ಅಥವಾ
(8) (2) (1) (0) (1) (0) (0) (0) (1) (0) (0) (3) (1) (0) ಅಂ (5) ಅಃ (5) (4) (0) (2) (0) (0) (1) (0) (3) (0) (0) (0) (0) (0) (0) (0) (8) (0) (2) (1) (2) (1) (0) (3) (4) (5) (0) (0) (0) (1) (5) (2) (0) (10) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಕಲ ವ್ರತನೇಮಂಗಳು ಸಂಭವಿಸಿದಲ್ಲಿ, ಅಪ್ಪುಲವಣ ಮೃತ್ತಿಕೆಲವಣ ಸ್ಥಾವರಲವಣ_ ಇಂತೀ ತ್ರಿವಿಧಲವಣಂಗಳಲ್ಲಿ ಅಧಮ ವಿಶೇಷಂಗಳನರಿದು, ಹಿಡಿವುದ ಹಿಡಿದು ಬಿಡುವುದ ಬಿಟ್ಟು, ಅಂಗದ ಕ್ರೀ, ಮನ, ಅಂಗೀಕರಿಸುವ ವರ್ತನ_ ಈ ತ್ರಿವಿಧಕ್ಕೆ ಲಿಂಗ ಸುಯಿದಾನಿಯಾಗಿರಬೇಕು ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ
ಸರ್ವಾಂಗವಾಡ, ಮುಖವಾಡ, ಆತ್ಮವಾಡ_ ಇಂತೀ ವ್ರತನೇಮದ ಕಟ್ಟಿನಲ್ಲಿ ಇಪ್ಪನಿರವು: ತನ್ನ ನೇಮಕ್ಕೆ ನೇಮವ ಅಂಗೀಕರಿಸಿದವನಲ್ಲಿ ಅಂಗಬಂಧವ ತೆಗೆದು ತೋರುವುದು, ಮುಖಬಂಧವ ತೆಗೆದು ನೋಡುವುದು, ಆತ್ಮಬಂಧವ ಬಿಟ್ಟು ಮಾತನಾಡುವುದು. ಇಂತೀ ಭಾಷೆಗೆ ಭಾಷೆ ಒಳಗಾದವನಲ್ಲಿ ಇದು ನಿಹಿತದ ವ್ರತ ಏಲೇಶ್ವರಲಿಂಗಕ್ಕೆ
--------------
ಏಲೇಶ್ವರ ಕೇತಯ್ಯ
ಸತಿ ಸುತ ಪುರುಷರಿಗೆಲ್ಲಕ್ಕೂ ಬೇರೊಂದು ಒಡಲುಳ್ಳನ್ನಕ್ಕ, ವ್ರತ ಕ್ರೀಭಾವ ಬೇರಾದಲ್ಲಿ ಬೇರೆ ಒಬ್ಬ ಒಡೆಯರ ಕಟ್ಟಣೆ ಬೇಕು. ಇದು ಸತ್ಪಥಕ್ಕೆ ಎಯ್ದುವ ಹಾದಿ, ವ್ರತಸ್ಥಲದ ಭಕ್ತಿಯುಕ್ತಿ, ಏಲೇಶ್ವರಲಿಂಗವ ಮುಟ್ಟುವ ಗೊತ್ತು.
--------------
ಏಲೇಶ್ವರ ಕೇತಯ್ಯ
ಸರ್ವವ್ಯವಧಾನಂಗಳಲ್ಲಿ ಆವಾವ ವ್ರತಭಾವವ ತಾನಂಗೀಕರಿಸಿದಲ್ಲಿ, ಒಡೆಯರು ಭಕ್ತರಠಾವಿನಲ್ಲಿ ಉಣೆಯಕ್ಕೆ ಎಡೆಗೊಡದೆ, ಕ್ರೀ ಮುಂಚು, ಅರಿವ ಆತ್ಮ ಹಿಂಚಾಗಿ, ಓಸರವಿಲ್ಲದ ತ್ರಾಸಿನಂತೆ, ಹಿಡಿದ ವ್ರತಕ್ಕೆ, ಆಚರಣೆಗೆ, ಒಡಗೂಡುವ ವಸ್ತುವಿಗೆ, ಬೇರೊಂದೆಡೆಯೆಂದು ಕಲ್ಪಿತ ಹಿಂಗಿದವಂಗೆ, ಕೊಂಡ ವ್ರತದಲ್ಲಿ ಆತ್ಮ ನಿಂದವಂಗೆ, ಆತನ ಸಂಗವೆ ಏಲೇಶ್ವರಲಿಂಗದ ಕೂಟ.
--------------
ಏಲೇಶ್ವರ ಕೇತಯ್ಯ
ಸದ್ಭಾವವ್ರತಿ, ವೀರವ್ರತಿ, ಧೀರವ್ರತಿ, ದೃಷ್ಟವ್ರತಿ, ನಿಷೆ*ಯವ್ರತಿ, ಸರ್ವಜ್ಞಾನವ್ರತಿ, ಸಂತೋಷವ್ರತಿ, ಸಂಬಂಧವ್ರತಿ, ಸಂಪದವ್ರತಿ, ಸರ್ವಾಂಗವ್ರತಿ, ಪರಿಪೂರ್ಣವ್ರತಿ, ಸರ್ವಜೀವದಯಾವ್ರತಿ, ಸಕಲವ್ರತಿ, ನಿಃಕಲವ್ರತಿ, ಪರವ್ರತಿ, ಪರಬ್ರಹ್ಮವ್ರತಿ, ಪರತತ್ತ್ವವ್ರತಿ, ಪರವಸ್ತುವ್ರತಿ, ಪಿಂಡವ್ರತಿ, ಪಿಂಡಜ್ಞಾನವ್ರತಿ, ಸ್ಥೂಲವ್ರತಿ, ಸೂಕ್ಷ್ಮವ್ರತಿ, ಕಾರಣವ್ರತಿ, ಅಂಗವ್ರತಿ, ಲಿಂಗವ್ರತಿ, ಧನವ್ರತಿ, ಧಾನ್ಯವ್ರತಿ, ದೃಕ್ಕಿಂಗೊಳಗಾದ, ತನ್ನ ಕ್ರೀಗನುಕೂಲವಾದ ಸಂಬಂಧವ್ರತಂಗಳ ಆರೋಪಿಸಿ ನಿಂದಲ್ಲಿ ನಾನಾ ಸಮೂಹದ ಸತ್ಕ್ರೀಗಳನರಿತು, ರೋಚಕ ಅರೋಚಕ ಮಾರ್ಗ ಅಮಾರ್ಗದ ಉಭಯದ ತತ್ತನರಿದು ಸಕ್ರೀಯ ಆದಿಯನರಿದು, ನಿಃಕ್ರೀಯ ನಿಜವ ಭೇದಿಸಿ ಕಂಡು ಸರ್ವದಯಾಸಂಪನ್ನನಾಗಿ ಸರ್ವಾಂಗಲಿಂಗಿಯಾಗಿ ಸಕಲವ್ರತಮಹಾರಾಜ್ಯಸ್ಥನಾಗಿ ನಿಂದ ಏಲೇಶ್ವರಲಿಂಗಕ್ಕೆ ನಾನಿಳಿದ ಬಂಟ. ವ್ರತವನರಿದು ಮರೆದವರ ಸ್ವಪ್ನದಲ್ಲಿ ಕಂಡಡೆ ಅವರಿಗಿಕ್ಕಿದ ತೊಡರು ಎಲೆದೊಟ್ಟ ನುಂಗಿದೆನು.
--------------
ಏಲೇಶ್ವರ ಕೇತಯ್ಯ
ಸರ್ವವ್ರತಸ್ಥರ ನೇಮಸ್ಥಲದ ಕಟ್ಟಳೆ: ಅಂಗವು ವ್ರತ, ಲಿಂಗವು ವ್ರತ, ಭಾವವು ವ್ರತ. ಇಂತೀ ತ್ರಿವಿಧವ್ರತವ ಆರೋಗಿಸಿ ನಡೆವಲ್ಲಿ ಬಾಹ್ಯಕ್ರೀಯಲ್ಲಿ ಲಿಂಗವ ಭಾವಿಸುವಲ್ಲಿ, ದೃಷ್ಟಿ ನಟ್ಟು ನೋಡುವಲ್ಲಿ ತನ್ನ ವ್ರತದಾಳಿ ಮಿಶ್ರವಿಲ್ಲದೆಯಿಪ್ಪುದು ಏಲೇಶ್ವರಲಿಂಗದ ವ್ರತದಂಗದ ಭಾವ.
--------------
ಏಲೇಶ್ವರ ಕೇತಯ್ಯ
ಸಂಚಿತ ತನುವಿನ ಕ್ರೀ, ಪ್ರಾರಬ್ಧ ಆತ್ಮನ ಕ್ರೀ, ಆಗಾಮಿ ಅರಿವಿನ ಕ್ರೀ. ಇಂತೀ ತ್ರಿವಿಧಕ್ರೀಯ ನೆರೆ ಅರಿದವಂಗೆ ಹಿಂದಣ ತಾಗು-ಮುಂದಣ ಸೋಂಕು. ಮತ್ತೆಲ್ಲಾ ಎಡೆಯಲ್ಲಿ ನಿಂದ ವ್ರತದ ಸಂಬಂಧವ ಬಲ್ಲ ಆ ವ್ರತ ಅರುವತ್ತೈದನೆಯ ಕ್ರೀ. ಆ ಭಾವ ಆರೋಪವಾದಲ್ಲಿ ಏಲೇಶ್ವರಲಿಂಗನು ವ್ರತಸ್ಥನಾದ.
--------------
ಏಲೇಶ್ವರ ಕೇತಯ್ಯ
ಸರ್ವಸಮಯಾಚಾರ, ಸಕಲಭೋಗಸಮಯಾಚಾರ, ಇಂತೀ ಭೇದಂಗಳಲ್ಲಿ ಕೊಡುವ-ಕೊಂಬುದ-ಒಡಗೂಡುವುದ, ಒಡೆಯಂಗೆ ಕೊಟ್ಟು, ಅವರ ಅಡಿವಿಡಿದು ಒಡೆಯನ ನಿರೂಪದಿಂದ ತನ್ನ ಅಡಿಯೆಡೆ ಕೊಡುವ - ಕೊಂಬುವ ಸುಖಭೋಗಂಗಳು ಮುಂತಾಗಿ ಇವ ಒಡೆಯಂಗಿತ್ತು ತಾ ಕೊಂಬುದು, ಒಡೆಯರ ಕಟ್ಟಳೆ. ಹೀಗಲ್ಲದೆ ಹಾಸ ತೆಗೆದ ತುಡುಗುಣಿಯಂತೆ ಕಡಿವಂಗೆ ಮತ್ತೆ ಒಡೆಯರ ಕಟ್ಟಳೆಯಿಲ್ಲ, ಏಲೇಶ್ವರಲಿಂಗಕ್ಕೆ ದೂರವೆಂಬೆ.
--------------
ಏಲೇಶ್ವರ ಕೇತಯ್ಯ
ಸರ್ವಸಮೂಹದಲ್ಲಿ ಏಕಪ್ರಸಾದವ ಕೊಂಬಲ್ಲಿ, ತಮ್ಮ ಕ್ರೀ ಭಾವ ಅರಿವು ಆಚರಣೆಗೆ ಒಳಗಾಗಿ, ಅರ್ಥ ಪ್ರಾಣ ಅಭಿಮಾನಂಗಳಲ್ಲಿ ಕಟ್ಟುಮೆಟ್ಟಿಲ್ಲದೆ, ತಥ್ಯ ಮಿಥ್ಯಾದಿಗಳಿಗೆ ಹೊತ್ತು ಹೋರದೆ, ಏಕ ಪ್ರಸಾದವ ಕೊಂಡಂತೆ ಆತ್ಮ ಏಕವಾಗಿಪ್ಪುದು ವಿಹಿತಕ್ರೀ. ಈ ಗುಣ ಏಲೇಶ್ವರಲಿಂಗನು ಸರ್ವಶೀಲವಂತನಾಗಿ ಕೊಂಬ ಪ್ರಸಾದ.
--------------
ಏಲೇಶ್ವರ ಕೇತಯ್ಯ
ಸಂದೇಹವುಂಟಾದಲ್ಲಿ ಆ ವ್ರತವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಾಣಿಸಿಕೊಂಡು ಅನುಮಾನದಲ್ಲಿ ಅರಿದು ವಿಚಾರಿಸಿ, ಮರವೆ ಅಹಂಕಾರದಿಂದ ಬಂದ ಉಭಯವ ತಿಳಿದು ದೋಷವಿಲ್ಲದಂತೆ ಪರಿದೋಷವ ಕಂಡು, ಶರಣತತಿ ಮುಂತಾಗಿ ಪ್ರಾಯಶ್ಚಿತ್ತವೆಂಬುದು ವರ್ತಕ ವ್ರತ. ಇಂತಿವನರಿದು ಅಲ್ಲ-ಅಹುದೆನ್ನದೆ, ಎಲ್ಲರ ಮನಕ್ಕೆ ವಿರೋಧವ ತಾರದೆ, ಅಲ್ಲಿ ಆತ್ಮನ ಬೆರೆಯದೆ, ಕಲ್ಲಿಯ ಮಧ್ಯದಲ್ಲಿ ಜಾರಿದ ಅಪ್ಪುವಿನಂತೆ ಉಭಯದಲ್ಲಿಗೆ ಕಾಣಿಸಿಕೊಳ್ಳದ ವ್ರತಾಂಗಿ [ಎ]ಲ್ಲಿಯೂ ನಿಸ್ಸೀಮ. ಅದು ಅರುವತ್ತಮೂರನೆಯ ಶೀಲ, ಅರಿಬಿರಿದಿನ ಭಾವ ಏಲೇಶ್ವರಲಿಂಗಕ್ಕೆ.
--------------
ಏಲೇಶ್ವರ ಕೇತಯ್ಯ