ಅಥವಾ
(61) (3) (3) (0) (0) (0) (0) (0) (1) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (2) (0) (0) (0) (0) (0) (0) (0) (1) (0) (1) (0) (1) (0) (0) (1) (1) (0) (0) (0) (0) (0) (0) (10) (0) (0) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಯ್ಯ, ನಿನ್ನ ಷಟ್ಚಕ್ರಂಗಳಲ್ಲಿ ಅನಾದಿ ನಿಷ್ಕಳಂಕ ಚಿದ್ಘನ ಇಷ್ಟಮಹಾಲಿಂಗವೆ ಷಡ್ವಿಧಲಿಂಗವಾಗಿ ನೆಲಸಿರ್ಪರು ನೋಡ, ಅದೆಂತೆಂದಡೆ: ಆಧಾರಚಕ್ರದ ನಾಲ್ಕೆಸಳಮಧ್ಯದಲ್ಲಿ ನಕಾರಮಂತ್ರಮೂರ್ತಿ ಆಚಾರಲಿಂಗವಾಗಿ ನೆಲಸಿರ್ಪರು ನೋಡ. ಸ್ವಾಧಿಷಾ*ನಚಕ್ರದ ಆರೆಸಳಮಧ್ಯದಲ್ಲಿ ಮಕಾರಮಂತ್ರಮೂರ್ತಿ ಗುರುಲಿಂಗವಾಗಿ ನೆಲಸಿರ್ಪರು ನೋಡ. ಮಣಿಪೂರಕಚಕ್ರದ ಹತ್ತೇಸಳಮಧ್ಯದಲ್ಲಿ ಶಿಕಾರಮಂತ್ರಮೂರ್ತಿ ಶಿವಲಿಂಗವಾಗಿ ನೆಲಸಿರ್ಪರು ನೋಡ. ಅನಾಹತಚಕ್ರದ ಹನ್ನೆರಡೆಸಳಮಧ್ಯದಲ್ಲಿ ವಕಾರಮಂತ್ರಮೂರ್ತಿ ಚರಲಿಂಗವಾಗಿ ನೆಲಸಿರ್ಪರು ನೋಡ. ವಿಶುದ್ಧಿಚಕ್ರದ ಹದಿನಾರೆಸಳಮಧ್ಯದಲ್ಲಿ ಯಕಾರಮಂತ್ರಮೂರ್ತಿ ಪ್ರಸಾದಲಿಂಗವಾಗಿ ನೆಲಸಿರ್ಪರು ನೋಡ. ಆಜ್ಞಾಚಕ್ರದ ಎರಡೆಸಳ ಮಧ್ಯದಲ್ಲಿ ಓಂಕಾರಮಂತ್ರಮೂರ್ತಿ ಮಹಾಲಿಂಗವಾಗಿ ನೆಲಸಿರ್ಪರು ನೋಡ. ಇಂತು ಷಟ್ಚಕ್ರಂಗಳಮಧ್ಯದಲ್ಲಿ ನೆಲಸಿ, ನಿನ್ನ ಷಡ್ವಿಧಭೋಗಂಗಳ ಕೈಕೊಂಡು, ಆ ಪರಿಣಾಮವ ನಿನಗೆ ಸಂತೃಪ್ತಿಯ ಮಾಡಿ, ಶರಣಸತಿ ಲಿಂಗಪತಿ ಭಾವದಿಂದ ಮೇಲುಗಿರಿಮಂಟಪದ ನವರತ್ನ ಖಚಿತ ಸಹಸ್ರದಳ ಪದ್ಮಯುಕ್ತವಾದ ಪರಿಯಂಕದ ಮೇಲೆ ಲಿಂಗಾನುಭಾವರತಿಸುಖಾನಂದದಿಂದ ಶೋಭಿಸುವಂಥದೆ ಆಧ್ಯಾತ್ಮ ದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಮತ್ತಾ ಗುರುಲಿಂಗಜಂಗಮಸ್ವರೂಪವಾಗಿ, ನಿಜಾಚರಣೆಯಲ್ಲಿ ನಿಂದು, ಅಸತ್ಯವನಳಿದು ಸುಸತ್ಯದಲ್ಲಿ ನಿಂದು, ಅನಾಚಾರವನುಳಿದು ಶಿವಾಚಾರಸನ್ಮಾರ್ಗದಲ್ಲಿ ನಿಂದು, ಭವಿ ನಡೆನುಡಿಗಳನುಳಿದು ಭಕ್ತನ ನಡೆನುಡಿಗಳಲ್ಲಿ ನಿಂದು, ಅಯೋಗ್ಯವಾದ ಭೋಗವನುಳಿದು ಯೋಗ್ಯವಾದ ಭೋಗದಲ್ಲಿ ನಿಂದು, ತನ್ನಾದಿ ಮಧ್ಯಾವಸಾನವ ತಿಳಿದು, ತನ್ನ ನಿಜಾಚರಣೆ ಲೀಲಾವಿನೋದದಿಂದ ತನ್ನ ತಾನರ್ಚಿಸುವ ನಿಲುಕಡೆಯ ವಿಚಾರವ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಕೇಳ, ಪ್ರಮಥಗಣಂಗಳೆಲ್ಲ ಷಡ್ವಿಧಭಕ್ತಿಯೆಂಬ ಪರಮಾಮೃತವ ಸೇವಿಸಿ, ಪ್ರವೃತ್ತಿಮಾರ್ಗದಲ್ಲಿ ಚರಿಸುವ ಆರು ವೈರಿಗಳ ಸಂಗವ ತ್ಯಜಿಸಿ, ನಿವೃತ್ತಿ ಮಾರ್ಗದಲ್ಲಿ ಚರಿಸುವ ಷಡ್ಗುಣಗಳ ಸಂಗವ ಸಾಧಿಸಿ, ಜಂಗಮದ ಆಚಾರ ವಿಚಾರವ ತಿಳಿದು, ಷಟ್‍ಸ್ಥಲಮಾರ್ಗದಲ್ಲಿ ನಿಂದು, ಭಕ್ತಿ-ಜ್ಞಾನ-ವೈರಾಗ್ಯದಲ್ಲಾಚರಿಸಿದ ವಿಚಾರವೆಂತೆಂದಡೆ : ಅನಾದಿನಿರಂಜನ-ಅಕಾಯಚರಿತ್ರ-ನಿರಾಲಂಬ-ಪರಶಿವಮೂರ್ತಿ ಸಾಕ್ಷಾತ್ ಶ್ರೀಗುರುದೇವನಿಂದ ಏಕವಿಂಶತಿ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡದು, ತನ್ನ ತಾನರ್ಚಿಸಿ, ಆ ಶ್ರೀಗುರುದೇವನ ಲಿಂಗಜಂಗಮಲೀಲೆ ಹೇಗುಂಟೋ ಹಾಂಗೆ, ಭಕ್ತಿಯ ಮಾಡಿ, ಶ್ರೀಗುರು-ಲಿಂಗ-ಜಂಗಮದಂತಃಕರಣವೆಂಬ ಪರಮಾತೃತಸುಧೆಯೊಳಗೆ ಲೋಲುಪ್ತರಾಗಿ, ನಿರಾವಯ ಸಮಾಧಿಯಲ್ಲಿ ಬಯಲಾದರು ನೋಡ. ಅದರ ವಿಚಾರವೆಂತೆಂದಡೆ : ಭಕ್ತಿಸ್ಥಲಕ್ಕೆ ಕಾರಣವಾದ ಬಸವಣ್ಣನೆ ಲಿಂಗಲಾಂಛನಗಳ ನೋಡಿ, ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ ! ಮಹೇಶಸ್ಥಲಕ್ಕೆ ಕಾರಣವಾದ ಮಡಿವಾಳದೇಶಿಕೇಂದ್ರನೆ ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಪಂಚಾಚಾರವ ನೋಡಿ ತನುಮನಧನವನೊಪ್ಪಿಸಿ ಶರಣೆಂದರಯ್ಯ. ಪ್ರಸಾದಿಸ್ಥಲಕ್ಕೆ ಕಾರಣವಾದ ಮರುಳಶಂಕರದೇವನೆ ಲಿಂಗಲಾಂಛನ-ವಿಭೂತಿ-ರುದ್ರಾಕ್ಷೆ-ಮಂತ್ರ ಪಂಚಾಚಾರದಾಚರಣೆ, ಸಪ್ತಾಚಾರದ ಸಂಬಂಧದ ನಡೆನುಡಿಯ ವಿಚಾರಿಸಿ, ತನುಮನಧನವನೊಪ್ಪಿಸಿ ಶರಣೆಂದರಯ್ಯ. ಪ್ರಾಣಲಿಂಗಿಸ್ಥಲಕ್ಕೆ ಕಾರಣವಾದ ಸಿದ್ಧರಾಮೇಶ್ವರನೆ ಲಿಂಗಲಾಂಛನ, ಶ್ರೀವಿಭೂತಿ, ರುದ್ರಾಕ್ಷೆ, ಪಂಚಮಂತ್ರ, ದ್ವಾದಶಾಚಾರ ಮೊದಲಾದ ಸರ್ವಾಚಾರ ಸಂಪತ್ತಿನಾಚರಣೆ ಸರ್ವಾಂಗದಲ್ಲಿ ನೂನು ಕೂನುಗಳಿಲ್ಲದೆ, ನಡೆನುಡಿಗಳು ಹೊದ್ದಲ್ಲದೆ, ನಿರಾಭಾರಿ ವೀರಶೈವವ ನೋಡಿ ಇದೆ ಪರವಸ್ತುವೆಂದು ತನುಮನಧನವನೊಪ್ಪಿಸಿ ಶರಣೆಂದರಯ್ಯ. ಶರಣಸ್ಥಲಕ್ಕೆ ಕಾರಣವಾದ ಚೆನ್ನಬಸವೇಶ್ವರನೆ ಇಂತು ಚತುರ್ವಿಧಮೂರ್ತಿಗಳು ವಿಚಾರಿಸಿದ ಆಚರಣೆಯ ನೋಡಿ, ಗುರು-ಸೂತ್ರ-ಗೋತ್ರ-ಸಂಪ್ರದ ದೀಕ್ಷೆಯ ವಿಚಾರಿಸಿ, ಲಿಂಗಾಂಗ ಷಟ್ಸ್ಥಾನಂಗಳ ನೋಡಿ, ಗುರುಮಾರ್ಗಾಚಾರ ನಡೆನುಡಿಗಳ ವಿಚಾರಿಸಿ, ಸ್ವಾನುಭಾವ ಸಕೀಲದ ಗೊತ್ತ ತಿಳಿದು, ಲಾಂಚನವ ನೋಡಿ ಮನ್ನಿಸಿ, ತನುಮನಧನವನೊಪ್ಪಿಸಿ ಶರಣೆಂದರಯ್ಯ. ಐಕ್ಯಸ್ಥಲಕ್ಕೆ ಕಾರಣವಾದ ಅಜಗಣ್ಣಗಳೆ ಬಸವ, ಮಡಿವಾಳ, ಮರುಳುಶಂಕರ, ಸಿದ್ಧರಾಮ, ಚೆನ್ನಬಸವ ಮೊದಲಾದ ಮಹಾಗಣಂಗಳು ಅರ್ತಿ-ಉತ್ಸಾಹದಿಂದ ಭಕ್ತಿಯ ಮಾಡಿದ ಜಂಗಮವೆ ನನಗೆ ಮಹಾಪ್ರಸಾದವೆಂದು ಅವರಡಿಗಳಿಗೆ ವಂದಿಸಿ, ತನು-ಮನ-ಧನವನೊಪ್ಪಿಸಿ ಶರಣೆಂದರಯ್ಯ. ನಿರವಯಸ್ಥಲಕ್ಕೆ ಕಾರಣವಾದ ಪ್ರಭುದೇವನೆ ಆವ ಮತವೆಂದು ನೋಡದೆ, ಬಾಲಬ್ರಹ್ಮಿ-ಬಳಸಿಬ್ರಹ್ಮಿಯೆಂಬ ಸಂಸಾರ ಸಂಕಲ್ಪಸೂತಕವನೆಣಿಸದೆ, ಸರ್ವಾಂಗದವಯವಂಗಳ ನೋಡಿ, ಸರ್ವಸಂಗಪರಿತ್ಯಾಗದಿಂದ, ದ್ವಾದಶ ಮಲಂಗಳ ತ್ಯಜಿಸಿ, ಭಕ್ತಿ-ಜ್ಞಾನ-ವೈರಾಗ್ಯದಿಂದ ಸಮಸ್ತವಾದ ಭೋಗಯೋಗಾದಿಗಳಿಗೆ ಹೇವರಿಸಿ, ನಿರಾಸಕತ್ವದಿಂದ ಶಿವಧೋ ಎಂದು ಗುರೂಪಾವಸ್ತೆಯಂ ಮಾಡುವ ಜ್ಞಾನಕಲಾತ್ಮಂಗೆ ಜಂಗಮಾಕೃತಿಯಿಂದ ಪ್ರತ್ಯಕ್ಷವಾಗಿ, ಆ ಜ್ಞಾನಕಲಾತ್ಮನ ಉಪಾವಸ್ತೆಯನೊಂದಿಸಿ, ಆತಂಗೆ ಅಂಜಬೇಡವೆಂದು ಅಭಯಹಸ್ತವನಿತ್ತು. ರೇವಣಸಿದ್ಧೇಶ್ವರ ಮೊದಲಾದ ಗಣಾಚಾರ್ಯರ ಮಧ್ಯದಲ್ಲಿ ಈ ಜ್ಞಾನಕಲಾತ್ಮನನೊಪ್ಪಿಸಿ, ಅವರಿಂದ ನಿರಾಕಾರವಾದ ಪ್ರಾಣಲಿಂಗವ ಬಷ್ಕರಿಸಿ, ಪಂಚಕಲಶಸೂತ್ರದಿಂದ ಪ್ರಮಥಗಣ ಸಾಕ್ಷಿಯಾಗಿ ಆತನ ಷಡ್ವಿಧಸ್ಥಾನದಲ್ಲಿ ಸ್ಥಿರಗೊಳಸಿ, ಅಂತರಂಗ ಬಹಿರಂಗದಲ್ಲಿ ಅಷ್ಟವಿಧಾರ್ಚನೆ, ಷೋಡಶೋಪಚಾರ ಭಕ್ತಿಗಳನರುಪಿ, ಆ ಪರಶಿವಲಿಂಗದಲ್ಲಿ ನೈಷೆ*ಯ ನೋಡಿ, ಪ್ರಮಥಗಣರಾಧ್ಯ ಭಕ್ತ ಮಹೇಶ್ವರರೊಡಗೂಡಿ, ಏಕವಿಂಶತಿ ದೀಕ್ಷೆ ಮೊದಲಾಗಿ, ಪ್ರಮಥರು ನುಡಿದ ಎರಡೆಂಬತ್ತು ಕೋಟಿ ವಚನಾನುಭಾವದ ಉದಾಹರಣೆಯ ಬೋಧಿಸಿ, ಸ್ವಸ್ವರೂಪು ನಿಲುಕಡೆಯ ಬೋಧಿಸಿ, ನಾನು ನೀನು ಎಂಬ ಭಿನ್ನಭಾವವನಳಿದು, ಏಕಸ್ವರೂಪವೆಂಬ ಅಭಿನ್ನಲೀಲೆಯಿಂದ ಪಾದೋದಕ ಪ್ರಸಾದದಲ್ಲಿ ಏಕಭಾಜನವ ಮಾಡಿದಮೇಲೆ, ಶ್ರೀಗುರು ಬಸವ ಮೊದಲಾದ ಸಕಲಪ್ರಮಥಗಣಾರಾಧ್ಯರ ಕರದು, ಇಲ್ಲೊಂದು ನಿಜವಸ್ತು ಉಂಟೆಂದು ಹೇಳಿ, ತಾವು ಮೊದಲು ಶರಣು ಹೊಕ್ಕು, ತಮ್ಮ ಹಿಂದೆ ಶರಣಗಣಂಗಳೆಲ್ಲ ಶರಣುಹೊಕ್ಕು. ಅಡಿ ಮುಡಿಯಿಂದ ವಸ್ತುವ ಬೆಸಗೊಂಡು ಆ ಲಿಂಗಜಂಗಮದೇವರೂಪಡಗೂಡಿ ಬಯಲೊಳಗೆ ಮಹಾಬಯಲಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ದಂಡಾಕೃತಿ, ಮಕಾರಪ್ರಣಮ, ಘಂಟಾನಾದ, ಸ್ವಾಧಿಷಾ*ನಚಕ್ರ, ಶ್ವೇತವರ್ಣ, ಮಹೇಶ್ವರಸ್ಥಲ, ಸ್ಥೂಲತನು, ಸುಬುದ್ಧಿಹಸ್ತ, ಗುರುಲಿಂಗ, ಜಿಹ್ವೆಮುಖ, ನೈಷಿ*ಕಾಭಕ್ತಿ, ಸುರಸಪದಾರ್ಥ, ಸುರಪ್ರಸಾದ, ವಿಷ್ಣುಪೂಜಾರಿ, ವಿಷ್ಣುವಧಿದೇವತೆ, ಕತೃಸಾದಾಖ್ಯ, ಚಿತ್ತವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಪಶ್ಚಿಮದಿಕ್ಕು, ಯಜುರ್ವೇದ, ಅಪ್ಪುವೆ ಅಂಗ, ಅಂತರಾತ್ಮ, ಜ್ಞಾನಶಕ್ತಿ, ಪ್ರತಿಷೆ*ಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಸ್ವಾಧಿಷಾ*ನಚಕ್ರವೆಂಬ ಸೇತುಬಂಧಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಮಂತ್ರಮೂರ್ತಿಸ್ವರೂಪವಾದ ಗುರುಲಿಂಗವೆ ರಾಮೇಶ್ವರಲಿಂಗವೆಂದು ತನುತ್ರಯವ ಮಡಿಮಾಡಿ, ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರದು, ಅಪ್ಪು ನಿವೃತ್ತಿಯಾದ ಗಂಧವ ಧರಿಸಿ, ಬುದ್ಧಿ ಸುಬುದ್ಧಿಯಾದಕ್ಷತೆಯನಿಟ್ಟು, ಅಲ್ಲಿಹ ಷಡ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಶ್ವೇತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಸ್ವಪ್ನಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿಃಕ್ರೋಧವೆಂಬಾಭರಣವ ತೊಡಿಸಿ, ಸುರುಚಿಯೆಂಬ ನೈವೇದ್ಯವನರ್ಪಿಸಿ, ನೈಷೆ*ಯೆಂಬ ತಾಂಬೂಲವನಿತ್ತು. ಇಂತು ಗುರುಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ಗುರುಲಿಂಗಮೂರ್ತಿಯನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗ ಪೂಜೆಯ ಸಮಾಪ್ತವ ಮಾಡಿ ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಶ್ಚಿಂತದಿಂದ ಬೆರಸಬಲ್ಲಾತನೆ ನೈಷಾ*ಭಕ್ತಿಯನುಳ್ಳ ವೀರಮಾಹೇಶ್ವರ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಇನ್ನು ಹಠಯೋಗವ ಮರದು ಶಿವಯೋಗದಲ್ಲಿ ನಿಂತ ಭೇದವೆಂತೆಂದಡೆ : ಆ ನಿಲುಕಡೆಯ ಶ್ರೀಗುರುಕರುಣಕಟಾಕ್ಷೆಯಿಂದ ನಿರೂಪಿಸೇವು ಕೇಳಯ್ಯ, ವರಕುಮಾರದೇಶಿಕೋತ್ತಮನೆ. ವಾಮಭಾಗದ ಚಂದ್ರನಾಳ, ಚಂದ್ರನೇತ್ರ, ವಾಮಕರ್ಣದ್ವಾರಂಗಳು ಇವು ಮೂರು ಈಡನಾಡಿಯೆನಿಸುವುದಯ್ಯ. ದಕ್ಷಿಣಭಾಗದ ಸೂರ್ಯನಾಳ, ಸೂರ್ಯನೇತ್ರ, ದಕ್ಷಿಣ ಕರ್ಣದ್ವಾರಂಗಳು ಇವು ಮೂರು ಪಿಂಗಳನಾಡಿಯೆನಿಸುವುದಯ್ಯ. ಅಧೋದ್ವಾರ, ಗುಹ್ಯದ್ವಾರ, ಜೀಹ್ವಾದ್ವಾರ ಇವು ಮೂರು ಸುಷುಮ್ನನಾಡಿಯೆನಿಸುವುದಯ್ಯ. ಮಣಿಪೂರಕನಾಭಿ, ವಿಶುದ್ಧಿನಾಭಿ, ಬ್ರಹ್ಮನಾಭಿ ಇವು ಮೂರು ಇಪ್ಪತ್ತೆರಡುಸಾವಿರನಾಡಿಗಳಿಗೆ ಮೂಲಸೂತ್ರವಾದ ಮಧ್ಯನಾಡಿಯೆನಿಸುವುದಯ್ಯ. ಇಂತೀ ದ್ವಾದಶದ್ವಾರಂಗಳಲ್ಲಿ ಚರಿಸುವ ಮನ್ಮಥವಿಕಾರಮಂ ಗುರೂಪಾವಸ್ತೆಯಿಂದ ಹಿಂದುಮಾಡಿ, ತನ್ನ ಸತ್ಯವೆ ಮುಂದಾಗಿ, ತನ್ನ ನಡೆನುಡಿಗಳ ತನ್ನ ತಾನೆ ವಿಚಾರಿಸಿ, ಸದ್ಗುರುಲಿಂಗಜಂಗಮದಿಂದ ಶಿವದೀಕ್ಷೆಯ ಪಡದು ಲಿಂಗಾಂಗಸಂಬಂಧಿಯಾಗಿ, ಆ ಲಿಂಗಾಂಗಚೈತನ್ಯಸ್ವರೂಪವಾದ ಪಾದೋದಕ ಪ್ರಸಾದ ಮಂತ್ರದಿಂದ ಆ ತ್ರಿವಿಧನಾಡಿಗಳು ಮೊದಲಾಗಿ ದ್ವಾದಶನಾಡಿಗಳೆ ಕಡೆಯಾದ ಸಮಸ್ತನಾಡಿಗಳೆಲ್ಲ ಪವಿತ್ರಸ್ವರೂಪವಾಗಿ, ಸರ್ವಾವಸ್ಥೆಯಲ್ಲಿ ಚಿದ್ಘನಮಹಾಲಿಂಗವ ಅಷ್ಟವಿಧಾರ್ಚನೆ, ಷೋಡಶೋಪಚಾರವನೊಡಗೂಡಿ, ಪರಿಪರಿಯಿಂದರ್ಚಿಸಿ, ಆಚಾರಭ್ರಷ್ಟರ ತ್ರಿಕರಣಂಗಳಿಂದ ಸೋಂಕದೆ, ಅಂಗ ಕರಣಂಗಳೆಲ್ಲ ಲಿಂಗಕಿರಣಂಗಳಾಗಿ, ಸತ್ಕ್ರಿಯಾಜ್ಞಾನಾನಂದವೆ ಪ್ರಭಾವಿಸಿ, ಶ್ರೀಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಸದಾಚಾರ ಸದ್ಭಕ್ತಿ ಸತ್ಕ್ರಿಯಾ ಸಮ್ಯಜ್ಞಾನ ಸದ್ವರ್ತನೆಯೆಂಬ ಚಿದೈಶ್ವರ್ಯದಲ್ಲಿ ಸಂತೃಪ್ತರಾಗಿ, ನಿಂದ ನಿಲುಕಡೆಯಲ್ಲಿ ಪೂರ್ಣಸ್ವರೂಪ ನಿಜಶಿವಯೋಗಿಗಳು ನಿಮ್ಮ ಶರಣರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ವರಕುಮಾರದೇಶಿಕೇಂದ್ರನೆ, ನೀನು ಅಷ್ಟಭೋಗಂಗಳಂ ತ್ಯಜಿಸಿ, ನಿನ್ನ ನಿಜದಿಂದ ನಿನ್ನಾದಿಮಧ್ಯಾವಸಾನವ ತಿಳಿದು ನೋಡಿದಡೆ ನಿನ್ನ ಕಣ್ಣ ಮುಂದೆ ಬಂದಿರ್ಪುದು ನೋಡ ಮಹಾಪ್ರಸಾದವು. ಅದೆಂತೆಂದಡೆ :ಮಹಾಜ್ಞಾನ ತಲೆದೋರಿ ಸರ್ವಸಂಗ ಪರಿತ್ಯಾಗವ ಮಾಡಿ, ಗುರೂಪಾವಸ್ತೆಯಂ ಮಾಡಿದ ಶಿಷ್ಯೋತ್ತಮಂಗೆ ಶ್ರೀಗುರುಲಿಂಗಜಂಗಮವು ಪ್ರತ್ಯಕ್ಷವಾಗಿ ನಾಲ್ವರಾರಾಧ್ಯ ಭಕ್ತ ಮಾಹೇಶ್ವರರೊಡಗೂಡಿ, ಅಂಗಲಿಂಗದ ಪೂರ್ವಾಶ್ರಯವ ಕಳೆದು, ಕುಮಾರ ಠಾವ ಮಾಡಿಸಿ, ಸೇವಾಭೃತ್ಯರಿಂದ ಪಂಚಕಲಶಂಗಳ ಸ್ಥಾಪಿಸಿ, ಸೂತ್ರವ ಹಾಕಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿಸಿ, ತಮ್ಮ ಕೃಪಾಹಸ್ತವನ್ನಿಟ್ಟು, ಜಂಗಮಮೂರ್ತಿಗಳ ಸಿಂಹಾಸನದ ಮೇಲೆ ಮೂರ್ತವ ಮಾಡಿಸಿ, ಶ್ರೀಗುರುಲಿಂಗವು ಎದ್ದು ಪ್ರಮಥರೊಡಗೂಡಿ, ಕುಮಾರ ಠಾವಮಾಡಿದಂಗಲಿಂಗವ ತನ್ನ ಚರಣತಳಕ್ಕೆ ಸೂತ್ರವ ಹಿಡಿಸಿ, ಗುರು-ಶಿಷ್ಯತ್ವವೆಂಬ ಉಭಯಭೇದವಳಿದು ಏಕರೂಪವಾಗಿ ನಿರಂಜನಜಂಗಮಮೂರ್ತಿಗೆ ಅಭಿವಂದಿಸಿ ಅಷ್ಟಾಂಗಪ್ರಣತರಾಗಿ, ಅಪ್ಪಣೆಯ ಬೆಸಗೊಂಡು, ಆ ನಿರಂಜನ ಜಂಗಮಮೂರ್ತಿಗೆ ಪ್ರತಿಸಿಂಹಾಸನವ ಮಾಡಿಸಿ, ಮೂರ್ತಗೊಳಿಸಿ, ಗುರುಶಿಷ್ಯರಭಿಮುಖರಾಗಿ, ಗುರುವಿನ ದೃಕ್ಕು ಶಿಷ್ಯನಮಸ್ತಕದ ಮೇಲೆ ಸೂಸಿ, ಶಿಷ್ಯನ ದೃಕ್ಕು ಗುರುವಿನ ಚರಣಕಮಲದಲ್ಲಿ ಸೂಸಿ, ಏಕಲಿಂಗನೈಷೆ*ಯಿಂದ ಸಾವಧಾನಭಕ್ತಿ ಕರಿಗೊಂಡು, ಆ ಲಿಂಗಾಂಗದ ಭಾಳದ ಪೂರ್ವಲಿಖಿತವ ಜಂಗಮದ ಚರಣೋದ್ಧೂಳನದಿಂದ ತೊಡದು, ಲಿಂಗಾಂಗಕ್ಕೆ ಇಪ್ಪತ್ತೊಂದು ಪೂಜೆಯ ಮಾಡಿಸಿ, ಲಿಂಗಕ್ಕೆ ಅಂಗವ ತೋರಿ, ಅಂಗಕ್ಕೆ ಲಿಂಗವ ತೋರಿ, ಪಾಣಿಗ್ರಹಣವ ಮಾಡಿ, ಕರ್ಣದಲ್ಲಿ ಮಂತ್ರವನುಸುರಿ, ಪ್ರಮಥರೊಡಗೂಡಿ ಶಾಸೆಯನೆರದು, ಕಂಕಣವಕಟ್ಟಿ, ನಿಮಿಷಾರ್ಧವಗಲಬೇಡವೆಂದು ಅಭಯಹಸ್ತವನಿತ್ತು, ಸರ್ವಾಂಗದಲ್ಲಿ ಚಿದ್ಘನಲಿಂಗವನಿತ್ತುದೆ ಪ್ರಥಮದಲ್ಲಿ ಗುರುಪ್ರಸಾದ ನೋಡ. ಅದರಿಂ ಮೇಲೆ ಕ್ರಿಯಾಮಂತ್ರವ ಹೇಳಿ, ದಶವಿಧ ಪಾದೋದಕವ ಏಕಾದಶಪ್ರಸಾದವ ಕರುಣಿಸಿದ್ದುದೆ ದ್ವಿತೀಯದಲ್ಲಿ ಲಿಂಗಪ್ರಸಾದ ನೋಡ. ಅದರಿಂ ಮುಂದೆ ಲಿಂಗಾಂಗದ ಷಟ್ಸ್ಥಾನಂಗಳಲ್ಲಿ ಅಷ್ಟವಿಧಸಕೀಲು ಮೊದಲಾಗಿ ಸಮಸ್ತ ಸಕೀಲವರ್ಮವ ಕರುಣಿಸಿದ್ದುದೆ ತೃತೀಯದಲ್ಲಿ ಜಂಗಮಪ್ರಸಾದ ನೋಡ. ಅದರಿಂದತ್ತ ಲಿಂಗಾಂಗವೆರಡಳಿದು, ಸರ್ವಾಚಾರಸಂಪತ್ತಿನಾಚರಣೆಯ ತೋರಿ, ಮಹಾಪ್ರಸಾದ ಶಿವಾನುಭಾವಸ್ವರೂಪವ ಬೋಧಿಸೆ, ಶ್ರೀಗುರುಲಿಂಗಜಂಗಮದಂತರಂಗದಲ್ಲಿ ಬೆಳಗುವ ಚಿಜ್ಜ್ಯೋತಿಶರಣನೆ ಚತುರ್ಥದಲ್ಲಿ ನಿಜಪ್ರಸಾದ ನೋಡ. ಈ ಚತುರ್ವಿಧ ಪ್ರಸಾದ ಸ್ವರೂಪವೆ ನೀನೆಂದರಿದು, ಇನ್ನಾವ ಭಯಕ್ಕೆ ಹೆದರಬೇಡಯ್ಯ! ಪ್ರಮಥರಾಚರಿಸಿದ ಆಚಾರಕ್ರಿಯಾಜ್ಞಾನಾಚರಣೆ ಸಂಬಂಧಕ್ಕೆ, ಬಂದುದು ಕೊಂಡು, ಬಾರದುದನುಳಿದು ಚಿದ್ಘನಮಹಾಲಿಂಗದಲ್ಲೇಕವಾಗಿ ಬಾರಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಂಗದಮೇಲೆ ಲಿಂಗವ ಧರಿಸಿ, ಶಿವಭಕ್ತರೆಂದು ಹೇಳಿ, ಶಿವಾಚಾರಮಾರ್ಗವ ಬಿಟ್ಟು, ಭವಿಶೈವದೈವಗಳಿಗೆ ಲಿಂಗವಡಿಯಾಗಿ ಅಡ್ಡಬಿದ್ದು ಶರಣೆಂಬ ಹೊಲೆಯರಿಗೆ ಶಿವಭಕ್ತಜನ್ಮ ತೀರಿ, ಚಂದ್ರಸೂರ್ಯರುಳ್ಳನ್ನಕ್ಕರೆ ಇಪ್ಪತ್ತೆಂಟುಕೋಟಿ ನರಕ ತಪ್ಪದು. ಆ ನರಕ ತೀರಿದ ಬಳಿಕ ಶ್ವಾನ ಸೂಕರಜನ್ಮ ತಪ್ಪದು. ಆ ಜನ್ಮ ತೀರಿದ ಬಳಿಕ ರುದ್ರಪ್ರಳಯ ತಪ್ಪದೆಂದ ಕಾಣಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ನಿರಂಜನಾಕೃತಿ, ವ್ಯಂಜನ ಹಕಾರಪ್ರಣಮ, ಮಹಾನಾದ, ಪಶ್ಚಿಮಚಕ್ರ, ಅಖಂಡಮಹಾಜ್ಯೋತಿವರ್ಣ, ನಿರಾತಂಕಸ್ಥಲ, ನಿರ್ಮುಕ್ತಿತನ, ನಿರ್ಮಾಯಹಸ್ತ, ನಿರಂಜನ ಲಿಂಗ, ಪಶ್ಚಿಮವೆಂಬ ಮುಖ, ಅಪ್ರಮಾಣ ಭಕ್ತಿ, ಅವಿರಳ ಪದಾರ್ಥ, ಅವಿರಳ ಪ್ರಸಾದ, ಪರಮೇಶ್ವರ ಪೂಜಾರಿ, ಪರಮೇಶ್ವರನಧಿದೇವತೆ, ನಿಶ್ಚಲಸಾದಾಖ್ಯ, ನಿರ್ವಂಚಕವೆಂಬ ಲಕ್ಷಣ, ಅವಿರಳವೆಂಬ ಸಂಜ್ಞೆ, ನಿರಾಳದಿಕ್ಕು, ಅಗಮ್ಯವೇದ, ಶಿವಯೋಗಿಯೆ ಅಂಗ, ಚಿನ್ಮಯಾತ್ಮ, ನಿರ್ವಯಶಕ್ತಿ, ಅನಂತಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ಪಶ್ಚಿಮಚಕ್ರವೆಂಬ ಮಹಾ ಮೇರುಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ನಿಜಮೋಕ್ಷ ಕರ್ತುಸ್ವರೂಪವಾದ ನಿರಂಜನಲಿಂಗವೆ ಶಾಂಭವಮೂರ್ತಿಲಿಂಗವೆಂದು ಹಂಸತ್ರಯವ ಮಡಿಮಾಡಿ, ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರದು, ನಿರ್ಜಾತವೆಂಬ ಗಂಧವ ಧರಿಸಿ, ನಿರ್ಜಡವೆಂಬಕ್ಷತೆಯನಿಟ್ಟು, ನಿದ್ರ್ವಂದ್ವವೆಂಬ ಪುಷ್ಪದ ಮಾಲೆಯಂ ಧರಿಸಿ, ನಿರ್ಲಜ್ಜವೆಂಬ ಧೂಪವ ಬೀಸಿ, ನಿರಾಲಂಬವೆಂಬ ಜ್ಯೋತಿಯ ಬೆಳಗಿ, ನಿರಾವಯವೆಂಬ ವಸ್ತ್ರವ ಹೊದ್ದಿಸಿ, ನಿಸ್ಪøಹವೆಂಬಾಭರಣವ ತೊಡಿಸಿ, ನಿರಾಳವೆಂಬ ನೈವೇದ್ಯವನರ್ಪಿಸಿ, ನಿರಾವರಣವೆಂಬ ತಾಂಬೂಲವನಿತ್ತು, ಇಂತು ನಿರಂಜನಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಸಹಸ್ರಕೋಟಿ ಸೂರ್ಯನ ಪ್ರಭೆಯಂತೆ ಬೆಳಗುವ ನಿರಂಜನಲಿಂಗವನ್ನು ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ನಿರಂಜನಲಿಂಗದ ಪೂಜೆಯ ಸಮಾಪ್ತವ ಮಾಡಿ, ಮಹಾಜ್ಞಾನಜಪವೆಂಬ ದ್ವಾದಶಪ್ರಣಮಮಂತ್ರಂಗಳಿಂದೆ ನಮಸ್ಕರಿಸಿ, ಈ ನಿರಂಜನಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಜಾಂತರ್ಯಾಮಿಯಾಗಿ ಆಚರಿಸಬಲ್ಲಾತನೆ ಅಪ್ರಮಾಣಭಕ್ತಿಯನ್ನುಳ್ಳ ನಿಜಮೋಕ್ಷಸ್ವರೂಪ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ನಿಃಕಲಾಕೃತಿ, ಓಂಕಾರಪ್ರಣಾಮ, ಭ್ರಮರನಾದ, ಬ್ರಹ್ಮಚಕ್ರ, ಜ್ಯೋತಿವರ್ಣ, ನಿಃಕಳಂಕಸ್ಥಲ, ಚಿದ್ರೂಪತನು, ಸ್ವತಂತ್ರಹಸ್ತ, ನಿಃಕಳಂಕಲಿಂಗ, ಬ್ರಹ್ಮರಂದ್ರಮುಖ, ಸದ್ಭಾವಭಕ್ತಿ, ಪರಮಾನಂದಪದಾರ್ಥ, ಪರಮಾನಂದಪ್ರಸಾದ, ಶ್ರೀಗುರು ಪೂಜಾರಿ, ಶ್ರೀಗುರು ಅಧಿದೇವತೆ, [?ಸಾದಾಖ್ಯ] ಅಗಮ್ಯವೆಂಬ ಲಕ್ಷಣ, ಅಪ್ರಾಮಣವೆಂಬ ಸಂಜ್ಞೆ, ಹೃತ್ಕಮಲದಿಕ್ಕು, ಧನುರ್ವೇದ, ಚಿತ್ಸೂರ್ಯನೆ ಅಂಗ, ಮಹಾ ಆತ್ಮ, ಅನಾಮಯಶಕ್ತಿ, ನಿರ್ವಂಚಕ ಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಬ್ರಹ್ಮರಂಧ್ರಚಕ್ರವೆಂಬ ರಜತಾದ್ರಿಪರ್ವತಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಶಿವದೀಕ್ಷಾಸ್ವರೂಪವಾದ ನಿಃಕಲಲಿಂಗವೆ ರಜತೇಶ್ವರಲಿಂಗವೆಂದು ಗುಣತ್ರಯವ ಮಡಿಮಾಡಿ, ಸ್ವತಂತ್ರವೆಂಬ ಜಲದಿಂ ಮಜ್ಜನಕ್ಕೆರದು, ಸೂರ್ಯ ನಿವೃತ್ತಿಯಾದ ಗಂಧವ ಧರಿಸಿ, ಪರತಂತ್ರ ಸ್ವತಂತ್ರವಾದಕ್ಷತೆಯನಿಟ್ಟು, ಅಲ್ಲಿಹ ಸಹಸ್ರದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಜ್ಯೋತಿವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ. ಅಲ್ಲಿಹ ನಿಃಕಳಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿರಾಭಾರವೆಂಭಾಭರಣವ ತೊಡಿಸಿ, ಪರಮಾನಂದವೆಂಬ ನೈವೇದ್ಯವನರ್ಪಿಸಿ, ಸದ್ಭಾವವೆಂಬ ತಾಂಬೂಲವನಿತ್ತು, ಅಂತು ನಿಃಕಳಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ದಶಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ನಿಃಕಳಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು, ಆ ನಿಃಕಳಲಿಂಗದ ಪೂಜೆಯ ಸಮಾಪ್ತವ ಮಾಡಿ, ಕ್ರಿಯಾಜಪವೆಂಬ ದ್ವಾದಶಪ್ರಣವಮಂತ್ರಂಗಳಿಂದೆ ನಮಸ್ಕರಿಸಿ, ಆ ನಿಃಕಳಲಿಂಗವೆ ತಾನೆಂದರಿದು ಕೂಡಿ ಎರಡಳಿದು ಸ್ವತಂತ್ರನಾಗಿ ಆಚರಿಸಬಲ್ಲಾತನೆ ಸದ್ಭಾವಭಕ್ತಿಯನುಳ್ಳ ನಿಃಕಳಂಕ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಇಂತು ಅನಾದಿ ಮಹಾಂತ ಚಿದ್ಘನ ಶರಣನ ಸ್ವರೂಪು ನಿಲುಕಡೆಯ ನಿನ್ನ ನಿಜಚಿದ್ಬೆಳಗಿನ ಅರುಹಿನಿಂದರಿದು ಮಾರ್ಗಕ್ರಿಯಾ-ಮೀರಿದಕ್ರಿಯಾ, ಆಚರಣೆ-ಸಂಬಂಧದ ಉಲುಹಡಗಿ ನೀನೆಂದಿನಂತೆ ನಿರಂಜನ ನಿರಾವಯಮೂರ್ತಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಸತ್ಯ ಸದಾಚಾರ ಸದ್ಭಕ್ತಿ ಜ್ಞಾನ ವೈರಾಗ್ಯ ಸತ್ಕ್ರಿಯಾ ಸತ್ಕಾಯಕ ಸತ್ಪಾತ್ರಭಿಕ್ಷ ಲೀಲೆಯ ಧರಿಸಿ, ಲೋಕಪಾವನಾರ್ಥವಾಗಿ ಇಚ್ಛೆಯ ನುಡಿಯದೆ, ನಡೆನುಡಿ ಹೀನವಾದ ಸೂತಕ ಪಾತಕರ ಸಂಗವೆ ಹೊದ್ದದೆ, ಗುರುಮಾರ್ಗಾಚಾರಕ್ಕೆ ಕುಂದು ಕೊರತೆಗಳ ತಾರದೆ, ಸನ್ಮಾರ್ಗದಲ್ಲಾಚರಿಸುವ ಗುರುಲಿಂಗಜಂಗಮ ಸದ್ಭಕ್ತಿ ಚಾರಿತ್ರವನುಳ್ಳ ಶಿವಶರಣ ಗಣಂಗಳಲ್ಲಿ ಕುಂದು ನಿಂದ್ಯಗಳ ಕಲ್ಪಿಸದೆ ಎಚ್ಚರದಪ್ಪಿದಲ್ಲಿ ಬಹುಪರಾಕು ಸ್ವಾಮಿ ಶರಣಗಣಂಗಳು ಹೋದ ಮಾರ್ಗವಿದಲ್ಲವೆಂದು ಭೃತ್ಯಭಕ್ತಿಯಿಂದ ಹೇಳಿ, ಅಜ್ಞಾನ-ಅಕ್ರಿಯ-ಅನಾಚಾರವೆಂಬ ಮಾಯಾಶರಧಿಯಲ್ಲಿ ಮುಳುಗಿ ಹೋಗುವ ಇಷ್ಟಲಿಂಗಧಾರಕ ಭಕ್ತಗಣಂಗಳ ಕಂಡು ಅಗಸ ತನ್ನ ಮಡಿ ಮೈಲಿಗೆ ಹೊರುವ ಕತ್ತೆಯು ಜಿಹ್ವಾಲಂಪಟ ಗುಹ್ಯಲಂಪಟದಿಚ್ಛೆಗೆ ಹೋಗಿ ಹಳ್ಳ ಕೊಳ್ಳ ಕೆರೆ ಬಾವಿಯೊಳಗೆ ಬಿದ್ದು ಹೋಗುವದ ಕಂಡು ಕಿವಿಯ ಹಿಡಿದು ಎಳದುಕೊಂಡೋಪಾದಿಯಲ್ಲಿ ಹಸ್ತ-ಪಾದವ ಹಿಡಿದು ಕಡೆಗಳೆದು ಶ್ರುತಿ-ಗುರು-ಸ್ವಾನುಭಾವವ ತೋರಿ, ಮತ್ತವರ ಕರುಣವ ಹಡದು, ಏಕಮಾರ್ಗದಲ್ಲಿ ಆಚರಿಸಿ, ನಿಷ್ಕಲಪರಶಿವಲಿಂಗದಲ್ಲಿ ಶಿಖಿ-ಕರ್ಪುರದಂತೆ ರತಿ ಸಂಯೋಗವುಳ್ಳಂಥಾದೆ ಮನೋರ್ಲಯದೀಕ್ಷೆ. ಇಂತುಟೆಂದು ಶ್ರೀಗುರು ನಿರಾಲಂಭಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಆಚರಣೆಯಲ್ಲಿ ಇಷ್ಟ-ಪ್ರಾಣ-ಭಾವಲಿಂಗಗಳಿಗೆ ಗುರು-ಚರ-ಭಕ್ತರ ಮೂಲಚೈತನ್ಯಮೂರ್ತಿ ಅನಾದಿ ಚಿದ್ಘನ ಪಾದೋದಕ ಪ್ರಸಾದ ಮಂತ್ರಸ್ವರೂಪ ನೋಡ. ಅಯ್ಯ. ಸಂಬಂಧದಲ್ಲಿ ಗುರು-ಚರ-ಭಕ್ತಂಗೆ ಇಷ್ಟ-ಪ್ರಾಣ-ಭಾವಲಿಂಗಂಗಳೆ ಮೂಲಚೈತನ್ಯಮೂರ್ತಿ ಅನಾದಿ ಚಿದ್ಘನ ಪಾದೋದಕ ಪ್ರಸಾದ ಮಂತ್ರಸ್ವರೂಪ ನೋಡ. ಈ ವಿಚಾರವ ನಿನ್ನ ನೀನರಿದಡೆ ಅನಾದಿ ಗುರು-ಚರ-ಭಕ್ತ-ಇಷ್ಟ-ಪ್ರಾಣ-ಭಾವ. ಪಾದೋದಕ-ಪ್ರಸಾದ-ಮಂತ್ರ ನಿನ್ನ ಸರ್ವಾಂಗದಲ್ಲಿ ಉಂಟು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಪ್ರವೃತ್ತಿಮಾರ್ಗದಲ್ಲಿ ಚರಿಸುವ ಅಧೋ ಕುಂಡಲಿ ಭೇದವೆಂತೆಂದಡೆ : ದ್ವಾದಶಮಲಂಗಳೆ ಅಂಗವಾಗಿರ್ಪುದಯ್ಯ. ಷೋಡಶಮದಂಗಳೆ ಪ್ರಾಣವಾಗಿರ್ಪುದಯ್ಯ. ಸಪ್ತವ್ಯಸನಂಗಳೆ ಸಂಗವಾಗಿರ್ಪುದಯ್ಯ. ದುರ್ಗಣಂಗಳೆ ವಸ್ತ್ರಾಭರಣವಾಗಿರ್ಪುದಯ್ಯ. ಅನಾಚಾರಂಗಳೆ ನಡೆನುಡಿಯಾಗಿರ್ಪುದಯ್ಯ. ಅಸತ್ಯವೆ ವಾಹನವಾಗಿರ್ಪುದಯ್ಯ. ಕುಂಭಾವಂಗಳೆ ಪಿತಮಾತೆಯಾಗಿರ್ಪುದಯ್ಯ. ಕುಚಿತ್ತಗಳೆ ಬಂಧುಬಳಗವಾಗಿರ್ಪುದಯ್ಯ. ಕುಬುದ್ಧಿಗಳೆ ಒಡಹುಟ್ಟಿದರಾಗಿರ್ಪುದಯ್ಯ. ದುರಹಂಕಾರಗಳೆ ನೆಂಟರಾಗಿರ್ಪುದಯ್ಯ. ಕುಮನವೆ ಸ್ತ್ರೀಯಳಾಗಿರ್ಪುದಯ್ಯ. ಅಜ್ಞಾನವೆ ಮಂದಿರವಾಗಿರ್ಪುದಯ್ಯ. ದುರ್ಭಾವವೆ ಆಹಾರವಾಗಿರ್ಪುದಯ್ಯ. ಅರಿಷಡ್ವರ್ಗವೆ ದೈವವಾಗಿರ್ಪುದಯ್ಯ. ಷಡ್ಭಾವವಿಕಾರಂಗಳೇ ಅವಯವಂಗಳಾಗಿರ್ಪುದಯ್ಯ. ಆಸೆಯೆ ಧನಧಾನ್ಯವಾಗಿರ್ಪುದಯ್ಯ. ಇಂತು ಸಂಸಾರವೆಂಬ ಪಾಶದಲ್ಲಿ ಜನ್ಮ-ಜರೆ-ಮರಣಂಗಳಿಂದ ತಿರುಗುವ ಜೀವನೆ ಅಧೋಕುಂಡಲಿಸರ್ಪನೆನಿಸುವುದಯ್ಯ. ಆ ಸರ್ಪನೆ ಮೂಲಹಂಕಾರವೆಂಬ ಪಟ್ಟಣವ ರಚಿಸಿ ಜಿಹ್ವಾಲಂಪಟ-ಗುಹ್ಯಲಂಪಟದಲ್ಲಿ ಮುಳುಮುಳುಗಿ ತೇಲುತ್ತಿರ್ಪುದು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಇಂತು ನಿರಾವಯ ಶೂನ್ಯಲಿಂಗಾನುಭಾವ ಸ್ಥಲಾಚರಣೆಯ ಕರ್ತೃ ಗುರುಬಸವೇಶ್ವರಸ್ವಾಮಿಗಳ ಪಾದೋದಕ ಪ್ರಸಾದದ ಬೆಳಗಿನೊಳಗೆ ಬೆಳಗಾದರು ನೋಡ ಪ್ರಭುಸ್ವಾಮಿಗಳು. ಪ್ರಭುಸ್ವಾಮಿಗಳ ಪಾದೋದಕ-ಪ್ರಸಾದದ ನಿಜಚಿದ್ಬೆಳಗಿನೊಳಗೆ ಬೆಳಗಾದರು ನೋಡ ಗುರುಬಸವೇಶ್ವರಸ್ವಾಮಿಗಳು. ಇವರಿಬ್ಬರ ಪಾದೋದಕ-ಪ್ರಸಾದದ ಚಿದ್ದೆಳಗಿನೊಳಗೆ ಚಿನ್ನಬಸವಣ್ಣ, ನಿರ್ಲಜ್ಜಶಾಂತಲಿಂಗೇಶ್ವರ, ಸಿದ್ಧರಾಮ ಮೊದಲಾದ ಸಕಲಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ. ಇಂತು ಜೋಗೈಸಿ ಏಕಸಮರಸವಾದ ಬಸವ-ಪ್ರಭು-ಚನ್ನಬಸವಣ್ಣ-ಪ್ರಮಥಗಣಂಗಳ ಪಾದೋದಕ-ಪ್ರಸಾದನೆ ರೂಪಾಗಿ, ಗುರುಸಿದ್ಧ-ಸಂಗನಬಸವಣ್ಣನೆಂಬಭಿಧಾನದಿಂದವತರಿಸಿ ಚಿದ್ಘನ ಮಹಾಂತ ಪ್ರಮಥಗಣಂಗಳ ಕೃಪಾದೃಷ್ಟಿಯಿಂದ ಸರ್ವಸಂಗಪರಿತ್ಯಾಗಸ್ಥಲ ಮೊದಲಾಗಿ ನಿರಾವಯ ಶೂನ್ಯಲಿಂಗಾನುಭಾವಸ್ಥಲ ಕಡೆಯಾದ ನವಸ್ಥಲಂಗಳೊಳಗೆ ಎರಡೆಂಬತ್ತೆಂಟುಕೋಟಿ ವಚನಾನುಭಾವದ ಸುಧಾರಸ್ವಾನುಭಾವ ಸೂತ್ರಕ್ಕೆ ಬೆಟ್ಟದ ನೆಲ್ಲಿ ಘಟ್ಟದ ಉಪ್ಪು ಕೂಡಿದೋಪಾದಿಯಲ್ಲಿ ಯೋಗ್ಯವಾದೇವು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಇಂತು ಮಹಾಪ್ರಮಥಗಣಂಗಳ ಚಿದ್ಘನಪ್ರಸಾದವಚನಾಮೃತದ ಅನುಭಾವಸೂತ್ರವ ಮತ್ರ್ಯಲೋಕದ ಮಹಾಗಣಂಗಳು ಅರಿದಾನಂದಿಸುವ ವಿಚಾರವೆಂತೆಂದಡೆ : ಈ ವಚನಾರ್ಥವ ಶೈವ-ವೀರಶೈವ ಉಭಯಮಾರ್ಗದ ಅಪಶೈವರಿಗೆ ತೋರಿ ಅನುಭಾವವ ಮಾಡಲಾಗದು. ಪಂಚಮಹಾಪಾತಕ ಸೂತಕರಿಗೆ ಬೋಧಿಸಲಾಗದು. ಋಣಪಾತಕ, ಆಚಾರಭ್ರಷ್ಟ, ಗುರುದೀಕ್ಷಾಹೀನ, ಗುರುಲಿಂಗಜಂಗಮದ್ರೋಹಿಗಳಿಗೆ ಹೇಳಲಾಗದು. ಸ್ತ್ರೀಹತ್ಯ, ಶಿಶುಹತ್ಯ, ಮಾತೃಪಿತೃದ್ರೋಹಿಗಳೊಡನೆ ಪ್ರಸಂಗಿಸಲಾಗದು. ಇಷ್ಟಲಿಂಗಬಾಹ್ಯರು ಕೇಳುವಂತೆ ಓದಿ ಅರ್ಥ-ಅನ್ವಯ-ಆಕಾಂಕ್ಷೆಗಳ ಮಾಡಿ ಸ್ವರೂಪಾರ್ಥ-ಸಂಬಂಧಾರ್ಥ-ನಿಶ್ಚಯಾರ್ಥಂಗಳಿಂದ ಶರಣಗಣಂಗಳ ನಡೆ-ನುಡಿಯ ಪ್ರಕಟಿಸಲಾಗದು. ಇಂತು ಗುರುವಾಕ್ಯವ ಮೀರಿ ಮಹಾನುಭಾವ ಮಂತ್ರಾರ್ಥವ ಬಹಿಷ್ಕರಿಸಿದವರು ಜನ್ಮ-ಜರೆ-ಮರಣಕ್ಕೊಳಗಾಗಿ, ಭವಪಾಶದಲ್ಲಿ ಬಿದ್ದು ಶುನಿ-ಸೂಕರಾದಿ ಜನಿತರಾಗಿ ಪ್ರಳಯಾದಿಗಳಿಗೆ ಒಳಗು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಪ್ರಥಮದಲ್ಲಿ ಇಪ್ಪತ್ತೊಂದು ತೆರದ ದೀಕ್ಷೆಯ ಕರುಣಿಸೇವು ನೋಡ. ಅದರ ವಿಚಾರವೆಂತೆಂದಡೆ ಅಷ್ಟತನು, ಅಷ್ಟಭೋಗಂಗಳ ಅಭಿಲಾಷೆಯ ನೀಗಿ, ಸರ್ವಸಂಗ ಪರಿತ್ಯಾಗತ್ವದಿಂದ ನಿಜನೈಷ* ಕರಿಗೊಂಡು ಸಚ್ಚಿದಾನಂದದಿಂದ ನಿಂದ ನಿಜೋತ್ತಮಂಗೆ ಶ್ರೀಗುರುಲಿಂಗಜಂಗಮವು ಕೃಪಾದೃಷ್ಟಿಯಿಂದ ನೋಡಿ ಜನ್ಮ-ಜರೆ-ಮರಣಂಗಳಿಗಂಜಬೇಡವೆಂದು ಅಂಗ ಮನ ಪ್ರಾಣಂಗಳ ಮೇಲೆ ಅಭಯಹಸ್ತವಿತ್ತು. ಸಂಸಾರ ಪ್ರಪಂಚಿಗೊಳಗಾದ ಪಂಚಮಹಾಪಾತಕರಂತೆ ನಡೆಯಬೇಡವೆಂದು ಪಾದಕ್ಕೆ ಆಜ್ಞೆಯ ಮಾಡಿದರಯ್ಯ. ಜಡಮತ್ರ್ಯರು ನುಡಿದಂತೆ, ನುಡಿಯಬೇಡವೆಂದು ವಾಣಿಗೆ ಆಜ್ಞೆಯ ಮಾಡಿದರಯ್ಯ. ಪರದೈವ-ಪರದ್ರವ್ಯ-ಪರಸ್ತ್ರೀಯರ-ಮುಟ್ಟಬೇಡವೆಂದು ಪಾಣಿಗೆ ಆಜ್ಞೆಯ ಮಾಡಿದರಯ್ಯ. ಯೋನಿದ್ವಾರವ ಹೊಕ್ಕಡೆ ಅದರಲ್ಲಿ ಜನಿತ ತಪ್ಪದೆಂದು ಅದರಿಂದ ಬಿಟ್ಟು ಹುಳುಗೊಂಡವಿಲ್ಲವೆಂದು ಮಾಣಿಗೆ ಆಜ್ಞೆಯ ಮಾಡಿದರಯ್ಯ. ಇಂತು ಭವಿಮಾರ್ಗವನುಳಿದು ಸತ್ಯನಡೆ, ಸತ್ಯನುಡಿ, ಸತ್ಯಪಾಣಿ, ಸತ್ಯಮಾಣಿಯಾದಡೆ ನಿನ್ನ ಪಾದ ಮೊದಲಾಗಿ ಮಾಣಿಯ ಅಂತ್ಯವಾದ ಸರ್ವಾಂಗದಲ್ಲಿ ಚತುರ್ವಿಧ ಸಾರಾಯಸ್ವರೂಪ ಗುರುಲಿಂಗಜಂಗಮಪ್ರಸಾದವಾಗಿ ಕ್ಷೀರದೊಳಗೆ ಘೃತವಡಗಿದಂತೆ ಏಕಸ್ವರೂಪಿನಿಂದ ನಿಮಿಷಾರ್ಧವಗಲದೆ ನಿಜವಸ್ತು ಬೆರದಿರ್ಪುದು ನೋಡ. ಎಂದು ಅನುಭಾವಮಂಟಪದಲ್ಲಿ ಶ್ರೀಗುರು ನಿಷ್ಕಳಂಕ ಚಿನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಗಣಸಾಕ್ಷಿಯಾಗಿ ಆಜ್ಞೋಪದೀಕ್ಷೆಯ ಮಾಡಿದರು ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ನಿನ್ನ ಚಿದಂಗದ ಷಟ್ಸ್ಥಾನಂಗಳಲ್ಲಿ ಎಪ್ಪತ್ತೈದು ತತ್ತ್ವಂಗಳು ಅಡಗಿರ್ಪವಯ್ಯ. ಚಿದ್ಘನಲಿಂಗದ ಷಟ್ಸ್ಥಾನಂಗಳಲ್ಲಿ ಹದಿನೆಂಟು ತತ್ತ್ವಂಗಳು ಅಡಗಿರ್ಪವಯ್ಯ. ಆ ಚಿದಂಗ ಚಿದ್ಘನಲಿಂಗದ ಮಧ್ಯದಲ್ಲಿ ಬೆಳಗುವ ಅಖಂಡ ಮಹಾಜ್ಯೋತಿಪ್ರಣಮದ ಷಟ್ಸ್ಥಾನಂಗಳಲ್ಲಿ ಅಷ್ಟವಿಧತತ್ವಂಗಳು ಅಡಗಿರ್ಪವಯ್ಯ. ಆ ತತ್ವÀಂಗಳ ವಿಭಾಗೆಯೆಂತೆಂದಡೆ: ಪೃಥ್ವೀತತ್ತ್ವ ಇಪ್ಪತ್ತೈದು, ಅಪ್ಪುತತ್ತ್ವ ಇಪ್ಪತ್ತು, ಅಗ್ನಿತತ್ತ್ವ ಹದಿನೈದು, ವಾಯುತತ್ವ ಹತ್ತು, ಆಕಾಶತತ್ತ್ವ ಐದು. ಇಂತು ಎಪ್ಪತ್ತೈದು ತತ್ತ್ವಂಗಳು ಆತ್ಮತತ್ವ ಒಂದರಲ್ಲಿ ಅಡಗಿ, ಇಂಥ ಅನಂತ ಅನಂತ ಆತ್ಮರು ಔದುಂಬರ ವೃಕ್ಷಕ್ಕೆ ಫಲ ತೊಂತಿದೋಪಾದಿಯಲ್ಲಿ ಆ ಚಿದಂಗಕ್ಕೆ ಅನಂತ ಆತ್ಮತತ್ತ್ವಂಗಳು ತೊಂತಿಕೊಂಡಿರ್ಪವು ನೋಡ. ಅಂಥ ಚಿದಂಗ ಹದಿನೆಂಟು ಪ್ರಣಮರೂಪಿನಿಂದ ಚಿದ್ಘನಲಿಂಗವನಾಶ್ರೈಸಿರ್ಪುದು ನೋಡ. ಆ ಚಿದ್ಘನಲಿಂಗವು ಅಷ್ಟವಿಧಸಕೀಲಂಗಳಿಂದ ಅಖಂಡ ಮಹಾಜ್ಯೋತಿಪ್ರಣಮವನಾಶ್ರೈಸಿರ್ಪುದು ನೋಡ. ಇಂತು ನೂರೊಂದು ಸಕೀಲಂಗಳ ತತ್ವರೂಪಿನಿಂದ ತಿಳಿದು ಅಂತು ಅಂಗಲಿಂಗಸಂಗದಲ್ಲಿ ಅಡಗಿರುವ ನೂರೊಂದುತತ್ವ ಸಕೀಲಂಗಳ ನೂರೊಂದುಸ್ಥಲದಲ್ಲಿ ನೆಲೆಗೊಳಿಸಿ ಪರತತ್ವ ಲಿಂಗಲೀಲೆಯಿಂದ ನಿಂದ ನಿಲುಕಡೆಯ ಅನುಗ್ರಹದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಸ್ವತಂತ್ರಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಚಿದ್ಘನತೀರ್ಥವ ಇಷ್ಟಲಿಂಗಾರ್ಪಿತವ ಮಾಡುವ ವಿಚಾರವೆಂತೆಂದಡೆ : ಗುರುಲಿಂಗಮುಖದಲ್ಲಿ ಅಚ್ಚಪ್ರಸಾದಸ್ವರೂಪವಾದ ಇಷ್ಟಲಿಂಗಕ್ಕೆ ಅರ್ಪಿತವಯ್ಯ. ಗುರುಲಿಂಗ ಶಿವಲಿಂಗಮುಖದಲ್ಲಿ ಆಚರಣೆಸಂಬಂಧದಿಂದ ನಿಚ್ಚಪ್ರಸಾದ ಸಮಯಪ್ರಸಾದದಸ್ವರೂಪವಾದ ಇಷ್ಟಲಿಂಗಕ್ಕೆ ಅರ್ಪಿತವಯ್ಯ. ಗುರುಲಿಂಗ-ಶಿವಲಿಂಗ-ಜಂಗಮಲಿಂಗಮುಖದಲ್ಲಿ ತ್ರಿವಿಧಾಚರಣೆಯ ಕರ್ತುವಾದುದರಿಂ ಸ್ವಯಚರಪರ ಗುರುಚರಮೂರ್ತಿ ಚಿತ್ಕಲಾಪ್ರಸಾದಸ್ವರೂಪವಾದ ಇಷ್ಟಲಿಂಗದೇವಂಗರ್ಪಿತವಯ್ಯ. ಆ ನಿಲುಕಡೆಯೆಂತೆಂದಡೆ : ಶ್ರೀಗುರುಲಿಂಗಜಂಗಮವು ಹಸ್ತಮಸ್ತಕಸಂಯೋಗವಮಾಡಿ, ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಕರುಣಿಸುವಲ್ಲಿ, ಕರಕಮಲದ ದಶಾಂಗುಲ ಮಧ್ಯ ಮೊದಲಾಗಿ ದ್ವಾದಶಪ್ರಣಮಲಿಂಗಮೂರ್ತಿಗಳ ಛತ್ತೀಶಪ್ರಣಮರೂಪಿನಿಂದ ಸಂಬಂಧಿಸಿರ್ಪರಯ್ಯ. ಇಂತು ಸಂಬಂಧವ ಗುರುಕಟಾಕ್ಷೆಯಿಂ ತಿಳಿದು ಷಡಾಕ್ಷರ ಮಂತ್ರಸ್ವರೂಪವಾದ ದಕ್ಷಿಣಹಸ್ತದಿಂದ ಷಡಾಕ್ಷರ ಮಂತ್ರಸ್ವರೂಪವಾದ ವಾಮಹಸ್ತಕಮಲಮಧ್ಯದಲ್ಲಿ ನೆಲಸಿರ್ಪ ಚಿದ್ಘನಮಹಾ ಇಷ್ಟಲಿಂಗದೇವಂಗೆ ಆಯಾಯಸ್ಥಲ ಬಂದು ಒದಗಿದಲ್ಲಿ ಮಕಾರ-ಶಿಕಾರ-ವಕಾರ ; ಅನಾಮಿಕ-ಮಧ್ಯಾಂಗುಲ-ತರ್ಜನಿ ಮೊದಲಾದ ತ್ರಿವಿಧಂಗುಲಿಗಳಲ್ಲಿ, ತ್ರಿವಿಧಲಿಂಗಮಂತ್ರಗಳಿಂದ ಇಷ್ಟಮಹಾಲಿಂಗಾರೋಪಿತವ ಮಾಡಿ ಭೋಗಿಸಬಲ್ಲಡೆ ಅಚ್ಚ ಸ್ವಯಂಭು ಪ್ರಸಾದಲಿಂಗ ಶರಣನೆಂಬೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಎನ್ನ ಕರ-ಮನ-ಭಾವ-ಕಂಗಳ ಕೊನೆಯಲ್ಲಿ ಬೆಳಗುವ ಪರಂಜ್ಯೋತಿಮೂರ್ತಿ ಕೇಳ ! ನಿತ್ಯನಿಜಾನಂದ ಪರಿಪೂರ್ಣದರಿವೆ! ಆದಿಯಲ್ಲಿ ಪ್ರಸಾದವಯ್ಯ, ಅಂತ್ಯದಲ್ಲಿ ಪ್ರಸಾದವಯ್ಯ, ಮಧ್ಯದಲ್ಲಿ ಪದಾರ್ಥವಯ್ಯ. ಈ ಪ್ರಸಾದ-ಪದಾರ್ಥವನರಿಯದವರೆಲ್ಲ ಹುಟ್ಟಂಧಕರೆಂಬೆನಯ್ಯ. ಈ ಪ್ರಸಾದ-ಪದಾರ್ಥವ ಭೇದಿಸಿ ಬಸವಣ್ಣ ಬಯಲಾದ. ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ, ಅಜಗಣ್ಣ, ಮರುಳಶಂಕರ, ನೀಲಲೊಚನೆ, ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ ಮಹಾಚಿದ್ಘನಗಣಂಗಳೆಲ್ಲ ಜ್ಯೋತಿರ್ಮಯಾದರು ನೋಡ. ಮತ್ತಂ, ಸಚ್ಚಿದಾನಂದನಿಜದಿಂದ ಭೇದಿಸಿ, ಹರುಷಾನಂದಿಜಲವುಕ್ಕಿ, ಅತಿಮೋಹದಿಂದ ಪದವನೆ ನೂರೆಂಟೆಳೆಯದಾರವ ಮಾಡಿ, ಅರ್ಥವನೆ ನವವರ್ಣಯುಕ್ತವಾದ ಮಣಿಯ ಮಾಡಿ, ಮಹಾಪರಿಪೂರ್ಣಜ್ಞಾನವೆಂಬ ರಂಧ್ರÀ್ರವ ರಚಿಸಿ, ಮಹಾಚಿದ್ಘನಪ್ರಕಾಶವೆಂಬ ಬಣ್ಣವನ್ನಿಟ್ಟು, ಒಂದು ದಾರದಲ್ಲಿ ಹನ್ನೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಮೂವತ್ತಾರು ಮಣಿಯ ಪವಣಿಸಿದರಯ್ಯ. ಮಿಗಿಲೊಂದು ದಾರದಲ್ಲಿ ನಾಲ್ವತ್ತೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಅರುವತ್ತು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಪ್ಪತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಬತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ತೊಂಬ್ತಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನೂರೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಇನ್ನೂರಹದಿನಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನಾಲ್ಕುನೂರಮೂವತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಟುನೂರ ಅರುವತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಸಾವಿರದಏಳೂನೂರ ಇಪ್ಪತ್ತೆಂಟು ಮಣಿಯ ಪವಣಿಸಿದರಯ್ಯ. ಈ ಪ್ರಕಾರದಿಂದ ಹದಿಮೂರೆಳೆಯ ಮಣಿಗಳ ಸರಗೊಳಿಸಿ, ಆಯಾಯ ಸರದ ಎಸಳುಗಳ ಮಧ್ಯದಲ್ಲಿ ಮುತ್ತು ಮಾಣಿಕ್ಯ ನವರತ್ನಪ್ರಕಾಶಕ್ಕೆ ಮಿಗಿಲಾದ ಮಹಾಜ್ಯೋತಿರ್ಮಯ ಶ್ರೀಗುರುಲಿಂಗಜಂಗಮವೆಂಬ ಮಹಾಪ್ರಸಾದವ ಪದಕವ ಮಾಡಿ ರಚಿಸಿ, ಅಂಗ-ಲಿಂಗ, ಪ್ರಾಣ-ಲಿಂಗ, ಭಾವ-ಲಿಂಗವೆಂಬ ಉಭಯಚಿಹ್ನವಳಿದು ಮಹಾಬೆಳಗಿನೊಳಗೆ ನಿಂದು, ಸರ್ವಾವಸ್ಥೆಗಳಿಲ್ಲದೆ ಕಂಠಾಭರಣವ ಮಾಡಿ ಧರಿಸಿ ಮಹಾಪರಿಪೂರ್ಣಪ್ರಕಾಶವೆಂಬ ಮಹಾಚಿದ್ಘನ ಪ್ರಸಾದಭಾಜನದಲ್ಲಿ ಪರಿಪೂರ್ಣರಾಗಿ, ಸತ್ಯ ಸದಾಚಾರ ಸತ್ಕಾಯಕ ಸದ್ಭಕ್ತಿಯಾನಂದ ಸತ್ಕ್ರಿಯಾ ಸಮ್ಯಜ್ಞಾನದ ಬೆಳಗಿನೊಳಗಣ ಮಹಾಬೆಳಗ ಸಾಧಿಸಿ, ಆನಾದಿಬಯಲೊಳಗಣ ಮಹಾಬಯಲೊಳಗೆ ಜನಿತರಾಗಿ, ಚತುರ್ಮುಖನ ಜಡಸಂಸಾರಕ್ಕೊಳಗಾಗದೆ, ಯದೃಷ್ಟಂ ತನ್ನಷ್ಟಂ ಎಂದುದಾಗಿ, ಮತ್ತಂ ಮರಳಿ ಬಯಲೊಳಗಣ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ ದರ್ಪಣಾಕೃತಿ, ಯಕಾರಪ್ರಣಮ, ಪ್ರಣವನಾಮ, ವಿಶುದ್ಧಿಚಕ್ರ, ಕಪೊತವರ್ಣ, ಶರಣಸ್ಥಲ, ಆನಂದತನು, ಸುಜ್ಞಾನಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಆನಂದಭಕ್ತಿ, ಸುಶಬ್ದಪದಾರ್ಥ, ಸುಶಬ್ದ ಪ್ರಸಾದ, ಸದಾಶಿವ ಪೂಜಾರಿ, ಸದಾಶಿವನಧಿದೇವತೆ, ಶಿವಸಾದಾಖ್ಯ, ಪರಿಪೂರ್ಣವೆಂಬ ಲಕ್ಷಣ, ಅನಾದಿವತುವೆಂಬ ಸಂಜ್ಞೆ, ಊಧ್ರ್ವದಿಕ್ಕು, ಅಜಪೆವೇದ, ಆಕಾಶವೆ ಅಂಗ, ಶುದ್ದಾತ್ಮ, ಪರಾಶಕ್ತಿ, ಶಾಂತ್ಯತೀತಕಲೆ- ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ವಿಶುದ್ಧಿಚಕ್ರವೆಂಬ ಐಮುಕ್ತಿಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಈಳನಾಸ್ವರೂಪವಾದ ಪ್ರಸಾದಲಿಂಗವೆ ವಿಶ್ವನಾಥಲಿಂಗವೆಂದು ಭಾವತ್ರಯವ ಮಡಿಮಾಡಿ, ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು, ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದದಕ್ಷತೆಯನಿಟ್ಟು, ಅಲ್ಲಿಹ ಷೋಡಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಕಪೋತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ತುರ್ಯಾತೀತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಮದವೆಂಬಾಭರಣವ ತೊಡಿಸಿ, ಸುಶಬ್ಧವೆಂಬ ನೈವೇದ್ಯವನರ್ಪಿಸಿ, ಆನಂದವೆಂಬ ತಾಂಬೂಲನವಿತ್ತು, ಇಂತು ಪ್ರಸಾದಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು ಆ ಪ್ರಸಾದಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರ ಷಟ್ವಿಧ ಮಂತ್ರಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿರ್ಮೋಹಿಯಾಗಿ ಆಚರಿಸಬಲ್ಲಾತನೆ ಆನಂದಭಕ್ತಿಯುಳ್ಳ ಶಿವಶರಣ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಘನಮಹಾ ಇಷ್ಟಲಿಂಗವೆ ನಿನ್ನ ನಾದ-ಬಿಂದು-ಕಳೆಗಳಿಗೆ ಚೈತನ್ಯಸ್ವರೂಪು ನೋಡ. ಈ ಲಿಂಗದ ವೃತ್ತದಲ್ಲಿ ಸಕಲಲೋಕಂಗಳು, ಸಕಲಮನುಗಳು ಅಡಗಿರ್ಪವು ನೋಡ. ಈ ಲಿಂಗವೆ ನಿನ್ನ ಹರಕಿರಣ ಚೈತನ್ಯಸ್ವರೂಪು ನೋಡ. ಈ ಲಿಂಗವೆ ನಿನ್ನ ಸಂಜೀವನಕಾಮಧೇನು-ಕಲ್ಪವೃಕ್ಷ ನೋಡ. ಇಂತು ನಿನ್ನ ಕರಸ್ಥಲದಲ್ಲಿ ರಾಜಿಸುವ ಪರಶಿವಲಿಂಗದೇವಂಗೆ ಜಂಗಮದ ಪಾದೋದಕ ಪ್ರಸಾದವೆ ಪರಮಚಿದೈಶ್ವರ್ಯ ನೋಡ. ಇಂತು ಜಂಗಮಕ್ಕೆ ಭೃತ್ಯಾಚಾರಮೂರ್ತಿಲಿಂಗದೇವನ ಒಕ್ಕು ಮಿಕ್ಕ ಕರುಣಜಲ ಕರುಣಪ್ರಸಾದವೆ ನಿನಗರ್ಪಿತವಯ್ಯ. ನಿನ್ನ ಪರಿಣಾಮ ಸಂತೋಷವೆ ಲಿಂಗಾರ್ಪಿತವಯ್ಯ. ಇಂತಪ್ಪ ಲಿಂಗದೇವನ ನಿನ್ನ ಷಟ್ಸ್ಥಾನಂಗಳಲ್ಲಿ ಧರಿಸಿ, ಲಿಂಗವೆ ನಿನಗೆ ಪ್ರಾಣವಾಗಿ, ನೀನೆ ಲಿಂಗಕ್ಕೆ ಪ್ರಾಣವಾಗಿ, ಸತ್ಯದಿಂದ ಬಂದ ಪದಾರ್ಥವ ದಾಸೋಹಂ ಭಾವದಿಂದ ಸಮುದ್ರದುದಕವ ಸಮುದ್ರಕ್ಕೆ ಅರ್ಪಿಸಿದಂತೆ, ಧಾನ್ಯದ ರಾಶಿಯ ಒಳಗಣ ಧಾನ್ಯದ ತಂದು ಪಾಕವಮಾಡಿ ಮತ್ತಾ ರಾಶಿಗೆ ಅರ್ಪಿಸಿದಂತೆ, ಆ ಲಿಂಗಜಂಗಮದ ಪಾದೋದಕ ಪ್ರಸಾದವ ಮತ್ತಾ ಲಿಂಗಜಂಗಮಕ್ಕೆ ಸಮರ್ಪಿಸಿ, ಆ ಲಿಂಗಜಂಗಮದ ಪರಿಣಾಮ ಮಹಾಪ್ರಸಾದದಲ್ಲಿ ನಿತ್ಯ ಸಂತೃಪ್ತನಾಗಿರುವಂಥಾದೆ ಲಿಂಗಸ್ವಾಯತದೀಕ್ಷೆ. ಇಂತುಟೆಂದು ಶ್ರೀ ಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಸದ್ಗುರು ಬಸವಣ್ಣನೆ ಜಗತ್ಪಾವನ ನಿಮಿತ್ಯಾರ್ಥವಾಗಿ ಮಾದಲಾಂಬಿಕೆಯ ಹೃನ್ಮಂದಿರದಲ್ಲಿ ನೆಲಸಿರುವ ನಿಷ್ಕಲ ಕೂಡಲಸಂಗಮೇಶ್ವರಲಿಂಗದ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ದವನದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ಚೆನ್ನಬಸವರಾಜದೇವನೆ ಪ್ರಮಥಗಣನಿಮಿತ್ಯಾರ್ಥವಾಗಿ ಅಕ್ಕನಾಗಲೆದೇವಿಯ ಚಿದಾಕಾಶದ ವರಚೌಕಮಧ್ಯದಲ್ಲಿ ನೆಲಸಿರ್ಪ ನಿಶ್ಶೂನ್ಯ ಕೂಡಲಚೆನ್ನಸಂಗನ ಚಿದ್ಗರ್ಭದಿಂದ ಸ್ವಾನುಭಾವಸದ್ವಾಸನೆಯನೆ ಬೀರುತ್ತ ಮರುಗದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ಪ್ರಭುಸ್ವಾಮಿಗಳೆ ಇವರಿಬ್ಬರ ಪರಿಣಾಮಕ್ಕೋಸ್ಕರವಾಗಿ ಕರವೂರ ಸುಜ್ಞಾನಿಗಳ ಪಶ್ಚಿಮಸ್ಥಾನದಲ್ಲಿ ನೆಲಸಿರುವ ನಿರಂಜನ ಗುರುಗುಹೇಶ್ವರನ ಚಿದ್ಗರ್ಭದಿಂದ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಪಚ್ಚೇದ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮತ್ವದಿಂದ ಮತ್ರ್ಯಕ್ಕೆ ಬಂದರಯ್ಯ. ಅಯ್ಯ, ನೀಲಲೋಚನೆ, ಮುಕ್ತಾಯಕ್ಕಗಳು, ಮಹಾದೇವಿಯಕ್ಕಗಳು ಮತ್ರ್ಯಲೋಕದ ಮಹಾಗಣಂಗಳಿಗೆ ಭಕ್ತಿಜ್ಞಾನವೈರಾಗ್ಯ ಸತ್ಕ್ರಿಯಾ ಸದಾಚಾರದ ಪರಿವರ್ತನೆಯ ತೋರಬೇಕೆಂದು ಪರಶಿವಲಿಂಗದ ಚಿದ್ಗರ್ಭದಿಂದ ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ಸ್ವಾನುಭಾವ ಸದ್ವಾಸನೆಯನೆ ಬೀರುತ್ತ ಕಸ್ತೂರಿ ವೃಕ್ಷದೋಪಾದಿಯಲ್ಲಿ ಬಾಲಬ್ರಹ್ಮದ ಲೀಲೆಯಿಂದ ಮತ್ರ್ಯಕ್ಕವತರಿಸಿದರು ನೋಡಾ. ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳ ಶರಣ, ಮೋಳಿಗೆಮಾರಯ್ಯ ಶರಣ ಮೊದಲಾದ ಸಮಸ್ತ ಪ್ರಮಥಗಣಂಗಳೂ ಜಗತ್ಪಾವನಾರ್ಥ ಮಹಿಮಾ ಷಟ್ಸ್ಥಲಮಾರ್ಗ ನಿಮಿತ್ಯಾರ್ಥವಾಗಿ, ಬಸವೇಶ್ವರಸ್ವಾಮಿಗಳ ಆಜ್ಞಾಮಂಟಪ ತ್ರಿಕೂಟಸಂಗಮ ಸಿಂಹಾಸನದ ಮಧ್ಯದಲ್ಲಿ ನೆಲಸಿರ್ದ ಚಿದ್ಘನಮಹಾಲಿಂಗದ ಚಿದ್ಬೆಳಗಿನೊಳಗೆ ಅನಂತಕೋಟಿ ಬರಸಿಡಿಲೊಗೆದೋಪಾದಿಯಲ್ಲಿ ಸ್ವಾನುಭಾವ ಸದ್ವಾಸನೆಯ ಪ್ರಕಾಶದಿಂದ ಸಂಪಿಗೆ, ಮೊಲ್ಲೆ, ಮಲ್ಲಿಗೆ, ಜಾಜಿ, ಬಕುಳ, ಕರವೀರ, ಸುರಹೊನ್ನೆ, ಪಾರಿಜಾತ, ತಾವರೆ, ನೈದಿಲು ಮೊದಲಾದ ಸಮಸ್ತ ಪುಷ್ಪಂಗಳುದಯದಂತೆ, ಬಳಸಿ ಬ್ರಹ್ಮವಾಗಿ ಪರಶಿವನಪ್ಪಣೆವಿಡಿದು ಮತ್ರ್ಯಲೋಕಕ್ಕವತರಿಸಿದರು ನೋಡ. ಅಯ್ಯ, ವರಕುಮಾರದೇಶಿಕೇಂದ್ರನೆ, ಗುರುಬಸವೇಶ್ವರಸ್ವಾಮಿಗಳೆ ನಿಮ್ಮ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಚೆನ್ನಬಸವಸ್ವಾಮಿಗಳೆ ನಿಮ್ಮ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಅಲ್ಲಮಪ್ರಭುವೆ ನಿಮ್ಮ ಭಾವಸ್ಥಲದಲ್ಲಿ ಭಾವಲಿಂಗವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ನೀಲಾಂಬಿಕೆ-ಮುಕ್ತಾಯಕ್ಕ-ಮಹಾದೇವಿಯಕ್ಕಗಳೆ ನಿಮ್ಮ ತ್ರಿವಿಧಚಕ್ಷುವಿನಲ್ಲಿ ಕರುಣಾಜಲ-ವಿನಯಜಲ-ಸಮತಾಜಲ ಮೊದಲಾದ ಹತ್ತುತೆರದಿಂದ ಪರಮಗಂಗಾತೀರ್ಥವಾಗಿ ಚುಳಕದಿಂದ ನೆಲಸಿರ್ಪರು ನೋಡ. ಅಯ್ಯ, ಸಿದ್ಭರಾಮೇಶ್ವರ, ಘಟ್ಟಿವಾಳಯ್ಯ, ಶರಣ ಮೋಳಿಗಪ್ಪ ಮೊದಲಾದ ಸಮಸ್ತ ಪ್ರಮಥಗಣಂಗಳೆಲ್ಲ ನಿನ್ನ ಹೃದಯಕಮಲ ಮಧ್ಯದಲ್ಲಿ ಶುದ್ಧ-ಸಿದ್ಧ-ಪ್ರಸಿದ್ಧ ಮೊದಲಾದ ಹನ್ನೊಂದು ತೆರದಿಂದ ಮಹಾಚಿದ್ಘನ ಪ್ರಸಾದವಾಗಿ ಚುಳಕಮಾತ್ರದಿಂದ ನೆಲಪಿರ್ಪರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ ಶ್ರೀಗುರುದೇವನು ಪ್ರಮಥಗಣಾರಾಧ್ಯ ಭಕ್ತಮಹೇಶ್ವರರರೊಡಗೂಡಿ ಪಂಚಾಭಿಷೇಕ ಮೊದಲಾಗಿ ಪಾದೋದಕವೆ ಕಡೆಯಾಗಿ, ಅಷ್ಟವಿಧಾರ್ಚನೆ, ಷೋಡಶೋಪಚಾರದಿಂದ ಇಷ್ಟಲಿಂಗದೇವಂಗೆ ಸಪ್ತವಿಧಾರ್ಚನೆಯಮಾಡಿ, ತಮ್ಮ ಕುಮಾರಮೂರ್ತಿಯೆಂದು ಮಹಾಸಂತೋಷದಿಂದ ತೊಡೆಯ ಮೇಲೆ ಮುಹೂರ್ತ ಮಾಡಿಸಿಕೊಂಡು, ಆಮೇಲೆ ಪ್ರಾಣಲಿಂಗಸ್ವರೂಪವಾದ ಉಭಯ ಹಸ್ತವನ್ನು ಸಪ್ತವಿಧಾರ್ಚನೆಯ ಮಾಡಿ, ದಶಾಂಗುಲಮಧ್ಯದಲ್ಲಿ ದ್ವಾದಮೂಲಪ್ರಣಮವ ಲಿಖಿಸಿ, ಕುಮಾರಠಾವ ಮಾಡಿ, ಆಮೇಲೆ ಭಾವಲಿಂಸ್ವರೂಪ ಗೋಳಕಸ್ಥಾನವಾದ ಮಸ್ತಕವನ್ನು ಸಪ್ತವಿಧಾರ್ಚನೆಯ ಮಾಡಿ, ದ್ವಾದಶ ಮಹಾಪ್ರಣವ ಲಿಖಿಸಿ, ಸರ್ವಾಂಗದಲ್ಲಿ ಕ್ರಿಯಾಪಾದೋದಕಸ್ವರೂಪವಾದ ಚಿದ್ಭಸಿತವ ಮಹಾಮಂತ್ರಸ್ಮರಣೆಯಿಂದ ಸ್ನಾನ-ಧೂಳನ-ಧಾರಣವ ಮಾಡಿ, ಲಲಾಟದಲ್ಲಿ ಅನಾದಿಪರಶಿವಲಿಖಿತವ ಲಿಖಿಸಿ, ಸರ್ವಾಚಾರಸಂಪನ್ನನಾಗೆಂದು ಆಶೀರ್ವಚನವ ನೀಡುವಂಥಾದೆ ವಿಭೂತಿಪಟ್ಟದೀಕ್ಷೆ ! ಇಂತುಟೆಂದು ಶ್ರೀಗುರುನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯಾ, ಒಂದು ಅನಾದಿ ಮೂಲಪ್ರಣಮವೆ ಸಾಕಾರಲೀಲೆಯಧರಿಸಿ, ಚಿದಂಗ-ಚಿದ್ಘನಲಿಂಗವಾಗಿ, ಆ ಒಂದಂಗ-ಲಿಂಗವೆ ತ್ರಿವಿಧಾಂಗ ತ್ರಿವಿಧಲಿಂಗವಾಗಿ, ಆ ತ್ರಿವಿಧಲಿಂಗಾಂಗವೆ ಷಡ್ವಿಧಲಿಂಗಾಂಗವಾಗಿ, ಆ ಷಡ್ವಿಧಲಿಂಗಾಂಗವೆ ಛತ್ತೀಸಲಿಂಗಾಂಗವಾಗಿ, ಆ ಛತ್ತೀಸ ಲಿಂಗಂಗಳನೆ ಶ್ರದ್ಧಾದಿ ಛತ್ತೀಸಭಕ್ತಿಗಳಲ್ಲಿ ಕೂಟವ ಮಾಡಿ, ಇಂತು ಲಿಂಗಾಂಗ ಭಕ್ತಿಗಳನೆ ಸತ್ಕ್ರಿಯಾ, ಸಮ್ಯಜ್ಞಾನ, ಸತ್ಕಾಯಕ, ಸತ್ಪಾತ್ರಭಿಕ್ಷದಲ್ಲಿ ಸಮರಸವ ಮಾಡಿ, ಆ ಮಹಾಜ್ಞಾನವ ಸಾಧಿಸಿ, ಆ ಮಹಾಜ್ಞಾನದ ಬಲದಿಂದ ಪೃಥ್ವೀಸಂಬಂಧವಾದ ಕರ್ಮೇಂದ್ರಿಯಂಗಳು, ಅಪ್ಪುತತ್ವಸಂಬಂಧವಾದ ಜ್ಞಾನೇಂದ್ರಿಯಂಗಳು, ಅಗ್ನಿತತ್ವಸಂಬಂಧವಾದ ವಿಷಯಂಗಳು. ವಾಯುತತ್ವಸಂಬಂಧವಾದ ಪ್ರಾಣವಾಯುಗಳು, ಆಕಾಶತತ್ವಸಂಬಂಧವಾದ ಕರಣಂಗಳು, ಭಾನುತತ್ವÀಸಂಬಂಧವಾದ ಉದರವೆಂಬ ಭುತಂಗಳು, ಶಶಿತತ್ವಸಂಬಂಧವಾದ ಶ್ವೇತವರ್ಣ ಮೊದಲಾದ ವರ್ಣಂಗಳು, ಆತ್ಮತತ್ವಸಂಬಂಧವಾದ ಸಮಸ್ತನಾದಂಗಳು ಇಂತು ಸಮಸ್ತತತ್ವಂಗಳು ಕೂಡಲಾಗಿ ನಾಲ್ವತ್ತುತತ್ವವೆನಿಸುವವು. ಈ ತತ್ವಂಗಳ ಶಿವತತ್ವ, ಅನಾದಿಶಿವತತ್ವ, ಅನಾದಿನಿಷ್ಕಲಪರಶಿವತತ್ವ, ಅನಾದಿ ನಿಷ್ಕಲಪರಾತ್ಪರಶಿವತತ್ವವೆಂಬ, ಚತುರ್ವಿಧ ತತ್ವಸ್ವರೂಪ ಗುರು-ಲಿಂಗ-ಜಂಗಮ-ಪ್ರಸಾದವ ಕೂಡಿಸಿ, ಆ ಮಹಾಜ್ಞಾನದಿಂ ನೋಡಿದಲ್ಲಿ ನಾಲ್ವತ್ತುನಾಲ್ಕು ತತ್ವಸ್ವರೂಪಿನಿಂದ ಒಂದು ಚಿದಂಗವೆನಿಸುವುದಯ್ಯ. ಆ ಚಿದಂಗದ ಷಟ್ಚಕ್ರಂಗಳಲ್ಲಿ ಶ್ರೀಗುರುಲಿಂಗಜಂಗಮ ಕೃಪೆಯಿಂದ ಮೂರ್ತಿಗೊಂಡಿರುವ ಐವತ್ತಾರು ಪ್ರಣಮಂಗಳೆ ಸಾಕಾರಲೀಲೆಯಧರಿಸಿ, ನವಕೃತಿಸಂಬಂಧವಾದ ಅನಾದಿಮೂಲಪ್ರಣಮವ ಕೂಡಿ ಏಕಸ್ವರೂಪಿನಿಂದ ಐವತ್ತೇಳುಲಿಂಗಸ್ವರೂಪಪ್ರಣಮವನೊಳಕೊಂಡು ಒಂದು ಚಿದ್ಘನಲಿಂಗವೆನಿಸುವುದಯ್ಯ. ಇಂತು ಅಂಗಲಿಂಗವೆಂಬ ನೂರೊಂದು ಸ್ಥಲಕುಳಂಗಳ ವಿಚಾರಿಸಿ, ಶರಣರೂಪಿನಿಂದ ತನ್ನಾದಿ ಮಧ್ಯಾವಸಾನವ ತಿಳಿದು, ಕರ್ತುಭೃತ್ಯತ್ವದ ಸದ್ಭಕ್ತಿಯ ವಿಚಾರವನರಿದು, ದ್ವಾದಶಾಚಾರದ ವರ್ಮವನರಿದು, ಕರ್ತುಭೃತ್ಯತ್ವಾಚಾರ ಸದ್ಭಕ್ತಿಯೆಂಬ ನಿಜಸಮಾಧಿಯಲ್ಲಿ ನಿಂದು, ನಿರವಯಲ ಕೂಡುವಂಥಾದೆ ತತ್ತ್ವದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಚೈತನ್ಯಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ಸತ್ಯಸದಾಚಾರಲಿಂಗ ಧರಿಸಿದ ಲಿಂಗಭಕ್ತಂಗೆ ದೀಕ್ಷಾಗುರುವೆ ಕುಲದೈವ, ಶಿಕ್ಷಾಗುರುವೆ ಮನೆದೈವ, ಜ್ಞಾನಗುರುವೆ ಮನದ ಮಧ್ಯದಲ್ಲಿ ಬೆಳಗುವ ಪರಂಜ್ಯೋತಿಲಿಂಗವೆಂದು ಕುಲದುಂಬಿ, ಮನೆದುಂಬಿ, ಮನದುಂಬಿ, ಮತ್ತೊಂದು ಇತರ ವಾದಿಗಳಂತೆ, ಅನ್ಯಾರ್ಚನೆ, ಅನ್ಯಶಾಸ್ತ್ರ, ಅನ್ಯಮಂತ್ರ, ಅನ್ಯಪಾಕವ ಮುಟ್ಟದೆ, ಸ್ವಪಾಕವ ಮಾಡಿ ಹರಗಣಗುರುಚರಪರಮಕ್ಕೆ ಸಮರ್ಪಿಸಿ, ಬಂದ ಬರವ, ನಿಂದ ನಿಲುಕಡೆಯ ತಿಳಿದು, ತನುವೆಲ್ಲ ದೀಕ್ಷಾಗುರುವಿನ ದೀಕ್ಷಾಪಾದೋದಕ ಶುದ್ಧಪ್ರಸಾದವೆಂದರಿದ ನಿಜವೆ ಆದಿಪ್ರಸಾದಿಸ್ಥಲ ನೋಡ. ಮನವೆಲ್ಲ ಶಿಕ್ಷಾಗುರುವಿನ ಶಿಕ್ಷಾಪಾದೋದಕ ಸಿದ್ಧಪ್ರಸಾದವೆಂದರಿದ ನಿಜವೆ ಅಂತ್ಯಪ್ರಸಾದಿಸ್ಥಲ ನೋಡ. ಭಾವವೆಲ್ಲ ಜ್ಞಾನಗುರುವಿನ ಜ್ಞಾನಪಾದೋದಕ ಪ್ರಸಿದ್ಧಪ್ರಸಾದವೆಂದರಿದ ನಿಜವೆ ಸೇವ್ಯಪ್ರಸಾದಿಸ್ಥಲ ನೋಡ. ಇಂತು ದೀಕ್ಷಾಗುರು, ಶಿಕ್ಷಾಗುರು, ಜ್ಞಾನಗುರುಸ್ವರೂಪವಾದ ಲಿಂಗಜಂಗಮದ ಪಾದೋದಕ ಪ್ರಸಾದ ಒದವಿದಲ್ಲಿ ಆಚರಣೆ, ಸಾಮಾನ್ಯದಲ್ಲಿ ಸಂಬಂಧವಿಟ್ಟುಕೊಂಡು ಕೊಟ್ಟು ಕೊಳಬಲ್ಲಾತನೆ ನಿಚ್ಚಪ್ರಸಾದಿಯಯ್ಯ. ಲಿಂಗಜಂಗಮದ ಪಾದೋದಕ ಪ್ರಸಾದವನುಳಿದು ಜಂಗಲಿಂಗಮದ ಪ್ರಸಾದ ಪಾದೋದಕ ಪ್ರಸನ್ನ ಪ್ರಸಾದವ ದಿವಾರಾತ್ರಿಗಳೆನ್ನದೆ ಆಚರಣೆಯ ಪ್ರಾಣವಾಗಿ ಕೊಟ್ಟು ಕೊಳಬಲ್ಲಾತನೆ ಅಚ್ಚಪ್ರಸಾದಿಯಯ್ಯ. ಇವರಿಬ್ಬರಲ್ಲಿ ಅತಿಭೃತ್ಯನಾಗಿ, ಇವರಿಬ್ಬರಾಚರಣೆಯಲ್ಲಿ ದೃಢಚಿತ್ತದಿಂದ ಕೊಟ್ಟು ಕೊಳಬಲ್ಲಾತನೆ ಸಮಯಪ್ರಸಾದಿ ನೋಡ. ಇಂತು ಸರ್ವಾಚಾರ ಸಂಪತ್ತಿನಾಚರಣೆಯ ಸಾಕಾರಲೀಲೆ, ಅರ್ಪಿತಾವಧಾನ, ಚೇತನಪರಿಯಂತರವು ಆಚರಿಸುವಂಥದೆ ದೃಢವ್ರತದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು

ಇನ್ನಷ್ಟು ...