ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸತ್ಯ ಸದಾಚಾರ ಸಮ್ಯಜ್ಞಾನವೆಂಬುವು ಮೂರು. ನಾಮವೊಂದೇ ರೂಪವೊಂದೇ ಕ್ರೀವೊಂದೇ ಕಾಯವೊಂದೇ ಕರಣವೊಂದೇ ಆತ್ಮವೊಂದೇ ಪರಮಾತ್ಮವೊಂದೇ ನೀರು ಗಟ್ಟಿಗೊಂಡ ಆಣೆಕಲ್ಲು ನೀರೇ ಆಯಿತಲ್ಲದೇ ಕಲ್ಲಾಗಲಿಲ್ಲಾ. ಇದರಂತೆ ಶರಣ ಒಳಹೊರಗೆಂಬ ಸಂಶಯ ಅಳಿದು ಸರ್ವವೂ ತಾನೆಂಬ ಸತ್ಯವೇ ಸತ್ಯವಾಗಿಹನು. ಇದೇ ಸತ್ಯ ಸತ್ಯವೆಂದು ಮಹತ್ವ ತೋರಿದರೆ ಸತ್ಯವೇ ಅಲ್ಲಾ, ಆ ಮಹತ್ವವು ತನಗನ್ಯವೇ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸುಳ್ಳಪ್ಪನ ಮಗ ಕಳ್ಳಪ್ಪ, ತಳ್ಳಿಗೆ ಹೋಗಿ ಕೊಳ್ಳಿಯಕೊಟ್ಟು ಹಾಳ ಹಳ್ಳಿಯ ಸುಲಿದು, ಬೆಳ್ಳಿ ಬಂಗಾರ ಎಳ್ಳಷ್ಟು ಕೊಡಲಿಲ್ಲಾ. ಕಳ್ಳಪ್ಪನ ಸುಳ್ಳಪ್ಪ ಕೇಳಲು, ಆ ಕಳ್ಳಪ್ಪ ಸುಳ್ಳಪ್ಪನಾದ ಆ ಸುಳ್ಳಪ್ಪ ಮಳ್ಳಪ್ಪನಾದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸುಖಿಯಾಗಿ ಸುಖವರಿಯದೆ, ದುಃಖಿಯಾಗಿ ದುಃಖವರಿಯದೆ, ಶಿವನೆಂಬುವದರಿಯದೆ, ಜಗವೇನೆಂಬುವದರಿಯದೆ, ನಾನು ಏನೆಂಬುವದರಿಯದೆ, ಇಹವರಿಯದೆ ಪರವರಿಯದೆ, ಪುಣ್ಯವರಿಯದೆ ಪಾಪವರಿಯದೆ, ಸ್ವರ್ಗವರಿಯದೆ ನರಕವರಿಯದೆ, ಬಹುಮೂಢ ಅಜ್ಞಾನವೆಂಬ ವಿಲಾಸ ಅನಂತಕಾಲ ನಟಿಸಿರ್ದು ಅನಂತಕಾಲವಾಯಿತ್ತೆಂಬೆ, ಚಿಂತೆಯಿಲ್ಲದೆ ಅನಂತಕಾಲವಿರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸದ್‍ಭಕ್ತನ ಸತ್ಕ್ರಿಯವೆ ಗುರುವೆನಿಸಿ, ಮಂಗಳ ಅಂಗಪೀಠದ ಮುಹೂರ್ತಗೊಂಡ ಹರರೂಪವೇ ಲಿಂಗವೆನಿಸಿ, ಲಿಂಗನ ಪೂಜಿಸುವ ಸದಾಚಾರವೇ ಜಂಗಮವೆನಿಸಿ, ಪಾದ್ಯದಲ್ಲಿ ಪಾದೋದಕವಾಗಿ, ಜಿಹ್ವೆಯಲ್ಲಿ ಪ್ರಸಾದವಾಗಿ, ಲಲಾಟದಲ್ಲಿ ವಿಭೂತಿಧಾರಣವಾಗಿ, ಉರ, ಸಿರ, ಕಂಠದಲ್ಲಿ ಶಿವಾಕ್ಷಿಮಣಿಯೆನಿಸಿ, ಶ್ರೋತ್ರದಲ್ಲಿ ಮಂತ್ರವಾಗಿ ಇಂತು ಇವು ಬಾಹ್ಯ ಅಷ್ಟಾವರಣದ ಕ್ರಮವೆನಿಸಿತ್ತು. ಇನ್ನು ಅಂತರಂಗದಿ ಆತ್ಮನ ಅರುವೆ ಗುರುವೆನಿಸಿತ್ತು. ಪ್ರಾಣವೆ ಲಿಂಗವಾಗಿ ತೋರಿತ್ತು. ಪರಿಪೂರ್ಣ ಪರವಸ್ತುವಿನ ಜ್ಞಾನವೆ ಜಂಗಮವೆನಿಸಿತ್ತು. ಜಿಹ್ವಾಗ್ರವೇ ಪಾದೋದಕವಾಗಿ, ನಾಶಿಕವೆ ಪ್ರಸಾದವಾಗಿ, ತ್ವಕ್ಕಿನಲ್ಲಿ ಶ್ರೀವಿಭೂತಿ, ನೇತ್ರದಲ್ಲಿ ಪರಾಕ್ಷಮಣಿ, ಕರ್ಣದ್ವಾರದೊಳು ಮೊಳಗುವ ಮಂತ್ರದಿಂದೆ ಕೂಡಿಕೊಂಡ ಈ ಪರಿಯೇ ಅಂತರಾತ್ಮಷ್ಟಾವರಣವೆನಿಸಿತು. ನೀನೊಂದು ಇದ್ದು ಇಂತುಪರಿಯಲ್ಲಿ ಪೂಜೆ ಪೂಜಕ ಪೂಜ್ಯನೆನಿಸಿ ಮೆರೆದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸ್ಥೂಲತನುವಿನೊಳು ಪರವೆಂಬ ಸಂಜ್ಞದಿ ಹೆಣ್ಣುದುಂಬಿಯ ನಾದಪುಟ್ಟಿ ಅದರಿಂದ ಋಗ್ವೇದವಾಯಿತು. ಸೂಕ್ಷ್ಮತನುವಿನೊಳು ಗೂಢವೆಂಬ ಸಂಜ್ಞದಿ ವೀಣಾನಾದ ಪುಟ್ಟಿ ಯಜುರ್ವೇದವಾಯಿತು. ಕಾರಣತನುವಿನೊಳು ಶರೀರಸ್ಥಲವೆಂಬ ಸಂಜ್ಞದಿ ಘಂಟಾನಾದ ಪುಟ್ಟಿ ಸಾಮವೇದವಾಯಿತು. ನಿರ್ಮಲತನುವಿನೊಳು ಲಿಂಗಕ್ಷೇತ್ರವೆಂಬ ಸಂಜ್ಞದಿ ಭೇರೀನಾದ ಪುಟ್ಟಿ ಅಥರ್ವಣವೇದವಾಯಿತು. ಆನಂದತನುವಿನೊಳು ಅನಾದಿಯೆಂಬ ಸಂಜ್ಞದಿ ಮೇಘನಾದ ಪುಟ್ಟಿ ಅಜಪವೇದವೆನಿಸಿತು. ಶುದ್ಧತನುವಿನೊಳು ಮಹಾಸಂಜ್ಞದಿ ಪ್ರಣವನಾದ ಪುಟ್ಟಿ ಗಾಯತ್ರಿವೇದವೆನಿಸಿತು. ಆರು ತನುವಿಲೆ ಆರು ಸಂಜ್ಞ, ಆರು ಸಂಜ್ಞದಿ ಆರು ನಾದ, ಆ ಆರು ನಾದಕ್ಕೆ ಆರು ವೇದವಾಗಿ ಮೆರೆದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸತ್ಯವೇ ಗುರುವಾಗಿ ತೋರಿತು, ಚಿತ್ತವೆ ಲಿಂಗವಾಗಿ ತೋರಿತು, ಆನಂದವೆ ಜಂಗಮವಾಗಿ ತೋರಿತು, ನಿತ್ಯವೆ ಪಾದೋದಕವಾಗಿ ತೋರಿತು, ಪರಿಪೂರ್ಣವೆ ಪ್ರಸಾದವಾಗಿ ತೋರಿತು, ಅಖಂಡತ್ವವೇ ಶಿವಾಕ್ಷಮಣಿ ಎನಿಸಿ ತೋರಿತು. ಆ ಪರಬ್ರಹ್ಮವೇ ತಾನಾದ ವಿನೋದವು ಮಂತ್ರವೆನಿಸಿತ್ತು. ಮತ್ತೆ ತನ್ನ ನಾಮವೆ ಪಂಚಾಕ್ಷರಿ, ತನ್ನ ಸ್ಥಲವೇ ಷಡಕ್ಷರಿ, ತನ್ನ ರೂಪ ದೇಹ ನೋಟ ನೆನಹು ಸರ್ವವೂ ಪರಶಿವರೂಪ. ಆನಿ ಬೆಳವಲಹಣ್ಣು ನುಂಗಿದಾ ಪರಿಯಂತೆ, ಒಡೆದರೆ ಏನೂ ಇಲ್ಲ ಬೈಲೇ ಬೈಲು, ಅದರಂತೆ ಕೇಳೋದು ಬೈಲು, ಹೇಳೋದು, ಬೈಲು, ಹೌದು ಎಂಬುವದದು ಬೈಲು, ಅಲ್ಲವೆಂಬುದದು ಬೈಲು; ಬೈಲಿಗೆ ಬೈಲು ನಿರ್ಬೈಲು. ಕಾಡಕಿಚ್ಚಿನ ಕೈಯ ಮೆದಿಯ ಕೊಯಿಸಿದರೆ ಹಿಂದೆ ಮೆದಿ ಇಲ್ಲಾ, ಮುಂದೆ ನಿಲುವು ಇಲ್ಲಾ. ವಾಯದ ರಾಸಿಗೆ ಮರಣದ ಕೊಳಗ, ಅಳ್ಯೋದು ನೆರಳುವದು ಬೈಲು. ಅಳತೆಗೆ ಹೋಗದು, ಹೊಯ್ತಕ್ಕೆ ಸಿಗದು. ರವಿಯಂತೆ ಬದ್ಧವಿಲ್ಲಾ, ಪರಿಪೂರ್ಣ ಪರಂಜ್ಯೋತಿ ಬೈಲು. ಇಂತು ಪರಿಯಲ್ಲಿ ನೂರೆಂಟು ಪರಿಪರಿಯ ಅಷ್ಟಾವರಣದ ವಚನವಾಗಿ ಸುಳ್ಳೆ ಸುಳ್ಳೆನಿಸಿ ಸಾರಿದಿ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಸಾವುಯಿಲ್ಲಾ, ಸಾವು ಇಲ್ಲದೆ ಸಾವು ಬಂತು, ಸತ್ತವನ ಚಂದ ಇದ್ದವಗಲ್ಲದೇ ಸತ್ತವಗೆಲ್ಲಿಹದೋ ? ಇದ್ದವರು ಮಾಡಿದ ಮಂತ್ರಪಠನ ಸಮಾಧಿಕ್ರಿಯಾ ಇದ್ದವರೇ ಬಲ್ಲರು, ಸತ್ತವ ಅರಿಯ. ಸತ್ತವನೆನಿಸಿಕೊಂಡು, ಸತ್ತವ ಸಾಯದೇ, ಸತ್ತು ಸತ್ತು ಹೋಯಿತ್ತು ಅನಂತಕಾಲ ಅನಂತಜನ್ಮ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ