ಅಥವಾ

ಒಟ್ಟು 258 ಕಡೆಗಳಲ್ಲಿ , 56 ವಚನಕಾರರು , 182 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇರುಹೆ ಅಂಜದೆ ಮದ ಸೊಕ್ಕಿದ ಐದಾನೆಯ ತನ್ನ ಕಡೆಗಾಲಿನಲ್ಲಿ ಕಟ್ಟಿ ಸದಮದದಲ್ಲಿ ಎಳೆವುತ್ತದೆ. ಆನೆಯ ಕೊಂಬು ಮುರಿದು, ಸುಂಡಿಲುಡುಗಿ, ಮದ ಸೋರಿ, ಗಜಘಟವಳಿದು ಹೋಯಿತ್ತು. ಇರುಹಿನ ಕಾಲು ಐಗಜವ ಕೊಂದು, ಮೂರು ಹುಲಿಯ ಮುರಿದು, ನನಗಿನ್ನಾರೂ ಅಡಹಿಲ್ಲಾಯೆಂದು ಹೋಯಿತ್ತು, ಸದಾಶಿವಮೂರ್ತಿಲಿಂಗದಲ್ಲಿಗೆ ಎಯ್ದಿತ್ತು.
--------------
ಅರಿವಿನ ಮಾರಿತಂದೆ
ಪೂಜೆಯಲ್ಲಿ ಲಕ್ಷಿತವಪ್ಪವರು ಪುಣ್ಯದ ಆಗಿಂಗೆ ಒಡಲು. ದಾಸೋಹವೆಂಬ ಸೋಹವನರಿದಲ್ಲಿ ಚತುರ್ವಿಧಫಲಪದದಾಸೆಗೆ ಒಡಲು. ಇಂತೀ ಉಭಯದ ಪ್ರೀತಿಯನರಿತು ತೋರಿದ ತೋರಿಕೆ ಬಂದಂತೆ, ಅವನಾರೈದು ಗುರುವಿಂಗೆ ತನು ಹೋಯಿತ್ತು; ಲಿಂಗಕ್ಕೆ ಮನ ಹೋಯಿತ್ತು; ಜಂಗಮಕ್ಕೆ ಧನ ಹೋಯಿತ್ತು;. ಇಂತೀ ಎಲ್ಲ ಲಕ್ಷ್ಯದಲ್ಲಿ ಲಕ್ಷಿಸಿ, ನೀವು ಕೈಲಾಸಕ್ಕೆ ಹೋದೆಹೆನೆಂಬ ಕಲ್ಲೆದೆಗೆ ನಾನಂಜುವೆ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಮುಟ್ಟದ ಮುನ್ನವೆ ಹುಟ್ಟಿ ಹೆತ್ತಲ್ಲಿ ಸತ್ತುದು ನೋಡಾ! ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು. ಆದಲ್ಲಿ ಹೋಯಿತ್ತು ನೋಡಾ! ಹೋದಾದಲ್ಲಿ ನಿಂದಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವುಲಿಂಗೈಕ್ಯರಲ್ಲಿ.
--------------
ಚಂದಿಮರಸ
ದಾಯದಲ್ಲಿ ಹುಟ್ಟಿದ ಧ್ವನಿ ಆ ದಾಯದಲ್ಲಿ ಹೋಯಿತ್ತು. ಆ ದಾಯ ನಿರಾಕಾರವಾಗಿ ಸಂಗ ಸಂಯೋಗವಾಯಿತ್ತಯ್ಯ ಸಂಗಯ್ಯ.
--------------
ನೀಲಮ್ಮ
ಸಂಪಗೆಯ ತಂಬೆಲರಿನಲ್ಲಿ ಒಂದು ಭೃಂಗ ತತ್ತಿಯನಿಕ್ಕಿತ್ತು. ತನ್ನ ಬಾಳು ಕುಸುಮದ ವಾಸನೆ ಬಲಿವನ್ನಕ್ಕ ತುಂಬಿಯಿದ್ದಿತ್ತು. ವಾಸನೆ ತೋರಿ ತುಂಬಿ ಸತ್ತು ಮರಿ ಹಾರಿ ಹೋಯಿತ್ತು. ಆ ಮರಿಯ ಅರಿವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು? ಕೊಡದಡೆ ಒಡಗೂಡಿ ಬಯ್ಯಲೇತಕ್ಕೆ? ಒಡೆಯರು ಭಕ್ತರಿಗೆ ಮಾಡಿಹೆನೆಂದು ಗಡಿತಡಿಗಳಲ್ಲಿ ಕವಾಟ ಮಂದಿರ ಮಂದೆ ಗೊಂದಿಗಳಲ್ಲಿ ನಿಂದು ಕಾಯಲೇತಕ್ಕೆ? ಈ ಗುಣ ಕಾಯಕದಂದವೆ? ಈ ಗುಣ ಹೊಟ್ಟೆಗೆ ಕಾಣದ ಸಂಸಾರದ ಘಟ್ಟದ ನಿಲುವು. ಉಭಯ ಭ್ರಷ್ಟಂಗೆ ಕೊಟ್ಟ ದ್ರವ್ಯ ಮೇಖಲೇಶ್ವರಲಿಂಗಕ್ಕೆ ಮುಟ್ಟದೆ ಹೋಯಿತ್ತು.
--------------
ಕಲಕೇತಯ್ಯ
ಅಗ್ನಿಯ ಸೋಂಕಿದಲ್ಲಿ ಕನಕದ ಕಲಂಕ ಹೋಯಿತ್ತು. ಜಲವ ಸೋಂಕಿದಲ್ಲಿ ದೇಹದ ಕಲಂಕ ಹೋಯಿತ್ತು. ಬಾಗೀರಥಿಯ ಸೋಂಕಿದಲ್ಲಿ ದೋಷ ದಗ್ಧವಾಗಿ ಹೋಯಿತ್ತು. ನಮ್ಮ ಮಲ್ಲಿಕಾರ್ಜುನನೆಂಬ ಲಿಂಗವ ಸೋಂಕಿದಲ್ಲಿ ಪ್ರಾರಬ್ಧತ್ರಯ ನಿವಾರಣವಾಗಿ ಹೋಯಿತ್ತು, ಕಂಡೆಯಾ ಬಾಚರಸಯ್ಯಾ.
--------------
ಸಿದ್ಧರಾಮೇಶ್ವರ
ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ ಆ ಆತ್ಮ ಒಂದೋ, ಎರಡೋ? ಸರ್ವಯೋನಿಗಳಲ್ಲಿ ಕೂಡುವ ಶಿಶ್ನೆಯ ಸುಖ ಒಂದೋ, ಎರಡೋ ? ಆತ್ಮ ಒಂದೆಂದಡೆ ಘಟಭೇದಕ್ಕೆ ಭಿನ್ನವಾಗಿಪ್ಪುದು. ಆತ್ಮ ಹಲವೆಂದಡೆ ಚೇತನ ಸ್ವಭಾವ ಏಕವಾಗಿಪ್ಪುದು. ಆ ಘಟ ಆತ್ಮನ ಕೂಟ ಎಂತೆಯಿದ್ದಿತ್ತು ಅಂತೆ ಸುಖವಿದ್ದಿತ್ತು. ಯೋನಿಯ ಘಟ ಸಾಕಾರ ಎಂತೆಯಿದ್ದಿತ್ತು ಅಂತೆಯಿದ್ದಿತ್ತು ಶಿಶ್ನೆಯ ಯೋಗ. ಆತ್ಮನ ಘಟಸಂಗ ಜಾತಿಯ ಸುಜಾತಿಯ ಕೂಟಸ್ಥ ವಿಶ್ವಾಸದ ಭ್ರಾಂತಿಯ ಭ್ರಾಮಕಯೆಂತಿದ್ದಿತ್ತು ಅಂತೆಯಿದ್ದಿತ್ತು ಆತ್ಮ. ಇಂತೀ ಘಟದ ಸಾಕಾರವಡಗಿ ತೋರುವ ಆತ್ಮನ ಪರಿ. ಭಿನ್ನ ಇಂದ್ರಿಯಂಗಳ ಹಲವು ಸಂಚಿನ ಯೋನಿ. ಅದ ಸಂಧಿಸಿ ಕೂಡಿಹೆನೆಂಬ ಅರಿಕೆಯ ತೃಷ್ಣೆಯ ಶಿಶ್ನೆ ತಲಹಗೆಟ್ಟಲ್ಲಿ, ಭ್ರಾಂತಿನ ಭ್ರಮೆಯ ಸೂತಕ ಹೋಯಿತ್ತು, ಕಾಮಧೂಮ ಧೂಳೇಶ್ವರನ ತಾನು ತಾನಾದ ಕಾರಣ.
--------------
ಮಾದಾರ ಧೂಳಯ್ಯ
ನಾಲ್ಕು ವೇದವನೋದಿದ ವಿಪ್ರರ ಮನೆಯ ಎಣ್ಣೆಹೊಳಿಗೆ ತುಪ್ಪ ಸಕ್ಕರೆ ಎಂದಡೆ ನಮ್ಮ ಶಿವಭಕ್ತರ ಮನೆಯ ಶ್ವಾನ, ಮೂಸಿನೋಡಿ ಒಲ್ಲದೆ ಹೋಯಿತ್ತು. ಅದೆಂತೆಂದಡೆ:ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು, ತಮ್ಮ ಪಾಕಕ್ಕೆ ಪಾದರಕ್ಷೆಯ ತೆರೆಯ ಹಿಡಿದಿದ್ದರಾಗಿ. ಆ ಶ್ವಾನನೆ ಶುಚಿಯೆಂದು ಹಾಕಿದ ಮುಂಡಿಗೆಯ ಆರಾದಡೂ ಎತ್ತುವಿರೊ, ಜಗದ ಸಂತೆಯ ಸೂಳೆಯ ಮಕ್ಕಳಿರಾ ? ಜಗಕ್ಕೆ ಪಿತನೊಬ್ಬನೆ ಅಲ್ಲದೆ ಇಬ್ಬರೆಂದು ಬಗಳುವನ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅವನಂಗಳ ಮೆಟ್ಟಿಕ್ಕುವೆನೆಂದ_ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಕಾಲಚಕ್ರದ ವಚನ : ಏಕಂ ಏಕವಾದ ವಸ್ತುವ ಲೋಕಾಲೋಕಂಗಳರಿಯವು ಸ್ಥೂಲ ಸೂಕ್ಷ್ಮವೆನುತಿರ್ಪರೆಲ್ಲರೂ, ಆತನೀತ ಬೇರೆ ಮತ್ತೊಬ್ಬಾತನೆಂಬ ಭ್ರಮೆಯಲ್ಲಿ ಭೂತಪ್ರಾಣಿಗಳವರೆತ್ತ ಬಲ್ಲರು ಆತನ ಘನವ. ಚಿಟುಕು ಮುನ್ನೂರರವತ್ತು ಕೂಡಿದಡೆ ಒಂದು ವಿಘಳಿಗೆ, ಆ ವಿಘಳಿಗೆ ಅರುವತ್ತು ಕೂಡಿದೊಡೆ ಒಂದು ಘಳಿಗೆ, ಆ ಘಳಿಗೆ ಅರುವತ್ತು ಕೂಡಿದೊಡೆ ಒಂದು ದಿನ. ದಿನ ಮೂವತ್ತು ಕೂಡಿದೊಡೆ ಒಂದು ಮಾಸ ಮಾಸ ಹನ್ನೆರಡು ಕೂಡಿದೊಡೆ ಒಂದು ವರುಷ ವರುಷ ಅರುವತ್ತು ಕೂಡಿದೊಡೆ ಒಂದು ಸಂವತ್ಸರ_ ಇಂತೀ ಕಾಲಚಕ್ರಂಗಳು ಈ ಪರಿಧಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ. ನಾಲ್ಕು ಯುಗಂಗಳು ಬೇರೆ ಬೇರೆ ಕಟ್ಟಿದ ಕಟ್ಟಳೆಯೊಳು, ತಿರುಗಿ ಬರುತ್ತಿಹವು ಕಾಣಿರೆ. ಕೃತಯುಗ ಹದಿನೇಳು ಲಕ್ಷವು ಇಪ್ಪತ್ತೆಂಟುಸಾವಿರವರ್ಷ ವರ್ತಿಸಿ ನಿಂದಿತ್ತು. ತ್ರೇತಾಯುಗ ಹನ್ನೆರಡು ಲಕ್ಷವು ತೊಂಬತ್ತಾರುಸಾವಿರ ವರ್ಷ ವರ್ತಿಸಿ ನಿಂದಿತ್ತು. ದ್ವಾಪರಯುಗ ಎಂಟು ಲಕ್ಷವು ಅರುವತ್ತುನಾಲ್ಕುಸಾವಿರ ವರ್ಷ ವರ್ತಿಸಿ ನಿಂದಿತ್ತು. ಕಲಿಯುಗ ನಾಲ್ಕುಲಕ್ಷವು ಮೂವತ್ತೆರಡುಸಾವಿರ ವರ್ಷ ವರ್ತಿಸಿ ನಿಂದಿತ್ತು. _ಇಂತೀ ನಾಲ್ಕು ಯುಗಂಗಳು ಕೂಡಿ ಒಂದಾಗಿ ಮೇಳಯಿಸಿದೊಡೆ, ನಾಲ್ವತ್ತು ಮೂರು ಲಕ್ಷವು ಇಪ್ಪತ್ತುಸಾವಿರ ವರುಷ ಕಟ್ಟಳೆಯಾಯಿತ್ತು. ಈ ನಾಲ್ಕುಯುಗಂಗಳು ಇಪ್ಪತ್ತೊಂದು ಬಾರಿ ತಿರುಗಿದಡೆ ಸುರಪತಿಗೆ ಪರಮಾಯು, ಬ್ರಹ್ಮಂಗೆ ಜಾವ, ಅಷ್ಟಾಶಿತಿ ಸಹಸ್ರ ಋಷಿಯರು ಸಾವಿರಬಾರಿ ತಿರುಗಿದಡೆ ಬ್ರಹ್ಮಂಗೆ ಆಯುಷ್ಯ ನೂರಪ್ಪುದು, ವಿಷ್ಣುವಿಂಗೆ ಜಾವಪ್ಪುದು. ಆ ವಿಷ್ಣುವಿನ ಒಂದು ದಿನ(ಜಾವ?)ದೊಳಗೆ ನಾಲ್ಕು ಬಾರಿ ಹುಟ್ಟಿ ನಾಲ್ಕು ಬಾರಿ ಹೊಂದುವ ಬ್ರಹ್ಮನು, ಆ(ದಿ) ವಿಷ್ಣುವಿನ ಒಂದು ದಿನವಪ್ಪುದು, (ಅಂಥ ವಿಷ್ಣುವಿನ ಒಂದು ದಿನದಲ್ಲಿ) ಸಮಸ್ತ ಈರೇಳು ಭುವನಂಗಳೆಲ್ಲ ಭೂತಸಂಹಾರ , ಅಂಥಾ ಭೂತಸಂಹಾರಗಳು ಹದಿನೆಂಟು ಲಕ್ಷವು ಇಪ್ಪತ್ತೆಂಟುಸಹಸ್ರ ವರುಷ ತಿರುಗಲು ಪೃಥ್ವಿಯೆಲ್ಲಾ ಜಲಪ್ರಳಯ. ಅಂಥಾ ಜಲಪ್ರಳಯವೆಂಟು ಬಾರಿ ತಿರುಗಿದಡೆ ವಿಷ್ಣುವಿಂಗೆ ಮರಣ, ರುದ್ರಂಗೆ ನಿಮಿಷ. ಅಂಥಾ ರುದ್ರನ ಒಂದು ನಿಮಿಷದಲ್ಲಿ ಅತಳ ವಿತಳ ಸುತಳ ಮಹೀತಳ ರಸಾತಳ ತಳಾತಳ ಪಾತಾಳ_ ಇಂತು ಕೆಳಗೇಳು ಭುವನಂಗಳು, ಮೇಲೆ, ಸತ್ಯಲೋಕ ಜನರ್ಲೋಕ ತಪೋಲೋಕ ಮಹರ್ಲೋಕ, ಸ್ವರ್ಲೋಕ ಭುವರ್ಲೋಕ ಭೂಲೋಕ ಮೊದಲಾಗಿ_ಇಂತೀ ಲೋಕಾಲೋಕಂಗಳೆಲ್ಲ ಮುಳುಗಿ ಮಹಾಪ್ರಳಯವಾದಲ್ಲಿ ರುದ್ರಲೋಕವೊಂದುಳಿಯೆ, ಆ ರುದ್ರಂಗೆ ಒಂದುದಿನ. ಅಂಥಾದಿನ ಮುನ್ನೂರರವತ್ತು ಕೂಡಿದಡೆ ಒಂದು ವರುಷ. ಅಂಥಾ ವರುಷ ಶತಕೋಟಿ ಕೂಡಿದಡೆ ರುದ್ರಂಗೆ ಪರಮಾಯು. ಅಂಥಾ ರುದ್ರರು ಅನೇಕರು ಹೋದರಲ್ಲಾ, ಮತ್ತಂ ಪಶುಪತಿ, ಶಂಕರ, ಶಶಿಧರ, ಸದಾಶಿವ, ಗೌರೀಪತಿ, ಮಹಾದೇವ ಈಶ್ವರರೆಂಬವರು ಆ ದಿನದಲ್ಲಿ ಇವರು ಪ್ರಮಥಗಣೇಶ್ವರರು, ತಪೋರಾಜ್ಯವನುಂಬರು. ತಪಕ್ಕೆ ಬಿಜಯಂಗೈವರು ಆ ರುದ್ರರು. ಲೋಕಾಲೋಕಂಗಳು ಕೂಡಿ ಭೂತ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು. ಬಳಿಕ ಶೂನ್ಯವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು ಬಳಿಕ ಕಾಳಾಂಧರ ವರ್ತಿಸುತ್ತಿದ್ದಿತ್ತೊಂದು ಕೆಲವು ಕಾಲ, ಅದು ತೊಡೆದು ಹೋಯಿತ್ತು_ಬಳಿಕ ಮಹಾ ಪ್ರಕಾಶದ ಬೆಳಗು. ಇಂತಹ ಕಾಲಂಗಳು ಈ ಪರಿಯಲ್ಲಿ ತಿರುಗಿ ಬರುತ್ತಿಹವು ಕಾಣಿರೆ ! ಅಂತಹ ಕಾಲಂಗಳೂ ಅರಿಯವು, ಅಂತಹ ದಿನಂಗಳೂ ಅರಿಯವು ಅಂತಹ ದೇವತೆಗಳೂ ಅರಿಯರು,_ ಅಪ್ರಮಾಣ ಅಗಮ್ಯ ಅಗೋಚರ ಉಪಮಿಸಬಾರದು ಅಂತಿಂತೆನಲಿಲ್ಲ ಗುಹೇಶ್ವರಲಿಂಗ ನಿರಂಜನ ನಿರಾಳ ! ನಿರಾಮಯ !
--------------
ಅಲ್ಲಮಪ್ರಭುದೇವರು
ಎನ್ನ ಮನಸ್ಸು ಹೊನ್ನು ಹೆಣ್ಣು ಮಣ್ಣ ನೆನನೆನೆದು ನಿಮ್ಮ ನೆನಯಲೊಲ್ಲದು ನೋಡ. ಎನ್ನ ಕಾಯ ನಿಮ್ಮ ಮುಟ್ಟದೆ ಸಂಸಾರಕರ್ಮವನೆ ಮಾಡುತ್ತಿಪ್ಪುದು ನೋಡ. ಎನ್ನ ಪ್ರಾಣ ನಿಮ್ಮ ಮುಟ್ಟದೆ ಪ್ರಪಂಚೆನೊಳಗೇ ಮುಳುಗುತ್ತಿಪ್ಪುದು ನೋಡ. ಎನ್ನ ಭಾವ ನಿಮ್ಮ ಭಾವಿಸಿ ಭ್ರಮೆಯಳಿಯದೆ, ಸಂಸಾರ ಭಾವನೆ ಸಂಬಂಧವಾಗಿ ಮುಂದುಗಾಣದೆ, ಮೋಕ್ಷಹೀನನಾಗಿರ್ದೆನಯ್ಯ. ಸುರಚಾಪದಂತೆ ತೋರಿ ಅಡಗುವ ಅನಿತ್ಯ ತನುವನು ನಿತ್ಯವೆಂದು, ನಿರುತವೆಂದು ವೃಥಾ ಹೋಯಿತ್ತು ಎನ್ನ ವಿವೇಕ. ಸಂಸಾರದಲ್ಲಿ ಸವೆಸವೆದು ಅವಿವೇಕಿಯಾದೆನಯ್ಯ. ಎನ್ನ ಅವಿವೇಕವ ಕಳೆದು, ಶಿವತತ್ವವಿವೇಕವನಿತ್ತು ಕರುಣಿಸಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಟ್ಟಡವಿಯಲ್ಲಿ ಕೆಂಡದ ಮಳೆ ಕರೆದು ಊರಡವಿಯನೊಂದಾಗಿ ಸುಟ್ಟಿತ್ತು ನೋಡಾ. ಊರೈವರನಾರೈವರ ಮೂಗು ಹೋಯಿತ್ತು ನೋಡಾ. ಹೋಗದ ಊರಿನ ಬಾರದ ದಾರಿಯ ಕಂಡು ಸುಖಿಯಾದೆನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಭಕ್ತರೆಲ್ಲರೂ ಲಂದಣಿಗರಾಗಿ ಹೋಯಿತ್ತು. ಜಂಗಮಗಳೆಲ್ಲರೂ (ಜಂಗಮವೆಲ್ಲ?) ಉಪಜೀವಿಗಳಾಗಿ, ಹೋದರು (ಹೋಯಿತ್ತು?). ಇದೇನೊ? ಇದೆಂತೊ? ಅರಿಯಲೆ ಬಾರದು. ಕಾಯಗುಣ ನಾಸ್ತಿಯಾದಾತ ಭಕ್ತ, ಪ್ರಾಣಗುಣ ನಾಸ್ತಿಯಾದಾತ ಜಂಗಮ, ಉಳಿದವೆಲ್ಲವ ಸಟೆಯೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಜಂಬೂದ್ವೀಪ ನವಖಂಡ ಸುಕ್ಷೇತ್ರವೆಂಬ ಕಾಯಪುರದ ಒಂದು ಪಟ್ಟಣವ ಸಾಧಿಸುವನೆಂಬರಿಗೆ ಸಾಧ್ಯವಿಲ್ಲ ಭೇದಿಸುವೆನೆಂಬರಿಗೆ ಭೇದ್ಯವಲ್ಲ ಮರಹು ಮಹಾಕತ್ತಲೆಗಳೆಂಬ (ಕ)ರಿಗಳು ಕುಹಕವೆಂಬ ಕೊತ್ತಳ, ಮಹಾಪಾಶ ಉನ್ಮತ್ತ ಅಹಂಕಾರವೆಂಬುದೊಂದು ಆಳು ಕುದುರೆ ಇದನಾರು ಸಾಧಿಸಬಲ್ಲರಯ್ಯಾ ಪ್ರಾಣಪಂಚಾಕ್ಷರಿಯನೆ ನಿರ್ಮಿಸಿಕೊಂಡು ಹಿಂದಣಬೇರ ಕಟ್ಟೊರಿಸಿ ಕಿತ್ತು, ಮುಂದಣ ಭವಾಂಬುಧಿಯನೆಲ್ಲ ಬಿಟ್ಟು ಮನವೆಂಬ ಬಿಲ್ಲಿಗೆ ತನುವೆಂಬ ಹೆದೆಯ ಮಾಡಿಕೊಂಡು ಗುರುವೆಂಬ ಗುರಿಯ ನೋಡಿಕೊಂಡು, ಏಕಭಾವದಲ್ಲಿ ಎಸೆವುತ್ತಿರಲು ಭವಹರಿದು, ಕಾಲಕರ್ಮದ ಶಿರವರಿದು ಅಂಗವಿಕಾರವೆಂಬ ಅರಸು ಸತ್ತು, ಪಂಚಭೂತಗಳೆಲ್ಲ ಪ್ರಳಯಕ್ಕೊಳಗಾದವು. ಅಷ್ಟಮದಂಗಳ ನಷ್ಟವಾಯಿತ್ತು ಕೋಟೆ ಕೋಳು ಹೋಯಿತ್ತು, ಪಟ್ಟಣ ಸಾಧ್ಯವಾಯಿತ್ತು ಒಳಕೋಟೆಗೆ ಕಿಚ್ಚನ್ನಿಕ್ಕೆ, ಪೃಥ್ವಿ ವಿಶ್ವವೆಲ್ಲ ಬೆಂದು ಬೆಳಕಾಯಿತ್ತು_ ಇಂತಪ್ಪ ಗುರು-ಲಿಂಗ-ಜಂಗಮಕ್ಕೆ ಸಮವಾಗಿ ಸಿಕ್ಕಿತ್ತು ಸಂಸಾರಬಯಲು ಇಂತಪ್ಪ ಆ ಪ್ರಸಾದವನಾರು ಬಲ್ಲರೆಂದರೆ ಪ್ರಭುವಿನ ಬಳಿಯ ಬಸವಣ್ಣಂಗಲ್ಲದೆ ಅಳವಡದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಹೊಸ್ತಿಲೊಳಗಿರಿಸಿದ ಜ್ಯೋತಿಯಂತೆ ಒಳಗೆ ನೋಡುವನು ತಾನೆ, ಹೊರಗೆ ನೋಡುವನು ತಾನೆ. ಅರಿದೆನೆಂಬುವನು ತಾನೆ, ಮರೆದೆನೆಂಬುವನು ತಾನೆ. ಕಂಡೆನೆಂಬವನು ತಾನೆ, ಕಾಣೆನೆಂಬವನು ತಾನೆ. ದೃಷ್ಟ ದೃಕ್ಕು ದೃಶ್ಯವೆಂಬ ತ್ರಿಪುಟಿ ಭೇದವ ಮೀರಿ. ತ್ರಿಕೂಟವನೇರಿ, ಅತ್ತಲೆ ನೋಡುತ್ತಿರಲು, ಹಿತ್ತಲ ಕದವ ತೆರೆದು ಮತ್ತವಾಗಿ ಎತ್ತಲೆಂದರಿಯದೆ, ಸತ್ತುಚಿತ್ತಾನಂದದಲ್ಲಿ ಆಡುವ ಶರಣನ ಇರವೆಂತೆಂದಡೆ: ಬಿತ್ತಲಿಲ್ಲ ಬೆಳೆಯಲಿಲ್ಲ; ಒಕ್ಕಲಿಲ್ಲ ತೂರಲಿಲ್ಲ. ಇವನೆಲ್ಲಾ ಇಕ್ಕಲಿಸಿ ನಿಂದು ಮಿಕ್ಕು ಮೀರಿ ಕುಕ್ಕುಂಭೆ ಮೇಲೆ ಕುಳಿತುಕೊಂಡು ನೋಡುತ್ತಿರಲು, ಹಡಗೊಡೆಯಿತ್ತು; ಒಡವೆ - ವಸ್ತು, ಮಡದಿ -ಮಕ್ಕಳು ನೀರೊಳಗೆ ನೆರೆದು ಹೋಯಿತ್ತು. ಒಡನೆ ತಂಗಾಳಿ ಬಂದು ಬೀಸಲು, ತಂಪಿನೊಳಗೆ ನಿಂದು, ಗುಂಪು ಬಯಲಾಗಿ ಗೂಢವಾಗಿ ಆಡುವ ಶರಣ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಇನ್ನಷ್ಟು ... -->