ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಾವು ಶಿವಪ್ರಸಾದಿಗಳೆಂದು ನುಡಿವ ಅಣ್ಣಗಳಿರಾ ನೀವು ಶಿವಪ್ರಸಾದಿಗಳೆಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಶಿವಪ್ರಸಾದದ ಕಲೆನೆಲೆಯ ಕೇಳಿರಣ್ಣ. ಗುರುಲಿಂಗಜಂಗಮದಿಂದ ವೇಧಾಮಂತ್ರಕ್ರಿಯಾದೀಕ್ಷೆಯ ಬೆಸಗೊಂಡು, ತನುಮನಪ್ರಾಣಂಗಳ ಇಷ್ಟಪ್ರಾಣಭಾವಲಿಂಗಂಗಳಿಗೆ ಮೀಸಲ ಮಾಡಿ, ನಿರ್ವಂಚಕತ್ವದಿಂದ ಸಮರ್ಪಿಸಿ, ಭೇದಭಾವವನಳಿದು, ಕ್ಷೀರಕ್ಷೀರ ಬೆರೆದಂತೆ, ಗುರುಮಾರ್ಗಾಚಾರದಲ್ಲಿ ಆಚರಿಸಬಲ್ಲಾತನೆ ಶಿವಪ್ರಸಾದಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಿತ್ಯಲಿಂಗಾರ್ಚನೆಯ ಮಾಡದೆ ಒಡಲ ಹೊರೆವನೆ ಹೊಲೆಯ. ಹತ್ತು ನುಡಿದಡೇ[ನು] ಒಂದೂ ನಿಜವಿಲ್ಲದವನೆ ಹೊಲೆಯ. ಅರ್ಥದಾಸೆಗೆ ಪ್ರಾಣವ ಹತವ ಮಾಡುವನೆ ಹೊಲೆಯ. ಸತ್ಯ ಸದ್ಗುಣ ನಿತ್ಯಾಚಾರ ಧರ್ಮವಿಲ್ಲವೆಂಬವನೆ ಹೊಲೆಯ. ಭಕ್ತಿ ಮುಕ್ತಿಯ ಪಥವ ಹುಸಿಯೆಂಬವನೆ ಹೊಲೆಯ. ನಿತ್ಯ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದವಿಲ್ಲವೆಂಬವನೆ ಹೊಲೆಯ. ಮತ್ತೆ ಪಶುಘಾತಕವ ಮಾಡುವನೆ ಹೊಲೆಯ. ಇಂತೀ ಏಳುಹೊಲೆಯ ಹಿಂಗಿಸದೆ, ತನ್ನ ಕುಲದ ಹೆಮ್ಮೆಯ ಮೆರೆವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ. ಅಕ್ಕನಾಗಾಯಿ ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮೊಗವಾಡದ ಕೇಶಿರಾಜ ಕೋಲಶಾಂತಯ್ಯ ಮೊದಲಾದ ಶಿವಗಣಂಗಳೆಲ್ಲರೂ ಬಸವರಾಜನ ಬಯಲ ಬೆರಸಿದರು. ಆ ಬಯಲ ಪ್ರಸಾದದಿಂದ, ನಿರುಪಮ ಪ್ರಭುದೇವರು ಕದಳಿಯಲ್ಲಿ ಬಯಲಾದರು. ಆ ಬಯಲ ಪ್ರಸಾದದಿಂದ, ಮೋಳಿಗೆಯ ಮಾರಯ್ಯ ಕಕ್ಕಯ್ಯ ಪಡಿಹಾರಿ ಉತ್ತಣ್ಣ ಕನ್ನದ ಮಾರಣ್ಣ ಕಲಕೇತ ಬೊಮ್ಮಣ್ಣ ನುಲಿಯ ಚಂದಯ್ಯ ಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತ ರಾಮಯ್ಯ ಮೇದರ ಕೇತಯ್ಯ ಮೊದಲಾದ ಏಳುನೂರೆಪ್ಪತ್ತು ಅಮರಗಣಂಗಳ ದಂಡು, ಕೈಲಾಸಕ್ಕೆ ನಡೆಯಿತ್ತು, ಬಂದ ಮಣಿಹ ಪೂರೈಸಿತ್ತು. ಸಂದ ಪುರಾತನರೆಲ್ಲರು ಎನ್ನ ಮನದ ಮೈಲಿಗೆಯ ಕಳೆದ ಕಾರಣ, ಕಲಿದೇವರದೇವಯ್ಯಾ, ಇವರೆಲ್ಲರ ಒಕ್ಕಮಿಕ್ಕಪ್ರಸಾದದ ಬಯಲು ಎನಗಾಯಿತ್ತು.
--------------
ಮಡಿವಾಳ ಮಾಚಿದೇವ
ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದಿತ್ತು. ಅರ್ಥ ಪ್ರಾಣ ಅಬ್ಥಿಮಾನ ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದಿತ್ತು. ಅಂಗಲಿಂಗಸಂಗ ನಿಮ್ಮ ಜಂಗಮಮೂರ್ತಿಯಲ್ಲಿಯೆ ನಿಂದವು. ಎನ್ನ ನಡೆಗೆಟ್ಟಿತ್ತು, ನಿಮ್ಮ ಜಂಗಮಮೂರ್ತಿಯಿಂದ. ಎನ್ನ ನುಡಿಗೆಟ್ಟಿತ್ತು, ನಿಮ್ಮ ಜಂಗಮಮೂರ್ತಿಯಿಂದ. ಎನ್ನ ನೋಟಗೆಟ್ಟಿತ್ತು, ನಿಮ್ಮ ಜಂಗಮಮೂರ್ತಿಯಿಂದ. ಎನ್ನ ಮಾಟ ಸಮಾಪ್ತವಾಯಿತ್ತು, ನಿಮ್ಮ ಜಂಗಮಮೂರ್ತಿಯಿಂದ. ನಿಮ್ಮ ಪ್ರಸಾದದಿಂದ ಎನ್ನ ತನು ಶುದ್ಧವಾಯಿತ್ತು. ಬಸವಣ್ಣನ ತೋರಿದ ಕಾರಣ, ನಿಮ್ಮ ಜಂಗಮಮೂರ್ತಿಯ ಕಂಡು, ಬದುಕಿದೆನು ಕಾಣಾ, ಕಲಿದೇವರದೇವಯ್ಯಾ.
--------------
ಮಡಿವಾಳ ಮಾಚಿದೇವ
ನೆನೆವೆನಯ್ಯಾ, ಲೋಹ ಪರುಷದ ಸಂಗದಂತಾಯಿತ್ತಾಗಿ. ಬಸವಾ ಬಸವಾ ಬಸವಾ ಎಂಬ ಶಬ್ದದೊಳಗೆ
--------------
ಮಡಿವಾಳ ಮಾಚಿದೇವ
ನರರ ಹೊಗಳಿದಡೆ ಗತಿಯಿಲ್ಲ, ಸುರರ ಹೊಗಳಿದಡೆ ಗತಿಯಿಲ್ಲ. ಹರಿ ಬ್ರಹ್ಮ ಇಂದ್ರ ಚಂದ್ರಾದಿಗಳ ಹೊಗಳಿದಡೆ ಗತಿಯಿಲ್ಲ. ಪರಸತಿ ಪರಧನಂಗಳಿಗಳುಪಿ, ದುರ್ಯೋಧನ ಕೀಚಕ ರಾವಣರೆಂಬವರು ಮರಣವಾಗಿ ಹೋದವರ ಸಂಗತಿಯ ಹೇಳಿಕೇಳಿದಡೇನು ಗತಿಯಿಲ್ಲ. ಶ್ರೀಗುರುವಿನ ಚರಣವನರಿಯದ ಕಿರುಕುಳದೈವದ ಬೋಧೆಯ ಹೇಳಿ, ಆನು ಬದುಕಿದೆನೆಂಬ ಕವಿ ಗಮಕಿ ನಾನಲ್ಲ. ಹರ ನಿಮ್ಮ ನೆನೆವ ಶರಣರ ಚರಣದ ಗತಿಯಲ್ಲಿಪ್ಪೆನೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ನಿನ್ನ ಆಕಾರ ನಿರಾಕಾರವಾಯಿತಲ್ಲಾ ಬಸವಣ್ಣ. ನಿನ್ನ ಪ್ರಾಣ ನಿಃಪ್ರಾಣವಾಯಿತಲ್ಲಾ ಬಸವಣ್ಣ. ಲಿಂಗ ಜಂಗಮದ ಮಾಟ ಸಮರ್ಪಿತವಾಯಿತಲ್ಲಾ ಬಸವಣ್ಣ. ನಿಶ್ಶಬ್ದವೇದ್ಯವಾದೆಯಲ್ಲಾ ಬಸವಣ್ಣ. ಕಲಿದೇವರದೇವನ ಹೃದಯಕಮಲವ ಹೊಕ್ಕು, ದೇವರಿಗೆ ದೇವನಾಗಿ ಹೋದೆಯಲ್ಲಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ನೆನೆವೆನಯ್ಯಾ ಬಸವಣ್ಣ, ನಿಮ್ಮ ಚರಣವೆನ್ನ ಮನದಲ್ಲಿ ಸಾಹಿತ್ಯವಹನ್ನಕ್ಕ. ನೋಡುವೆನಯ್ಯಾ ಬಸವಣ್ಣ, ನಿಮ್ಮ ಮೂರ್ತಿ ಎನ್ನನವಗವಿಸುವನ್ನಕ್ಕ. ಪೂಜಿಸುವೆನಯ್ಯಾ ಬಸವಣ್ಣ, ನಿಮ್ಮ ಪ್ರಸಾದವೆನ್ನ ತನುವಹನ್ನಕ್ಕ. ನಿಮ್ಮ ಆಹ್ವಾನಿಸುವೆನಯ್ಯಾ ಬಸವಣ್ಣ, ಅನಿಮಿಷ ನಿಮಿಷ ನಿಮಿಷಗಳಿಲ್ಲವೆಂದೆನಿಸುವನ್ನಕ್ಕ. ನಿಮ್ಮ ಧ್ಯಾನಿಸುವೆನಯ್ಯಾ ಬಸವಣ್ಣ, ಜ್ಞಾನಜ್ಞಾನವಿಲ್ಲವೆನಿಸುವನ್ನಕ್ಕ. ನಿಮ್ಮ ಮೂರ್ತಿಗೊಳಿಸುವೆನಯ್ಯಾ ಬಸವಣ್ಣ, ಅಹಂ ಸೋಹಂ ಎಂಬ ಶಬ್ದವುಳ್ಳನ್ನಕ್ಕ. ಬಸವಣ್ಣಾ ಎಂದು ಹಾಡುವೆನಯ್ಯ,
--------------
ಮಡಿವಾಳ ಮಾಚಿದೇವ
ನಾವು ಪ್ರಾಣಲಿಂಗಿಗಳೆಂದು ಹೇಳುವ ಅಣ್ಣಗಳಿರಾ, ನೀವು ಪ್ರಾಣಲಿಂಗಿಗಳು ಎಂತಾದಿರಿ ಹೇಳಿರಣ್ಣ? ಅರಿಯದಿರ್ದಡೆ ಕೇಳಿರಣ್ಣ, ಪ್ರಾಣಲಿಂಗವಾದ ಭೇದಾಭೇದವ. ಕಾಯದ ಕಳವಳದಲ್ಲಿ ಕೂಡದೆ, ಮನದ ಭ್ರಾಂತಿಗೊಳಗಾಗದೆ, ಕರಣಂಗಳ ಮೋಹಕ್ಕೀಡಾಗದೆ, ಪ್ರಾಣನ ಪ್ರಪಂಚಿನಲ್ಲಿ ಬೆರೆಯದೆ, ಜೀವನ ಬುದ್ಧಿಯಲ್ಲಿ ಮೋಹಿಸದೆ, ಹಂಸನ ಆಸೆಗೊಳಗಾಗದೆ ನಿಷ್ಪ್ರಪಂಚಿಯಾಗಿ, ಗುರುಲಿಂಗಜಂಗಮದ ಪಾದೋದಕಪ್ರಸಾದದಲ್ಲಿ ಅತಿಕಾಂಕ್ಷೆವುಳ್ಳಾತನಾಗಿ, ತ್ರಿವಿಧಲಿಂಗದಲ್ಲಿ ಸೂಜಿಗಲ್ಲಿನಂತೆ, ಎರಕತ್ವವುಳ್ಳಾತನಾಗಿಪ್ಪಾತನೆ ಲಿಂಗಪ್ರಾಣಿ ನೋಡಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಮಗೆ ಲಿಂಗವುಂಟು, ನಾವು ಲಿಂಗವಂತರೆಂದು ನುಡಿವರು. ಮತ್ತೆ ಮರಳಿ ಭವಿಶೈವದೈವಂಗಳಿಗೆರಗುವ ಈ ಮಂಗಮಾನವರನೇನೆಂಬೆನಯ್ಯಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಂದೀಶ್ವರದೇವರು, ಭೃಂಗೀಶ್ವರದೇವರು, ವಾಗೀಶ್ವರದೇವರು, ಅಂಗೇಶ್ವರದೇವರು, ಸೂರಿದತ್ತದೇವರು ಇಂತೀ ಎಲ್ಲಾ ಗಣಂಗಳ ಮಧ್ಯಸ್ಥಾನಕ್ಕೆ ತಂದು, ಬಸವಣ್ಣ ಸಂಪೂರ್ಣನಾದ ಪರಿಯ ನೋಡಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ನಿರಾಳ ನಿತ್ಯವೆಲ್ಲಾ ಸ್ಥಾನ ಚೆನ್ನಾಯಿತ್ತು. ಎಲ್ಲಾ ಗಣಂಗಳು ಚೆನ್ನಾದರು. ಸಿದ್ಧಗಣ ಮಂದಿರಗಣ ಚೆನ್ನಾಯಿತ್ತು. ತಾಂಡವ ಅಂಡವ ಚೆನ್ನಾಯಿತ್ತು. ತ್ರಿಕಾಂಡವ ಭೂಕಾಂಡವ ಚೆನ್ನಾಯಿತ್ತು. ದೇವಲೋಕ ಮತ್ರ್ಯಲೋಕ ಚೆನ್ನಾಯಿತ್ತು. ದೇವಗಣಂಗಳು ಶಿವಗಣಂಗಳು ಚೆನ್ನಾಯಿತ್ತು. ಮಹಾಲೋಕದ ಮಹಾಗಣಂಗಳು ಚೆನ್ನಾಯಿತ್ತು. ಅತೀತ ಆಚಾರ ಘನ ಚೆನ್ನಾಯಿತ್ತು. ಪ್ರಸಾದ ನಿರವಯ ಜಂಗಮ ಚೆನ್ನಾಯಿತ್ತು. ಗಂಗಾ ಬಸವ ಚೆನ್ನಾಯಿತ್ತು. ಅನಾಗತಮೂರ್ತಿಯಾದ ಆಕಾರವನು ಕರಸ್ಥಲದಲ್ಲಿ ಹಿಡಿದು, ಬೆಳಗಾಗಿರ್ದ ಜ್ಞಾನ ಚೆನ್ನಾಯಿತ್ತು. ಮಾಡಿದ ಎನ್ನನು ಚೆನ್ನ ಮಾಡಿದ, ಕಲಿದೇವಾ, ನಿಮ್ಮ ಶರಣ ಬಸವ ಚೆನ್ನಬಸವನು.
--------------
ಮಡಿವಾಳ ಮಾಚಿದೇವ
ನಾವು ಲಿಂಗೈಕ್ಯ, ಲಿಂಗಾನುಭಾವಿಗಳೆಂದು ಹೇಳುವ ಅಣ್ಣಗಳಿರಾ ನೀವು ಲಿಂಗೈಕ್ಯ ಲಿಂಗಾನುಭಾವಿಗಳು ಎಂತಾದಿರಿ ಹೇಳಿರಣ್ಣ. ಅರಿಯದಿರ್ದಡೆ ಗುರುಕೃಪೆಯಿಂದ ಹೇಳಿಹೆನು ಕೇಳಿರಣ್ಣ, ಲಿಂಗೈಕ್ಯ, ಲಿಂಗಾನುಭಾವದ ಭೇದಾದಿಭೇದವ. ಸರ್ವಸಂಗಪರಿತ್ಯಾಗವ ಮಾಡಬೇಕು. ಲೋಕಾಚಾರವ ಮುಟ್ಟದಿರಬೇಕು. ನುಡಿಯಂತೆ ನಡೆ ದಿಟವಾಗಬೇಕು. ಸರ್ವಾಚಾರಸಂಪತ್ತಿನಾಚರಣೆಯ, ಸದ್ಗುರು ಮುಖದಿಂದರಿತು ಆಚರಿಸಬೇಕು. ನಾನಾರು, ನನ್ನ ಜೀವವೇನು, ನಾ ಬಂದ ಮುಕ್ತಿದ್ವಾರವಾವುದು? ನಾ ಹೋಗುವ ನಿಜಕೈವಲ್ಯಪದವಾವುದು? ನನ್ನಿರವೇನೆಂದು ಅರಿದಾಚರಿಸಬಲ್ಲಾತನೆ, ನಿಜಲಿಂಗೈಕ್ಯ ಲಿಂಗಾನುಭಾವಿ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಾವು ಸದ್ವೀರಮಾಹೇಶ್ವರರೆಂದು ಹೇಳುವ ಅಣ್ಣಗಳಿರಾ ನಿಮ್ಮ ವೀರಮಾಹೇಶ್ವರತ್ವದ ಕುರುಹ ಹೇಳಿರಣ್ಣ. ಅರಿಯದಿರ್ದಡೆ ಸದ್ವೀರಮಾಹೇಶ್ವರತ್ವದ ಕುರುಹ ಕೇಳಿರಣ್ಣ. ಪಂಚಮಹಾಪಾತಕಂಗಳ ಬೆರಸದೆ, ಪೂರ್ವವಳಿದು ಪುನರ್ಜಾತರಾದ ಸದ್ಭಕ್ತರಲ್ಲಿ ಪಂಚಸೂತಕಂಗಳ ಕಲ್ಪಿಸದೆ, ಪಂಚಾಚಾರಂಗಳ ಭೇದಿಸಿ, ಅನಾಚಾರಂಗಳ ಸಂಹರಿಸಿ, ತನ್ನ ನಿಜಚಿತ್ಕಳೆಗಳ ತೋರಿಸಿ, ಅವರ ಗೃಹವ ಪೊಕ್ಕು, ಪಾದೋದಕಪ್ರಸಾದವ ಕೊಟ್ಟು ಕೊಳಬಲ್ಲಾತನೆ ಸದ್ವೀರಮಾಹೇಶ್ವರ ನೋಡಾ. ಕಲಿದೇವರದೇವಾ
--------------
ಮಡಿವಾಳ ಮಾಚಿದೇವ
ನಿರಾಳ ನಿರ್ಮಾಯ ಘನವಸ್ತುವೆ, ನಿಮ್ಮ ಬೆಳಗನುಗುಳಿದಡೆ ಪ್ರಸಾದವಾಯಿತ್ತಲ್ಲಾ. ನಿಮ್ಮುಗುಳಿನ ಕಿಂಚಿತ್ ಸಿಲುಕಿನಿಂದ, ಅಕ್ಷರಂಗಳು ಮೂರು ಹುಟ್ಟಿದವು. ನಿಮ್ಮುಗುಳಿನ ಸಿಲುಕಿನಿಂದ ನಾದಬಿಂದುಕಳೆಗಳಾದವು. ಅಯ್ಯಾ ನಿಮ್ಮುಗುಳಿನ ಸಿಲುಕಿನಿಂದ, ಇಬ್ಬರು ಹೆಣ್ಣು ಗಂಡು ಮಕ್ಕಳಾದರು. ಆ ಇಬ್ಬರು ಮಕ್ಕಳಿಂದೈವರು ಮಕ್ಕಳಾದರು. ನಿಮ್ಮುಗುಳ ಎಂಜಲೆಂದವರ ಕಣ್ಣು ಕಪ್ಪಾದವು. ಅಯ್ಯಾ ನಿಮ್ಮುಗುಳೆ ಘನಪ್ರಸಾದವೆಂದರಿದೆನು ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಾವು ಶಿವಭಕ್ತರೆಂದು ಹೇಳುವ ಅಣ್ಣಗಳಿರಾ ನೀವು ಶಿವಭಕ್ತರೆಂತಾದಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಶಿವಭಕ್ತನಾದ ನೆಲೆಕಲೆಯ. ಆರುವೈರಿಗಳ ಮುರಿಗಟ್ಟಿ, ಅಷ್ಟಮದವ ಜಳ್ಳು ಮಾಡಿ ತೂರಿ, ಸಪ್ತವ್ಯಸನಂಗಳ ಕಂಕಣವ ಮುರಿದು, ಸದ್ಭಕ್ತಿ ನೆಲೆಕಲೆಯ ತಿಳಿದು, ಅಷ್ಟಾವರಣದ ಗೊತ್ತು ಮುಟ್ಟಿನೋಡಿ, ಪಂಚಾಚಾರ ಭೇದವ ತಿಳಿದು, ಷಡ್ವಿಧಲಿಂಗಾಂಗದ ಮೂಲವನರಿದು, ಷಡ್ವಿಧ ಅರ್ಪಿತಾವಧಾನವನಾಚರಿಸಿ, ಷಟ್ಸ್ಥಲಮಾರ್ಗವಿಡಿದು ಆಚರಿಸುವ ಸದ್ಭಕ್ತರಿಗೆ ಅತಿಭೃತ್ಯರಾಗಿ, ಹಮ್ಮುಬಿಮ್ಮುಗಳಿಲ್ಲದೆ, ನಡೆನುಡಿಸಂಪನ್ನರಾದವರೆ ಶಿವಭಕ್ತರು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಾವು ಶರಣರೆಂದು ಒಪ್ಪವಿಟ್ಟು ನುಡಿವ ಅಣ್ಣಗಳಿರಾ ನೀವು ಶರಣರಾದ ಭೇದವ ಹೇಳಿರಣ್ಣ. ಅರಿಯದಿರ್ದಡೆ ಕೇಳಿರಣ್ಣ, ಶರಣತ್ವದ ಭೇದಾಭೇದವ. ತನುವಿನ ಕಾಂಕ್ಷೆಯ ಸುಟ್ಟುರುಹಿ, ಮನದ ಲಜ್ಜೆಯ ಮರೆದು, ಭಾವದ ಭ್ರಮೆಯ ಹೊಟ್ಟುಮಾಡಿ ತೂರಿ, ಸದ್ಭಕ್ತಿ ನಿಜನೈಷೆ*ಯ ತಿಳಿದು, ಸತಿಸುತರಿಗೆ ಸದಾಚಾರದ ಸನ್ಮಾರ್ಗವ ತೋರಿ, ಗುರುಲಿಂಗಜಂಗಮವೆ ಮನೆದೈವ ಮನದೈವ ಕುಲದೈವವೆಂದು ಭಾವಿಸಿ, ನಿರ್ವಂಚಕತ್ವದಿಂದ ಅರಿದಾಚರಿಸಬಲ್ಲಾತನೆ, ಅಚ್ಚಶರಣ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ. ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ, ಮೀರಿನಿಂದ ವಿರಕ್ತನ ವಿಚಾರದ ಭೇದವ. ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ, ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು, ಆ ಚಿನ್ಮಂತ್ರ ಬಲದಿಂದ ಊಧ್ರ್ವಕ್ಕೆ ಮುಖವ ಮಾಡಿ, ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು. ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು. ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ, ಪ್ರಸಾದಮಂತ್ರವ ಪಡೆದು, ಸದ್ಭರ್ಮರೂಪದಿಂದಿರಬೇಕು. ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು, ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಿಜಸ್ವಯಂಭು ಕಲಿದೇವಂಗೆ ಪಂಚಾಮೃತದ ಮಾಡುವೆ. ಕ್ಷೀರಾಧಾರದ ಕೊಡನನು ಅಷ್ಟಾದ್ವಯವೆಂಬ ಸ್ತ್ರೀಯರ ಕೈಯ ಹಿಡಿಸುವೆ. ಧಾರಾಪೂರ್ವದಲ್ಲಿದ್ದ ಮಧುವನು ಧೀರನ ಕೈಯ ಹಿಡಿಸುವೆ. ಇವರು ಸಹಿತ ಪಂಚಾಮೃತವಾಯಿತ್ತು ಕಲಿದೇವಂಗೆ.
--------------
ಮಡಿವಾಳ ಮಾಚಿದೇವ
ನವಸಾರ ಅಷ್ಟಸಾರ ದಶಸಾರ ಪಂಚಸಾರ ಚತುಸ್ಸಾರ ಏಕಸಾರ. ಇಂತಿವನತಿಗಳೆದ ಮಹಾಮಹಿಮನ ನಿಲವು, ಲಿಂಗದಲ್ಲಿ ಸಂಪೂರ್ಣ, ಜಂಗಮದಲ್ಲಿ ಅತಿಸಹಜ, ಪ್ರಸಾದದಲ್ಲಿ ತದ್ಗತ. ಇಂತು ಸರ್ವಾಂಗದಲ್ಲಿ ಸಂಪೂರ್ಣನಾದ ನಿಜೈಕ್ಯನ ನಿಲವು ಸುಜ್ಞಾನ. ಸುಜ್ಞಾನಸಿಂಹಾಸನದ ಮೇಲೆಯಿದ್ದು ನಿಶ್ಚಿಂತನಾಗಿ ಇಪ್ಪುದು, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಿತ್ಯ ಸತ್ಯದೊಳಡಗಿ, ಸತ್ಯ ಸದಾಚಾರದೊಳಡಗಿ, ಆಚಾರ ಅನುಭಾವದೊಳಡಗಿ, ಅನುಭಾವ ಜ್ಞಾನದೊಳಡಗಿ, ಮಹಾಜ್ಞಾನ ಮನೋಲಯದೊಳಡಗಿ, ಮನೋಲಯವೇ ಮಹಾಘನವಾಯಿತ್ತು, ಕಲಿದೇವರದೇವಾ, ನಿಮ್ಮ ನಿಜೈಕ್ಯವು.
--------------
ಮಡಿವಾಳ ಮಾಚಿದೇವ