ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೆ ನಿಮ್ಮ ಭಕ್ತಿ ? ಸಕಲ ದೇಶ ಕೋಶ ವಾಸ ಭಂಡಾರ ಸವಾಲಕ್ಷ ಮುಂತಾದ ಸಂಬಂಧ, ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೆ ನಿಮ್ಮ ಭಕ್ತಿ ? ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಂತಾದ ಏಳುನೂರೆಪ್ಪತ್ತು ಅಮರಗಣಂಗಳ ಭಾವವಿದ್ದಂತೆ ನಿಮ್ಮ ಅಗಡವೇಕಯ್ಯಾ ? ನಿಮ್ಮ ಅರಿವಿಂಗೆ ಇದಿರಿನಲ್ಲಿ ಕೂಡಿಹೆನೆಂಬ ಭಿನ್ನಭಾವವುಂಟೆ ಅಯ್ಯಾ ? ಕರ್ಪೂರದ ಅರಣ್ಯವ ಕಿಚ್ಚುಹತ್ತಿ ಬೆಂದಲ್ಲಿ ಭಸ್ಮ ಇದ್ದಿಲೆಂದು ಲಕ್ಷಿಸಲುಂಟೆ ? ನಿಮ್ಮ ಭಾವವ ನಿಮ್ಮಲ್ಲಿಗೆ ತಿಳಿದುಕೊಳ್ಳಿ. ನಿಮ್ಮ ಕೂಟಕ್ಕೆ ಎನ್ನ ನಾಚಿಕೆಯ ಬಿಡಿಸಿದ ತೆರನ ತಿಳಿದುಕೊಳ್ಳಿ. ಶಕ್ತಿಯ ಮಾತೆಂದು ಧಿಕ್ಕರಿಸಬೇಡಿ. ಹೊರಗೆ ಕೂಡಿಹೆನೆಂಬುದು ನಿಮ್ಮ ಅರಿವಿಂಗೆ ಹಾನಿ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ನಿಮ್ಮ ಶರಣರ ನೆಲೆಯ ನೀವೇ ನೋಡಿಕೊಳ್ಳಿ.
--------------
ಮೋಳಿಗೆ ಮಹಾದೇವಿ
ಕನಕಶಿಲೆಯೆನಿಸುವ ಪಾಷಾಣದಲ್ಲಿ ರತಿ ಪುಟ್ಟಲಿಕ್ಕಾಗಿ, ಆ ಮಧ್ಯದಲ್ಲಿ ಸೂತ್ರ ತೋರಲಿಕ್ಕೆ, ಆ ಸೂತ್ರ ಆ ಪಾಷಾಣವ ಗ್ರಹಿಸಿ, ಆವ ಕಡೆ ಮುಖವಾದಲ್ಲಿ ಸೂತ್ರ ಆವರಣಿಸುವಂತೆ, ಶಿವಲಿಂಗಪೂಜೆಯಲ್ಲಿ ಲಿಂಗವ ಮುಟ್ಟುವ ಕೈ, ನಟ್ಟ ದೃಷ್ಟಿ ತನ್ನಂಗದಲ್ಲಿ ಸರ್ವಾಂಗದೋಷಂಗಳ ಮರೆದು ಜಾಗ್ರದಿರವು ಸ್ವಪ್ನದಲ್ಲಿ ತೋರುವಂತೆ ಸ್ವಪ್ನದ ಸಂಗ ಸುಷುಪ್ತಿಯನೆಯಿದಿದಂತೆ ಇಪ್ಪುದು ಶಿವಪೂಜಕನ ಶಿವಮೂರ್ತಿಧ್ಯಾನ. ಈ ಗುಣ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಲಿಂಗವನರಿವವರಿಗಲ್ಲದೆ ಕಾಣಬಾರದು.
--------------
ಮೋಳಿಗೆ ಮಹಾದೇವಿ
ಕಾಲಿದ್ದಂತೆ ತಲೆ ನಡೆದುದುಂಟೆ ಅಯ್ಯಾ ? ಕಣ್ಣಿದ್ದಂತೆ ಕರ್ಣ ನೋಡಿದುದುಂಟೆ ಅಯ್ಯಾ ? ಬಾಯಿದ್ದಂತೆ ನಾಸಿಕ ಉಂಡುದುಂಟೆ ಅಯ್ಯಾ ? ತಾಯಿಲ್ಲದೆ ಮಕ್ಕಳು ಬಂದ ತೆರನ ಹೇಳಯ್ಯಾ ? ನಿಮ್ಮ ಸೇವೆಯ ತೊತ್ತಿನ ಭಾವವ ಕೇಳಲೇತಕ್ಕೆ ? ಪಟದೊಳಗಣ ಬಾಲಸರಕ್ಕೆ ಪ್ರತಿಸೂತ್ರ ನೇಣುಂಟೆ ? ನಿಮ್ಮಲ್ಲಿಯೆ ಎನ್ನ ಭಾವಲೇಪ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿಯೆ.
--------------
ಮೋಳಿಗೆ ಮಹಾದೇವಿ
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ ? ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ ? ನಿತ್ಯ ಅನಿತ್ಯವ ತಿಳಿದು, ಮತ್ರ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ. ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ, ಆ ಬಚ್ಚಬಯಲ ಬೆಳಗ ನಿನ್ನ ನೀನೆ ನೋಡಿಕೊ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
--------------
ಮೋಳಿಗೆ ಮಹಾದೇವಿ
ಕಾಯವಿಹನ್ನಕ್ಕ ಕರ್ಮವ ಬಿಟ್ಟ ಪರಿ ಇನ್ನೆಂತೊ ? ಜೀವವಿಹನ್ನಕ್ಕ ಅರ್ಪಿಸದೆ ತಾನುಂಬ ಪರಿ ಇನ್ನೆಂತೊ ? ಕೋಳದೊಳಗೆ ಕಾಲಿದ್ದು ಕೋಲಹಿಡಿದು ಸಾಧನೆಯ ಮಾಡುವನ ತೆರನಂತೆ, ಕರ್ಮಕಾಂಡಿಯಾಗಿ ತಾನಿರುತ್ತ ಇದಿರಿಗೆ ವರ್ಮವ ಬೋಧಿಸಲೇತಕ್ಕೆ ? ಇದು ನನ್ನಿಯ ಇರವಲ್ಲ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಅವರಿಗೆ ಅನ್ಯನಾಗಿಪ್ಪನು.
--------------
ಮೋಳಿಗೆ ಮಹಾದೇವಿ
ಕ್ರಿಯಾಲಿಂಗ ಜ್ಞಾನಲಿಂಗಂಗಳೆಂಬಲ್ಲಿ, ಉಭಯವೆರಡು ಲಿಂಗವೆಂದು ಕಲ್ಪಿಸುವಲ್ಲಿ ಅದಕ್ಕೆ ಭಿನ್ನಭಾವವಾವುದು ? ಕುಂಭಂಗಳೊಳಗೆ ಹುದುಗಿಕ್ಕಿದ ಕಿಚ್ಚು, ಆ ಕುಂಭಂಗಳಿಗೆ ಒಳಗೆ ಮುಟ್ಟಿದಡೂ ಹೊರಗೆ ಮುಟ್ಟಿದಡೂ ಪಾಕಪ್ರಯತ್ನ ತಪ್ಪದಾಗಿ. ಇಂತೀ ದೃಷ್ಟದ ಲಕ್ಷಿತದಂತೆ ಹೊರಗಣ ಕ್ರಿಯಾಸಂಬಂಧ, ಒಳಗಣ ಜ್ಞಾನಸಂಬಂಧವು; ಉಭಯದ ತತ್ತಿಲ್ಲ. ಸಕ್ಕರೆಯ ರಾಶಿಗೆ ಕಿಸೆಯ ಕೆಲನುಂಟೆ ? ನಿಶ್ಚಯದ ಲಿಂಗಾಂಗಿಗೆ ಉಭಯದ ತಟ್ಟುಮುಟ್ಟೆಂಬ ಗುಟ್ಟಿನ ಕುಲವಿಲ್ಲ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಸ್ವಯಾನುಭಾವಸಿದ್ಧನಾದ ಕಾರಣ.
--------------
ಮೋಳಿಗೆ ಮಹಾದೇವಿ
ಕರ್ಮದೊಳಗಣ ಸತ್ಕರ್ಮ, ಮರ್ಮದೊಳಗಣ ನಿಜವರ್ಮ, ಅರಿವಿನೊಳಗಣ ಅರಿವ, ತೆರಹದೊಳಗಣ ತೆರವ ಕುರುಹಿಟ್ಟು, ಕುರುಹ ಕುರುಹು ಅವಗವಿಸಿ, ಅಭಿನ್ನವಿಲ್ಲದೆ ನಿರ್ವಾಹ ನಿರ್ಲೇಪವಾದುದು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ತಾನೆ ಕುರುಹು ಅರಿವಿದನು.
--------------
ಮೋಳಿಗೆ ಮಹಾದೇವಿ
ಕೂಟಕ್ಕೆ ಕುರುಹಾದುದನರಿಯದೆ, ಆತ್ಮಕ್ಕೆ ಅರಿವಾದುದನರಿಯದೆ, ಕೈಲಾಸವೆಂಬ ಸೂತ್ರದ ಒಳಗಿಗೆ ಮನಸೋತಿರಲ್ಲಾ ? ಅಂಧಕನ ಕೈಯ ರತ್ನದಂತೆ ಆದಿರಲ್ಲಾ ? ಪಂಗುಳನ ಕರದ ಶಸ್ತ್ರದಂತೆ ಆದಿರಲ್ಲಾ ? ಈ ನಿರಂಗವ ತಿಳಿದು ನಿಂದಲ್ಲಿ ಬೇರೆ ಲಿಂಗವಡಗುವದಕ್ಕೆ ಉಭಯವುಂಟೆಂಬ ದಂದುಗ ಬೇಡ. ತಾ ನಿಂದಲ್ಲಿಯೆ ನಿಜಕೂಟ, ತಿಳಿದಲ್ಲಿಯೆ ನಿರಂಗವೆಂಬುದು. ಉಭಯವಿಲ್ಲ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಕಾಯವುಳ್ಳನ್ನಕ್ಕ ಲಿಂಗಪೂಜೆ, ಆತ್ಮವುಳ್ಳನ್ನಕ್ಕ ಅರಿವಿನ ಭೇದ. ಪುರುಷ ನೀ, ಸತಿ ನಾನೆಂಬಲ್ಲಿ ಉಭಯದ ಬೀಜ ನಾ ನೀನೆಂಬನ್ನಕ್ಕ. ಅಂಗದ ಲಿಂಗದಲ್ಲಿಯೆ ನಿರಂಗವಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಕ್ರಿಯಾಪೂಜೆ ಒಡಲಾದ ಮತ್ತೆ ಪೂಜಿಸಲಿಲ್ಲ. ಜ್ಞಾನನೇತ್ರ ಮುಸುಕ ತೆಗೆದ ಮತ್ತೆ ಏನುವ ನೋಡಲಿಲ್ಲ. ಧ್ಯಾನ ನಿಧಾನಿಸಿ ನಿಂದ ಮತ್ತೆ ಏನುವ ನೆನೆಯಲಿಲ್ಲ. ಈ ಗುಣಗ್ರಾಹಕಗ್ರಹೀತನ ಉಭಯ ಭಾವ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಕ್ರಿಯಾನಿರ್ವಾಹಸ್ಥಲ.
--------------
ಮೋಳಿಗೆ ಮಹಾದೇವಿ
ಕಾಣಿಗೆ ಹೋರಿ ಕಡವರವ ನೀಗಲೇತಕ್ಕೆ ? ಅಲುಗಾಡಿ ತುಂಬಿದ ಕೊಡನ ಹೊಡೆಗೆಡಹಲೇತಕ್ಕೆ ? ನಿನ್ನಂಗದಲ್ಲಿ ಗುರುಕೊಟ್ಟ ಲಿಂಗವೆಂಬುದೊಂದು ಕುರುಹು ಇರುತ್ತಿರಲಿಕ್ಕೆ ಆ ನಿಜಲಿಂಗದ ಸಂಗವನರಿಯದೆ ಸಂದಿಗೊಂದಿಯಲ್ಲಿ ಹೊಕ್ಕೆಹೆನೆಂಬ ಗೊಂದಣವೇತಕ್ಕೆ ? ತಾ ನಿಂದಲ್ಲಿ ಕೆಡಹಿದ ಒಡವೆಯ, ಆಚೆಯಲ್ಲಿ ನೆನೆದು ಅರಸಿದಡಿಲ್ಲ. ಅದು ಮತ್ತೆ ತನಗೆ ಸಂದಿಸುವುದೆ ? ಘನಲಿಂಗ ನಿನ್ನಂಗದಲ್ಲಿದ್ದಂತೆ ಕಂಡೆ ಕಾಣೆನೆಂಬ ನಿನ್ನ ನಿಜ ನಿಂದಲ್ಲಿಯೆ ಸಂದೇಹವ ತಿಳಿದುಕೊ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಕಾಯವೆರಸಿ ಕೈಲಾಸಕ್ಕೆ ಹೋಹೆನೆಂಬರು, ಇದು ಕ್ರಮವಲ್ಲ. ಘನಲಿಂಗ ಕರಸ್ಥಲದೊಳಗಿಪ್ಪ ಅನುವನರಿಯದೆ ಇಲ್ಲಿ ಕರ್ಮ, ಅಲ್ಲಿ ನಿಃಕರ್ಮವೆ ? ಹೇಮದ ಮಾಟದ ಒಳಹೊರಗಿನಂತೆ ಮರ್ತ್ಯ ಕೈಲಾಸವೆಂಬ ಕಟ್ಟಳೆಯಿಲ್ಲ. ಆತ್ಮ ನಿಶ್ಚಯವಾದಲ್ಲಿಯೆ ಕೈವಲ್ಯ. ಮತ್ತತ್ವವಾದಲ್ಲಿಯೆ ಮರ್ತ್ಯದೊಳಗು. ಈ ಗುಣ ಸದಮಲಭಕ್ತನ ಯುಕ್ತಿ; ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಿಕ್ಕಿದ ಗೊತ್ತು.
--------------
ಮೋಳಿಗೆ ಮಹಾದೇವಿ
ಕಾಯಭ್ರಮೆಯಿಂದ ಕೈಲಾಸ, ಜೀವಭ್ರಮೆಯಿಂದ ಮಹದ ಕೂಟವೆಂಬುದು. ಕಾಯದ ಜೀವದ ಭೇದವನರಿತಲ್ಲಿ ಅತ್ತಲಿತ್ತಲೆಂದು ಮತ್ತೆ ಹಲುಬಲಿಲ್ಲ. ಇದು ನಿಶ್ಚಯದ ಕೂಟ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ
ಕಪಟಕ್ಕೆ ಒಳಗು ಹೊರಗಲ್ಲದೆ, ಸ್ವಯಂಭು ಹೇಮಕ್ಕುಂಟೆ ಒಳಗು ಹೊರಗು ? ಕುಟಿಲದಿಂದ ಘಟವ ಹೊರೆವಂಗೆ ಪ್ರಕಟಪೂಜೆಯಲ್ಲದೆ, ಅಘಟಿತಂಗುಂಟೆ ಅಖಿಳರ ಮೆಚ್ಚಿನ ಪೂಜೆ ? ತೃಣದ ತುದಿಯ ಬಿಂದುವಾದಡೂ, ಉದುರಿ ಒಣಗಿದ ಕುಸುಮವಾದಡೂ ತ್ರಿಕರಣಶುದ್ಧವಾಗಿ ತ್ರಿಗುಣಾತ್ಮನ ಏಕವ ಮಾಡಿ ತ್ರಿಶಕ್ತಿಯ ಇಚ್ಫೆಯ ಮುಚ್ಚಿ ನಿಶ್ಚಯದಿಂದ ಮಾಡಿ ಮಾಡದಿದ್ದಡೂ ಮುಟ್ಟಿದಲ್ಲಿ ತೊಟ್ಟು ಬಿಟ್ಟ ಹಣ್ಣಿನಂತಿರಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು, ಉಭಯ ಲೇಪವಾದ ಕಾರಣ.
--------------
ಮೋಳಿಗೆ ಮಹಾದೇವಿ
ಕಲ್ಲ ಬಿತ್ತಿ ನೀರನೆರೆದಲ್ಲಿ ಪಲ್ಲವಿಸುವುದೆ ದಿಟದ ಬೀಜದ ವೃಕ್ಷದಂತೆ ? ಶ್ರದ್ಧೆ ಸನ್ಮಾರ್ಗ ಭಕ್ತಿ ಇಲ್ಲದಲ್ಲಿ ಗುರುಭಕ್ತಿ, ಶಿವಲಿಂಗಪೂಜೆ, ಚರಸೇವೆ ತ್ರಿವಿಧ ಇತ್ತವೆ ಉಳಿಯಿತ್ತು. ಮತ್ತೆ ನಿಜವಸ್ತುವಿನ ಸುದ್ದಿ ನಿಮಗೆತ್ತಣದೊ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ವಿಶ್ವಾಸಬೇಕು.
--------------
ಮೋಳಿಗೆ ಮಹಾದೇವಿ