ಅಥವಾ
(6) (3) (3) (0) (0) (1) (0) (0) (2) (1) (0) (0) (0) (0) ಅಂ (3) ಅಃ (3) (15) (0) (2) (0) (0) (1) (0) (0) (0) (0) (0) (0) (0) (0) (0) (3) (0) (1) (0) (6) (3) (0) (5) (2) (4) (0) (0) (0) (1) (0) (1) (1) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ವಯವಿದ್ದಂತೆ ಲಯವ ಕೂಡುವರೆ ಅಯ್ಯಾ ? ಪರುಷವಿದ್ದಂತೆ ಹೇಮವನರಸುವರೆ ಅಯ್ಯಾ ? ಸ್ವಯಂಜ್ಯೋತಿಯಿದ್ದಂತೆ ದೀಪವನರಸುವರೆ ಅಯ್ಯಾ ? ನೀನಲ್ಲಿ ಇಲ್ಲಿ ಕೂಡಿಹೆನೆಂಬ ಕೂಟದ ಭಿನ್ನವ ಹೇಳಯ್ಯಾ ? ಕಣ್ಣಿಲಿ ನೋಡಿ ಕಣ್ಣ ಮರೆದೆನೆಂದು ಆ ಭಿನ್ನಭಾವದಂತೆ ಆದಿರಲ್ಲಾ ? ಅದು ನಿಮ್ಮ ಗುಣವಲ್ಲ, ಎನ್ನ ಗುಣ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಸುಗಂಧದ ಮೂಲದ ಬೇರಿನ ಗಂಧ ಎಲೆ ಬಳ್ಳಿಯನೇತಕ್ಕೆ ವೇಧಿಸದು ? ಕುಸುಮದ ಸುವಾಸನೆ ತನ್ನಯ ತೊಟ್ಟು ಎಲೆ ಕೊನರು ಬೇರುವನೇಕೆ ವೇಧಿಸದು ? ಇದು ಇಷ್ಟ ಪ್ರಾಣಯೋಗದ ಭೇದ. ಗಿಡುಗಿಡುವಿಗೆ ಕುರುಹಲ್ಲದೆ ಗಂಧ ಗಂಧ ಕೂಡಿದಲ್ಲಿ ದ್ವಂದ್ವವಾಗಿ ಬೆರೆದಲ್ಲಿ, ಕದಂಬಗಂಧವಲ್ಲದೆ ಒಂದರ ಗಂಧವೆಂದು ಸಂಧಿಸಿ ತೆಗೆಯಲಿಲ್ಲ. ಅವರು ನಿಂದ ನಿಂದ ಸ್ಥಲಕ್ಕೆ ಸಂಬಂಧವಾಗಿಪ್ಪರು. ಇದು ದೃಷ್ಟಾನುಭಾವಸಿದ್ಧಿ, ಸರ್ವಸ್ಥಲಭೇದ, ವಿಶ್ವತೋಮುಖರೂಪು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ತತ್ವಭಿತ್ತಿಸ್ವರೂಪನು.
--------------
ಮೋಳಿಗೆ ಮಹಾದೇವಿ
ಸ್ಥಾಣು ನರನೆಂದು, ರಜ್ಜು ಸರ್ಪನೆಂದು, ಸ್ಫಟಿಕದ ಘಟದಲ್ಲಿ ನಿಂದ ಗಜ ದಿಟವೆಂದು ನಿಬದ್ಧಿಸಿ ನೋಡಲಿಕ್ಕಾಗಿ, ಸಂದೇಹ ನಿಂದಲ್ಲಿ ಮುನ್ನಿನಂದವೆ ಆ ನಿಜಗುಣ ? ಈ ಸಂದೇಹ ನಿವೃತ್ತಿಯಾದಲ್ಲಿ ಇಷ್ಟ ಪ್ರಾಣಲಿಂಗವೆಂಬ ಉಭಯದ ದೃಷ್ಟ ಒಂದೆ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಸಕಲದಲ್ಲಿ ಅಳಿದು ನಿಃಕಲದಲ್ಲಿ ಉಳಿದ ಮತ್ತೆ, ಸಕಲವ ಕೂಡಿಹೆನೆಂಬ ನಿಃಕಲವುಂಟೆ ಅಯ್ಯಾ ? ನಿಃಕಲದೊಳಗೆ ಸಕಲವಡಗಿ, ಆ ಗುಣ ಉಪದೃಷ್ಟಕ್ಕೆ ಈಡಿಲ್ಲದಲ್ಲಿ, ಅಖಿಲಜಗವೆಂಬುದು ಹೊರಗು. ಆ ಗುಣ ನಿನ್ನ ಸದ್ಭಾವಬೀಜವಾದಲ್ಲಿ ನಿನ್ನಂಗವೆ ಕೈಲಾಸ; ಆ ಲಿಂಗದ ಕೂಟವೆ ನಿರ್ಯಾಣ. ಇದು ನಿಸ್ಸಂಗದ ಸಂಗ; ನಿಮ್ಮ ನೀವೇ ತಿಳಿದುಕೊಳ್ಳಿ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಸಂಸಾರ ಸಂಗದಿಂದಲುದಯಿಸಿದ ಸುಖವೆ ದುಃಖವೆಂದರಿಯದೆ, ಆ ಸುಖವನೆ ಮೆಚ್ಚಿ ಭವದುಃಖವೆಂಬ ಕ್ರೂರ ಜನ್ಮಚಕ್ರಕ್ಕೀಡಾಗಿ, ಅಲ್ಲಿ ತನ್ನ ಮರೆದು, ತನಗಿಲ್ಲದುದ ಭ್ರಮೆಯಿಂದ ತನ್ನದೆಂದು, ಅಂತಪ್ಪ ಭವಘೋರ ನರಕದೊಳಾಳುತ್ತ ಮುಳುಗಾಡುತಿಪ್ಪ ಅಜ್ಞಾನಿಜೀವಿಗಳು ನಿಮ್ಮನೆತ್ತಬಲ್ಲರಯ್ಯಾ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ ?
--------------
ಮೋಳಿಗೆ ಮಹಾದೇವಿ
ಸಕಲ ಸ್ಥಾವರ ಚರ ಘಟಪಟಾದಿಗಳೆಲ್ಲವು ಪೃಥ್ವಿಯಿಂದವೆ ಜನನ, ಪೃಥ್ವಿಯ ಉತ್ಕೃಷ್ಟದಿಂದವೆ ಮರಣವೆಂಬುದನರಿತಲ್ಲಿ, ಕರ್ಮಕ್ರೀ ವರ್ಮವ ಬಲ್ಲವ. ಸರ್ವಚೇತನ ಭೌತಿಕಕ್ಕೆಲ್ಲಕ್ಕೂ ಅಪ್ಪುವಿನಿಂದವೆ ಉತ್ಪತ್ಯ, ಅಪ್ಪುವಿನ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ, ಜೀವನದ ಆಗುಚೇಗೆಯ ಬಲ್ಲವ. ಸರ್ವದೀಪ್ತಿ ಪ್ರಕಾಶ ತೇಜಸ್ಸು ಅಗ್ನಿಯಿಂದವೆ ಉತ್ಪತ್ಯ, ಅಗ್ನಿಯ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ, ಪರಮಪ್ರಕಾಶ ಬಲ್ಲವ. ಸರ್ವಗೃಹೀತವಾಗಿ ಸುಳಿವ ಮಾರುತ ಘೋಷ ವಾಯುವಿನಿಂದವೆ ಉತ್ಪತ್ಯ, ವಾಯುವಿನ ಉತ್ಕೃಷ್ಟದಿಂದವೆ ಲಯವೆಂಬುದನರಿದಲ್ಲಿ ದಿವ್ಯಜ್ಞಾನ ಬಲ್ಲವ. ಆಕಾಶ ಮಹದಾಕಾಶದಿಂದವೆ ಉತ್ಪತ್ಯ, ಮಹದಾಕಾಶ ಮಹದೊಡಗೂಡಿದಲ್ಲಿ ಪಂಚಭೌತಿಕ ನಷ್ಟವೆಂಬುದನರಿದು ಈ ಪಂಚಭೌತಿಕದ ತನು, ಸಂಚಿತ ಪ್ರಾರಬ್ಧ ಆಗಾಮಿಗಳ ಕಂಡು, ಸಂಚಿತವೆ ಉತ್ಪತ್ಯ, ಪ್ರಾರಬ್ಧವೆ ಸ್ಥಿತಿ, ಆಗಾಮಿಯೆ ಲಯವೆಂಬುದ ತಿಳಿದು, ಇಂತಿವರೊಳಗಾದ ಸಂಚದಲ್ಲಿ ಸಂಬಂಧಿಸಿಪ್ಪ ಸರ್ವೇಂದ್ರಿಯದ ಗೊಂಚಲು ಮುರಿದು ನಿಂದ ಸ್ವಯಾನುಭಾವಿಗೆ ಕಾಯಕ್ಕೆ ಕರ್ಮವೆಂಬುದಿಲ್ಲ, ಜ್ಞಾನಕ್ಕೆ ಇದಿರೆಡೆಯೆಂಬ ಕೂಟದ ಭಾವ ನಷ್ಟ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು.
--------------
ಮೋಳಿಗೆ ಮಹಾದೇವಿ
ಸುಮನ ಸುಬುದ್ಧಿ ಭಕ್ತಿಸ್ಥಲ. ಮಲ ಅಮಲ ಮಹೇಶ್ವರಸ್ಥಲ. ಅಜ್ಞಾನ ಸುಜ್ಞಾನ ಪ್ರಸಾದಿಸ್ಥಲ. ಉಭಯ ಕೂಟಸ್ಥವೆಂಬುದ ಪರಿಹರಿಸಿದಲ್ಲಿ ಪ್ರಾಣಲಿಂಗಿಸ್ಥಲ. ಸ್ತುತಿ ನಿಂದ್ಯಾದಿಗಳಲ್ಲಿ ಒಡಲಳಿದುನಿಂದುದು ಶರಣಸ್ಥಲ. ಇಂತೀ ಪಂಚಭೇದಂಗಳ ಸಂಚವನರಿತು ವಿಸಂಚವಿಲ್ಲದೆ, ಪರುಷ ಪಾಷಾಣದಂತೆ ಭಿನ್ನಭಾವವಿಲ್ಲದೆ ಅರಿದರುಹಿಸಿಕೊಂಬ ಕುರುಹು ಏಕವಾದಲ್ಲಿ ಐಕ್ಯಸ್ಥಲ. ಎನ್ನಯ್ಯಾ, ಎನ್ನ ನಿನ್ನ ಷಟ್‍ಸ್ಥಲ ಇದಕ್ಕೆ ಭಿನ್ನಭಾವವಿಲ್ಲ. ಅದು ಎನ್ನ ನಿನ್ನ ಕೂಟದ ಸುಖದಂತೆ. ಇದ ಚೆನ್ನಾಗಿ ತಿಳಿದು ನೋಡಿಕೊಳ್ಳಿ. ಅಲ್ಲಿ ಇಲ್ಲಿ ಎಂಬ ಗೆಲ್ಲಗೂಳಿತನ ಬೇಡ ಹಾಗೆಂಬಲ್ಲಿಯೆ ಬಯಲಾಗಬೇಕು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಹಾದೇವಿ