ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯದ ಕೈಯಲ್ಲಿಪ್ಪುದು ರೂಪುವಿಡಿದ ಲಿಂಗ. ಮನದ ಕೊನೆಯಲ್ಲಿಪ್ಪುದು ಸಾಕಾರವಿರಹಿತಲಿಂಗ. ಅರಿವಿನ ಭೇದಂಗಳ ತಿಳಿದು ನೋಡಿ, ಕಂಡೆಹೆನೆಂಬ ಸನ್ಮತ ಸದ್ಭಾವಿಗಳು ಕೇಳಿರೊ. ಅದು ಚಿದ್ಘನ ಚಿದಾದಿತ್ಯ ಚಿತ್ಸ್ವರೂಪ ಸದಮಲಾನಂದ ಗೂಡಿನ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ. ಇದಾರಿಗೂ ಅಪ್ರಮಾಣಮೂರ್ತಿ.
--------------
ಮನುಮುನಿ ಗುಮ್ಮಟದೇವ
ಕುಲ ಜಾತಿ ವರ್ಗದ ಶಿಶುಗಳಿಗೆ ಹಲವು ಭೇದದ ಹಾಲು. ನಲವಿಂದ ತಮ್ಮ ತಮ್ಮ ಮೊಲೆಗಳ ಉಂಡಲ್ಲದೆ ಬೆಳವಣಿಗೆಯಿಲ್ಲ. ಹಾಲು ದೇಹ ಹಲವಾದಡೆ, ಅಳಿವು ಉಳಿವು ಎರಡೇ ಭೇದ. ಏನನರಿತಡೂ ಜೀವನ ನೋವನರಿಯಬೇಕು. ನುಡಿ ನಡೆ ಎರಡಿಲ್ಲದೆ ದೃಢವಾಗಿ ಇರಬೇಕು. ಬಿರುದು ಹಿರಿಯರೆಂದಡೆ ಬಿಡಬೇಕಲ್ಲದೆ, ಕಡಿಯಬಹುದೆ ಅಯ್ಯಾ ? ಮಾತಿನಲ್ಲಿ ಬಲ್ಲವರಾದಡೆ, ನೀತಿಯಲ್ಲಿ ಮರೆದಡೆ ಕೊಡನೊಡೆದ ಏತದ ಕಣೆಯಂತೆ, ಶರೀರದ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಣ್ಣು ಮೂರು, ತಲೆಯಾರು, ಬಾಯಿಯೆಂಟು, ಭಗವೊಂಬತ್ತು. ಆರ ಬಗೆಗೂ ಅಳವಡದ ಬಾಲೆ, ಬಾಲನನರಸಿ ಬಳಲುತ್ತೈದಾಳೆ. ಆ ನಾಳಕ್ಕೆ ಒಡೆಯನಿಲ್ಲದೆ, ಬಾಲನ ಬಗೆ ಎಂತಪ್ಪದು ಎನಗೆ ಹೇಳಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು. ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು. ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು. ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು. ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ. ಆರಡಗಿ ಮೂರರಲ್ಲಿ ಮುಗ್ಧನಾಗಿ, ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ.
--------------
ಮನುಮುನಿ ಗುಮ್ಮಟದೇವ
ಕಣ್ಣೆಂಬ ಹರುಗೋಲದಲ್ಲಿ ಮಾರ ಅಂಬಿಗನಾಗಿ, ಮಥನದ ಹೊಳೆಯಲ್ಲಿ ರಸದ ಕೋಲನಿಕ್ಕಿ ಒತ್ತಲಾಗಿ, ಮಸಕಿತ್ತು ಹರುಗೋಲು. ದೆಸೆಗೆ ಹೋಗಲಾರದು, ತಡಿಗೆ ಸಾಗದು, ಮಡುವಿನಲ್ಲಿ ಮರಳಿತ್ತು. ಇದಕಂಜಿ ನಡುಗಿದೆ, ಹರುಗೋಲ ಕಂಡು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿಯದೆ.
--------------
ಮನುಮುನಿ ಗುಮ್ಮಟದೇವ
ಕಣ್ಣಿನೊಳಗಣ ಕಸ, ಕೈಯೊಳಗಣ [ಮೆ]ಳೆ, ಬಾಯೊಳಗಣ ಬಗದಳ, ಮನದ ಶಂಕೆ ಹರಿದಲ್ಲದೆ ಪ್ರಾಣಲಿಂಗಿಯಾಗಬಾರದು. ಕಣ್ಣಿನ ನೋಟ, ಕೈಯ ಕುರುಹು, ಬಾಯ ಬಯಕೆ, ಚಿತ್ತದ ವೈಕಲ್ಯ ನಷ್ಟವಾಗಿಯಲ್ಲದೆ ವಸ್ತುನಿರ್ದೇಶವನರಿಯಬಾರದು. ಅರಕೆ ಅರತು ಅರಿತಡೆ, ಅದೇ ವಸ್ತು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಣ್ಣಿನಲ್ಲಿ ನೋಡುವಡೆ ತೊಗಲಿನವನಲ್ಲ. ಕೈಯಲ್ಲಿ ಹಿಡಿವಡೆ ಮೈಯವನಲ್ಲ. ಭಾವದಲ್ಲಿ ನೋಡುವಡೆ ಬಯಲಸ್ವರೂಪ. ನಿನ್ನೊದಗ ಏತರಿಂದರಿವೆ ? ಎನ್ನ ಭ್ರಾಂತಿನ ಬಲೆಗೆ ಸಿಕ್ಕಿಸಿಹೋದೆ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕೊಲುವಂಗೆ ಜೀವದ ದಯವಿಲ್ಲ. ಪರಾಂಗನೆಯ ಬೆರಸುವಂಗೆ ಪರಮೇಶ್ವರನ ಒಲವರವಿಲ್ಲ. ಪರರುವ ಬಂಧಿಸಿ ಬೇಡುವಂಗೆ ಧನದ ಒಲವರವಿಲ್ಲ. ಪ್ರಾಣತ್ಯಾಗಿಗೆ ಕಾಣಿಯಾಚಿಯ ಕೇಣಸರವಿಲ್ಲ. ಅಘಹರನ ಶರಣನಾಗಿ, ಜಗವ ಬೋಧಿಸದೆ ಜಗಭರಿತನಾಗಿ ಇರಬೇಕು. ಆತ ಅಘಹರಮೂರ್ತಿ, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನೆ.
--------------
ಮನುಮುನಿ ಗುಮ್ಮಟದೇವ
ಕಾಯಸೂತಕವಳಿದು ಜೀವದ ಭವ ಹಿಂಗಿ, ಜ್ಞಾನಗುರು ಕೊಟ್ಟ ಭಾವದ ಲಿಂಗವಿರೆ, ಮತ್ತೇನನು ನೋಡಲೇಕೆ ? ಗಂಡನುಳ್ಳವಳಿಗೆ ಮತ್ತೊಬ್ಬ ಬಂದಡೆ ಚಂದವುಂಟೆ ? ಅದರಂಗ ನಿಮಗಾಯಿತ್ತು. ಲಿಂಗವಿದ್ದಂತೆ ಜೀವಿಗಳ ಅಂಗವ ನೋಡಿ ಬದುಕಿಹೆನೆಂಬ ಭಂಡರಿಗೇಕೆ ? ಗುಡಿಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ ಅವರ ಬಲ್ಲನಾಗಿ ಒಲ್ಲ.
--------------
ಮನುಮುನಿ ಗುಮ್ಮಟದೇವ
ಕಲ್ಲು, ಹೆಂಟೆ ಹೋರಿಯಾಡಿ, ಕಲ್ಲು ಕರಗಿ, ಹೆಂಟೆ ಉಳಿಯಿತ್ತು. ಅಳಿದ ಕಲ್ಲಿಗೆ ಹೆಂಟೆ ಹಿಂಡಿಯ ಕೂಳನಟ್ಟು, ಉಂಬವರಿಲ್ಲದೆ ಅಳುತ್ತಿದ್ದಿತ್ತು. ಎನ್ನ ಗೂಡಿನ ಗುಮ್ಮಟನಾಥನಲ್ಲಿ, ಅಗಮ್ಯೇಶ್ವರಲಿಂಗ ಸತ್ತು ಕಾಣಲರಿಯದೆ.
--------------
ಮನುಮುನಿ ಗುಮ್ಮಟದೇವ
ಕೂಟದಿಂದ ಕೂಸು ಹುಟ್ಟುವಡೆ ಬ್ರಹ್ಮನ ಆಟಕೋಟಲೆಯೇಕೆ ? ಸ್ಥಿತಿ ಆಟದಿಂದ ನಡೆವಡೆ ವಿಷ್ಣುವಿನ ಭೂತಹಿತವೇಕಯ್ಯಾ ? ಘಾತಕದಿಂದ ಕೊಲುವಡೆ ರುದ್ರನ ಆಸುರವೇತಕ್ಕೆ ? ಇಂತಿವೆಲ್ಲವೂ ಜಾತಿಯುಕ್ತವಲ್ಲದೆ ತಾ ಮಾಡುವ ನೀತಿಯುಕ್ತವಲ್ಲ. ಇದಕಿನ್ನಾವುದು ಗುಣ ? ಭೇದಿಸಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕೈ ಗರ್ಭವಾಗಿ ನವಮಾಸ ತುಂಬಿತ್ತು. ಕಂಗಳಲ್ಲಿ ಬೆಸನಾಯಿತ್ತು. ಬೆನ್ನಿನಲ್ಲಿ ಮೊಲೆ ಹುಟ್ಟಿ, ನಡುನೆತ್ತಿಯಲ್ಲಿ ಹಾಲು ಬಂದಿತ್ತು. ನಾಲಗೆಯಿಲ್ಲದ ಶಿಶುವಿಂಗೆ ಹಾಲು ಎಯ್ದದೆ ಬಾಯ ಬಿಡುತ್ತಿದ್ದಿತ್ತು. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ ಗರ್ಭೀಕರಿ[ಸೆನೆಂ]ದು.
--------------
ಮನುಮುನಿ ಗುಮ್ಮಟದೇವ
ಕಣ್ಣಿನಲ್ಲಿ ಕಂಡೆಹೆನೆಂದಡೆ, ಕಣ್ಣು ಎನ್ನವಲ್ಲ. ಕೈಯಲ್ಲಿ ಮುಟ್ಟಿಹೆನೆಂದಡೆ, ಕೈಯೆನ್ನವಲ್ಲ. ಮನದಲ್ಲಿ ನೆನೆದೆಹೆನೆಂದಡೆ, ಮನ ಎನ್ನದಲ್ಲ. ನಾ ನಡೆವಡೆ ಸ್ವತಂತ್ರಿಯಲ್ಲ. ಎನಗೆ ಅರಿಕೆಯಾದಡೆ ನಿನ್ನ ಇದಿರಿಡಲೇಕೆ ? ಇದಿರಿಂಗೆ ಕುರುಹು, ಮನಕ್ಕೆ ಅರುವು, ಉಭಯದ ತೆರ ನೀನೆ. ಗೂಡಿನ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ಒಳಹೊರಗಿನಲ್ಲಿ ಪರಿಪೂರ್ಣ ನೀನು ನೀನೆ.
--------------
ಮನುಮುನಿ ಗುಮ್ಮಟದೇವ
ಕಾಲನ ಗೆದ್ದೆಹೆನೆಂದು ಮಾಡಿ ಬೇಡದ ನಿತ್ಯಾರ್ಚನೆ. ಘಟಲಿಂಗಕ್ಕೆ ಹೊತ್ತಿನ ಗೊತ್ತಿನ ಕಟ್ಟುಂಟೆ ? ಕತ್ತಲೆಯ ಮನೆಯಲ್ಲಿ ಕುಳಿತು ಸಕ್ಕರೆಯ ಮೆದ್ದಡೆ, ಕತ್ತಲೆಗೆ ಅಂಜಿ ಮೆತ್ತನಾಯಿತ್ತೆ ಸಕ್ಕರೆಯ ಮಧುರ ? ಚಿತ್ತದ ಪ್ರಕೃತಿ ಹಿಂಗಿ, ನಿಶ್ಚಯ ನಿಜ ನೆಮ್ಮುಗೆಯಲ್ಲಿ ಮಾಡುವಡೆ, ಚಿತ್ತದಲ್ಲಿ ಅಚ್ಚೊತ್ತಿದಂತೆಯಿಪ್ಪ ಹೊತ್ತಿನ ಗಡಿಯವನಲ್ಲ. ಚಿತ್ತಜಹರ ಗುಡಿಯೊಡೆಯ ಗುಮ್ಮಟನ ಅಗಮ್ಯೇಶ್ವರಲಿಂಗ ಕಟ್ಟುಗೊತ್ತಿನೊಳಗಲ್ಲ.
--------------
ಮನುಮುನಿ ಗುಮ್ಮಟದೇವ
ಕರಣಂಗಳ ಕಳೆದು ಕಂಡೆಹೆನೆಂದಡೆ, ಕುರುಹಿಂಗೆ ಅಗೋಚರ. ಇಂದ್ರಿಯಂಗಳಿದ್ದು ಕಂಡೆಹೆನೆಂದಡೆ, ಅವು ಕೊಂದು, ತೂಗುವದ ಅರಿ. ಹಿಂಗಬಾರದು, ಹಿಂಗದಿರಬಾರದು. ಇದರ ಸಂಗಸುಖವ ಹೇಳು, ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಾಡುಗುರಿ [ತಾ]ನೆಯಾಗಿ ಬಂದು, ಊರೊಳಗೆ ಮೂರು ಮರಿಯನೀಯಿತ್ತು. ಅವರ ವರ್ಣ ಒಂದೆಡ, ಒಂದು ಕಾಡ, ಒಂದು ಎಲ್ಲರ ಕೂಡಿದ ಬಣ್ಣ ಹೆಂಗುರಿ ಸತ್ತಿತ್ತು, ಮರಿಗೆ ಒಡೆಯರಿಲ್ಲ. ಆ ಮರಿಯ ಕಾವಡೆ, ಕಾಲಿಲ್ಲದೆ ಕೈಯಿಲ್ಲದೆ ಕಣ್ಣಿಲ್ಲದೆ ಕಾಯಬೇಕು. ಆ ಮರಿ ಅರಿದು ನಮಗೆ ಇನ್ನಾರು ಇಲ್ಲಾ ಎಂದು ಎಡಕಾಡನೊಳಗಡಗಿ, ಕಾಡ ನಾನಾ ವರ್ಣದೊಳಗಡಗಿ, ನಾಡು ನಾದದೊಳಗಡಗಿ, ನಾನಾ ವರ್ಣ ನಾಡಿನೊಳಗಡಗಿ, ನಾದ ಸುನಾದದಲ್ಲಿ ಅಡಗಿ, ಸುನಾದ ಸುರಾಳವಾಗಿ ಇದ್ದಲ್ಲಿ, ಗುಡಿಯ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ನೀ ನಿರಾಳವಾಗಿ ಇದ್ದೆ.
--------------
ಮನುಮುನಿ ಗುಮ್ಮಟದೇವ
ಕಲ್ಲು ಕವಣೆಯ ನುಂಗಿ, ಇಡುವಾತನ ಹಣೆ ತಾಗಿತ್ತು. ಹಣೆ ಹನಿತು, ಮೂರು ಸೇ[ದೆ]ಯಾಯಿತ್ತು. ಸೇ[ದೆ]ಯಲ್ಲಿ ಆರುಮಂದಿ ಹುಟ್ಟಿ, ಮೂವರ ಕೊಂದು, ಮೂವರು ಆಲುತ್ತೈದಾರೆ. ಆಲುವೆಗೆ ಹೊರಗಾದ ಅನಾಮಯ ಅನುಪಮ, ಎನ್ನ ಗುಡಿಯ ಗುಮ್ಮಟೇಶ್ವರನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕಾಲೆರಡರಲ್ಲಿ ನಿನ್ನಾಟವೆ ? ಕೈಯೆರಡರಲ್ಲಿ ನಿನ್ನ ಬಂಧವೆ ? ಮೈಯೊಂದರಲ್ಲಿ ನಿನ್ನ ಭೋಗವೆ ? ಬಾಯೊಂದರಲ್ಲಿ ನಿನ್ನ ತೃಪ್ತಿಯೆ ? ಅಯಿದರ ಗುಹೆಯೊಳಗೆ ಗುಹೇಶ್ವರನಾದೆ. ಮೂರರ ಗೂಡಿನೊಳಗೆ ಗುಮ್ಮಟನಾದೆ. ಆರರ ಅಂಗವ ಹರಿದು, ಅಗಮ್ಯೇಶ್ವರಲಿಂಗವಾದೆ. ಮೀರಿ ಕಾಬುದೇನು ಹೇಳಿರಣ್ಣಾ ?
--------------
ಮನುಮುನಿ ಗುಮ್ಮಟದೇವ
ಕಾಯವಿಡಿದು ಸೋಂಕಿದುದೆಲ್ಲ, ಪ್ರಕೃತಿಗೆ ಒಳಗು. ಜೀವವಿಡಿದು ಸೋಂಕಿದುದೆಲ್ಲ, ಭವಕ್ಕೊಳಗು. ಕಾಯದ ಅಳಿವನರಿತು, ಜೀವದ ಉಳಿವನರಿತು, ಉಭಯದ ಠಾವನರಿತು, ಕಾಯದ ಜೀವದ ಭಿನ್ನದ ಬೆಸುಗೆಯ ಠಾವನರಿತು, ಕೂಡಬಲ್ಲಡೆ ಯೋಗ. ಅದು ಲಿಂಗದ ಭಾವಸಂಗ, ಇದನರಿ. ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗವ ಹೆರೆಹಿಂಗದಿರು.
--------------
ಮನುಮುನಿ ಗುಮ್ಮಟದೇವ