ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಕಕ್ಷೆಯಲ್ಲಿ ಸ್ವಾಯತವಾದನಯ್ಯಾ ಶಂಕರದಾಸಿಮಯ್ಯನು. ಎನ್ನ ಕರಸ್ಥಲದಲ್ಲಿ ಸ್ವಾಯತವಾದನಯ್ಯಾ ಉರಿಲಿಂಗಪೆದ್ದಯ್ಯನು. ಎನ್ನ ಉರಸೆಜ್ಜೆಯಲ್ಲಿ ಸ್ವಾಯತವಾದನಯ್ಯ ಘಟ್ಟಿವಾಳ ಮದ್ದಯ್ಯನು. ಎನ್ನ ಅಮಳೋಕ್ಯದಲ್ಲಿ ಸ್ವಾಯತವಾದನಯ್ಯಾ ಅಜಗಣಯ್ಯನು. ಎನ್ನ ಮುಖಸೆಜ್ಜೆಯಲ್ಲಿ ಸ್ವಾಯತವಾದನಯ್ಯಾ ನಿಜಗುಣದೇವರು. ಎನ್ನ ಶಿಖೆಯಲ್ಲಿ ಸ್ವಾಯತವಾದನಯ್ಯಾ ಅನಿಮಿಷದೇವರು. ಎನ್ನ ಘ್ರಾಣದಲ್ಲಿ ಸ್ವಾಯತವಾದನಯ್ಯಾ ಏಕೋರಾಮಿತಂದೆಗಳು. ಎನ್ನ ಜಿಹ್ವೆಯಲ್ಲಿ ಸ್ವಾಯತವಾದನಯ್ಯಾ ಪಂಡಿತಾರಾಧ್ಯರು. ಎನ್ನ ನೇತ್ರದಲ್ಲಿ ಸ್ವಾಯತವಾದನಯ್ಯಾ ರೇವಣಸಿದ್ದೇಶ್ವರದೇವರು. ಎನ್ನ ತ್ವಕ್ಕಿನಲ್ಲಿ ಸ್ವಾಯತವಾದನಯ್ಯಾ ಸಿದ್ಧರಾಮೇಶ್ವರದೇರು. ಎನ್ನ ಶ್ರೋತ್ರದಲ್ಲಿ ಸ್ವಾಯತವಾದನಯ್ಯಾ ಮರುಳಸಿದ್ಧೇಶ್ವರದೇವರು. ಎನ್ನ ಹೃದಯದಲ್ಲಿ ಸ್ವಾಯತವಾದನಯ್ಯಾ ಪ್ರಭುದೇವರು. ಎನ್ನ ಭ್ರೂಮಧ್ಯದಲ್ಲಿ ಸ್ವಾಯತವಾದನಯ್ಯಾ ಚೆನ್ನಬಸವಣ್ಣನು. ಎನ್ನ ಬ್ರಹ್ಮರಂಧ್ರದಲ್ಲಿ ಸ್ವಾಯತವಾದನಯ್ಯಾ ಸಂಗನಬಸವಣ್ಣನು. ಎನ್ನ ಉತ್ತಮಾಂಗದಲ್ಲಿ ಸ್ವಾಯತವಾದನಯ್ಯಾ ಮಡಿವಾಳಯ್ಯನು. ಎನ್ನ ಲಲಾಟದಲ್ಲಿ ಸ್ವಾಯತವಾದನಯ್ಯಾ ಸೊಡ್ಡಳ ಬಾಚರಸರು. ಎನ್ನ ಪಶ್ಚಿಮದಲ್ಲಿ ಸ್ವಾಯತವಾದನಯ್ಯಾ ಕಿನ್ನರ ಬ್ರಹ್ಮಯ್ಯನು. ಎನ್ನ ಸರ್ವಾಂಗದಲ್ಲಿ ಸ್ವಾಯತವಾದನಯ್ಯಾ ಗಣಂಗಳು. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಹಾವಿನಹಾಳ ಕಲ್ಲಯ್ಯ
ಎತ್ತೆತ್ತ ನೋಡಿದಡತ್ತತ್ತ ನಿಮ್ಮನೆ ಕಾಬೆ. ಎದ್ದು ನೋಡಿ ನಿಮ್ಮನೆ ಕಾಬೆ, ನಿದ್ರೆಗೆಯ್ದು ನಿಮ್ಮನೆ ಕಾಬೆ. ಅಹೋರಾತ್ರಿಯಲ್ಲಿ ನಿಮ್ಮ ಧ್ಯಾನದಲ್ಲಿರಿಸು, ಮಹಾಲಿಂಗ ಕಲ್ಲೇಶ್ವರಾ
--------------
ಹಾವಿನಹಾಳ ಕಲ್ಲಯ್ಯ
ಎಡದ ಕೈಯಲ್ಲಿ ನಿಗಳ ಕಂಕಣನಿಕ್ಕಿ, ಬಲದ ಕೈಯ ಕಡಿದುಕೊಂಡಡೆ, ನೋವಿನ್ನಾವುದು ಹೇಳಾ. ಒಡಲೊಂದೆ ಪ್ರಾಣವೊಂದೆಯಾಗಿ, ನೋವಿನ್ನಾರದು ಹೇಳಾ. ಲಿಂಗ ಜಂಗಮವನಾರಾಧಿಸಿ, ನಿಂದೆಗೆ ತಂದಡೆ ನೊಂದೆನಯ್ಯಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಎಲ್ಲವನರಿದು ಇಲ್ಲವೆ ತಾನಾದ, ಅಲ್ಲಹುದೆಂಬುದಕ್ಕೆ ಸಹಜನಾದ. ಆಕಾರವ ನಿರಾಕರಿಸ, ನಿರಾಕಾರವ ಪತಿಕರಿಸ, ಭಾವದಾಕಾರವನೇನೆಂದರಿಯ, ಮುಂದೆ ಬಲ್ಲೆವೆಂಬನುಭಾವಿಗಳ ಮಾತುಗುಷ್ಟ ನಾರೂದ ಕಂಡು, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ಶಬ್ದಮುಗ್ಧವಾದ.
--------------
ಹಾವಿನಹಾಳ ಕಲ್ಲಯ್ಯ
ಎನ್ನ ಗುರುವೆನ್ನ ಪ್ರಾಣಲಿಂಗವ ಕರುಣದಿಂದನುಗ್ರಹವ ಮಾಡಿದ ಪರಿ ಎಂತೆಂದಡೆ : ಪಚ್ಚೆಯ ನೆಲಗಟ್ಟಿ£ ಮೇಲೆ ಚೌಮೂಲೆಯ ಸರಿಸದಲ್ಲಿ. ಷೋಡಶ ಕಂಬಂಗಳ ಮಂಟಪವ ಮಾಡಿ, ಮಧ್ಯದಲ್ಲಿ ಕುಳ್ಳಿರ್ದು ಉಪದೇಶದ ಪಡೆಯಲೆಂದು ಹೋದಡೆ, ಎನ್ನಂತರಂಗದಲ್ಲಿ ಚತುಷ್ಕೋಣೆಯ ಚತುರ್ದಳದ ನೆಲಗಟ್ಟಿನ ಮೇಲೆ ಷೋಡಶಕಲೆಗಳೆಂಬ ಹದಿನಾರುಕಂಬವ ನೆಟ್ಟು, ಧ್ಯಾನ ವಿಶ್ರಾಮದ ಮೇಲೆ ಆದಿಮಧ್ಯತ್ರಿಕೂಟವೆಂಬ ಮಂಟಪವನಿಕ್ಕೆ, ಆ ಮಂಟಪಸ್ಥಾನದಲ್ಲಿ ಎನ್ನ ಗುರು ಕುಳ್ಳಿರ್ದು ಅನುಗ್ರಹವ ಮಾಡಿದಡೆ, ನುಡಿಯಡಗಿದ, ಒಡಲಳಿದ ಸ್ವಯಲಿಂಗಸಂಬಂಧವಾದ ಭೇದವ ಮಹಾಲಿಂಗಕಲ್ಲೇಶ್ವರಾ, ನಿಮ್ಮ ಶರಣ ಬಲ್ಲ.
--------------
ಹಾವಿನಹಾಳ ಕಲ್ಲಯ್ಯ