ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಣ್ಣು ನೋಡಿ ರೂಪ ಹೇಳದಂತಿರಬೇಕು. ಕಿವಿ ಕೇಳಿ ಶಬ್ದವ ನುಡಿಯಲರಿಯದಂತಿರಬೇಕು. ಮನವುಂಡು ಡರ್ರನೆ ತೇಗಿ ರುಚಿಯ ಪೇಳಲರಿಯದಂತಿರಬೇಕು. ಮನವ ತೋರುವ ಗುರುವಿನ ಕಾರುಣ್ಯದನುವ ಕಾಬ ಶಿಷ್ಯಂಗೆ, ಮನೋಮೂರ್ತ ಮುನ್ನವೆಯಾಯಿತ್ತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕರಸ್ಥಲದ ದೇವನಿದ್ದಂತೆ ಧರೆಯ ಮೇಲಣ ಪ್ರತಿಷ್ಠೆಗೆರಗುವ ಈ ನರಕಿನಾಯಿಗಳನೇನೆಂಬೆನಯ್ಯಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕರಸ್ಥಲ ಕಂಠಸ್ಥಲ ಕರ್ಣಸ್ಥಲ ಮಧ್ಯಸ್ಥಲ ಮಹಾಸ್ಥಲ. ಇಂತೀ ಐದು ಸ್ಥಲಂಗಳನು ಮಹಾಸ್ಥಲಕ್ಕೆ ತಂದು, ಬಸವಣ್ಣ ಸಂಪೂರ್ಣವಾದ ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಕಾಯದಲ್ಲಿ ನಿಂದ ಶರಣಂಗೆ ಸೇವೆಯವರ ತಪ್ಪ ಹಿಡಿದೆನೆಂದಡೆ ಕಾಯಕವೆಂತು ನಡೆವುದಯ್ಯಾ ? ಅವಗುಣಕ್ಕೆ ಮುನಿಯಬೇಕಲ್ಲದೆ ಲಾಂಛನಕ್ಕೆ ಮುನಿಯಬೇಕೆ ? ಮುಗ್ಗಿದ ತುರಗನ ಕಾಲ ಕತ್ತರಿಸಿದವರುಂಟೆ ? ಕಚ್ಚುವ ತಿಗುಣೆಗಾಗಿ ಮನೆಯ ಸುಟ್ಟವರುಂಟೆ ? ಕಲಿದೇವರದೇವನಲ್ಲಿ ತಪ್ಪ ಹಿಡಿಯಲಿಲ್ಲ, ಕೇಳಾ ಚಂದಯ್ಯ.
--------------
ಮಡಿವಾಳ ಮಾಚಿದೇವ
ಕೃತಯುಕ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳಲ್ಲಿ ಬಸವನೆ ಭಕ್ತ, ಪ್ರಭುವೆ ಜಂಗಮವೆಂಬುದಕ್ಕೆ ಭಾವಭೇದವಿಲ್ಲವೆಂಬುದು ತಪ್ಪದು ನೋಡಯ್ಯಾ. ಕಲಿಯುಗದಲ್ಲಿ ಶಿವಭಕ್ತಿಯನು ಪ್ರಬಲವ ಮಾಡಬೇಕೆಂದು ಮತ್ರ್ಯಲೋಕಕ್ಕೆ ಇಳಿದು, ಶೈವಾಗಮಾಚಾರ್ಯ ಮಂಡಗೆಯ ಮಾದಿರಾಜನ ಸತಿ ಮಾದಾಂಬಿಕೆಯ ಗರ್ಭದಿಂದವತರಿಸಿದ. ಬಸವಣ್ಣನೆಂಬ ನಾಮಕರಣವಂ ಧರಿಸಿ, ಕೂಡಲಸಂಗಮದೇವರ ದಿವ್ಯ ಶ್ರೀಪಾದಪದ್ಮಾರಾಧಕನಾಗಿ, ಮತ್ರ್ಯಕ್ಕೆ ಪ್ರತಿಕೈಲಾಸವೆಂಬ ಕಲ್ಯಾಣಮಂ ಮಾಡಿ, ತನ್ನ ಪರೀಕ್ಷೆಗೆ ಬಿಜ್ಜಳನೆಂಬ ಒರೆಗಲ್ಲ ಮಾಡಿ, ಆ ಸದ್ಭಕ್ತಿ ಬಿನ್ನ[ಹ]ವನು ಒರೆದೊರೆದು ನೋಡುವ ಕೊಂಡೆಯ ಮಂಚಣ್ಣಗಳ ಪುಟ್ಟಿಸಿದ ಬಸವಣ್ಣ. ಕಪ್ಪಡಿಯ ಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು ಸರ್ವಾಚಾರಸಂಪನ್ನನಾಗಿ ಇರುತ್ತಿರೆ, ಶಿವನಟ್ಟಿದ ನಿರೂಪಮಂ ಓದಿ, ಅರವತ್ತುಕೋಟಿ ವಸ್ತುವಂ ತೆಗೆಸಿ, ಬಿಜ್ಜಳಂಗೆ ದೃಷ್ಟಮಂ ತೋರಿ, ಶಿರಪ್ರಧಾನನಾಗಿ, ಶಿವಾಚಾರ ಶಿರೋಮಣಿಯಾಗಿ, ಏಳುನೂರಯೆಪ್ಪತ್ತು ಅಮರಗಣಂಗಳಿಗೆ ಪ್ರಥಮದಂಡನಾಯಕನಾಗಿ, ಗುರುಲಿಂಗಜಂಗಮಕ್ಕೆ ತನುಮನಧನವಂ ನಿವೇದಿಸಿ, ಅನವರತ ಶಿವಗಣ ತಿಂಥಿಣಿಯೊಳು ಓಡಾಡುತ್ತಿಪ್ಪ ಆ ಬಸವಣ್ಣ, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದ ಪಾದೋದಕ ಪ್ರಸಾದದಲ್ಲಿ ನಿಯತನಾಗಿ, ಅವರವರ ನೇಮದಿಚ್ಫೆಗಳು ಸಲಿಸಿ, ಒಲಿದು ಮಾಡುವ ದಾಸೋಹದ ಪರಿಯೆಂತೆಂದಡೆ : ಹಾಲನೇಮದವರು ಹನ್ನೆರಡುಸಾವಿರ. ಘಟ್ಟಿವಾಲ ನೇಮದವರು ಹನ್ನೆರಡುಸಾವಿರ. ಪಂಚಾಮೃತಗಳ ಒಲಿದು ಲಿಂಗಕ್ಕೆ ಸಲಿಸುವ ನೇಮದವರು ಹನ್ನೆರಡುಸಾವಿರ. ಕಟ್ಟುಮೊಸರ ನೇಮದವರು ಹನ್ನೆರಡುಸಾವಿರ. ಘಟ್ಟಿದುಪ್ಪದ ನೇಮದವರು ಆರುಸಾವಿರ. ತಿಳಿದುಪ್ಪದ ನೇಮದವರು ಆರುಸಾವಿರ. ಚಿಲುಮೆಯಗ್ಘವಣಿಯ ನೇಮದವರು ಹನ್ನೆರಡುಸಾವಿರ. ಪರಡಿ ಸಜ್ಜಿಗೆಯ ನೇಮದವರು ಹನ್ನೆರಡುಸಾವಿರ ಕಟ್ಟುಮಂಡಗೆಯ ನೇಮದವರು ಹನ್ನೆರಡುಸಾವಿರ. ಎಣ್ಣೆಹೂರಿಗೆಯ ನೇಮದವರು ಹನ್ನೆರಡುಸಾವಿರ. ವಡೆ ಘಾರಿಗೆಯ ನೇಮದವರು ಹನ್ನೆರಡುಸಾವಿರ. ಹಾಲುಂಡೆ ಲಡ್ಡುಗೆಯ ನೇಮದವರು ಹನ್ನೆರಡುಸಾವಿರ. ತವರಾಜ ಸಕ್ಕರೆಯ ನೇಮದವರು ಹನ್ನೆರಡುಸಾವಿರ. ಷಡುರಸಾಯನದ ನೇಮದವರು ಹನ್ನೆರಡುಸಾವಿರ. ದ್ರಾಕ್ಷೆ ಮಾವು, ಖರ್ಜೂರ, ಹಲಸು, ದಾಳಿಂಬ ಇಕ್ಷುದಂಡ ಕದಳಿ ಮೊದಲಾದ ಫಲದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಪ್ಪೆಯ ನೇಮದವರು ಹನ್ನೆರಡುಸಾವಿರ. ಸರ್ವದ್ರವ್ಯಂಗಳ ನೇಮದವರು ಹನ್ನೆರಡುಸಾವಿರ. ಸಮಯಾಚಾರ ಸಹಿತ ಲಿಂಗಾರ್ಚನೆ ಮಾಡುವ ನಿತ್ಯನೇಮಿಗಳು ಹದಿನಾರುಸಾವಿರ. ಇಂತು ಎಡೆಬಿಡುವಿಲ್ಲದೆ ಲಿಂಗಾರ್ಚನೆಯ ಮಾಡುವ ಜಂಗಮ ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಆ ಬಸವಣ್ಣನ ಸಮಯಾಚಾರದಲ್ಲಿ ಕುಳ್ಳಿರ್ದು, ಲಿಂಗಾರ್ಚನೆಯ ಮಾಡುವ ಸಮಯಾಚಾರಿಗಳು ಮೂವತ್ತಾರು ಸಾವಿರ. ಅಂತು ಎರಡುಲಕ್ಷ ಮೂವತ್ತೆರಡು ಸಾವಿರ ಶಿವಗಣತಿಂಥಿಣಿಗೆ ಒಲಿದು ದಾಸೋಹಮಂ ಮಾಡುತ್ತ, ಪ್ರಸಾದ ಪಾದೋದಕದೊಳೋಲಾಡುತ್ತ, ಸುಖಸಂಕಧಾವಿನೋದದಿಂದ ಭಕ್ತಿಸಾಮ್ರಾಜ್ಯಂಗೆಯ್ವುತ್ತಿರಲು, ಶಿವಭಕ್ತಿಕುಲಕತಿಲಕ ಶಿವಭಕ್ತಿ ಶಿರೋಮಣಿಯೆಂಬ ಚೆನ್ನಬಸವಣ್ಣನವತರಿಸಿ ಶೈವಮಾರ್ಗಮಂ ಬಿಡಿಸಿ, ಪ್ರಾಣಲಿಂಗ ಸಂಬಂಧಮಂ ತೋರಿಸಿ, ಸರ್ವಾಂಗ ಶಿವಲಿಂಗ ಪ್ರಾಣಪ್ರಸಾದ ಭೋಗೋಪಭೋಗದ ಭೇದಮಂ ತೋರಿಸಿ, ದಾಸೋಹದ ನಿರ್ಣಯಮಂ ಬಣ್ಣವಿಟ್ಟು ಬೆಳಗಿ ತೋರಿ, ಪಾದೋದಕ ಪ್ರಸಾದಮಂ ಕೊಳ ಕಲಿಸಿ, ಗುರುಲಿಂಗಜಂಗಮದ ಘನಮಂ ತೋರಿಸಿ, ಶರಣಸತಿ ಲಿಂಗಪತಿಯೆಂಬುದಂ ಸಂಬಂಧಿಸಿ ತೋರಿ, ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯನೆಂಬ ಷಡುಸ್ಥಲಮಂ ಸರ್ವಾಂಗದೊಳು ಪ್ರತಿಷಿ*ಸಿ ತೋರಿ ಸಲಹಿದ ಚೆನ್ನಬಸವಣ್ಣನ ತನ್ನಲ್ಲಿ ಇಂಬಿಟ್ಟುಕೊಂಡು, ಅಚ್ಚಪ್ರಸಾದಿಯಾಗಿ ಸತ್ಯಪ್ರಸಾದಿಯಾಗಿ ಸಮಯಪ್ರಸಾದಿಯಾಗಿ, ಸಂತೋಷಪ್ರಸಾದಿಯಾಗಿ ಸರ್ವಾಂಗಪ್ರಸಾದಿಯಾಗಿ, ಸಮರಪ್ರಸಾದಿಯಾಗಿ, ನಿರ್ಣಯದಲ್ಲಿ ನಿಷ್ಪನ್ನನಾಗಿ, ನಿಜದಲ್ಲಿ ನಿವಾಸಿಯಾಗಿ, ನಿರಾಳಕ್ಕೆ ನಿರಾಳನಾಗಿ, ಘನದಲ್ಲಿ ಅಗಮ್ಯನಾಗಿ, ಅಖಂಡ ಪರಿಪೂರ್ಣನಾಗಿ, ಉಪಮೆಗೆ ಅನುಪಮನಾಗಿ, ವಾಙ್ಮನಕ್ಕಗೋಚರನಾಗಿ, ಭಾವ ನಿರ್ಭಾವವೆಂಬ ಬಗೆಯ ಬಣ್ಣಕ್ಕೆ ಅತ್ತತ್ತಲೆಂದೆನಿಸಿ ನಿಃಶೂನ್ಯನೆಂದೆನಿಸಿಪ್ಪ ಸಂಗನಬಸವಣ್ಣನ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನು ಕಾಣಾ ಪ್ರಭುವೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ, ಲೋಕದೊಳಗೆ ಗಂಜಳದೊಳಗಣ ಹಂದಿಯ ದೇಹವನಾರೂ ತೊಳೆಯರು. ಗುರುಕಾರುಣ್ಯವುಳ್ಳ ಭಕ್ತರ ನಡೆವ ಗುಣದಲ್ಲಿ ಎಡಹಿದ ಶಬ್ದಕ್ಕೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡು ನಡೆಸುವದೆ ಸದಾಚಾರ. ಗುರುಚರಲಿಂಗವನರಿಯದ ದುರಾಚಾರಿಗಳಿಗೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡ ತೆರನೆಂತೆಂದಡೆ, ಶೂಕರನ ದೇಹವ ತೊಳೆದಡೆ, ಕೂಡೆ ಪಾಕುಳದೊಳಗೆ ಹೊರಳಿದ ತೆರನಾಯಿತ್ತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕಾ[ಡಿ]ನೊ[ಳ]ಗೆ ಹೋಗಿ, ಅಭೇದ್ಯವಪ್ಪ ಲಿಂಗದ ಭೇದವನರಿಯದೆ ಹೋದಿರಲ್ಲಾ. ಮಿಣುಕಿನ ಪ್ರಭೆಯಂತೆ, ಧಣಧಣಿಸುವ ಘನದನುವನರಿಯದೆ ಹೋದಿರಲ್ಲಾ. ಪಂಚತತ್ವವನೊಳಕೊಂಡ ಪರಬ್ರಹ್ಮವು ಪಂಚತತ್ವದಲ್ಲಿ ವಂಚಿಸಿದರೆ, ಸಂಚಲಗೊಂಬ ಸಂದೇಹವ ನೋಡಾ. ಇದು ಕಾರಣ, ಸರ್ವಸಂಚಲವನತಿಗಳೆದು, ಸದಾಕಾಲದಲ್ಲಿ ಲಿಂಗವ ಪೂಜಿಸುವ ಪೂಜಾವಿಧಾನರ ತೋರಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕಾಮಿಯಾಗಿ ನಿಃಕಾಮಿಯಾದಳು. ಸೀಮೆಯಲ್ಲಿರ್ದು ನಿಸ್ಸೀಮೆಯಾದಳು. ಭವಿಯ ಸಂಗವ ತೊರೆದು ಭವಬಾಧೆಯ ಹರಿದಳು. ಬಸವಣ್ಣನೆ ಗತಿಯೆಂದು ಬರಲು, ನಾನು ಮಡಿಯ ಹಾಸಿ ನಡೆಸಿದೆ. ನಡೆವುದಕ್ಕೆ ಹಾಸಿದ ಮಡಿಯ ಸರ್ವಾಂಗಕ್ಕೆ ಹೊಯ್ದಳು. ಆ ಮಡಿಯ ಬೆಳಗಿನೊಳಗೆ ನಿರ್ವಯಲಾದಳು. ಕಲಿದೇವರದೇವಾ, ಮಹಾದೇನಿಯಕ್ಕಗಳ ನಿಲವ ಬಸವಣ್ಣನಿಂದ ಕಂಡು ಬದುಕಿದೆನಯ್ಯಾ ಪ್ರಭುವೆ.
--------------
ಮಡಿವಾಳ ಮಾಚಿದೇವ
ಕಿಂಚಿತ್ತು ನೇಮವ ಮಾಡುವಲ್ಲಿ ಶೂನ್ಯವಿಲ್ಲದಿರಬೇಕು. ಸತ್ಯಕ್ಕೆ ತಕ್ಕ ಸಾಮಥ್ರ್ಯ, ಒಚ್ಚಿ ಹೊತ್ತಾದಡೂ ಶಿವಪೂಜೆಯ ನಿಶ್ಚಯದಲ್ಲಿ ಮಾಡಬೇಕು. ಅದು ತನಗೆ ಸುಚಿತ್ತದ ಹಾದಿ, ಕಲಿದೇವರದೇವನೊಳಗು, ಚಂದಯ್ಯ
--------------
ಮಡಿವಾಳ ಮಾಚಿದೇವ
ಕಡಲೊಳಗಣ ಮೊಸಳೆಯ ನಡುವ ಹಿಡಿದು ಕಡೆಗೆ ಸಾರಿ ಹೋಹೆನೆಂಬವರುಂಟೆ ? ಜಗದೊಳಗೆ ಮಡದಿ ಮಕ್ಕಳು ಮಾತಾಪಿತರು ಬಾಂಧವರು, ಮಾಯಾಮೋಹಕ್ಕೆ ದಂದುಗವಿಡಿದು ನಡೆವ ತುಡುಗುಣಿಯ ಮನದಿಚ್ಫೆಗೆ ಹರಿದು, ಕಡೆಯಗಾಣದೆ, ಕರ್ಮದ ಕಡಲೊಳಗೆ ಮುಳುಗಿಹೋದರೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕೀಳು ಮೇಲಾವುದೆಂದರಿಯದೆ, ಹದಿನೆಂಟುಜಾತವೆಲ್ಲ ತರ್ಕಕಿಕ್ಕಿ, ಕೂಳ ಸೊಕ್ಕಿನಲ್ಲಿ ಕಣ್ಣಿಗೆ ಕಾಳಗತ್ತಲೆ ಕವಿದು, ಸತ್ಯ ಸದಾಚಾರದ ಹಕ್ಕೆಯನರಿಯದೆ, ಸೂಳೆ ಸುರೆ ಅನ್ಯದೈವದ ಎಂಜಲ ಭುಂಜಿಸುವ ಕೀಳು ಜಾತಿಗಳು, ಶಿವ ನಿಮ್ಮ ನೆನೆವ ಭಕ್ತರುಗಳ ಅನುವನರಿಯದೆ, ಏಳೇಳುಜನ್ಮ ನರಕಕ್ಕೊಳಗಾದರು ನೋಡಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕಡಲುಗಳ ಕಂಗಳೊಳಗೆ ಮೊಗೆದು ಬರಿಕೆಯ್ವುತಿಹರು ಕೆಲರು ಗಣೇಶ್ವರರು. ಮೇರುಗಿರಿಗಳ ಮಿಡಿದು ಮೀಟುತ್ತಿಹರು ಕೆಲರು ಗಣೇಶ್ವರರು. ಸಕಲಬ್ರಹ್ಮಾಂಡಗಳ ಹಿಡಿದು ಹಿಸುಕಿ ಕೆಡಹುತ್ತಿಹರು ಕೆಲರು ಗಣೇಶ್ವರರು. ಅಗ್ನಿ ವಾಯುಗಳ ಹಿಡಿದು ಹೊಸೆದುಹಾಕುತ್ತಿಹರು ಕೆಲರು ಗಣೇಶ್ವರರು. ರವಿ ಶಶಿಗಳನು ಧ್ರುವಮಂಡಲಂಗಳನು ಪೂರಕದಲ್ಲಿ ತೆಗೆತಂದು, ರೇಚಕದಲ್ಲಿ ಬಿಡುತ್ತಿಹರು ಕೆಲರು ಗಣೇಶ್ವರರು. ಬಯಲನಾಕಾರವ ಮಾಡಿ, ಆಕಾರವ ಬಯಲ ಮಾಡುತ್ತಿಹರು ಕೆಲರು ಗಣೇಶ್ವರರು. ಇಂತಿವರೆಲ್ಲರೂ ಕಲಿದೇವರದೇವಾ ನಿಮ್ಮ ಬಸವಣ್ಣನ ನಿರಾಧಾರಪಥದಲ್ಲಿ ನಿಂದಿರ್ಪರು.
--------------
ಮಡಿವಾಳ ಮಾಚಿದೇವ
ಕಾಲಲ್ಲಿ ಕೂರಲಗ ಮೊನೆಯಲ್ಲಿರಿಸಿಕೊಂಡು, ಸತ್ತುಹೋದವರ ಸಮರ್ಥಿಕೆಯ ಹೊಗಳಿ, ಹೊಟ್ಟೆಯ ಹೊರೆವ ಕವಿಗಳು ಕೋಟ್ಯಾನುಕೋಟಿ. ಅರ್ಥವುಳ್ಳವರ ಅಗ್ಗಳಿಕೆಯ ಹೊಗಳುವ ಕವಿಗಳು ಕೋಟ್ಯಾನುಕೋಟಿ. ಲಿಂಗವ ಹೊಗಳಿ ಹೊಗಳಿ, ಅಂಗದ ಸೂತಕ ಹಿಂಗಿಸಿ, ಜಂಗಮದ ದಾಸೋಹದಿಂದ ಸರ್ವಾಂಗಲಿಂಗಿಯಾದ ಭಕ್ತನಂಗಳವೆನಗೆ ವಾರಣಾಸಿ, ಗಾಯತ್ರಿ, ಮಲಪ್ರಹರಿಯಿಂದಧಿಕವಯ್ಯಾ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಕಂಗಳ ನೋಟ ಕರಸ್ಥಲದ ಪ್ರಾಣ. ಅಂಗದ ವಿಕಾರ ನಿರ್ವಿಕಾರವಾಗಿತ್ತು. ಸಂಗಸುಖ ನಿಸ್ಸಂಗವಾಯಿತ್ತು. ಹೆಂಗೂಸೆಂಬ ಭಾವ ಬಯಲ ಬೆರಸಿತ್ತು. ಕಲಿದೇವರದೇವಾ, ನಿಮ್ಮನೊಲಿಸಿ ಒಚ್ಚತವೋದ ಮಹಾದೇವಿಯಕ್ಕನ ಪಾದವ ನೆನೆದು ನಾನು ಬದುಕಿದೆನು.
--------------
ಮಡಿವಾಳ ಮಾಚಿದೇವ
ಕೊಂಬನೂದುವ ಹೊಲೆಯಂಗೆ ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ? ಲಿಂಗಲಾಂಛನವ ತೊಟ್ಟು, ಗುರೂಪದೇಶವ ಹೇಳಿ, ನೊಸಲಲ್ಲಿ ವಿಭೂತಿಪಟ್ಟವ ಕಟ್ಟಿದ ಬಳಿಕ, ಮರಳಿ ಗುರುನಿಂದಕನಾಗಿ, ಹಣೆಯಲ್ಲಿ ಕುಂಕುಮಾದಿ ತಿಲಕವ ಕೊಂಡಡವನಾ ಕೊಂಬಿನ ಹೊಲೆಯಂಗಿಂದ ಕನಿಷ*ವೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕಾಯದ ಕಳವಳದಿಂದ, ಕರಣದ ಕಳವಳದಿಂದ, ಇಂದ್ರಿಯ ಕಳವಳದಿಂದ, ವಿಷಯದ ಕಳವಳದಿಂದ, ಮೋಹದ ಕಳವಳದಿಂದ ಮಾಯಾಪಾಶ ಪಾಕುಳದಲ್ಲಿ ಜನ್ಮ ಜರೆ ಮರಣ ಭವಕ್ಕೊಳಗಾದ ಭವಿಗೆ ಅನಂತದೈವವಲ್ಲದೆ, ಜನ್ಮ ಜರೆ ಮರಣ ಭವವಿರಹಿತ ಸದ್ಭಕ್ತಂಗೆ ಅನಂತದೈವವುಂಟೆ ? ಸೂಳೆಗೆ ಅನಂತಪುರುಷರ ಸಂಗವಲ್ಲದೆ, ಗರತಿಗೆ ಅನಂತಪುರುಷರ ಸಂಗವುಂಟೆ? ಚೋರಂಗೆ ಪರದ್ರವ್ಯವಲ್ಲದೆ, ಸತ್ಯಸಾತ್ವಿಕಂಗೆ ಪರದ್ರವ್ಯವುಂಟೆ ? ಹಾದರಗಿತ್ತಿಗೆ ಹಲವು ಮಾತಲ್ಲದೆ, ಪರಮಪತಿವ್ರತೆಗೆ ಹಲವು ಮಾತುಂಟೆ ? ಪರಮಪಾತಕಂಗೆ ಹಲವು ತೀರ್ಥ, ಹಲವು ಕ್ಷೇತ್ರವಲ್ಲದೆ ? ಪರಮಸದ್ಭಕ್ತಂಗೆ ಹಲವು ತೀರ್ಥ, ಹಲವು ಕ್ಷೇತ್ರಗಳುಂಟೆ ? ಗುರುದ್ರೋಹಿ ಲಿಂಗದ್ರೋಹಿ ಚರದ್ರೋಹಿ, ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ ಭಕ್ತದ್ರೋಹಿ, ಮಾತೃದ್ರೋಹಿ ಪಿತೃದ್ರೋಹಿಗೆ ಕಾಲಕಾಮಕರ್ಮದ ಭಯವಲ್ಲದೆ ಸತ್ಯ ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸತ್ಕಾಯಕ ಸದ್ಭಕ್ತಿಪ್ರಿಯ ಸದ್ಧರ್ಮಿಗೆ, ಕಾಲಕಾಮಕರ್ಮದ ಭಯವುಂಟೆ, ಕಲಿದೇವರದೇವಾ ?
--------------
ಮಡಿವಾಳ ಮಾಚಿದೇವ
ಕಾಳಿಕಾದೇವಿ ಚಾಮುಂಡಿ ಗೌರಿ ಬನದ ಶಂಕರಿ. ಇಂತೀ ನಾಲ್ಕು ಶಕ್ತಿಯರು ಮೊದಲಾದ ಹಲವು ಶಕ್ತಿದೈವಂಗಳನಾರಾಧಿಸಿ, ಅವರೆಂಜಲ ಭುಂಜಿಸುವವರಿಗೆ ಗುರುವಿಲ್ಲ, ಗುರುಪ್ರಸಾದವಿಲ್ಲ. ಲಿಂಗವಿಲ್ಲ, ಲಿಂಗಪ್ರಸಾದವಿಲ್ಲ. ಜಂಗಮವಿಲ್ಲ, ಜಂಗಮಪ್ರಸಾದವಿಲ್ಲ. ಇಂತಪ್ಪ ಪಾತಕರಿಗೆ ಸೂರ್ಯಚಂದ್ರರುಳ್ಳನಕ್ಕ ಇಪ್ಪತ್ತೆಂಟುಕೋಟಿ ನಾಯಕನರಕ ತಪ್ಪದು. ಆ ನರಕ ತೀರಿದ ಬಳಿಕ, ಶ್ವಾನ ಸೂಕರ ಯೋನಿಯಲ್ಲಿ ಬಪ್ಪುದು ತಪ್ಪುದು. ಆ ಜನ್ಮ ತೀರಿದ ಬಳಿಕ, ರುದ್ರಪ್ರಳಯ ಪರಿಯಂತರ ನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕಾಮಕ್ರೋಧದ ಕರಸ್ಥಲದಲ್ಲಿ ಗುರು ಸ್ವಾಯತವ ಮಾಡಿದೆನು. ಲೋಭಮೋಹದ ಕರಸ್ಥಲದಲ್ಲಿ ಲಿಂಗ ಸ್ವಾಯತವ ಮಾಡಿದೆನು. ಮದದ ಕರಸ್ಥಲದಲ್ಲಿ ಜಂಗಮ ಸ್ವಾಯತವ ಮಾಡಿದೆನು. ಮತ್ಸರದ ಕರಸ್ಥಲದಲ್ಲಿ ಪ್ರಸಾದ [ಸ್ವಾಯತವ] ಮಾಡಿದೆನು. ಇಂತೀ ಗುರುಲಿಂಗ ಜಂಗಮ ಪ್ರಸಾದದಲ್ಲಿ ಶುದ್ಧನಾದೆನು ಕಾಣಾ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಕಾಲಕರ್ಮಕಂಜಿ ಶಿವನ ಶೀಲ ಭಕ್ತಿಯ ಹಿಡಿದು ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದವ ಕೊಂಡು, ಕರ್ಮ ದುರಿತವ ಗೆಲಿದು, ಶೀಲ ಶಿವಭಕ್ತಿಯಿಲ್ಲದ ದ್ರೋಹಿಗಳು, ಹಾಲು ಹಯನ ಮೀಸಲವೆಂದು ಕೂಡಿಸಿಕೊಂಬರು. ಅವರು ಶೂಲಕ್ಕೆ ಬಿದ್ದು, ಹೊಲೆಜನ್ಮಕ್ಕೆ ಮಾದಿಗರಾಗಿ, ಉಪವಾಸವಿರ್ದು ಹಸಿದುಂಬ ಕ್ರೂರಕರ್ಮಿಗಳ ಮುಖವ ನೋಡಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕಳ್ಳಬುದ್ಧಿಯೆಡೆಗೊಂಡು ಕರ್ಮಗೇಡಿಯಾಗಿ ಹೋಗಬೇಡವೆಂದು ಷೋಡಶೋಪಚಾರದಿಂದ ಶ್ರೀಗುರು ಭಕ್ತಿಯ ತೋರಿ, ಸತ್ಯ ಸದಾಚಾರ ಧರ್ಮ ನೆಲೆಗೊಳ್ಳಬೇಕೆಂದು, ಸಾಹಿತ್ಯ ಸಂಬಂಧವ ಕೊಟ್ಟು, ಶ್ರೀಗುರು ಉಪದೇಶವ ಹೇಳಿದ ಮಾರ್ಗದಿ ನಡೆಯಲೊಲ್ಲದೆ, ನಾಯಿಜಾತಿಗಳು ಕೀಳುಜಾತಿಗಳು ದೈವದ ಜಾತ್ರೆಗೆ ಹೋಗಿ, ಬೆನ್ನಸಿಡಿಯನೇರಿಸಿಕೊಂಡು, ಅಂಗ ಲಿಂಗಕ್ಕೆರವಾಗಿ, ತಾಳಿ ತಗಡಿ ಮಾಡಿ, ಮನೆದೈವವೆಂದು ಕೊರಳಿಗೆ ಕಟ್ಟಿಕೊಂಡು ಮರಳಿ ಉಣಲಿಕ್ಕಿಲ್ಲದಿರ್ದಡೆ, ಮಾರಿಕೊಂಡು ತಿಂಬ ಕೀಳುಜಾತಿಗೆ ಏಳೇಳುಜನ್ಮದಲ್ಲಿ ಕಾಗೆ ಬಾಯಲಿ ತಿಂಬ ನರಕ ತಪ್ಪದೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕಲ್ಯಾಣಪಟ್ಟಣದಲ್ಲಿ ಕಲಕೇತಯ್ಯಗಳು ಕಿನ್ನರಯ್ಯಗಳ ಸ್ಥಾವರದೈವದ ಸೇವೆ, ಯಾಚಕತ್ವವ ಬಿಡಿಸಿ, ಗುರು ಕೊಟ್ಟ ಇಷ್ಟಲಿಂಗದಲ್ಲಿ ನಿಷೆ*ಯ ಗಟ್ಟಿಗೊಳಿಸಿ, ಘನವೀರಶೈವದ ಬಟ್ಟೆಯನರುಹಿದರೆಂಬುದ ಕೇಳಿ ನಂಬದೆ, ಸೃಷ್ಟಿಯ ಪ್ರತಿಷೆ*ಗೆ ಶರಣೆಂದಡೆ, ಮೆಟ್ಟುವ ನರಕದಲ್ಲಿ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕಾವರುಂಟೆ ಸಾವಿಗೊಳಗಾಗಿ, ಸತ್ತುಹೋದ ಸಮಸ್ತಕ್ಕೂ ದೇವನೊಬ್ಬನೆ. ಕಾವಾತ ಕೊಲುವಾತ ಮಹದೇವರು. ಮುನಿದರೆ ಮರಳಿ ಕಾವರುಂಟೆ ? ಸಾವಿಗೊಳಗಾಗಿ ಸತ್ತುಹೋಹ ಭೂತಂಗಳನು ದೇವರ ಸರಿಯೆಂದಾರಾಧಿಸಿ ಅಚಲಿತ ಪದವಿಯ ಬೇಡುವ ಗುರುದ್ರೋಹಿಯ ನುಡಿಯ ಕೇಳಲಾಗದೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಕಲ್ಯಾಣವೆಂಬ ಪಟ್ಟಣದೊಳಗೆ ಛತ್ತೀಸಪುರದ ಮಹಾಗಣಂಗಳು. ಒಂದು ಪುರದವರು ಅಗ್ಘಣಿಯ ತಹರು. ಎರಡು ಪುರುದವರು ಸಮ್ಮಾರ್ಜನೆ ರಂಗವಾಲಿಯ ಮಾಡುವರು. ಮೂರು ಪುರದವರು ಲಿಂಗಾರ್ಚನೆಗೆ ನೀಡುವರು. ನಾಲ್ಕು ಪುರದವರು ಲಿಂಗಕ್ಕೆ ಬೋನವ ಮಾಡುವರು. ಐದು ಪುರದವರು ಅರ್ಪಿತಕ್ಕೆ ನೀಡುವರು. ಆರು ಪುರದವರು ಪ್ರಸಾದದಲ್ಲಿ ತದ್ಗತರಾಗಿಹರು. ಏಳು ಪುರದವರು ಧ್ಯಾನಾರೂಢರಾಗಿಹರು. ಮುಂದಣ ಪುರದವರು ನಿಶ್ಚಿಂತನಿವಾಸಿಗಳಾಗಿಹರು. ಈ ಪುರದ ಗಣಂಗಳು ಓಲೈಸುವ ಬಸವನ ಮಹಾಮನೆಯ ಮಡಿವಾಳ ನಾನು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ