಪುದು. ಕೇಳಯ್ಯ ಮಗನೆ : ಹರಿ ಸುರ ಬ್ರಹ್ಮಾದಿಗಳು ದೇವ ದಾನವ ಮಾನವರುಗಳು ಎಂಬತ್ತೆಂಟು ಕೋಟಿ ಮುನಿಗಳು ಇವರೆಲ್ಲರು ಮನವ ನಿಲಿಸಿಹೆವೆಂದು ಬಿನ್ನಹ ಮಾಡಿಕೊಳ್ಳಲು ಶಿವನು ಸರ್ವ ಶ್ರುತಿ ಸ್ಮøತಿ ಶಾಸ್ತ್ರವ ನಿರ್ಮಾಣ ಮಾಡಿದನು. 'ವೇದಾಂತತತ್ತ್ವಮಧಿಕಂ ನವನೀತಸಾರಂ' ಎಂಬುದಾಗಿ, ವೇದ ಮೊದಲಾದುವೆಲ್ಲವು ಮಜ್ಜಿಗೆ ಹಾಗೆ, ಪುರಾತನರ ವಚನಗಳು ಗುರುವಾಕ್ಯವೆಲ್ಲವು ಬೆಣ್ಣೆ ಹಾಗೆ. ಈ ಗುರುವಾಕ್ಯವಿಡಿದು ಲಿಂಗದಲ್ಲಿ ಮನವ ನಿಲಿಸಿದಡೆ ಸರ್ವ ಶಾಸ್ತ್ರವೇಕೆ ? ಮನವು ಲಿಂಗದಲ್ಲಿ ನಿಲ್ಲದಿರ್ದಡೆ, ಏನು ಮಾಡಿದಡೂ ನಿಷ್ಫಲ. ಇದನು ಮಹಾಜ್ಞಾನಿಗಳು ತಿಳಿದು ಗುರುವಿನ ಕರುಣೆಯ ಕೃಪೆಯಿಂದ ಲಿಂಗದಲ್ಲಿ ಬೆರೆದು ಲಿಂಗವೇ ತಾನು ತಾನಾಗಿ, ಜ್ಯೋತಿಗೆ ಜ್ಯೋತಿ ಕೂಡಿದಂತೆ ನಿಜಲಿಂಗೈಕ್ಯರಾದರು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ