ಅಥವಾ
(50) (19) (7) (2) (6) (1) (0) (0) (21) (1) (0) (4) (0) (0) ಅಂ (10) ಅಃ (10) (23) (1) (25) (1) (0) (1) (0) (9) (0) (0) (0) (0) (0) (0) (0) (16) (0) (10) (1) (21) (18) (0) (20) (9) (14) (0) (2) (0) (7) (11) (13) (0) (15) (18) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅರಿವನಾರಡಿಗೊಂಡಿತ್ತು ಮರಹು. ಮರಹನಾರಡಿಗೊಂಡಿತ್ತು ಮಾಯೆ. ಮಾಯೆಯನಾರಡಿಗೊಂಡಿತ್ತು ಕರ್ಮ. ಕರ್ಮವನಾರಡಿಗೊಂಡಿತ್ತು ತನು. ತನುವನಾರಡಿಗೊಂಡಿತ್ತು ಸಂಸಾರ. ಮರಹು ಬಂದಹುದೆಂದರಿದು ಅರಿವ ಬೆಲೆ ಮಾಡಿ, ಅರಿವ ಕೊಟ್ಟು ಗುರುವಿನ ಕೈಯಲ್ಲಿ ಲಿಂಗವ ಕೊಂಡೆ ನೋಡಯ್ಯ. ಎನ್ನರಿವನಾಯತದಲ್ಲಿ ನಿಲಿಸಿ, ನಿಜ ಸ್ವಾಯತವ ಮಾಡಿದನು ಕಲಿದೇವರದೇವಾ, ನಿಮ್ಮ ಶರಣ ಬಸವಣ್ಣ.
--------------
ಮಡಿವಾಳ ಮಾಚಿದೇವ
ಅಜಾತನೆಂದೆನಬೇಡ, ಜಾತನೆಂದೆನಬೇಡ. ಹದಿನೆಂಟುಜಾತವಾದರಾವುದು ? ಒಂದೇ ಗುರುವಿನ ವೇಷವಿದ್ದವರಿಗೆ ದಾಸೋಹವ ಮಾಡುವುದೆ ಶಿವಾಚಾರ. ಅದಲ್ಲದೆ ಗುರುಕೊಟ್ಟ ಮುರುಹು ಮುದ್ರೆ ಲಾಂಛನವ ಹೊತ್ತು ಮರಳಿ ವೇಷವಳಿದು ಬಂದವರಿಗೆ ದಾಸೋಹವ ಮಾಡುವದು, ಶಿವಾಚಾರಕ್ಕೆ ಹೇಸಿಕೆ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಂಗಲಿಂಗಸಂಬಂಧವೆಲ್ಲಿಯದಯ್ಯಾ ? ಪ್ರಾಣ ಮುಟ್ಟದನ್ನಕ್ಕರ ಲಿಂಗಾರ್ಚನೆ ಯಾಕೆ ? ಪ್ರಾಣ ಮುಟ್ಟಿ ಮಾಡಿತ್ತೆ ಲಿಂಗಾರ್ಚನೆ. ಪ್ರಾಣ ಒಂದಾಗಿ ಕೊಂಬುದೆ ಪ್ರಸಾದ. ಅಳಿವ ಘಟಕ್ಕೆ ಇದೆತ್ತಣ ಲಿಂಗಸಂಬಂಧವೋ ? ಇದ ಮಾಡಿದವರಾರು ? ಇದು ಕುಟಿಲ. ಪ್ರಾಣಲಿಂಗವೆ ಗುರುಸಂಬಂಧ. ಪ್ರಾಣಪ್ರಸಾದವೆ ಗುರುಮಹತ್ವ. ತನುಮನಧನವನು ಪ್ರಾಣ ಮುಂತಾಗಿ ನಿವೇದಿಸಬಲ್ಲಡೆ ಆತನ ಘಟವು, [ಅ]ಕಾಯವು. ಪ್ರಾಣ ಮುಟ್ಟಿತ್ತೆ ಲಿಂಗಾರ್ಚನೆ. ಪ್ರಾಣ ಮುಟ್ಟದ ಭಕ್ತಿ ಸಲ್ಲದು, ಸಲ್ಲದು. ಇಂತೀ ಪ್ರಾಣ ತದ್ಗತವಾದಾತನೆ ನಿಃಸಂಸಾರಿ ಕಾಣಾ ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಿಮ್ಮ ಪ್ರಸಾದದ ಮಹಿಮೆಯನೇನೆಂಬೆನೆಯ್ಯಾ. ವೇದಂಗಳರಿಯವು, ಶಾಸ್ತ್ರಂಗಳರಿಯವು. ಒಲವ ಸಾಧಿಸಿ , ತನುವ ದಂಡನೆಯ ಮಾಡಿ, ಸಕಲಭೋಗಂಗಳ ಬಿಟ್ಟು, ದುಃಖವನನುಭವಿಸಿ, ತಪ್ಪಿಲ್ಲದೆ ನಡೆದಡೆ ಹಡೆವರಯ್ಯಾ ಒಚ್ಚೊಚ್ಚಿ ಸ್ವರ್ಗದ ಭೋಗವನು. ಒಂದುವನು ಬಿಡಲಿಲ್ಲ, ಸಂದೇಹ ಮಾತ್ರವಿಲ್ಲ. ಆಗ ಬಿತ್ತಿ ಆಗ ಬೆಳೆಯುವಂತೆ, ರೋಗಿ ಬಯಸಿದ ವೈದ್ಯವ ಕುಡುವಂತೆ, ಪಾಪದಂತವಾದುದು, ಪುಣ್ಯವನೆ ಮಾಡುವದು. ಆತ ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಯೆನಿಸುವ. ಹಿಡಿತಡೆಯಿಲ್ಲ, ಪ್ರಸಾದದಿಂದತಃಪರವಿಲ್ಲ. ಪ್ರಸಾದಿಯಿಂದೆ ಮುಕ್ತರಿಲ್ಲ. ಇಂತಪ್ಪ ಪ್ರಸಾದವನು ನಿಮ್ಮ ಶರಣ ಬಸವಣ್ಣ ತೋರಿದನಾಗಿ, ಎನ್ನ ಭವಂ ನಾಸ್ತಿಯಾಯಿತ್ತು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಂಗಲಿಂಗಸಂಬಂಧವಾಗಬೇಕೆಂಬ ಭಂಗಿತರ ಮಾತ ಕೇಳಲಾಗದು. ಅಂಗಲಿಂಗಸಂಬಂಧ ಕಾರಣವೇನು ಮನ ಲಿಂಗಸಂಬಂಧವಾಗದನ್ನಕ್ಕ ? ಮನವು ಮಹದಲ್ಲಿ ನಿಂದ ಬಳಿಕ ಲಿಂಗಸಂಬಂಧವೇನು ಹೇಳಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಅರಿವನರಿದೆನೆಂದು ಕ್ರೀಯ ಬಿಡಬಾರದು. ಮಧುರಕ್ಕೆ ಮಧುರ ಒದಗಲಾಗಿ ಸವಿಗೆ ಕೊರತೆಯುಂಟೆ ? ದ್ರವ್ಯಕ್ಕೆ ದ್ರವ್ಯ ಕೂಡಲಾಗಿ ಬಡತನಕಡಹುಂಟೆ ? ನೀ ಮಾಡುವ ಮಾಟ, ಶಿವಪೂಜೆಯ ನೋಟ ಭಾವವಿರಬೇಕು. ಅದು ಕಲಿದೇವರದೇವಯ್ಯನ ಕೂಟ, ಚಂದಯ್ಯ.
--------------
ಮಡಿವಾಳ ಮಾಚಿದೇವ
ಅಂಗದ ಕ್ರೀಯೆ ಲಿಂಗದ ನಿಜ, ಲಿಂಗದ ನಿಜವೆ ಜಂಗಮ. ಆ ಜಂಗಮದ ಕ್ರೀಯೆಲ್ಲಾ ಲಿಂಗಮಯ. ಜಂಗಮದ ಸೇವೆಯೆ ಲಿಂಗದ ಕಳೆ. ಲಿಂಗದ ಕಳೆಯೆ ಜಂಗಮ, ಜಂಗಮದಿಂದೊದಗಿದುದೆ ಪ್ರಸಾದ. ಪ್ರಸಾದದೊದವೆ ಲಿಂಗೈಕ್ಯವು. ಈ ಗುರು, ನಾನು ನಿಜವ ಸಾಧಿಸಿದೆವು. ನಮ್ಮ ಕಲಿದೇವರದೇವನ ಬಸವಣ್ಣನಿಂದ ಕೇಳಯ್ಯಾ, ಚಂದಯ್ಯಾ
--------------
ಮಡಿವಾಳ ಮಾಚಿದೇವ
ಅರಿದಲ್ಲದೆ ಗುರುವ ಕಾಣಬಾರದು. ಅರಿದಲ್ಲದೆ ಲಿಂಗವ ಕಾಣಬಾರದು. ಅರಿದಲ್ಲದೆ ಜಂಗಮವ ಕಾಣಬಾರದು. ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ ಎನಗೆ ಸ್ವಾಯತವಾಯಿತ್ತಾಗಿ, ಭಿನ್ನವಿಲ್ಲ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅರುಹಿನೊಳಗಣ ಕುರುಹು ಮರಹಿಂಗೆ ಬೀಜ. ಕುರುಹಿನ ಮರಹನರಿವು ನುಂಗಿ, ಘನಕ್ಕೆ ಘನವೇದ್ಯವಾದ ಬಳಿಕ, ನಿತ್ಯಪರಿಪೂರ್ಣ ತಾನೆ. ಕಲಿದೇವರದೇವ ವಾಙ್ಮನಕ್ಕಗೋಚರನು.
--------------
ಮಡಿವಾಳ ಮಾಚಿದೇವ
ಅಟ್ಟ ಉಪ್ಪಿನ ಕಷ್ಟವಾವುದು ? ಅಡದ ಉಪ್ಪಿನ ಲೇಸಾವುದು ? ಬಿಟ್ಟ ಸಪ್ಪೆಯ ಭಕ್ತಿ ಯಾವುದು ? ಮೂತ್ರನಾಳದ ಘಾತಿ ಬಿಡದು. ಇವರು ಮಾಡುವ ನೇಮ, ತಾ ಕೊಂಡಂತೆ ಕಲಿದೇವರದೇವಾ
--------------
ಮಡಿವಾಳ ಮಾಚಿದೇವ
ಅಷ್ಟಾವರಣ ಪಂಚಾಚಾರವುಳ್ಳ ಸದ್ಭಕ್ತರ ಉದರದಲ್ಲಿ ಜನಿಸಿ, ಶಿವಭಕ್ತನಾಗಿದ್ದು, ಭವಿಯ ಸಂಗವ ಮಾಡಿದ ದೇಹ ಪಾಪ. ಆ ಭವಿಯ ಸಂಗಕಿಂದಲೂ ಸುರಾಪಾನಿಯ ಸಂಗ ಪಾಪ. ಆ ಸುರಾಪಾನಿಯ ಸಂಗಕಿಂದಲೂ ಮಾಂಸಾಹಾರಿಯ ಸಂಗ ಪಾಪ. ಆ ಮಾಂಸಾಹಾರಿಯ ಸಂಗಕಿಂದಲೂ ಭಂಗಿಭಕ್ಷಕನ ಸಂಗ ಪಾಪ. ಆ ಭಂಗಿಭಕ್ಷಕನ ಸಂಗಕಿಂದಲೂ ಶಿವಭಕ್ತನಾಗಿ ಅನ್ಯದೈವವ ಭಜಿಸುವವನ ಸಂಗ ಅಂದೇ ದೂರ, ಹಿರಿಯ ನರಕವೆಂದಾತ, ನಮ್ಮ ದಿಟ್ಟ ವೀರಾಧಿವೀರ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಷ್ಟತನುವಿನಲ್ಲಿ ಹುಟ್ಟಿದ ನಿಷ*ಪರದಲ್ಲಿ, ಮುಟ್ಟುವ ಭರದಲ್ಲಿ, ವಿದ್ಯೆಯೊಳಗಣ, ಧಾರಾಮಂಟಪದೊಳಗಣ ಸಹಜವನರಿದಂಗಲ್ಲದೆ ಲಿಂಗವೆನಬಾರದು, ಜಂಗಮವೆನಬಾರದು, ಪ್ರಸಾದವೆನಬಾರದು. ಧಾರಾಮಂಟಪದೊಳಗಣ ಸಹಜವನರಿಯದೆ ಕರಣಂಗಳಿಗೆ ಗುರಿಯಾದರು, ಕರಣಲಿಂಗಾರ್ಚಕರಾದರು. ಕರಣ ತಪ್ಪದೆಂತೊ ? ಇದೆಲ್ಲವನತಿಗಳೆದು ನಿಜಲಿಂಗಾರ್ಚನೆಯ ತೋರಿ, ನಿಜೈಕ್ಯದೊಳಗಿರಿಸಿ ಬದುಕಿದಾತ ಬಸವಣ್ಣ ಕಾಣಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಯ್ಯಾ, ಭಕ್ತಜಂಗಮವೆಂದು ಒಪ್ಪಕ್ಕೆ ನುಡಿಯಬಹುದಲ್ಲದೆ ಭಕ್ತಜಂಗಮವಾಗಿ ನಿಂದ ನಿಲುಕಡೆಯ ಹೇಳಿರಣ್ಣ. ಅದೆಂತೆಂದಡೆ: ಸದ್ಗುರುಮುಖದಿಂದ ವೇಧಾಮಂತ್ರಕ್ರಿಯಾದೀಕ್ಷೆಯ ತಿಳಿದು, ಪಂಚಾಚಾರವೆ ಪ್ರಾಣವಾಗಿ, ಅಷ್ಟಾವರಣವೆ ಅಂಗವಾಗಿ, ಸದ್ಭಕ್ತಿಯೆ ಮುಕ್ತಿಮಂದಿರವಾಗಿ, ಸತ್ಕ್ರಿಯಾ ಸಮ್ಯಕ್‍ಜ್ಞಾನವೆ ಸಂಜೀವನವಾಗಿ, ಕೊಡುವಲ್ಲಿ ಕೊಂಬಲ್ಲಿ ನಡೆನುಡಿ ಬೀಸರವೋಗದೆ, ಬಹಿರಂಗದಲ್ಲಿ ಆಚರಣೆ, ಅಂತರಂಗದಲ್ಲಿ ಸಂಬಂಧವ ಸದ್ಗುರು ಲಿಂಗಜಂಗಮ ಕರುಣಕಟಾಕ್ಷೆಯಿಂ ತಿಳಿದು, ಸನ್ಮಾರ್ಗವಿಡಿದು ಸತ್ಯನಡೆನುಡಿಯಿಂದಾಚರಿಸುವ ಶರಣಗಣಂಗಳೆ ಅನಾದಿ ಭಕ್ತಜಂಗಮ ಕಾಣಾ, ಕಲಿದೇವರದೇವ ಸಾಕ್ಷಿಯಾಗಿ ಸಂಗನಬಸವೇಶ್ವರಾ.
--------------
ಮಡಿವಾಳ ಮಾಚಿದೇವ
ಅಯ್ಯಾ, ತನ್ನ ತಾನರಿಯದೆ ನಾವು ಏಕಾರತಿ ದ್ವಿಯಾರತಿ [ತ್ರಿಯಾರತಿ] ಚತುರಾರತಿ ಪಂಚಾರತಿ ಷಡಾರತಿ ಸಪ್ತಾರತಿ ಅಷ್ಟಾರತಿ ನವಾರತಿ ದಶಾರತಿ ಕಡ್ಡಿಬತ್ತಿ ಕರ್ಪುರಾರತಿ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸುವ ಇಷ್ಟಲಿಂಗಪೂಜಕರೆಂದು ನುಡಿದುಕೊಂಬ ಬದ್ಧಭವಿ ಶುದ್ಧಶೈವ ಮರುಳುಮಾನವರೆನಗೊಮ್ಮೆ ತೋರದಿರಯ್ಯ. ಅದೇನು ಕಾರಣವೆಂದಡೆ, ತನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ ಅಜ್ಞಾನಾಂಧಕಾರದ ಅರುವತ್ತಾರುಕೋಟಿ ಕರಣಂಗಳೆಂಬ ಕಂಚಿನಾರತಿಗಳ ಹಂಚು ಹರಿಗಡಿದು, ಅಷ್ಟತನುಗಳ ಸುಟ್ಟುರುಹಿದ ಬೂದಿಯಿಂದ ಬೆಳಗಿ, ಚಿಜ್ಜಲದಿಂದ ತೊಳೆದು ಕಳೆದುಳಿಯಲರಿಯದೆ, ತನ್ನ ಹೃದಯಮಂದಿರದಲ್ಲಿ ನೆಲಸಿರುವ ಚಿದ್ಘನ ಚಿತ್ಪ್ರಕಾಶ ಚಿನ್ಮಯ ಶ್ರೀಗುರುಲಿಂಗಜಂಗಮಕ್ಕೆ ಮನೋಪ್ರಕೃತಿಯಳಿದ ಉನ್ಮನವೆಂಬ ಏಕಾರತಿ, ಲಿಂಗಾಂಗವೆಂಬುಭಯವಳಿದ ದ್ವಿಯಾರತಿ, ಮಲತ್ರಯಂಗಳಳಿದ ತ್ರಿಯಾರತಿ, ಚತುಃಕರಣಂಗಳಳಿದ ಚತುರಾರತಿ, ಪಂಚಭೂತ ಪಂಚವಾಯು ಪಂಚೇಂದ್ರಿಯ ಪಂಚಕ್ಲೇಶ ಪಂಚಮೂರ್ತಿಗಳ ಫಲಪದಂಗಳ ಕಳೆದುಳಿದ ಪಂಚಾರತಿ, ಷಡ್ವರ್ಗ ಷಡೂರ್ಮೆ ಷಡ್ಭ್ರಮೆ ಷಡ್ಭಾವವಿಕಾರಂಗಳಳಿದ ಷಡಾರತಿ, ಸಪ್ತಧಾತು ಸಪ್ತವ್ಯಸನಂಗಳಳಿದ ಸಪ್ತಾರತಿ, ಅಂತರಂಗದಷ್ಟಮದ ಬಹಿರಂಗದಷ್ಟಮದಂಗಳಳಿದ ಅಷ್ಟಾರತಿ, ನವಗ್ರಹಂಗಳಳಿದ ನವಾರತಿ, ದಶೇಂದ್ರಿಯ ದಶವಾಯುಗಳಳಿದ ದಶಾರತಿ. ಅಹಂಕಾರಗಳಳಿದ ಕಡ್ಡಿಬತ್ತಿ, ತನುತ್ರಯ ಗುಣತ್ರಯ ಅವಸ್ಥಾತ್ರಯ ಮನತ್ರಯ ಆತ್ಮತ್ರಯ ಭಾವತ್ರಯಂಗಳ ಕಳೆದುಳಿದ ಕರ್ಪುರಾರತಿಯ ಬೆಳಗಿ ನಿರ್ವಯಲಪದವನೈದಲರಿಯದೆ, ಬಹಿರಂಗದ ಭಿನ್ನಕ್ರೀ ಭಿನ್ನಜ್ಞಾನ ಭಿನ್ನಭಕ್ತಿ ಮುಂದುಗೊಂಡು, ಗಡ್ಡ ಜಡೆ ಮುಡಿಗಳ ಬಿಟ್ಟುಕೊಂಡು, ಲಾಂಛನವ ಹೊದ್ದುಕೊಂಡು, ಕಾಂಚನಕ್ಕೆ ಕೈಯೊಡ್ಡುತ ಕಂಚಗಾರನಂತೆ ನಾನಾ ಜಿನಸಿನ ಕಂಚ ನೆರಹಿ ಹರವಿಕೊಂಡು, ಪರಮಶಿವಲಿಂಗ ಪೂಜಕರೆಂದು ಬಗಳುವ ಪಂಚಮಹಾಪಾತಕರಿಗೆ ಕಿರಾತರು ಮೆಚ್ಚುವರಲ್ಲದೆ ಪುರಾತರು ಮೆಚ್ಚುವರೆ ? ಬದ್ಧಭವಿಯಾದ ಶೈವರು ಮೆಚ್ಚುವರಲ್ಲದೆ ಶುದ್ಧ ಸುಶೀಲ ನಿರಾಭಾರಿ ವೀರಶೈವರು ಮೆಚ್ಚುವರೆ ? ಅಜ್ಞಾನಿಗಳು ಮೆಚ್ಚುವರಲ್ಲದೆ ನಿವ್ರ್ಯಾಪಾರಿಗಳು ಮೆಚ್ಚರು. ಭಿನ್ನಕ್ರೀಯಸ್ಥರು ಮೆಚ್ಚುವರಲ್ಲದೆ ಅಭಿನ್ನಕ್ರೀಯಸ್ಥರು ಮೆಚ್ಚರು. ಇಂತಪ್ಪ ಲಿಂಗಾಂಗಸಮರಸದ ನಿರ್ಗುಣಪೂಜೆಯನೆಸಗಲರಿಯದ ಭಿನ್ನಜ್ಞಾನ ಭಿನ್ನಪೂಜೆಯನೆಸಗುವ ಮರುಳುಗಳಿಗೆ ಆರು ಮೆಚ್ಚುವರು ? ಹುಚ್ಚು ಮರುಳುಗಳಿರಾ ಸುಮ್ಮನಿರಿಯೆಂದಾತ ನಿಮ್ಮ ಶರಣ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಂಗವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ, ಜಂಗಮವೆ ಸಂಗವಾಗಿ, ಸಂಗವೆ ಸುಸಂಗವಾಗಿ, ಪ್ರಾಣವೆ ಪ್ರಸಾದವಾಗಿ, ಪ್ರಸಾದವೆ ಪ್ರಾಣವಾಗಿ. ಇಂತೀ ತ್ರಿವಿಧದಲ್ಲಿ ಸಂಪನ್ನನಾದ ಸಮತಾಪ್ರಸಾದಿ, ಸನ್ನಹಿತಪ್ರಸಾದಿ, ಸಮಾಧಾನಪ್ರಸಾದಿ. ಕಲಿದೇವಯ್ಯಾ, ಚೆನ್ನಬಸವಣ್ಣನ ಪ್ರಸಾದವ ಕೊಂಡು ನಾನು ಬದುಕಿದೆನು ಕಾಣಾ ಪ್ರಭುವೆ.
--------------
ಮಡಿವಾಳ ಮಾಚಿದೇವ
ಅಕ್ಕತಂಗಿಯರೈವರು ಒಬ್ಬನ ಅರಸಿಯರು. ಕಿರಿಯಾಕೆಯ ಕೂಡುವಡೆ ಹಿರಿಯಾಕೆ ಕುಂಟಣಿ. ಹಿರಿಯಾಕೆಯ ಕೂಡುವಡೆ ಕಿರಿಯಾಕೆ ಕುಂಟಣಿ. ಇಬ್ಬರನೂ ಕೂಡುವಡೆ ಬೇರೆಮಾಡಿ ಬೆರಸುಬಾರದೆಂದರಿದು, ಒಂದಾಗಿ ಕೂಡಲು ಒಬ್ಬಾಕೆ ಕಣ್ಣ ಕೆಚ್ಚನೆ ಮಾಡುವಳು. ಒಬ್ಬಾಕೆ ಬುದ್ಭಿಯ ಹೇಳುವಳು ಒಬ್ಬಾಕೆ ಹಾಸಿ ಕೊಡುವಳು. ಈ ಐವರನೂ ಅಪ್ಪಿಕೊಂಡು ಒಂದೆಬಾರಿ ಬೆರಸಲು ನೀರು ನೀರ ಬೆರಸಿದಂತಾಯಿತು ಕಲಿದೇವಯ್ಯಾ. ನಿಮ್ಮ ಶರಣ ಸಿದ್ಧರಾಮಯ್ಯದೇವರು ಎನಗೆ ಈ ಪಥವ ಕಲಿಸಿ, ನಿಜನಿವಾಸದಲ್ಲಿರಿಸಿದ ಕಾರಣ ಆನು ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಅಂಗವಿಲ್ಲದ ಗುರುವಿಂಗೆ ಲಿಂಗವಿಲ್ಲದ ಶಿಷ್ಯನಾಗಬೇಕು. ಶೃಂಗಾರಕ್ಕೆ ಮೆರೆಯದ ಭಕ್ತಿಯಾಗಬೇಕು. ಇಂತಪ್ಪ ಗುರುಪ್ರಸಾದವನರಿಯದೆ ಕಂಡಕಂಡವರಿಗೆ ಕೈಯನೊಡ್ಡಿ ಪ್ರಸಾದವೆಂದು ಕೊಂಬ ಮಿಟ್ಟೆಯ ಭಂಡರನೇನೆಂಬೆನಯ್ಯಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಕ್ಕರ ಗಣಿತ ಗಾಂಧರ್ವ ಜ್ಯೋತಿಷ ಆತ್ಮವಿದ್ಯೆ ತರ್ಕ ವ್ಯಾಕರಣ ಅಮರಸಿಂಹ ಛಂದಸ್ಸು ನಿಘಂಟು ಶಾಲಿಹೋತ್ರ ಗ್ರಹವಾದ ಗಾರುಡ ದ್ಯೂತ ವೈದಿಕಶಾಸ್ತ್ರ ಸಾಮುದ್ರಿಕಶಾಸ್ತ್ರ ಲಕ್ಷಣಶಾಸ್ತ್ರ ಅಶ್ವಶಿಕ್ಷೆ ಗಜಶಿಕ್ಷೆ ಗೋಕರ್ಣ ದಾಡಾಬಂಧ ಮೂಲಿಕಾಸಿದ್ಧಿ ಭೂಚರತ್ವ ಖೇಚರತ್ವ ಅತೀತ ಅನಾಗತ ವರ್ತಮಾನ ಸ್ಥೂಲ ಸೂಕ್ಷ್ಮ ಇಂದ್ರಜಾಲ ಮಹೇಂದ್ರಜಾಲ ವಡ್ಯಾನಚೇಷ್ಟೆ ಪರಕಾಯಪ್ರವೇಶ ದೂರದೃಷ್ಟಿ ದೂರಶ್ರವಣ ಋಗ್ಯಜುಃಸಾಮಾಥರ್ವಣ ಶ್ರುತಿಸ್ಮೃತಿ ಆಯುರ್ದಾಯ ನಷ್ಟಿಕಾಮುಷ್ಟಿಚಿಂತನೆ ಚೋರವಿದ್ಯೆ ಅಮೃತೋದಯ ಭಾಷಾಪರೀಕ್ಷೆ ವೀಣಾವಿದ್ಯೆ ಭೃಂಗಿವಿದ್ಯೆ ಮಲ್ಲವಿದ್ಯೆ ಶಸ್ತ್ರವಿದ್ಯೆ ಧನುರ್ವಿದ್ಯೆ ಅಗ್ನಿಸ್ತಂಭ ಜಲಸ್ತಂಭ ವಾಯುಸ್ತಂಭ ವಾದವಶ್ಯ ಅಂಜನಾಸಿದ್ಧಿ ಫುಟಿಕಾಸಿದ್ಧಿ ಮಂತ್ರತಂತ್ರಸಿದ್ಧಿ ಇವೆಲ್ಲವ ಕಲಿತಡೇನು ಅರುವತ್ನಾಲ್ಕು ವಿದ್ಯಾಪ್ರವೀಣನೆನಿಸಿಕೊಂಬನಲ್ಲದೆ ಲಿಂಗವಂತನೆನಿಸಿಕೊಂಬುದಿಲ್ಲ. ಲಿಂಗವುಳ್ಳ ಶಿವಭಕ್ತಂಗೆ ಇವರೆಲ್ಲರೂ ಕೂಡಿ ಸರಿಬಾರದೆಂದ ನಮ್ಮ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಂಗೈಯ ಲಿಂಗ ಕಂಗಳ ನೋಟದಲ್ಲಿ ಅರತ ಲಿಂಗೈಕ್ಯನ, ಮನದ ಅರಿವು ನಿರ್ಭಾವದಲ್ಲಿ ಅರತ ಲಿಂಗೈಕ್ಯನ, ಸರ್ವಾಂಗನಿಷೆ* ನಿರ್ಣಯವಾದ ಲಿಂಗೈಕ್ಯನ, ನಿಜವನುಂಡು ತೃಪ್ತನಾದ ಲಿಂಗೈಕ್ಯನ, ಮಹವನವಗ್ರಹಿಸಿ ಘನವೇದ್ಯನಾದ ಲಿಂಗೈಕ್ಯನ, ಕಲಿದೇವರದೇವ ಪ್ರಭುವೆಂಬ ಲಿಂಗೈಕ್ಯನ ಶ್ರೀಪಾದದಲ್ಲಿ ಮಗ್ನನಾಗಿರ್ದೆನು.
--------------
ಮಡಿವಾಳ ಮಾಚಿದೇವ
ಅನಾದಿ ಅಖಂಡಪರಿಪೂರ್ಣ ನಿಜಾಚರಣೆಯನಗಲದೆ ಮಹಾವೈರಾಗ್ಯದಿಂದ ಪರಶಿವಲಿಂಗಕೂ ತನಗೂ ಚಿನ್ನ ಬಣ್ಣದ ಹಾಂಗೆ, ಪುಷ್ಪ ಪರಿಮಳದ ಹಾಂಗೆ, ಶಿಖಿ ಕರ್ಪುರದ ಹಾಂಗೆ, ಉಪ್ಪು ಉದಕದ ಹಾಂಗೆ, ಅಗ್ನಿ ವಾಯುವಿನ ಹಾಂಗೆ, ಕ್ಷೀರ ಕ್ಷೀರ ಬೆರದ ಹಾಂಗೆ, ವಾರಿ ಶರಧಿಯ ಕೂಡಿದ ಹಾಂಗೆ, ತಿಳಿದುಪ್ಪ ಹೆರೆದುಪ್ಪವಾದ ಹಾಂಗೆ, ಹೆಪ್ಪು ನವನೀತದ ಹಾಂಗೆ ಸೂಜಿಕಲ್ಲಾದಂತೆ ಮತ್ರ್ಯದಲ್ಲಿರ್ದು, ಕನ್ನಡಿಯ ಪ್ರತಿಬಿಂಬ ಸೂರ್ಯನ ಕಿರಣದಂತೆ ಕಾಲ ಕಾಮರ ಪಾಶಕ್ಕೆ ಹೊರಗಾಗಿ, ಬಾವನ್ನದಿರವನೊಳಕೊಂಡು ಸರ್ವಾಚಾರಸಂಪತ್ತಿನಲ್ಲಿ ಎಡೆದೆರಪಿಲ್ಲದೆ ಮಹಾಮೋಹಿಯಾಗಿ, ಲೋಕಪಾವನಕ್ಕೋಸ್ಕರ ಸಂಚರಿಸುವಾತನೆ, ನಿರಂಜನ ಭಕ್ತಜಂಗಮ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯಾ ಅಯ್ಯಾ ಎಂದು ನೆನೆವುತ್ತಿಹರಯ್ಯಾ ಗಂಗೆವಾಳುಕಸಮಾರುದ್ರರು, ಅವರಿಗೆ ಪ್ರಸಾದಲಿಂಗವ ಸಾಹಿತ್ಯವ ಮಾಡಿದ ಕಾರಣ. ಅಯ್ಯಾ ಅಯ್ಯಾ ಎಂದು ಹೊಗಳುತ್ತಿಹರಯ್ಯಾ ಏಕಾದಶರುದ್ರರು, ಅವರಿಗೆ ಸಕಲ ನಿಃಕಲಾತ್ಮಕ ನೀನೆಯಾಗಿ ಪ್ರಾಣಲಿಂಗವ ಸಾಹಿತ್ಯವ ಮಾಡಿದ ಕಾರಣ. ಶಿವಶಿವಾ ಎನುತಿರ್ಪರಯ್ಯಾ ವಿಷ್ಣು ಮೊದಲಾದ ತ್ರೈತಿಂಶತಿಕೋಟಿ ದೇವತೆಗಳು, ಅವರಿಗೆ ಧರ್ಮಾರ್ಥಕಾಮಮೋಕ್ಷಂಗಳನಿತ್ತೆಯಾಗಿ. ಹರಹರಾ ಎನುತಿರ್ಪರಯ್ಯಾ ಬ್ರಹ್ಮ ಮೊದಲಾದ ಅಷ್ಟಾಶೀತೀಸಹಸ್ರ ಋಷಿಯರು, ಅವರಿಗೆ ಸ್ವರ್ಗ ನರಕಾದಿಗಳ ಮಾಡಿದೆಯಾಗಿ. ಮಹಾದೇವಾ ಮಹಾದೇವಾ ಎನುತಿರ್ಪರಯ್ಯಾ ದಾನವಾದಿಗಳು ಅವರಿಗೆ ಸುಕೃತ ದುಃಕೃತಂಗಳನೀವೆಯಾಗಿ. ಬಸವಾ ಬಸವಾ ಎನುತಿರ್ಪರಯ್ಯಾ ಮಹಾಭಕ್ತರು, ಅವರಿಗೆ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ತೋರಿದ ಕಾರಣ. ಉಳಿದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೆಲ್ಲ ನಿಮ್ಮುವನನಿಮಿಷವಾಗಿ ನೋಡುತಿರ್ಪರಯ್ಯಾ, ಸಕಲ ನಿಃಕಲಾತ್ಮಕ ಚೈತನ್ಯನಾದೆಯಾಗಿ. ಸಕಲವೂ ನಿನ್ನಾಧಾರ, ನಿಃಕಲವೂ ನಿನ್ನಾಧಾರ. ಸಕಲ ನಿಃಕಲದೊಡೆಯ ದೇವರದೇವ ಕಲಿದೇವಾ ನಿಮ್ಮ ಕರಸ್ಥಲದ ಹಂಗಿನೊಳಗಿರ್ದ ಕಾರಣ ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಅಯ್ಯಾ, ಅರಿವು ಏಕಾಗಿ ಧರಿಸಿದರು ಹೇಳಾ ನಿಮ್ಮ ಶರಣರು ? ಅರಿವು ಆಕಾರಕ್ಕೆ ಬಂದಲ್ಲಿ ಪ್ರಕೃತಿ ಆಯಿತ್ತು. ಅರಿವು ಹಿಂದಾಗಿ ಪ್ರಕೃತಿ ಮುಂದಾಯಿತ್ತು. ಪ್ರಕೃತಿ ಸ್ವಭಾವವನಳಿಯಬೇಕೆಂದು ಕಲಿದೇವರದೇವ ಇಷ್ಟಲಿಂಗವಾಗಿ ಅಂಗದಲ್ಲಿ ಬೆಳಗಿದನು ನೋಡಾ, ಅಲ್ಲಮಯ್ಯ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಾವು ಪರಮವಿರಕ್ತರು, ಪಟ್ಟದೊಡೆಯರು, ಅತೀತ ಚರಮೂರ್ತಿಗಳೆಂದು ಶಂಖ ಗಿಳಿಲು ದಂಡಾಗ್ರವ ಪಿಡಿದು, ಕಾವಿ ಕಾಷಾಯಾಂಬರವ ಹೊದ್ದು, ಮಹಾಘನಲಿಂಗ ಚರಮೂರ್ತಿಗಳೆಂದು ಚೆನ್ನಾಗಿ ನುಡಿದುಕೊಂಬ ತೊನ್ನ ಹೊಲೆ ಮಾದಿಗರ ಪ್ರಸಂಗಕ್ಕೆ ಮನವೆಳಸದೆ, ಮುಖವೆತ್ತಿ ನೋಡದೆ, ಶಬ್ದಮುಗ್ಧನಾಗಿ ಸುಮ್ಮನೆ ಕುಳಿತಿರ್ದನು ಕಾಣಾ ನಿಮ್ಮ ಶರಣ. ಅದೇನು ಕಾರಣವೆಂದಡೆ: ತನ್ನ ತಾನಾರೆಂದರಿಯದೆ, ತನ್ನ ಇಷ್ಟ ಮಹಾಘನಲಿಂಗದ ಗೊತ್ತ ಮುಟ್ಟದೆ, ತನುಮನಧನವೆಂಬ ತ್ರಿವಿಧಪ್ರಸಾದವನರ್ಪಿಸಿ, ತ್ರಿವಿಧ ಪ್ರಸಾದವ ಗರ್ಭೀಕರಿಸಿಕೊಂಡ ಪ್ರಸನ್ನ ಪ್ರಸಾದವ ಸ್ವೀಕರಿಸಿ, ಪರತತ್ವ ಪ್ರಸಾದಮೂರ್ತಿ ತಾನಾಗಲರಿಯದೆ, ಉಚ್ಚಂಗಿ ದುರ್ಗಿಗೆ ಬಿಟ್ಟ ಪೋತರಾಜನಂತೆ ಮಾರು ಮಾರು ಜಡೆ ಮುಡಿ ಗಡ್ಡಗಳ ಬಿಟ್ಟುಕೊಂಡು, ಡೊಂಬ ಜಾತಿಕಾರರಂತೆ ವೇಷವ ತೊಟ್ಟು, ಸಂಸ್ಕøತಾದಿ ಪ್ರಕೃತಾಂತ್ಯಮಾದ ನಾನಾ ಶಾಸ್ತ್ರವ ಹೇಳಿ, ಸುಡುಗಾಡಸಿದ್ಧಯ್ಯಗಳಂತೆ ಕುಟಿಲ ಕುಹಕ ಯಂತ್ರ ತಂತ್ರಗಳ ಕಟ್ಟುತ, ಪುರಜನರ ಮೆಚ್ಚಿಸಬೇಕೆಂದು ಅಯ್ಯಾ, ನಾವು ಕೆರೆ ಬಾವಿ ಮಠಮಾನ್ಯ ಮದುವೆ ಮಾಂಗಲ್ಯ ದೀಕ್ಷಾಪಟ್ಟ ಪ್ರಯೋಜನ ಔತಣ ಅನ್ಯಕ್ಷೇತ್ರ ಅರವಟ್ಟಿಗೆ ದಾಸೋಹ ಪುರಾಣ ಪುಸ್ತಕ ಮಾಡಿಸಬೇಕೆಂದು ಗುರುಲಿಂಗಜಂಗಮಕ್ಕಲ್ಲದೆ ನಿರಾಭಾರಿ ವೀರಶೈವಕ್ಕೆ ಹೊರಗಾಗಿ, ನಾನಾ ದೇಶವ ತಿರುಗಿ, ಹುಸಿಯ ಬೊಗಳಿ, ವ್ಯಾಪಾರದ ಮರೆಯಿಂದ ನಡುವೂರ ಬೀದಿ ನಡುವೆ ಕುಳಿತು, ಪರರೊಡವೆಯ ಅಪಹರಿಸುವ ಸೆಟ್ಟಿ ಮುಂತಾದ ಸಮಸ್ತ ಕಳ್ಳರ ಮಕ್ಕಳ ಕಾಡಿ ಬೇಡಿ, ಅವರು ಕೊಟ್ಟರೆ ಹೊಗಳಿ, ಕೊಡದಿರ್ದಡೆ ಬೊಗಳಿ, ಆ ಭ್ರಷ್ಟ ಹೊಲೆ ಮಾದಿಗರು ಕೊಟ್ಟ ದ್ರವ್ಯಂಗಳ ಕೊಂಡುಬಂದು ಚೋರರೊಯ್ವರೆಂದು ಮಠದೊಳಗೆ ಮಡಗಿಕೊಂಡಂಥ ದುರ್ಗುಣ ದುರಾಚಾರಿಗಳ ಶ್ರೀಗುರು ಲಿಂಗ ಜಂಗಮವೆಂದು ಕರೆತಂದು, ತೀರ್ಥ ಪ್ರಸಾದವ ತೆಗೆದುಕೊಂಬವರಿಗೆ ಇಪ್ಪತ್ತೆಂಟುಕೋಟಿಯುಗ ಪರಿಯಂತರದಲ್ಲಿ ನರಕ ಕೊಂಡದಲ್ಲಿಕ್ಕುವ ಕಾಣಾ, ನಿಮ್ಮ ಶರಣ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯಾ, ತನ್ನಾದಿ ಮಧ್ಯಾವಸಾನವ ತಿಳಿದು, ಭವಿ ಭಕ್ತ, ಆಚಾರ ಅನಾಚಾರ, ಯೋಗ್ಯ ಅಯೋಗ್ಯ, ಅರ್ಪಿತ ಅನರ್ಪಿತ, ಸುಸಂಗ ದುಸ್ಸಂಗ, ಸುಚಿತ್ತ ಕುಚಿತ್ತ, ಸುಬುದ್ಧಿ ಕುಬುದ್ಧಿ, ಅಹಂಕಾರ ನಿರಹಂಕಾರ, ಸುಮನ ಕುಮನ, ಸುಜ್ಞಾನ ಅಜ್ಞಾನ, ಸದ್ಭಾವ ದುರ್ಭಾವ, ಪಾಪ ಪುಣ್ಯ, ಧರ್ಮ ಕರ್ಮ, ಸ್ವರ್ಗ ನರಕ, ಇಹಪರವೆಂಬ ಭೇದಾಭೇದವ ತಿಳಿದು, ಶೈವಮಾರ್ಗದಷ್ಟಾಂಗಯೋಗವನುಳಿದು, ವೀರಶೈವ ಶಿವಯೋಗಸಂಪನ್ನನಾಗಿ ಭಕ್ತಿ ಜ್ಞಾನ ವೈರಾಗ್ಯದಲ್ಲಾಚರಿಸಿ, ಬಕಧ್ಯಾನವನುಳಿದು, ರಾಜಹಂಸನ ಹಾಗೆ ಅಸತ್ಯವನುಳಿದು, ಸುಸತ್ಯದಲ್ಲಾಚರಿಸುವ ಭಕ್ತ ಜಂಗಮವೇ ದ್ವಿತೀಯ ಶಂಭುವೆಂದು ಅವರಂಗಣವ ಕಾಯ್ದು, ಅವರುಟ್ಟುದ ತೊಳೆದು, ಅವರೊಕ್ಕುದ ಕೈಕೊಂಡು, ಅವರುಗಳ ಹಾರೈಸಿ, ಅವರ ಕಡೆಬಾಗಿಲ ಕಾಯ್ದು, ಅವರ ತೊತ್ತಿನ ತೊತ್ತಾಗಿ ಬದುಕಿದೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯಾ, ನಿಮ್ಮ ಧ್ಯಾನದಲ್ಲಿರಿಸಲೊಲ್ಲದೆ ಬಸವಣ್ಣನ ಧ್ಯಾನದಲ್ಲಿರಿಸಯ್ಯಾ ಎನ್ನನು. ಲಿಂಗವೇದ್ಯ ಬಸವಣ್ಣ, ಜಂಗಮವೇದ್ಯ ಬಸವಣ್ಣ. ಪ್ರಸಾದವೇದ್ಯ ಬಸವಣ್ಣ, ನಿಜಪದವೇದ್ಯ ಬಸವಣ್ಣ. ಮಹಾವೇದ್ಯ ಬಸವಣ್ಣ. ಇಂತು ಬಸವಣ್ಣನ ಸಂಗದಲ್ಲಿರಿಸು, ಕಲಿದೇವರದೇವ.
--------------
ಮಡಿವಾಳ ಮಾಚಿದೇವ