ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಯಲೆಂದಡೆ ಕೀಳು ಮೇಲಿನೊಳಗಾಯಿತ್ತು. ನಿರವಯವೆಂದಡೆ ಸಾವಯದಿಂದ ಕುರುಹುದೋರಿತ್ತು. ಸವಿದ ಸವಿಯನುಪಮಿಸಬಾರದೆಂದಡೆ ಜಿಹ್ವೆಯಿಂದ ಕುರುಹುಗೊಂಡಿತ್ತು. ಆ ಜಿಹ್ವೆ ಸಾಕಾರ, ಸವಿದ ಸವಿ ನಿರಾಕಾರವೆಂದಡೆ, ನಾನಾ ಭೇದಂಗಳಿಂದ ರುಚಿಮಯವಾಯಿತ್ತು. ಆ ಜಿಹ್ವೆಯ ಕೊನೆಯ ಮೊನೆಯಲ್ಲಿ ನಿಂದು, ಅಹುದಲ್ಲವೆಂಬುದ ತಾನೆ ಕುರುಹಿಟ್ಟುಕೊಂಡಂತೆ ಜಿಹ್ವೆ ಬಲ್ಲುದೆಂದಡೆ ತನ್ನಡಿಗೆ ಬಾರದುದನರಿಯಿತ್ತೆ ? ಸಾರ ಸ್ವಾದ ಲೇಸೆಂದಡೆ ಜಿಹ್ವೆ ಹೊರತೆಯಾಗಿ ಕುರುಹುಗೊಂಡಿತ್ತೆ ? ಇದು ಕ್ರೀ ಜ್ಞಾನ ಸಂಪುಟಸ್ಥಲ. ಈ ಉಭಯಸ್ಥಲ ಲೇಪವಾದ ಮತ್ತೆ ನಿರುತ ನಿರ್ಯಾಣವೆಂಬುದು ನನ್ನಲ್ಲಿಯೊ ? ನಿನ್ನಲ್ಲಿಯೊ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ಸದಾತ್ಮದಲ್ಲಿ ನಿನ್ನ ಕುರುಹೇಕೆ ಅಡಗದು ?
--------------
ಮೋಳಿಗೆ ಮಹಾದೇವಿ
ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು ? ಸಸಿಯೊಳಗಣ ಲತೆ ಪರ್ಣ ತಲೆದೋರದ ನಸುಗಂಪಿನ ಕುಸುಮವ ಅದಾರು ಮುಡಿವರು ? ಇಂತೀ ಅರಿವಿನ ಅರಿವ ಕುರುಹಿಟ್ಟು ಕೂಡುವನೆ ಲಿಂಗಾಂಗಿ ? ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಇದು ಸ್ವಾನುಭಾವಿಯ ಸನ್ನದ್ಧಸ್ಥಲ.
--------------
ಮೋಳಿಗೆ ಮಹಾದೇವಿ
ಬಿತ್ತಿದ ಬಿತ್ತು, ಪೃಥ್ವಿಯ ಕೂಟ ಅಪ್ಪುವಿನ ದ್ರವದಿಂದ ಮಸ್ತಕ ಒಡೆವುದಲ್ಲದೆ, ಉಷ್ಣದ ಡಾವರಕ್ಕೆ, ಬೆಂಕಿಯ ಬೇಗೆಗೆ ಮಸ್ತಕ ಒಡೆವುದುಂಟೆ ? ಲಿಂಗವು ಭಕ್ತಿಯ ಶ್ರದ್ಧೆಗೆ, ವಿಶ್ವಾಸದ ಸುಸಂಗಿಗೆ, ನಿಶ್ಚಯವಪ್ಪ ಲಿಂಗಿಗೆ ದೃಷ್ಟವಪ್ಪುದಲ್ಲದೆ, ಉನ್ಮತ್ತವಪ್ಪ ವಿಶ್ವಾಸಘಾತಕಂಗೆ, ವಂದಿಸಿ ನಿಂದಿಸುವಂಗೆ, ಹಿಂದೆ ಮುಂದೆ ಬಂದುದ ಬಾಯ್ಗಿಡುವವಂಗೆ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಸಂಧಿಸನವಗೆ
--------------
ಮೋಳಿಗೆ ಮಹಾದೇವಿ
ಬಿಡುವುದಕ್ಕೆ ಮುನ್ನವೆ ಮೊನೆ ಮುಂಚಿದಂತಿರಬೇಕು. ಅಡಿ ಏರುವುದಕ್ಕೆ ಮುನ್ನವೆ ಆ ಮೊನೆಯ ಜಾರಿ, ಮತ್ತೆ ತಾನಡಿಯೇರಿ ಮೀರಿ ಮುಂಚಿದಂತಿರಬೇಕು. ನೀನೆಂಬನ್ನಕ್ಕ ಲಕ್ಷ್ಯದಲ್ಲಿ ಅಲಕ್ಷ್ಯವಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಎಂಬುದಕ್ಕೆ ಮುನ್ನವೆ!
--------------
ಮೋಳಿಗೆ ಮಹಾದೇವಿ
ಬಯಲ ಹೊಲಬಿನಲ್ಲಿ ಹುಟ್ಟಿದ ಬೆಳಗು ಶಿಲೆ ಲೋಹ ಕಂಚುಗಳಲ್ಲಿ ಬೆಳಗಿನ ಕಳೆ ತೋರುವಂತೆ, ಎನ್ನ ಕರತಳದಲ್ಲಿ ಸ್ವಯಂಭುವಪ್ಪ ಲಿಂಗವೆ, ನಿನ್ನ ಕಳೆ ಎನ್ನ ಕಂಗಳಿಗೆ ಹೊಲಬಾಗಿ ಏಕೆ ತೋರದು ? ಅದು ಎನ್ನದು ಜಡವೊ ನಿನ್ನಯ ಪ್ರಕೃತಿಯೊ ? ಅದು ನಿನ್ನ ಬಿನ್ನಾಣದ ಗನ್ನದ ಭೇದವೊ ? ಎನ್ನಲ್ಲಿ ನೀನಿಲ್ಲದ ಕಾರಣವೊ ? ನಾ ನಿನ್ನಲ್ಲಿ ಸುಗುಣವಿಲ್ಲದ ಕಾರಣವೊ ಎನಗೆ ಭಿನ್ನನಾದೆ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ, ಎನ್ನಲ್ಲಿ ನೀ ಸನ್ನದ್ಧನಾಗಿರು.
--------------
ಮೋಳಿಗೆ ಮಹಾದೇವಿ