ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹುಳಿ ಬೆಳೆದು ಸಿಹಿಯಹ ತೆರನುಂಟು. ಸಿಹಿ ಬಲಿದು ಹುಳಿಯಹ ತೆರನುಂಟು. ಇಂತೀ ಉಭಯಸ್ಥಲಭೇದ ತದ್ಭಾವವಲ್ಲದೆ ಅನ್ಯವಲ್ಲ, ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ, ಮಹಾಕಾನನದ ವಾನರವ, ಹಿಡಿವ ಪರಿಯಿನ್ನೆಂತೊ ? ಹುತ್ತವನಗೆದು, ಮಡುವ ಹೂಳಿ, ಕಾನನವ ತರಿದು, ಇಂತಿವ ಹಿಡಿಯಬೇಕು. ಸಕಲೇಂದ್ರಿಯದೊಳಗಿರ್ದು ವಸ್ತುವನರಿದನೆಂಬ ಮಿಟ್ಟೆಯ ಭಂಡರನೊಪ್ಪ ಏಣಾಂಕಧರ ಸೋಮೇಶ್ವರಲಿಂಗ.
--------------
ಬಿಬ್ಬಿ ಬಾಚಯ್ಯ
ಹಸಿವು ತೃಷೆ, ಚೇತನ ಅಚೇತನಾದಿಗಳಿಗೆಯೂ ಉಂಟು ಸ್ಥಾವರ ಚರಾದಿಗಳಿಗೆಲ್ಲಕೂ ಉಂಟು. ಆತ್ಮನರಿವಿನ ಸಂಬಂಧ ಎಳ್ಳಂತುಟೂ ಇಲ್ಲ. ಅದುಪಕಾಯದಂತೆ ತೋರಿ ಅಡಗುವ ಭೇದ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಹೊಲಬು ಹೊಲಬನೆ ಕಂಡು, ಶಿಲೆ ಕುಲದಲ್ಲಿ ಅಳಿದು, ಅನ್ನ ಅರ್ಪಿತದಲ್ಲಿ ಹಿಂಗಿ, ಉದಕ ಮಜ್ಜನದಲ್ಲಿ ನಿಂದು, ಪ್ರಸಾದ ಪ್ರಸನ್ನದಲ್ಲಿ ಐಕ್ಯವಾಗಿ, ಬಿಬ್ಬಿನ ಮನದಲ್ಲಿ ಒಬ್ಬುಳಿಯಾಯಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಹುತ್ತದೊಳಗಣ ಉಡುವಿನ ಕಣ್ಣ ಬೆಟ್ಟದ ತುದಿಯಲ್ಲಿಹ ಕಾಗೆ ಕುಟಿಕಿಹೆನೆಂದು ಹುತ್ತದ ಬಾಯ ನೋಡುತ್ತದೆ. ಉಡು ತಪ್ಪಿ ಹಾವು ಹೊರಟಿತ್ತು. ಹಾವಿನ ಕಣ್ಣ ಕಾಗೆ ಹರಿದು, ಹಾವು ಕಾಗೆಯ ಕಚ್ಚಿ ಎರಡೂ ಸತ್ತವು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಹೊಂದಿ ಕಾಬ ಸುಖವಿಲ್ಲ, ಮರೆದು ಕಾಬ ಅರಿವಿಲ್ಲ. ಉಭಯ ತನ್ನಷ್ಟವಾದಲ್ಲಿ, ಕ್ರೀ ಭಾವ ಐಕ್ಯ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಹಲವು ಬಲೆಯೊಳಗಾದ ಎರಳೆ ಕೊಲುವನ ಅಲಗ ನುಂಗಿತ್ತು. ಅಲಗರಗಿ ಬಲೆಯಳಿಯಿತ್ತು. ಹುಲ್ಲೆಯ ಹೊಲಬು ಲೇಸಾಯಿತ್ತು. ಏಣಾಂಕಧರ ಸೋಮೇಶ್ವರಲಿಂಗವನರಿತು.
--------------
ಬಿಬ್ಬಿ ಬಾಚಯ್ಯ
ಹೊಳೆಯನೀಸುವನಂತೆ ಧರೆಯ ಒಲವರವುಂಟೆ ? ಸಂಸಾರಸಂಬಂಧಿಯಾದಲ್ಲಿ ಅವಿರಳನ ಗುಣವ ವೇಧಿಸಬಲ್ಲನೆ ? ನೆಲಹೊಲವನರಿಯದವ ಕಳವಿಗೆ ಹೋದಂತಾಯಿತ್ತು. ಸ್ಥಲಕುಳವನರಿಯದವನಿಗೆ ಕ್ರೀಯ ನೆಲ ಶುದ್ಧಿಯೇಕೆ ? ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಉಭಯಭಾವವನರಿಯಬೇಕು.
--------------
ಬಿಬ್ಬಿ ಬಾಚಯ್ಯ
ಹಿಂಡಿನೊಳಗಣ ಕುರುಬನ, ತೋಳ ತಿಂಬಾಗ ಕುರಿ ಮಾಣಿಸಬಲ್ಲವೆ ? ಕಟ್ಟೊಡೆಯ ಕೊಲುವಾಗ ಮತ್ತೊಬ್ಬರು ಬೇಡಾ ಎನಲುಂಟೆ ? ಹುಟ್ಟಿಸಿದಾತ ಭವದ ಗೊತ್ತಿಂಗೆ ತಳ್ಳುವಡೆ ನಮ್ಮ ಗೊತ್ತಿನ ಅರಿವೇನ ಮಾಡುವುದು ? ಉಭಯವು ನಿನ್ನಾಟ, ಏಣಾಂಕಧರ ಸೋಮೇಶ್ವರಲಿಂಗವೆ.
--------------
ಬಿಬ್ಬಿ ಬಾಚಯ್ಯ
ಹುತ್ತದೊಳಗಣ ಹಾವ, ಕೆರೆಯೊಳಗಣ ಕಪ್ಪೆ ನುಂಗಿತ್ತು. ಸರ್ಪನ ಕಪ್ಪೆಯ ಮಕ್ಷಿಕ ನುಂಗಿತ್ತು. ಆ ಮಕ್ಷಿಕವ ಗೃಹಗಾಹಿ ನುಂಗಿತ್ತು. ಅದೇನು ಚೋದ್ಯವೆಂದರಿಯೆ, ಏಣಾಂಕಧರ ಸೋಮೇಶ್ವರಲಿಂಗ.
--------------
ಬಿಬ್ಬಿ ಬಾಚಯ್ಯ