ಅಥವಾ
(61) (3) (3) (0) (0) (0) (0) (0) (1) (0) (0) (0) (0) (0) ಅಂ (1) ಅಃ (1) (2) (0) (2) (0) (0) (0) (0) (2) (0) (0) (0) (0) (0) (0) (0) (1) (0) (1) (0) (1) (0) (0) (1) (1) (0) (0) (0) (0) (0) (0) (10) (0) (0) (11) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹರಹರ, ಶಿವಶಿವ, ಜಯಜಯ, ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುವೆ ನಿಷ್ಕಲ ಪರಶಿವತತ್ವವಯ್ಯ. ಗುರುವೆ ಸಕಲಾಗಮಂಗಳ ಮೂರ್ತಿಯಯ್ಯ. ಗುರುವೆ ಅಜ್ಞಾನವೆಂಬ ಕಾವಳಕ್ಕೆ ಚಿತ್ಸೂರ್ಯನಯ್ಯ. ಗುರುವೆ ನಂಬಿದ ಭಕ್ತರ ವಿಷಯವೆಂಬ ವನಾಂತರಕ್ಕೆ ಚಿಚ್ಚಂದ್ರನಯ್ಯ. ಗುರುವೆ ಆಸೆಯೆಂಬ ಪಾಶವ ದಹಿಸುವುದಕ್ಕೆ ಚಿದಗ್ನಿಯಯ್ಯ. ಗುರುವೆ ಪರಾತ್ಪರಮೂರ್ತಿಯಯ್ಯ. ಗುರುವೆ ಸಕಲಾಧಾರಮೂರ್ತಿಯಯ್ಯ. ಗುರುವೆ ಸಚ್ಚಿದಾನಂದಮೂರ್ತಿಯಯ್ಯ. ಗುರುವೆ ಸರ್ವಲೋಕ ಸೂತ್ರಾಧಾರಮೂರ್ತಿಯಯ್ಯ. ಗುರುವೆ ಪರಬ್ರಹ್ಮವಸ್ತುವಯ್ಯ. ಗುರುವೆ ನಿತ್ಯನಿರುಪಮನಯ್ಯ. ಗುರುವೆ ನಿಷ್ಕಳಂಕ ನಿಷ್ಪ್ರಪಂಚನಯ್ಯ ಗುರುವೆ ನಿರುಪಾದ್ಥಿಕ ನಿಶ್ಚಿಂತನಯ್ಯ ಗುರುವೆ ಆದಿ ಅನಾದಿಯಿಂದತ್ತತ್ತಲಾದ ನಿರವಯಮೂರ್ತಿಯಯ್ಯ. ಗುರುವೆ ಶಾಂತ ಸರ್ವಜÕಸ್ವರೂಪನಯ್ಯ. ಗುರುವೆ ನಿರಾಳ ನಿಷ್ಕಾಮ ನೋಡ. ಶ್ರೀಗುರುವೆ ಸಗುಣಾನಂದಮೂರ್ತಿ ನೋಡ ! ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಹರಗಣಂಗಳಾಚರಿಸಿದ ಸತ್ಕಾಯಕದಿಂದ ಬಹುಜನ್ಮದ ದೋಷ ತೊಲಗುವುದಯ್ಯ. ಸತ್ಕಿøಯದಿಂದ ಕಾಲಕಾಮರ ಭಯ ಹರಿವುದಯ್ಯ. ಸಮ್ಯಜ್ಞಾನದಿಂದ ಮಾಯಾಪಾಶ ಹಿಂದಾಗುವುದಯ್ಯ. ಸದ್ಭಕ್ತಿಯಿಂದ ಪಾವನಸ್ವರೂಪರಾಗುವುರಯ್ಯ. ಲಿಂಗಾಚಾರದಿಂದ ತನು ಶುದ್ಧವಾಗುವುದಯ್ಯ. ಸದಾಚಾರದಿಂದ ಮನ ಸಿದ್ಧವಾಗುವುದಯ್ಯ. ಶಿವಾಚಾರದಿಂದ ಧನ ಪ್ರಸಿದ್ಧವಾಗುವುದಯ್ಯ. ಗಣಾಚಾರದಿಂದ ನಡೆ ಪರುಷವಾಗುವುದಯ್ಯ. ಭೃತ್ಯಾಚಾರದಿಂದ ನುಡಿ ಪರುಷವಾಗುವುದಯ್ಯ. ಕ್ರಿಯಾಚಾರದಿಂದ ಕರ್ಮೇಂದ್ರಿಯಂಗಳು ಪವಿತ್ರವಾಗುವವಯ್ಯ. ಜ್ಞಾನಾಚಾರದಿಂದ ಜ್ಞಾನೇಂದ್ರಿಯಂಗಳು ಪಾವನವಾಗುವವಯ್ಯ. ಭಾವಾಚಾರದಿಂದ ಕರಣಂಗಳು ನಿಜಸ್ವರೂಪವಾಗುವವಯ್ಯ. ಸತ್ಯಾಚಾರದಿಂದ ವಿಷಯಂಗಳು ಲಿಂಗಮುಖವಾಗುವವಯ್ಯ. ನಿತ್ಯಾಚಾರದಿಂದ ವಾಯುಗಳು ಮಹಾಪ್ರಸಾದವಾಗುವವಯ್ಯ. ಧರ್ಮಾಚಾರದಿಂದ ಲಿಂಗಾಂಗ ಏಕವಾಗುವುದಯ್ಯ. ಸರ್ವಾಚಾರದಿಂದ ಸರ್ವಾಂಗ ಜ್ಞಾನಜ್ಯೋತಿಯಪ್ಪುದು ತಪ್ಪದು ನೋಡ. ಸತ್ಕಾಯಕ ಮೊದಲಾದ ಷೋಡಶ ಕಲೆನೆಲೆಗಳೆ ಸದ್ಗುರುಮುಖದಿಂ ಚಿದಂಗವ ಮಾಡಿಕೊಂಡು, ಷೋಡಶವರ್ಣವೆ ಸದ್ಗುರುಮುಖದಿಂ ಚಿದ್ಘನಲಿಂಗವ ಮಾಡಿಕೊಂಡು ಸದ್ಗುರುಮುಖದಿಂ ಎರಡಳಿದು ಏಕಸ್ವರೂಪದಿಂದ ಜ್ಯೋತಿಜ್ಯೋತಿ ಬೆರದಂತೆ ಬಸವ ಮೊದಲಾದ ಪ್ರಮಥಗಣಂಗಳೆಲ್ಲ ಬಯಲೊಳಗೆ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ, ಶಿವಶಿವ, ಜಯಜಯ ಶ್ರೀಗುರುಲಿಂಗಜಂಗಮ ಶರಣಗಣಂಗಳಲ್ಲಿ ಕಿಂಕರ ಭೃತ್ಯಭಾವಸದ್ಭಕ್ತಿಯೆ ನಿಜಶಿವಯೋಗವಯ್ಯ. ಸದ್ಭಕ್ತಿಯೆ ನಿಜಕೈವಲ್ಯಪದವಯ್ಯ. ಸದ್ಭಕ್ತಿಯೆ ಪರಮಕೈ¯oಸವಯ್ಯ. ಸದ್ಭಕ್ತಿಯೆ ನಿಜಮೋಕ್ಷಮಂದಿರವಯ್ಯ. ಸದ್ಭಕ್ತಿಯೆ ರುದ್ರಲೋಕವಯ್ಯ. ಸದ್ಭಕ್ತಿಯೆ ಶಿವಲೋಕ ಶಾಂಭವಲೋಕವಯ್ಯ. ಸದ್ಭಕ್ತಿಯೆ ನಾಗಲೋಕ ದೇವಲೋಕವಯ್ಯ. ಸದ್ಭಕ್ತಿಯೆ ಕಾಮಧೇನು - ಕಲ್ಪವೃಕ್ಷ - ಚಿಂತಾಮಣಿಯಯ್ಯ. ಸದ್ಭಕ್ತಿಯೆ ಸಂಜೀವನ ಪರಮಾಮೃತವಯ್ಯ. ಸದ್ಭಕ್ತಿಯೆ ನಿತ್ಯತ್ವ ಪರಮಪದವಯ್ಯ. ಸದ್ಭಕ್ತಿಯೆ ಚಿದೈಶ್ವರ್ಯ ಚಿದಾಭರಣವಯ್ಯ. ಸದ್ಭಕ್ತಿಯೆ ಮಹಾತೀರ್ಥವಯ್ಯ. ಸದ್ಭಕ್ತಿಯೆ ಮಹಾಶಿವಕ್ಷೇತ್ರವಯ್ಯ. ಸದ್ಭಕ್ತಿಯಿಂದ ಮಹಾಪಾಪಂಗಳು ಕುಸಿದು ಹೋಹವಯ್ಯ. ಸದ್ಭಕ್ತಿಯಿಂದ ಸಕಲಲೋಕಪಾವನವಯ್ಯ. ಸದ್ಭಕ್ತಿಯಿಂದ ಸದ್ಯೋನ್ಮುಕ್ತಿಯಯ್ಯ. ಸದ್ಭಕ್ತಿಯಿಂದ ಅನಂತರು ಮುಕ್ತರಾದರಯ್ಯ. ಸದ್ಭಕ್ತಿಯೆ ಮಹಾಜ್ಞಾನದರ್ಪಣ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜ ಕರುಣಾಕರ ಮತ್ಪ್ರಾಣಕಳಾಚೈತನ್ಯಸ್ವರೂಪ ಮಹಾಪ್ರಭು ಶ್ರೀಗುರುಲಿಂಗಜಂಗಮದ ಮಹಾಪ್ರಸಾದವೆ ಪರಬ್ರಹ್ಮ ಪರಮಕಳಾಚೈತನ್ಯ ಚಿತ್ಸ್ವರೂಪ ಅನಾದಿ ನಿಷ್ಕಲ ಪರಶಿವಲಿಂಗಸ್ವರೂಪ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿಜಚೈತನ್ಯಸ್ವರೂಪು ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಶಿವಾನುಭಾವದ ಶುದ್ಧಿನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರುಪಮ ನಿರಾಲಂಬ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿತ್ಯ ಚಿದೈಶ್ವರ್ಯ ಚಿತ್ಕಾಂತಿ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿಜಮೋಕ್ಷದ ಕಣಿ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಭವರೋಗವೈದ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರ್ಗುಣ ನಿಷ್ಕಳಂಕ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಅಪ್ರಮಾಣ ಅಗೋಚರ ನಿಜಚಿನ್ಮಯರೂಪು ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಅಗಣಿತ ನಿರಾತಂಕ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರಾವಯ ನಿಶ್ಶೂನ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ನಿರ್ಮಾಯ ನಿಷ್ಕಾಮ್ಯ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಚಿದ್ಬೆಳಗು ತಾನೆ ನೋಡ. ಶ್ರೀಗುರುಲಿಂಗಜಂಗಮದ ಪ್ರಸಾದವೆ ಚಿದ್ಘನಮಹಾಲಿಂಗ ತಾನೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹೀಂಗೆ ಪೂರ್ವಪುರಾತನರು ಸದ್ಗುರು ವಚನೋಕ್ತಿಯಿಂದ ತಿಳಿದು ರೇವಣಸಿದ್ಭೇಶ್ವರ, ಮರುಳಸಿದ್ಧೇಶ್ವರ, ತೋಂಟದಸಿದ್ಧೇಶ್ವರ ನೂರೊಂದು ವಿರಕ್ತರು ಮೊದಲಾದ ಮತ್ರ್ಯಲೋಕದ ಮಹಾಗಣಂಗಳೆಲ್ಲ ಸರ್ವಾಚಾರ ಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯ ಸದ್ಗುರುಮುಖದಿಂದ ಬೆಸಗೊಂಡು ನಿಜಪ್ರಸಾದವೆಂದು ಸದ್ಭಾವದಿಂದ ಭಾವಿಸಿ ನಡೆದಂತೆ ನುಡಿದು, ನುಡಿದಂತೆ ನಡೆದು, ಹರುಕಿಲ್ಲದೆ ಹರಿ ಅಜ ಸುರ ಮನು ಮುನಿ ದೇವ ದಾನವ ಮಾನವರೆಲ್ಲ ಮುಳುಗಿಹೋದ ಹೊನ್ನು-ಹೆಣ್ಣು-ಮಣ್ಣು-ಅನ್ನ-ನೀರು-ವಸ್ತ್ರ-ಆಭರಣ-ವಾಹನವೆಂಬ ಮಾಯಾಪಾಶ ಕಡವರವ ದಾಂಟಿದರು ನೋಡ. ಮಾಯಾಭೋಗವಿರಹಿತರಾಗಿ ಲಿಂಗಭೋಗಸಂಪನ್ನರಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪರಾತ್ಪರಬ್ರಹ್ಮ ಪ್ರಭು ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಹರನ ತ್ರಿವಿಧನೇತ್ರದಿಂದುದಯವಾದ ತ್ರಿವಿಧವರ್ಣದ ಬಿಂದುಗಳ ಅನಾದಿಚಿತ್ಪ್ರಭು ಬಸವೇಶ್ವರಸ್ವಾಮಿಗಳು, ಆ ಬಿಂದುಗಳ ತಮ್ಮ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ಚಿದ್ಬಿಂದು ಚಿನ್ಮಂತ್ರ ಮಣಿಮಾಲಿಕೆಯೆಂದು ತತ್ವಸ್ಥಾನಂಗಳಲ್ಲಿ ಧರಿಸಿ, ಮಹಾಪ್ರಭು ನಿರಂಜನ ಜಂಗಮಕ್ಕೆ ಇಪ್ಪತ್ತೊಂದು ಲಕ್ಷ ಮಣಿಗಳಿಂದ ಶೂನ್ಯಸಿಂಹಾಸನಮಂಟಪವ ರಚಿಸಿ, ಆ ಸಿಂಹಾಸನದ ಮೇಲೆ ಮಹಾಪ್ರಭುನಿರಂಜನಜಂಗಮವ ಮೂರ್ತವ ಮಾಡಿಸಿ, ಮಹಾವೈಭವದಿಂದ ಸಕಲಮಹಾಪ್ರಮಥಗಣಂಗಳಿಗೆ ಆ ಚಿದ್ಬಿಂದುಗಳಮಲದಲ್ಲಿ ಅನಾದಿಗುರು, ಅನಾದಿಪ್ರಣಮವ ಸಂಬಂಧವ ಮಾಡಿ, ಮುಖಂಗಳಲ್ಲಿ ಅನಾದಿಲಿಂಗ ಪಾದೋದಕ ಪ್ರಸಾದವ ಸಂಬಂಧವ ಮಾಡಿ, ನಾಳದಲ್ಲಿ ಅನಾದಿಜಂಗಮ ಚಿತ್ಪ್ರಕಾಶ ಚಿದ್ಭಸಿತವ ಸಂಬಂಧವ ಮಾಡಿ, ಮಹಾ ಸಂತೋಷವೆಂಬ ಹರುಷಾನಂದ ಜಲವುಕ್ಕಿ, ಕಡಗ-ಕಂಠಮಾಲೆ-ಕರ್ಣಾಭರಣ-ಹಾರ-ಹೀರಾವಳಿಗಳ ಮಾಡಿ ಧರಿಸಿ, ಚಿಂತಾಮಣಿಯೆಂದು ಪ್ರಮಥಗಣ, ರುದ್ರಗಣ, ಷೋಡಶಗಣ, ತೇರಸಗಣ, ದಶಗಣ, ಮತ್ರ್ಯಲೋಕದ ಮಹಾಗಣ ಸಮೂಹಕ್ಕೆಲ್ಲ ಒರದು ಬೋಧಿಸಿದರು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಚಿನ್ಮಂತ್ರ ಮಾಲಿಕೆ ಪರಮಚಿಂತಾಮಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಅನಾದಿ ಮಹಾಪ್ರಭು ಶ್ರೀಗುರುಲಿಂಗಜಂಗಮದ ಚರಣೋದ್ಧೊಳನವೆ ಚಿದ್ಬ್ರಹ್ಮ ಚಿದೈಶ್ವರ್ಯ ನೋಡ. ಶ್ರೀಗುರುಲಿಂಗಜಂಗಮದ ಕ್ರಿಯಾಚಕ್ಷುವಿನ ಕ್ರಿಯಾ ಪ್ರಕಾಶವೆ ಕ್ರಿಯಾಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಜ್ಞಾನಚಕ್ಷುವಿನ ಜ್ಞಾನಪ್ರಕಾಶವೆ ಜ್ಞಾನಭಸಿತವಾಗಿರ್ಪುದಯ್ಯ. ಶ್ರೀಗುರುಲಿಂಗಜಂಗಮದ ಮಹಾಜ್ಞಾನ ಚಕ್ಷುವಿನ ಮಹಾಜ್ಞಾನಪ್ರಕಾಶವೆ ಮಹಾಜ್ಞಾನಭಸಿತವಾಗಿರ್ಪುದಯ್ಯ. ಇಂಥ ಚಿತ್ಪ್ರಕಾಶಸ್ವರೂಪವಾದ ಚಿದ್ಭಸಿತವ ಅನಾದಿ ಬಸವದಂಡಪ್ರಮಥರು ತಮ್ಮ ಗೋಪ್ಯಮುಖದಲ್ಲಿ ಸಕಲಕ್ರಿಯೆಗಳ ಆಚರಿಸುತ್ತಿರಲು ಆಗ ಶಿವನು ತನ್ನ ಪಂಚಮುಖದಿಂದ ಪಂಚವರ್ಣದ ಗೋವ ನಿರ್ಮಿಸಿ, 'ಎಲೈ ಎನ್ನ ಚಿಚ್ಚೈತನ್ಯಮೂರ್ತಿ ಬಸವದಂಡನಾಯಕರೆ ಈ ಪಂಚಗೋವುಗಳ ಈರೇಳುಲೋಕಕ್ಕೆ ಪಾವನಸ್ವರೂಪವ ಮಾಡಿ, ನಿಮ್ಮ ಶರಣಗಣಂಗಳಿಗರ್ಪಿತವಾಗುವಂತೆ ಮಾಡಿರಯ್ಯ.' ಎಂದು ಅಭಿವಂದಿಸಲು, ಆಗ ಬಸವದಂಡಪ್ರಮಥರು ಆ ಗೋವಿನ ಸಗಣವ ಕ್ರಿಯಾಗ್ನಿಯಿಂದ ದಹಿಸಿ, ಶ್ರೀಗುರುಲಿಂಗಜಂಗಮದ ಚಿತ್ಪ್ರಭೆಯ ವೇಧಿಸಿ ಸಕಲಲೋಕಂಗಳಿಗೆ ಸಕಲ ಮುನಿಜನಕ್ಕೆಲ್ಲ ಕಾಲಹರಭಸಿತ, ಕರ್ಮಹರಭಸಿತ, ದುರಿತಹರಭಸಿತ, ಪಾಪಹರಭಸಿತವೆನಿಸಿಕೊಟ್ಟರು ನೋಡ. ಆ ಗೋವಿನ ಜಲಮಲ ವೀರ್ಯದಿಂದ ಭೂಮಿಯ ಸಮ್ಮಾರ್ಜನೆಗೆ ಯೋಗ್ಯವೆಂದೆನಿಸಿದರಯ್ಯ. ಆ ಗೋವಿನ ಕುಚಕ್ಷೀರವ ಸರ್ವಲೋಕಂಗಳಿಗೆ ಪಂಚಾಮೃತವೆಂದೆನಿಸಿದರಯ್ಯ. ಆ ಗೋವಿನ ಪುತ್ರನಿಂದ ಸಕಲಪ್ರಾಣಿಗಳು ಬದುಕುವಂತೆ ಮಾಡಿದರಯ್ಯ. ಆ ಗೋವಿನ ಮಾಂಸವ ದುರಾಚಾರಭವಿಜನ್ಮಾತ್ಮರು ಭುಂಜಿಸುವಂತೆ ಮಾಡಿದರಯ್ಯ. ಆ ಗೋವಿನ ಚರ್ಮವ ಶಿವಗಣಂಗಳ ಪಾದರಕ್ಷೆಯೆಂದೆನಿಸಿದರು ನೋಡಯ್ಯ. ಇತ್ತಲಾಗಿ ಸಕಲಪ್ರಮಥಗಣಂಗಳೆಲ್ಲ ಶ್ರೀ ಬಸವೇಶ್ವರಸ್ವಾಮಿಗಳ ಚಿತ್ಪ್ರಕಾಶಭಸಿತವ ಬೆಸಗೊಂಡು ಆ ವಿಭೂತಿಯ ಶ್ರೀ ಗುರುಲಿಂಗಜಂಗಮದ ದೀಕ್ಷಾಜಲ-ಶಿಕ್ಷಾಜಲದಿಂದ ಸಮ್ಮಿಶ್ರವ ಮಾಡಿ, ಇಪ್ಪತ್ತೊಂದು ದೀಕ್ಷಾಸ್ವರೂಪವಾದ ಮಹಾಪ್ರಣಮವ ಸ್ಥಾಪಿಸಿ, ಸಕಲಾಚಾರಕ್ರಿಯೆಗಳಿಗೆ ಶುಭತಿಲಕವಿದೆ ಚಿದ್ವಿಭೂತಿಯಿದೆಂದು ನಿರಂತರ ಸ್ನಾನ ಧೂಳನ-ಧಾರಣವ ಮಾಡಿದರು ನೋಡ. ಅದರಿಂ ಮೇಲೆ ಆ ಗೋವಿನ ಕುಚಕ್ಷೀರವ ಈ ಭಸಿತದಿಂದ ಪಾವನವ ಮಾಡಿ, ಪರಮಾಮೃತವೆನಿಸಿ, ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ಪರಮಾಮೃತ ಶೇಷಪ್ರಸಾದವ ನಿಜನಿಷೆ*ಯಿಂದ ಲಿಂಗಾರ್ಪಿತವ ಮಾಡಿದರು ನೋಡ. ಶ್ರೀಗುರುಲಿಂಗಜಂಗಮದ ಚಿತ್ಪ್ರಕಾಶಭಸಿತವ ಬಹಿಷ್ಕರಿಸಿ ಸಕಲಪ್ರಮಥಗಣಂಗಳಿಗೆ ಪರಮಪದ ಮೋಕ್ಷದ ಕಣಿಯೆಂದು ಬೋಧಿಸಿದಂಥ ಬಸವದಂಡನಾಥನ ಚರಣಕ್ಕೆ ನಮೋ ನಮೋ ಎಂಬೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ 'ಮತ್ಪ್ರಾಣನಾಥ ಮಹಾಪ್ರಭು ಚಿದ್ಘನ ಶ್ರೀಗುರುಲಿಂಗಜಂಗಮವೆ, ನಿಮ್ಮ ಶರಣಗಣಂಗಳೆಲ್ಲ ನಿರವಯಸಮಾಧಿಯಲ್ಲಿ ಹೋದ ಮಾರ್ಗವ ನಿಮ್ಮ ಕರುಣಕಟಾಕ್ಷೆಯಿಂದ ದಯವಿಟ್ಟು ರಕ್ಷಿಸಯ್ಯ ತಂದೆ, ಕೇಳಯ್ಯ ವರಕುಮಾರದೇಶಿಕೇಂದ್ರನೆ ಶಿವಗಣಂಗಳೆಲ್ಲ ಪರಶಿವಲಿಂಗಕ್ಕು ತಮಗು ಭಿನ್ನವಿಲ್ಲದೆ ಅಭಿನ್ನಸ್ವರೂಪದಿಂದ ಎರಡಳಿದು ಏಕರಸವಾಗಿ ಪುಷ್ಪ ಪರಿಮಳದಂತೆ, ಬಾವನ್ನಕೋಶ ಬಂಗಾರದ ತೆರದಿ, ಪಂಚಾಗ್ನಿಗಳ ಮೂಲ ಚಿತ್ಸ್ವರೂಪವಾದ ಚಿದಗ್ನಿಯಲ್ಲಿ ಸಮರಸವ ಮಾಡಿ, ಸರ್ವಾಚಾರಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯೆ ದ್ವಿತೀಯ ಕೈಲಾಸವೆಂದು, ಸತ್ಯ ನಡೆನುಡಿಯೆ ನಿಜಶಿವಮಂದಿರವೆಂದು, ತನ್ನ ದೀಕ್ಷಾಕರ್ತುವಾದ ಗುರು ಮೊದಲಾಗಿ ಸಮಸ್ತರೆಲ್ಲ ಶಿವಪಥಕ್ಕೆ ಯೋಗ್ಯವಾಗಿ ಬಂದಡೆ ಒಡಗೂಡಿ ಕೊಂಡು, ಶಿವಪಥಕ್ಕೆ ಅಯೋಗ್ಯವಾದಡೆ ತ್ಯಜಿಸಿ, ಪರಿಪೂರ್ಣ ಪರಂಜ್ಯೋತಿ ಸ್ತಂಭಾಕಾರವೆಂಬ ನಿಷ್ಕಲ ಪರಶಿವಬಿಂದುಸ್ವರೂಪವಾದ ಷೋಡಶವರ್ಣದ ಚಿದ್ಬೆಳಗಿನೊಳಗೆ ಉರಿ-ಕರ್ಪೂರಂದತೆ ನಿಜಶಿವಸಮಾಧಿಯಲ್ಲಿ ಬೆರೆದು ಹೋದರು ನೋಡ. ಇಂತೀ ಪ್ರಕಾರದಿಂದ ರಾಜಹಂಸನೋಪಾಯದಿಯಲ್ಲಿ ಒಳಗು ಹೊರಗು ಅನಾಚಾರವ ತ್ಯಜಿಸಿ, ಶಿವಾಚಾರಸಮರತಿಯಿಂದ ಕೂಡಿದರು ನೋಡ. ಆಚಾರವೆಪ್ರಾಣವಾಗಿ ಸಕಲಪ್ರಮಥಗಣವೆಲ್ಲ ಚಿದ್ಘನಮಹಾಲಿಂಗದಲ್ಲಿ ಕೂಟಸ್ಥರಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪ್ರಭು ಜಂಗಮವೆ ಸರ್ವಾಧಾರಪರಬ್ರಹ್ಮ ಘನಗಂಭೀರ ಪರತತ್ವಮೂರ್ತಿ ನೋಡ. ಜಂಗಮವೆ ನಿರುಪಮ ನಿರಾವಯವಸ್ತು ನೋಡ. ಜಂಗಮವೆ ನಿಷ್ಕಳಂಕ ನಿಶ್ಚಿಂತ ನೋಡಯ್ಯ. ಜಂಗಮವೆ ಸ್ವಯಚರಪರವಸ್ತು ನೋಡಯ್ಯ. ಜಂಗಮವೆ ಭೂರುದ್ರಮೂರ್ತಿ ನೋಡಯ್ಯ. ಜಂಗಮವೆ ಸತ್ಯಸದಾಚಾರಮೂರ್ತಿ ನೋಡಯ್ಯ. ಜಂಗಮವೆ ಸತ್ಕಿಯಾಸಮ್ಯಜ್ಞಾನಮೂರ್ತಿ ನೋಡಯ್ಯ. ಜಂಗಮವೆ ಸದ್ಭಕ್ತಿಪ್ರಿಯ ನೋಡಯ್ಯ. ಜಂಗಮವೆ ಗುರುಲಿಂಗಭಕ್ತರಿಗೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ. ಜಂಗಮವೆ ಪರಮಾನಂದ ಪರಿಣಾಮಿ ನೋಡಯ್ಯ. ಜಂಗಮವೆ ಸಚ್ಚಿದಾನಂದಭರಿತ ನೋಡಯ್ಯ. ಜಂಗಮವೆ ಜಗತ್ಪಾವನಮೂರ್ತಿ ನೋಡಯ್ಯ. ಜಂಗಮವೆ ಕಾರಣಾವತಾರಮೂರ್ತಿ ನೋಡಯ್ಯ. ಜಂಗಮವೆ ಅಂಗಲಿಂಗವೆರಡಕ್ಕೆ ಹರಣಕಿರಣ ಚೈತನ್ಯಮೂರ್ತಿ ನೋಡಯ್ಯ. ಜಂಗಮವೆ ಸದ್ಭಕ್ತ ಮಾಹೇಶ್ವರರ ಸದ್ಧರ್ಮಸರ್ವಾಚಾರ ಸಂಪತ್ತಿನಾಚರಣೆಗೆ ಕಾರಣಕರ್ತ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಮಂತ್ರಸ್ವರೂಪ ಅನಾದಿ ಮಹಾಪ್ರಭು ಶ್ರೀ ಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಮಹಾಪ್ರಣಮವೆ ನಿಜವಸ್ತು ನೋಡ. ಆ ಮಹಾಪ್ರಣಮದಿಂದುದಯವಾದ ತ್ರಿಯಕ್ಷರ-ಪಂಚಾಕ್ಷರ-ಷಡಕ್ಷರಂಗಳೆ ಮಹಾಮಂತ್ರಂಗಳು ನೋಡ. ಆ ಮಹಾಮಂತ್ರಂಗಳೆ ಸಕಲ ಉಪಮಂತ್ರಂಗಳಿಗೆ ಮಾತೆಪಿತ ನೋಡ. ಆ ಮಹಾಮಂತ್ರಂಗಳೆ ಸಕಲ ಶಾಸ್ತ್ರಾಗಮ ಪುರಾಣಂಗಳಿಗೆ ಜನನಿ ಜನಕ ನೋಡ. ಆ ಮಹಾಮಂತ್ರವೆ ನಿಷ್ಕಲ ನಿಶ್ಯೂನ್ಯ ನಿರಂಜನ, ಗುರು-ಲಿಂಗ-ಜಂಗಮ, ಪಾದೋದಕ-ಪ್ರಸಾದ, ಚಿದ್ವಿಭೂತಿ ರುದ್ರಾಕ್ಷಿಗಳಿಗೆಲ್ಲ ಮೂಲಬೀಜಾಂಕುರ ನೋಡ. ಆ ಮಹಾಮಂತ್ರವೆ ಅನಾದಿ ಶರಣನ ಚಿದೈಶ್ವರ್ಯ ಚಿದಾಭರಣ ನೋಡ. ಆ ಮಹಾಮಂತ್ರವೆ ಸಕಲಾಚಾರ ಕ್ರಿಯಾಜ್ಞಾನಂಗಳಿಗೆ ಸಂಜೀವನ ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಸರ್ವಲೋಕಪಾವನಾವರ್ತಯ ಪರಬ್ರಹ್ಮ ಮಹಾಪ್ರಭು ಅನಾದಿ ಶ್ರೀಗುರುಲಿಂಗಜಂಗಮದ ಚರಣಸೋಂಕಿನಿಂ ಪವಿತ್ರವಾದ ಪರಮಪಾದೋದಕವೆ ಪರಿಪೂರ್ಣಪಾವನಸ್ವರೂಪು ನೋಡಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾನಂದ ಪರಿಪೂರ್ಣ ಅಷ್ಟಾಷಷಿ* ತೀರ್ಥಂಗಳಿಗೆ ಮೂಲಚೈತನ್ಯಸ್ವರೂಪ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಸರ್ವಲೋಕಪಾವನವಯ್ಯ. ಶ್ರೀಗುರುಲಿಂಗಜಂಗಮದ ಪಾದೋದಕವೆ ಪರಮಾನಂದ ಪರಿಪೂರ್ಣ ಪರಬ್ರಹ್ಮಾಮೃತ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಸಕಲಪ್ರಮಥಗಣಂಗಳಿಗೆ ಆಚಾರಶುದ್ಧಿ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಶ್ರೀಗುರುಲಿಂಗಜಂಗಮದ ಪಾದೋದಕವೆ ಚಿದೈಶ್ವರ್ಯ ಸಂಪತ್ತು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಪರಮ ಕೈವಲ್ಯಪದ ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಸದ್ಭಕ್ತಿ ಸದಾಚಾರ ದೊರವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಸತ್ಕ್ರಿಯಾ ಸಮ್ಯಜ್ಞಾನ ದೊರವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ಸದ್ವರ್ತನೆ ಸತ್ಪಥ ದೊರವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕದಿಂದ ನಿಜಮೋಕ್ಷವಾಗುವುದು ನೋಡ. ಶ್ರೀಗುರುಲಿಂಗಜಂಗಮದ ಪಾದೋದಕವೆ ಚಿತ್ಸುಧಾರಸ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು