ಅಥವಾ
(15) (6) (1) (0) (3) (0) (0) (0) (5) (0) (0) (3) (0) (0) ಅಂ (4) ಅಃ (4) (11) (0) (4) (1) (0) (0) (0) (3) (0) (0) (0) (0) (0) (0) (0) (3) (0) (3) (0) (3) (4) (0) (6) (3) (5) (0) (1) (0) (5) (2) (7) (0) (0) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಾಹಾ ! ವೇದವೆ ತತ್ವವಾದಡೆ, ಮಾದಾರನ ಮನೆಯಲುಂಡನೊಬ್ಬ. ನಿಧಾನವುಳ್ಳ ಉಪಾಧ್ಯಾಯರಾರೂ ಇಲ್ಲದಾದಡೆ, ಶಾಸ್ತ್ರವೆ ತತ್ವವಾದಡೆ ಶಿವರಾತ್ರಿಯನೊಬ್ಬ ಬೇಡಂಗಿತ್ತುದನೊಬ್ಬ ಶ್ರೋತ್ರಿಯಂಗೀಯಲಾಗದೆ ? ಆಗಮವಿದ್ಥಿಯಲ್ಲಿ ಮಂತ್ರ ಮೂರುತಿಯೆಂಬ ಮಾತಂತಿರಲಿ. ಆದ ಕೇಳಲಾಗದು ಭ್ರಾಂತು ಬೇಡ. ಭಾವಮೂರುತಿ ಬಲ್ಲ ಪ್ರಮಾಣವಿದೆ. ಆ ಕುಲವೆಂದಡೆ ಹೊಕ್ಕ ಕಕ್ಕಯ್ಯಗಳ ಮನೆಯ. ಅಕ್ಕಟಾ, ನಿಮ್ಮ ತರ್ಕ ಮುಕ್ಕಾಯಿತ್ತು, ಲೋಕವರಿಯದೆ ? ಕಲ್ಲಲಿಟ್ಟು ಕಾಲಲೊದೆದಡೆ, ಅಲ್ಲಿ ಮೂರುತಿ ನುಡಿಯಿತ್ತಲ್ಲಯ್ಯಾ. ಬಲ್ವದನು ದ್ವಿಜರು ನೀವೆಲ್ಲರೂ ಹೇಳಿರೆ, ಸಲ್ಲದು, ನಿಮ್ಮ ವಾದ ನಿಲ್ಲಲಿ, ಬಲ್ಲಿದ ನಡೆದುದೇ ಬಟ್ಟೆ. ಮಹಾಲಿಂಗ ಕಲ್ಲೇಶ್ವರಾ, ಲಿಂಗಾಚಾರಿಗಳು ನಿಸ್ಸೀಮರಯ್ಯಾ.
--------------
ಹಾವಿನಹಾಳ ಕಲ್ಲಯ್ಯ
ಹಸಿಯ ಕಪಾಲದಲ್ಲಿ ಉಂಬನೆಂಬರು, ಅದು ಹುಸಿ, ಭಕ್ತನ ಮುಖದಲ್ಲಿ ಉಂಬನಾಗಿ. ಅಸ್ಥಿಗಳ ತೊಟ್ಟನೆಂಬರು, ಅದು ಹುಸಿ, ಭಕ್ತದೇಹಿಕದೇವನಾಗಿ, ಚರ್ಮವ ಹೊದ್ದನೆಂಬರು, ಅದು ಹುಸಿ, ಆ ಭಕ್ತನಲ್ಲಿ ಸದಾಸನ್ನಹಿತನಾಗಿಪ್ಪನಾಗಿ. ಅದೆಂತೆಂದಡೆ-ಬ್ರಹ್ಮಾಂಡ ಪುರಾಣೇ : ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ಸ್ವೀಕೃತಂ ಮಯಾ | ರಸಾನ್ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ || ಎಂದುದಾಗಿ, ವಾತುಲೇ : ಯಾವನ್ನಿರ್ವಹತೇ ಯಸ್ತು ಯಾವಜ್ಜೀವಂ ಪ್ರತಿಜ್ಞಯಾ | ಮನುಷ್ಯಚರ್ಮಣಾ ಬದ್ಧಃ ಸ ರುದ್ರೋ ನಾತ್ರ ಸಂಶಯಃ || ಎಂದುದಾಗಿ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಸುಳುಹು ಪರಕಾಯಪ್ರವೇಶವಾಗಿಹುದು.
--------------
ಹಾವಿನಹಾಳ ಕಲ್ಲಯ್ಯ
ಹಗಲು ಹಸಿವಿಂಗೆ ಕುದಿದು, ಇರುಳು ನಿದ್ರೆಗೆ ಸಂದು, ಎಚ್ಚತ್ತು ಉಳಿದಾದ ಹೊತ್ತಿನಲ್ಲೆಲ್ಲಾ ಪಂಚೇಂದ್ರಿಯಂಗಳ ವಿಷಯಕ್ಕೆ ಹರಿದು, ಅಯ್ಯಾ, ನಿಮ್ಮ ನೆನೆಯಲರಿಯದ ಪಾಪಿಯಯ್ಯಾ. ಅಯ್ಯಾ, ನಿಮ್ಮ ದೆಸೆಯ ನೋಡದ ಕರ್ಮಿಯಯ್ಯಾ. ಮಹಾಲಿಂಗ ಕಲ್ಲೇಶ್ವರಾ, ಅಸಗ ನೀರಡಿಸಿ ಸಾವಂತೆ ಎನ್ನ ಭಕ್ತಿ.
--------------
ಹಾವಿನಹಾಳ ಕಲ್ಲಯ್ಯ
ಹರವಸದಿ ಹಸಿವನರಿಯದಿಪ್ಪ ಪರಮಸುಖವೆನಗೆಂದಿಪ್ಪುದೊ ? ಉರವಣೆಯ ಸುಖದ ಸೋಂಕಿನಲ್ಲಿ ಪರಿಣಾಮ ಎಂದಪ್ಪುದೊ ? ನಿಮ್ಮ ನೆನಹ ಎನ್ನ ಹಸು ಲಿಂಗೋಗರವಾದಡೆ ನಾ ನಿಮ್ಮ ನೆನೆವುದು ದಿಟವೆಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಹೊಟ್ಟು ಜಾಲಿಯ ಮುಳ್ಳ ಕೊನೆಯ ಮೇಲೊಂದು ಇಪ್ಪತ್ತೈದು ಅಗ್ರಹಾರ. ಅವ ಕಾವವ ಬಂಜೆಯ ಮಗ ತಳವಾರ. ಅಷ್ಟದಳ ಕಮಲದ ವಿವೇಕದ ಕೂಟವ ಮಹಾಲಿಂಗ ಕಲ್ಲೇಶ್ವರ ಬಲ್ಲ, ಪಂಚಮಹಾಜ್ಯೋತಿಯ ಮಹಾಬೆಳಗನು.
--------------
ಹಾವಿನಹಾಳ ಕಲ್ಲಯ್ಯ
ಹುಟ್ಟುವಂದು ನಿಮ್ಮ ಮೋಹವಿಲ್ಲ. ಹೊಂದುವಂದು ನಿಮ್ಮ ಮೋಹವಿಲ್ಲ ಕಂಡಯ್ಯಾ. ನಿಮ್ಮ ಮೋಹದವರಿಗೆ ಹುಟ್ಟುಂಟೆ ಅಯ್ಯಾ ? ನಿಮ್ಮ ಮೋಹದ ಮುಖದಲ್ಲಿ ಮರಣವುಂಟೆ ಅಯ್ಯಾ ? ಸಂಗಸಂಯೋಗದ ಉನ್ನನೀ ಭೂತ, ನಿನ್ನ ಮುಖದಲ್ಲಿ. ಜನನ ಮರಣವುಂಟೆ, ಮಹಾಲಿಂಗ ಕಲ್ಲೇಶ್ವರಾ ?
--------------
ಹಾವಿನಹಾಳ ಕಲ್ಲಯ್ಯ