ಅಥವಾ
(9) (3) (3) (1) (1) (0) (0) (0) (2) (0) (0) (2) (0) (0) ಅಂ (1) ಅಃ (1) (19) (0) (4) (1) (0) (0) (0) (0) (0) (0) (0) (0) (0) (0) (0) (7) (0) (0) (1) (5) (4) (1) (9) (3) (5) (0) (2) (0) (0) (4) (2) (0) (3) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹಾವಿನ ಹಲ್ಲಿನ ವಿಷದ ಕೊಳಪೆಯ ಮೂಲೆಯಲ್ಲಿ, ಮೂರು ಕಪ್ಪೆ ಹುಟ್ಟಿದವು. ಒಂದಕ್ಕೆ ಕಾಲಿಲ್ಲ, ಒಂದಕ್ಕೆ ಬಾಯಿಲ್ಲ, ಒಂದಕ್ಕೆ ಕಣ್ಣಿಲ್ಲ. ಕಾಲಿಲ್ಲದ ಕಪ್ಪೆ ಮೂರುಲೋಕವ ಸುತ್ತಿತ್ತು. ಬಾಯಿಲ್ಲದ ಕಪ್ಪೆ ಬ್ರಹ್ಮಾಂಡವ ನುಂಗಿತ್ತು. ಕಣ್ಣಿಲ್ಲದ ಕಪ್ಪೆ ಕಂಗಾಣದವರ ಕಂಡಿತ್ತು. ಈ ಖಂಡಮಂಡಲದ ಅಂಗವ ಬಿಡಿಸು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಹಿಮಾಚಲದ ತಳದಲ್ಲಿ, ಮಹೀತಳದ ಮಧ್ಯದಲ್ಲಿ, ಹುಟ್ಟಿದಳೊಬ್ಬ ರಾಕ್ಷಸಿ. ಮುಂದೆ ಮೂವರು ಮಕ್ಕಳು, ಹಿಂದೆ ಐವರು ಒಡಹುಟ್ಟಿದವರು. ತಂದೆ ಎಡದಲ್ಲಿ, ತಾಯಿ ಬಲದಲ್ಲಿ, ಬಂಧುಗಳೆಲ್ಲರು ಹಿಂದೆ ಮುಂದೆ ಸುತ್ತಿ, ರಾಕ್ಷಸಿ ಮುಂದಳ ಹಿಂದಳ ಸುತ್ತಿಪ್ಪ ಬಂಧುಗಳ ಒಂದೆ ಬಾರಿ ನುಂಗಿದಳು. ಕೈಗೆ ಮೈಯವಳಲ್ಲ, ಮನಕ್ಕೆ ಸಂಶಯದವಳಲ್ಲ. ಇವಳ ಕೊಂದಡೆ ಸಂಹಾರಕ್ಕೆ ಇಲ್ಲ. ಇವಳಿದ್ದಡೆ ಎನ್ನ ಮನಕ್ಕೆ ಭಯಂಕರ. ಈ ಭೀತಿಯ ಬಿಡಿಸು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಹಾದಿಯ ತೋರಿದವರೆಲ್ಲರು ಭಯಕ್ಕೆ ನಿರ್ಭಯವಂತರಾಗಬಲ್ಲರೆ ? ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು ವೇದಿಸಬಲ್ಲರೆ ನಿಜತತ್ವವ ? ಹಂದಿಯ ಶೃಂಗಾರ, ಪೂಷನ ಕಠಿಣದಂದ, ಅರಿವಿಲ್ಲದವನ ಸಂಗ, ಇಂತಿವರ ಬಿಡುಮುಡಿಯನರಿ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ, ಎಡೆಬಿಡುವಿಲ್ಲದೆ ಒಡಗೂಡು.
--------------
ಮನುಮುನಿ ಗುಮ್ಮಟದೇವ
ಹಾರುವ ಹಕ್ಕಿಯ ಹಿಡಿದೆ, ಬೀಸುವ ಗಾಳಿಯ ಹಿಡಿದೆ. ವೈಶಾಖದ ಬಿಸಿಲ ಹಿಡಿದು ಜಗವ ಹಾಸಿ ಕಟ್ಟಿದೆ. ಒಂದು ತಾರು ಗಂಟು, ಒಂದು ಜಿಗುಳು ಗಂಟು, ಒಂದು ಕುರುಹು ಗಂಟು. ಮೂರರ ಮುದ್ರೆಯ ಮೀರಿ ಹಾರಿತ್ತು ಹಕ್ಕಿ. ಬೀಸಿತ್ತು ಗಾಳಿ, ಹುಯ್ಯಿತ್ತು ಬಿಸಿಲು. ಬಿಸಿಲ ಢಗೆ ತಾಗಿ, ವಸುಧೆಯವರೆಲ್ಲರೂ ಬಾಯಿ ಕಿಸವುತ್ತಿದ್ದರು. ಕಿಸುಕುಳರ ನೋಡಿ, ಶರೀರದ ಗೂಡಿನ ಒಡೆಯ ಗುಮ್ಮಟನ ಪ್ರಾಣ, ಅಗಮ್ಯೇಶ್ವರಲಿಂಗ ಒಡಗೂಡುತ್ತಿದ್ದ.
--------------
ಮನುಮುನಿ ಗುಮ್ಮಟದೇವ
ಹುಲ್ಲೆಯ ಕಣ್ಣಿನಲ್ಲಿ ಹುಲಿ ನಿಂದಿದ್ದುದ ಕಂಡೆ. ಹುಲ್ಲಿನ ಮಧ್ಯದಲ್ಲಿ ಪಾವಕ ಅಲ್ಲಾಡಲಮ್ಮದೆ ಇದ್ದುದ ಕಂಡೆ. ಎನ್ನ ಗುಡಿಯ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ, ಅಡಿಯಿಡಲಮ್ಮದುದ ಕಂಡೆ.
--------------
ಮನುಮುನಿ ಗುಮ್ಮಟದೇವ
ಹಾವು ಹಲ್ಲಿ ಮಾರ್ಜಾಲ ಇವ ಹಾಯಿಸಿ ಕಂಡೆಹೆನೆಂಬುದರಿಂದ ಕಡೆಯೆ, ಲಿಂಗವ ಹಿಡಿದಿದ್ದ ಸಾಕಾರ ಅಂಗನ ಇರವು ? ಮುಂದೆ ಬಹುದ ಹೇಳಿಹೆನೆಂದು ವಿಹಂಗನನೆಬ್ಬಿಸಿ, ಹೋಹರ ಕಂಡು ನಂಬುವರಿಂದ ಕಡೆಯೆ, ಲಿಂಗವ ಹಿಡಿದ ಅಂಗ ? ಛೀ, ಸಾಕು ಸುಡು. ಇವರಿಗೆ ಲಿಂಗ ಕೊಟ್ಟ ದರುಶನ[ವ], ಭಂಡನ ಕಂಡು ಅಡಗಿದ ಗುಡಿಯೊಳಗೆ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಹುಟ್ಟಿದಳೊಬ್ಬ ಮೂದೇವಿ ಜಗವ ರಕ್ಷಿಸಿಹೆನೆಂದು. ಬಾಯಲ್ಲಿ ಬಂಧ, ಕೈಯಲ್ಲಿ ಕೂರಲಗು, ಮಂಡೆಯಲ್ಲಿ ಕಾಲು ಹುಟ್ಟಿ, ಮನಮಂದಿರದಲ್ಲಿ ತಿರುಗಾಡುತ್ತಿದ್ದಾಳೆ. ಕೂಡಿಕೊಂಡೆ ಕೂಪಳಲ್ಲ, ಅಗಲುವುದಕ್ಕೆ ಹಗೆಯಲ್ಲ. ಇಂತಿವಳ ಒಡಗೂಡುವ ಭೇದವಾವುದು ? ಕರುಣಿಸು, ಎನ್ನೊಡೆಯ ಗೂಡಿನ ಗುಮ್ಮಟನಾಥನ ಪ್ರಾಣಮೂರ್ತಿ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಹೇಮದ ಬಣ್ಣ, ನಾನಾ ಬಗೆಯಲ್ಲಿ ತೋರುವ ಪರಿಕೂಟದ ಕಪಟದಿಂದ, ಕಪಟವ ಕಳೆದು ನಿಂದಲ್ಲಿ, ಅದೇತರ ಗುಣ ? ಒಂದಲ್ಲದೆ ಈ ಪಥ ತಪ್ಪದು, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅಂಗವ ಕಳೆದು ಉಳಿದ ಶರಣಂಗೆ.
--------------
ಮನುಮುನಿ ಗುಮ್ಮಟದೇವ