ಅಥವಾ

ಒಟ್ಟು 14 ಕಡೆಗಳಲ್ಲಿ , 13 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳನ ಊಟದಂತೆ, ಮಯೂರನ ನಿದ್ರೆಯಂತೆ, ಮಾರ್ತಾಂಡನ ಕಿರಣದಂತೆ, ಸ್ಫಟಿಕದ ಘಟದಂತೆ, ಕಟಕದಲ್ಲಿ ತೋರುವ ಅಸಿಯ ರಸೆಯಂತೆ, ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ, ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ, ಇಪ್ಪ ಸುಳಿವ ಜಂಗಮಮೂರ್ತಿಯ ಕಂಡು ನಮೋ ನಮೋ ಎಂಬೆ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಕುಂಭ ಘಟದಂತೆ ಕುರುಹಾಗಿ, ತುಂಬಿದ ಜಲದಂತೆ ಮನವಾಗಿ, ತಂಡುಲದಂತೆ ಚಿತ್ತಶುದ್ಧವಾಗಿ, ಮಾಡುವ ಕ್ರೀ ಅಗ್ನಿಯಂತಾಗಿ. ಇಂತಿವು ಕೂಡಿ ಘಟಿಸಿ, ಕ್ರೀಜ್ಞಾನ ಶುದ್ಧವಾಗಿ ಅರಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ದೃಕ್ಕು ಗುರುವಿನ ಭಾವ, ದೃಶ್ಯ ಶಿಷ್ಯನ ಯುಕ್ತಿ. ಆತ್ಮ ಘಟದಂತೆ, ಕರ್ತೃಭೃತ್ಯಭಾವ. ಇಂತೀ ಉಭಯ ಏಕವಾದಲ್ಲಿ ನಿರ್ವೀಜ ನಿರಿಯಾಣ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಉಭಯವಾದ ಭೇದ.
--------------
ಪ್ರಸಾದಿ ಭೋಗಣ್ಣ
ಸ್ಫಟಿಕದ ಘಟದಂತೆ ಒಳಹೊರಗೆ ಒಂದೆ ಪರಿ ನೋಡಾ. ಶರಣಂಗೆ ಅಂತರಂಗ ಬಹಿರಂಗವೆಂದೆನಲುಂಟೆ? ಕಾದ ಕಬ್ಬುನದ ಘಟ್ಟಿಯಂತೆ ಶರಣನ ಸರ್ವಾಂಗವೆಲ್ಲ ಲಿಂಗವಾವರಿಸಿ ಲಿಂಗವಾಯಿತ್ತಾಗಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ ನಿಮ್ಮ ಶರಣ ಲಿಂಗಸಂಗಿಯೇ ಅಂಗಸಂಗಿಯೆಂದು ತಿಳಿಯಬಾರದು.
--------------
ಸ್ವತಂತ್ರ ಸಿದ್ಧಲಿಂಗ
ಅಕಟಾ, ರಾಟಾಳದ ಘಟದಂತೆ ಭವಾರಣ್ಯದೊಳು ತಿರುಗಿತಿರುಗಿ ಸತ್ತು ಸತ್ತು ಹುಟ್ಟುವಂತಿದ್ದೆನಯ್ಯಾ. ಅದು ಎಂತೆಂದರೆ : ಶ್ವೇದಜ ಉದ್ಬಿಜ ಜರಾಯುಜ ಅಂಡಜವೆಂಬ ನಾಲ್ಕು ತೆರದ ಮುಖ್ಯ ಆನೆ ಕಡೆ ಇರುವೆ ಮೊದಲು ಎಂಬತ್ತುನಾಲ್ಕು ಲಕ್ಷ ಜೀವರಾಶಿಯಲ್ಲಿ ಒಂದೊಂದು ಯೋನಿಯಲ್ಲಿ ಸಾವಿರಬಾರಿ ತಿರುಗಿ, ಆವಾವ ಜನ್ಮದಲ್ಲಿ ಆವಾವ ಆಹಾರವನುಂಡು, ಆವಾವ ಭೂಮಿಯಲ್ಲಿ ಪುಟ್ಟಿ, ಆವಾವ ಕರ್ಮವ ಕಂಡು, ಭಂಗ ಬಡುತ್ತಿದ್ದುದಯ್ಯಾ ಶರೀರ. ಸಾಕ್ಷಿ :``ನಾನಾಯೋನಿಸಹಸ್ರಾಣಿ ಕೃತಂ ಚೈವ ತು ಮಾಯಯಾ | ಅನೇಕಂ ವಿವಿಧಾಹಾರಂ ಪೀತಾಶ್ಚ ವಿವಿಧಾಃ ಸ್ತನಾಃ ||'' ಎಂದುದಾಗಿ, ಇಂತಪ್ಪ ಸಂಸಾರಭ್ರಾಂತಿನ ಬಲೆಯ ತೊಲಗಿಸಿ ನಿಃಸಂಸಾರಿಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋಯೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆದಿಯನಾದಿ ಆಚಾರವ ಕಾಣದೆ, ಸಮಮಾನದ ಲಿಂಗದ ಘನವ ತಿಳಿಯದೆ, ದಾಸಿಯ ಸಂಗಂಗೆಯ್ವ ಜಂಗಮಾಚಾರ್ಯಜ್ಞಾನಪುರುಷರು ಚಿತ್ತೈಸಿ, ಶೈವಾರಾದನೆಯ ಸ್ಥಲದಂತೆ ನಡೆದು, ಗಳಹಿಕೊಂಡು ಇಪ್ಪಿರಿ. ಅಂಗದನಿತ ದಾಸೆಗೆ, ಪಂತಿಯ ಗಡಣದ ಹಸುವಿನಾಸೆಗೆ, ಕಾಂಚಾಣದ ಪಂತಿಯಾಸೆಗೆ, ಸ್ಥಲ ಜಂಗಮಸ್ಥಲವಾಸಿಯ ಗಡಣದಾಸೆಗೆ, ಪಂತಿ ಪಾದಾರ್ಚನೆಯ ಹಿರಿಯತನದ ಗಡಣ ಗಮಕದಾಸೆಗೆ, ಕೃತಿಯ ದ್ವೆ ೈತವ ನಟಿಸುವ ಪಂಚಮಹಾಪಾತಕದೇವರ ದೇವತ್ವದ ಬಲ್ಲರು ಕೇಳಿರಣ್ಣ. ನಾ ದೇವತಾದೇವನೆಂಬುದೊಂದು ಸಮದೇವತ್ವದ ಗಳಹುವಿರಿ. ಅಂಗದಲ್ಲಿ ಸೋವಿ ಮಾತ್ರವೆಂಬ ಸ್ತ್ರೀಯ ಆಲಿಂಗನಂಗೈದು ಗಳಹುವಿರಿ. ಶ್ರುತಿಃ ಅರ್ಧವಣಿ ಕಥಃ ಸೋವಿ ವಚಃ ಬಾದಿನಿ ಪರ್ವಣಃ | ಪಾಪಿಷ್ಟಾ ದುಷ್ಟದ್ರೋಹಿ ಚಾ ಪಾಪಿಷ್ಟ ಗುರುದ್ರೋಹಿ ಚಾ | ಗುರುಶಿವಚ್ಚೇದನ ತತ್ ಗುರುಷಾಮಾ ಚಿ ಅಪಹಿನ್ | ಗುರುಬಂಧನ ಗ್ರಾಹಿ ಚಃ | ಇಂತೆಂದುದಾಗಿ, ಸೋವಿಮಾತ್ರವೆಂದು ವಾಗದ್ವೈತವನುಂಟುಮಾಡಿ ಕಂಡು, ತಮ್ಮ ಸ್ವಯ ಇಚ್ಛೆಯ ಭಾವಕ್ಕೆ ಗಳಹಿಕೊಂಡು, ಹಿರಿಯರ ಮರೆಯಲ್ಲಿ ಕುಳಿತು, ಒಡಲ ಹೊರೆವ ಶೂಕರನಂತೆ, ತುಡುಗುಣಿತನಕ್ಕೆ ಗಡಣಿಸಿಕೊಂಡು ಹಿರಿಯರೆಂಬಿರಿ. ಶಿವಾಚಾರ ಃ ಗಿರಿಜಾನಾಥಂಗೆ ಗೌರಿ ತ್ರಿವಿಧವಿಧಮೇಕಾರ್ಥಕಲ್ಯಾಣ, ಗಿರಿಜಾಧಾರಿಯಲ್ಲಿ ಶಿವನ ದೇವತ್ವ ಕೆಟ್ಟಿತ್ತೆ ಪಾತಕರಿರಾ? ಸೋವಿಯ ಆಲಿಂಗನಂಗೈದು, ಚುಂಬನ ಕರ ಉರ ಜಘನ ಯೋನಿಚಕ್ರವ ಕೂಡಿ ನೆರೆದ ಬಳಿಕ, ಪ್ರಾತಃಕಾಲದಲ್ಲಿ ಹನ್ನೆರಡು ಜಂಗಮದೇವರಿಗೆ ಹನ್ನೆರಡು ಸುವರ್ಣಗಾಣಿಕೆಯನಿಕ್ಕಿ, ಹನ್ನೆರಡು ದ್ವಿವಸ್ತ್ರ, ಹನ್ನೆರಡು ತೆಂಗಿನಕಾಯಿಂದ ಹನ್ನೆರಡು ಜಂಗಮದೇವರಿಗೆ ಈ ಪರಿಯಾರ್ಥ ಅರ್ಚನೆಯ ಮಾಡಿದರೆ, ನವಭೋಗದೊಳಗಣ ತ್ರಿವಿಧ ಭಾಗೆಯ ಕಲೆಯಿರಣ್ಣ. ಅರಿದು ಮಾಡಿ ಮರದಂತೆ, ಬೆಬ್ಬನೆ ಬೆರೆತುಕೊಂಡಿರುವಾತ ಹಿರಿಯನಲ್ಲ. ಆತ ಗುರುವಲ್ಲ ಲಿಂಗವಲ್ಲ ಜಂಗಮವಲ್ಲ ಪಾದೋದಕ ಪ್ರಸಾದದೊಳಗಲ್ಲ. ಅವ ಅಮೇಧ್ಯ ಸುರ ಭುಂಜಕನು. ಇಂತೆಂಬ ಶ್ರುತಿಯ ಮೀರಿ ಆಚರಿಸುವ, ಬ್ರಹ್ಮರಾಕ್ಷಸ. ನವಕೋಟಿ ಯೋನಿಚಕ್ರದಲ್ಲಿ ರಾಟಾಳದ ಘಟದಂತೆ ತಿರುಗುವನು. ಆದಿಯ ವಚನದ ಸಮ್ಮತವಿದು, ಸೋವಿಯ ಸಂಗ ಆಲಿಂಗನಂಗೈವಿರಿ. ಸೋವಿಯ ಸಂಗ ಆಲಿಂಗನಂಗೈದವ, ಶತಕೋಟಿ ಶೂಕರಯೋನಿಯಲ್ಲಿ ಬಪ್ಪನು. ನವಕೋಟಿ ಗಾರ್ಧಭಯೋನಿಯಲ್ಲಿ ಬಪ್ಪನು. ಶತಕೋಟಿ ಕುಕ್ಕುಟಯೋನಿಯಲ್ಲಿ ಬಪ್ಪನು. ಸಚರಾಚರಯೋನಿ ಯೋನಿನವಕೋಟಿ ತಪ್ಪದು. ಅವಂಗೆ ಜನ್ಮ ಜನ್ಮಾಂತರದಲ್ಲಿ ಬಪ್ಪುದು ತಪ್ಪದು. ಇಂತಿದನರಿದು ಮರೆದೆಡೆ, ದೇವ ಮತ್ರ್ಯ ತಪರ್ಲೋಕಕ್ಕೆ ಸಲ್ಲಸಲ್ಲ, ಅಲ್ಲ ನಿಲ್ಲು, ಮಾಣು, ಹೊರಗಯ್ಯ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಹೊಯ್ಯೋ ಡಂಗುರವ, ದೇವರಾಯ ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಭಕ್ತಸ್ಥಲಕ್ಕೆ ವಿಶ್ವಾಸ ಶ್ರದ್ಧೆ ಸನ್ಮಾರ್ಗ, ಮಾಹೇಶ್ವರಸ್ಥಲಕ್ಕೆ ಅಪರಾಧವಂ ಮಾಡದೆ ನಿಂದೆಗೆ ಒಡಲಲ್ಲದೆ ಅನುಸರಣೆಯ ಕಂಡು ಕೇಳಿ ತಾಳದೆ, ಪ್ರಸಾದಿಸ್ಥಲಕ್ಕೆ ಶುದ್ಧ-ಸಿದ್ಧ-ಪ್ರಸಿದ್ಧ-ಪ್ರಸನ್ನವೆಂಬುದನರಿಯದೆ ಮಲಿನ ಅಮಲಿನವೆಂಬುದ ಕಾಣದೆ ಚಿಕಿತ್ಸೆ ಜಿಗುಪ್ಸೆಯೆಂಬುದ ಭಾವಕಿಲ್ಲದೆ, ಪ್ರಾಣಲಿಂಗಿಸ್ಥಲಕ್ಕೆ ಅರ್ಪಿತ ಅನರ್ಪಿತಂಗಳನರಿದು ರಸವನೀಂಟಿದ ಘಟದಂತೆ ಅಸಿಯ ಮೊನೆಗೆ ಬಂದು ನಿಲುವಂತೆ, ಶರಣಸ್ಥಲಕ್ಕೆ ತೊಟ್ಟುಬಿಟ್ಟ ಫಳ ಮರುತ ಸಂಚಾರಿಸಿದಲ್ಲಿಯೆ ಶಾಖೆಯ ಬಿಡುವಂತೆ ಸ್ತುತಿನಿಂದೆಗಳಲ್ಲಿ ರಾಗವಿರಾಗನಾಗಿ, ಐಕ್ಯಸ್ಥಲಕ್ಕೆ ಉರಿಕೊಂಡ ಕರ್ಪುರದಂತೆ ಭ್ರಮರ ಅನುಭವಿಸಿದ ಗಂಧದಂತೆ ಭೂಸ್ಥಾಪಿತದಂತೆ, ಅನಲಕಾಷ*ಪಾಷಾಣದಂತೆ ದೃಷ್ಟವ ಕಾಬನ್ನಕ್ಕ ಷಟ್‍ಸ್ಥಲಸಂಬಂಧ. ಇಂತೀ ಸ್ಥಲಂಗಳನಾರೋಪಿಸಿದಲ್ಲಿ ಸದ್ಯೋಜಾತಲಿಂಗವು ಸಂಬಂಧನಪ್ಪನು.
--------------
ಅವಸರದ ರೇಕಣ್ಣ
ಭಕ್ತಸ್ಥಲವ ತಾಳ್ದ ಮತ್ತೆ ತ್ರಿವಿಧದಲ್ಲಿ ಆವ ಸೋಂಕು ಬಂದಡೂ ಗುರುಚರಪರದಲ್ಲಿ ಶ್ರುತದಿಂದ ಕೇಳಿ ದೃಷ್ಟದಿಂದ ಕಂಡು, ಅನುಮಾನದಿಂದ ವಿಚಾರಿಸಿಕೊಂಡರಿದಡೂ ವೃಶ್ಚಿಕದಿಂದ ನೊಂದ ಚೋರನಂತೆ ಬಾಯಿ ಮುಚ್ಚಿದಂತಿರಬೇಕು. ಮಾಹೇಶ್ವರಸ್ಥಲವ ತಾಳ್ದಲ್ಲಿ ಆವ ವ್ರತಹಿಡಿದಡೂ ತಪ್ಪಿದವರ ಕಂಡಲ್ಲಿ, ಗುರುಲಿಂಗಜಂಗಮದ ನಿಂದೆಯ ಕೇಳಿ ಕಂಡಲ್ಲಿ, ತನ್ನ ಅನುವಿಂಗೆ ಬಾರದೆ ಆಚಾರಕ್ಕೆ ಓಸರಿಸಿದವರ ಕಂಡಲ್ಲಿ, ತನ್ನ ಸ್ಥಲಕ್ಕೆ ಊಣಯವೆಂದು ಕೇಳಿದಲ್ಲಿ ಕೇಳಿದ ತೆರನ ತನ್ನ ತಾನರಿದಲ್ಲಿ, ಇದಿರಿಗೆ ಆಜ್ಞೆ ತನಗೆ ಸಾವಧಾನ ಕಡೆಯೆಂಬುದನರಿತುದು ವಿಶ್ವಲಿಂಗ ಮಾಹೇಶ್ವರಸ್ಥಲ. ಪ್ರಸಾದಿಸ್ಥಲವ ತಾಳ್ದಲ್ಲಿ, ಶುದ್ಧವೆನ್ನದೆ ಸಿದ್ಧವೆನ್ನದೆ ಪ್ರಸಿದ್ಧವೆನ್ನದೆ ಉಚಿತದಲ್ಲಿ ಚಿಕಿತ್ಸೆ ಜುಗುಪ್ಸೆಯೆನ್ನದೆ ಕಾಲರುದ್ರನಂತೆ ದಾವಾನಳನಂತೆ ಪೂರ್ಣಚಂದ್ರ ಮಹಾರ್ಣಸಿಂಧುವಿನ ತೆರದಂತೆ ನೂತನ ಇನನ ಹೋದ ಕಳೆಯಂತೆ ಬಂದುದ ನಿಂದುದ ಬಹುದ ಸಂದಿತ್ತು. ಸಾಕುಬೇಕೆನ್ನದೆ ಕರುಣದಿಂದ ಬಂದಡೆ ಕರುಣದಿಂದ ಸಾಕೆಂದು ನಿಂದಡೆ, ಪ್ರಸಾದವ ಕೊಂಡಲ್ಲಿ ಉಕ್ಕಳ ಉಬ್ಬಸ ತಬ್ಬಿಬ್ಬು ಹೋಗಿ, ವೃದ್ಧಿಗೆ ಎಡೆಯಿಲ್ಲದೆ, ಭಾಗೀರಥಿಯಂತೆ ತುಂಬಿತ್ತೆಂದು ಸೂಸದೆ ಎಲ್ಲಾ ಎಂದು ಹಿಂಗದೆ ಎಂದಿನಂತೆ ತುಂಬಿದಂತೆ ಇಪ್ಪ ನಿಜಪ್ರಸಾದಿಯ ನಿಜದಂಗಸ್ಥಲ. ಪ್ರಾಣಲಿಂಗಿಸ್ಥಲವ ತಾಳ್ದಲ್ಲಿ, ಬಿತ್ತುಳಿದ ಕಾರ್ಪಾಸದ ಹಿಕ್ಕಿದ ಮಧ್ಯದಲ್ಲಿ ಕಿಚ್ಚು ಮುಟ್ಟದಂತೆ ಪೃಥ್ವಿಯ ಪಿಪೀಲಿಕ ಮೃತ್ತಿಕೆಯ ಮುಟ್ಟಲಿಕ್ಕಾಗಿ, ಅಪ್ಪು ಒಡಗೂಡಿಯೆ ತಿಟ್ಟ ನಿಂದಂತೆ, ಕರ್ಪೂರದ ವೃಕ್ಷಕ್ಕೆ ಬುಡದಿಂದ ಕಿಚ್ಚು ಹತ್ತಿದಂತೆ, ಮಧುಮಕ್ಷಿಕದ ಚಿತ್ತವಿದ್ದಂತೆ, ಆಯುಃಕಾಂತ ಲೋಹಕ್ಕೆ ಆತ್ಮಭಾವವಿದ್ದಂತೆ, ಕೂರ್ಮನ ಶಿಶುವಿನ ಸ್ನೇಹವಿದ್ದಂತೆ, ಈ ಗುಣ ಸದ್ಭಾವದಲ್ಲಿ ಪ್ರಾಣಲಿಂಗಿಸ್ಥಲ. ಶರಣಸ್ಥಲದ ತಾಳ್ದಲ್ಲಿ, ಮದಗಜದಂತೆ ಬಿದಿರಿನ ಪಟುಭಟನಂತೆ ಮಸಗಿದ ಮಾರುತನಂತೆ ಘನಸಿಂಧು ಎಸಗಿದ ಉದ್ಭವದಂತೆ ಕಾಲಸಂಹಾರ ಲೀಲೆಯಾದಂತೆ ತಾನಿರೆಂಬ ಭಾವವ ಮರೆದು ನಿಶ್ಚಲ ನಿಜವಾದುದು ಶರಣಸ್ಥಲ. ಐಕ್ಯಸ್ಥಲವ ತಾಳ್ದಲ್ಲಿ, ಶಕ್ತಿಯಲ್ಲಿ ನಿಂದ ಅಪ್ಪುವಿನಂತೆ, ಬಿಂದುವನೊಳಕೊಂಡ ರಜ್ಜುವಿನಂತೆ ರಜ್ಜುವನೊಳಕೊಂಡ ಋತುಕಾಲದ ಸುರಂಗದ ನಿರಂಗದಂತೆ. ಸುಗಂಧವ ಕೊಂಡೊಯ್ದ ಸಂಚಾರ ಹೋಗ ಹೋಗಲಿಕ್ಕಾಗಿ ಸುಗಂಧದಂಗವಡಗಿದಂತೆ ವಿದ್ಯುಲ್ಲತೆಯ ಕುಡಿವೆಳಗಿನಂತೆ ನಿರವಯದ ಗರ್ಜನೆಯಂತೆ, ವಿಷರುಹದ ಭದ್ರದ ಸುವರ್ಣದ ನಿರ್ಧರದ ನಿರವಯದಂತೆ, ಅಂಬುಧಿಯೊಳಗಡಗಿದ ಸೂಕ್ಷ ್ಮ ಸಮಸಂಗದ ಘಟದಂತೆ, ಮಂಜಿನಪದ ಬಿಸಿಲಂಗದ ನಾಮದಲ್ಲಿ ಇಂಗಿ ಹೋದಂತೆ, ಈ ನಿರಂಗ ನಿಶ್ಚಯವಾದಲ್ಲಿ ಐಕ್ಯಸ್ಥಲ. ಇಂತೀ ಆರುಸ್ಥಲವನರಿದು ಮೂರುಸ್ಥಲದಲ್ಲಿ ನಿಂದು, ಉಭಯಸ್ಥಲ ಕೂಡಿ ಎರಡಳಿದ ಉಳುಮೆ ಪರಿಪೂರ್ಣವಸ್ತು ಬಂಧಮೋಕ್ಷ ಕರ್ಮಂಗಳಿಂದತ್ತ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 68 ||
--------------
ದಾಸೋಹದ ಸಂಗಣ್ಣ
ಆಕಾಶ ಸತ್ತಿತ್ತು, ಬಯಲು ಅತ್ತಿತ್ತು, ವಾಯು ಹೊತ್ತಿತ್ತು, ಬೆಂಕಿ ಸತ್ತ ಠಾವಿನಲ್ಲಿ ಸುಟ್ಟಿತ್ತು. ಕೈಯಿಲ್ಲದ ಮೋಟ ಹಿಡಿ ಖಂಡವ ಕೊಯ್ದ. ನಾಲಗೆಯಿಲ್ಲದೆ ಬಾಯಲ್ಲಿ ಮೆದ್ದು, ಪರಿಣಾಮವಿಲ್ಲದ ಸಂತೋಷಿಯಾದನಯ್ಯಾ, ಆ ಶರಣ. ಆತನ ಇರವು, ಇಹದಲ್ಲಿ ಅಜ್ಞಾನಿ, ಪರದಲ್ಲಿ ಸುಜ್ಞಾನಿ. ಇಹಪರವೆಂಬ ಸಂದನಳಿದಲ್ಲದೆ ಲಿಂಗವಂತನಲ್ಲ. ಲಿಂಗ ಪ್ರಾಣದ ಮೇಲೆ ನಿಂದುದಕ್ಕೆ ಸಾಕ್ಷಿ ಉರಿ ಕೊಂಡ ಕರ್ಪುರದಂತೆ, ವಿಷ ಕೊಂಡ ಘಟದಂತೆ ಘಟ ಕೊಂಡ ಸೂತ್ರದಂತೆ, ಶೌರ್ಯ ಕೊಂಡ ಪ್ರತಾಪದಂತೆ. ಹಾಂಗಿರಬೇಕು ಮನ. ಲಿಂಗ ಕೊಂಡ ಮನಕ್ಕೆ ಇದೇ ದೃಷ್ಟ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸ್ವಾನುಭಾವಿಗೆ.
--------------
ಮೋಳಿಗೆ ಮಾರಯ್ಯ
ಅರುಹಿನಾಪ್ಯಾಯನಕ್ಕೆ ಅನುಭಾವವೇ ತೃಪ್ತಿ. ಅರಿವು ನೆರೆ ಕೂಡಿ, ಆಚಾರವೆ ಪ್ರಾಣವಾಗಿ ವಿಶ್ರಮಿಸಿದ ಬಳಿಕ, ಶ್ರೀಗುರು ಕೃಪೆಮಾಡಿದ ಪ್ರಾಣಲಿಂಗದ ದುರುಶನ ಎಂತೆಂದಡೆ : ಮತ್ಸ್ಯನುಂಗಿದ ಮಾಣಿಕ್ಯದಂತೆ ಹೊಸ್ತಿಲಲೆತ್ತಿದ ಜ್ಯೋತಿಯಂತೆ ಸ್ಫಟಿಕದ ಘಟದಂತೆ, ಮುತ್ತು ನುಂಗಿದ ನೀರಿನಂತೆ ಕಣ್ಣಾಲೆ ನುಂಗಿದ ನೋಟದಂತೆ ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ ಸ್ವಾನುಭಾವಿಗಳ ಅನುಭಾವವ ತೋರಿ ಬದುಕಿಸು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸತ್ಯನ ಇರವು ಪಯದೊಳಗಣ ನವನೀತದಂತೆ, ಕೂರ್ಮೆಯ ಆಚರಣೆಯಂತೆ, ಪಳುಕಿನ ಘಟದಂತೆ. ಹೆಸರಿಡಬಾರದ ಅತೀತನ ಅಸಮಾಕ್ಷನ ಶರಣರು ನೀವೆ ಬಲ್ಲಿರಿ. ಇದ ಹೆಸರಿಡಲಂಜುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸದ್ಭಕ್ತಿಯಿಲ್ಲದ ವಿಶ್ವಾಸಹೀನನು ವಾಚಾರಚನೆಗಳಿಂದ ಮಾತಿನ ಮಾಲೆಯ ಎಷ್ಟು ನುಡಿದಡೇನು ? ಹೆಂಡದಂತೆ, ಮೃತ ಘಟದಂತೆ, ಶಿಥಿಲ ಫಳದಂತೆ ಅದಾರಿಗೆ ಯೋಗ್ಯ? ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗವು ಅವರಲ್ಲಿ ನಿಲ್ಲನಾಗಿ.
--------------
ಬಾಹೂರ ಬೊಮ್ಮಣ್ಣ
ಸ್ಫಟಿಕದ ಘಟದಂತೆ ಒಳಹೊರಗಿಲ್ಲ ನೋಡಾ ! ವಿಗಡಚರಿತ್ರಕ್ಕೆ ಬೆರಗಾದೆನು. ನೋಡುವಡೆ ಕಾಣಬರುತ್ತಿದೆ, ಮುಟ್ಟುವಡೆ ಕೈಗೆ ಸಿಲುಕದು ಹೊದ್ದುವಡೆ ಸಮೀಪ, ಸಾರಿದಡೆ ಅತ್ತತ್ತ ತೋರುತ್ತಿದೆ. ಆಕಾರ ನಿರಾಕಾರವ ನುಂಗಿ ಬಯಲ ಸಮಾಧಿಯಲ್ಲಿ ಸಿಲುಕಿತ್ತು ನೋಡಾ ! ದರ್ಶನದಿಂದ ಅಮೃತಾಹಾರವಾಯಿತ್ತು, ಬೆರಸಿದಡೆ ಇನ್ನೆಂತೊ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಭಕ್ತಿಯೆಂಬ ಸತಿಯಲ್ಲಿ ಜ್ಞಾನವೆಂಬ ಸುತ ಹುಟ್ಟಲು ಮಾಯೆಯೆಂಬ ವಾಯು ಮರಣವಾಗಲು ಶರಣ ಅರಿಕೆಗೆಟ್ಟ ನೋಡಾ. ಬೋಧಾಪ್ರಕಾಶಸ್ವರೂಪ ತನ್ನಲ್ಲೇ ತಾನು ತದ್ಗತ. ಸ್ಫಟಿಕದ ಘಟದಂತೆ ಒಳಹೊರಗೆಂಬುದಿಲ್ಲ. ಉಲುಹಡಗಿ ಶಬ್ದಮುಗ್ಧವಾದ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
-->