ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ ಮೂರು ಸುತ್ತಿನಾ ಕೋಟಿಯ ಗಡಹವಿರ್ಪುದು. ಆ ಗಡಹವ ನೋಡ ಹೋಗಲು, ಆ ಗಡಹದ ನವದ್ವಾರವು ತೆರೆದಿರಲು, ಅಲ್ಲಿ ಒಳಹೊಕ್ಕು ನೋಡಲು ಎತ್ತ ನೋಡಿದರತ್ತ ವಜೀರ, ಉಮರಾವತ, ಅರಣ್ಯ, ಠಾಣ್ಯ ಮೊದಲಾದ ಅನಂತ ಪರಿವಾರ ಆರೈಸಿರುವದು. ಅಲ್ಲಿ ವೇದ ಆಗಮ ಪುರಾಣ ಮೊದಲಾದ ನೃತ್ಯ ಹಾಸ್ಯ ಗಾಯನ ಅನಂತ ಉತ್ಸಹವಿರ್ಪುದು. ಅಲ್ಲಿ ದೀವಟಿಗೆಯು ಬಿರಸು ಚಂದ್ರಜ್ಯೋತಿ ದೀಪ ಮೊದಲಾದ ಅನಂತ ಪ್ರಕಾಶವಿರ್ಪುದು. ಅಲ್ಲಿ ಭೇರಿ, ನಗಾರಿ, ತಮ್ಮಟೆ, ಕಾಳಿ, ಕರ್ಣಿ ಮೊದಲಾದ ಅನಂತ ನಾದವಿರ್ಪುದು. ಮತ್ತಲ್ಲಿ ಒಳಹೊಕ್ಕು ನೋಡಲು ಮುಂದೆ ಚಿತ್ರವಿಚಿತ್ರವಾದ ಮಂಟಪವಿರ್ಪುದು. ಆ ಮಂಟಪದ ಸುತ್ತ ಅರವಿಂದ ನೀಲೋತ್ಪಲ ಸಂಪಿಗಿ ಇರವಂತಿಗೆ ಶ್ಯಾವಂತಿಗಿ ಮೊಲ್ಲೆ ಮಲ್ಲಿಗಿ ಮೊದಲಾದ ಅನಂತ ಪುಷ್ಪಮಾಲೆಗಳಿರ್ಪುವು. ಬಹುವರ್ಣದ ರಂಗವಾಲಿಯ ನೆಲಗಟ್ಟಿರ್ಪುದು. ಅದರೊಳಗೆ ನೋಡಬೇಕೆಂದು ಹೋಗಲು ಮುಂದೆ ನವರತ್ನಖಚಿತವಾದ ಸಿಂಹಾಸನವಿರ್ಪುದು. ಆ ಸಿಂಹಾಸನದ ಮೇಲೆ ಅಧಿಪತಿಯಾಗಿ ಇರುವಾತ ಎಂಥಾತ ಆತನ ಆತುರದಿ ನೋಡಬೇಕೆಂದು ಆ ಸಿಂಹಾಸನವೇರಲು ಅಲ್ಲಿಯ ಅಧಿಪತಿ ತಾನೇ ಆಗಿರ್ದ. ಇದೇನು ಸೋಜಿಗವೋ, ತಾ ನೋಡ ಬಂದವನೆಂಬ ಅರವಿಲ್ಲ. ಅಲ್ಲಿ ಅರಸನ್ಯಾವನೆಂಬ ಸಂಶಯವಿಲ್ಲದೆ ಅಲ್ಲಿಯ ಸರ್ವಕ್ಕೆ ತಾನೇ ಅಧಿಪತಿಯಾಗಿ ಇದ್ದಾಗ್ಯೂ ಆವಾಗಲೂ ಅಲ್ಲೇ ಇರ್ದಂತೆ ಇರುತಿರ್ದೆನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಒಂದು ಮರವ ಕೊರೆದು ನೂರೆಂಟು ಬೊಂಬೆಯ ಮಾಡಿ ಮರವೇ ಬೊಂಬೆಯಲ್ಲದೆ ಮರ ಬ್ಯಾರೆ ತಾನಿಲ್ಲಾ. ಇದರಂತೆ ತಾನೇ ಹಲವು ಆಗಲು ತಾನೇ ಹಲವಲ್ಲದೆ ತಾ ಬ್ಯಾರೆಲ್ಲಿಹನೋ ಇದೇ ಅನುಭವ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಒಂದೇ ಆಗಿರ್ದ ಪರಶಿವನು ಮೂರಾಗಿ ಮೂರರಿಂದೆ ಪೂಜೆಗೊಂಡು ಎರಡಾಗಿ ಮೂರು ಎರಡು ಭೇದವಿಲ್ಲದೆ ಒಂದಾಗಿ ತೋರಿದಿರಿ. ಅದೆಂತೆಂದೊಡೆ :ಅಖಂಡ ಪರಶಿವನ ಭೇದಿಸಿ ಕಾಂಬಲು ತೋರಿದ ನಾದವೇ ಗುರುವಾಗಿ, ಬಿಂದುವೆ ಲಿಂಗವಾಗಿ, ಕಳೆಯೇ ಜಂಗಮವಾಗಿ, ಸುಜಲವೆ ಪಾದೋದಕವಾಗಿ, ತಿಳಿಯೇ ಪ್ರಸಾದವಾಗಿ, ಕಾಣಿಸುವ ಸುಪ್ರಕಾಶದ ತೇಜಪುಂಜವೆ ಶ್ರೀವಿಭೂತಿಯಾಗಿ, ಸೂರ್ಯ ಚಂದ್ರಾದಿಗಳೆ ರುದ್ರಾಕ್ಷಿಮಣಿಯಾಗಿ, ಪಿಂಡಬ್ರಹ್ಮಾಂಡಕೊಂದೆ ಎನಿಸಿದ ಓಂಕಾರವೆ ಸರ್ವಮಂತ್ರಗಳ ಶ್ರೇಷ* ಆದಿಮಂತ್ರವೆನಿಸಿ, ಬ್ರಹ್ಮಾಂಡ ಅಷ್ಟಾವರಣದ ಇನ್ನೊಂದು ಪರಿಯಾಗಿ ತೋರಿ, ಹಲವು ಪರಿಯಲಿ ಲೀಲೆಯಾಗಿ ಮೆರೆದ ಹಲವು ಹಲವಲ್ಲದೆ ಹಲವು ಒಂದಾಗಿ, ಒಂದೆ ತಾನಾದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ