ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮನ ಹೆಂಡಿರ ಮಕ್ಕಳ ಹಿಡಿತಂದು, ಅಡಿಗೆಯ ಮಾಡಿಸಿದಾತ ಬಸವಣ್ಣ. ವಿಷ್ಣುವಿನ ಸಾಸಿರದೇಳುನೂರು ಕುಮಾರಿಯರ ಹಿಡಿತಂದು, ದಹಿಸಿದಾತ ಬಸವಣ್ಣ. ರುದ್ರರ ರುದ್ರಗಣಂಗಳ ಹಿಡಿತಂದು, ಸ್ವಾಮಿಭೃತ್ಯಾಚಾರಸಂಬಂಧವ ಮಾಡಿಸಿದಾತ ಬಸವಣ್ಣ. ಆ ಬಸವಣ್ಣಂಗೆ ಪ್ರಸಾದವೆ ನೆಲೆಯಾದುದು, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಬಸವಣ್ಣನ ನೆನೆದೆನ್ನ ತನು ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಮನ ಬಯಲಾಯಿತ್ತು. ಬಸವಣ್ಣನ ನೆನೆದೆನ್ನ ಭಾವ ಬಯಲಾಯಿತ್ತು. ಕಲಿದೇವಯ್ಯ ನಿಮ್ಮ ಶರಣ, ಮಹಾಮಹಿಮ ಸಂಗನಬಸವಣ್ಣನ ನೆನೆನೆನೆದು, ಎನ್ನ ಸರ್ವಾಂಗ ಲಿಂಗವಾಯಿತ್ತೆಂದರಿದೆನಯ್ಯಾ.
--------------
ಮಡಿವಾಳ ಮಾಚಿದೇವ
ಬಹುಜಲವಂ ಬಿಟ್ಟು, ಚಿಲುಮೆಯ ತೆರೆಗಡದು. ನೆಲಶುದ್ಧ ಸೌಕರ್ಯವಲ್ಲದೆ ಅದು ಶೀಲವಲ್ಲ. ಉಪ್ಪ ಬಿಟ್ಟು ಸಪ್ಪೆಯನುಂಡಡದು ಮನದ ಹೇಸಿಕೆಯಿಲ್ಲದೆ ಅದು ದೃಢವ್ರತವಲ್ಲ. ವ್ರತ ನಿಶ್ಚಿಯವಾವುದೆಂದಡೆ, ಪರಸ್ತ್ರೀ ಪರಧನ ಪರದೂಷಣಯವನರಿದು ಬಿಟ್ಟಡೆ, ಅದು ಅರುವತ್ತಾರುವ್ರತವೆಂದೆ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಬಂದೆಹೆನೆಂಬ ಸುಖವ ಹೆರೆಹಿಂಗಿದವರುಂಟೆ ? ಕಂಡ ನಿಧಾನವ ಬೇಡ ಎಂದವರುಂಟೆ ಕಲಿದೇವಯ್ಯ ತಾನೆ ಬಂದೆಹೆನೆಂದಡೆ, ಬೇಡ ಎನಲೇತಕೆ, ಎಲೆ ಚಂದಯ್ಯ.
--------------
ಮಡಿವಾಳ ಮಾಚಿದೇವ
ಬಸವಣ್ಣನ ನೆನೆವುದೆ ಷೋಡಶೋಪಚಾರ. ಬಸವಣ್ಣನ ನೆನೆವುದೆ ಪರಮತತ್ವ. ಬಸವಣ್ಣನ ನೆನೆವುದೆ ಮಹಾನುಭಾವ. ಕಲಿದೇವಾ, ನಿಮ್ಮ ಶರಣ ಬಸವಣ್ಣನ ನೆನೆದು, ಸಮಸ್ತಗಣಂಗಳೆಲ್ಲರೂ ಅತಿಶುದ್ಧರಾದರಯ್ಯ.
--------------
ಮಡಿವಾಳ ಮಾಚಿದೇವ
ಬಸವಣ್ಣಾ ಎಂದಡೆ, ಚೆನ್ನಬಸವಣ್ಣಾ ಎಂದಡೆ, ಪ್ರಭುದೇವಾ ಎಂದಡೆ, ಮಹಾದೇವಾ ಎಂದಡೆ, ಮಹಾಸ್ಥಾನದಲ್ಲಿರ್ದು ಕರೆದಡೆ, ಓ ಎನುತಿರ್ದೆ ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಬ್ರಾಹ್ಮಣದೈವವೆಂದು ಆರಾಧಿಸಿದ [ಕಾರಣ] ಗೌತಮಗೆ ಗೋವಧೆಯಾಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ಕರ್ಣನ ಕವಚ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಬಲಿಗೆ ಬಂಧನವಾಯಿತ್ತು. ವಿಷ್ಣುದೈವವೆಂದು ಆರಾಧಿಸಿದ ಕಾರಣ ಪಾಂಡವರಿಗೆ ದೇಶಾಂತರ ಯೋಗವಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಪರಶುರಾಮ ಸಮುದ್ರಕ್ಕೆ ಗುರಿಯಾದ. ವಿಷ್ಣುದೈವವೆಂದು ಆರಾಧಿಸಲು ವ್ಯಾಸನ ತೋಳು ಆಕಾಶಕ್ಕೆ ಹೋಯಿತ್ತು. ಈ ದೃಷ್ಟವಿದ್ದು, ಮಾಯಿರಾಣಿಯ ದೈವವೆಂದು ಆರಾಧಿಸಿದ ಕಾರಣ ತಲೆಯಲ್ಲಿ ಕೆರವ ಕಟ್ಟಿ, ಕೊರಳಲ್ಲಿ ಕವಡೆಯ ಕಟ್ಟಿ, ಬೇವನುಟ್ಟು, ಜಾವಡಿ ಅರಿಯ ಲಜ್ಜೆ ಹೋಯಿತ್ತು. ಮುಂದೆ ಭೈರವ ದೇವರೆಂದು ಆರಾಧಿಸಿದ ಕಾರಣ ಕರುಳ ಬೆರಳ ಖಂಡಿಸಿ ತುತ್ತು ತುತ್ತಿಗೆ ಅಂತರಂಗ ಬಹಿರಂಗವಾಯಿತ್ತು. ಮುಂದೆ ಜಿನನ ದೈವವೆಂದು ಆರಾಧಿಸಿದ ಕಾರಣ ಜೈನ ಮಾಡಿದ ಕರ್ಮ ನಿಷ್ಕರ್ಮವಾದುದಾಗಿ ನರರ ಹಾಡಿದಡೆ ಗತಿಯಿಲ್ಲ, ಕೇಳಿದರೆ ಗತಿಯಿಲ್ಲ ಹರ ನಿಮ್ಮ ಶರಣರ ಶ್ರೀಪಾದವೆ ಗತಿಯಾಗಿದ್ದೆ ನೋಡಾ. ಹರ ನಿಮ್ಮ ಶರಣರ ಒಲವಿಂದ ತುತ್ತು ಬುತ್ತಿಗೆ ಬೆನ್ನುಹತ್ತುವ ಮಾರಿ ಮಸಣಿ ಮೈಲಾರ ಹೊನ್ನ ಲಕ್ಷ್ಮಿಗಳು ಅರ್ಥ ಅಯುಷ್ಯವ ಕೊಡಬಲ್ಲವೆ ? ಒಡೆಯನಿಲ್ಲದ ಮನೆಯ ತುಡುಗುಣಿನಾಯಿ ಹೊಗುವಂತೆ, ಜಡದೇಹಿಗಳ ತನುವ ಕಾಡುತಿಹವೆಂದಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಬಿತ್ತು ಬೆಳಸು ಸರ್ವಜೀವಕಿವನೊಬ್ಬನೆ. ಮತ್ತೆ ಮರಳಿ ಅನ್ಯದೈವಕ್ಕೆರಗಬೇಕೊ? ಪೃಥ್ವೀರಾಜವನಾಳುವವರು, ಕಾದಿ ಹೋದವರ ಗೋತ್ರವಧೆಯಂ ಮಾಡಿ, ಸತ್ತುಹೋದ ಪಾಂಡವರು. ಜಗಕ್ಕೆ ಬಿತ್ತು ಬೆಳೆಯ ಕೊಟ್ಟನೆಂಬ ನೀತಿಹೀನರ ನುಡಿಯ ಕೇಳಲಾಗದೆಂದ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಬಕಾರವೆ ಗುರುವಯ್ಯಾ, ಸಕಾರವೆ ಲಿಂಗವಯ್ಯಾ, ವಕಾರವೆ ಜಂಗಮವಯ್ಯಾ, ಅದೆಂತೆಂದಡೆ: ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೂರ್ತಿ ಹಿ| ವಕಾರಂ ಚರಮಾಖ್ಯಾತಂ ತ್ರಿವಿಧಂ ತತ್ತ ್ವನಿಶ್ಚಯಂ|| ಇಂತೆಂದುದಾಗಿ. ಉದಯ ಮಧ್ಯ ಸಾಯಂಕಾಲದಲ್ಲಿ, ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆವ ಮಹಾಮಹಿಮರ ತೋರಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಬಲಕೆ ಮುರಿದನು ಪೌಳಿಯ ಉತ್ತರ ಬಾಗಿಲಲ್ಲಿ. ತಲೆವಾಗಿ ಹೊಕ್ಕ ಗತಿಯ ಪವಣಿನಲ್ಲಿ ಧವಳಾರವ. ಪಶ್ಚಿಮದ್ವಾರದಿಂದ ತ್ರಿವಿಧಗತಿಯ ಶೂನ್ಯಸಿಂಹಾಸನದ ಮೇಲೆ ಮುಕ್ತಕೇಶದ ಪರಮ ಗುರುರಾಜನೇರಿದ, ಕಲಿದೇವರದೇವನು.
--------------
ಮಡಿವಾಳ ಮಾಚಿದೇವ
ಬಿಂದುವ ಹರಿದು, ನಾದವನತಿಗಳೆದು, ಕಳೆಯ ಬೆಳಗ ಸಾಧಿಸಿ, ಅಸಾಧ್ಯ ಸಾಧಕನಾದೆಯಲ್ಲಾ ಬಸವಣ್ಣ. ಕಾಯವ ಹೊದ್ದದೆ, ಮಾಯವ ಸೋಂಕದೆ. ನಿರಾಳವಾಗಿ ನಿಂದೆಯಲ್ಲಾ ಬಸವಣ್ಣ. ನಾ ನಿನ್ನನವಗ್ರಹಿಸಿಕೊಂಡು, ಸಂದುಭೇದವಿಲ್ಲದಿದ್ದಲ್ಲಿ, ಹೊಗಳಲಿಂಬುಂಟೆ ಬಸವಣ್ಣ. ಕಲಿದೇವರದೇವನು ಕಾಯಗೊಂಡಿಪ್ಪುದು, ನಿನ್ನಿಂದಲಾನು ಕಂಡೆ ನೋಡಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಬಿದ್ದು ಸತ್ತ ಬಸುವ ತಿಂಬ ಹೊಲತಿಗೆ ಹೊಲೆಗಂಡು, ಶುದ್ಧನೀರ ಮಿಂದಡೆ, ಅವಳ ಮೊದಲ ಹೊಲೆ ಹೋಯಿತ್ತೆ ? ಮದ್ದವ ಸೇವಿಸುವ ಹೊಲೆಯರು, ದೈವಕ್ಕೆರಗಿ, ಕುಲದಲ್ಲಿ ಶುದ್ಧರಹೆವೆಂಬ ಪರಿಯೆಂತೊ ? ಮಲಭಾಂಡದ ಕುಲವೆಲ್ಲಾ ಒಂದೆ. ಗೆಲುವಿಂಗೆ ಹೆಣಗುವ ಹದಿನೆಂಟುಜಾತಿಗಳು, ಗುರುವಿನ ನೆಲೆಯನರಿಯದೆ, ಕೆಟ್ಟಪ್ರಾಣಿಗಳನೇನೆಂಬೆನಯ್ಯಾ, ಕಲಿದೇವರದೇವ ?
--------------
ಮಡಿವಾಳ ಮಾಚಿದೇವ
ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ, ಮತ್ರ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ, ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ ಕ್ರಿಯಾಶಕ್ತಿಯರು ಸದಾವಾಸ ಪರಿಯಂತರ ಇಷ್ಟಮಹಾಲಿಂಗವ ತಮ್ಮ ಅಂಗವ ಬಿಟ್ಟು ಅಗಲಿಸಲಾಗದು. ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ, ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ, ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ. ಈಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು, ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವುಪ್ರಸಂಗ. ಭವಿಜನ್ಮಾತ್ಮರು ತೊಳೆದು ಹೊದಿಕೆ, ಅವರ ಸಂಸರ್ಗ ಮೊದಲಾದ ದುಃಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು. ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡುವದು. ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು. ಈ ಮಾರ್ಗವನಾಚರಿಸದಿರ್ದಂಥ ಭಕ್ತನಲ್ಲಿ, ಗುರುಚರಮೂರ್ತಿಗಳು, ಅವನ ಮನೆಯ ಹೊಕ್ಕು, ಲಿಂಗಾರ್ಚನೆ ಲಿಂಗಾರ್ಪಣವ ಮಾಡಲಾಗದು. ಗುರುವಾಕ್ಯವ ಮೀರಿ, ಅರ್ಥದಿಚ್ಫೆಗೆ ಹೊಕ್ಕು ಬೆರಸಿದಡೆ, ಅನಾದಿ ಗುರುಲಿಂಗಜಂಗಮ ಭಕ್ತಪ್ರಸಾದಕ್ಕೆ ಹೊರಗಾಗಿ, ಅಂತ್ಯದಲ್ಲಿ ಶತಸಹಸ್ರ ವೇಳೆ ಶುನಿಸೂಕರಾದಿಗಳಲ್ಲಿ ಬಪ್ಪುದು ತಪ್ಪದು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಬಸವಣ್ಣ ಮಾಡಲಿಕೆ ಗುರುವಾಯಿತ್ತು. ಬಸವಣ್ಣ ಮಾಡಲಿಕೆ ಲಿಂಗವಾಯಿತ್ತು. ಬಸವಣ್ಣ ಮಾಡಲಿಕೆ ಜಂಗಮವಾಯಿತ್ತು. ಬಸವಣ್ಣ ಮಾಡಲಿಕೆ ಪ್ರಸಾದವಾಯಿತ್ತು. ಬಸವಣ್ಣ ಮಾಡಲಿಕೆ ಈರೇಳುಲೋಕವಾಯಿತ್ತು. ಬಸವಣ್ಣನಿಂದಾದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಬಸವಣ್ಣನ ಬಳಿಯಯ್ಯಾ ಗಂಗೆವಾಳುಕಸಮಾರುದ್ರರು. ಬಸವಣ್ಣನ ಫಲವಯ್ಯಾ ಓಂ ನಮಃ ಶಿವಾಯ ಎಂಬವರೆಲ್ಲರು. ಬಸವಣ್ಣನ ಆಜ್ಞೆಯಯ್ಯಾ ಎಲ್ಲ ಶಿವಾರ್ಚಕರು. ಬಸವಣ್ಣನ ಘನವಯ್ಯಾ ತನುದಾಸೋಹಿಗಳು. ಬಸವಣ್ಣನ ಧನವಯ್ಯಾ ಪಾದೋಕಪ್ರಸಾದಿಗಳು. ಬಸವಣ್ಣನ ಮನವಯ್ಯಾ ತನುಪದಾರ್ಥವ ಮಾಡಿ, ಗುರುಲಿಂಗಜಂಗಮಕ್ಕರ್ಪಿಸುವರು. ಬಸವಣ್ಣ ಮಾಡಿದ ಅನುಗಳಯ್ಯಾ, ಕನಸಿನಲ್ಲಿ ಮನಸಿನಲ್ಲಿ ಶಿವಶಿವಾ ಎಂಬರೆಲ್ಲರು. ಬಸವಣ್ಣನ ಬಂಧುಗಳಯ್ಯಾ ಎಲ್ಲಾ ಶಿವಲಾಂಛನಿಗಳು. ಬಸವಣ್ಣನ ಪ್ರಸಾದಿಗಳಯ್ಯಾ. ಬಸವಣ್ಣನ ನಾಮಾಮೃತವ ನೆನೆವರೆಲ್ಲರು. ಎಲೆ ಕಲಿದೇವರದೇವಾ, ಬಸವಣ್ಣನ ಆಜ್ಞೆಯಲ್ಲಿ ನೀನಿರ್ದೆಯಾಗಿ, ಎಲ್ಲ ಶಿವಭಕ್ತರ ತನುಮನಧನಸಹಿತ ನಾನಾದೆನಯ್ಯಾ.
--------------
ಮಡಿವಾಳ ಮಾಚಿದೇವ
ಬಸವಣ್ಣನ ಕಿರುಗೊಳಗೆ ನಾಗಲೋಕದ ನಾಗಗಣಂಗಳೆನಿಸುವುದು. ಬಸವಣ್ಣನ ಜಾಣು ಜಂಘಯೆ ಮತ್ರ್ಯಲೋಕದ ಮಹಾಗಣಂಗಳೆನಿಸುವುದು. ಬಸವಣ್ಣನ ನಾಭಿಯೆ ದೇವಲೋಕದ ದೇವಗಣಂಗಳೆನಿಸುವುದು. ಮೇಲಣ ಘನವ ಹೊಗಳುವಡೆ ಎನ್ನಳವಲ್ಲ ಕಲಿದೇವಾ. ಇನ್ನು ಹೊಗಳುವಡೆ ನಿನ್ನಳವಲ್ಲವೆ ಬಸವಣ್ಣನ.
--------------
ಮಡಿವಾಳ ಮಾಚಿದೇವ
ಬೆಕ್ಕು ನಾಯಿ ಸೂಳೆ ಸುರೆ ತಾಳಹಣ್ಣು ಅನ್ಯದೈವ ಭವಿಮಿಶ್ರವುಳ್ಳವರ ಮನೆಯಲ್ಲಿ, ನಂಟುತನದ ದಾಕ್ಷಿಣ್ಯಕ್ಕಾಗಲಿ, ನೆಂಟರ ದಾಕ್ಷಿಣ್ಯಕ್ಕಾಗಲಿ ಅದಲ್ಲದೆ, ಮತ್ತೆ ತನ್ನ ಒಡಲ ಕಕ್ಕುಲತೆಗಾಗಿ ಹೋಗಿ ಹೊಕ್ಕು, ಅವರುಗಳಲ್ಲಿ ಅನ್ನ ಪಾನವ ಕೊಂಡೆನಾದಡೆ, ಹೊಲೆಗೇರಿಯ ಹಂದಿಯ ಮುಸುಡ ಮೂಸಿ ನೋಡಿದಂತಾಯಿತ್ತು, ಅವನ ಮಾಟ, ಕಲಿದೇವಯ್ಯ ನೀವು ಸಾಕ್ಷಿಯಾಗಿ.
--------------
ಮಡಿವಾಳ ಮಾಚಿದೇವ
ಬಿಂದುವ ಹರಿದೆಯಲ್ಲಾ ಬಸವಣ್ಣ. ನಾದವ ಸಿಂಹಾಸನವ ಮಾಡಿಕೊಂಡು ಇದ್ದೆಯಲ್ಲಾ ಬಸವಣ್ಣ. ಅಷ್ಟಗುಣಂಗಳ ನಷ್ಟವ ಮಾಡಿದೆಯಲ್ಲಾ ನಿಜಲಿಂಗ ಬಸವಣ್ಣ. ಶುಕ್ಲಶೋಣಿತ ಮೇಧಸ್ಸು ಇವರಿಂದಾದ ಕಾಯವೆತ್ತ ಹೋಯಿತ್ತಯ್ಯಾ ಘನಲಿಂಗ ಬಸವಣ್ಣ. ಭಕ್ತಿಯ ರೂಪುಗೆಟ್ಟು ಮತ್ತೊಂದು ರೂಪಾದೆಯಲ್ಲಾ ನಿರೂಪಿ ಬಸವಣ್ಣ. ಶೂನ್ಯಪ್ರಸಾದಿಯಲ್ಲ, ನಿಶ್ಯೂನ್ಯಪ್ರಸಾದಿಯಲ್ಲ. ಆವ ಪ್ರಸಾದವನೂ ಸೋಂಕದ ಪ್ರಸಾದಿ. ಯೋನಿಜನಲ್ಲದ, ಅಯೋನಿಜಲ್ಲದ, ನಿಜಮೂರ್ತಿಯೆನಿಸುವ ಬಸವಣ್ಣ. ಭಕ್ತಿಯ ಹರಹಿಹೋದೆಯಲ್ಲಾ ಬಸವಣ್ಣ. ಮೂರ್ತನಲ್ಲದ, ಅಮೂರ್ತನಲ್ಲದ ಲಿಂಗವ ತೋರಿದೆಯಲ್ಲಾ ಬಸವಣ್ಣ. ನಿರವಯವಾಗಿ ಹೋದನು ನಮ್ಮ ಬಸವರಾಜನು. ಬೆಳಗನುಟ್ಟು ಬಯಲಾಗಿ ಹೋದನು ನಮ್ಮ ಬಸವಲಿಂಗನು. ಬಸವಣ್ಣ ಬಸವಣ್ಣ ಬಸವಣ್ಣ ಎನಲಮ್ಮೆನು, ಎನ್ನ ವಾಙಶನಕ್ಕಗೋಚರನಾಗಿ. ಬಸವಣ್ಣಂಗೆ ಶರಣೆಂಬ ಪಥವ ತೋರಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಬೋಳಿಗೇಕೊ ತ್ರಿಭಸ್ಮಸುರೇಖೆ ? ಗುರುವಿಗೇಕೊ ಕೊನರು ? ಜಂಗಮಕ್ಕೇಕೊ ಭರವಶ ? ಲಿಂಗಕ್ಕೇಕೊ ಮುನ್ನೀರು ? ಭಕ್ತಂಗೇಕೊ ಖ್ಯಾತಿಯ ಲಾಭ ? ಇಂತಿವರು ತಾಳಬಿಟ್ಟು ಕುರಸವ ಕೊಂಡು, ದಡಿಗಿಡಾಗಿ ಹೊಡೆಯಿಸಿಕೊಳಬೇಡ. ಮುಂದೆ ಮೇಲಣವರುಹ ನೋಡಿ, ಬದುಕೆಂದನು ಮಾಚಯ್ಯ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಬಾಲನಹನೂಮ್ಮೆ, ಲೋಲನಹನೊಮ್ಮೆ, ವೃದ್ಧನಹನೊಮ್ಮೆ, ಮತ್ತನಹನೊಮ್ಮೆ, ಹೊಳೆದು ತೋರುತಲೊಮ್ಮೆ ತೋರಿ ಅಡಗುತಲೊಮ್ಮೆ. ವಿಶ್ವವ ನೋಡಿ ಬೆರಗಾಗುತ್ತಮಿರೆ, ಇದ್ದ ಠಾವಿನಲ್ಲಿ ಮುಂದೆ ತೋರುತ್ತವಿರಲು, ಸಂಪ್ರದಾಯದವರು ಒಡನೊಡನೆ ಹರಿದುಬಂದು, ಹೇಳುತ್ತಿರಲು, ಹರಿದು ಬಂದು ಹತ್ತೆಸಾರಿದ, ಬಸವನ ಮಹಮನೆಯ ತಲೆಯೆತ್ತಿ ನೋಡಿದ. ಮುಗಿಲ ಮೂಲೆ ತಪ್ಪದೆ ಕುಸುರಿಗೆಲಸಗಳ, ನಂದಿಯ ಮಂಟಪಗಳ, ಮೇಲುಪ್ಪರಿಗೆಯ ಭದ್ರಂಗಳ ನೋಡಿ ತಲೆದೂಗುತ್ತ, ಕಲಿದೇವರದೇವ, ಬಸವನ ಮಹಮನೆಯ ಪ್ರದಕ್ಷಿಣ ಬಂದು, ದ್ವಾರದ ಮುಂದೆ ನಿಂದಿರ್ದನು,
--------------
ಮಡಿವಾಳ ಮಾಚಿದೇವ