ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕೂಪರನಗಲುವದು ಆತ್ಮಘಾತುಕವವ್ವಾ. ದಿಬ್ಯವ ತುಡುಕಿದಡೆ ಕೈ ಬೇವುದಲ್ಲದೆ ಮೈ ಬೇವುದೆ? ಒಲಿದವರನಗಲಿದಡೆ ಸರ್ವಾಂಗವೂ ಬೇವುದವ್ವಾ. ಮಹಾಲಿಂಗ ಗಜೇಶ್ವರನನಗಲಿ ಆವುಗೆಯ ಮಧ್ಯದ ಘಟದಂತಾದೆನವ್ವಾ.
--------------
ಗಜೇಶ ಮಸಣಯ್ಯ
ಕಂಗಳ ಕಾಳಗ ನೋಟದ ಮಸಕ ಮಿಂಚಿನಗೊಂಚಲು ತಾಗಿದಂತಾದುದವ್ವಾ. ತಾರಕಿ ತಾರಕಿ ಸೂಸಿದಂತೆ, ಅರಗಿನ ಬಳ್ಳಿ ಹಬ್ಬಿದಂತವ್ವಾ. ಓರೆಕೋರೆ ಕೆಂಪಾದವವ್ವಾ, ಆಳುಗಳಿನ್ನಾರೋ? ಐದು ರೂಹನೊಂದು ಮಾಡಿ, ಕಾದಿ ಗೆದ್ದು ಸೋತು ಹೊರಹೊಂಟುಹೋದನವ್ವಾ, ಮಹಾಲಿಂಗ ಗಜೇಶ್ವರ ಕಂಗಳ ಕಾಳಗದ ಮಾಸಾಳು.
--------------
ಗಜೇಶ ಮಸಣಯ್ಯ
ಕೋಗಿಲೆಗಳು ಹುಳುವಟ್ಟೆ ಹೋದ ಬನದಂತೆ ಆದೆ ನೋಡವ್ವಾ. ರಾಮರಾಡಿದ ಹೊಳಲಿನಂತೆ ಆದೆ ನೋಡವ್ವಾ. ಜವ್ವನೆಗಳು ಬಳಲ್ದ ಸ್ತ್ರೀಯರ ಮುಖ ಕಾಂತಿಯಂತೆ ಆದೆ ನೋಡವ್ವಾ. ಪರಿಮಳವಿಲ್ಲದ ಪುಷ್ಪದಂತೆ ಆದೆ ನೋಡವ್ವಾ. ಚಂದ್ರಮನಿಲ್ಲದ ನಕ್ಷತ್ರಗಳಂತೆ ಆದೆ ನೋಡವ್ವಾ. ಮಹಾಲಿಂಗ ಗಜೇಶ್ವರನನಗಲುವದರಿಂದ ಸಾವುದು ಸುಖ ನೋಡವ್ವಾ.
--------------
ಗಜೇಶ ಮಸಣಯ್ಯ
ಕಂಗಳ ಬಲದಲ್ಲಿ ಮುನಿದೆಹೆನೆಂಬೆನೆ ಕಂಗಳು ತನ್ನನಲ್ಲದೆ ನೋಡವು. ಮನದ ಬಲದಲ್ಲಿ ಮುನಿದೆಹೆನೆಂಬೆನೆ ತನುಮನ ತಾಳಲಾರವವ್ವಾ. ಇಂತೀ ಮನಪ್ರೇರಕ ಮನ ಚೋರಕ ತನ್ನಾಧೀನವಾಗಿ ಸಾಧನವಪ್ಪಡೆ ಮನದ ಒಳ ಮೆಚ್ಚುವನವ್ವಾ. ಮನದಲ್ಲಿ ಬಯಸುವೆ, ಭಾವದಲ್ಲಿ ಬೆರಸುವೆ, ಮನಹಿಂಗೆ ಪ್ರಾಣನಾಥನಾಗಿ ಮಹಾಲಿಂಗ ಗಜೇಶ್ವರದೇವ ಮನಸಿಂಗೆ ಮನಸ ತರಲೀಸನವ್ವಾ.
--------------
ಗಜೇಶ ಮಸಣಯ್ಯ
ಕಾಮಗಂಜಿ ಚಂದ್ರನ ಮರೆಹೊಗಲು ರಾಹು ಕಂಡಂತಾದಳವ್ವೆ. ಹಾವೆಂದರಿಯದೆ ನೇವಳವೆಂದರಿಯದೆ ಕ್ಷಣ ನಾಗಭೂಷಣೆಯಾಗಿರ್ದಳವ್ವೆ ಮಹಾಲಿಂಗ ಗಜೇಶ್ವರನ ನೆರೆವ ಭರದಿಂದ ಕಳಕ್ಕೆ ಬಂದ ಮೃಗದಂತಿದ್ದಳವ್ವೆ.
--------------
ಗಜೇಶ ಮಸಣಯ್ಯ