ಅಥವಾ
(6) (13) (1) (2) (0) (0) (0) (0) (0) (0) (0) (3) (0) (0) ಅಂ (1) ಅಃ (1) (1) (0) (2) (1) (0) (2) (0) (1) (0) (0) (0) (0) (0) (0) (0) (6) (0) (1) (0) (4) (5) (0) (5) (2) (3) (0) (2) (0) (0) (0) (3) (0) (7) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತಾರಕಾಕೃತಿಯ ನಕಾರಪ್ರಣವದ ಆಧಾರಚಕ್ರದೊಳು ಕೆಂಪುಬಣ್ಣವಿರ್ಪುದು. ದಂಡಕಾಕೃತಿಯ ಮಕಾರಪ್ರಣವದ ಸ್ವಾದಿಷ್ಠಾನಚಕ್ರದೊಳು ನೀಲವರ್ಣವಿರ್ಪುದು. ಕುಂಡಲಾಕೃತಿಯ ಶಿಕಾರಪ್ರಣವದ ಮಣಿಪೂರಚಕ್ರದೊಳು ಕುಂಕುಮವರ್ಣವಿರ್ಪುದು. ಅರ್ಧಚಂದ್ರಾಕೃತಿಯ ಯಕಾರಪ್ರಣವದ ಅನಾಹತಚಕ್ರದೊಳು ಪೀತವರ್ಣವಿರ್ಪುದು. ದರ್ಪಣಾಕೃತಿಯ ಯಕಾರಪ್ರಣವದ ವಿಶುದ್ಧಿಚಕ್ರದೊಳು ಶ್ವೇತವರ್ಣವಿರ್ಪುದು. ಜ್ಯೋತಿರಾಕೃತಿಯ ಒಂಕಾರಪ್ರಣವದ ಆಜ್ಞಾಚಕ್ರದೊಳು ಮಾಣಿಕ್ಯವರ್ಣವಿರ್ಪುದು. ಮತ್ತಂ, ಪೃಥ್ವಿತತ್ವಯುಕ್ತನಾದ ಸದ್ಭಕ್ತನೆಂಬ ಅಂಗನ ಸುಚಿತ್ತಹಸ್ತದೊಳು ಆಚಾರಲಿಂಗವಿರ್ಪುದು. ಅಪ್ಪು ತತ್ವಯುಕ್ತವಾದ ಮಹೇಶನೆಂಬ ಅಂಗನ ಸುಬುದ್ಧಿಹಸ್ತದೊಳು ಗುರುಲಿಂಗವಿರ್ಪುದು. ತೇಜತತ್ವಯುಕ್ತನಾದ ಪ್ರಸಾದಿಯೆಂಬ ಅಂಗನ ನಿರಹಂಕಾರಹಸ್ತದೊಳು ಶಿವಲಿಂಗವಿರ್ಪುದು. ವಾಯುತತ್ವಯುಕ್ತನಾದ ಪ್ರಾಣಲಿಂಗಿಯೆಂಬ ಅಂಗನ ಸೂರ್ಯಹಸ್ತದೊಳು ಜಂಗಮಲಿಂಗವಿರ್ಪುದು. ಆಕಾಶತತ್ವಯುಕ್ತನಾದ ಶರಣನೆಂಬ ಅಂಗನ ಸುಜ್ಞಾನಹಸ್ತದೊಳು ಪ್ರಸಾದಲಿಂಗವಿರ್ಪುದು. ಆತ್ಮತತ್ವಯುಕ್ತನಾದ ಐಕ್ಯನೆಂಬ ಅಂಗನ ಸದ್ಭಾವಹಸ್ತದೊಳು ಮಹಾಲಿಂಗವಿರ್ಪುದು. ಮತ್ತಂ, ಘ್ರಾಣವೆಂಬಮುಖದ ಕ್ರಿಯಾಶಕ್ತಿಯ ಶ್ರದ್ಧಾಭಕ್ತಿಯೊಳು ಸುಗಂಧಪದಾರ್ಥವಿರ್ಪುದು. ಜಿಹ್ವೆಯೆಂಬಮುಖದ ಜ್ಞಾನಶಕ್ತಿಯ ನೈಷ್ಠಿಕಾಭಕ್ತಿಯೊಳು ಸಾರಸಪದಾರ್ಥವಿರ್ಪುದು. ನೇತ್ರವೆಂಬಮುಖದ ಇಚ್ಛಾಶಕ್ತಿಯ ಸಾವಧಾನಭಕ್ತಿಯೊಳು ಸಾರೂಪಪದಾರ್ಥವಿರ್ಪುದು. ತ್ವಗೇಂದ್ರಿಯೆಂಬಮುಖದ ಆದಿಶಕ್ತಿಯ ಅನುಭಾವಭಕ್ತಿಯೊಳು ಸುಸ್ವರೂಪಪದಾರ್ಥವಿರ್ಪುದು. ಶ್ರೋತ್ರೇಂದ್ರಿಯಮುಖದ ಪರಶಕ್ತಿಯ ಆನಂದವೆಂಬಭಕ್ತಿಯೊಳು ಸುಶಬ್ದಪದಾರ್ಥವಿರ್ಪುದು. ಹೃದಯೇಂದ್ರಿಯಮುಖದ ಚಿತ್‍ಶಕ್ತಿಯ ಸಮರಸಭಕ್ತಿಯೊಳು ಸುತೃಪ್ತಿಯಿರ್ಪುದು. ಇಂತೀ ಎಪ್ಪತ್ತೆರಡುಮುಖದಿ ನಿನ್ನ ಪೂಜಿಸಿ, ನಿನ್ನ ಹಾಡ್ಯಾಡಿ, ನಿನ್ನ ಧ್ಯಾನಿಸಿ, ನಿನ್ನ ಚಿಂತಿಸಿ, ನಿನ್ನೊಳು ಕೂಡುತ, ನೀನಾರೆಂದು ಹವಣಿಸಿ ಅಂತರಂಗದಿ ಪೊಕ್ಕು ನೋಡೆ ನೀನಲ್ಲದೆ ನಾನೇ ಆದ ಪರಿ ಇದೇನು ಚೋದ್ಯವೊ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತನ್ನ ತಾನರಿಯದ ಆ ಅಖಂಡ ಮಹತ್ತತ್ತ್ವವೆ ತನ್ನ ತಾನರಿದ ಚಿತ್ಕಳೆ ತಾನೇ. ಆ ಚಿತ್ಕಳೆ ತಾನೇ ತಾನೆಂಬೊ ಅರಿವು ತನಗಾದಲ್ಲಿ ತಾನೆಂಬುದೊಂದೇ ಎರಡಾಯ್ತು. ತಾನೆಂಬುದೊಂದು ಈ ಎರಡು ಮೂರು ಕೂಡಿ ಮೂರು ಒಂದೇ, ಒಂದೇ ಮೂರು, ಚಿನ್ನಾದ ಚಿದ್ಬಿಂದು ಚಿತ್ಕಳೆ ಇವು ಮೂರು ತಾನೆ. ತಾನೆ ತನ್ನ ಬಲ್ಲಾತ ಅಲ್ಲಮಪ್ರಭು ನಿರಂಜನಮೂರ್ತಿ ನೀನಾಗಿರ್ದೆಯಲ್ಲ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತಂದೆಯ ವಿಕಾರದಿಂದ ತಾಯಿಯ ಬಸುರಲ್ಲಿ ಬಂದು, ತಂದೆಯದು ಒಂದು ದಿನದ ಶುಕ್ಲ, ತಾಯಿಯದು ಒಂಬತ್ತು ತಿಂಗಳದ ಶೋಣಿತವು ಕೂಡಿ, ಗಟ್ಟಿಗೊಂಡು ಪಿಂಡವಾದ ಈ ಶರೀರದ ಕಷ್ಟ ಎಷ್ಟಂತ್ಹೇಳಲಿ, ಆ ತಾಯಿಯ ಉದರದಲ್ಲಿರ್ದ ಆ ಪರಿಯೆಂತೆಂದರೆ : ಕದ್ದ ಕಳ್ಳನ ಹೆಡಗುಡಿಯಕಟ್ಟಿ ಹೊಗಸಿದ ಸೆರೆಮನೆಗಿಂತ ಸಹಸ್ರ ಇಮ್ಮಡಿ ಉಪದ್ರವಾಯಿತು. ಎಡಬಲ ಮೂತ್ರದ ಹಡಕಿಯ ಬಾಧೆ, ನಡುವೆ ಕಡಿವ ಜಂತುಗಳ ಬಾಧೆ, ಕುದಿವ ಜಠರಾಗ್ನಿಯ ಬಾಧೆ, ಏರಿಳಿವ ಶ್ವಾಸಮಾರುತನ ಬಾಧೆ, ಹೆತ್ತವ್ವ ನುಂಗಿದ ತುತ್ತು ಅಳನೆತ್ತಿಗೆ ತಗಲಲು ಹತ್ತುಸಾವಿರ ಸಿಡಿಲು ಹೊಡೆದಂತಾಯಿತು. ಮೇಲೆ ಕುಡಿವ ನೀರಿನಿಂದಾದ ಸಂಕಟ ಹೇಳಲಳವಲ್ಲ. ಆ ತಾಯಿ ನಡಿವ ನುಡಿವ ಆಡುವ ಹಾಡುವ ಓಡುವ ಕೂಡ್ರುವ ಆಕಳಿಸುವ ಮಲಗುವ ಏಳುವ ಬೀಳುವ ಮೈಮುರಿಯುವ ಇಂತು ಅನಂತ ಬಾಧೆಯೊಳಗೆ ಸಾಯದ ಕಾರಣವೇನು ? ಕರ್ಮನಿವೃತ್ತಿ ಇಲ್ಲದಾಗಿ. ಇಂತು ದುಃಖದಲ್ಲಿ ಒಂಬತ್ತುತಿಂಗಳು ತುಂಬಿ ಸರ್ವ ಅವಯವಂಗಳ ಬಲಿದು ಎಚ್ಚರಹುಟ್ಟಿ ಜಾತಿಸ್ಮರತ್ವವ ತಿಳಿದು, ಕೆಟ್ಟೆ ಕೆಟ್ಟೆನೆಂದು ತನ್ನ ಮುನ್ನಿನ ಕರ್ಮಕ್ಕೆ ನಡುನಡುಗಿ ಕಡೆಗಾಣುವ ಪರಿಯೆಂತೆಂದು ಚಿಂತಿಸಿ, ಸರ್ವರಿಗೆ ಶಿವನೇ ದೈವವೆಂದು ಸರ್ವರ ಪಾಪಪೊರೆವಾತನೆಂದು ತಿಳಿದು, ಈ ಭವಬಾಧೆ ಬಿಡಿಸಿಕೊಳ್ಳುವುದಕ್ಕೆ ಶಿವಧೋ ಶಿವಧೋ ಶಿವಧೋ ಎಂದು ಮೊರೆಯಿಡುವ ಸಮಯಕ್ಕೆ ವಿಷ್ಣು ಪ್ರಸೂತಿಯ ಗಾಳಿಬೀಸಲು ತಲೆಮೇಲಾಗಿದ್ದ ಶಿಶುವು, ಅಗಸ ಅರವಿಯ ಹಿಂಡಿದಂತೆ, ಹೆಡಕ್ಹಿಡಿದು ಮುರಿದೊತ್ತಿ ತಲೆಕೆಳಗೆ ಮಾಡಿ ಯೋನಿದ್ವಾರದಾ ಹೊರಯಕ್ಕೆ ನೂಕಲು, ಅಕ್ಕಸಾಲಿಗನು ಕಂಬೆಚ್ಚಿನಲ್ಲಿಕ್ಕಿ ತೆಗೆದ ಚಿನ್ನದ ಸಲಾಕೆಯಂತಾಯಿತಲ್ಲಾ. ಮುಂದೆ ಭೂಸ್ಪರ್ಶನದಿಂದೆ ಹಿಂದಿನ ಜಾತಿಸ್ಮರತ್ವವ ಮರೆತು, ತನ್ನ ಮಲಮೂತ್ರದಲ್ಲಿ ತಾನೆ ಹೊರಳ್ಯಾಡಿ, ಅನಂತದುಃಖವಂ ಬಡೆದು, ಬಾಲತ್ವನೀಗಿ ಯವ್ವನಬರಲು, ತಾನು ಹ್ಯಾಂಗಾದೆನೆಂದು ತಿಳಿಯದೆ ತಾ ಹಿಂದೆ ಬಂದ ಮೂತ್ರದ ಕುಣಿಗೆ ಮನವಿಟ್ಟು ಬಾಯಿದೆರೆದು ಕುದಿಕುದಿದು ಕಿಸುಕುಳದ ಕೀವು ರಕ್ತವೊಸರುವ ಹಸಿ ಘಾಯಿ ಹಳದೊಗಲಿಗೆ ಸೋತು ಮುಪ್ಪಾಗಿ ಕೆಮ್ಮು ಕ್ಯಾಕರಿಕೆ ವಾತ ಪಿತ್ಥ ಶ್ಲೇಷ್ಮಾದಿ ಅನಂತ ರೋಗಾದಿಗಳಿಂದ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ, ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತಾನೇ ಅಖಂಡಬಯಲಾಗಿ, ಆ ಅಖಂಡ ಬೈಲು ಗಟ್ಟಿಗೊಂಡು ಚಿತ್ಪಿಂಡವಾಗಿ, ಚಿತ್‍ಶಕ್ತಿ ಕಾಂತನಾಗಿ ಚಿದ್ವಿಲಾಸವು ಕೂಡಿ, ಚಿದ್ರೂಪವ ತೋರಿ ಚಿನ್ಮಯನೆನಿಸಿ ಚಿತ್ಪ್ರಕಾಶ ನೀನಾದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತನ್ನ ವಿನೋದಕ್ಕೆ ತಾನೇ ಹಲವಾದುದರಿತು, ಹಲವಾದ ಹಲವಿನೊಳಗೆ ತಾ ಹಲವಾಗದೆ, ಹಲವು ಹಲವಲ್ಲವೆಂದು ತಾನೇ ಹಲವೆಂದು, ಹಲವು ತಾನೆಂದು, ಹಲವು ಹಲವೆಂದರೇನು, ತಾನು ತಾನೆಂದರಿಯನು. ತಾನೇ ಅಲ್ಲದೆ, ಹಲವು ಎಲ್ಲಿಹದೊ, ಹಲವು ಇಲ್ಲ. ಬೀಜ ವೃಕ್ಷವಾಯಿತ್ತೆ ? ವೃಕ್ಷ ಬೀಜವಾಯಿತ್ತೆ ? ಬೀಜವೃಕ್ಷವಾದ ಮೇಲೆ ಬೀಜವೇನಾಯಿತ್ತು ? ಇದ ತಿಳಿದು ಸರ್ವಲೀಲವ ಸಮಾಪ್ತಮಾಡಿ ಸರ್ವಸಮ ನಿರೀಕ್ಷಣೆಯಲ್ಲಿ ಸಂತುಷ್ಟವಡದು ಅಸ್ತಮಾನದ ಆದಿತ್ಯನಂತೆಯಿರುವುದೇ ಸಮ್ಯಕ್‍ಜ್ಞಾನದೊಳಗೆ ತೋರಿದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ತಾನೇ ಎರಡಾಗಿ, ತಾನೇ ಎರಡು ಒಂದಾಗಿ, ತನ್ನ ತಾನೆ ಅರ್ಚಿಸಿಕೊಳ್ಳುವ, ಅರ್ಚಿಸುವ ನುತಿಸುವ ಧ್ಯಾನಿಸುವ ಜಪಿಸುವ ಶರಣುಹೋಗುವ ಹಾಡುವ ಆಡುವ ನೋಡುವ ಕೂಡ್ರುವ ತನ್ನ ವಿನೋದ ತನಗಾಯಿತಲ್ಲದೆ ತನಗನ್ಯವೇ ಇಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ