ಹೊಸ ಮದುವೆ ಹಸೆಯುಡುಗದ ಮುನ್ನ,
ಹೂಸಿದ ಅರಿಸಿನ ಬಿಸಿಲಿಂಗೆ ಹರಿಯದ ಮುನ್ನ,
ತನು ಸಂಚಲವಡಗಿ ಮನವು ಗುರುಕಾರುಣ್ಯವ ಪಡೆದು
ಹುಸಿಯಿಲ್ಲದಿರ್ದಡೆ ಭಕ್ತನೆಂಬೆ!
ಹಿಡಿಹಿಂಗಿಲ್ಲದಿರ್ದಡೆ ಮಾಹೇಶ್ವರನೆಂಬೆ!
ತನುವಿಲ್ಲದಿರ್ದಡೆ ಪ್ರಸಾದಿಯೆಂಬೆ!
ಜೀವವಿಲ್ಲದಿರ್ದಡೆ ಪ್ರಾಣಲಿಂಗಿಯೆಂಬೆ!
ಆಶೆಯಿಲ್ಲದಿರ್ದಡೆ ಶರಣನೆಂಬೆ!
ಈ ಐದರ ಸಂಪರ್ಕ ನಿರ್ಭೋಗವಾದಡೆ ಐಕ್ಯನೆಂಬೆ!
ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯನೆಂಬೆ!
ಈ ಹೀಂಗಾದ ದೇಹವನಿರಿದಡರಿಯದು ತರಿದಡರಿಯದು.
ಬೈದಡರಿಯದು; ಹೊಯ್ದಡರಿಯದು.
ನಿಂದಿಸಿದಡರಿಯದು; ಸ್ತುತಿಸಿದಡರಿಯದು.
ಸುಖವನರಿಯದು; ದುಃಖವನರಿಯದು.
ಇಂತಿವರ ತಾಗು ನಿರೋಧವನರಿಯದಿರ್ದಡೆ
ಅವರ ಮಹಾಲಿಂಗ ಗಜೇಶ್ವರನೆಂಬೆ.