ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಆತನ ನೋಡಿದಂದು ದೆಸೆಗಳ ಮರೆದೆನಿನ್ನೆಂತವ್ವಾ. ಅವ್ವಾ ಅವ್ವಾ ಆತನ ನುಡಿಸಿದಡೆ ಮೈಯೆಲ್ಲಾ ಬೆವತುದಿನ್ನೆಂತವ್ವಾ. ಅವ್ವಾ ಅವ್ವಾ ಆತನ ಕೈಯ ಹಿಡಿದಡೆ ಎನ್ನ ನಿರಿಗಳು ಸಡಿಲಿದವಿನ್ನೆಂತವ್ವಾ. ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ ನಾನಪ್ಪ ಮರೆದೆನಿನ್ನೆಂತವ್ವಾ.
--------------
ಗಜೇಶ ಮಸಣಯ್ಯ
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ, ಹೇಳಲೂಬಾರದು, ಕೇಳಲೂಬಾರದು; ಏನ ಹೇಳುವೆನವ್ವಾ, ಶಿಖಿ ಕರ್ಪೂರ ಬೆರಸಿದಂತೆ. ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ ಹೇಳಲು ಬಾರದವ್ವಾ.
--------------
ಗಜೇಶ ಮಸಣಯ್ಯ
ಆಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ. ಕಂಡ ಕನಸು ದಿಟವಾದಡೆ ಆವ ನಮ್ಮ ನಲ್ಲನವ್ವಾ. ಮನಸುಳ್ಳವರು ನೀವು ಪುಣ್ಯಗೈದಿರವ್ವಾ ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ. ಕನಸಿನ್ನೆಲ್ಲಿ ಬಹುದವ್ವಾ.
--------------
ಗಜೇಶ ಮಸಣಯ್ಯ
ಆವುಗೆಯ ಕಿಚ್ಚಿನಂತೆ, ಧಾಮಧೂಮವಾದಂತೆ ಆವ ನಾಡ ಸುಟ್ಟನೆಂದರಿಯೆನವ್ವಾ. ಬೊಬ್ಬೆಯ ಕೊಂಡು ಹೋದವನೆಲ್ಲಿ ಉಳಿದನೆಂದರಿಯೆನವ್ವಾ. ನಿರಾಳ ನಿರಾಳದಲ್ಲಿ ಮಹಾಲಿಂಗ ಗಜೇಶ್ವರದೇವನುಳಿದನೆಂದು ಹೇಳಿದಡೆ ಕಂಗಳ ನೀರಲ್ಲಿ ನಿಂದೆನವ್ವಾ.
--------------
ಗಜೇಶ ಮಸಣಯ್ಯ
ಆಲಿಕಲ್ಲ ಮರದಡಿಯಲಿಹ ಮಘಮಘಿಸುವ ಗಿಳಿವಿಂಡು ಉರವಣಿಸುವ ಪಕ್ಷಿಗಳು, ಸರಸಗೈವ ಕೋಗಿಲೆ, ಗಗನದ ಚಂದ್ರಮ; ಅಗಲಲಾರೆನು ಸಖಿಯೆ ಬೆಳುದಿಂಗಳು ಬಿಸಿಲಾದವೆ? ಗಗನದ ದಶರಥನ ಬೀಡಿನಲ್ಲಿ ಕಾಮಿನಿ ಕೈವೋದಳೆ? ದಶಾವಸ್ಥೆಗೊಂಡೆನು ಮಹಾಲಿಂಗ ಗಜೇಶ್ವರನುಳಿದಡೆ.
--------------
ಗಜೇಶ ಮಸಣಯ್ಯ