ಅಥವಾ

ಒಟ್ಟು 53 ಕಡೆಗಳಲ್ಲಿ , 32 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಈರೇಳು ಲೋಕವನೊಳಕೊಂಡ ಮಹಾಘನಲಿಂಗವು ಭಕ್ತನ ಕರಸ್ಥಲಕ್ಕೆ ಬಂದು ಪೂಜೆಗೊಂಬ ಪರಿಯ ನೋಡಾ. ಅಗಮ್ಯ ಅಗೋಚರ ಅಪ್ರಮಾಣ ಲಿಂಗಸಂಗದಲ್ಲಿ ಇರಬಲ್ಲಾತನೇ ಭಕ್ತನು. ಹೀಗಲ್ಲದೆ ಕೇಡಿಲ್ಲದೆ ಲಿಂಗಕ್ಕೆ ಕೇಡ ಕಟ್ಟಿ ಹೋದೀತೋ ಇದ್ದೀತೋ ಅಳಿದೀತೋ ಹೇಗೋ ಎಂತೋ ಎಂದು ಚಿಂತಿಸಿ ನುಡಿವರು ಬ್ಥಿನ್ನವಿಜ್ಞಾನಿಗಳು. ಆ ಲಿಂಗದೊಳಗೆ ಅಖಿಳಾಂಡಕೋಟಿ ಬ್ರಹ್ಮಾಂಡಗಳಡಗಿದವು. ಸಾಕ್ಷಿ : 'ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ||' ಎಂದುದಾಗಿ, ಇಂತಪ್ಪ ಘನಲಿಂಗವ ಶ್ರೀಗುರು ಭಕ್ತಂಗೆ ಕರ-ಮನ-ಭಾವಕ್ಕೆ ಪ್ರತ್ಯಕ್ಷವಾಗಿ ಮಾಡಿಕೊಟ್ಟ ಬಳಿಕ ಎಂದಿಗೂ ಅಗಲಬೇಡಿಯೆಂದು ಗಣಸಾಕ್ಷಿಯಾಗಿ ಮಾಡಿಕೊಟ್ಟ ಬಳಿಕ ಅಗಲಲುಂಟೆ ? ಅಗಲಿದಡೆ ಲಿಂಗವು ಗುರುತಲ್ಪಕವೆ ಸರಿ. ಆವ ಶಾಸ್ತ್ರ ಆವ ಆಗಮ ಆವ ವಚನ ಹೇಳಿಲ್ಲವಾಗಿ, ಮತ್ತಂ, ಸಂಪಿಗೆಯ ಪುಷ್ಪದ ಪರಿಮಳ ಬೇರೆ ಆಗಲುಂಟೆ ? ಇಂತಪ್ಪ ಮಹಾಘನಲಿಂಗವು ಹೇಗಿಪ್ಪುದೆಂದಡೆ : ಅವರವರ ಮನ ಭಾವ ಹೇಗಿಪ್ಪುದೊ ಹಾಗಿಪ್ಪುದು. ಇದಕ್ಕೆ ದೃಷ್ಟಾಂತ : ಉದಕ ಒಂದೇ, ಹಲವು ವೃಕ್ಷದ ಹಣ್ಣು ಮಧುರ ಒಗರು ಖಾರ ಹುಳಿ ಕಹಿ ಸವಿ. ಉದಕ ಒಂದೇ, ಶ್ವೇತ ಪೀತ ಹರಿತ ಮಾಂಜಿಷ್ಟ ಕಪೋತ ಮಾಣಿಕ್ಯ. ಈ ಆರು ವರ್ಣಂಗಳಲ್ಲಿ ಬೆರೆದುದು ಅಭ್ರಕ ಒಂದೇ! ಈ ಅಭ್ರಕ ಹೇಗೊ ಹಾಗೆ ಮನ, ಹಾಗೆ ಮಹಾಲಿಂಗ. ಹೀಗೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಬ್ಥಿನ್ನಜ್ಞಾನಿಗಳು ಎತ್ತ ಬಲ್ಲರು ನೋಡಾ!
--------------
ಗಣದಾಸಿ ವೀರಣ್ಣ
ಭಿನ್ನವಳಿದು ತನ್ನನರಿದು ತಾನಾದ ಶರಣನು ಸಚರಾಚರವೆಲ್ಲ ತನ್ನ ನಿರ್ಮಿತವೆಂದು ಕಾಂಬುವನಲ್ಲದೆ ಬೇರೊಂದು ಕುರುಪಿಟ್ಟು ಹೇಳುವನಲ್ಲ ಕಾಣಾ. ಅಕಾಯಚರಿತ್ರನಾದ ಅನುಪಮಸುಖಿ ತನಗೊಮ್ಮೆ ಹಿರಿದುಕಿರಿದು ಉತ್ತಮ ಮಧ್ಯಮ ಕನಿಷ್ಠವೆಂಬವೇನು ಕಾಣದಿರ್ದವು ನೋಡಾ. ಈ ನಿಲವು ನಿಲುಕದ ಕುಲಾದಿ ಮದಯುಕ್ತರು ಶರಣಸ್ಥಲವ ತೋರಿ ನಡೆವರು. ಇವರೆತ್ತ ಹೋಗುವರು ಎತ್ತ ಬರುವರು ಹೇಳಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮುಕ್ತ್ಯಾಂಗನೆಯ ಕೊಟ್ಟಿಗೆಯಲ್ಲಿ ಮೂರು ಎತ್ತು ಕಟ್ಟಿದವು. ಉಳುವುದಕ್ಕೆ ಹೆಗಲಿಲ್ಲ , ನಡೆವುದಕ್ಕೆ ಕಾಲಿಲ್ಲ , ಮೇವುದಕ್ಕೆ ಬಾಯಿಲ್ಲ , ಎರಡಾರಿಂಗೆ ಎಣೆಯಿಲ್ಲ . ಎತ್ತು ವಿಚ್ಛಂದವಾಯಿತ್ತು , ಎತ್ತು ಕಾವ ಹೈದ, ಎತ್ತ ಹೋದನೆಂದರಿಯೆ. ಕೊಟ್ಟಿಗೆ ಬಚ್ಚಬಯಲಾಯಿತ್ತು , ಬಂಕೇಶ್ವರಲಿಂಗಾ.
--------------
ಸುಂಕದ ಬಂಕಣ್ಣ
ಅಣ್ಣನ ಮೂರು ಕುತ್ತಿನಲ್ಲಿ, ಅಕ್ಕ ಮೂರು ಮಕ್ಕಳ ಹೆತ್ತು, ಅಪ್ಪನ ಕೈಯಲ್ಲಿ ಕೊಟ್ಟಳು. ಅಣ್ಣ ಹಣ್ಣಿದ ಜಗಳ. ಅಕ್ಕನ ಹೊಟ್ಟೆಯ ಕೇಡು. ಅಕ್ಕನ ಕೂಸು ಅಪ್ಪನ ತಿಂದು, ಎತ್ತ ಹೋಯಿತ್ತೆಂದರಿಯೆ. ಅರ್ಕೇಶ್ವರಲಿಂಗವ ಕೇಳುವ ಬನ್ನಿ.
--------------
ಮಧುವಯ್ಯ
ಸತ್ತವರ ಮನೆಗೆ ಸಾಯದವರು ಪೋಗಿ ತಮ್ಮ ಅಳುವ ಮಾಣಿಸಿ, ಸತ್ತವನ ಸತಿಯಳ ಸಂಗವ ಮಾಡಿ ಕುಲಗೆಟ್ಟು ಹೊಲೆಗೇರಿಯ ಪೊಕ್ಕು ಎತ್ತ ಹೋದರೆಂಬುದು ತಿಳಿಯಬಲ್ಲರೆ ಅಚ್ಚಶರಣನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿಶ್ವಾಸದಿಂದ ಭಕ್ತ, ವಿಶ್ವಾಸದಿಂದ ಮಾಹೇಶ್ವರ, ವಿಶ್ವಾಸದಿಂದ ಪ್ರಸಾದಿ, ವಿಶ್ವಾಸದಿಂದ ಪ್ರಾಣಲಿಂಗಿ, ವಿಶ್ವಾಸದಿಂದ ಶರಣ, ವಿಶ್ವಾಸದಿಂದ ಐಕ್ಯ. ಇಂತೀ ವಿಶ್ವಾಸವಿಲ್ಲದವಂಗೆ ವಿರಕ್ತಿಯೆಂಬ ಗೊತ್ತಿನ ಠಾವ ತೋರಾ. ಪ್ರಭುವಿನ ಕೈಯಲ್ಲಿ, ನಿಜಗುಣನ ನೆನಹಿನಲ್ಲಿ, ಅಜಗಣ್ಣನ ಐಕ್ಯದಲ್ಲಿ ಕುರುಹಿಲ್ಲದೆ ವಸ್ತುವ ಬೆರೆದ ಠಾವಾವುದಯ್ಯಾ ? ಎತ್ತ ಸುತ್ತಿ ಬಂದಡೂ ಅಸ್ತಮಕ್ಕೆ ಒಂದು ಗೊತ್ತಿನಲ್ಲಿ ನಿಲ್ಲಬೇಕು. ಇಂತೀ ವಿಶ್ವಾಸದಿಂದಲ್ಲದೆ ವಸ್ತುವ ಕೂಡುವುದಕ್ಕೆ ನಿಶ್ಚಯವಿಲ್ಲ. ಈ ಗುಣ ಸಂಗನಬಸವಣ್ಣ ತೊಟ್ಟತೊಡಿಗೆ, ಬ್ರಹ್ಮೇಶ್ವರಲಿಂಗವ ಮುಟ್ಟುವ ಭೇದ.
--------------
ಬಾಹೂರ ಬೊಮ್ಮಣ್ಣ
ಹೆಡಗೆಹಾರ ಮೊರಹಾರ ಗೆರಸಿಹಾರ ಮಡಕೆಹಾರ ದೆಸೆದೆಸೆಯಲ್ಲಿ ತಂದು ನೀಡುತ್ತಿರಲು, ಹೊಸಪರಿಯ ಆರೋಗಣೆಯನವಧರಿಸುತ್ತಿರ್ದನು. ಆವಾವ ದೆಸೆಯಲ್ಲಿ ತಂದು ನೀಡುತ್ತಿರ್ದಡೆ, ಆ ದೆಸೆದೆಸೆಗಳೆಲ್ಲಾ ಬಾಯಾಗಿ ಕೊಳುತಿರ್ದನು ! ಎತ್ತ ನೋಡಿದಡೆ ಅತ್ತತ್ತ ಮುಖ. ಅಗೆಯ ಹೊಯಿದಂತೆ ತೆರಹಿಲ್ಲ. ಒಂದು ನಿಮಿಷ ಎಡಹಿದಡೆ, ಅಕ್ಕಿಗಚ್ಚು ನುಚ್ಚು ತವುಡು ಮೊದಲಾಗಿ ಹೆಚ್ಚಿದವು ನಿಮಿಷದೊಳು. ಭಕ್ತಿಬಂಧುಗಳೆಲ್ಲಾ ತಮ್ಮ ತಮ್ಮ ಮಠದಲಾದ ಸಯಿದಾನವ ತಂದು, ಸಾರಗಟ್ಟಿ ನೀಡುತ್ತಿರ್ದಡೆ, ಅದ್ಭುತದಾರೋಗಣೆಯ ಕಂಡು, ಹರಿಹರಿದು ಪಾಕಯತ್ನವ ಮಾಡಿ ಎನ್ನುತ್ತ ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ, ಸಂತೋಷದೊಳೋಲಾಡುತ್ತಿರ್ದನು ಎನ್ನ ಪರಮಗುರು ಬಸವಣ್ಣನು.
--------------
ಸಂಗಮೇಶ್ವರದ ಅಪ್ಪಣ್ಣ
ಕತ್ತೆಯ ಗರ್ಭದಿಂದ ಪ್ರಸೂತವಾದ ಎತ್ತು ಹುಲ್ಲು ತಿನ್ನದು, ನೀರ ಕುಡಿಯದು, ಇರ್ದಲ್ಲಿ ಇರದು, ಹೋದತ್ತ ಹೋಗದು. ಇದೇನು ಸೋಜಿಗ ಬಲ್ಲರೆ ಹೇಳಿರಣ್ಣಾ, ಎತ್ತ ಬಿಟ್ಟಿತ್ತು, ಸತ್ತನೊಳಕೊಂಡು ಮುತ್ತನುಗುಳಿ ಹೋಯಿತ್ತು. ಇದೇನು ವಿಪರೀತ, ಬಲ್ಲರೆ ಹೇಳಿರಣ್ಣಾ, ಎತ್ತು ಕೆಟ್ಟಿತ್ತು, ಅರಸುವರ ಕಾಣೆನಣ್ಣಾ. ಸೌರಾಷ್ಟ್ರ ಸೋಮೇಶ್ವರಲಿಂಗದೊಡಗೂಡಿ, ಎತ್ತೆತ್ತ ಪೋಯಿತ್ತೆಂದರಿಯೆನಣ್ಣಾ.
--------------
ಆದಯ್ಯ
ಅಮ್ಮನ ಮೊಮ್ಮಗಳ ಗಂಡ ಪುಟ್ಟಿದಲ್ಲಿ ಹೊಂದದೆ, ಹೊಂದಿದವರ ಹಿಂಗದೆ, ಅಂಗಜನರಮನೆಯ ನಂದಾದೀವಿಗೆಯ ಬೆಳಗು ಕುಂದದೆ ತಂದೆ - ತಾಯಿಯ ಕೊಂದು ಕಮಲದಲ್ಲಿ ಸತ್ತು ಎತ್ತ ಹೋದನೆಂದರಿಯೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಾವದಲೊಬ್ಬ ದೇವರ ಮಾಡಿ, ಮನದಲೊಂದು ಭಕ್ತಿಯ ಮಾಡಿದಡೆ, ಕಾಯದ ಕೈಯಲ್ಲಿ ಕಾರ್ಯವುಂಟೆ? ವಾಯಕ್ಕೆ ಬಳಲುವರು ನೋಡಾ. ಎತ್ತನೇರಿ ಎತ್ತನರಸುವರು, ಎತ್ತ ಹೋದರೈ ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.
--------------
ಆಯ್ದಕ್ಕಿ ಲಕ್ಕಮ್ಮ
ಆತ್ಮನೆಂಬ ಬೆಳಗಿನೊಳು ನಿರಾತ್ಮನೆಂಬ ಉದಯದೋರಿ ಅತ್ತತ್ತಲೆ ಘನಕೆ ಘನವ ತೋರಿ ನಿಂದಬಳಿಕಿನ್ನು ಎತ್ತ ಯೋಗ ಹೇಳಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗೈಯೊಳಗಿನ ಕೂಸು ಆಕಾಶವ ನುಂಗಿ, ಮಂಗಳಾಂಗಿಯ ಸಂಗವ ಮಾಡಿ ಕಂಗಳಿಲ್ಲದವನ ಕೈಪಿಡಿದು, ಕೋಲ ಮುರಿದು, ಕಾಲ ಕಡಿದು, ಕಮಲದ ಹಾಲು ಕುಡಿದು, ಸತ್ತು ಎತ್ತ ಹೋಯಿತೆಂದರಿಯೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ ಮೂರು ಸುತ್ತಿನಾ ಕೋಟಿಯ ಗಡಹವಿರ್ಪುದು. ಆ ಗಡಹವ ನೋಡ ಹೋಗಲು, ಆ ಗಡಹದ ನವದ್ವಾರವು ತೆರೆದಿರಲು, ಅಲ್ಲಿ ಒಳಹೊಕ್ಕು ನೋಡಲು ಎತ್ತ ನೋಡಿದರತ್ತ ವಜೀರ, ಉಮರಾವತ, ಅರಣ್ಯ, ಠಾಣ್ಯ ಮೊದಲಾದ ಅನಂತ ಪರಿವಾರ ಆರೈಸಿರುವದು. ಅಲ್ಲಿ ವೇದ ಆಗಮ ಪುರಾಣ ಮೊದಲಾದ ನೃತ್ಯ ಹಾಸ್ಯ ಗಾಯನ ಅನಂತ ಉತ್ಸಹವಿರ್ಪುದು. ಅಲ್ಲಿ ದೀವಟಿಗೆಯು ಬಿರಸು ಚಂದ್ರಜ್ಯೋತಿ ದೀಪ ಮೊದಲಾದ ಅನಂತ ಪ್ರಕಾಶವಿರ್ಪುದು. ಅಲ್ಲಿ ಭೇರಿ, ನಗಾರಿ, ತಮ್ಮಟೆ, ಕಾಳಿ, ಕರ್ಣಿ ಮೊದಲಾದ ಅನಂತ ನಾದವಿರ್ಪುದು. ಮತ್ತಲ್ಲಿ ಒಳಹೊಕ್ಕು ನೋಡಲು ಮುಂದೆ ಚಿತ್ರವಿಚಿತ್ರವಾದ ಮಂಟಪವಿರ್ಪುದು. ಆ ಮಂಟಪದ ಸುತ್ತ ಅರವಿಂದ ನೀಲೋತ್ಪಲ ಸಂಪಿಗಿ ಇರವಂತಿಗೆ ಶ್ಯಾವಂತಿಗಿ ಮೊಲ್ಲೆ ಮಲ್ಲಿಗಿ ಮೊದಲಾದ ಅನಂತ ಪುಷ್ಪಮಾಲೆಗಳಿರ್ಪುವು. ಬಹುವರ್ಣದ ರಂಗವಾಲಿಯ ನೆಲಗಟ್ಟಿರ್ಪುದು. ಅದರೊಳಗೆ ನೋಡಬೇಕೆಂದು ಹೋಗಲು ಮುಂದೆ ನವರತ್ನಖಚಿತವಾದ ಸಿಂಹಾಸನವಿರ್ಪುದು. ಆ ಸಿಂಹಾಸನದ ಮೇಲೆ ಅಧಿಪತಿಯಾಗಿ ಇರುವಾತ ಎಂಥಾತ ಆತನ ಆತುರದಿ ನೋಡಬೇಕೆಂದು ಆ ಸಿಂಹಾಸನವೇರಲು ಅಲ್ಲಿಯ ಅಧಿಪತಿ ತಾನೇ ಆಗಿರ್ದ. ಇದೇನು ಸೋಜಿಗವೋ, ತಾ ನೋಡ ಬಂದವನೆಂಬ ಅರವಿಲ್ಲ. ಅಲ್ಲಿ ಅರಸನ್ಯಾವನೆಂಬ ಸಂಶಯವಿಲ್ಲದೆ ಅಲ್ಲಿಯ ಸರ್ವಕ್ಕೆ ತಾನೇ ಅಧಿಪತಿಯಾಗಿ ಇದ್ದಾಗ್ಯೂ ಆವಾಗಲೂ ಅಲ್ಲೇ ಇರ್ದಂತೆ ಇರುತಿರ್ದೆನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->