ಅಥವಾ
(5) (3) (4) (0) (5) (0) (0) (0) (1) (1) (0) (1) (1) (0) ಅಂ (3) ಅಃ (3) (16) (0) (2) (2) (0) (2) (0) (2) (0) (0) (0) (0) (0) (0) (0) (6) (0) (0) (1) (5) (3) (1) (7) (2) (8) (1) (1) (0) (4) (1) (2) (0) (3) (10) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕುರುಹಿನ ಕುರುಹಿನಲ್ಲಿ, ಅರಿವಿನ ಅರಿವಿನಲ್ಲಿ ಜ್ಞಾನದ ಜ್ಞಾನದಲ್ಲಿ ಇಂತೀ ಸಲೆಸಂದ ಭೇದಂಗಳಲ್ಲಿ ನಿಂದು ನೋಡು. ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಅರಿವಿನ ಅರಿವು, ಬೆಳಗಾಯಿತ್ತು.
--------------
ಬಿಬ್ಬಿ ಬಾಚಯ್ಯ
ಕೈ ಬಾಯಾಡುವಲ್ಲಿ ಕುರುಹಿನ ಭೇದವನರಿದು ಒಡಗೂಡಬೇಕು. ಆ ಗುಣವಡಗೆ, ಬೇರೊಂದಿದಿರೆಡೆಯಿಲ್ಲದಿರೆ ಏನೂ ಎನಲಿಲ್ಲ. ಕುರುಹಿಂಗೆ ಕುರುಹ ತೋರಿ, ಅರಿವಿಂಗೆ ಅರಿವ ಕೊಟ್ಟು ನಿಜವೆ ತಾನಾಗಿದ್ದಲ್ಲಿ ಉಭಯನಾಮವಡಗಿತ್ತು ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಕಾಯದ ಮರೆಯ ಜೀವ, ಹೇಗಿಹುದೆಂಬುದನರಿ. ಜೀವದ ತ್ರಾಣದ ಕಾಯ, ಹೇಗಳಿವುದೆಂಬುದನರಿ. ಇಂತೀ ಉಭಯಸ್ಥಲ. ಕ್ರೀ ನಿಃಕ್ರೀ ಎಂಬಲ್ಲಿ ಅದೊಂದು ಭೇದ, ಏಣಾಂಕಧರ ಸೋಮೇಶ್ವರಲಿಂಗ ಸ್ವರೂಪನಾದ ಕಾರಣ.
--------------
ಬಿಬ್ಬಿ ಬಾಚಯ್ಯ
ಕುರುಡ ಕನ್ನಡಿಯ ಪಿಡಿದಲ್ಲಿ ಅದೇನ ಒಡಗೂಡುವ ? ಬಧಿರಂಗೆ ಗಾಂಧರ್ವವಿರಲಿ ಸ್ವರಸಂಚವುಂಟೆ ? ಅರಿವುಹೀನಂಗೆ ಘಟಧರ್ಮದ ಪೂಜೆಯಲ್ಲದೆ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಅರಿವು ಸನ್ನದ್ಧವಾಗಬೇಕು.
--------------
ಬಿಬ್ಬಿ ಬಾಚಯ್ಯ
ಕಾಯಿ ಒಂದರಲ್ಲಿ ಶಾಖೆ ಹಲವಹ ತೆರದಂತೆ, ಅರಿವು ಒಂದೆ, ರೂಪು ಭಿನ್ನಂಗಳಾಗಿ ತೋರುವ ತೆರದಂತೆ, ಘಟದ ವಾರಿಯಲ್ಲಿ ತೋರುವ ಇಂದುವಿನಂತೆ, ಅದೊಂದೆ ಭೇದ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಕಣ್ಣಿನೊಳಗಣ ಕವಲು ಮೂವರು ಅಣ್ಣಂದಿರು ಮನೆಯಾಯಿತ್ತು. ಮನೆಯ ಮರುಳು ನುಂಗಿ ಕವಡಿಕೆಯ ಕವಲು ಹಿಸಿದು ಕಣ್ಣು ಕಂಡಲ್ಲಿಯೇ ಅಡಗಿತ್ತು, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಕ್ಷೀರ ಎಡೆಗೊಟ್ಟು ನಿಂದಲ್ಲಿ ತನ್ನಯ ಗುಣ ಬಲಿದು ಕ್ಷಾರವಾಯಿತ್ತು. ಅದು ತನಗೆ ಅನ್ಯಭಿನ್ನವಲ್ಲ. ಪುರುಷ ಸತಿ ಕೂಡೆ ವಿಶೇಷ ರೂಪಾದಂತೆ ಕ್ರೀ ಜ್ಞಾನ ಸಂಭಾಸನದಿಂದ ಚಿದ್ಘನದೊದಗು ಏಣಾಂಕಧರ ಸೋಮೇಶ್ವರಲಿಂಗ ತಾನೆ.
--------------
ಬಿಬ್ಬಿ ಬಾಚಯ್ಯ
ಕಾಣಿ ಕಡವರವ ಕಂಡು, ಶ್ರೇಣಿ ಸೇನೆಯ ನುಂಗಿ, ಕಳ್ಳ ಬೆಳ್ಳನ ಒಡಗೂಡಿದ. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಎಲ್ಲಿಯೂ ಇಲ್ಲ.
--------------
ಬಿಬ್ಬಿ ಬಾಚಯ್ಯ
ಕ್ರೀ ಜ್ಞಾನ ಸಮರ್ಪಣ ಸ್ಥಲ: ನಾದ ಭೇದ ಹೊರಹೊಮ್ಮಿ ಮತ್ತಲ್ಲಿಯೆ ಅಡಗುವಂತೆ ಚಿದ್ರೂಪ ವಿಲಾಸಿತ ಸಕಲರೂಪಿನಲ್ಲಿ ಹೊಂದಿದ್ದು ಮತ್ತಲ್ಲಿಯೆ ಎಯ್ದುವಂತೆ ಇದಿರಿಟ್ಟು ಕಾಬುದು, ಕಾಣಿಸಿಕೊಂಬುದು ಏಣಾಂಕಧರ ಸೋಮೇಶ್ವರಲಿಂಗದಲ್ಲಿಯೇ ಅಡಗಿತ್ತು.
--------------
ಬಿಬ್ಬಿ ಬಾಚಯ್ಯ
ಕಾಯಕ್ಕೆ ಸಾಕ್ಷಿ, ಜೀವಕ್ಕೆ ನಿಶ್ಚಯ. ಉಭಯವ ಕುರಿತಲ್ಲದೆ ಬೇರೊಂದು ಅರಿಯಲಿಲ್ಲ. ಭೇರಿಯ ಘಟ ಕ್ರೀ ಹೊಯಿದಡೆ ನಾದ ನಿಃಕ್ರೀ. ಆ ಉಭಯದ ಭೇದ ಏನೆಂದರಿದುದು, ಜ್ಞಾನಾಜ್ಞಾನ ಲೇಪವಾದುದು, ಭಾವವಿರಹಿತ ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಉಭಯಸ್ಥಲಭೇದ.
--------------
ಬಿಬ್ಬಿ ಬಾಚಯ್ಯ
ಕರ್ದಮ ಕಮಲದಂತೆ, ವೇಣು ದ್ವಾರದಂತೆ ನೇಣು ಬಂಧದಂತೆ ಬಿಡುವಿಲ್ಲದಿರಬೇಕು ಅಂಗಲಿಂಗಸಂಬಂಧ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಕಂಬವಿಲ್ಲದ ಮನೆಯಲ್ಲಿ, ಅಂಗವಿಲ್ಲದ ಗರತಿ ಉರಿಯಿಲ್ಲದ ಹೊಗೆ ತಾಗಿ, ಕಣ್ಣಿಗೆ ಬಾಧೆಯಾಯಿತ್ತು. ಓಗರ ಬೆಂದು ಅಕ್ಕಿಯಾಯಿತ್ತು. ಇದೇನು ಚೋದ್ಯವೆಂದರಿಯೆ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಕೈದುವ ಹಿಡಿದಾಡುವ ವಿಧಾಂತನ ಭಾವದಂತಿರಬೇಕು, ಜನದ ನಡುವೆ ಆಡುವ ಅಹಿಯ ಮನದಂತಿರಬೇಕು, ಕಣನ ಹೊಕ್ಕ ಭಟನ ಉಭಯಕರದಂತಿರಬೇಕು, ಕ್ರೀ ಜ್ಞಾನಸಂಬಂಧ ಏಣಾಂಕಧರ ಸೋಮೇಶ್ವರಲಿಂಗದಲ್ಲಿಸ್ವಾನುಭಾವಿಯಾದ ಶರಣಂಗೆ.
--------------
ಬಿಬ್ಬಿ ಬಾಚಯ್ಯ
ಕಾಯಕ್ಕೆ ಸೋಂಕು ಸುಖ, ಜಿಹ್ವೆಗೆ ಮಧುರ ಸುಖ. ದೃಕ್ಕಿಗೆ ಚಿತ್ರಭೇದ ಸುಖ, ಶ್ರೋತ್ರಕ್ಕೆ ನಾದ ಶಬ್ದ ಸುಖ. ಘ್ರಾಣಕ್ಕೆ ಸುಗಂಧ ಸುಖ. ಇಂತಿವೆಲ್ಲವನರಿದು, ಕೊಡುವ ಭೇದದಲ್ಲಿ ಕೊಟ್ಟು ಅರ್ಪಿತ ಅವಧಾನಿಯಾಗಿರಬೇಕೆಂಬರು. ಬಹುಭೇದವಂ ತಿಳಿದು, ಏಕೇಂದ್ರಿಯ ಸುಚಿತ್ತನಾಗಿ ಇದ್ದವಂಗೆ ಕ್ರೀ ಜ್ಞಾನ ಸಮರ್ಪಣ ಏಣಾಂಕಧರ ಸೋಮೇಶ್ವರಲಿಂಗಕ್ಕೆ.
--------------
ಬಿಬ್ಬಿ ಬಾಚಯ್ಯ
ಕಲ್ಲಿನ ಕಂಬದಲ್ಲಿ ಹುಲ್ಲಿನ ಬೇರು ಹುಟ್ಟಿ ಬೇರು ಕಲ್ಲ ತಿಂದಿತ್ತು. ಕಲ್ಲಿನ ದಳ್ಳುರಿ ಹತ್ತಿ, ಬೇರು ಅಲ್ಲಿಯೆ ಅಡಗಿತ್ತು. ಏಣಾಂಕಧರ ಸೋಮೇಶ್ವರಲಿಂಗ, ಏನು ಚೋದ್ಯವೆಂದರಿಯೆ.
--------------
ಬಿಬ್ಬಿ ಬಾಚಯ್ಯ
ಕಲೆದೋರದ ಗಾಯದಂತೆ ಸುಳುಹುದೋರದ ಸಂಚಾರದಂತೆ ನಳಿನ ನಿಳಯದ ನೆಳಲಿನಂತೆ ಇಷ್ಟಚಿತ್ತಜ್ಞಾನ. ಸರ್ವಗುಣಸಂಪದ ಪ್ರಾಣಲಿಂಗಿಯ ಲಿಂಗಸ್ಥಲ, ಏಣಾಂಕಧರ ಸೋಮೇಶ್ವರಲಿಂಗದಲ್ಲಿ ನಿರ್ಲೇಪವಾಯಿತ್ತು.
--------------
ಬಿಬ್ಬಿ ಬಾಚಯ್ಯ